ಸೋಮವಾರ, ಫೆಬ್ರವರಿ 25, 2013

ಸೆಲ್ಫ್ ಪಬ್ಲಿಶಿಂಗ್ - ನಮ್ಮ ಪುಸ್ತಕ ನಾವೇ ಪ್ರಕಟಿಸೋಣ!


ಟಿ. ಜಿ. ಶ್ರೀನಿಧಿ

ಬರವಣಿಗೆಯ ಹವ್ಯಾಸ ಅಪರೂಪದ್ದೇನೂ ಅಲ್ಲ. ಕತೆ-ಕವನ-ಲಲಿತಪ್ರಬಂಧ-ಲೇಖನ ಇತ್ಯಾದಿ ಯಾವುದೋ ಒಂದು ಪ್ರಕಾರದಲ್ಲಿ ಸಾಹಿತ್ಯಕೃಷಿ ಮಾಡುವವರು ಅನೇಕ ಜನರಿದ್ದಾರೆ.

ಹಿಂದೆ ಬರವಣಿಗೆಯ ಪ್ರಕಟಣೆ ಪತ್ರಿಕೆಗಳಲ್ಲಷ್ಟೆ ಆಗಬೇಕಿದ್ದಾಗ ಹವ್ಯಾಸಿ ಬರಹಗಾರರು ಬರೆದದ್ದು ಪ್ರಕಟವಾಗಲು ಅವಕಾಶ ಕಡಿಮೆಯಿತ್ತು. ಹಾಗಾಗಿ ಅನೇಕರ ಬರವಣಿಗೆಯೆಲ್ಲ ಅವರ ಡೈರಿಯೊಳಗೇ ಹುದುಗಿ ಕುಳಿತಿರುವುದು ಸಾಮಾನ್ಯವಾಗಿತ್ತು.

ಮುಂದೆ ವಿಶ್ವವ್ಯಾಪಿ ಜಾಲದ ಹರವು ವ್ಯಾಪಕವಾದ ಮೇಲೆ ನಮ್ಮ ಬರವಣಿಗೆಯನ್ನು ಅದರ ಮೂಲಕ ಪ್ರಕಟಿಸುವ ಹೊಸ ಸಾಧ್ಯತೆ ಸೃಷ್ಟಿಯಾಯಿತು. ವೆಬ್‌ಸೈಟು-ಬ್ಲಾಗುಗಳಲ್ಲಿ ನಾವು ಬರೆದದ್ದನ್ನೆಲ್ಲ ಪ್ರಕಟಿಸುವ ಜೊತೆಗೆ ಓದುಗರೊಡನೆ ಕ್ಷಿಪ್ರ ವಿಚಾರ ವಿನಿಮಯ ಕೂಡ ಸಾಧ್ಯವಾಯಿತು. ಈ ಹೊಸ ಮಾಧ್ಯಮದ ಮೂಲಕ ಬೆಳಕಿಗೆ ಬಂದ ಪ್ರತಿಭಾನ್ವಿತ ಲೇಖಕರ ಸಂಖ್ಯೆಯೂ ಸಣ್ಣದೇನಲ್ಲ.

ಒಂದಷ್ಟು ಸಮಯದವರೆಗೆ ಬರಹಗಳನ್ನು ಹೀಗೆ ಪ್ರಕಟಿಸಿದ ಮೇಲೆ ಅದನ್ನೆಲ್ಲ ಪುಸ್ತಕರೂಪಕ್ಕೆ ತರುವ ಯೋಚನೆ ಬಾರದಿರುವುದು ಅಪರೂಪ. ಯೋಚನೆ ಬಂದರೆ ಸಾಕೆ, ಪ್ರಕಟಿಸಲು ಪ್ರಕಾಶಕರು ಬೇಕಲ್ಲ! ಕೆಲವು ಬರಹಗಾರರಿಗೇನೋ ಈ ಯೋಚನೆ ಕಾಡುವುದಿಲ್ಲ. ಆದರೆ ಉಳಿದವರು ಏನು ಮಾಡಬೇಕು? ಆಗ ನೆರವಿಗೆ ಬರುವುದೇ ಸ್ವಯಂಪ್ರಕಾಶನ ಅಥವಾ ಸೆಲ್ಫ್ ಪಬ್ಲಿಶಿಂಗ್‌ನ ಪರಿಕಲ್ಪನೆ.

ನಮ್ಮ ಪುಸ್ತಕವನ್ನು ನಾವೇ ದುಡ್ಡು ಖರ್ಚುಮಾಡಿ ಮುದ್ರಿಸಿದರೆ ಅದನ್ನೂ ಸೆಲ್ಫ್ ಪಬ್ಲಿಶಿಂಗ್ ಎನ್ನಬಹುದು ನಿಜ. ಆದರೆ ಹಾಗೆ ಮುದ್ರಿಸಿದ ಸಾವಿರ ಪ್ರತಿಗಳನ್ನು ಖರ್ಚುಮಾಡುವುದು ಹೇಗೆ? ಆಪ್ತರಿಗೆಲ್ಲ ಕೊಡಲು ಹತ್ತೋ ಇಪ್ಪತ್ತೋ ಪ್ರತಿ ಸಾಕು ಎನ್ನುವವರು ಈ ಬಗೆಯ ಸೆಲ್ಫ್ ಪಬ್ಲಿಶಿಂಗ್ ಮಾಡಿಕೊಂಡರೆ ಮಿಕ್ಕ ಪ್ರತಿಗಳನ್ನು ಶೆಲ್ಫ್ ಸೇರಿಸಬೇಕಾಗುತ್ತದೆ ಅಷ್ಟೆ!

ಅದೆಲ್ಲ ಚಿಂತೆಬೇಡ, ನಿಮಗೆ ಬೇಕಾದಾಗ ಬೇಕಾದಷ್ಟೆ ಪ್ರತಿಗಳನ್ನು ಮುದ್ರಿಸಿಕೊಳ್ಳುವಿರಂತೆ ಎನ್ನುವುದು ಪ್ರಿಂಟ್ ಆನ್ ಡಿಮ್ಯಾಂಡ್ ಸೌಲಭ್ಯ. ಈ ಬಗೆಯ ಸೌಲಭ್ಯ ಒದಗಿಸುವ ಅನೇಕ ತಾಣಗಳು ವಿಶ್ವವ್ಯಾಪಿ ಜಾಲದಲ್ಲಿವೆ. ನಮ್ಮ ಬರವಣಿಗೆಯನ್ನೆಲ್ಲ ಒಟ್ಟುಸೇರಿಸಿ ಸೂಕ್ತವಾಗಿ ವಿನ್ಯಾಸಗೊಳಿಸಿದ ಮೇಲೆ ಮುಖಪುಟ ಚಿತ್ರ ರೆಡಿಮಾಡಿ ಅವೆಲ್ಲವುದನ್ನೂ ಇಂತಹ ತಾಣಗಳಿಗೆ ಅಪ್‌ಲೋಡ್ ಮಾಡುವುದಷ್ಟೆ ನಮ್ಮ ಕೆಲಸ; ಅವರು ಕೇಳಿದಷ್ಟು ದುಡ್ಡುಕೊಟ್ಟರೆ ನಾವು ಕೇಳಿದಷ್ಟು ಪ್ರತಿಗಳನ್ನು ಮುದ್ರಿಸಿ ಬೈಂಡುಮಾಡುವ ಆ ತಾಣಗಳು ಅವನ್ನು ನಮ್ಮ ಮನೆಗೆ ತಲುಪಿಸುತ್ತವೆ. ಲೇಖನ ಟೈಪುಮಾಡಲಷ್ಟೆ ಗೊತ್ತು, ಪುಟವಿನ್ಯಾಸ - ಮುಖಪುಟ ರಚನೆಯೆಲ್ಲ ಗೊತ್ತಿಲ್ಲ ಎನ್ನುವವರಿಗೆ ಈ ತಾಣಗಳು ನಿರ್ದಿಷ್ಟ ಶುಲ್ಕಕ್ಕೆ ಪ್ರತಿಯಾಗಿ ಆ ಕೆಲಸಗಳನ್ನೂ ಮಾಡಿಕೊಡುತ್ತವೆ.

ನಾವು ಮಾತ್ರವೇ ಕೊಂಡರೆ ಸಾಲದು, ಬೇರೆಯವರಿಗೂ ನಮ್ಮ ಪುಸ್ತಕ ತಲುಪಬೇಕು ಎಂದರೆ ಅದೂ ಸಾಧ್ಯ. ಅಷ್ಟೇ ಅಲ್ಲ, ಮುದ್ರಣ ವೆಚ್ಚಕ್ಕೆ ನಮ್ಮ ಲಾಭಾಂಶವನ್ನೂ ಸೇರಿಸಿ ಪುಸ್ತಕದ ಮಾರಾಟ ಬೆಲೆಯನ್ನು ನಿಗದಿಪಡಿಸಬಹುದು. ನಮ್ಮ ಪರವಾಗಿ ಗ್ರಾಹಕರಿಂದ ಹಣಪಡೆದು ಅವರಿಗೆ ಪುಸ್ತಕ ಕಳುಹಿಸುವ ತಾಣ ನಮ್ಮ ಲಾಭಾಂಶವನ್ನು ನಮಗೆ ತಲುಪಿಸುತ್ತದೆ. ನಮ್ಮ ಗ್ರಾಹಕರು ಆ ಪುಸ್ತಕ ಓದದೆ ಇ-ಪುಸ್ತಕ ಓದುವವರಾದರೆ ಏನು ಮಾಡೋಣ? ನಾವು ಅಪ್‌ಲೋಡ್ ಮಾಡಿದ್ದನ್ನು ಇ-ಪುಸ್ತಕದ ರೂಪದಲ್ಲಿ ಮಾರಾಟ ಮಾಡಲೂ ಇಂತಹ ತಾಣಗಳು ಸಹಾಯಮಾಡುತ್ತವೆ.

ಅಮೆಜಾನ್ ಕ್ರಿಯೇಟ್‌ಸ್ಪೇಸ್‌ನಂತಹ (createspace.com) ವಿದೇಶಿ ತಾಣಗಳಷ್ಟೆ ಅಲ್ಲ, pothi.com ನಂತಹ ಭಾರತೀಯ ತಾಣಗಳೂ ಇಂತಹ ಸೇವೆ ಒದಗಿಸುತ್ತಿವೆ. ಇನ್ನಷ್ಟು ತಾಣಗಳ ಪಟ್ಟಿಗಾಗಿ, ಎಂದಿನಂತೆ, ಗೂಗಲ್ ಮೊರೆಹೋಗಬಹುದು.

ಫೆಬ್ರುವರಿ ೨೨, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge