ಶುಕ್ರವಾರ, ಜುಲೈ 25, 2014

ರೋಹಿತ್ ಚಕ್ರತೀರ್ಥ ಹೇಳುತ್ತಾರೆ... "ನನಗೆ ಅರ್ಥವಾದದ್ದನ್ನಷ್ಟೇ ನನ್ನೆದುರು ಕೂತ ಅದೃಶ್ಯ ಓದುಗರಿಗೆ ಹೇಳುತ್ತಾ ಹೋಗುತ್ತೇನೆ"

ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ರೋಹಿತ್ ಚಕ್ರತೀರ್ಥರದ್ದು ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ-ಆಗುತ್ತಿರುವ ಲೇಖನಗಳ ಜೊತೆಗೆ 'ಮನಸುಗಳ ನಡುವೆ ಪುಷ್ಪಕ ವಿಮಾನ', 'ಏಳುಸಾವಿರ ವರ್ಷ ಬದುಕಿದ ಮನುಷ್ಯ', 'ದೇವಕೀಟದ ರತಿರಹಸ್ಯ' ಮುಂತಾದ ಪುಸ್ತಕಗಳೂ ಬೆಳಕುಕಂಡಿವೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಶಾಲೆ-ಕಾಲೇಜುಗಳಲ್ಲಿದ್ದಾಗ ಓರಗೆಯ ಗೆಳೆಯರಿಗೆ ವಿಜ್ಞಾನ ಮತ್ತು ಗಣಿತವನ್ನು ಅರ್ಥವಾಗುವಂತೆ, ಮುಖ್ಯವಾಗಿ ಪರೀಕ್ಷೆಯಲ್ಲಿ ಬರೆಯಲು ನಾಲ್ಕು ಸಾಲು ನೆನಪಲ್ಲುಳಿಯುವಂತೆ ಹೇಳಿಕೊಡುವ ಜವಾಬ್ದಾರಿ ನನ್ನ ತಲೆಮೇಲೆ ಬರುತ್ತಿತ್ತು. ಪದವಿ ಪೂರೈಸಿದ ಮೇಲೆ ಐದಾರು ವರ್ಷ ಅಧ್ಯಾಪನವೃತ್ತಿ ಮಾಡಿದಾಗಲೂ, ಕ್ಲಾಸಿನಲ್ಲಿ ಕತೆ-ಇತಿಹಾಸ-ಪುರಾಣ ಹೇಳುತ್ತೇನೆಂಬ ಕೀರ್ತಿಯೂ ಅಪಕೀರ್ತಿಯೂ ನನಗೆ ಮೆತ್ತಿಕೊಂಡದ್ದಿದೆ. ವಿಜ್ಞಾನವನ್ನು ನನ್ನ ಮುಂದಿನ ತಲೆಮಾರಿಗೆ ದಾಟಿಸಬಲ್ಲೆ ಎನ್ನುವ ವಿಶ್ವಾಸ ಬರಲು ಹೀಗೆ ಹರಟುವ ನನ್ನ ವಾಚಾಳಿತನವೇ ಕಾರಣ ಅಂತ ಅನಿಸುತ್ತದೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಓದುವ 'ಜಾಕ್ ಆಫ್ ಆಲ್' ಆದ ನನಗೆ ವಿಜ್ಞಾನಸಾಹಿತ್ಯದಲ್ಲಿ ಪ್ರವೇಶ ಕಡಿಮೆ. ಯಾರನ್ನೂ ಪೂರ್ತಿಯಾಗಿ ಸಮಗ್ರವಾಗಿ ಓದಿಕೊಂಡಿಲ್ಲ. ತೇಜಸ್ವಿಯ ಹೆಸರೆತ್ತುವಾಗಲೂ ಅವರ ಕತೆ-ಕಾದಂಬರಿಗಳನ್ನು ಓದಿದಷ್ಟು ತೀವ್ರವಾಗಿ ವಿಜ್ಞಾನಸಾಹಿತ್ಯವನ್ನು ಓದಿಲ್ಲ. ಇದು ತುಂಬ ನಾಚಿಕೆಯ ವಿಷಯ.
ತೇಜಸ್ವಿ, ಶಿವರಾಮ ಕಾರಂತ, ಬಿಜಿಎಲ್ ಸ್ವಾಮಿ, ಜಿ ಟಿ ನಾರಾಯಣ ರಾವ್, ನಾಗೇಶ ಹೆಗಡೆ, ಟಿ ಆರ್ ಅನಂತರಾಮು, ನೇಮಿಚಂದ್ರ, ಅಡ್ಯನಡ್ಕ ಕೃಷ್ಣಭಟ್, ಜೆ ಆರ್ ಲಕ್ಷ್ಮಣರಾವ್, ಪಾ.ದೇವರಾಯ ('ವಿಜ್ಞಾನ ಲೋಕ'ವೆಂಬ ಪತ್ರಿಕೆಯನ್ನು ಎರಡು ದಶಕಗಳ ಕಾಲ ಸಂಪಾದಿಸಿದವರು), ಡಿ ಆರ್ ಬಳೂರಗಿ - ಹೀಗೆ ಬರೆಯಲು ಪ್ರೇರೇಪಿಸಿದ ಹೆಸರುಗಳು ಹಲವಾರಿವೆ. ಅದರರ್ಥ ಬೇರೆಯವರ ಪ್ರಭಾವ ಆಗಿಲ್ಲ ಎಂದಲ್ಲ. ಲಂಕೇಶ್ ಕೂಡ ಒಳ್ಳೊಳ್ಳೆಯ ವಿಜ್ಞಾನಲೇಖನಗಳನ್ನು ಬರೆದಿದ್ದಾರೆ.


ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ? 
ನಾನೂ ಒಬ್ಬ "ಸಂವಹನಕಾರ" ಎಂಬ ಭ್ರಮೆ ಖಂಡಿತ ನನಗೆ ಇಲ್ಲ. ನನಗೆ ಅರ್ಥವಾದದ್ದನ್ನಷ್ಟೇ ನನ್ನೆದುರು ಕೂತ ಅದೃಶ್ಯ ಓದುಗರಿಗೆ ಹೇಳುತ್ತಾ ಹೋಗುತ್ತೇನೆ. ನನಗೇ ಅರ್ಥವಾಗದ್ದನ್ನು ಬರೆದು ಓದುಗರೆದುರು ಬುದ್ಧಿವಂತನಾಗಲಾರೆ. ಅವರು ಮೆಚ್ಚಿದಾಗ ಖುಷಿಯಾಗುತ್ತದೆ. "ಕಷ್ಟಪಟ್ಟು ಓದಿದೆ, ಅನೇಕ ಸಂಗತಿಗಳು ಅರ್ಥವಾಗಲಿಲ್ಲ" ಎಂದರೆ ಆತ್ಮಶೋಧನೆಗೆ ತೊಡಗುತ್ತೇನೆ. ಇನ್ನಷ್ಟು ಸರಳವಾಗಿ ಬರೆಯುವುದಕ್ಕೆ ಸಾಧ್ಯವೇ ನೋಡುತ್ತೇನೆ. ಸರಳವಾಗಿ ಹೇಳಬೇಕು, ಆದರೆ ಸರಳೀಕರಿಸಬಾರದು ಎನ್ನುವ ಐನ್‌ಸ್ಟೈನ್ ಮಾತುಗಳನ್ನು ಸದಾ ಎಚ್ಚರದಿಂದ ನೆನೆಯುತ್ತೇನೆ. "ಅಣ್ಣಾ, ನಿಮ್ಮ ಲೇಖನ ಓದಿದ ಮೇಲೆ ಆ ವಿಷಯದ ಮೇಲೆ ಆಸಕ್ತಿ ಬಂದು ಎರಡು ಪುಸ್ತಕ ಓದಿದೆ" ಎಂದು ಓದುಗರು ಹೇಳಿಕೊಂಡಾಗ ಖುಷಿಯಾಗುತ್ತದೆ.

ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಇಂಥದ್ದೇ ಕೆಲಸ ಮಾಡಬೇಕೆಂದು ಯೋಜನೆ ಹಾಕಿಕೊಂಡು ಕಾರ್ಯಪ್ರವೃತ್ತನಾಗುವ ಶಿಸ್ತು ನನಗಿದೆಯೆ! ಆರರಿಂದ ಹತ್ತನೇ ಕ್ಲಾಸಿನವರೆಗಿನ ಗಣಿತಪಠ್ಯವನ್ನು ಹೊಸದಾಗಿ ಹೊಸರೀತಿಯಲ್ಲಿ ಬರೆಯಬೇಕೆಂಬ ಆಸೆಯಿದೆ. ಅದು ನನ್ನ ಸೋಮಾರಿತನವನ್ನು ಮೀರಿದ ಕೆಲಸವಾದ್ದರಿಂದ ಎಂದು ಕೈಗೂಡೀತು ಹೇಳಲಾರೆ! "ಜನಪ್ರಿಯ" ವಿಜ್ಞಾನದ, ಗಣಿತದ ಪುಸ್ತಕಗಳನ್ನೇನೋ ಬರೆಯಬಹುದು; ಆದರೆ ಓದುವ ಕನ್ನಡಿಗ ಎಲ್ಲಿದ್ದಾನೆ ಎಂಬುದೇ ಪ್ರಶ್ನೆ.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ಕಾಡುಗುಡ್ಡಗಳಲ್ಲಿ ಅಲೆಯುವುದು, ಯಾವಾವುದೋ ಮೂಲೆಗಳಿಗೆ ಪ್ರವಾಸ ಹೋಗುವುದು, ಅಡುಗೆ, ಊಟ, ಪದ್ಯ, ಸಿನೆಮ, ನಾಟಕ, ಫೊಟೋಗ್ರಫಿ, ಮಾತು. ಇವೆಲ್ಲ ಮುಗಿದು ಎಲ್ಲಾದರೂ ಸಮಯ ಉಳಿದರೆ ವಿಜ್ಞಾನಸಂವಹನ.

ರೋಹಿತ್ ಚಕ್ರತೀರ್ಥರ ಪುಸ್ತಕಗಳನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!

3 ಕಾಮೆಂಟ್‌ಗಳು:

beluru ಹೇಳಿದರು...

ಯಾವ ಬೇಜಾರೂ ಇಲ್ಲದೆ, ಖುಷಿಯಿಂದ, ಹೇಳಬೇಕಾದ್ದನ್ನು ಸವಿಸ್ತಾರವಾಗಿ ಬರೆಯುವ ಶೈಲಿ ರೋಹಿತರದ್ದು. ಇಂಥ ಯುವ ಮತ್ತು ಸಮಕಾಲೀನ ಮನಸ್ಸಿನಿಂದ ಇನ್ನೂ ಹಲವು ಕೃತಿಗಳನ್ನು ನಿರೀಕ್ಷಿಸೋಣ ಅಲ್ಲವೆ?

ravindra mavakhanda ಹೇಳಿದರು...

ಒಳ್ಳೆಯ ಸಂದರ್ಶನ. ಇಷ್ಟವಾಯ್ತು...

Holalkere rangarao laxmivenkatesh ಹೇಳಿದರು...

ತುಂಬಾ ಒಳ್ಳೆಯ ಸಂದರ್ಶನ. ಕನ್ನಡದ ಪ್ರತಿಭೆಗಳಿಗೆ ಒಂದು ವೇದಿಕೆ ತಯಾರುಮಾಡಿ, ದೂಟಿಯುತ್ತಿರುವ ಯುವ ವಿಜ್ಞಾನಿ,ಟಿ. ಜಿ. ಶ್ರೀನಿಧಿಯವರನ್ನು ಶ್ಲಾಘಿಸುತ್ತೇನೆ.

badge