ಸೋಮವಾರ, ಜೂನ್ 15, 2015

ಸಂವಹನಕ್ಕೆ ಸಿದ್ಧತೆ: ತಂತ್ರಜ್ಞಾನದ ಸವಲತ್ತುಗಳು

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಸುಧೀಂದ್ರ ಹಾಲ್ದೊಡ್ಡೇರಿ

ನಾನಿಂದು ಮಾತನಾಡುತ್ತಿರುವ ವಿಷಯ ಕೇವಲ ಸಂವಹನಕ್ಕಷ್ಟೇ ಸೀಮಿತವಾಗಿಲ್ಲ, ನಮ್ಮ ಇಡೀ ಜೀವನಶೈಲಿಗೇ ಅನ್ವಯಿಸುವಂಥದ್ದು. ಕಾರಣ, ತಂತ್ರಜ್ಞಾನ ನೀಡುತ್ತಿರುವ ಸವಲತ್ತುಗಳ ಹೊರತಾಗಿ ನಾವು ಏನನ್ನೂ ಊಹಿಸಿಕೊಳ್ಳಲಾರದ ಸ್ಥಿತಿಯಲ್ಲಿದ್ದೇವೆ. ಹಾಗೆಂದ ಮಾತ್ರಕ್ಕೆ "ನಮ್ಮ ಕಾಲದಲ್ಲಿ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದೆವು, ಈಗಿನವರಿಗೆ ಅನುಕೂಲಗಳು ಜಾಸ್ತಿ, ಶ್ರದ್ಧೆ ಕಡಿಮೆ, ಕಾರ್ಯಭಾರವೂ ಹೆಚ್ಚಿಲ್ಲ" ಎಂದು ಹಳಿಯಲು ಹೊರಟಿಲ್ಲ. ನಿಗದಿತ ಹಳಿಯ ಮೇಲೆ ನನ್ನ ಯೋಚನಾ ಲಹರಿಯ ಬೋಗಿಗಳನ್ನು ಕೂಡಿಸಲು ಹೊರಟಿದ್ದೇನೆ.

ಸಿದ್ಧತೆಯೆಂಬುದು ನಮ್ಮೆಲ್ಲ ಕೆಲಸಗಳಿಗೆ ಅತ್ಯಗತ್ಯವಾದದ್ದು. ಸಿದ್ಧತೆಯಿಲ್ಲದ ಯಾವುದೇ ಕಾರ್ಯ ಅಪೂರ್ಣವಾಗಬಲ್ಲದ್ದು. ಸಂವಹನವೆಂದೊಡನೆ ಅದು ಪತ್ರಿಕೆಗಳ ಮೂಲಕ ಇರಬಹುದು ಅಥವಾ ರೇಡಿಯೊ ಮೂಲಕ ಇರಬಹುದು, ಟೀವಿ ಚಾನೆಲ್ ಮೂಲಕ ಇರಬಹುದು ಅಥವಾ ಇಂಟರ್‌ನೆಟ್ ಮೂಲಕ ನಡೆಸುವ ಬಹು-ಮಾಧ್ಯಮ ಅಭಿವ್ಯಕ್ತಿಯಿರಬಹುದು. ಮೊದಲ ಸಿದ್ಧತೆ ವಿಷಯವೊಂದರ ಕುರಿತು ಮಾಹಿತಿ ಟಿಪ್ಪಣಿ ಸಂಗ್ರಹಣೆ.
ಪೆನ್ನು-ಪುಸ್ತಕವ ಹಿಡಿಯದಿರುವುದೇ ಅಗ್ಗಳಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಟಿಪ್ಪಣಿಗಳನ್ನು ಬರೆದು, ಅವುಗಳಲ್ಲಿ ಮುಖ್ಯವಾದುದ್ದನ್ನು ಗುರುತಿಸಿ, ವಿಷಯ ಕ್ರೋಢೀಕರಿಸಿ, ನಂತರ ಸುಲಲಿತವಾಗಿ ಜೋಡಿಸುವುದು ಒಂದು ಕಲಾ ಪ್ರಕಾರ. ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಕೈಬರಹ ಟಿಪ್ಪಣಿಗಳ ಸಂಗ್ರಹದ ಜತೆ ಜತೆಗೇ ಇಂಟರ್‌ನೆಟ್ ನೆರವಿನಿಂದ ಸಂಗ್ರಹಿಸಿದ ಚಿತ್ರ, ಮಾಹಿತಿ, ಅಂಕೆ-ಅಂಶಗಳನ್ನು ಕಡತ-ಕವಚದಲ್ಲಿ ಅಂದರೆ ಫೈಲ್ ಫೋಲ್ಡರ್‌ನಲ್ಲಿ ಸೇರಿಸುತ್ತಾ ಹೋಗಬಹುದು. ತಂತ್ರಜ್ಞಾನದ ಈ ಸೌಲಭ್ಯ ಕತ್ತರಿಸು-ಅಂಟಿಸು ಕಾರ್ಯಕ್ಕೆ ಪ್ರೇರೇಪಣೆ ನೀಡಬಹುದು.

ಆದರೆ ವಿಶಿಷ್ಟ ಶೈಲಿಯ ಲೇಖಕನೆಂದು ಗುರುತಿಸಿಕೊಳ್ಳಬಯಸುವವರು ಇಂಥದ್ದನ್ನು ಮಾಡುವುದಿಲ್ಲ. ಹೀಗಾಗಿ ಕಾಗದ-ಪತ್ರಗಳ ದಾಖಲೆಗಳೊಂದಿಗೆ, ಕಂಪ್ಯೂಟರ್ ತೆರೆಯ ಮೇಲೆ ಸಂಗ್ರಹಿತವಾಗಿರುವ ಮಾಹಿತಿಯನ್ನು ಓದಿ, ಮನನ ಮಾಡಿಕೊಂಡು, ಅರ್ಥವಾದಂತೆ ಬರೆಯುತ್ತಾ ಹೋಗುವುದು ಸೂಕ್ತ. ಬರೆದ ನಂತರ ಯಾವುದೇ ಲೇಖನವನ್ನು ಹಲವು ಬಾರಿ ಪರಿಷ್ಕರಣೆ ನಡೆಸುವುದು ಉತ್ತಮ ಅಭ್ಯಾಸ. ಡೆಡ್‌ಲೈನ್‌ಗಳ ಆಧಾರದ ಮೇಲೆ ಮರು ಅವಲೋಕನಗಳ ಸಂಖ್ಯೆ ಹಾಗೂ ಕಾಲಾವಧಿಗಳನ್ನು ನಿರ್ಧರಿಸಿಕೊಳ್ಳಬಹುದು. ಕಾಗದದ ಮೇಲೊಂದು ಬಾರಿ ಮುದ್ರಿಸಿಕೊಂಡು ಪರಿಶೀಲಿಸಿ ಎಂಬ ಸಲಹೆ ಪರಿಸರ-ಸಂರಕ್ಷಕರ ಅಂದರೆ ಕಾಗದ-ಉಳಿಸಿ ಆಂದೋಲನದವರ ಕಣ್ಣು ಕೆಂಪಾಗಿಸಬಹುದು. ಇಲ್ಲಿ ಹೇಳಿದ ಮಾತುಗಳು ಮುದ್ರಿತ ಪತ್ರಿಕೆಗಳ ಬರಹಕ್ಕೆ ಹಾಗೂ ರೇಡಿಯೊ ಕಾರ್ಯಕ್ರಮಗಳಿಗೆ ಅನ್ವಯವಾಗುವುದೇ ಹೊರತು ಅವಸರವೇ ಪ್ರಾಧಾನ್ಯವಾಗಿರುವ ಟೀವಿ ಚಾನೆಲ್ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ. ಇಲ್ಲಿ ಕ್ಷಣ, ಕ್ಷಣದ ಸುದ್ದಿ ಬದಲಾವಣೆಗಳ ಆತಂಕ, ನೇರ-ದಿಟ್ಟ-ನಿರಂತರದ ಧಾವಂತ, ಹೀಗೂ ಉಂಟೆಯ ಅಚ್ಚರಿ, ಪ್ರಚಾರಕ್ಕಾಗಿ ಹಪಹಪಿಸುವ ಜನರ ಒತ್ತಡಗಳ ನಡುವೆ ಸಿದ್ಧತೆಗೆ ಅವಕಾಶವಿರುವುದಿಲ್ಲ.

ಸತ್ಯಾಸತ್ಯತೆಯ ಪರಿಶೀಲನೆ ವಿಜ್ಞಾನ ವಿದ್ಯಾರ್ಥಿಗಳಾದ ನಮ್ಮೆಲ್ಲರ ಆದ್ಯ ಕರ್ತವ್ಯ. ಹಿಂದೆ ಹೇಳಿದಂತೆ ಮಾಹಿತಿ ಸಂಪನ್ಮೂಲದ ಕೊರತೆಯ ಕಾಲದಿಂದ ನಾವೀಗ ಮಾಹಿತಿಯ ಮಹಾಪೂರದ ಕಾಲವನ್ನು ತಲುಪಿದ್ದೇವೆ. ಯಾವ ವಿಷಯ ಯುಕ್ತ, ಯಾವ ವಿಷಯ ಸೂಕ್ತ ಎಂಬ ವಿವೇಚನೆ ಮಾಡುವುದರ ಜತೆ ಜತೆಗೇ ಯಾವುದು ಸತ್ಯ ಎಂಬ ಗೊಂದಲವೂ ನಮ್ಮನ್ನು ಕಾಡುತ್ತದೆ. ಯಾವ ಜಾಲತಾಣ ವಿಶ್ವಾಸಾರ್ಹ ಅಥವಾ ಯಾವ ಲೇಖಕನ ಆಕರ ನಿಖರವಾದದ್ದು ಎಂದು ನಿರ್ಧರಿಸಲು ಕೊಂಚ ಅನುಭವ ಬೇಕು. ಸದಾ ಓದಿನ ಹವ್ಯಾಸವಿರುವವರಿಗೆ ಕಾಲಕ್ರಮೇಣ ನಿಶ್ಚಿತ ಮೂಲಗಳು ಯಾವುವು ಎಂಬುದು ಮನವರಿಕೆಯಾಗುತ್ತದೆ. ಮಾಹಿತಿಯೊಂದನ್ನು ಅರಸುವಾಗ ‘ಗೂಗಲ್ ಗುರು’ವಿನ ನೆರವು ಅಗತ್ಯ ಜತೆಗೆ ‘ವಿಕಿಪೀಡಿಯ’ದತ್ತ ಗಮನ ಹರಿಸುವುದು ಒಳ್ಳೆಯ ಅಭ್ಯಾಸ. ಈ ಪ್ರಾಥಮಿಕ ಅರಿವು ಹಾಗೂ ಸ್ಥೂಲ ಪರಿಚಯದೊಂದಿಗೆ ಹೆಸರಾಂತ ವಿಜ್ಞಾನ ಪತ್ರಿಕೆಗಳು, ಜರ್ನಲ್‌ಗಳು, ನಂಬಲರ್ಹವಾದ ಸುದ್ದಿ ತಾಣಗಳಲ್ಲಿ ಹುಡುಕಾಟವನ್ನು ಮುಂದುವರಿಸಬಹುದು. ಅಗತ್ಯ ಬಿದ್ದಲ್ಲಿ ನೇರ ಪರಿಚಿತರಲ್ಲದ ವಿಷಯ ತಜ್ಞರನ್ನು ಇ-ಮೇಲ್ ಮೂಲಕ ಸಂಪರ್ಕಿಸಿ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಇಷ್ಟೆಲ್ಲಾ ತಯ್ಯಾರಿಯಿದ್ದರೂ ಒಮ್ಮೊಮ್ಮೆ ತಪ್ಪುಗಳು ನುಸುಳುವ ಅವಕಾಶಗಳಿದ್ದೇ ಇರುತ್ತದೆ. ಮತ್ತೊಮ್ಮೆ ಅಂಥದೇ ತಪ್ಪಿಗೆ ಆಸ್ಪದ ಕೊಡದಿದ್ದರೆ ಬರಹಗಾರರ ವಿಶ್ವಾಸಾರ್ಹತೆ ಹೆಚ್ಚುತ್ತದೆ.

ಪದಗಳ ಅರ್ಥದ ವಿಷಯಕ್ಕೆ ಬಂದಾಗ ತಪ್ಪದೇ ನೆನಪಿಗೆ ಬರುವುದು ಇಂಗ್ಲಿಷಿನಲ್ಲಿ ಬಳಕೆಯಾಗಿರುವ ಪದಕ್ಕೆ ಸಂವಾದಿಯಾಗಿ ಯಾವ ಕನ್ನಡ ಪದ ಬಳಸಬೇಕೆಂಬ ಗೊಂದಲ. ಇದು ಇಂದಿನದಲ್ಲ, ಕನ್ನಡದಲ್ಲಿ ವಿಜ್ಞಾನ ಬರವಣಿಗೆ ಆರಂಭವಾದಾಗಿನಿಂದ ಮುಂದುವರಿದಿರುವ ಸಮಸ್ಯೆ. ಉತ್ತಮ ಪದ ವಿವರಣಾ ಕೋಶ, ನಿಘಂಟುಗಳು ಈ ಸಂದರ್ಭದಲ್ಲಿ ನೆರವಿಗೆ ಬರುತ್ತವೆ. ನಮ್ಮ ಬರಹಗಳು ಯಾರನ್ನು ಉದ್ದಿಶ್ಯಿಸಿವೆ ಎಂಬುದರ ಮೇಲೆ ಎಂಥ ಪದಗಳು ಸೂಕ್ತವೆಂದು ನಿರ್ಧರಿಸಬೇಕಾಗುತ್ತದೆ. ಓದುಗನೊಬ್ಬ ಬರಹಗಳನ್ನು ಅವಲೋಕಿಸುವಾಗ ನಿಘಂಟನ್ನು ಪದೇ ಪದೆ ‘ರೆಫರ್’ ಮಾಡಬೇಕಾದ ತೊಂದರೆ ನೀಡಬಾರದೆಂಬ ಎಚ್ಚರ ನಮ್ಮಲ್ಲಿರಬೇಕು. ಸಾಕಷ್ಟು ಪದಗಳು ನಮ್ಮ ಕನ್ನಡ ಕೋಶಕ್ಕೆ ಸೇರ್ಪಡೆಯಾಗುತ್ತಲೇ ಇವೆ. ಹಾಗೆಯೇ ಕೆಲವೊಂದು ಪದಗಳು ಆಡುಭಾಷೆಯಲ್ಲಿ ಸೇರಿ ಹೋಗಿವೆ. ಅಂಥವುಗಳನ್ನು ಹೆಚ್ಚು ಹೆಚ್ಚು ಬಳಸುವುದರ ಜತೆಗೆ, ಹೊಸತಾಗಿ ಪದವೊಂದನ್ನು ಪರಿಚಯಿಸುವಾಗ ಅದರ ಅರ್ಥ ವಿವರಣೆಯನ್ನು ಲೇಖನದಲ್ಲೇ ನೀಡುವುದು ಉತ್ತಮ. ಇನ್ನು ಉಚ್ಚಾರಣೆಯ ವಿಷಯಕ್ಕೆ ಬಂದಾಗ ಕನ್ನಡ ನಿಘಂಟಿನ ಮೊರೆ ಹೋಗಲೇಬೇಕಾದ ಅವಶ್ಯ ಇದೆ. ಈ ಕುರಿತು ನಮ್ಮದು ಗರುಡ ದೃಷ್ಟಿಯಾಗಿರಬೇಕು.

ಬರೆದ ಲೇಖನಗಳ ಸಂಗ್ರಹದ ಬಗ್ಗೆ ಮಾತನಾಡುವುದಾದರೆ ಇದು ಕಷ್ಟದ ಕೆಲಸವೆಂದೇ ಹೇಳಬೇಕಾಗುತ್ತದೆ. ಕೆಲವು ಹಿರಿಯ ಲೇಖಕರು ಅಚ್ಚುಕಟ್ಟುತನದಿಂದ ತಮ್ಮ ಲೇಖನಗಳನ್ನು ಸಂಗ್ರಹಿಸುವ ಪರಿಯನ್ನು ನಾನು ಕಂಡಿದ್ದೇನೆ. ಈ ವಿಷಯದಲ್ಲಿ ನನ್ನದು ತದ್ವಿರುದ್ಧ ಸ್ವಭಾವ. ಶಿಸ್ತಿನಿಂದ ಲೇಖನಗಳನ್ನು ಕಾಲಾನುಕ್ರಮದಲ್ಲಿ ಅಥವಾ ವಿಷಯಾನುಕ್ರಮದಲ್ಲಿ ಜೋಡಿಸಿಡುವ ಅಭ್ಯಾಸ ಒಳ್ಳೆಯದು. ಕನ್ನಡದಲ್ಲೇ ಅಕಾರಾದಿ ವಿಂಗಡನೆಗೆ ಅವಕಾಶ ನೀಡುವ ಡೇಟಾಬೇಸ್‌ಗಳ ಮೊರೆ ಹೋಗುವುದು ಅತ್ಯುತ್ತಮ. ಅಷ್ಟೊಂದು ತಂತ್ರಜ್ಞಾನ-ಸ್ಯಾವಿ ಮಂದಿ ನೀವಾಗಿಲ್ಲದಿದ್ದರೆ ನೀವು ಬಳಸುವ 'ವರ್ಡ್' ಅಥವಾ 'ಎಕ್ಸೆಲ್'ನಲ್ಲಿ ಒಂದು 'ಟೇಬಲ್' ರೂಪಿಸಿಕೊಂಡು, ಆಗಿಂದಾಗ್ಗೆ ಲೇಖನದ ಶೀರ್ಷಿಕೆ, ಪ್ರಕಟಣೆಯ ದಿನಾಂಕ, ಪತ್ರಿಕೆಯ ಸಂಚಿಕೆಯ ವಿವರ, ವಿಷಯ, ಸಂಬಂಧಿಸಿದ ಕೀಲಿಪದಗಳು .... ಹೀಗೆ ಮಾಹಿತಿಯನ್ನು ಕ್ರೋಢೀಕರಿಸುತ್ತಾ ಬರಬಹುದು. ಇನ್ನು ರೇಡಿಯೊ ಅಥವಾ ಟೀವಿ ಕಾರ್ಯಕ್ರಮಗಳ ಧ್ವನಿ ಹಾಗೂ ವೀಡಿಯೊ ಮುದ್ರಣವನ್ನು ಸಂಗ್ರಹಿಸಿ ಕಂಪ್ಯೂಟರಿನಲ್ಲಿ ಒಂದೆಡೆ ಒಪ್ಪವಾಗಿ ಜೋಡಿಸಬಹುದು. ಇಲ್ಲಿ ಕಡತಗಳಿಗೆ ನೀವು ನೀಡುವ ಹೆಸರುಗಳು ಮುಖ್ಯವಾಗುತ್ತವೆ. ಹೆಸರಿನ ಮೂಲಕವೇ ಕಡತ ಯಾವ ವಿಷಯಕ್ಕೆ ಸಂಬಂಧಿಸಿದ್ದೆಂದು ಗುರುತಿಸಬಹುದು.

ನನ್ನ ಅನುಭವದಲ್ಲೇ ಹೇಳುವುದಾದರೆ, ಕಂಪ್ಯೂಟರ್ ತೆರೆಯ ಮೇಲೆ ಅದೆಷ್ಟೇ ಮಾಹಿತಿ ಮುಗಿಬಿದ್ದರೂ ಪತ್ರಿಕೆ ಅಥವಾ ಪುಸ್ತಕದ ಸ್ಪರ್ಶದೊಡನೆ ಓದುವ ವಿಷಯ ಹೆಚ್ಚು ಮನದಟ್ಟಾಗುತ್ತದೆ. ಜತೆಗೆ, ಪೆನ್ಸಿಲ್ ಹಾಗೂ ಕಾಗದದ ಮೇಲೆ ಟಿಪ್ಪಣಿ ಮಾಡುವ ಅಭ್ಯಾಸ ಭಾಷೆಯ ಶುದ್ಧತೆ ಹಾಗೂ ಸ್ಪಷ್ಟ ಉಚ್ಚಾರಣೆಯತ್ತ ನಿಮ್ಮನ್ನು ಕೊಂಡೊಯ್ಯುತ್ತದೆ. ಕಂಪ್ಯೂಟರ್ ತೆರೆಯ ಮುಂದೆ ಆಲೋಚನೆ ಮಾಡುವುದಕ್ಕಿಂತಲೂ ಕೈಬರಹದೊಡನೆ ಚಿಂತಿಸುತ್ತಾ ಹೋಗುವುದು ನನಗಂತೂ ಇಷ್ಟದ ಕೆಲಸ. ಓದಿ ತಿಳಿದಿದ್ದನ್ನು ಮನಸ್ಸಿನಲ್ಲೇ ಮರು ಅವಲೋಕನ ನಡೆಸಿ ಅದನ್ನು ಅಕ್ಷರ ರೂಪದಲ್ಲಿ ಮೂಡಿಸುತ್ತಾ ಹೋಗುವುದೇ ಒಂದು ದಟ್ಟ ಅನುಭವ. ಇವೆಲ್ಲವನ್ನೂ ನೀವು ಮಾಡಿರುತ್ತೀರಿ, 'ಅಕ್ಯಾಡೆಮಿಕ್' ಜೀವನದ ಅವಧಿಯಲ್ಲಿ ಈ ಮೂಲಕವೇ ಯಶಸ್ಸನ್ನು ಕಂಡಿರುತ್ತೀರಿ. ಹಾಗೆಯೇ ತಂತ್ರಜ್ಞಾನದ ಎಲ್ಲ ಸವಲತ್ತುಗಳನ್ನು, ಕಂಪ್ಯೂಟರ್ ಸೇರಿದಂತೆ ಎಲ್ಲ ಗ್ಯಾಜೆಟ್‌ಗಳು, ಇಂಟರ್ನೆಟ್-ಟೀವಿ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ಮಾಹಿತಿ ಆಕರಗಳು, ವಿಷಯ ಸಂಗ್ರಹಣೆ-ಮಾಹಿತಿ ಸಂಸ್ಕರಣೆ-ಲೇಖನ ಶೇಖರಣೆಗೆ ನೆರವಾಗುವ ಎಲ್ಲ ತಂತ್ರಾಂಶಗಳು ... ನಿಮ್ಮೊಳಡಗಿರುವ ಅತ್ಯುತ್ತಮ ವಿಜ್ಞಾನ ಲೇಖಕನನ್ನು ಬೆಳಕಿಗೆ ತರುತ್ತವೆ.

ಕಾಮೆಂಟ್‌ಗಳಿಲ್ಲ:

badge