ಮಂಗಳವಾರ, ಜನವರಿ 22, 2013

5S ಮತ್ತು ಕಂಪ್ಯೂಟರ್


ಟಿ. ಜಿ. ಶ್ರೀನಿಧಿ

ಮಾಡುವ ಕೆಲಸ ಯಾವುದೇ ಆದರೂ ಅದು ಅಚ್ಚುಕಟ್ಟಾಗಿರಬೇಕು ಎನ್ನುವ ಮನೋಭಾವ ನಮ್ಮಲ್ಲಿ ಅನೇಕರಿಗಿರುತ್ತದೆ. ಮನೆಯ ಕೆಲಸವಾದರೂ ಸರಿ, ಕಚೇರಿಯ ಕೆಲಸವಾದರೂ ಸರಿ, ಕೆಲಸ ಶಿಸ್ತುಬದ್ಧವಾಗಿ ಸಾಗಬೇಕು; ನೋಡಿದವರು ಮೆಚ್ಚಿ ವಾಹ್ ಎನ್ನುವಂತಿರಬೇಕು ಎನ್ನುವ ಹಂಬಲವೂ ಅಪರೂಪವೇನಲ್ಲ ಬಿಡಿ.

ಬಳಸುವ ವಸ್ತುಗಳನ್ನೆಲ್ಲ ವ್ಯವಸ್ಥಿತವಾಗಿ ಇಟ್ಟಿರುವುದು, ಎಲ್ಲಿ ನೋಡಿದರೂ ಒಪ್ಪ-ಓರಣದ ಜೋಡಣೆ, ಒಟ್ಟಾರೆಯಾಗಿ ಅಚ್ಚುಕಟ್ಟಿನ ಕೆಲಸ - ಇವೆಲ್ಲದರ ಉಪಯೋಗ ಬೇರೆಯವರಿಂದ ಹೊಗಳಿಕೆ ಗಿಟ್ಟಿಸಿಕೊಳ್ಳುವುದಷ್ಟೇ ಅಲ್ಲ. ಕೆಲಸದಲ್ಲೊಂದು ಶಿಸ್ತನ್ನು ರೂಢಿಸಿಕೊಂಡಾಗ ಮಾಡುವ ಕೆಲಸ ಸರಿಯಾದ ಫಲಿತಾಂಶಗಳನ್ನೇ ಕೊಟ್ಟು ನಮ್ಮ ಬದುಕಿನ ಮೇಲೂ ಒಳ್ಳೆಯ ಪರಿಣಾಮವನ್ನೇ ಬೀರುತ್ತದೆ. ಅಷ್ಟೇ ಅಲ್ಲ, ಅವ್ಯವಸ್ಥೆಯ ಕಿರಿಕಿರಿಯಿಲ್ಲದೆ ಕೆಲಸವೆಲ್ಲ ಬೇಗನೆ ಮುಗಿದೂಹೋಗುತ್ತದೆ.

ವೈಯಕ್ತಿಕ ಬದುಕಿಗಷ್ಟೇ ಅಲ್ಲ, ಈ ನಿಯಮ ನಮ್ಮ ಉದ್ಯೋಗಗಳಿಗೂ ಅನ್ವಯಿಸುತ್ತದೆ. ಕಚೇರಿಯಿಂದ ಕಾರ್ಖಾನೆಯವರೆಗೆ ಎಲ್ಲ ಪರಿಸರಗಳಲ್ಲೂ ಅಚ್ಚುಕಟ್ಟಾದ ವ್ಯವಸ್ಥೆಗೆ ತನ್ನದೇ ಆದ ಮಹತ್ವವಿದೆ. ಕಚೇರಿಯ ಫೈಲುಗಳಿರಬಹುದು ಅಥವಾ ಕಾರ್ಖಾನೆಯ ಉಪಕರಣಗಳಿರಬಹುದು - ಬೇಕಾದ ವಸ್ತು ಬೇಕಾದಾಗ ಸಿಗುವಂತಿದ್ದರೆ, ಅದಕ್ಕಾಗಿ ಹುಡುಕುತ್ತ ಅನಗತ್ಯ ವಸ್ತುಗಳ ರಾಶಿಯನ್ನೇ ದಾಟಬೇಕಾದ ಅಗತ್ಯ ಇಲ್ಲದಿದ್ದರೆ ಕೆಲಸ ಬೇಗ ಮುಗಿಯುತ್ತದೆ, ಒಟ್ಟಾರೆ ಉತ್ಪಾದಕತೆ ಹೆಚ್ಚುತ್ತದೆ.

ಈ ಸರಳ ಪರಿಕಲ್ಪನೆಯನ್ನೇ ಆಧರಿಸಿ ಜಪಾನಿನ ಕೆಲ ತಜ್ಞರು ಅನೇಕ ವರ್ಷಗಳ ಹಿಂದೆ ಫೈವ್ ಎಸ್ ಎನ್ನುವ ಮೆಥಡಾಲಜಿ, ಅಂದರೆ ಕ್ರಮಾನುಸರಣೆಯನ್ನು ಜಾರಿಗೆ ತಂದರು. ಕೆಲಸದ ಸ್ಥಳವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಿಕೊಳ್ಳುವ ಮೂಲಕ ನಮ್ಮ ಕೆಲಸ ಹೆಚ್ಚು ಪರಿಣಾಮಕಾರಿಯಾಗಿರುವಂತೆ ನೋಡಿಕೊಳ್ಳಬಹುದು ಎನ್ನುವುದು ಈ ಕ್ರಮಾನುಸರಣೆಯ ಹಿಂದಿನ ಉದ್ದೇಶ.

ಮೂಲತಃ ಫೈವ್ ಎಸ್ ಎನ್ನುವುದು 'ಎಸ್' ಅಕ್ಷರದಿಂದ ಪ್ರಾರಂಭವಾಗುವ ಐದು ಜಪಾನೀ ಭಾಷೆಯ ಪದಗಳನ್ನು ಸೂಚಿಸುತ್ತದೆ. Seiri, Seiton, Seiso, Seiketsu ಹಾಗೂ Shitsuke ಎಂಬ ಈ ಪದಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದರೆ ದೊರಕುವ Sort, Set In Order, Shine, Standardize ಹಾಗೂ Sustain ಕೂಡ ಎಸ್ ಅಕ್ಷರದಿಂದಲೇ ಪ್ರಾರಂಭವಾಗುವುದು ವಿಶೇಷ.

ಈ ಕ್ರಮಾನುಸರಣೆ ಮೊದಲು ಜಾರಿಗೆ ಬಂದದ್ದು ಉತ್ಪಾದನಾ ಕ್ಷೇತ್ರದಲ್ಲಿ. ಕಾರ್ಖಾನೆಯ ಉದಾಹರಣೆಯನ್ನೇ ತೆಗೆದುಕೊಂಡರೆ ಅಲ್ಲಿನ ಕೆಲಸಕ್ಕೆ ಬೇಕಾದ ವಸ್ತುಗಳನ್ನು ವ್ಯವಸ್ಥಿತವಾಗಿಡುವ ಮೂಲಕ ಕಾರ್ಯದಕ್ಷತೆಯನ್ನು ಹಾಗೂ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದು 'ಫೈವ್ ಎಸ್'ನ ಮೂಲತತ್ತ್ವ.

'ಫೈವ್ ಎಸ್' ಎಷ್ಟು ಪರಿಣಾಮಕಾರಿ ಎಂದು ಮನವರಿಕೆಯಾಗುತ್ತಿದ್ದಂತೆ ಕಾರ್ಖಾನೆಗಳಿಂದ ಹೊರಗೂ ಆ ಕ್ರಮಾನುಸರಣೆಯ ಬಳಕೆ ಪ್ರಾರಂಭವಾಯಿತು. ಈಗಾಗಲೇ ಹೇಳಿದಂತೆ ಕಚೇರಿಗಳಲ್ಲೂ ಫೈವ್ ಎಸ್ ಬಹಳ ಪರಿಣಾಮಕಾರಿ ಎನ್ನುವುದು ಬಹುಬೇಗನೆ ಸಾಬೀತಾಯಿತು.

ಕೆಲಸದಲ್ಲಿ ಅಚ್ಚುಕಟ್ಟುತನವನ್ನು ಸುಲಭವಾಗಿ ಅಳವಡಿಸಿಕೊಳ್ಳಲು ಸಹಾಯಮಾಡುವ ಈ ಕ್ರಮಾನುಸರಣೆಯನ್ನು ನಮ್ಮ ಕಂಪ್ಯೂಟರುಗಳಿಗೂ ಅನ್ವಯಿಸಿಕೊಳ್ಳಬಹುದು. ಮಾಹಿತಿಯ ಸಂಗ್ರಹಣೆಯಾಗಲಿ, ಬೇಕಾದಾಗ ಬೇಕಾದ ಮಾಹಿತಿಯನ್ನು ಸುಲಭವಾಗಿ ಹುಡುಕಿಕೊಳ್ಳುವುದಾಗಲಿ, ಅಲ್ಲೆಲ್ಲ ಫೈವ್ ಎಸ್ ನಮಗೆ ನೆರವಾಗುತ್ತದೆ.

'ಫೈವ್ ಎಸ್‌'ನ ಐದು ಎಸ್‌ಗಳು ನಮ್ಮ ಕಂಪ್ಯೂಟರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಹೇಗೆ ನೆರವಾಗಬಲ್ಲವು? ಈ ನಿಟ್ಟಿನತ್ತ ಒಂದು ನೋಟ ಇಲ್ಲಿದೆ.

ವಿಂಗಡಣೆ (ಸಾರ್ಟ್): ಕಂಪ್ಯೂಟರಿನಲ್ಲಿ ಅಪಾರ ಪ್ರಮಾಣದ ಮಾಹಿತಿ ಸಂಗ್ರಹಿಸುವುದು ಸಾಧ್ಯ ಎನ್ನುವುದು ನಮಗೆ ಗೊತ್ತೇ ಇದೆ. ಕೆಲವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದಾಗ ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್ ಮುಂತಾದವುಗಳ ಬೆಲೆಯೂ ಬಹಳ ಕಡಿಮೆಯಾಗಿದೆ; ಹಾಗಾಗಿ ನಾವು ಸಂಗ್ರಹಿಸಿಡುವ ಮಾಹಿತಿಯ ಪ್ರಮಾಣವೂ ತೀವ್ರವಾಗಿ ಹೆಚ್ಚಿದೆ. ಆದರೆ ಇಷ್ಟೆಲ್ಲ ಮಾಹಿತಿಯನ್ನು ವ್ಯವಸ್ಥಿತವಾಗಿ ಉಳಿಸಿಡುತ್ತಿದ್ದೇವೆಯೇ ಎಂದು ನೋಡಿದರೆ ಅದಕ್ಕೆ ಇಲ್ಲ ಎಂದೇ ಉತ್ತರಿಸಬೇಕಾಗುತ್ತದೆ. ಬೇಕಾದ ಬೇಡದ ಎಲ್ಲ ಕಡತಗಳೂ ನಮ್ಮ ಕಂಪ್ಯೂಟರಿನ ತುಂಬ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ, ಇಮೇಲ್ ಅಂಚೆಪೆಟ್ಟಿಗೆ ತುಂಬಿ ತುಳುಕುತ್ತಿರುತ್ತದೆ. ನಮ್ಮ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಆಗುವ ಬಗೆಬಗೆಯ ಸಾಫ್ಟ್‌ವೇರುಗಳ ಸಂಖ್ಯೆಯೂ ಸಣ್ಣದೇನಲ್ಲ.

ಇಷ್ಟೆಲ್ಲ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ ಅಗತ್ಯಕ್ಕೆ ತಕ್ಕಂತೆ ವಿಂಗಡಿಸಿಕೊಳ್ಳುವುದು ಫೈವ್ ಎಸ್‌ನ ಮೊದಲ ಹೆಜ್ಜೆ. ನಾವು ಉಪಯೋಗಿಸದ ತಂತ್ರಾಂಶಗಳನ್ನು ತೆಗೆದುಹಾಕುವ ಮೂಲಕ ಈ ಕೆಲಸವನ್ನು ಶುರುಮಾಡಬಹುದು. ಅಗತ್ಯವಿಲ್ಲದ ಕಡತಗಳನ್ನು ಅಳಿಸಿಹಾಕುವ ಅಥವಾ ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್, ಸಿಡಿ, ಡಿವಿಡಿ ಮುಂತಾದ ಬಾಹ್ಯ ಶೇಖರಣಾ ಮಾಧ್ಯಮಗಳಿಗೆ ವರ್ಗಾಯಿಸುವ ಮೂಲಕವೂ ನಮ್ಮ ಕಂಪ್ಯೂಟರನ್ನು ಕಸದ ಸಮಸ್ಯೆಯಿಂದ ಪಾರುಮಾಡಬಹುದು.

ವ್ಯವಸ್ಥಿತ ಜೋಡಣೆ (ಸೆಟ್ ಇನ್ ಆರ್ಡರ್): ಅನಗತ್ಯ ಕಡತಗಳನ್ನು ನಿವಾರಿಸಿಕೊಂಡಮೇಲೆ ಮಿಕ್ಕ ಮಾಹಿತಿಯನ್ನು ವ್ಯವಸ್ಥಿತವಾಗಿ ಜೋಡಿಸಿಡುವುದು ಫೈವ್ ಎಸ್‌ನ ಇನ್ನೊಂದು ಹೆಜ್ಜೆ. ಮೊದಲಿಗೆ ಕಡತಗಳ, ಫೋಲ್ಡರುಗಳ ಹೆಸರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ನಮ್ಮ ಕಂಪ್ಯೂಟರನ್ನೇ ನೋಡಿದರೆ ಅದೆಷ್ಟು ಕಡತಗಳನ್ನು ನಾವು ಅಸ್ಪಷ್ಟ ಹೆಸರುಗಳೊಡನೆ ಉಳಿಸಿಡುತ್ತಿದ್ದೇವೆ ಎನ್ನುವುದು ಗೊತ್ತಾಗುತ್ತದೆ. ಇನ್ನು ಅದೆಷ್ಟು ನ್ಯೂ ಫೋಲ್ಡರುಗಳಿವೆಯೋ ಅದರ ಲೆಕ್ಕವೇ ಸಿಗಲಿಕ್ಕಿಲ್ಲ!

ಈ ಅಭ್ಯಾಸವನ್ನು ತಪ್ಪಿಸಿ ಪ್ರತಿ ಕಡತವನ್ನೂ ಸೂಕ್ತವಾದ ಹೆಸರಿನೊಡನೆ ಉಳಿಸಿಡುವುದು ಹಾಗೂ ಸಂಬಂಧಿತ ಕಡತಗಳನ್ನೆಲ್ಲ ನಿರ್ದಿಷ್ಟ ಫೋಲ್ಡರುಗಳಲ್ಲೇ ಶೇಖರಿಸುವುದರ ಮೂಲಕ ನಮಗೆ ಬೇಕಾದ ಮಾಹಿತಿಯನ್ನು ಬೇಕಾದ ಕ್ಷಣದಲ್ಲೇ ಹುಡುಕಿಕೊಳ್ಳುವುದನ್ನು ಸಾಧ್ಯವಾಗಿಸಬಹುದು. ತಂತ್ರಾಂಶಗಳಿಗೂ ಇದೇ ಸೂತ್ರವನ್ನು ಅನ್ವಯಿಸಿ ಡೆಸ್ಕ್‌ಟಾಪಿನ ಮೇಲೆ ಹಾಗೂ ಸ್ಟಾರ್ಟ್ ಮೆನುವಿನಲ್ಲಿರುವ ಐಕನ್‌ಗಳನ್ನೂ ಹೀಗೆಯೇ ವ್ಯವಸ್ಥಿತವಾಗಿ ಜೋಡಿಸಿಕೊಳ್ಳಬಹುದು. ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಲೆಂದೇ ನಿರ್ದಿಷ್ಟ ಫೋಲ್ಡರುಗಳನ್ನು ಮೀಸಲಿಡುವುದು ಕೂಡ ಒಳ್ಳೆಯ ಅಭ್ಯಾಸ.

ಹೊಳಪು ನೀಡುವಿಕೆ (ಶೈನ್): ವ್ಯವಸ್ಥಿತ ಜೋಡಣೆಯ ನಂತರ ಬರುವುದು ಕಂಪ್ಯೂಟರಿನ ಸ್ವಚ್ಛತೆಯ ಪ್ರಶ್ನೆ. ಅಂದಹಾಗೆ ಸ್ವಚ್ಛತೆಯೆನ್ನುವುದು ಇಲ್ಲಿ ಎರಡು ಅರ್ಥಗಳಲ್ಲಿ ಬಳಕೆಯಾಗುತ್ತದೆ - ಕಂಪ್ಯೂಟರಿನ ಭಾಗಗಳ ಸ್ವಚ್ಛತೆ ಇದರಲ್ಲಿ ಮೊದಲನೆಯದು. ಮಾನಿಟರ್ ಮೇಲೆ ಧೂಳು ಕೂತು ಕಣ್ಣಿಗೆ ಕಿರಿಕಿರಿಮಾಡದಂತೆ, ಕೂಲಿಂಗ್ ಫ್ಯಾನಿಗೆ ಕಸ ಸಿಕ್ಕಿಕೊಂಡು ಒಳಗಿನ ಭಾಗಗಳು ಮಿತಿಮೀರಿ ಬಿಸಿಯಾಗದಂತೆ, ಕೀಬೋರ್ಡ್ ಮೇಲೆ ಕಾಫಿ ಚೆಲ್ಲದಂತೆಲ್ಲ ನೋಡಿಕೊಳ್ಳುವುದು ಈ ಭಾಗಕ್ಕೆ ಸೇರುತ್ತದೆ.

ಬಾಹ್ಯ ಸ್ವಚ್ಛತೆಯ ಜೊತೆಗೆ ಕಂಪ್ಯೂಟರಿನೊಳಗೆ ಶೇಖರವಾಗುವ ಮಾಹಿತಿಯನ್ನೂ ಕಸಮುಕ್ತವಾಗಿಟ್ಟುಕೊಳ್ಳುವುದು ಇನ್ನೊಂದು ಭಾಗ. ಹಾರ್ಡ್ ಡಿಸ್ಕ್‌ನಲ್ಲಿ ಅನಗತ್ಯ ಕಡತಗಳು ಮಿತಿಮೀರಿ ತುಂಬಿಕೊಳ್ಳದಂತೆ ನೋಡಿಕೊಳ್ಳುವ ಮೂಲಕ ಕಂಪ್ಯೂಟರಿನ ಕಾರ್ಯಕ್ಷಮತೆ ಕಡಿಮೆಯಾಗುವುದನ್ನು ತಪ್ಪಿಸಬಹುದು.

ಪ್ರಮಾಣೀಕರಣ (ಸ್ಟಾಂಡರ್ಡೈಸ್): ಮೊದಲ ಮೂರು ಎಸ್‌ಗಳನ್ನು ಗಮನಿಸಿಕೊಂಡಾದ ಮೇಲೆ ಅವುಗಳ ಅನುಸರಣೆ ತಪ್ಪದಂತೆ ಕ್ರಮತೆಗೆದುಕೊಳ್ಳುವುದು ನಾಲ್ಕನೇ ಎಸ್, ಅಂದರೆ 'ಸ್ಟಾಂಡರ್ಡೈಸ್'ನ ಆಶಯ.

ಕಂಪ್ಯೂಟರಿನ ಕಡತಗಳನ್ನು ನಿರ್ದಿಷ್ಟ ಅವಧಿಗೊಮ್ಮೆ ಬ್ಯಾಕಪ್ ಮಾಡಿಡುವುದು, ಅನಗತ್ಯ ಕಡತಗಳನ್ನು ಆಗಿಂದಾಗ್ಗೆ ಅಳಿಸಿಹಾಕುವುದು, ಆಂಟಿವೈರಸ್ ತಂತ್ರಾಂಶವನ್ನು ಅಪ್‌ಡೇಟ್ ಮಾಡುತ್ತಿರುವುದು, ಕಡತಗಳಿಗೆ-ಫೋಲ್ಡರುಗಳಿಗೆ ಹೆಸರಿಡಲು ನಿರ್ದಿಷ್ಟ ನಿಯಮಗಳನ್ನು ರೂಪಿಸಿಕೊಳ್ಳುವುದು ಮುಂತಾದ ಕೆಲಸಗಳೆಲ್ಲ 'ಸ್ಟಾಂಡರ್ಡೈಸ್'ನ ವ್ಯಾಪ್ತಿಗೆ ಬರುತ್ತದೆ. ಕಂಪ್ಯೂಟರ್ ಕೆಟ್ಟಾಗಲಷ್ಟೆ ಅದರ ನಿರ್ವಹಣೆಯತ್ತ ಗಮನಹರಿಸುವ ಬದಲಿಗೆ ಅದು ಯಾವಾಗಲೂ ಚೆನ್ನಾಗಿ ಕೆಲಸಮಾಡುತ್ತಿರುವಂತೆ ನೋಡಿಕೊಳ್ಳುವುದೇ ಒಳ್ಳೆಯದು ಎಂದು ಫೈವ್ ಎಸ್‌ನ ಈ ಹಂತ ಹೇಳುತ್ತದೆ.

ಮುಂದುವರಿಕೆ (ಸಸ್ಟೈನ್): ಸಾರ್ಟ್, ಸೆಟ್ ಇನ್ ಆರ್ಡರ್, ಶೈನ್, ಸ್ಟಾಂಡರ್ಡೈಸ್ - ಇದಿಷ್ಟೂ ಆದಮೇಲೆ ಸುಮ್ಮನಾಗಿಬಿಟ್ಟರೆ ಮಾಡಿದ ಕೆಲಸವೆಲ್ಲ ವ್ಯರ್ಥವಾಗುತ್ತದಲ್ಲ! ಹಾಗಾಗದಂತೆ ನೋಡಿಕೊಳ್ಳುವುದು, ಹಾಗೂ ಮೊದಲ ನಾಲ್ಕು ಹಂತಗಳಲ್ಲಿ ಮಾಡಿದ ಕೆಲಸಗಳನ್ನು ಸತತವಾಗಿ ಮುಂದುವರೆಸಿಕೊಂಡು ಹೋಗುವುದು 'ಸಸ್ಟೈನ್'ನ ಆಶಯ. ನಮಗೆ ನಾವೇ ವಿಧಿಸಿಕೊಂಡ ನಿಯಮಗಳನ್ನೆಲ್ಲ ಸರಿಯಾಗಿ ಪಾಲಿಸುತ್ತಿದ್ದೇವೆಯೋ ಇಲ್ಲವೋ ಎಂದು ಆಗಿಂದಾಗ್ಗೆ ನೋಡಿಕೊಳ್ಳುತ್ತಿರಿ ಎಂದು ಈ ಹಂತ ಹೇಳುತ್ತದೆ. ಇದು ಸಾಧ್ಯವಾದಾಗ ಮಾತ್ರ ಫೈವ್ ಎಸ್‌ನ ಪರಿಕಲ್ಪನೆ ಸಮರ್ಪಕ ಫಲಿತಾಂಶಗಳನ್ನು ತಂದುಕೊಡಲು ಸಾಧ್ಯವಾಗುತ್ತದೆ.

ಜನವರಿ ೨೨, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge