ಬುಧವಾರ, ಜನವರಿ 9, 2013

ಇಂಟರ್‌ನೆಟ್ಟಿನ ಹ್ಯಾಪಿ ಬರ್ತ್‌ಡೇ

ಟಿ. ಜಿ. ಶ್ರೀನಿಧಿ

ಕಳೆದ ಮಂಗಳವಾರ, ಜನವರಿ ೧ರಂದು, ಒಬ್ಬೊಬ್ಬರ ಪ್ರೋಗ್ರಾಮು ಒಂದೊಂದು ಥರಾ ಇತ್ತು. ಕೆಲವರಿಗೆ ರಜೆಯ ಮಜೆ ಇದ್ದರೆ ಇನ್ನು ಕೆಲವರಿಗೆ ಆಫೀಸಿನಲ್ಲಿ ಕುಳಿತಿರುವ ಸಜೆ; ಕೆಲವರು ಕುಡಿದು ಕುಣಿದು ಕುಪ್ಪಳಿಸುತ್ತಿದ್ದರೆ ಇನ್ನು ಕೆಲವರು ಇನ್ನೊಂದು ವರ್ಷ ಅಷ್ಟೇ ತಾನೆ ಎಂದು ಮುಖ ತಿರುಗಿಸಿಕೊಂಡು ಸಾಗಿದ್ದರು. ಪ್ರೋಗ್ರಾಮು ಏನೇ ಇದ್ದರೂ ಹ್ಯಾಪಿ ನ್ಯೂ ಇಯರ್ ಎನ್ನುತ್ತ ಶುಭಕೋರುವುದನ್ನು ಮಾತ್ರ ಬಹುತೇಕ ಯಾರೂ ತಪ್ಪಿಸಿಕೊಂಡಿರಲಿಲ್ಲವೇನೋ. ಹೊಸವರ್ಷದ ಪ್ರತಿಜ್ಞೆಗಳು, ಪಾರ್ಟಿಗಳು, ಟೀವಿ ಪ್ರೋಗ್ರಾಮುಗಳು ಎಲ್ಲೆಲ್ಲೂ ತಮ್ಮ ಪ್ರಭಾವ ತೋರಿಸುತ್ತಿದ್ದವು.

ಇಂಟರ್‌ನೆಟ್ ಪ್ರಪಂಚದಲ್ಲೇನು ಕಡಿಮೆ ಸಂಭ್ರಮ ಇತ್ತೇನು? ವಾರ ಮುಂಚಿನಿಂದಲೇ ಹರಿದಾಡುತ್ತಿದ್ದ ಶುಭಾಶಯದ ಇಮೇಲುಗಳ ಭರಾಟೆ ಜನವರಿ ೧ರ ವೇಳೆಗೆ ಪರಮಾವಧಿ ತಲುಪಿಬಿಟ್ಟಿತ್ತು. ಫೇಸ್‌ಬುಕ್, ಟ್ವಿಟ್ಟರುಗಳಲ್ಲಂತೂ ಎಲ್ಲೆಲ್ಲಿ ನೋಡಿದರೂ ನ್ಯೂ ಇಯರ್ ಸಂದೇಶಗಳೇ. ಆನ್‌ಲೈನ್ ಶಾಪಿಂಗ್ ತಾಣಗಳಲ್ಲೂ ಅಷ್ಟೆ, ಹೊಸವರ್ಷದ ಹ್ಯಾಪಿ ಜನರನ್ನು ತಮ್ಮತ್ತ ಸೆಳೆಯಲು ಸಾಧ್ಯವಾದ ಎಲ್ಲ ಪ್ರಯತ್ನಗಳೂ ಜಾರಿಯಲ್ಲಿದ್ದವು.

ಈ ಇಮೇಲು, ಸೋಶಿಯಲ್ ನೆಟ್‌ವರ್ಕು, ಆನ್‌ಲೈನ್ ಶಾಪಿಂಗುಗಳನ್ನೆಲ್ಲ ಸಾಧ್ಯವಾಗಿಸಿದ ಅಂತರಜಾಲವಿದೆಯಲ್ಲ, ಇಂಟರ್‌ನೆಟ್ಟು, ಅದಕ್ಕೇನಾದರೂ ಭಾವನೆಗಳಿರುವಂತಿದ್ದರೆ ಆ ದಿನ ಇಷ್ಟೆಲ್ಲ ಗಲಾಟೆಯ ನಡುವೆ ಅದಕ್ಕೆ ಕೊಂಚ ಬೇಸರವಾಗಿರುತ್ತಿತ್ತೋ ಏನೋ. ತನಗೆ ಯಾರೂ ಹ್ಯಾಪಿ ನ್ಯೂ ಇಯರ್ ಹೇಳಲಿಲ್ಲ ಅಂತಲ್ಲ, 'ಹ್ಯಾಪಿ ಬರ್ತ್‌ಡೇ' ಅನ್ನಲಿಲ್ಲವಲ್ಲ ಅಂತ!
ಏಕೆಂದರೆ ಕಳೆದ ಜನವರಿ ಒಂದರಂದು ನಮ್ಮೆಲ್ಲರ ನೆಚ್ಚಿನ ಇಂಟರ್‌ನೆಟ್‌ಗೆ ಮೂವತ್ತು ವರ್ಷ ತುಂಬಿತು.

ಅಂತರಜಾಲವೆಂಬ ಈ ಮಾಯಾಜಾಲ, ತಂತ್ರಜ್ಞಾನ ಜಗತ್ತಿನ ಅತ್ಯಂತ ಪ್ರಮುಖ ಕೊಡುಗೆಗಳಲ್ಲೊಂದು. ನಮಗೆ ಈಗ ಪರಿಚಯವಿರುವ ರೂಪದಲ್ಲಿ ಅಂತರಜಾಲದ ಅವತರಣವಾದದ್ದು ೧೯೮೩ರ ಜನವರಿ ೧ರಂದು.

ಆ ದಿನ ಅಂತರಜಾಲದ ಅವತರಣವಾಯಿತು ಎಂದಮಾತ್ರಕ್ಕೆ ಅಲ್ಲಿಯವರೆಗೂ ಕಂಪ್ಯೂಟರ್ ಜಾಲಗಳೇ ಇಲ್ಲದ ನಿರ್ವಾತವಿತ್ತು ಎಂದೇನೂ ಅರ್ಥವಲ್ಲ. ಹಾಗೆ ನೋಡಿದರೆ ಅಂತರಜಾಲದ ಪೂರ್ವಜನೆಂದೇ ಕರೆಸಿಕೊಳ್ಳುವ ಅಡ್ವಾನ್ಸ್‌ಡ್ ರೀಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ ನೆಟ್‌ವರ್ಕ್ ('ಅರ್ಪಾನೆಟ್') ಎಂಬುದೊಂದು ಕಂಪ್ಯೂಟರ್ ಜಾಲ ಅಮೆರಿಕಾದ ರಕ್ಷಣಾ ಇಲಾಖೆಯ ಆಶ್ರಯದಲ್ಲಿ ೧೯೬೦ರ ದಶಕದಿಂದಲೇ ಬೆಳೆದುಬಂದಿತ್ತು.

ಆದರೆ ಅರ್ಪಾನೆಟ್‌ನ ಸ್ವರೂಪ ನಮ್ಮ ಇಂದಿನ ಅಂತರಜಾಲದಂತಿರಲಿಲ್ಲ. ಸರಕಾರಿ ಸಂಸ್ಥೆಗಳ ಜೊತೆಗೆ ಕೆಲವು ಶಿಕ್ಷಣ ಸಂಸ್ಥೆಗಳು ಹಾಗೂ ಸಂಶೋಧನಾಲಯಗಳಲ್ಲಿದ್ದ ಕಂಪ್ಯೂಟರುಗಳನ್ನಷ್ಟೆ ಈ ಜಾಲ ಸಂಪರ್ಕಿಸುತ್ತಿತ್ತು.

ಜಾಲಕ್ಕೆ ಸೇರುತ್ತಿದ್ದ ಕಂಪ್ಯೂಟರುಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಅದರ ನಿರ್ವಾಹಕರಿಗೆ ಒಂದು ತೊಂದರೆ ಗೋಚರಿಸಲು ಶುರುವಾಯಿತು. ಆಗ ಅಸ್ತಿತ್ವದಲ್ಲಿದ್ದ ಬೇರೆಬೇರೆ ಜಾಲಗಳು ಮಾಹಿತಿ ಸಂವಹನಕ್ಕಾಗಿ ತಮಗಿಷ್ಟಬಂದ ಶಿಷ್ಟತೆಯನ್ನು (ಪ್ರೋಟೋಕಾಲ್) ಬಳಸುತ್ತಿದ್ದವು; ಹೀಗಾಗಿ ಅವುಗಳ ನಡುವೆ ಸುಲಭ ಸಂವಹನ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಎಲ್ಲ ಜಾಲಗಳೂ ಮಾಹಿತಿ ಸಂವಹನಕ್ಕಾಗಿ ಒಂದೇ ಪ್ರೋಟೋಕಾಲ್ ಬಳಸುವಂತೆ ಮಾಡುವ ಹಾಗೂ ಎಲ್ಲರೂ ಬಳಸಬಲ್ಲ ಅಂತಹುದೊಂದು ಹೊಸ ಶಿಷ್ಟತೆಯನ್ನು ರೂಪಿಸಬೇಕಾದ ಅಗತ್ಯ ಕಂಡುಬಂತು.

ಈ ಸವಾಲನ್ನು ಸ್ವೀಕರಿಸಿ ಅದಕ್ಕೊಂದು ಪರಿಹಾರ ಒದಗಿಸಿಕೊಟ್ಟವರು ವಿಂಟನ್ ಗ್ರೇ (ವಿಂಟ್) ಸರ್ಫ್ ಹಾಗೂ ರಾಬರ್ಟ್ ಕಾನ್ ಎಂಬ ಇಬ್ಬರು ಕಂಪ್ಯೂಟರ್ ತಜ್ಞರು. ಅವರು ರೂಪಿಸಿದ ಹೊಸ ಶಿಷ್ಟತೆಯ ಹೆಸರೇ ಟಿಸಿಪಿ, ಅಂದರೆ ಟ್ರಾನ್ಸ್‌ಮಿಶನ್ ಕಂಟ್ರೋಲ್ ಪ್ರೋಟೋಕಾಲ್. ತಮ್ಮ ಈ ಸೃಷ್ಟಿಯನ್ನು ೧೯೭೪ರಲ್ಲಿ ಜಗತ್ತಿಗೆ ಪರಿಚಯಿಸಿದ ಅವರು ನಂತರದ ದಿನಗಳಲ್ಲಿ ಟಿಸಿಪಿಯನ್ನು ಎರಡು ಭಾಗಗಳಾಗಿ ವಿಭಜಿಸಿ ಇಂಟರ್‌ನೆಟ್ ಪ್ರೋಟೋಕಾಲ್ (ಐಪಿ) ಎಂಬ ಹೊಸ ಶಿಷ್ಟತೆಯನ್ನೂ ಪರಿಚಯಿಸಿದರು. ಟಿಸಿಪಿ ಹಾಗೂ ಐಪಿ - ಎರಡೂ ಸೇರಿದ ಹೊಸ ಶಿಷ್ಟತೆ 'ಟಿಸಿಪಿ/ಐಪಿ' ಎಂಬ ಹೆಸರಿನಲ್ಲಿ ಇಂದಿನ ಅಂತರಜಾಲದ ಜೀವಾಳವಾಗಿ ಬೆಳೆಯಿತು.

ಹಲವು ಸುತ್ತಿನ ಪರೀಕ್ಷೆಗಳಲ್ಲಿ ಟಿಸಿಪಿ/ಐಪಿಯ ಸಮರ್ಪಕ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಂಡ ನಂತರ ೧೯೮೦ರ ದಶಕದ ಪ್ರಾರಂಭದಲ್ಲಿ ಅರ್ಪಾನೆಟ್‌ನ ಎಲ್ಲ ಅಂಗಗಳೂ ಈ ಹೊಸ ಶಿಷ್ಟತೆಗೆ ಬದಲಾಗಬೇಕು ಎನ್ನುವ ತೀರ್ಮಾನಕ್ಕೆ ಬರಲಾಯಿತು.

ಈ ಬದಲಾವಣೆಯ ಸಂಪೂರ್ಣ ಯೋಜನೆಯನ್ನು ರೂಪಿಸಿದ್ದು ಜಾನ್ ಪೋಸ್ಟೆಲ್ ಎಂಬ ಇನ್ನೊಬ್ಬ ತಂತ್ರಜ್ಞ. ಅವರ ಯೋಜನೆಯಂತೆ ಟಿಸಿಪಿ/ಐಪಿ ಶಿಷ್ಟತೆಯನ್ನು ಅಳವಡಿಸಿಕೊಳ್ಳಲು ಜನವರಿ ೧, ೧೯೮೩ರ ಗಡುವನ್ನು ನಿಗದಿಪಡಿಸಲಾಯಿತು. ಆ ಗಡುವಿನೊಳಗೆ ಬದಲಾವಣೆ ಮಾಡಿಕೊಳ್ಳದವರನ್ನು ನಿರ್ದಾಕ್ಷಿಣ್ಯವಾಗಿ ಅರ್ಪಾನೆಟ್‌ನಿಂದ ಹೊರಹಾಕುವ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಆ ದಿನ ಹತ್ತಿರ ಬಂದಂತೆ ಎಲ್ಲರಲ್ಲೂ ಹೊಸತೇನನ್ನೋ ಸಾಧಿಸುತ್ತಿರುವ ಜೋಶ್‌ಗಿಂತ ಹೆಚ್ಚಾಗಿ ಒಮ್ಮೆ ಈ ಕಾಟ ಕಳೆದರೆ ಸಾಕಪ್ಪ ಎನ್ನುವ ಭಾವನೆಯೇ ಇತ್ತು ಎಂದು ವಿಂಟ್ ಸರ್ಫ್ ನೆನಪಿಸಿಕೊಳ್ಳುತ್ತಾರೆ. ಹಾಗಾಗಿ ಆ ದಿನ ಸಂಭ್ರಮಾಚರಣೆಯಿರಲಿ, ಒಂದು ಛಾಯಾಚಿತ್ರವನ್ನೂ ಕ್ಲಿಕ್ಕಿಸಲಾದ ನೆನಪು ಅವರಿಗಿಲ್ಲ.

ಆದರೆ ಆ ದಿನದ ಮಹತ್ವವೇನೂ ಕಡಿಮೆಯದಲ್ಲ. ಅಂದಿನ ಅರ್ಪಾನೆಟ್ ಜಾಲ ಹೊಸ ಶಿಷ್ಟತೆಗೆ ಬದಲಾದ ಆ ದಿನದ ನಂತರ ಆ ಜಾಲದ ಹರವು ಹೆಚ್ಚುತ್ತಲೇ ಹೋಯಿತು. ಮೊದಲಿಗೆ ಸೀಮಿತ ಸಂಖ್ಯೆಯ ಕಂಪ್ಯೂಟರುಗಳನ್ನಷ್ಟೆ ಸಂಪರ್ಕಿಸುತ್ತಿದ್ದ ಜಾಲ ಮುಂದೆ ಅಸಂಖ್ಯ ಕಂಪ್ಯೂಟರುಗಳನ್ನು, ಕಂಪ್ಯೂಟರ್ ಜಾಲಗಳನ್ನು ಒಂದಾಗಿ ಬೆಸೆಯಿತು. ಈ ಬೃಹತ್ ಜಾಲಕ್ಕೂ ಟಿಸಿಪಿ/ಐಪಿ ಶಿಷ್ಟತೆಯೇ ಬೆನ್ನೆಲುಬಾಗಿ ನಿಂತು ನಮ್ಮ ಇಂದಿನ ಅಂತರಜಾಲವನ್ನು ರೂಪಿಸಿತು!

ಅಂತರಜಾಲವನ್ನು ಯಾರೋ ಯಾವುದೋ ಕಾರ್ಯಕ್ರಮದಲ್ಲಿ ಟೇಪು ಕತ್ತರಿಸಿ ಉದ್ಘಾಟಿಸಿರಲಿಲ್ಲ ನಿಜ, ಆದರೆ ಇಂಟರ್‌ನೆಟ್ ಇತಿಹಾಸದಲ್ಲಿ ೧೯೮೩ ಜನವರಿ ೧ರ ಆ ದಿನಕ್ಕೆ ಬಹಳ ಪ್ರಾಮುಖ್ಯವಿದೆ ಎನ್ನುವುದು ನಿರ್ವಿವಾದ. ಆ ದಿನವನ್ನು ಇಂಟರ್‌ನೆಟ್ಟಿನ ಹ್ಯಾಪಿ ಬರ್ತ್‌ಡೇ ಎಂದು ಕರೆದದ್ದು ಅದೇ ಕಾರಣಕ್ಕಾಗಿ.

ಹೊಸ ಶಿಷ್ಟತೆಯ ಬಗ್ಗೆ ಯೋಚಿಸಿದ ವಿಂಟ್ ಸರ್ಫ್‌ ಅವರಿಗೆ ಅದರ ಯಶಸ್ಸಿನ ಬಗ್ಗೆ ನಂಬಿಕೆಯಿದ್ದರೂ ಮುಂದಿನ ಮೂರು ದಶಕಗಳಲ್ಲೇ ಅಂತರಜಾಲ ಎಲ್ಲರ ಬದುಕನ್ನೂ ಆವರಿಸಿಕೊಳ್ಳುವಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿದೆ ಎಂದು ಊಹಿಸಿಕೊಳ್ಳಲೂ ಆಗಿರಲಿಲ್ಲವಂತೆ.

ಆದರೆ ಅವರಿಗೇ ಆಶ್ಚರ್ಯವಾಗುವ ಮಟ್ಟಕ್ಕೆ ಬೆಳೆದುನಿಂತ ಅಂತರಜಾಲ ಅನೇಕ ಅದ್ಭುತಗಳನ್ನು ಸಾಧ್ಯವಾಗಿಸಿತು. ೧೯೮೩ರ ನಂತರದ ಒಂದು ದಶಕದಲ್ಲಿ ರೂಪುಗೊಂಡ ವಿಶ್ವವ್ಯಾಪಿ ಜಾಲವಂತೂ (ವರ್ಲ್ಡ್‌ವೈಡ್ ವೆಬ್) ಪ್ರಪಂಚವನ್ನು ಮಾಹಿತಿಯ ಪ್ರವಾಹದಲ್ಲಿ ಮುಳುಗಿಸಿಬಿಟ್ಟಿತು.

ಇಂತಹ ದೊಡ್ಡದೊಡ್ಡ ಸಾಧನೆಗಳಷ್ಟೇ ಅಲ್ಲ, ಸಣ್ಣಪುಟ್ಟ ಸಂಗತಿಗಳು ಕೂಡ ಇಂಟರ್‌ನೆಟ್‌ನ ಬೆನ್ನೇರಿ ನಮ್ಮ ಬದುಕಿನ ಮೇಲೆ ದೊಡ್ಡ ಛಾಪನ್ನೇ ಮೂಡಿಸಿದವು; ಅಮೆರಿಕಾದ ವಿಶ್ವವಿದ್ಯಾನಿಲಯವೊಂದರಲ್ಲಿ ಬೆಚ್ಚಗೆ ಕುಳಿತಿದ್ದ ಕಾಫಿ ಯಂತ್ರವೂ ಸಂವಹನದ ಭವಿಷ್ಯದ ಮೇಲೆ ಪ್ರಭಾವ ಬೀರುವುದು ಜಾಲಗಳ ಈ ಮಾಯಾಜಾಲದಿಂದಾಗಿ ಸಾಧ್ಯವಾಯಿತು.

ಸಾಮಾನ್ಯ ಕಾಫಿ ಯಂತ್ರವೊಂದು ತಂತ್ರಜ್ಞಾನ ಕ್ಷೇತ್ರಕ್ಕೆ ಅಸಾಮಾನ್ಯ ಕೊಡುಗೆ ನೀಡಿದ ಈ ಕತೆಯನ್ನು ಮುಂದಿನವಾರ ನೋಡೋಣ.

ಜನವರಿ ೮, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge