ಶುಕ್ರವಾರ, ಏಪ್ರಿಲ್ 26, 2013

ಮೊಬೈಲ್‌ನಲ್ಲಿ ಫೋಟೋ ಮೇಕಪ್


ಟಿ. ಜಿ. ಶ್ರೀನಿಧಿ


ಡಿಜಿಟಲ್ ಕ್ಯಾಮೆರಾಗಳ ಆವಿಷ್ಕಾರ ಫಿಲಂ ಕ್ಯಾಮೆರಾಗಳ ಕಾಲದಲ್ಲಿದ್ದ ಹಲವು ಅಭ್ಯಾಸಗಳನ್ನು ಬದಲಿಸಿತು. ಡೆವೆಲಪ್ ಮಾಡಿಸುವುದು, ಪ್ರಿಂಟು ಹಾಕಿಸುವುದು ಮೊದಲಾದ ತಾಪತ್ರಯಗಳನ್ನು ದೂರಮಾಡಿದ್ದು ಇದೇ ಡಿಜಿಟಲ್ ತಂತ್ರಜ್ಞಾನ ತಾನೆ!

ಆದರೆ ಡಿಜಿಟಲ್ ಕ್ಯಾಮೆರಾಗಳನ್ನೂ ಒಂದಷ್ಟು ಕಾಲ ಬಳಸಿದ ಮೇಲೆ ಅದರ ಜೊತೆಗೆ ಬಂದ ಕೆಲ ಅಭ್ಯಾಸಗಳೂ ತಾಪತ್ರಯ ಎನಿಸಲು ಶುರುವಾಯಿತು. ಫೋಟೋ ಕ್ಲಿಕ್ಕಿಸಿದ ತಕ್ಷಣ ಕ್ಯಾಮೆರಾದ ಪುಟಾಣಿ ಪರದೆಯಲ್ಲಿ ಕಾಣಿಸುತ್ತದೇನೋ ಸರಿ, ಆದರೆ ಚಿತ್ರವನ್ನು ಪೂರ್ಣಗಾತ್ರದಲ್ಲಿ ನೋಡಲು - ಅಗತ್ಯ ಬದಲಾವಣೆಗಳನ್ನು ಮಾಡಲು ಕಂಪ್ಯೂಟರಿಗೆ ವರ್ಗಾಯಿಸಲೇಬೇಕು. ನಾವು ಹೋದಕಡೆ ಕಂಪ್ಯೂಟರ್-ಇಂಟರ್‌ನೆಟ್ ಇತ್ಯಾದಿಗಳೆಲ್ಲ ಇಲ್ಲದಿದ್ದರೆ? ನಾವು ತೆಗೆದ ಚಿತ್ರಗಳನ್ನೆಲ್ಲ ಮಿತ್ರವೃಂದಕ್ಕೆ ತೋರಿಸಲು ಫೇಸ್‌ಬುಕ್ಕಿಗೋ ಇನ್ನಾವುದೋ ತಾಣಕ್ಕೋ ಸೇರಿಸುವುದು ಹೇಗೆ?

ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿರುವುದು ಕ್ಯಾಮೆರಾ ಫೋನುಗಳ ಹೆಚ್ಚುಗಾರಿಕೆ. ಈಗಂತೂ ದೊಡ್ಡದೊಂದು ಕ್ಯಾಮೆರಾ ಹಿಡಿದುಕೊಂಡು ಓಡಾಡುವವರು ಕ್ಲಿಕ್ಕಿಸುವಂತಹುದೇ ಚಿತ್ರಗಳನ್ನು ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡವರೂ ಕ್ಲಿಕ್ಕಿಸುವುದು ಸಾಧ್ಯವಾಗಿದೆ.

ಕ್ಯಾಮೆರಾ ಫೋನುಗಳಲ್ಲಿ ಇನ್ನೂ ಒಂದು ವೈಶಿಷ್ಟ್ಯವಿದೆ: ಫೋಟೋ ಕ್ಲಿಕ್ಕಿಸಿದ ನಂತರ ಅದನ್ನು ಬೇರೆಯವರೊಡನೆ ಹಂಚಿಕೊಳ್ಳಲು ಕಂಪ್ಯೂಟರಿನತ್ತ ಮುಖಮಾಡುವುದನ್ನೇ ಅವು ತಪ್ಪಿಸುತ್ತವೆ.
ಅಂದರೆ, ಇಂದಿನ ಸ್ಮಾರ್ಟ್ ಫೋನುಗಳಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ಅದರಲ್ಲೇ ಇರುವ ಅಂತರಜಾಲ ಸಂಪರ್ಕ ಬಳಸಿಕೊಂಡು ಕ್ಷಣಾರ್ಧದಲ್ಲೇ ಫೇಸ್‌ಬುಕ್‌ನಲ್ಲೋ ಫ್ಲಿಕರ್‌ನಲ್ಲೋ ಹಂಚಿಕೊಳ್ಳುವುದು ಸಾಧ್ಯ. ಫೋನಿನಲ್ಲಿ ಜಿಪಿಎಸ್ ಸೌಲಭ್ಯವಿದ್ದರಂತೂ ನಾವು ಫೋಟೋ ತೆಗೆದದ್ದೆಲ್ಲಿ ಎನ್ನುವುದನ್ನೂ ನಮ್ಮ ಪರವಾಗಿ ಅದೇ ಹೇಳಿಬಿಡಬಲ್ಲದು.

ಆದರೆ ಸಾಮಾನ್ಯ ಕ್ಯಾಮೆರಾದಲ್ಲೇ ಆಗಲಿ, ಕ್ಯಾಮೆರಾ ಫೋನಿನಲ್ಲೇ ಆಗಲಿ, ನಾವು ಕ್ಲಿಕ್ಕಿಸಿದ ಚಿತ್ರಗಳೆಲ್ಲ ಯಾವಾಗಲೂ ಚೆನ್ನಾಗಿಯೇ ಬರಬೇಕು ಎಂದೇನೂ ಇಲ್ಲವಲ್ಲ! ಸುಲಭವಾಗಿ ಹಂಚಿಕೊಳ್ಳುವುದಕ್ಕಾಗಿ ಚಿತ್ರದ ಗಾತ್ರ ಕಡಿಮೆಮಾಡುವ, ಬೇಡದ ಭಾಗವನ್ನು ಕ್ರಾಪ್ ಮಾಡುವ, ಒಂದಷ್ಟು ಪಠ್ಯ ಸೇರಿಸುವ ಅಥವಾ ಅದನ್ನು ಇನ್ನಾವುದೇ ರೀತಿಯಲ್ಲಿ ಚೆಂದಗಾಣಿಸುವ ಕೆಲಸಕ್ಕೆ ನಾವು ಆಗಿಂದಾಗ್ಗೆ ಕಂಪ್ಯೂಟರಿನತ್ತ ಮುಖಮಾಡುತ್ತೇವೆ.

ಈಗಿನ ಸ್ಮಾರ್ಟ್‌ಫೋನುಗಳು ಕಂಪ್ಯೂಟರಿಗೆ ಯಾವುದರಲ್ಲೂ ಕಡಿಮೆಯಿಲ್ಲ ಎಂದಮೇಲೆ ಅವುಗಳಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ಮತ್ತೇಕೆ ಕಂಪ್ಯೂಟರಿನತ್ತ ತರಬೇಕು? ಈ ಆಲೋಚನೆಯ ಪರಿಣಾಮವಾಗಿ ಫೋಟೋ ಎಡಿಟಿಂಗ್ ತಂತ್ರಾಂಶಗಳೇ ಮೊಬೈಲಿನತ್ತ ಬಂದುಬಿಟ್ಟಿವೆ. ಆಂಡ್ರಾಯ್ಡ್, ಐಓಎಸ್, ವಿಂಡೋಸ್ - ಹೀಗೆ ಯಾವ ಕಾರ್ಯಾಚರಣ ವ್ಯವಸ್ಥೆ ಬಳಸುವ ಮೊಬೈಲ್ ದೂರವಾಣಿಯಾದರೂ ಅದಕ್ಕೆ ಹತ್ತಾರು ಬಗೆಯ ಫೋಟೋ ಎಡಿಟಿಂಗ್ ತಂತ್ರಾಂಶಗಳು ಮಾರುಕಟ್ಟೆಯಲ್ಲಿ ದೊರಕುತ್ತವೆ.

ಕಂಪ್ಯೂಟರಿನಲ್ಲಿರುವ ಫೋಟೋ ಎಡಿಟಿಂಗ್ ತಂತ್ರಾಂಶಗಳಲ್ಲಿ ಸಾಧ್ಯವಿರುವ ಬಹುತೇಕ ಕೆಲಸಗಳನ್ನು ಈ ತಂತ್ರಾಂಶಗಳಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದು. ಟಚ್‌ಸ್ಕ್ರೀನ್‌ನಲ್ಲೇ ಕೆಲಸವೆಲ್ಲ ಪೂರೈಸಿಬಿಡುವುದರಿಂದ ನಮ್ಮ ಅಗತ್ಯಕ್ಕೆ ತಕ್ಕಂತೆ ಫೋಟೋಗಳನ್ನು ಬದಲಿಸುವುದು ಸುಲಭವೂ ಹೌದು.

ಫೋಟೋಶಾಪ್ ನಿರ್ಮಾತೃ ಅಡೋಬಿಯಂತಹ ಸಂಸ್ಥೆಗಳ ಜೊತೆಗೆ ಇನ್ನೂ ಹಲವು ಹಳೆಯ-ಹೊಸ ಸಂಸ್ಥೆಗಳು ಮೊಬೈಲ್ ದೂರವಾಣಿಗಳಿಗೆ ಫೋಟೋ ಎಡಿಟಿಂಗ್ ತಂತ್ರಾಂಶಗಳನ್ನು ರೂಪಿಸಿವೆ. ಇವುಗಳಲ್ಲಿ ಅನೇಕ ತಂತ್ರಾಂಶಗಳನ್ನು ದುಡ್ಡುಕೊಟ್ಟು ಕೊಳ್ಳಬೇಕಾದರೆ ಇನ್ನು ಕೆಲವು ಸಂಪೂರ್ಣ ಉಚಿತವಾಗಿಯೇ ದೊರಕುತ್ತವೆ. ಪಿಕ್ಸೆಲರ್, ಸ್ನಾಪ್‌ಸೀಡ್, ಏವಿಯರಿ, ಪಿಕ್ಸ್‌ಆರ್ಟ್ - ಹೀಗೆ ಉಚಿತವಾಗಿ ಸಿಗುವ ತಂತ್ರಾಂಶಗಳಿಗೆ ಅನೇಕ ಉದಾಹರಣೆಗಳನ್ನು ಕೊಡಬಹುದು. ನಮ್ಮ ಫೋನಿನಲ್ಲಿರುವ ಕಾರ್ಯಾಚರಣ ವ್ಯವಸ್ಥೆ ಯಾವುದು ಎನ್ನುವುದರ ಆಧಾರದ ಮೇಲೆ ಆಪಲ್ ಅಥವಾ ವಿಂಡೋಸ್ ಆಪ್‌ಸ್ಟೋರಿನಿಂದಲೋ ಗೂಗಲ್ ಪ್ಲೇ ಇಂದಲೋ ನಾವು ಇಂತಹ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಬಳಕೆಯಲ್ಲಿನ ಸರಳತೆಯ ಜೊತೆಗೆ ಈ ತಂತ್ರಾಂಶಗಳಲ್ಲಿರುವ ವಿಭಿನ್ನ ಆಯ್ಕೆಗಳೂ ಅವುಗಳ ಜನಪ್ರಿಯತೆಗೆ ಕಾರಣವಾಗಿವೆ. ಚಿತ್ರದಲ್ಲಿರುವ ಕೊರತೆಗಳನ್ನು ಸ್ವಯಂಚಾಲಿತವಾಗಿ ಸರಿಪಡಿಸುವುದಿರಲಿ, ಫಿಲ್ಟರುಗಳನ್ನು ಬಳಸಿ ಹೊಸ ಎಫೆಕ್ಟ್ ನೀಡುವುದಿರಲಿ, ಕಪ್ಪುಬಿಳುಪು ಅಥವಾ ಸೇಪಿಯಾ ಛಾಯೆಗೆ ಬದಲಿಸುವುದಿರಲಿ - ಇವೆಲ್ಲವನ್ನೂ, ಮತ್ತು ಇನ್ನೂ ಹಲ ವಿಧದ ಬದಲಾವಣೆಗಳನ್ನು, ನಾವಿಲ್ಲಿ ಬಹಳ ಸುಲಭವಾಗಿ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಬ್ಲೂಟೂಥ್, ಎಂಎಂಎಸ್. ಇಮೇಲ್, ಫೇಸ್‌ಬುಕ್, ಗೂಗಲ್ ಪ್ಲಸ್, ಪಿಕಾಸಾ, ವಾಟ್ಸ್‌ಆಪ್ ಮುಂತಾದ ಹತ್ತಾರು ಮಾರ್ಗಗಳ ಮೂಲಕ ಆ ಚಿತ್ರಗಳನ್ನು ನಮ್ಮ ಆಪ್ತರೊಡನೆ ಹಂಚಿಕೊಳ್ಳಲೂಬಹುದು.

ಮೊಬೈಲ್ ಫೋನಿನಲ್ಲೇ ಇಷ್ಟೆಲ್ಲ ಕೆಲಸ ಆಗುವಾಗ ಇನ್ನು ಬೇರೆಯದೇ ಡಿಜಿಟಲ್ ಕ್ಯಾಮೆರಾಗೇನು ಕೆಲಸ ಎನ್ನುವ ಯೋಚನೆ ನಮ್ಮಲ್ಲಿ ಖಂಡಿತಾ ಮೂಡುತ್ತದೆ. ಎಲ್ಲರೂ ಹಾಗೆಯೇ ಅಂದುಕೊಂಡರೆ ಡಿಜಿಟಲ್ ಕ್ಯಾಮೆರಾ ತಯಾರಿಸುವವರು ಮಾಡಬೇಕು? ಹಾಗಾಗಿಯೇ ಸಂಸ್ಥೆಗಳು ತಾವು ತಯಾರಿಸುವ ಕ್ಯಾಮೆರಾಗಳಲ್ಲಿ ಆಗಿಂದಾಗ್ಗೆ ಹೊಸ ವೈಶಿಷ್ಟ್ಯಗಳನ್ನು ಅಳವಡಿಸುತ್ತಿರುತ್ತವೆ. ಮೊಬೈಲಿನಲ್ಲಿರುವಂತೆ ಕ್ಯಾಮೆರಾಗೂ ಒಂದು ಕಾರ್ಯಾಚರಣ ವ್ಯವಸ್ಥೆ ಅಳವಡಿಸುವುದು ಇಂತಹ ಪರಿಕಲ್ಪನೆಗಳಲ್ಲೊಂದು. ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ ಬಳಸುವ ಇಂತಹ ಕ್ಯಾಮೆರಾವೊಂದನ್ನು ಸ್ಯಾಮ್‌ಸಂಗ್ ಸಂಸ್ಥೆ ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದೆ. ಮೊಬೈಲಿನಲ್ಲಿ ಮಾಡುವಂತೆ ಕ್ಲಿಕ್ಕಿಸಿದ ಛಾಯಾಚಿತ್ರವನ್ನು ಸೂಕ್ತವಾಗಿ ಬದಲಿಸಿ ಅಂತರಜಾಲದ ಮೂಲಕ ಹಂಚಿಕೊಳ್ಳುವ ಕೆಲಸ ಈ ಕ್ಯಾಮೆರಾದಲ್ಲೇ ಸಾಧ್ಯ.

ಒಟ್ಟಿನಲ್ಲಿ ಸಾಮಾನ್ಯ ಡಿಜಿಟಲ್ ಕ್ಯಾಮೆರಾ ಹಾಗೂ ಕ್ಯಾಮೆರಾ ಫೋನುಗಳ ನಡುವಿನ ಸ್ಪರ್ಧೆ ಬಹಳ ಜೋರಾಗಿಯೇ ನಡೆದಿದೆ. ಸ್ಪರ್ಧೆಯಲ್ಲಿ ಮುನ್ನಡೆ ಯಾರದೇ ಆದರೂ ಗೆಲುವು ಮಾತ್ರ ಬಳಕೆದಾರರದೇ!

ಏಪ್ರಿಲ್ ೨೬, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge