ಶುಕ್ರವಾರ, ಫೆಬ್ರವರಿ 15, 2013

ಕಾಪಿ ಪೇಸ್ಟ್‌‌ಗೆ ಕಂಪ್ಯೂಟರ್ ಕಡಿವಾಣ


ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲದಿಂದಾಗಿ ಮಾಹಿತಿ ನಮಗೆ ಎಷ್ಟೆಲ್ಲ ಸುಲಭವಾಗಿ ಸಿಗುವಂತಾಗಿದೆಯಲ್ಲ? ಶಾಲೆ-ಕಾಲೇಜಿನ ಅಸೈನ್‌ಮೆಂಟ್ ಮಾಡಲು ಲೈಬ್ರರಿಗೆ ಹೋಗುವ, ಪಕ್ಕದ ಮನೆಯ ಮೇಷ್ಟರ ಹತ್ತಿರ ಪುಸ್ತಕ ಕೇಳುವ ಕೆಲಸವೆಲ್ಲ ತಪ್ಪಿ ನಮಗೆ ಬೇಕಾದ ಮಾಹಿತಿಯೆಲ್ಲ ಕ್ಷಣಾರ್ಧದಲ್ಲೇ ಪ್ರತ್ಯಕ್ಷವಾಗುವಂತೆ ಮಾಡಿದ್ದು ವಿಶ್ವವ್ಯಾಪಿ ಜಾಲದ ಹಿರಿಮೆ.

ಬೇಕಾದ ಮಾಹಿತಿಯೆಲ್ಲ ಇಷ್ಟು ಸುಲಭವಾಗಿ ಸಿಗುವಾಗ ಅದನ್ನು ಬಳಸಲೇನು ಹಿಂಜರಿಕೆ? ಕೃತಿಚೌರ್ಯ, ಅಂದರೆ ಎಲ್ಲಿಂದಲೋ ತೆಗೆದ ಮಾಹಿತಿಯನ್ನು ನಮ್ಮದೇ ಎಂದು ಕಾಪಿ ಪೇಸ್ಟ್ ಮಾಡುವ ಚಟ, ವ್ಯಾಪಕವಾಗಿ ಬೆಳೆದದ್ದು ಈ ಧೋರಣೆಯಿಂದಾಗಿಯೇ. ಪ್ರೈಮರಿ ಶಾಲೆಯ ಹೋಮ್‌ವರ್ಕಿನಿಂದ ಪ್ರಾರಂಭಿಸಿ ಡಾಕ್ಟರೇಟಿನ ಪ್ರಬಂಧದವರೆಗೆ ಕೃತಿಚೌರ್ಯದ ಕಾಟ ಯಾವುದನ್ನೂ ಬಿಟ್ಟಿಲ್ಲ!

ಪ್ರೈಮರಿ ಶಾಲೆಯ ಮಗು ತನ್ನ ಪ್ರಬಂಧವನ್ನು ಎಲ್ಲಿಂದಲೋ ಕಾಪಿಮಾಡಿಕೊಂಡು ಬಂದಿದ್ದರೆ ಹಾಗೆ ಮಾಡಬಾರದೆಂದು ಒಳ್ಳೆಯ ಮಾತಿನಲ್ಲೇ ತಿಳಿಹೇಳೋಣ. ಆದರೆ ಡಾಕ್ಟರೇಟ್ ಪ್ರಬಂಧದಲ್ಲೂ ಇದೇ ತಾಪತ್ರಯ ಕಾಣಿಸಿಕೊಂಡರೆ? ಜರ್ಮನಿಯಲ್ಲಿ ಇತ್ತೀಚೆಗೆ ನಡೆದದ್ದು ಇದೇ. ಸಾಮಾನ್ಯ ವ್ಯಕ್ತಿಯಲ್ಲ, ಅಲ್ಲಿನ ಶಿಕ್ಷಣ ಸಚಿವರೇ ಹೀಗೆ ಕಾಪಿ ಪೇಸ್ಟ್ ಮಾಡಿ ಸಿಕ್ಕಿಕೊಂಡು ಅವರ ಡಾಕ್ಟರೇಟನ್ನು ವಾಪಸ್ ಪಡೆದು ಏನೆಲ್ಲ ಫಜೀತಿಯಾಗಿಬಿಟ್ಟಿತ್ತು.

ಅದೆಲ್ಲ ಸರಿ, ವಿಶ್ವವ್ಯಾಪಿ ಜಾಲದಲ್ಲಿ ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಷ್ಟು ಅಗಾಧ ಪ್ರಮಾಣದ ಮಾಹಿತಿಯಿರುತ್ತದಲ್ಲ. ಅಲ್ಲಿ ಯಾವುದೋ ಮೂಲೆಯಿಂದ ಒಂದಷ್ಟನ್ನು ಯಾರಾದರೂ ಕದ್ದರೆ ಅದು ಪತ್ತೆಯಾಗುವುದು ಹೇಗೆ? ಅದು ಹುಲ್ಲುಬಣವೆಯಲ್ಲಿ ಸೂಜಿ ಹುಡುಕಿದಂತಾಗುವುದಿಲ್ಲವೆ?

ಮಾಹಿತಿ ತಂತ್ರಜ್ಞಾನದಿಂದಾಗಿ ಸುಲಭವಾಗಿರುವ ಈ ಕಳ್ಳತನದ ಪತ್ತೆಯಲ್ಲೂ ಮಾಹಿತಿ ತಂತ್ರಜ್ಞಾನವೇ ನೆರವಾಗುವುದು ವಿಶೇಷ. ಲೇಖನಗಳನ್ನು ವಿಶ್ಲೇಷಿಸಿ ಅದರಲ್ಲಿರಬಹುದಾದ ಕೃತಿಚೌರ್ಯದ ಸುಳಿವನ್ನು ಪತ್ತೆಮಾಡಲು ಅನೇಕ ವಿಶೇಷ ತಂತ್ರಾಂಶಗಳು ಬಳಕೆಯಾಗುತ್ತವೆ.

ಇಂತಹ ತಂತ್ರಾಂಶಗಳು ಕೆಲಸಮಾಡುವ ವಿಧಾನ ಕುತೂಹಲಕರವಾದದ್ದು. ವಿವಿಧ ಲೇಖನಗಳು, ಸಂಶೋಧನಾ ಪ್ರಬಂಧಗಳು, ಜಾಲತಾಣಗಳಲ್ಲಿ ಲಭ್ಯವಿರುವ ಮಾಹಿತಿ ಇತ್ಯಾದಿಗಳನ್ನೆಲ್ಲ ಗಮನಿಸಿಕೊಳ್ಳುವ ತಂತ್ರಾಂಶ ಮೊದಲಿಗೆ ಅವುಗಳ ಉಲ್ಲೇಖವನ್ನೆಲ್ಲ ಒಂದೆಡೆ ದಾಖಲಿಸಿಟ್ಟುಕೊಳ್ಳುತ್ತದೆ. ಆನಂತರ ಕೃತಿಚೌರ್ಯದ ಸಂದೇಹವಿರುವ ಲೇಖನವನ್ನು ಅದಕ್ಕೆ ಒಪ್ಪಿಸಿಕೊಟ್ಟಾಗ ಆ ಲೇಖನದಲ್ಲಿರುವ ಬರವಣಿಗೆ ಹಾಗೂ ತಾನು ದಾಖಲಿಸಿಟ್ಟುಕೊಂಡಿರುವ ಮಾಹಿತಿಯನ್ನು ಆ ತಂತ್ರಾಂಶ ಹೋಲಿಸಿನೋಡುತ್ತದೆ; ಯಾವುದಾದರೂ ಭಾಗವನ್ನು ಕಾಪಿ ಪೇಸ್ಟ್ ಮಾಡಿರುವ ಸಂದೇಹ ಬಂದರೆ ಅದನ್ನು ಎತ್ತಿತೋರಿಸುತ್ತದೆ. ಒಂದೇ ಕ್ಲಾಸಿನ ವಿದ್ಯಾರ್ಥಿಗಳು ಸಲ್ಲಿಸಿರುವ ಪ್ರಬಂಧಗಳನ್ನೆಲ್ಲ ಹೋಲಿಸಿನೋಡಿ ಅದರಲ್ಲಿ ಯಾರೆಲ್ಲ ಕಾಪಿಹೊಡೆದಿದ್ದಾರೆ ಎನ್ನುವುದನ್ನೂ ಇಂತಹ ಕೆಲ ತಂತ್ರಾಂಶಗಳು ಪತ್ತೆಮಾಡಬಲ್ಲವು. ನಮ್ಮ ಜಾಲತಾಣದಲ್ಲಿರುವ ಮಾಹಿತಿಯನ್ನು ಯಾರಾದರೂ ಕದ್ದಿದ್ದರೆ copyscape.comನಂತಹ ತಾಣಗಳು ಅಂತಹ ಪ್ರಕರಣಗಳನ್ನು ಗುರುತಿಸಲು ನೆರವಾಗುತ್ತವೆ.

ಶಿಕ್ಷಣಸಂಸ್ಥೆಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ, ಪತ್ರಿಕೆ ಹಾಗೂ ಪ್ರಕಾಶನ ಕ್ಷೇತ್ರಗಳು ಇಂತಹ ತಂತ್ರಾಂಶಗಳ ಮುಖ್ಯ ಗ್ರಾಹಕರು. ತಮ್ಮ ವಿದ್ಯಾರ್ಥಿಗಳು ಕೃತಿಚೌರ್ಯದಲ್ಲಿ ತೊಡಗದಂತೆ ನೋಡಿಕೊಳ್ಳಲು ಹಲವು ಹೆಸರಾಂತ ಕಾಲೇಜುಗಳು ಇಂತಹ ತಂತ್ರಾಂಶಗಳನ್ನು ಬಳಸುತ್ತಿವೆ; ಅಷ್ಟೇ ಅಲ್ಲ, ಕೃತಿಚೌರ್ಯ ಮಾಡಿ ತಂತ್ರಾಂಶದ ಕೈಗೆ ಸಿಕ್ಕಿಕೊಂಡವರನ್ನು ದಂಡಿಸುತ್ತಲೂ ಇವೆ ಎಂದು ಇತ್ತೀಚಿನ ಪತ್ರಿಕಾವರದಿಗಳು ತಿಳಿಸಿವೆ. ಅಂದಹಾಗೆ ಕೃತಿಚೌರ್ಯ ಪತ್ತೆಮಾಡುವ ತಂತ್ರಾಂಶಗಳೆಲ್ಲವಕ್ಕೂ ದುಡ್ಡುಕೊಟ್ಟೇ ಬಳಸಬೇಕು ಎಂದೇನೂ ಇಲ್ಲ. ಉಚಿತವಾಗಿಯೂ ಲಭ್ಯವಿರುವ ಇಂತಹ ಕೆಲ ತಂತ್ರಾಂಶಗಳನ್ನು ಗೂಗಲ್‌ನಲ್ಲಿ ಹುಡುಕಿಕೊಳ್ಳಬಹುದು.

ಫೆಬ್ರುವರಿ ೧೫, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge