ಸೋಮವಾರ, ಜೂನ್ 8, 2015

ವಿಜ್ಞಾನ ಬರವಣಿಗೆಗೆ ಸಿದ್ಧತೆ

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಸಿ ಪಿ ರವಿಕುಮಾರ್

ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಬರೆಯಲು ಹಲವು ಸಿದ್ಧತೆಗಳು ಬೇಕು: ಕನ್ನಡದಲ್ಲಿ ಬರೆಯಬೇಕೆಂಬ ಮಾನಸಿಕ ಸಿದ್ಧತೆ, ವಿಜ್ಞಾನ ಬರವಣಿಗೆಗೆ ಬೇಕಾದ ಹಿನ್ನೆಲೆ, ಓದು ಹಾಗೂ ಭಾಷಾಸಿದ್ಧತೆ.

ಮಾನಸಿಕ ಸಿದ್ಧತೆ ಕನ್ನಡದಲ್ಲಿ ವಿಜ್ಞಾನದ ಬರವಣಿಗೆಯನ್ನು ತಂದ ದಿಗ್ಗಜರು ಹಲವರು. ಡಾ| ಕೋಟ ಶಿವರಾಮ ಕಾರಂತರು ಮಕ್ಕಳಿಗಾಗಿ ಬರೆದ, ಸಂಪಾದಿಸಿದ ವಿಜ್ಞಾನ ಸಂಬಂಧಿ ಪುಸ್ತಕಗಳನ್ನು ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಓದಿದೆ. ನಿರಂಜನ ಅವರ ಸಂಪಾದಕತ್ವದಲ್ಲಿ ಸಿದ್ಧವಾದ ಜ್ಞಾನಗಂಗೋತ್ರಿ ವಿಶ್ವಕೋಶ ಸಂಪುಟಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಒಂದು ಇಡೀ ಸಂಪುಟವನ್ನು ಮೀಸಲಾಗಿಟ್ಟಿದ್ದರು. ತಮ್ಮ ನವಿರುಹಾಸ್ಯ ಬೆರೆತ ಶೈಲಿಯಲ್ಲಿ ಸಸ್ಯಗಳ ಬಗ್ಗೆ ಬರೆದ ಪ್ರೊ| ಬಿಜಿಎಲ್ ಸ್ವಾಮಿ ಅವರ ಭಾಷಣ ಕೇಳುವ ಸದವಕಾಶ ನನಗೆ ನ್ಯಾಷನಲ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ದೊರಕಿತ್ತು. ಪ್ರೊ| ಜಿ.ಟಿ. ನಾರಾಯಣರಾವ್ ಅವರ ಅನೇಕ ಪುಸ್ತಕಗಳನ್ನು ನಾನು ಓದಿದ್ದೇನೆ. ನನ್ನ ‘ಕಂಪ್ಯೂಟರ್ ಗೊಂದು ಕನ್ನಡಿ’ ಪುಸ್ತಕ ಪ್ರಕಟವಾದಾಗ ಅವರು ನನಗೆ ಮೆಚ್ಚುಗೆಯ ಮಾತು ಬರೆದು ಪ್ರೋತ್ಸಾಹಿಸಿದರು.
ಯಾವ ಪ್ರೋತ್ಸಾಹವಿಲ್ಲದೆ, ಪ್ರಶಸ್ತಿಗಳ ಆಸೆ ಇಲ್ಲದೆ, ಪ್ರಕಾಶಕರ ಉತ್ತೇಜನವಿಲ್ಲದೆ ಬರೆಯುತ್ತಿರುವ ಮತ್ತು ಕನ್ನಡದಲ್ಲಿ ವಿಜ್ಞಾನ/ತಂತ್ರಜ್ಞಾನ ಓದುಗರನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಕನ್ನಡದ ವಿಜ್ಞಾನ/ತಂತ್ರಜ್ಞಾನ ಲೇಖಕರಿಗೆ ಧನ್ಯವಾದಗಳು ಸಲ್ಲಬೇಕು.

ಇಂಗ್ಲಿಷ್ ಪ್ರಭಾವ ಜಗತ್ತಿನ ಅತಿದೊಡ್ಡ ಜ್ಞಾನಭಂಡಾರವಿರುವುದು ಇಂಗ್ಲಿಷ್ ಭಾಷೆಯಲ್ಲಿ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ. ಈ ಜ್ಞಾನವನ್ನು ತಮ್ಮ ಭಾಷೆಗೆ ತರಬೇಕೆಂಬ ಆಸೆ ಇರುವ ಯಾರಾದರೂ ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಹೊಂದಿರುವುದು ಅವಶ್ಯಕ. ಎರಡು  ಘಟ್ಟಗಳಲ್ಲಿ ಈ ಕೆಲಸ ನಡೆಯಬೇಕು – (1) ಇಂಗ್ಲಿಷ್‌ನಲ್ಲಿ ಬರೆದ ಸಾಮಗ್ರಿಯನ್ನು ಓದಿ ಅರ್ಥ ಮಾಡಿಕೊಳ್ಳಬೇಕು (2) ಹೀಗೆ ಕಲಿತದ್ದನ್ನು ಕನ್ನಡ ಅಥವಾ ಇನ್ನಿತರ ಸ್ಥಳೀಯ ಭಾಷೆಯಲ್ಲಿ ಬರೆಯಬೇಕು. ಇದನ್ನು ಪ್ರಯತ್ನಿಸುವ ಲೇಖಕರು ಹಲವು ಮಾರ್ಗಗಳನ್ನು ಅನುಸರಿಸಿದ್ದಾರೆ –

  • ಪ್ರತಿಯೊಂದು ವಾಕ್ಯವನ್ನೂ ಅನುವಾದ ಮಾಡುವುದು; ಲ್ಯಾಟಿನ್/ಗ್ರೀಕ್ ಮೂಲದ ವೈಜ್ಞಾನಿಕ ಪದಗಳಿಗೆ ಸಂಸ್ಕೃತ-ಮೂಲದ ಅಥವಾ ತಮ್ಮದೇ  ಭಾಷೆಯ ಸೂಕ್ತ ಪದಗಳನ್ನು ಸೃಷ್ಟಿಸುವುದು. ಇಂಥ ಪದವನ್ನು ಸೃಷ್ಟಿಸಿದರೆ “ಇದು ಎಲ್ಲರಿಗೂ ಒಮ್ಮೆಲೇ ಅರ್ಥವಾಗುತ್ತದೆಯೇ?” ಎಂದು ನಮ್ಮನ್ನು ನಾವೇ ಕೇಳಿಕೊಳ್ಳುವುದು ಒಳ್ಳೆಯದು.
  • ಎಲ್ಲಿ ಸಾಧ್ಯವೋ ಅಲ್ಲಿ ವೈಜ್ಞಾನಿಕ ಪದಗಳನ್ನು ಹಾಗೇ ಉಳಿಸಿಕೊಳ್ಳುವುದು – ಉದಾ: ಮೈಕ್ರೋಪ್ರಾಸೇಸರ್ ಎಂಬುದಕ್ಕೆ ಹೊಸದೊಂದು ಪದ ಕಂಡುಹಿಡಿಯುವ ಬದಲು ಆ ಪದವನ್ನು ಹಾಗೇ ಬಳಸುವುದು.  

ನಾನು ಕ್ಯಾಲಿಫೋರ್ನಿಯಾದಲ್ಲಿ ಡಾಕ್ಟೊರೇಟ್ ವಿದ್ಯಾರ್ಥಿಯಾಗಿದ್ದಾಗ ನನಗೆ ಪರಿಚಯವಿದ್ದ ಒಬ್ಬ ಚೈನಾ ದೇಶದ ವಿದ್ಯಾರ್ಥಿ ನಮ್ಮ ಪಠ್ಯಪುಸ್ತಕವನ್ನು ತನ್ನ ಭಾಷೆಗೆ ಅನುವಾದ ಮಾಡಿ ಕಳಿಸುತ್ತಿದ್ದ. ಇಂಥ ಅನುವಾದಗಳಿಗೆ ತನ್ನ ದೇಶದಲ್ಲಿ ತುಂಬಾ ಬೇಡಿಕೆ ಇದೆಯೆಂದೂ, ಅನುವಾದ ಮಾಡಲು ತನಗೆ ಸಾಕಷ್ಟು ಸಂಭಾವನೆ ಸಿಕ್ಕುತ್ತದೆ, ಅದರಿಂದಲೇ ತಾನು ಜೀವನ ಮಾಡುತ್ತಿರುವುದು ಎಂದೂ ಹೇಳಿದ. ಪಠ್ಯಪುಸ್ತಕ ಅನುವಾದ ಮಾಡಲು ಅವನು ಮೂಲ ಪ್ರಕಾಶಕರ ಅನುಮತಿಯನ್ನೂ ಪಡೆದಿರಲಿಲ್ಲ. ಎಷ್ಟೋ ಶಾಲಾ ಪುಸ್ತಕದ ಲೇಖಕರಿಗೆ ತಮ್ಮ ಪುಸ್ತಕ ತನ್ನ ಚೈನೀ ಆವೃತ್ತಿ ಇರುವುದೇ ಗೊತ್ತಿರುವುದಿಲ್ಲ. ಆನ್ ಲೈನ್ ಪುಸ್ತಕಗಳು ಮತ್ತು ಅನುವಾದಕ್ಕೆ ಸಾಕಷ್ಟು ಅನುಕೂಲ ಮಾಡಿಕೊಡುತ್ತಿರುವ ತಂತ್ರಾಂಶಗಳು ಲಬ್ಧವಾದ ಮೇಲೆ ಈ ಬಗೆಯ “ಪೈರಸಿ” ಇನ್ನಷ್ಟು ಸುಲಭವಾಗಿದೆ! ಹಿಂದೆ ಇಂಗ್ಲೆಂಡ್ ದೇಶದಿಂದ ಬಂದ “ವ್ಯಾಪಾರಿಗಳು” ಭಾರತ ಮೊದಲಾದ ದೇಶಗಳಿಂದ ಧನಕನಕವನ್ನು ಕದ್ದೊಯ್ದ ಕಥೆ ನಿಮಗೆ ನೆನಪಿಗೆ ಬಂದಿರಬಹುದು. ದೋಚುವ ಪ್ರಕ್ರಿಯೆ ಈಗ ಹಿಮ್ಮುಖವಾಗಿದೆಯೇ ಎಂಬ ಅನುಮಾನವೂ ಬಂದಿರಬಹುದು!

ಇಂಗ್ಲಿಷ್ ಇತರ ಭಾಷೆಗಳನ್ನು ಕೊಲ್ಲುತ್ತಿದೆಯೇ?
ಚೈನಾ ದೇಶದಲ್ಲಿರುವ ಕಾಣುವ ಈ ಬಗೆಯ ಭಾಷಾಭಿಮಾನ ಭಾರತದಲ್ಲಿ ಕಾಣುವುದಿಲ್ಲ.  ನಮ್ಮ ಭಾಷೆಯ ಬಗ್ಗೆ ಘೋಷಣೆಗಳನ್ನು ಕೂಗುವುದು ಭಾಷಾಭಿಮಾನವಲ್ಲ. ಇಂಗ್ಲಿಷ್ ಇಂದು ಕನ್ನಡವಷ್ಟೇ ಅಲ್ಲ, ಜಗತ್ತಿನ ಅನೇಕ ಭಾಷೆಗಳಿಗೆ ಮಾರಕವಾಗಿದೆ.  ಎಷ್ಟೋ ಭಾಷೆಗಳು ಸಾಯುತ್ತಿವೆ. ಇಂಗ್ಲಿಷ್ ಜೊತೆಗೆ ಹೋರಾಡಲು ನಮ್ಮ ದೇಶದಲ್ಲಿರುವ ಭಾಷಾವೈವಿಧ್ಯವೇ ಮುಖ್ಯ ಕಾರಣ. ಯಾವುದೇ ಭಾರತೀಯ ಭಾಷೆಯನ್ನೂ ರಾಷ್ಟ್ರೀಯ ಭಾಷೆಯಾಗಿ ಒಪ್ಪದೆ ನಾವು ಇಂಗ್ಲಿಷ್ ಭಾಷೆಯನ್ನು ಅಪ್ಪಿಕೊಂಡೆವು.  ಕನ್ನಡವೂ ಅಪಾಯದ ಅಂಚಿನಲ್ಲಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಇಂಗ್ಲಿಷ್ ವ್ಯಾಮೋಹದ ಕಾರಣ ಕನ್ನಡದ ಓದುಗರ ಸಂಖ್ಯೆ ಇಳಿಯುತ್ತಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಕೆಲಸ ಸಿಕ್ಕುತ್ತದೆ ಎಂಬ ಭ್ರಮೆ ದಟ್ಟವಾಗಿ ಹಬ್ಬಿದೆ.  ಕರ್ನಾಟಕದಲ್ಲೇ ಜನಪ್ರಿಯತೆಯಲ್ಲಿ ಇತರ ಭಾಷೆಯ ಚಿತ್ರಗಳು ಮತ್ತು ಟಿವಿ ಚಾನೆಲ್ ಗಳು ಮುಂಚೂಣಿಯಲ್ಲಿವೆ ಎಂಬ ವದಂತಿ ಇದೆ.  ಜನರಲ್ಲಿ ಸದಭಿರುಚಿ ಬೆಳೆಸುವ ಬದಲು ನಿಯತಕಾಲಿಕೆಗಳು ಇನ್ಫೋಮರ್ಷಿಯಲ್ ಮಾದರಿಯ ಬರವಣಿಗೆಗೆ, ಕೊಳ್ಳುವ ಸಂಸ್ಕೃತಿಯನ್ನು ಬೆಳೆಸುವತ್ತ ಗಮನ ಹರಿಸುತ್ತಿರುವುದು ನೋಡಬಹುದು– ಹೀಗಿರುವಾಗ ಕನ್ನಡದಲ್ಲಿ ಬರೆದ ವಿಜ್ಞಾನ/ತಂತ್ರಜ್ಞಾನ ಬರಹಗಳಿಗೆ ಬೇಡಿಕೆ ಇರುವುದು ಅನುಮಾನದ ವಿಷಯ. ವಿಕಿಪೀಡಿಯಾ ಮೊದಲಾದ ಪ್ರಯತ್ನಗಳಲ್ಲಿ ಕನ್ನಡ ಓದುಗರಿಗೆ ನಿರಾಸಕ್ತಿ ಇರುವುದನ್ನು ನಾವು ನೋಡಬಹುದು.

ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬರವಣಿಗೆ ಹೆಚ್ಚಿಲ್ಲ. ಇದಕ್ಕೆ ಕನ್ನಡ ಮಾತ್ರ ಹೊರತಲ್ಲ. ಜಗತ್ತಿನ ಅತಿಹೆಚ್ಚು ವಿಜ್ಞಾನ ಮತ್ತು ತಂತ್ರಜ್ಞಾನ ಬರವಣಿಗೆ ಇರುವುದು ಇಂಗ್ಲಿಷ್ ಭಾಷೆಯಲ್ಲೇ. ಫ್ರಾನ್ಸ್, ರಷ್ಯಾ, ಜಪಾನ್, ಚೈನಾ ಮೊದಲಾದ ಕೆಲವು ರಾಷ್ಟ್ರಗಳಲ್ಲಿ ಗಂಭೀರ ಸಂಶೋಧನಾ ಪ್ರಬಂಧಗಳುಳ್ಳ ನಿಯತಕಾಲಿಕೆಗಳು ದೇಶೀ ಭಾಷೆಗಳಲ್ಲಿ ಪ್ರಕಟವಾಗುತ್ತವೆ. ಬ್ರಿಟಿಷ್ ಸಾಮ್ರಾಜ್ಯದ ಮೇಲೆ ಸೂರ್ಯ ಮುಳುಗುವುದೇ ಇಲ್ಲ ಎನ್ನುವ ಮಟ್ಟಿಗೆ ಬ್ರಿಟನ್ ಜಗತ್ತಿನ ಬಹುಭಾಗವನ್ನು ಆಕ್ರಮಿಸಿಕೊಂಡು ನೂರಾರು ವರ್ಷಗಳ ಕಾಲ ಆಳಿತು. ಜಗತ್ತಿನ ಬಹುಮುಖ್ಯ ವಿಶ್ವವಿದ್ಯಾಲಯಗಳ ಪಟ್ಟಿ ಮಾಡಿದರೆ ಅವುಗಳಲ್ಲಿ ಹೆಚ್ಚು ಅಮೆರಿಕಾ ಸಂಸ್ಥಾನ ಮತ್ತು ಇಂಗ್ಲೆಂಡ್ ದೇಶಗಳಲ್ಲಿವೆ; ಇವುಗಳಲ್ಲಿ ವ್ಯಾವಹಾರಿಕ ಭಾಷೆ ಇಂಗ್ಲಿಷ್.   ಜಾಗತಿಕ ಮಟ್ಟದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ಇಂಗ್ಲಿಷ್ ಭಾಷೆಯನ್ನು  ವ್ಯಾವಹಾರಿಕ ಭಾಷೆಯನ್ನಾಗಿ ಸ್ವೀಕರಿಸಿರುವುದು ಕೂಡಾ ಇಂಗ್ಲಿಷ್ ಪ್ರಾಬಲ್ಯಕ್ಕೆ ಒಂದು ಮುಖ್ಯ ಕಾರಣ.  ಗಣಕಯಂತ್ರಗಳು ನಮ್ಮ ಜೀವನದ ಮುಖ್ಯ ಭಾಗವಾದ ಮೇಲಂತೂ ಇಂಗ್ಲಿಷ್ ಕಲಿಯದೆ ನಿರ್ವಾಹವಿಲ್ಲ ಎಂಬ ಪರಿಸ್ಥಿತಿ ಉಂಟಾಯಿತು. ASCII ಕೋಡ್ ಎಂಬುದರಲ್ಲಿ ಇಂಗ್ಲಿಷ್ ಹಾಸುಹೊಕ್ಕಾಗಿತ್ತು. ಇದೀಗ ಯೂನಿಕೋಡ್ ಮೂಲಕ ಉಳಿದ ಭಾಷೆಗಳು ತಮ್ಮ ಇರುವನ್ನು ಜಗತ್ತಿಗೆ ಸಾರುತ್ತಿವೆ.  ಕನ್ನಡದಲ್ಲೇ ಬರೆಯಲು ತಂತ್ರಾಂಶಗಳು ವ್ಯಾಪಕವಾಗಿ ದೊರಕುತ್ತಿವೆ.  ಕನ್ನಡದಲ್ಲಿ ವಿಜ್ಞಾನ/ತಂತ್ರಜ್ಞಾನ ಸಾಹಿತ್ಯವನ್ನು ಬಲಗೊಳಿಸಲು ಇದು ಸಕಾಲವಾಗಿದೆ.  ಕನ್ನಡದಲ್ಲಿ ವಿಜ್ಞಾನ ಬರವಣಿಗೆಗೆ ಸಿದ್ಧವಾಗುವುದು ಅಷ್ಟು ದೊಡ್ಡ ಮಾತಲ್ಲ;ಕನ್ನಡದಲ್ಲಿ ವಿಜ್ಞಾನ ಬರವಣಿಗೆಗೆ ಸಿದ್ಧವಾಗುವುದು ಅದಕ್ಕಿಂತ ಹೆಚ್ಚು ದೊಡ್ಡ ನಿರ್ಧಾರ.

ವಿಜ್ಞಾನ ಬರಹಕ್ಕೆ ಮುನ್ನ ಓದುವಿಕೆ 
ವಿಜ್ಞಾನದ ಬಗ್ಗೆ ಬರೆಯುವವರು ವಿಜ್ಞಾನಿಗಳೇ ಆಗಬೇಕಾಗಿಲ್ಲ. ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ಬರವಣಿಗೆಗಾಗಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ವರ್ಷಗಳ ಪಾಠಕ್ರಮ ಲಭ್ಯವಾಗಿದೆ. ವಿಜ್ಞಾನ ಬರವಣಿಗೆ ಎಂಬುದು ಹಲವು ದೇಶಗಳಲ್ಲಿ ಒಂದು ವೃತ್ತಿ. ಅವರಿಗೆ ಹಲವು ಕಡೆ ಉದ್ಯೋಗ ಸಿಕ್ಕಬಹುದು. ಇಂಗ್ಲಿಷ್ ಭಾಷೆಯಲ್ಲಂತೂ ವಿಜ್ಞಾನ ಪತ್ರಿಕೋದ್ಯಮ ಸಾಕಷ್ಟು ಮುನ್ನಡೆ ಸಾಧಿಸಿದ ಪ್ರಕಾರ. ಮ್ಯೂಸಿಯಂ, ಲೈಬ್ರರಿ ಮೊದಲಾದ ಕಡೆ ವಿಜ್ಞಾನ ಬರವಣಿಗೆ ಬಲ್ಲವರು ಬೇಕಾಗುತ್ತಾರೆ.  ವಿಜ್ಞಾನಕ್ಕೆ ಸಂಬಂಧಿಸಿದ ಸಾರ್ವಜನಿಕ ಸಮ್ಮೇಳನ, ಪ್ರದರ್ಶನ  ಮೊದಲಾದವುಗಳನ್ನು ನಡೆಸುವವರಿಗೆ ಕೂಡಾ ವಿಜ್ಞಾನ ಬರವಣಿಗೆಯ ಮೇಲೆ ಪ್ರಭುತ್ವ ಇರಬೇಕು. ನನಗೆ ತಿಳಿದ ಮಟ್ಟಿಗೆ ಇಂದು ಭಾರತದಲ್ಲಿ ವಿಜ್ಞಾನ ಪತ್ರಿಕೋದ್ಯಮ ಎಂಬುದು ಪ್ರತ್ಯೇಕ ಪ್ರಕಾರವಾಗಿ ಬೆಳೆದಿಲ್ಲ. ನಿಯತಕಾಲಿಕೆಗಳು ಆಗೊಮ್ಮೆ ಈಗೊಮ್ಮೆ ವಿಜ್ಞಾನಿಗಳಿಂದಲೇ ಲೇಖನಗಳನ್ನು ಬರೆಸುತ್ತವೆ. ವಿಜ್ಞಾನಿಗಳನ್ನು ಅಂಕಣ ಬರೆಯಲು ಆಹ್ವಾನಿಸುತ್ತವೆ.

ವಿಜ್ಞಾನ ಬರವಣಿಗೆಗೆ ಯಾವ ವಿಶ್ವವಿದ್ಯಾಲಯ ಪಠ್ಯಕ್ರಮವೂ ಇಲ್ಲದ ಸಂದರ್ಭದಲ್ಲಿ ಕೆಲವು ಸಲಹೆಗಳನ್ನು ಮಾತ್ರ ಕೊಡಲು ಸಾಧ್ಯ:

  • ವಿಜ್ಞಾನ / ತಂತ್ರಜ್ಞಾನ ಸದಾ ಮುನ್ನಡೆ ಸಾಧಿಸುತ್ತಿರುವ ಕ್ಷೇತ್ರಗಳು. ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಇವುಗಳನ್ನು ಕುರಿತು ನಿಯಮಿತವಾಗಿ ಓದುವುದು ಅಗತ್ಯ.  ಸೈನ್ಸ್, ಪಾಪ್ಯುಲರ್ ಸೈನ್ಸ್, ನ್ಯೂ ಸೈನ್ಟಿಸ್ಟ್ ಮೊದಲಾದ ಹತ್ತಾರು ನಿಯತಕಾಲಿಕೆಗಳು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಾಗಿವೆ. ಇವುಗಳಲ್ಲಿ ಪ್ರಕಟವಾದ ಬಹುತೇಕ ಲೇಖನಗಳನ್ನು ಆನ್ ಲೈನ್ ಮಾಧ್ಯಮದಲ್ಲಿ ಓದಬಹುದು.
  • ಒಳ್ಳೆಯ ಗ್ರಂಥಾಲಯಗಳಲ್ಲಿ ವಿಜ್ಞಾನ/ತಂತ್ರಜ್ಞಾನ ಮತ್ತು ಜನಪ್ರಿಯ ವಿಜ್ಞಾನ ಕುರಿತ ಪುಸ್ತಕಗಳು ಲಭ್ಯವಾಗುತ್ತವೆ. ಕೆಲವು ಗ್ರಂಥಾಲಯಗಳು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡುತ್ತವೆ; ಇನ್ನೂ ಕೆಲವು ಗ್ರಂಥಾಲಯಗಳು ಪರಿಚಯಸ್ಥರ ಮೂಲಕ ಹೋದಾಗ ಒಂದು ದಿನದ ಮಟ್ಟಿಗೆ ಗೌರವಸೂಚಕವಾಗಿ ಪ್ರವೇಶ ನೀಡುತ್ತವೆ.
  • ಉತ್ತಮ ಪುಸ್ತಕಮಳಿಗೆಗಳಲ್ಲಿ (ಉದಾ: ಭಾರತೀಯ ವಿಜ್ಞಾನ ಸಂಸ್ಥೆ) ಒಳ್ಳೆಯ ಪುಸ್ತಕಗಳ ರಾಶಿಯೇ ಸಿಕ್ಕುತ್ತದೆ. ಇವುಗಳ ಮೇಲೆ ಕಣ್ಣಾಡಿಸಲು ಯಾವ ಅಡ್ಡಿ-ಆತಂಕಗಳೂ ಇಲ್ಲ. ಒಳ್ಳೆಯ ವಿಜ್ಞಾನ ಪುಸ್ತಕಗಳು ಪ್ರಕಟವಾದಾಗ ಅವುಗಳ ವಿಷಯ ಆನ್‌ಲೈನ್ ಮಾಧ್ಯಮದಲ್ಲಿ ಲಭ್ಯವಾಗುತ್ತದೆ. ಗುಡ್‌ರೀಡ್ಸ್‌ನಂತಹ (goodreads.com) ವೆಬ್ ತಾಣಗಳಲ್ಲಿ ಹುಡುಕಿದರೆ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳ ಪಟ್ಟಿ ಸಿಕ್ಕುತ್ತದೆ.  ಟ್ಯಾಬ್ಲೆಟ್ ಮುಂತಾದ ಸಾಧನಗಳುಳ್ಳವರು  ಪುಸ್ತಕಗಳನ್ನು ಆನ್ ಲೈನ್ ಕೊಂಡು ಓದಬಹುದು. 
  • ಒಂದು ಲೇಖನ ಬರೆಯಲು ಅನೇಕ ಆಕರ ಸಾಮಗ್ರಿಗಳನ್ನು ಓದುವ ಅಗತ್ಯವಿರುತ್ತದೆ. ಕೆಲವೊಮ್ಮೆ ಜನಪ್ರಿಯ  ವಿಜ್ಞಾನ ಲೇಖನದಲ್ಲಿ ಲೇಖಕ ತನ್ನ ಅಭಿಪ್ರಾಯವನ್ನು ಓದುಗರ ಮೇಲೆ ಹೇರಲು ಪ್ರಯತ್ನಿಸುತ್ತಿರಬಹುದು. ಆಕರ ಸಾಮಾಗ್ರಿಗಳನ್ನು ಕಲೆಹಾಕುವಾಗ ಅವುಗಳ ಮೂಲ ಯಾವುದು ಎಂಬ ಬಗ್ಗೆ ಎಚ್ಚರವಿರಬೇಕು. ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ತಮ್ಮ ವೆಬ್ ತಾಣಗಳಲ್ಲಿ ಅಥವಾ ತಮ್ಮ ನಿಯತಕಾಲಿಕೆಗಳಲ್ಲಿ ಪ್ರಕಟಿಸುವ ಲೇಖನಗಳ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ.
  • ವಿಜ್ಞಾನ ಲೇಖಕರು ಒಳ್ಳೆಯ ವಿಜ್ಞಾನ/ತಂತ್ರಜ್ಞಾನ ಸಮ್ಮೇಳನಗಳಲ್ಲಿ ಭಾಗವಹಿಸಿ ಅಲ್ಲಿ ಮಂಡಿಸಿದ ಪ್ರಬಂಧಗಳನ್ನು ಕೇಳಿ/ಓದಿ/ಲೇಖಕರನ್ನು ಸಂದರ್ಶಿಸಿ ಬರೆಯುವುದು ಕೂಡಾ ಒಂದು ಮಾರ್ಗ. 

ವಿಜ್ಞಾನ ಬರವಣಿಗೆಯ ರೂಪಗಳು 
ವಿಜ್ಞಾನ ಬರವಣಿಗೆಯಲ್ಲಿ ಅನೇಕ ಪ್ರಕಾರಗಳಿವೆ.

  • ಸಂಶೋಧನಾ ಪ್ರಬಂಧಗಳಿಗಾಗಿ ಬರೆದಾಗ ಓದುಗನಿಗೆ ಹಿನ್ನೆಲೆ ಗೊತ್ತಿದೆ ಎಂಬ ವಿಶ್ವಾಸದಿಂದ ಲೇಖಕ ಬರೆಯುತ್ತಾನೆ. ಹಿನ್ನೆಲೆ ಬಲ್ಲದವರಿಗೆ ಆಕರ ಸಾಮಾಗ್ರಿಗಳನ್ನು ನಮೂದಿಸಲಾಗುತ್ತದೆ. ಕನ್ನಡದಲ್ಲಿ ಇಂಥ ಸಂಶೋಧನಾ ಪ್ರಬಂಧಗಳು ಅಷ್ಟಾಗಿ ಇದ್ದಂತಿಲ್ಲ. ಇಂಥ ಪ್ರಬಂಧಗಳನ್ನು ಪ್ರಕಟಿಸಲು ನಿಯತಕಾಲಿಕೆಗಳೂ ಇಲ್ಲವೆಂದೇ ತೋರುತ್ತದೆ. 
  • ವಿಶ್ವಕೋಶಗಳಿಗೆ ಬರೆಯುವಾಗ ಅಡಕವಾಗಿ, ಅನೇಕ ಆಕರಗಳಿಗೆ ಪದೇಪದೇ ಮೊರೆ ಹೋಗದೆ,ಹೆಚ್ಚು ಆತ್ಮವಿಶ್ವಾಸದಿಂದ ಬರೆಯುವ ಹೊಣೆಗಾರಿಕೆ ಲೇಖಕನ ಮೇಲಿರುತ್ತದೆ. ವಿಕಿಪೀಡಿಯಾ ಮೊದಲಾದ ಆನ್ ಲೈನ್ ವಿಶ್ವಕೋಶಗಳಲ್ಲಿ ಮಾರ್ಕ್ ಅಪ್ ಮಾಡುವ ಸೌಲಭ್ಯ ಲೇಖಕನಿಗೆ ಇರುತ್ತದೆ.  ಕನ್ನಡದಲ್ಲಿ ವಿಶ್ವಕೋಶಗಳು ಇವೆ, ಆದರೆ ಅವುಗಳನ್ನು ನಿಯಮಿತವಾಗಿ ತಿದ್ದುವ ಕೆಲಸ ಆದಂತೆ ತೋರುವುದಿಲ್ಲ. ಕನ್ನಡ ವಿಕಿಪೀಡಿಯಾದಲ್ಲೂ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧ ಪಟ್ಟ ಬರವಣಿಗೆ ಅತ್ಯಲ್ಪ. ಬರಹಗಾರರ ಕೊರತೆ, ಬರೆದಿದ್ದನ್ನು ಓದಿ ವಿಮರ್ಶಿಸಬಲ್ಲವರ ಕೊರತೆ  ಇದಕ್ಕೆ ಮುಖ್ಯ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ಈ ಬರಹಗಾರರಿಗೆ ಯಾವ ರೀತಿಯ ಮನ್ನಣೆಯೂ ಇಲ್ಲದಿರುವುದು ಬಹಳ ದೊಡ್ಡ ಸಮಸ್ಯೆ. 
  • ಪ್ರಸಕ್ತ ಕನ್ನಡ ವಿಜ್ಞಾನ-ತಂತ್ರಜ್ಞಾನ ಬರಹಗಾರರಿಗೆ ಇರುವ ಮಾಧ್ಯಮವೆಂದರೆ ನಿಯತಕಾಲಿಕೆಗಳಿಗೆ ಬರೆಯುವುದು. ಇಲ್ಲಿ ಬರಹದ ಓದುಗರು  ಇಂಥವರೇ ಎನ್ನಲಾಗದು; 10+2 ವಿದ್ಯಾರ್ಹತೆ ಉಳ್ಳವರನ್ನು ಗಮನದಲ್ಲಿಟ್ಟುಕೊಂಡು ಬರೆಯುವುದು ಲೇಖಕರಿಗೆ ಇರುವ ಏಕೈಕ ಮಾರ್ಗ. ಆಸಕ್ತಿ ಕೆರಳಿಸುವಂತೆ ಆಕರ್ಷಕವಾಗಿ ಬರೆಯಬೇಕು. ತೀರಾ ಆಳಕ್ಕಿಳಿದರೆ ಅವರ ಓದುಗರು/ಸಂಪಾದಕರು ಒಪ್ಪಲಾರರು.  ಇದು ಅವರಿಗೆ ಮಿತಿಗಳನ್ನೂ ಒಡ್ಡುತ್ತದೆ. ಹಲವು ಲೇಖನಗಳನ್ನು ಬರೆದರೆ ಕೆಲವು ವಿಷಯಗಳ ಪುನರಾವೃತ್ತಿಯಾಗಬಹುದು. ಕೇವಲ ವಿಜ್ಞಾನದಲ್ಲಿ/ತಂತ್ರಜ್ಞಾನದಲ್ಲಿ ಆಸಕ್ತಿ ಉಳ್ಳವರು ಕಡಿಮೆ. ಹೀಗಾಗಿ “ಜನಪ್ರಿಯ ವಿಜ್ಞಾನದ” ಕಡೆಗೆ ಗಮನ ಹರಿಸಿ ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಬರೆಯಬೇಕಾಗುತ್ತದೆ.  ಅಂಕಣ ಬರಹಗಾರರಿಗೆ ಸಮಯದ ಅಭಾವವಿರುತ್ತದೆ. 
  • ಪಠ್ಯಪುಸ್ತಕಗಳ ಲೇಖಕರಿಗೆ ಸಾಕಷ್ಟು ತಯಾರಿ ಅಗತ್ಯ. ಆಕ್ರರ ಸಾಮಾಗ್ರಿಯನ್ನು  ಸಂಗ್ರಹಿಸಿಕೊಳ್ಳುವುದು, ವಿಷಯಾನುಕ್ರಮಣಿಕೆಯನ್ನು ಸಿದ್ಧಪಡಿಸಿಕೊಳ್ಳುವುದು, ಪುನರಾವರ್ತನೆಯಾಗದಂತೆ ಬರೆಯುವುದು, ಪ್ರಶೋತ್ತರಗಳನ್ನು ಸಿದ್ಧಪಡಿಸುವುದು, ಇತ್ಯಾದಿ. ಕಾಪಿರೈಟ್ ಉಲ್ಲಂಘನೆಯಾಗದಂತೆ ಚಿತ್ರಗಳು ಮೊದಲಾದ ಸಾಮಾಗ್ರಿಯನ್ನು ಕಲೆಹಾಕುವುದು ಕೂಡಾ ಒಂದು ಸವಾಲು.  ಕನ್ನಡ ಮಾಧ್ಯಮ ಇರುವುದು ಕೇವಲ 10+2 ವರೆಗೆ ಮಾತ್ರ; ಹೀಗಾಗಿ ಪಠ್ಯಪುಸ್ತಕಗಳನ್ನು ಪ್ರಕಟಿಸುವುದರಲ್ಲಿ ಪ್ರಕಾಶಕರಿಗೆ ಆಸಕ್ತಿ ಕೂಡಾ ಕಡಿಮೆ.

ಭಾಷಾ ಸಿದ್ಧತೆ 
ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಕನ್ನಡದಲ್ಲಿ ಯೋಚಿಸಿ ಕನ್ನಡದಲ್ಲಿ ಬರೆಯಲು ಇನ್ನೂ ತುಂಬಾ ಸಮಯ ಬೇಕು. ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಯುವುದು ಒಳ್ಳೆಯದೆಂಬ ಭಾವನೆ ಬೇರೂರುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಇದು ಸಾಧ್ಯವಾಗುತ್ತದೋ ಇಲ್ಲವೋ!

ವಿಜ್ಞಾನ ಬರಹಗಾರರಿಗೆ ಭಾಷೆಯ ಮೇಲೆ ಪ್ರಭುತ್ವ ಇರುವುದು ಅಗತ್ಯ. ಅವರು ವಿಜ್ಞಾನದ ಜೊತೆಗೆ ಸಾಹಿತ್ಯದಲ್ಲೂ ಸಮಾನ ಆಸಕ್ತಿ ಹೊಂದಿರಬೇಕು. ಕನ್ನಡದಲ್ಲಿ ವಿಪುಲವಾಗಿ ಲಭ್ಯವಾಗಿರುವ ಕಥೆ, ಕವಿತೆ, ಪ್ರಬಂಧ ಇವುಗಳನ್ನು ಓದಿಕೊಳ್ಳುವುದು ವಿಜ್ಞಾನ ಬರಹಗಾರನಿಗೆ ಅಗತ್ಯ. ಜನಪ್ರಿಯ ನುಡಿಗಟ್ಟುಗಳು, ಗಾದೆಗಳು, ಕವಿತೆಯ ಸಾಲುಗಳು ಇವುಗಳನ್ನು ವಿಜ್ಞಾನ ಬರಹಗಾರ ತನ್ನ ಬರವಣಿಗೆಯಲ್ಲಿ ತಂದಾಗ ಜನ ಅವುಗಳಿಗೆ ಹೆಚ್ಚು ಸ್ಪಂದಿಸುತ್ತಾರೆ.

ವೈಜ್ಞಾನಿಕ ಪದಗಳಿಗೆ ಕನ್ನಡ ಪದಗಳನ್ನು ಸೃಷ್ಟಿಸುವ ಕೆಲಸವನ್ನು ವಿಜ್ಞಾನ ಬರಹಗಾರರೇ ಮಾಡುತ್ತಿದ್ದಾರೆ. ಆದರೆ ಈ ಕೆಲಸವನ್ನು ಇನ್ನೂ ವ್ಯವಸ್ಥಿತವಾಗಿ ಮಾಡುವ ಅಗತ್ಯವಿದೆ. ಕನ್ನಡ ವಿಜ್ಞಾನ ಪದಕೋಶವನ್ನು ಸಿದ್ಧಪಡಿಸುವ ಕೆಲಸ ಆಗಬೇಕು. ಥೆಸೋರಸ್ ಮಾದರಿಯ ಪದಕೋಶ ಇಂದಿನ ವಿಜ್ಞಾನ ಲೇಖಕರಿಗೆ ಬಹಳ ಅಗತ್ಯ. ಇದು ಬೇಕಾಗಿರುವುದು ಆನ್ ಲೈನ್ ಮಾಧ್ಯಮದಲ್ಲಿ; ಆಗ ಪದಗಳನ್ನು ಹುಡುಕುವುದು ಸುಲಭ. ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ಈ ದಿಕ್ಕಿನಲ್ಲಿ ಒಳ್ಳೆಯ ಕೆಲಸಗಳಾಗಿವೆ. ವಿಜ್ಞಾನ/ತಂತ್ರಜ್ಞಾನವನ್ನು ಕನ್ನಡದಲ್ಲಿ ಚೆನ್ನಾಗಿ ಬರೆಯಬೇಕಾದರೆ ವಿಜ್ಞಾನ ಚೆನ್ನಾಗಿ ಗೊತ್ತಿರುವಷ್ಟೇ ಕನ್ನಡವೂ ಚೆನ್ನಾಗಿ ಗೊತ್ತಿರಬೇಕು! ಜ್ಞಾನಕೋಶ ಹಿಗ್ಗಿದಂತೆಲ್ಲಾ ಹೊಸ ಪದಗಳನ್ನು ಸೃಷ್ಟಿಸುವ ಕೆಲಸವನ್ನು ವಿಜ್ಞಾನ ಲೇಖಕರು ಮಾಡುತ್ತಲೇ ಇರಬೇಕಾಗುತ್ತದೆ. ಕನ್ನಡದ ಜಾಯಮಾನಕ್ಕೆ ಹೊಂದುವ ಪದಗಳನ್ನು ಸೃಷ್ಟಿಸಿದಾಗ ಅವು ಹೆಚ್ಚು ಅರ್ಥಪೂರ್ಣವಾಗುತ್ತವೆ (ಉದಾ: ಬಾನುಲಿ, ಆಕಾಶವಾಣಿ, ತರಂಗಾಂತರ, ಅಂತರ್ಜಾಲ).  ಈ ಪದಗಳನ್ನು ಲೇಖಕರ ಬಳಗ ಒಪ್ಪಿ ಬಳಸುವುದರಿಂದ ಪುನರಾವೃತ್ತಿಯಾಗಿ ಜನರ ಮನಸ್ಸಿನಲ್ಲಿ ಬೇರೂರುತ್ತವೆ.

ನಿರ್ಣಯಗಳು 
ಕನ್ನಡ ಮತ್ತು ಭಾರತದ ಇನ್ನಿತರ ಭಾಷೆಗಳಲ್ಲಿ ವಿಜ್ಞಾನ ಬರವಣಿಗೆ ಸೊರಗುತ್ತಿರುವ ಸಾಹಿತ್ಯ ಪ್ರಕಾರ. ವ್ಯವಸ್ಥಿತವಾಗಿ ಇದನ್ನು ಬೆಳೆಸುವತ್ತ ಕೆಲಸ ನಡೆಯಬೇಕಾಗಿದೆ. ಕನ್ನಡ ಬಿ.ಎ., ಎಂ.ಎ. ಪದವೀಧರರು ವಿಜ್ಞಾನ ಸಾಹಿತ್ಯವನ್ನೂ ಓದುವ ಅಗತ್ಯವಿದೆ. ಕನ್ನಡದಲ್ಲಿ ಆನ್‌ಲೈನ್ ವಿಜ್ಞಾನ ವಿಶ್ವಕೋಶ/ಥೆಸೋರಸ್ ಬೇಕಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಕನ್ನಡದಲ್ಲಿ ವಿಜ್ಞಾನ ಬರೆಯಬೇಕೆಂಬ ಉತ್ಸಾಹವಿರುವ ಉತ್ತಮ ಲೇಖಕರು ಬೇಕಾಗಿದ್ದಾರೆ.  ಈ ಲೇಖಕರಿಗೆ ವಿಭಿನ್ನ ರೀತಿಗಳಲ್ಲಿ ಉತ್ತೇಜನ ನೀಡುವ ಕೆಲಸವೂ ಆಗಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

badge