ಮಂಗಳವಾರ, ಫೆಬ್ರವರಿ 5, 2013

ಪುಟ್ಟ ಮಗು ಕೊಟ್ಟ ದೊಡ್ಡ ಐಡಿಯಾ


ಟಿ. ಜಿ. ಶ್ರೀನಿಧಿ

ಪ್ರವಾಸಕ್ಕೆಂದು ಬೇರೆ ಊರಿಗೆ ಹೊರಟಾಗ ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ ಬಂದುಬಿಟ್ಟಿರುತ್ತದೆ. ಹಾಗಾಗಿಯೇ ಇತರ ದಿನಗಳಲ್ಲಿ ಎಂಟುಗಂಟೆಗೆ ಏಳುವಾಗಲೂ ಎಂಟುಬಾರಿ ಎಬ್ಬಿಸಿಕೊಳ್ಳುವ ಮಕ್ಕಳು ಪ್ರವಾಸ ಹೋಗಬೇಕು ಎನ್ನುವ ದಿನಗಳಲ್ಲಿ ಎಲ್ಲರಿಗಿಂತ ಮುಂಚೆ ಎದ್ದು ಕುಳಿತಿರುತ್ತಾರೆ. ಅವರ ಆತುರ ಅಷ್ಟಕ್ಕೇ ಮುಗಿಯುವುದಿಲ್ಲ. ಪ್ರಯಾಣದ ಸಂದರ್ಭದಲ್ಲಿ ಗಳಿಗೆಗೊಮ್ಮೆ "ನಾವು ಹೋಗಬೇಕಾದ ಜಾಗ ಬಂತಾ?", "ಇನ್ನೂ ಎಷ್ಟು ಹೊತ್ತು" ಎನ್ನುವಂತಹ ಪ್ರಶ್ನೆಗಳನ್ನೆಲ್ಲ ಕೇಳುತ್ತಲೇ ಇರುತ್ತಾರೆ. ಇಂತಹ ಅದಮ್ಯ ಕುತೂಹಲದ ಮಗುವೊಂದರ ಕತೆಯೇ ಇದು.

* * *

ಕೆಲವು ದಶಕಗಳ ಹಿಂದಿನ ಮಾತು. ಅಮೆರಿಕಾದ ಎಡ್ವಿನ್ ಲ್ಯಾಂಡ್ ತನ್ನ ಮೂರು ವರ್ಷದ ಮಗಳೊಂದಿಗೆ ಪ್ರವಾಸ ಹೊರಟಿದ್ದ ಸಂದರ್ಭ. ಪ್ರವಾಸದ ಸಂದರ್ಭದಲ್ಲಿ ಆತ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದಾಗೆಲ್ಲ ಆ ಛಾಯಾಚಿತ್ರವನ್ನು ತನಗೂ ತೋರಿಸು ಎಂದು ಮಗಳು ದುಂಬಾಲುಬೀಳುತ್ತಿದ್ದಳು.

ಕ್ಲಿಕ್ಕಿಸಿದ ತಕ್ಷಣ ಚಿತ್ರವನ್ನು ತೋರಿಸುವ ಡಿಜಿಟಲ್ ಕ್ಯಾಮೆರಾ ತಂತ್ರಜ್ಞಾನ ಆಗಿನ್ನೂ ಬಂದಿರಲಿಲ್ಲ. ಹಾಗಾಗಿ "ನಾವು ಊರಿಗೆ ಹೋದಮೇಲೆ ಫಿಲಂ ರೋಲನ್ನು ತೊಳೆಸಿ ಪ್ರಿಂಟು ಹಾಕಿಸುತ್ತೇನೆ, ಆಗ ನೀನು ಈ ಚಿತ್ರಗಳನ್ನೆಲ್ಲ ನೋಡುವೆಯಂತೆ" ಎನ್ನುವ ವಿವರಣೆ ಎಡ್ವಿನ್ ಕಡೆಯಿಂದ ಬಂತು. ಆಗ ಆತನ ಮಗಳು ಕೇಳಿದ್ದು ಹೀಗೆ - "ನಾವು ಫೋಟೋ ನೋಡಲು ಅಷ್ಟೆಲ್ಲ ಯಾಕೆ ಕಾಯಬೇಕು?"

ಬೇರೆ ಯಾರಾದರೂ ಆಗಿದ್ದರೆ ಈ ಪ್ರಶ್ನೆಗೆ ಉತ್ತರವಾಗಿ ನಕ್ಕು ಸುಮ್ಮನಾಗಿಬಿಡುತ್ತಿದ್ದರೇನೋ. ಆದರೆ ಎಡ್ವಿನ್ ಲ್ಯಾಂಡ್ ಹಾಗೆ ಮಾಡಲಿಲ್ಲ. ಪುಟ್ಟ ಮಗುವಿನ ಮುಗ್ಧ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಯೋಚಿಸಲು ಪ್ರಾರಂಭಿಸಿದ ಆತ ಆಗಿನ ಕಾಲಕ್ಕೆ ಕ್ರಾಂತಿಕಾರಕ ಎನ್ನಬಹುದಾಗಿದ್ದ ಪೋಲರಾಯ್ಡ್ ಕ್ಯಾಮೆರಾವನ್ನು ಸೃಷ್ಟಿಸಿದ.

* * *

ಎಡ್ವಿನ್ ಲ್ಯಾಂಡ್ ಸಾಮಾನ್ಯ ವ್ಯಕ್ತಿಯೇನಲ್ಲ. ಆತನಲ್ಲಿ ಐನೂರಕ್ಕಿಂತ ಹೆಚ್ಚು ಸಂಖ್ಯೆಯ ಪೇಟೆಂಟುಗಳಿದ್ದವು ಎಂದರೆ ಅವನ ಮೇಧಾಶಕ್ತಿ ಹೇಗಿತ್ತು ಎನ್ನುವುದರ ಬಗ್ಗೆ ಅಂದಾಜಿಸುವುದು ಸಾಧ್ಯವಾಗಬಹುದೇನೋ.

ವಾಹನಗಳಲ್ಲಿ ಹೋಗುವಾಗ ಎದುರಿನ ವಾಹನಗಳ ಬೆಳಕು ನಮ್ಮ ಕಣ್ಣಿಗೆ ರಾಚಿ 'ಗ್ಲೇರ್' ಆಗುವುದು ನಮಗೆಲ್ಲ ಗೊತ್ತೇ ಇದೆ. ಹೀಗೆ ಗ್ಲೇರ್ ಆಗುವುದನ್ನು ತಪ್ಪಿಸಲು ವಿಶಿಷ್ಟ ಪೋಲರೈಸಿಂಗ್ ಗಾಜುಗಳ ತಯಾರಿಕೆಯಲ್ಲಿ ಎಡ್ವಿನ್ ತನ್ನನ್ನು ತೊಡಗಿಸಿಕೊಂಡಿದ್ದ. ಕೊಡಕ್ ಸಂಸ್ಥೆಗಾಗಿ ಆತ 'ಪೋಲರಾಯ್ಡ್' ಎಂಬ ವಿಶಿಷ್ಟ ಗಾಜನ್ನು ತಯಾರಿಸಿದ ಮೇಲೆ ತನ್ನ ಸಂಸ್ಥೆಯ ಹೆಸರನ್ನೂ 'ಪೋಲರಾಯ್ಡ್' ಎಂದೇ ಬದಲಿಸಿಕೊಂಡಿದ್ದ. ವಾಹನಗಳ ಗಾಜಿನಲ್ಲಿ ಗ್ಲೇರ್ ಆಗುವುದಿರಲಿ, ಇಂದಿನ ಥ್ರೀಡಿ ಸಿನಿಮಾ ಪ್ರದರ್ಶನಗಳಲ್ಲಿ ಬಳಕೆಯಾಗುವ ಕನ್ನಡಕಗಳಲ್ಲೂ ಉಪಯೋಗಕ್ಕೆ ಬರುವುದು ಎಡ್ವಿನ್ ಬಳಸಿದ ಈ ತಂತ್ರಜ್ಞಾನವೇ.

ವಿಭಿನ್ನವಾಗಿ ಯೋಚಿಸುವುದಷ್ಟೇ ಅಲ್ಲದೆ ತನ್ನ ಆಲೋಚನಗಳನ್ನು ಕ್ಷಿಪ್ರವಾಗಿ ನಿಖರವಾಗಿ ಕಾರ್ಯಗತಗೊಳಿಸುತ್ತಿದ್ದದ್ದು ಎಡ್ವಿನ್ ಲ್ಯಾಂಡ್‌ನ ಹೆಚ್ಚುಗಾರಿಕೆ. ಆತನ ಸಂಸ್ಥೆ 'ಪೋಲರಾಯ್ಡ್'ನಲ್ಲೂ ಢಾಳಾಗಿ ಕಾಣಸಿಗುತ್ತಿದ್ದ ಈ ಅಂಶವನ್ನು ಇಂದಿನ ಆಪಲ್ ಸಂಸ್ಥೆಯಲ್ಲೂ ಗುರುತಿಸುವ ಕೆಲವರು ಎಡ್ವಿನ್‌ನನ್ನು ಅಂದಿನ ದಿನಗಳ ಸ್ಟೀವ್ ಜಾಬ್ಸ್ ಎಂದು ಕರೆಯುತ್ತಾರೆ (ಸ್ವತಃ ಸ್ಟೀವ್ ಜಾಬ್ಸ್‌ಗೂ ಕೂಡ ಎಡ್ವಿನ್ ಬಗ್ಗೆ ಅಪಾರ ಗೌರವವಿತ್ತಂತೆ). ಎಡ್ವಿನ್ ಹಾಗೂ ಆತನ ಪೋಲರಾಯ್ಡ್ ಸಂಸ್ಥೆಯನ್ನು ಕುರಿತಾದ 'ಇನ್‌ಸ್ಟಂಟ್' ಎಂಬ ಪುಸ್ತಕ ಕೂಡ ಇತ್ತೀಚೆಗೆ ಪ್ರಕಟವಾಗಿದೆ.

* * *

ಇರಲಿ, ವಿಷಯ ಅದಲ್ಲ. ತನ್ನ ಮಗಳ ಪ್ರಶ್ನೆಯ ಬಗ್ಗೆ ಚಿಂತಿಸಿದ ಎಡ್ವಿನ್‌ಗೆ ಕ್ಲಿಕ್ ಮಾಡಿದ ತಕ್ಷಣ ಫೋಟೋ ಮುದ್ರಿಸಿಕೊಡುವ ಕ್ಯಾಮೆರಾವನ್ನು ರೂಪಿಸುವ ಯೋಚನೆ ಬಂತು. ಅಷ್ಟೇ ಅಲ್ಲ, ೧೯೪೩ರಿಂದ ೧೯೪೭ರವರೆಗಿನ ನಾಲ್ಕೇ ವರ್ಷಗಳಲ್ಲಿ ಅಂತಹುದೊಂದು ಕ್ಯಾಮೆರಾ ಸಿದ್ಧವೂ ಆಯಿತು.

ಪೋಲರಾಯ್ಡ್ ಕ್ಯಾಮೆರಾ ಎಂಬ ಹೆಸರಿನಲ್ಲಿ ವಿಶ್ವವಿಖ್ಯಾತವಾದದ್ದು ಇದೇ ಕ್ಯಾಮೆರಾ. ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯಿಸಿದಾಗ ಕೇವಲ ೫೭ ಕ್ಯಾಮೆರಾಗಳನ್ನಷ್ಟೆ ತಯಾರಿಸಲಾಗಿತ್ತಂತೆ. ಅಷ್ಟೂ ಕ್ಯಾಮೆರಾಗಳು ಮೊದಲ ದಿನವೇ ಮಾರಾಟವಾಗಿದ್ದವು ಎಂದು ಇತಿಹಾಸ ಹೇಳುತ್ತದೆ.  

೧೯೭೨ರಲ್ಲಿ ಮಾರುಕಟ್ಟೆಗೆ ಬಂದ ಎಸ್‌ಎಕ್ಸ್-೭೦ ಮಾದರಿಯ ಕ್ಯಾಮೆರಾ ಅಂತೂ ಜನಪ್ರಿಯತೆಯ ದೃಷ್ಟಿಯಿಂದ ಹಿಂದಿನ ಅದೆಷ್ಟೋ ದಾಖಲೆಗಳನ್ನು ಅಳಿಸಿಹಾಕಿಬಿಟ್ಟಿತು.

* * *

ಫೋಟೋ ಕ್ಲಿಕ್ಕಿಸಿದ ಮೇಲೆ ಫಿಲಂ ರೋಲನ್ನು ಹೊರತೆಗೆದು ಸ್ಟೂಡಿಯೋಗೆ ಕೊಟ್ಟರೆ ಅಲ್ಲಿ ಅದನ್ನು ಡೆವೆಲಪ್ ಮಾಡಲಾಗುತ್ತಿತ್ತು. ಫಿಲ್ಮನ್ನು ಮುದ್ರಣಕ್ಕೆ ಸಜ್ಜುಗೊಳಿಸುವ (ನೆಗೆಟಿವ್ ತಯಾರಿಸುವ) ಈ ಪ್ರಕ್ರಿಯೆಯಲ್ಲಿ ಹಲವು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಮುಂದೆ ಅದೇ ನೆಗೆಟಿವ್ ಅನ್ನು ಬಳಸಿ ಚಿತ್ರವನ್ನು ಮುದ್ರಿಸಲಾಗುತ್ತದೆ.

ಈ ರಾಸಾಯನಿಕಗಳೆಲ್ಲ ಫಿಲ್ಮಿನಲ್ಲೇ ಇದ್ದುಬಿಟ್ಟರೆ? ಸ್ಟೂಡಿಯೋಗೆ ಹೋಗುವ ಅಗತ್ಯವೇ ಇರುವುದಿಲ್ಲವಲ್ಲ! ಹಾಗೆಯೇ ನೆಗೆಟಿವ್ ಜೊತೆಗೇ ಚಿತ್ರವೂ ರೆಡಿಯಾಗುವಂತಿದ್ದರೆ ಚಿತ್ರವನ್ನು ಪ್ರತ್ಯೇಕವಾಗಿ ಪ್ರಿಂಟುಹಾಕಿಸುವ ಅಗತ್ಯವೂ ಇರುವುದಿಲ್ಲ.

ಪೋಲರಾಯ್ಡ್ ಕ್ಯಾಮೆರಾಗಳು ಇವೆರಡೂ ಅಂಶಗಳನ್ನು ಒಳಗೊಂಡಿದ್ದವು. ಹಾಗಾಗಿ ಚಿತ್ರವನ್ನು ಕ್ಲಿಕ್ಕಿಸಿದ ಕೆಲವೇ ಸಮಯದಲ್ಲಿ ಫಿಲ್ಮ್ ಡೆವೆಲಪ್ ಆಗುತ್ತಿತ್ತು, ಅಷ್ಟೇ ಅಲ್ಲ, ಜೊತೆಯಲ್ಲೇ ಚಿತ್ರದ ಮುದ್ರಿತ ಪ್ರತಿ ಕೂಡ ಸಿಕ್ಕಿಬಿಡುತ್ತಿತ್ತು!

* * *

ವಿಭಿನ್ನವಾಗಿ ಕೆಲಸಮಾಡುತ್ತಿದ್ದ ಇಂತಹ ಕ್ಯಾಮೆರಾಗಳು ಹಾಗೂ ಅದಕ್ಕೆ ಬೇಕಾದ ಫಿಲ್ಮುಗಳನ್ನು ತಯಾರಿಸಿ ಯಶಸ್ಸಿನ ಉತ್ತುಂಗ ತಲುಪಿದ ಪೋಲರಾಯ್ಡ್ ಸಂಸ್ಥೆಗೆ ಮುಂದಿನ ವರ್ಷಗಳಲ್ಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 'ಪೋಲಾವಿಶನ್' ಎಂಬ ಹೊಸ ಉತ್ಪನ್ನದಿಂದ ಸಂಸ್ಥೆಗೆ ತೀವ್ರ ನಷ್ಟವಾದ ನಂತರದಲ್ಲಿ (೧೯೮೦) ಎಡ್ವಿನ್ ಕೂಡ ಸಂಸ್ಥೆಯಿಂದ ಹೊರನಡೆದ. ಮುಂದೆ ಛಾಯಾಗ್ರಹಣ ಕ್ಷೇತ್ರದಲ್ಲಿ ಡಿಜಿಟಲ್ ಕ್ಯಾಮೆರಾಗಳ ಪ್ರಭಾವ ಬೆಳೆಯುತ್ತಿದ್ದ ಸಮಯದಲ್ಲಿ ಕ್ಷಿಪ್ರ ಬದಲಾವಣೆಗಳನ್ನು ಮಾಡಿಕೊಳ್ಳದ ಸಂಸ್ಥೆ ನಿಧಾನವಾಗಿ ನೇಪಥ್ಯಕ್ಕೆ ಸರಿಯಿತು.

ಇಷ್ಟೆಲ್ಲ ಆದರೂ ಛಾಯಾಗ್ರಹಣದ ಬಗ್ಗೆ ಆಸಕ್ತಿಯಿರುವವರಿಗೆ ಮಾತ್ರ ಎಡ್ವಿನ್ ಲ್ಯಾಂಡ್, ಆತನ ಮಗಳ ಪ್ರಶ್ನೆ ಹಾಗೂ ಅದರ ಪರಿಣಾಮವಾಗಿ ರೂಪುಗೊಂಡ ಪೋಲರಾಯ್ಡ್ ಕ್ಯಾಮೆರಾ ಮಾತ್ರ ಇಂದಿಗೂ ಆಸಕ್ತಿಕರವಾಗಿಯೇ ಉಳಿದಿವೆ.

ಫೆಬ್ರುವರಿ ೫, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge