ಬುಧವಾರ, ಜೂನ್ 10, 2015

'ಕಾಲ್ ಡ್ರಾಪ್' ಕಾಲ

ಕಳೆದ ಕೆಲದಿನಗಳಿಂದ ಮಾಧ್ಯಮಗಳಲ್ಲಿ 'ಕಾಲ್ ಡ್ರಾಪ್' ಕುರಿತ ಸುದ್ದಿ ನಮಗೆ ಪದೇಪದೇ ಕಾಣಸಿಗುತ್ತಿದೆ. ಇಷ್ಟಕ್ಕೂ ಈ 'ಕಾಲ್ ಡ್ರಾಪ್' ಎಂದರೇನು? ಕಾಲ್‌ಗಳೇಕೆ ಡ್ರಾಪ್ ಆಗುತ್ತವೆ? ಇದರ ಬಗ್ಗೆ ಸರಕಾರ ತಲೆ ಕೆಡಿಸಿಕೊಂಡಿರುವುದೇಕೆ?
ಟಿ. ಜಿ. ಶ್ರೀನಿಧಿ

ಬಸ್ಸಿನಲ್ಲೋ ಕಾರಿನಲ್ಲೋ ಕುಳಿತು ಮೊಬೈಲಿನಲ್ಲಿ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆ ಆ ಕರೆ ಸ್ಥಗಿತಗೊಳ್ಳುವುದು ಮೊಬೈಲ್ ಬಳಕೆದಾರರೆಲ್ಲರ ಸಾಮಾನ್ಯ ಅನುಭವವೆಂದೇ ಹೇಳಬೇಕು. ಹೊರಗಡೆಯ ಮಾತು ಹಾಗಿರಲಿ, ಮೊಬೈಲಿನಲ್ಲಿ ಮಾತನಾಡುತ್ತ ಮನೆಯೊಳಗೆ ಓಡಾಡುವಾಗಲೂ ಕೆಲವೊಮ್ಮೆ ಈ ಅನುಭವ ಆಗುವುದುಂಟು.

"ಅರೆ, ಈಗಷ್ಟೆ ಸರಿಯಾಗಿ ಕೇಳಿಸುತ್ತಿದ್ದದ್ದು ಇದ್ದಕ್ಕಿದ್ದಂತೆ ಸ್ಥಗಿತವಾಗಿಬಿಟ್ಟಿತಲ್ಲ, ಸಿಗ್ನಲ್ ಕೂಡ ಚೆನ್ನಾಗಿಯೇ ಇದೆ. ಇದೆಂಥದಿದು ವಿಚಿತ್ರ!" ಎನ್ನುವುದು ಇಂತಹ ಸನ್ನಿವೇಶಗಳಲ್ಲಿ ನಮ್ಮ ಪ್ರತಿಕ್ರಿಯೆಯಾಗಿರುತ್ತದೆ. ಎರಡು ಹೆಜ್ಜೆಯೂ ದಾಟಿಲ್ಲ, ಮೊಬೈಲ್ ಕರೆ ತನ್ನಷ್ಟಕ್ಕೆ ತಾನೇ ಸ್ಥಗಿತವಾಗಿಬಿಟ್ಟಿದೆ; ದೊಡ್ಡ ಬದಲಾವಣೆಯೇನೂ ಇಲ್ಲದಿದ್ದರೂ ಇದೇನು ಹೀಗೆ ಎಂದು ನಾವು ಕೇಳುತ್ತೇವೆ.

ಮೊಬೈಲ್ ಫೋನ್ ಏನಾದರೂ ತನ್ನ ಅಭಿಪ್ರಾಯ ಹೇಳುವಂತಿದ್ದರೆ ಅದು ನಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತದೆ. ಏಕೆಂದರೆ ನಾವು ಎರಡು ಹೆಜ್ಜೆಯ ದೂರ ಕ್ರಮಿಸುತ್ತಿರುವಾಗ ಆ ಫೋನಿನ ದೃಷ್ಟಿಯಲ್ಲಿ ದೊಡ್ಡ ಬದಲಾವಣೆಗಳೇ ಆಗಿರುತ್ತವೆ!

ಮೊಬೈಲ್ ಫೋನನ್ನು ಸೆಲ್ ಫೋನ್ ಎಂದು ಕರೆಯುತ್ತೇವಲ್ಲ, ಅದಕ್ಕೆ ಕಾರಣ ಮೊಬೈಲ್ ನೆಟ್‌ವರ್ಕುಗಳ ವಿನ್ಯಾಸ.
ಊರಿನ ತುಂಬ ಹರಡಿರುವ ಮೊಬೈಲ್ ಟವರ್‌ಗಳು ತಮ್ಮ ಸುತ್ತಲಿನ ಒಂದು ಸೀಮಿತ ಪ್ರದೇಶಕ್ಕೆ ಮೊಬೈಲ್ ಸೇವೆ ಒದಗಿಸುತ್ತವೆ. ಈ ಪ್ರದೇಶ ಬಹುತೇಕ ಆರು ಮೂಲೆಯ (ಹೆಕ್ಸಾಗನ್) ಆಕೃತಿಯಲ್ಲಿರುತ್ತದೆ; ಅಂದರೆ, ಮೊಬೈಲ್ ಜಾಲದ ಚಿತ್ರವನ್ನೇನಾದರೂ ಬರೆದರೆ ಅದು ಜೇನುಗೂಡಿನ ಒಂದು ಹಲ್ಲೆಯಂತೆ ಕಾಣುತ್ತದೆ! ಮೊಬೈಲ್ ಜಾಲವೆಂಬ ಈ ಜೇನುಗೂಡು ಟವರ್ ಸುತ್ತಲಿನ 'ಕೋಶ', ಅಂದರೆ 'ಸೆಲ್'ಗಳ ಜೋಡಣೆಯಿಂದ ರೂಪುಗೊಂಡಿರುತ್ತದಲ್ಲ, ಆ ಕೋಶಗಳೇ ಇದಕ್ಕೆ 'ಸೆಲ್' ಫೋನ್ ಎಂದು ಹೆಸರು ಬರಲು ಕಾರಣ.

ನಾವು ಮಾತನಾಡುತ್ತಿರುವಾಗ ಒಂದು 'ಸೆಲ್'ನಿಂದ ಇನ್ನೊಂದಕ್ಕೆ ಹೋದರೆ ನಮ್ಮ ಕರೆಯೂ ಮೊದಲ ಟವರ್‌ನಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತದೆ. ಒಂದಕ್ಕಿಂತ ಹೆಚ್ಚು ಸೆಲ್‌ಗಳು ಸಮೀಪದಲ್ಲಿದ್ದರೆ ಎಲ್ಲಿ ಹೆಚ್ಚು ಶಕ್ತಿಶಾಲಿ ಮೊಬೈಲ್ ಸಂಕೇತ ಲಭ್ಯವಿದೆಯೋ ಅಲ್ಲಿಗೆ ನಮ್ಮ ಕರೆಯನ್ನು ವರ್ಗಾಯಿಸುವ ಸೌಲಭ್ಯ ಕೂಡ ಇರುತ್ತದೆ. ಹೀಗಿದ್ದರೂ ಕೂಡ ಎರಡನೆಯ ಸೆಲ್‌ನಲ್ಲಿ ಸೂಕ್ತ ಸಾಮರ್ಥ್ಯದ ಮೊಬೈಲ್ ಸಂಕೇತ ದೊರಕದಿದ್ದರೆ, ಅಥವಾ ಅದರ ಪೂರ್ಣ ಸಾಮರ್ಥ್ಯವನ್ನು ಇತರ ಬಳಕೆದಾರರು ಈಗಾಗಲೇ ಬಳಸುತ್ತಿದ್ದರೆ ನಮ್ಮ ಕರೆ ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳುತ್ತದೆ.

'ಕಾಲ್ ಡ್ರಾಪ್' ಎಂದು ಕರೆಯುವುದು ಇದನ್ನೇ. ಸೆಲ್‌ಗಳ ನಡುವೆ ಕರೆ ವರ್ಗಾವಣೆಯಾಗುವಾಗ, ನಾವಿರುವ ಸೆಲ್‌ನಲ್ಲಿ ಬಳಕೆದಾರರ ಸಂಖ್ಯೆ ಇದ್ದಕ್ಕಿದ್ದಂತೆ ಜಾಸ್ತಿಯಾದಾಗ, ಸಿಗ್ನಲ್ ದೊರಕದ ಕೋಣೆ / ಕಟ್ಟಡದ ಒಳಗೆ ಹೋದಾಗ, ಹ್ಯಾಂಡ್‌ಸೆಟ್ ಸಮಸ್ಯೆಯಿಂದ ಅಥವಾ ಬೇರೆ ಇನ್ನಾವುದೇ ಕಾರಣದಿಂದ ಮೊಬೈಲ್ ಸಂಕೇತಕ್ಕೆ ಅಡಚಣೆಯಾದಾಗಲೆಲ್ಲ ಕಾಲ್ ಡ್ರಾಪ್ ಆಗುವುದು ಸಾಧ್ಯ.

ಹೀಗೆ ಕಾಲ್ ಡ್ರಾಪ್ ಆದಾಗ ಬಳಕೆದಾರರ ಮಾತುಕತೆಗೆ ಅಡ್ಡಿಯಾಗುವುದೇನೋ ಸರಿ. ಮತ್ತೆ ಕರೆಮಾಡಬೇಕೆಂದರೆ ಪ್ರತಿ ಮೂವತ್ತು ಸೆಕೆಂಡಿಗೋ ಒಂದು ನಿಮಿಷಕ್ಕೋ ಇಷ್ಟು ಪೈಸೆಯಂತೆ ಪಾವತಿಸುವವರು ಮತ್ತೊಮ್ಮೆ ದುಡ್ಡುಕೊಡಬೇಕಾಗುತ್ತದೆ (ಸೆಕೆಂಡಿಗೆ ಇಷ್ಟು ಎಂದು ಪಾವತಿಸುವವರಿಗೆ ಇದು ಅಷ್ಟೇನೂ ದೊಡ್ಡ ಸಮಸ್ಯೆಯಲ್ಲ). ಈ ಅನುಭವ ಪದೇಪದೇ ಆಗುತ್ತಿದ್ದರೆ ಕರೆಮಾಡಲು ಪರದಾಡಬೇಕಾಗುತ್ತದೆ, ಮಾನಸಿಕ ಕಿರಿಕಿರಿಯೂ ಆಗುತ್ತದೆ!

ಸೂಕ್ತ ಕ್ರಮಗಳನ್ನು ಕೈಗೊಂಡರೆ ಕಾಲ್ ಡ್ರಾಪ್ ಪ್ರಮಾಣವನ್ನು ಕಡಿಮೆಮಾಡುವುದು ಮೊಬೈಲ್ ಸಂಸ್ಥೆಗಳಿಗೆ ಸಾಧ್ಯ. ಆದರೆ ಹಲವು ತಾಂತ್ರಿಕ ಕಾರಣಗಳಿಂದ ಇದನ್ನು ಪೂರ್ತಿಯಾಗಿ ತಪ್ಪಿಸುವುದು ಕಷ್ಟ. ಅದಕ್ಕಾಗಿಯೇ ಒಂದು ನಿರ್ದಿಷ್ಟ ಪ್ರಮಾಣದವರೆಗಿನ (ಸುಮಾರು ಶೇ. ೨ರಷ್ಟು) ಕಾಲ್ ಡ್ರಾಪ್ ಅನ್ನು ವಿವಿಧ ನಿಯಂತ್ರಣಾ ಸಂಸ್ಥೆಗಳು ಅನುಮತಿಸುತ್ತವೆ.

ಆದರೆ ಈ ಪ್ರಮಾಣ ನಿಗದಿತ ಮಿತಿಯನ್ನು ಮೀರಿತೆಂದರೆ ಗ್ರಾಹಕರಿಗೆ ತೊಂದರೆಯಾಗುತ್ತದೆ. ಸರಕಾರ ಗ್ರಾಹಕರ ಬೆಂಬಲಕ್ಕೆ ಬಂದಿರುವುದು, ಹೊಸ ನಿರ್ದೇಶನಗಳನ್ನು ರೂಪಿಸಲು ಹೊರಟಿರುವುದರ ಹಿನ್ನೆಲೆಯಲ್ಲಿರುವುದು ಇದೇ ಅಂಶ. ಇತರ ಕೆಲ ದೇಶಗಳಲ್ಲಿರುವಂತೆ ಪ್ರತಿ ಬಾರಿ ಕರೆ ಸ್ಥಗಿತವಾದಾಗಲೂ ಗ್ರಾಹಕರಿಗೆ ಇನ್ನೊಂದು ಕರೆ ಮಾಡುವ ಅವಕಾಶವನ್ನು ಉಚಿತವಾಗಿ ಒದಗಿಸುವ ಪ್ರಸ್ತಾವನೆ ಸರಕಾರದ ಕಡೆಯಿಂದ ಬಂದಿದೆ. ಈ ಕ್ರಮದಿಂದಲಾದರೂ ಮೊಬೈಲ್ ಸಂಸ್ಥೆಗಳು ಸೇವೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲಿ ಎನ್ನುವುದು ಸರಕಾರದ ಆಶಯ.



ಆದರೆ ಕಾಲ್ ಡ್ರಾಪ್ ಸಮಸ್ಯೆಯನ್ನು ತಪ್ಪಿಸುವುದು ಅಷ್ಟೊಂದು ಸುಲಭದ ಕೆಲಸವೇನೂ ಆಗಲಾರದು ಎನ್ನುವುದು ಮೊಬೈಲ್ ಸಂಸ್ಥೆಗಳ ಅಭಿಪ್ರಾಯ. ಸ್ಪೆಕ್ಟ್ರಂ ಕೊರತೆ ಹಾಗೂ ಹೊಸ ಟವರ್‌ಗಳ ಸ್ಥಾಪನೆಗಿರುವ ಅಡಚಣೆಗಳ ಹಿನ್ನೆಲೆಯಲ್ಲಿ ಸೇವೆಯ ಗುಣಮಟ್ಟ ಹೆಚ್ಚಿಸುವುದಾದರೂ ಹೇಗೆ ಎಂದು ಅವರು ಕೇಳುತ್ತಾರೆ. ಗ್ರಾಹಕರ ಸಂಖ್ಯೆಗೆ ಹೋಲಿಸಿದಾಗ ಮೊಬೈಲ್ ಸಂವಹನಕ್ಕೆ ಲಭ್ಯವಿರುವ ತರಂಗಗುಚ್ಛದ ಪ್ರಮಾಣ ಬಹಳ ಕಡಿಮೆಯಿದೆ, ಅದು ಹೆಚ್ಚಾಗದೆ ಮೊಬೈಲ್ ಸೇವೆಯ ಗುಣಮಟ್ಟ ಹೆಚ್ಚಿಸುವುದು ಕಷ್ಟ ಎಂದು ಸಂಸ್ಥೆಗಳು ಹೇಳುತ್ತವೆ.

ಹೀಗಿರುವಾಗ ಕಾಲ್ ಡ್ರಾಪ್‌ಗೆ ಪ್ರತಿಯಾಗಿ ಉಚಿತ ಕರೆಗಳನ್ನು ನೀಡಬೇಕು ಎಂದು ಹೇಳುತ್ತಿರುವ ಸರಕಾರದ ನಿಲುವು ಸಾಕಷ್ಟು ಕುತೂಹಲ ಮೂಡಿಸಿದೆ. ಕಾಲ್ ಡ್ರಾಪ್ ಆದದ್ದು ನಿಜವೋ ಇಲ್ಲವೋ ಎಂದು ನಿಖರವಾಗಿ ಪತ್ತೆಮಾಡುವುದು ಹೇಗೆ ಎನ್ನುವ ಪ್ರಶ್ನೆಯೂ ಇದೆ. ಹೊಸ ಆದಾಯದ ಮೂಲಗಳನ್ನು ಹುಡುಕುತ್ತಿರುವ ಮೊಬೈಲ್ ಸಂಸ್ಥೆಗಳಿಗೆ ಈ ಕ್ರಮ ಹೊಸ ಖರ್ಚಿನ ದಾರಿಯಾದೀತು ಎಂಬ ಆತಂಕದ ನಡುವೆ ಮೊಬೈಲ್ ಗ್ರಾಹಕ ಮಾತ್ರ ಒಳ್ಳೆಯ ದಿನಗಳ, ಒಳ್ಳೆಯ ಮೊಬೈಲ್ ಸೇವೆಯ ನಿರೀಕ್ಷೆಯಲ್ಲಿದ್ದಾನೆ!

ಜೂನ್ ೧೦, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

interesting info.. thanks

Chinnamma baradhi ಹೇಳಿದರು...

ಮೊಬೈಲ್ ಸಂವಹನಕ್ಕೆ ಬೇಕಾದ ತರಂಗಗುಚ್ಛಗಳಿ೦ದ ಹೊರಡುವ ಮೈಕ್ರೊ ವೇವ್ ಪ್ರಮಾಣದಿ೦ದ ಗ್ರಾಹಕರೇ
ಅಲ್ಲದೆ ಮೊಬೈಲ್ ಟವರ್‌ಗಳ ಬಳಿ ವಾಸಿಸುವವರ ಆರೋಗ್ಯದ ಮೇಲೂ ಏರುಪೇರುಗಳು೦ಟಾಗುತ್ತದೆ ಎ೦ಬ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ.

badge