ಸೋಮವಾರ, ಜುಲೈ 21, 2014

ಡಾ. ಪಿ. ಎಸ್. ಶಂಕರ್ ಹೇಳುತ್ತಾರೆ... "ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ ಅದನ್ನು ಆಸಕ್ತಿಯಿಂದ ನಿರ್ವಹಿಸುವ ಮನೋಧರ್ಮ ನನ್ನದು"

ಕನ್ನಡದ ವೈದ್ಯವಿಜ್ಞಾನ ಸಂವಹನಕಾರರಲ್ಲಿ ಡಾ. ಪಿ. ಎಸ್. ಶಂಕರ್ ಅವರದ್ದು ಪ್ರಮುಖ ಹೆಸರು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ನೂರಕ್ಕೂ ಹೆಚ್ಚು ಕೃತಿಗಳನ್ನು ಹಾಗೂ ಸಾವಿರಕ್ಕೂ ಹೆಚ್ಚು ಲೇಖನಗಳನ್ನು ರಚಿಸಿರುವ ಅವರು 'ವಿಜ್ಞಾನ ಲೋಕ' ಸೇರಿದಂತೆ ಹಲವು ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸಮಾಡುತ್ತಿದ್ದಾರೆ. ವೈದ್ಯ ವಿಶ್ವಕೋಶ - ನಿಘಂಟುಗಳನ್ನು ರಚಿಸಿರುವುದು ಅವರ ಇನ್ನೊಂದು ಹೆಗ್ಗಳಿಕೆ. ಸುದೀರ್ಘ ಅವಧಿಯಿಂದ ವೈದ್ಯವಿಜ್ಞಾನ ಬೋಧನೆಯಲ್ಲಿ ತೊಡಗಿಸಿಕೊಂಡಿರುವ ಡಾ. ಶಂಕರ್ ಅವರು ರಾಜ್ಯೋತ್ಸವ ಪ್ರಶಸ್ತಿ, ಸರ್. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ; ಹಲವು ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಸ್ವೀಕರಿಸಿದ್ದಾರೆ.  ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಹೈಸ್ಕೂಲು ಓದುತ್ತಿದ್ದಾಗಲೇ ಲೇಖನಗಳನ್ನು, ಕತೆ, ನಾಟಕಗಳನ್ನು ಬರೆಯುತ್ತಿದ್ದೆ. ಮುಂದೆ ಕಾಲೇಜು ಸೇರಿದ ನಂತರ ಬರವಣಿಗೆ ಹಿಂದಿನ ಸ್ಥಾನ ಪಡೆಯಿತು. ನನ್ನ ವೈದ್ಯ ವಿದ್ಯಾಭ್ಯಾಸ ಮುಗಿದು ಕೆಲಸಕ್ಕೆ ಸೇರಿಕೊಂಡಮೇಲೆ ಬರವಣಿಗೆಯನ್ನು ಮತ್ತೆ ಪ್ರಾರಂಭಿಸಿದೆ. ಕತೆ-ಕಾದಂಬರಿ ಬರೆಯುವ ಜನ ಬೇಕಾದಷ್ಟಿದ್ದಾರೆ, ನೀನು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯಬಹುದಲ್ಲ ಎಂದು ನನ್ನ ಅಣ್ಣ (ಶ್ರೀ ಪಾಟೀಲ ಪುಟ್ಟಪ್ಪ) ಸೂಚಿಸಿದ ಮೇಲೆ ನನ್ನ ಬರವಣಿಗೆ ವೈದ್ಯವಿಜ್ಞಾನ ಕ್ಷೇತ್ರದತ್ತ ಹೊರಳಿತು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಬೇರೆ ಸಂವಹನಕಾರರ ಬರವಣಿಗೆಯನ್ನು ನಾನು ಮೆಚ್ಚುತ್ತೇನೆ. ಆದರೆ ನನ್ನ ಮೇಲೆ ಪ್ರಭಾವ ಬೀರಿದ ಸಂವಹನಕಾರರು ಯಾರೂ ಇಲ್ಲ. ನನಗೆ ನಾನೇ ಗುರು. ನಾನು ರಚಿಸಿದ ಪದಕೋಶವಾಗಲಿ, ವಿಶ್ವಕೋಶವೇ ಅಗಲಿ ಎಲ್ಲವೂ ನನ್ನ ಓದು, ಅನುಭವ ಮತ್ತು ಸ್ವಂತ ಚಿಂತನದ ಫಲ. ನನ್ನ ಓದು, ಬರವಣಿಗೆ ನಿರಂತರವಾಗಿ ಜರುಗುತ್ತಿರುವ ಕ್ರಿಯೆ. ನನ್ನ ವೃತ್ತಿಯ ಭಾರ - ಜವಾಬ್ದಾರಿ ಇದ್ದರೂ ಬರವಣಿಗೆಯನ್ನು ನಾನು ಎಂದೂ ಕಡೆಗಣಿಸಿಲ್ಲ.


ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ? 
ಸಂವಹನಕಾರರ ಬರವಣಿಗೆಯನ್ನು ಸಮಾಜ ಆಸಕ್ತಿಯಿಂದ ಸ್ವೀಕರಿಸಿದೆ. ಬರವಣಿಗೆಯನ್ನು ಓದಿ - ಮೆಚ್ಚಿ ಅನೇಕರು ಪತ್ರ ಬರೆಯುತ್ತಾರೆ. ಆರೋಗ್ಯದ ಬಗ್ಗೆ ತಿಳಿದುಕೊಳ್ಳುವ ಹಂಬಲ ಜನಸಾಮಾನ್ಯರಲ್ಲಿ ವಿಶೇಷವಾಗಿದ್ದು ವೈದ್ಯವಿಜ್ಞಾನವನ್ನು ಅವರು ಆಸಕ್ತಿಯಿಂದ ಓದುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಇಂಗ್ಲಿಷಿನಲ್ಲಿ ವೈದ್ಯ ಪದಕೋಶ ಮಾಡಿದ್ದೇನೆ. ಅನೇಕ ಪಾರಿಭಾಷಿಕ ಪದಗಳ ಸರಿಯಾದ ತಿಳಿವಳಿಕೆ ಪಡೆಯಬೇಕೆಂದು ಅನೇಕರು ಆಸಕ್ತರಾಗಿದ್ದಾರೆ. ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ಅರ್ಥವಿವರಣೆ ನೀಡುವ ಪದಕೋಶವೊಂದನ್ನು ತಯಾರಿಸಬೇಕೆಂಬ ಹಂಬಲವಿದೆ. ಆ ದಿಶೆಯಲ್ಲಿ ಸ್ವಲ್ಪ ಕೆಲಸ ನಡೆದಿದೆಯಾದರೂ, ಅದು ನನ್ನ ವಿವಿಧ ಕಾರ್ಯಚಟುವಟಿಕೆಗಳಿಂದಾಗಿ ಹಿಂದಕ್ಕೆ ಬಿದ್ದಿದೆ.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ಪ್ರವಾಸ, ಓದು, ಬೋಧನೆ, ಸಲಹೆ. ನಾನು ವೈದ್ಯಶಿಕ್ಷಕನಾಗಿ ಅರ್ಧಶತಮಾನ ಕಳೆದಿದ್ದು, ಇಂದೂ ಅದೇ ಉತ್ಸಾಹ, ಶ್ರದ್ಧೆಯಿಂದ ಗುಲಬರ್ಗಾ, ಪುದುಚೇರಿ, ಬೆಳಗಾವಿ, ಮುಂಬಯಿಗಳಲ್ಲಿ ಬೋಧನೆ ಮಾಡುತ್ತಿದ್ದೇನೆ. ಅನೇಕ ಸಮ್ಮೇಳನಗಳನ್ನು ಆಸಕ್ತಿಯಿಂದ ಆಯೋಜಿಸುತ್ತೇನೆ. ವಿಜ್ಞಾನ-ವೈದ್ಯವಿಜ್ಞಾನಕ್ಕೆ ಸಂಬಂಧಿಸಿದ ಪತ್ರಿಕೆಗಳ ಸಂಪಾದಕನಾಗಿ ಕೆಲಸಮಾಡುತ್ತೇನೆ. ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ ಅದನ್ನು ಆಸಕ್ತಿಯಿಂದ ನಿರ್ವಹಿಸುವ ಮನೋಧರ್ಮ ನನ್ನದು.

ಡಾ. ಪಿ. ಎಸ್. ಶಂಕರ್‌ರವರ ಪುಸ್ತಕಗಳನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!

ಕಾಮೆಂಟ್‌ಗಳಿಲ್ಲ:

badge