ಗುರುವಾರ, ಜನವರಿ 31, 2013

ಥ್ರೀಡಿ ಪ್ರಿಂಟಿಂಗ್ ವಂಡರ್: ಮುರಿದ ಮೊಬೈಲು ಮನೆಯಲ್ಲೇ ರಿಪೇರಿ!


ಉದಯವಾಣಿ ಮಂಗಳೂರು ಆವೃತ್ತಿಯ 'ಯುವ ಸಂಪದ' ಪುರವಣಿಯಲ್ಲಿ ಪ್ರಾರಂಭವಾಗಿರುವ 'ಸ್ವ-ತಂತ್ರ' ಅಂಕಣದ ಮೊದಲ ಬರಹ
ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳನ್ನು ನಾವು ಎಷ್ಟೇ ಜೋಪಾನಮಾಡಿದರೂ ತೀರಾ ಅನಿರೀಕ್ಷಿತ ಸಂದರ್ಭದಲ್ಲಿ ಅವು ನಮ್ಮ ಕೈಗೇ ಕೈಕೊಟ್ಟು ಕೆಳಗೆ ಬಿದ್ದುಬಿಡುತ್ತವೆ. ಹಾಗಾಗಿ ಅವುಗಳ ಪ್ಲಾಸ್ಟಿಕ್ ಹೊರಕವಚ ಹಾಳಾಗುವುದು ತೀರಾ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮುರಿದ ಭಾಗಗಳನ್ನು ಅಂಟಿಸುವುದು ಅಥವಾ ಬದಲಿ ಭಾಗ ಹುಡುಕಿಕೊಂಡು ಅಂಗಡಿಯತ್ತ ಹೋಗುವುದಷ್ಟೆ ನಾವು ಮಾಡಬಹುದಾದ ಕೆಲಸ.

ತಂತ್ರಜ್ಞಾನ ಪ್ರಪಂಚದಲ್ಲಿ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಈ ಪರಿಸ್ಥಿತಿ ಸದ್ಯದಲ್ಲೇ ಬದಲಾಗಲಿದೆಯಂತೆ. ಮೊಬೈಲ್ ಫೋನಿನ ಹೊರಕವಚ ಮುರಿದುಹೋದರೆ, ಅಥವಾ ಒಂದೇ ಬಣ್ಣದ್ದನ್ನು ನೋಡಿ ನೋಡಿ ಬೋರಾದರೆ ಥ್ರೀಡಿ ಮುದ್ರಣ ತಂತ್ರಜ್ಞಾನ ಬಳಸಿ ನಮಗೆ ಬೇಕಾದಂತಹ ಬದಲಿಭಾಗವನ್ನು ನಾವೇ ಸೃಷ್ಟಿಸಿಕೊಳ್ಳುವುದು ಸಾಧ್ಯವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಅಂತಹ ಆಸಕ್ತಿ - ಸಾಮರ್ಥ್ಯ ಎರಡೂ ಇರುವವರಿಗೆ ಲೂಮಿಯಾ ೮೨೦ ಫೋನ್ ಕವಚ ವಿನ್ಯಾಸದ ಪೂರ್ಣ ವಿವರಗಳನ್ನು ನೀಡಲು ಸಿದ್ಧವೆಂದು ನೋಕಿಯಾ ಸಂಸ್ಥೆ ಈಗಾಗಲೇ ಘೋಷಿಸಿಬಿಟ್ಟಿದೆ.

ಕಂಪ್ಯೂಟರಿಗೊಂದು ಪ್ರಿಂಟರ್ ಜೋಡಿಸಿ ನಮಗೆ ಬೇಕಾದ ಕಡತವನ್ನು ಕಾಗದದ ಮೇಲೆ ಮುದ್ರಿಸಿಕೊಳ್ಳುತ್ತೇವಲ್ಲ, ಥ್ರೀಡಿ ಪ್ರಿಂಟಿಂಗ್ ತಂತ್ರಜ್ಞಾನವೂ ಕೊಂಚ ಹಾಗೆಯೇ. ಆದರೆ ಇಲ್ಲಿ ನಮಗೆ ಬೇಕಾದ ವಸ್ತುವಿನ ಚಿತ್ರವನ್ನು ಮುದ್ರಿಸಿಕೊಳ್ಳುವ ಬದಲಿಗೆ ಪ್ಲಾಸ್ಟಿಕ್ ಕರಗಿಸಿ ನಮಗೇನು ಬೇಕೋ ಅದನ್ನೇ ತಯಾರಿಸಿಕೊಂಡುಬಿಡುವುದು ಸಾಧ್ಯ. ಮೊಬೈಲ್ ಫೋನ್ ಕವಚದ ಉದಾಹರಣೆಯನ್ನೇ ತೆಗೆದುಕೊಂಡರೆ ಅದರ ವಿನ್ಯಾಸದ ವಿವರಗಳನ್ನು ಅಗತ್ಯ ಸಾಫ್ಟ್‌ವೇರ್ ಮೂಲಕ ಥ್ರೀಡಿ ಪ್ರಿಂಟರಿಗೆ ಒಪ್ಪಿಸಿಕೊಟ್ಟರೆ ಸಾಕು, ಅದು ಪದರ ಪದರವಾಗಿ ಪ್ಲಾಸ್ಟಿಕ್ಕನ್ನು ಹೊರಸೂಸಿ ನಮ್ಮ ಫೋನಿಗೆ ನಾವು ಕೇಳಿದಂತಹುದೇ ಕವಚವನ್ನು ರೆಡಿಮಾಡಿಕೊಟ್ಟುಬಿಡುತ್ತದೆ!

ಮೊದಲಿಗೆ ಪರಿಚಿತವಾದ ಥ್ರೀಡಿ ಪ್ರಿಂಟರುಗಳಲ್ಲಿ ಕೇವಲ ಒಂದೇ ಬಣ್ಣದ ಪ್ಲಾಸ್ಟಿಕ್ ಬಳಸುವುದು ಸಾಧ್ಯವಿತ್ತು. ಆದರೆ ಇದೀಗ ಸಿದ್ಧವಾಗುತ್ತಿರುವ ಮಾದರಿಗಳಲ್ಲಿ ಬಹುವರ್ಣದ ಸೂಕ್ಷ್ಮ ವಿನ್ಯಾಸಗಳನ್ನೂ ತಯಾರಿಸುವುದು ಸಾಧ್ಯ ಎನ್ನಲಾಗಿದೆ. ಪ್ರಸ್ತುತ ದೊಡ್ಡ ಸಂಸ್ಥೆಗಳಲ್ಲಿ, ಸಂಶೋಧನಾಲಯಗಳಲ್ಲಿ ಅಗತ್ಯ ಮಾದರಿಗಳನ್ನು ತಯಾರಿಸಲಷ್ಟೆ ಬಳಕೆಯಾಗುತ್ತಿರುವ ಥ್ರೀಡಿ ಪ್ರಿಂಟರುಗಳು ಮುಂದಿನ ದಿನಗಳಲ್ಲಿ ಸಾಮಾನ್ಯ ಪ್ರಿಂಟರುಗಳಷ್ಟೇ ವ್ಯಾಪಕವಾಗಿ ಬಳಕೆಗೆ ಬರುವ ನಿರೀಕ್ಷೆಯಿದೆ. ಮುರಿದುಹೋದ ಟೀವಿ ರಿಮೋಟಿಗೆ ಪ್ಲಾಸ್ಟರ್ ಹಚ್ಚಿಡುವ ಬದಲು ಮುರಿದ ಭಾಗಕ್ಕೆ ಬದಲಿಯನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಆಗ ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ಥ್ರೀಡಿ ಬಯೋಪ್ರಿಂಟಿಂಗ್ ಎಂಬ ಸುಧಾರಿತ ತಂತ್ರಜ್ಞಾನ ಬಳಸಿ ಆಹಾರಪದಾರ್ಥಗಳಿಂದ ಕೃತಕ ಅಂಗಾಂಗಗಳವರೆಗೆ ಅದೆಷ್ಟೋ ಬಗೆಯ ಜೈವಿಕ ಪದಾರ್ಥಗಳನ್ನು ಸೃಷ್ಟಿಸುವತ್ತಲೂ ಪ್ರಯತ್ನಗಳು ನಡೆದಿವೆ.

ಜನವರಿ ೨೫, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge