ಶುಕ್ರವಾರ, ಫೆಬ್ರವರಿ 1, 2013

ಮ್ಯೂಸಿಕ್ ಸ್ಟ್ರೀಮಿಂಗ್: ಸಿನಿಮಾ ಹಾಡಿನ ಆನ್‌ಲೈನ್ ಪಾಡು!


ಟಿ. ಜಿ. ಶ್ರೀನಿಧಿ

ಒಂದು ಕಾಲ ಇತ್ತು. ಹೊಸ ಸಿನಿಮಾದಲ್ಲಿ ನಮಗಿಷ್ಟವಾದ ಹಾಡುಗಳನ್ನು ಬೇಕೆಂದಾಗ ಕೇಳಲು ಅಂಗಡಿಗೆ ಹೋಗಿ ಆಡಿಯೋ ಕ್ಯಾಸೆಟ್ ಕೊಳ್ಳುವುದಷ್ಟೇ ಆಗ ನಮ್ಮ ಮುಂದಿದ್ದ ಆಯ್ಕೆಯಾಗಿತ್ತು. ಟೀವಿಯಲ್ಲಿ ಚಿತ್ರಹಾರ್-ಚಿತ್ರಮಂಜರಿ ನೋಡುವುದಂತೂ ಆಗ ಇಡೀ ಕುಟುಂಬಕ್ಕೇ ಒಂದು ಸಂಭ್ರಮ. ಆಮೇಲೆ ಮಾಹಿತಿ ತಂತ್ರಜ್ಞಾನ ಬಂತಲ್ಲ, ನಮ್ಮ ಬದುಕಿನ ಬೇರೆಲ್ಲ ಆಯಾಮಗಳಂತೆ ಅದು ಸಿನಿಮಾ ಹಾಡುಗಳನ್ನು ಆಲಿಸುವ ಅನುಭವವನ್ನೂ ಬದಲಿಸಿಬಿಟ್ಟಿತು. ಎಂಪಿಥ್ರೀ ದೆಸೆಯಿಂದ ಕೈಯಲ್ಲಿನ ಫೋನುಗಳೂ ಮ್ಯೂಸಿಕ್ ಪ್ಲೇಯರುಗಳಾಗಿ ಬದಲಾದವು.

ಇದರ ಜೊತೆಯಲ್ಲೇ ಬೆಳೆದದ್ದು ಪೈರಸಿ ಪಿಡುಗು. ಸಿನಿಮಾ ಹಾಡು ಬೇಕು ಎಂದಾಕ್ಷಣ ನಮಗೆ ಟೊರೆಂಟುಗಳೇ ಮೊದಲು ನೆನಪಾಗುತ್ತವೆ. ಸ್ವತಃ ಡೌನ್‌ಲೋಡ್ ಮಾಡದಿದ್ದರೆ ಸ್ನೇಹಿತರಿಂದ ಪಡೆದುಕೊಂಡಾದರೂ ಸರಿ ಎನ್ನುವ ನಮಗೆ ಸಿನಿಮಾ ಹಾಡುಗಳನ್ನು ಕೊಂಡು ಕೇಳುವ ಪರಿಕಲ್ಪನೆ ಅಷ್ಟಾಗಿ ಹಿಡಿಸುವುದೇ ಇಲ್ಲ. ಹಾಡುಕೇಳಲು ದುಡ್ಡುಕೊಡಿ ಎನ್ನುವ ಐಟ್ಯೂನ್ಸ್‌ನಂತಹ ಐಡಿಯಾಗಳು ಹೀಗಾಗಿಯೇ ನಮ್ಮಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿಲ್ಲ (ಐದು ಹತ್ತು ರೂಪಾಯಿಗಳಿಗೆ ಒಂದು ಹಾಡಿನಂತೆ ನಮಗಿಷ್ಟವಾದುದನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಫ್ಲಿಪ್‌ಕಾರ್ಟ್ ಡಾಟ್ ಕಾಮ್ ಈಚೆಗಷ್ಟೇ 'ಫ್ಲೈಟ್' ಎಂಬ ಹೆಸರಿನಲ್ಲಿ ಪರಿಚಯಿಸಿದೆ: flipkart.com/mp3-downloads).

ಪೈರಸಿಗೆ ಪ್ರೋತ್ಸಾಹಿಸದೆಯೇ ಸೂಪರ್‌ಹಿಟ್ ಹಾಡುಗಳನ್ನು ಕೇಳುವ ಸೌಲಭ್ಯವನ್ನು ನಮಗೆ ಒದಗಿಸಿರುವುದು ಮ್ಯೂಸಿಕ್ ಸ್ಟ್ರೀಮಿಂಗ್ ತಾಣಗಳು. ಹಾಡನ್ನು ಡೌನ್‌ಲೋಡ್ ಮಾಡಿಕೊಳ್ಳಲು ಬಿಡದೆ ನಮಗೆ ಬೇಕಾದ ಹಾಡನ್ನು ವಿಶ್ವವ್ಯಾಪಿ ಜಾಲದಲ್ಲೇ ಕೇಳಿಸುವುದು ಈ ತಾಣಗಳ ವೈಶಿಷ್ಟ್ಯ. ಡೆಸ್ಕ್‌ಟಾಪ್-ಲ್ಯಾಪ್‌ಟಾಪ್‌ಗಳಲ್ಲಷ್ಟೇ ಏಕೆ, ಈ ಸೌಲಭ್ಯವನ್ನು ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೂ ಬಳಸಬಹುದು.

ಸೀಮಿತ ಸಾಮರ್ಥ್ಯದ ಅಂತರಜಾಲ ಸಂಪರ್ಕ ಇರುವವರಿಗೆ ಹೀಗೆ ಹಾಡು ಕೇಳುವುದು ಕೊಂಚ ದುಬಾರಿಯೆನಿಸಬಹುದಾದರೂ ಹೆಚ್ಚು ವೇಗದ ಅನ್‌ಲಿಮಿಟೆಡ್ ಸಂಪರ್ಕ ಬಳಸುವವರಿಗೆ ಇದು ಹೇಳಿ ಮಾಡಿಸಿದ ಸೌಲಭ್ಯ. ನಮಗೆ ಹಾಡು ಕೇಳಿಸಿದರೆ ಅವರಿಗೇನು ಲಾಭ ಎಂದು ಕೇಳುವವರಿಗೆ ಹಾಡಿನ ತಾಣದಲ್ಲಿ ಕಾಣಸಿಗುವ ಹಾಗೂ ಹಾಡುಗಳ ನಡುವೆ ಕೇಳಿಬರುವ ಜಾಹೀರಾತುಗಳು ಉತ್ತರ ನೀಡುತ್ತವೆ. ಇದೇ ಆದಾಯದ ಒಂದು ಭಾಗ ಹಾಡುಗಳ ಮೂಲ ಮಾಲಿಕರಿಗೂ ಸಿಗುತ್ತದೆ.

ಭಾರತದಲ್ಲಿ ಸುಮಾರು ಹದಿನೈದು ಕೋಟಿ ಅಂತರಜಾಲ ಬಳಕೆದಾರರಿದ್ದಾರೆ ಎಂದು ಲೆಕ್ಕಹಾಕಿದರೆ ಆನ್‌ಲೈನ್ ಮ್ಯೂಸಿಕ್ ಸ್ಟ್ರೀಮಿಂಗ್ ತಾಣಗಳ ವ್ಯವಹಾರ ಜೋರಾಗಿಯೇ ನಡೆಯುವ ನಿರೀಕ್ಷೆಯಿದೆ. ಈ ತಾಣಗಳ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಅವುಗಳ ಸೇವೆ ಗಮನಾರ್ಹವಾಗಿ ಉತ್ತಮಗೊಂಡಿದೆ; ಅಷ್ಟೇ ಅಲ್ಲ, ಅವುಗಳಲ್ಲಿ ದೊರಕುವ ಹಾಡುಗಳ ಸಂಗ್ರಹದಲ್ಲೂ ಸಾಕಷ್ಟು ವೈವಿಧ್ಯ ಕಾಣಸಿಗುತ್ತಿದೆ. ಹಿಂದಿ ಇಂಗ್ಲಿಷ್ ಅಷ್ಟೇ ಅಲ್ಲದೆ ಹಲವು ಭಾರತೀಯ ಭಾಷೆಗಳ ಹಾಡುಗಳೂ ಈ ತಾಣಗಳಲ್ಲಿ ಕಾಣಸಿಗುತ್ತಿವೆ.

gaana.com, saavn.com, dhingana.com ಮುಂತಾದವು ಭಾರತದಲ್ಲಿ ಸದ್ಯಕ್ಕೆ ಮುಂಚೂಣಿಯಲ್ಲಿರುವ ಮ್ಯೂಸಿಕ್ ಸ್ಟ್ರೀಮಿಂಗ್ ತಾಣಗಳು. ಇಂತಹ ತಾಣಗಳಿಂದ ನಮಗೆ ಬೇಕಾದ ಹಾಡುಗಳನ್ನು ಹುಡುಕಿಕೊಡುವ ಗೂಗಲ್ ಸೇವೆ ಕೂಡ google.co.in/music ವಿಳಾಸದಲ್ಲಿ ಸಿಗುತ್ತದೆ.

ಫೆಬ್ರುವರಿ ೧, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾಗಿರುವ ಲೇಖನ

ಕಾಮೆಂಟ್‌ಗಳಿಲ್ಲ:

badge