ಮಂಗಳವಾರ, ಡಿಸೆಂಬರ್ 25, 2012

ಕ್ಯಾಮೆರಾ ಕುಟುಂಬಕ್ಕೊಂದು ಹೊಸ ಸೇರ್ಪಡೆ


ಟಿ. ಜಿ. ಶ್ರೀನಿಧಿ

ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳಿಗೆ ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ಬಿಟ್ಟರಿಲ್ಲ ಎನ್ನುವುದು ಡಿಜಿಟಲ್ ಛಾಯಾಗ್ರಹಣದ ಅಆಇಈ ಬಲ್ಲವರಿಗೆಲ್ಲ ಗೊತ್ತಿರುವ ವಿಷಯವೇ. ಆದರೆ ಈ ಕ್ಯಾಮೆರಾಗಳ ದೊಡ್ಡ ಗಾತ್ರ ಹಲವು ಸನ್ನಿವೇಶಗಳಲ್ಲಿ ಕಿರಿಕಿರಿ ಮಾಡುವುದೂ ಉಂಟು.

ಒಂದೆರಡು ದಿನಗಳ ಪ್ರವಾಸಕ್ಕಾಗಿ ರೈಲಿನಲ್ಲೋ ಬಸ್ಸಿನಲ್ಲೋ ಹೊರಟಾಗಲಂತೂ ನಮ್ಮ ಇತರೆಲ್ಲ ಲಗ್ಗೇಜಿನಷ್ಟು, ಅಥವಾ ಅದಕ್ಕಿಂತ ಹೆಚ್ಚಿನದೇ ಜಾಗವನ್ನು ಡಿಎಸ್‌ಎಲ್‌ಆರ್ ಕ್ಯಾಮೆರಾ ಮತ್ತು ಅದರ ಪರಿಕರಗಳು ಆಕ್ರಮಿಸಿಕೊಂಡುಬಿಟ್ಟಿರುತ್ತವೆ. ಪದೇಪದೇ ಇಂತಹ ಅನುಭವಗಳಾದಾಗ ಸಾಮಾನ್ಯ ಪಾಯಿಂಟ್-ಆಂಡ್-ಶೂಟ್ ಕ್ಯಾಮೆರಾಗಳೇ ಡಿಎಸ್‌ಎಲ್‌ಆರ್‌ಗಳಿಗಿಂತ ಹೆಚ್ಚು ಆಪ್ಯಾಯಮಾನವಾಗಿ ಕಂಡರೂ ಆಶ್ಚರ್ಯವಿಲ್ಲ. ಸಣ್ಣ ಕ್ಯಾಮೆರಾಗಳ ಗಾತ್ರದಲ್ಲಿ ಡಿಎಸ್‌ಎಲ್‌ಆರ್ ವೈಶಿಷ್ಟ್ಯಗಳೆಲ್ಲ ಸಿಗುವಂತಿದ್ದರೆ ಎಷ್ಟು ಚೆನ್ನಾಗಿತ್ತಲ್ಲಪ್ಪ ಅನಿಸುವುದು ಅದೆಷ್ಟು ಬಾರಿಯೋ.

ಅಂತಹುದೊಂದು ಕನಸನ್ನು ನನಸುಮಾಡುವ ನಿಟ್ಟಿನಲ್ಲಿ ಸೃಷ್ಟಿಯಾಗಿರುವುದೇ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾ. ಸಾಮಾನ್ಯ ಕ್ಯಾಮೆರಾಗಳ ಗಾತ್ರದ ಆಸುಪಾಸಿನಲ್ಲಿ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿರುವಂತಹ ಸೌಲಭ್ಯಗಳನ್ನು ಒದಗಿಸುವುದು ಈ ಕ್ಯಾಮೆರಾಗಳ ವೈಶಿಷ್ಟ್ಯ. ಮಿರರ್‌ಲೆಸ್ ಇಂಟರ್‌ಚೇಂಜಬಲ್ ಲೆನ್ಸ್ ಕ್ಯಾಮೆರಾ (ಐಎಲ್‌ಸಿ) ಎಂದೂ ಕರೆಸಿಕೊಳ್ಳುವ ಇದೇ ಡಿಜಿಟಲ್ ಕ್ಯಾಮೆರಾ ಕುಟುಂಬದ ಹೊಚ್ಚಹೊಸ ಸದಸ್ಯ!


ಈ ಬಗೆಯ ಕ್ಯಾಮೆರಾಗಳು ಮೊದಲ ಸಲ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು ೨೦೦೮ರಲ್ಲಿ; ಇವನ್ನು ಮಾರುಕಟ್ಟೆಗೆ ಪರಿಚಯಿಸಿದ ಶ್ರೇಯ ಸಲ್ಲುವುದು ಪ್ಯಾನಸಾನಿಕ್ ಹಾಗೂ ಒಲಿಂಪಸ್ ಸಂಸ್ಥೆಗಳಿಗೆ. ಅಲ್ಲಿಂದೀಚೆಗೆ ಬಹುತೇಕ ಎಲ್ಲ ಕ್ಯಾಮೆರಾ ತಯಾರಕರೂ ಕನಿಷ್ಟ ಒಂದಾದರೂ ಮಾದರಿಯ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ ಎಂದೇ ಹೇಳಬಹುದು. ಸ್ಯಾಮ್‌ಸಂಗ್ ಎನ್‌ಎಕ್ಸ್, ನಿಕಾನ್ ೧, ಸೋನಿ ಎನ್‌ಇಎಕ್ಸ್ - ಹೀಗೆ ಹಲವಾರು ಉತ್ಪಾದಕರು ಪ್ರತ್ಯೇಕ ಸರಣಿಗಳಲ್ಲಿ ಪರಿಚಯಿಸಿದ ಕ್ಯಾಮೆರಾಗಳು ತಕ್ಕಮಟ್ಟಿಗಿನ ಜನಪ್ರಿಯತೆಯನ್ನೂ ಗಳಿಸಿಕೊಂಡಿರುವುದು ಗಮನಾರ್ಹ.

ಇಷ್ಟಕ್ಕೂ ಈ ಕ್ಯಾಮೆರಾಗಳಲ್ಲಿರುವ ವೈಶಿಷ್ಟ್ಯವಾದರೂ ಏನು ಎಂದು ನೀವು ಕೇಳಬಹುದು. ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾ ವೈಶಿಷ್ಟ್ಯಗಳನ್ನು ಪಟ್ಟಿಮಾಡುವುದೇ ಆದರೆ ಆ ಪಟ್ಟಿಯಲ್ಲಿ ಮೊದಲನೆಯದಾಗಿ ನಿಲ್ಲುವ ಅಂಶವೇ ಚಿತ್ರದ ಗುಣಮಟ್ಟ. ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿರುವಂತಹುದೇ ಸೆನ್ಸರ್‌ಗಳು ಈ ಕ್ಯಾಮೆರಾಗಳಲ್ಲೂ ಇರುವುದರಿಂದ ಛಾಯಾಗ್ರಹಣದ ಗುಣಮಟ್ಟವೂ ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಮಟ್ಟದಲ್ಲೇ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಸೆನ್ಸರ್ ಗಾತ್ರ ಡಿಎಸ್‌ಎಲ್‌ಆರ್ ಸೆನ್ಸರಿಗಿಂತ ಚಿಕ್ಕದಾಗಿದ್ದರೂ ಕೂಡ ಸಾಮಾನ್ಯ ಕ್ಯಾಮೆರಾಗಳ ಹೋಲಿಕೆಯಲ್ಲಿ ಒಟ್ಟಾರೆ ಗುಣಮಟ್ಟ ಉನ್ನತವಾಗಿಯೇ ಇರುತ್ತದೆ.

ಡಿಎಸ್‌ಎಲ್‌ಆರ್ ಕ್ಯಾಮೆರಾ ಗುಣಮಟ್ಟದ ಚಿತ್ರಗಳೇ ದೊರಕುವಂತಿದ್ದರೆ ಆ ಕ್ಯಾಮೆರಾಗಳನ್ನೇ ಬಳಸಬಹುದಲ್ಲ? ಅದಕ್ಕೆ ಪ್ರತ್ಯೇಕವಾದ ಹೆಸರಾದರೂ ಏಕೆ ಬೇಕು? ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳಲ್ಲಿ ಬಳಕೆಯಾಗುವ ವಿನೂತನ ತಂತ್ರಜ್ಞಾನವನ್ನು ಪರಿಚಯಿಸಿಕೊಳ್ಳುವುದು ಒಳ್ಳೆಯದು.

ಚಿತ್ರ ಕ್ಲಿಕ್ಕಿಸುವಾಗ ಒಂದು ಕಣ್ಣು ಮುಚ್ಚಿಕೊಂಡು ಸಣ್ಣದೊಂದು ಕಿಂಡಿಯೊಳಕ್ಕೆ ಇಣುಕುತ್ತೇವಲ್ಲ, ಕ್ಯಾಮೆರಾ ಮುಂದಿನ ದೃಶ್ಯವನ್ನು ಆ ಆಪ್ಟಿಕಲ್ ವ್ಯೂಫೈಂಡರ್ ಮೂಲಕ ನಮಗೆ ತೋರಿಸಲು ಡಿಎಸ್‌ಎಲ್‌ಆರ್ ಕ್ಯಾಮೆರಾದೊಳಗೆ ಒಂದು ಕನ್ನಡಿ ಇರುತ್ತದೆ. ಲೆನ್ಸ್ ಮೂಲಕ ಹಾದುಬರುವ ದೃಶ್ಯದ ಹರಿವನ್ನು ತಿರುಗಿಸಿ ವ್ಯೂಫೈಂಡರ್ ಮೂಲಕ ಕಾಣಿಸುವಂತೆ ಮಾಡಲು ಈ ಕನ್ನಡಿಯನ್ನು ವಾಲಿದಂತೆ ಕೂರಿಸಿರುತ್ತಾರೆ. ಆಪ್ಟಿಕಲ್ ವ್ಯೂಫೈಂಡರ್ ಬದಲು ಎಲ್‌ಸಿಡಿ ಪರದೆಯ ಮೇಲೆಯೇ ಚಿತ್ರವನ್ನು ನೋಡಬೇಕೆಂದಾಗ, ಅಥವಾ ಚಿತ್ರವನ್ನು ಕ್ಲಿಕ್ಕಿಸಿದಾಗ ಬೆಳಕು ಸೆನ್ಸರ್ ಮೇಲೆ ಬೀಳುವಂತೆ ಮಾಡಲು ಈ ಕನ್ನಡಿಯ ಜೋಡಣೆ ಬದಲಾಗುತ್ತದೆ. ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಗಾತ್ರ ದೊಡ್ಡದಾಗಿರಲು ಈ ಕನ್ನಡಿಯೂ ಒಂದು ಕಾರಣ.

ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳಲ್ಲಿ ಸಾಮಾನ್ಯವಾಗಿ ಎಲ್‌ಸಿಡಿ ಪರದೆಯನ್ನೇ ವ್ಯೂಫೈಂಡರ್ ಆಗಿ ಬಳಸುವುದರಿಂದ ಅಲ್ಲಿ ಆಪ್ಟಿಕಲ್ ವ್ಯೂಫೈಂಡರಿನೊಳಗೆ ಇಣುಕುವ ಪ್ರಮೇಯ ಬರುವುದಿಲ್ಲ; ಹಾಗಾಗಿ ಈ ಕನ್ನಡಿಯ ಅಗತ್ಯವೂ ಇಲ್ಲ. ಇದೊಂದೇ ಬದಲಾವಣೆಯಿಂದಾಗಿ ಕ್ಯಾಮೆರಾ ಗಾತ್ರವನ್ನು ಗಮನಾರ್ಹ ಪ್ರಮಾಣದಲ್ಲಿ ಕುಗ್ಗಿಸುವುದು ಸಾಧ್ಯವಾಗಿದೆ. ಕ್ಯಾಮೆರಾ ಗಾತ್ರ ಕಡಿಮೆಯಿರುವುದರಿಂದ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳ ಲೆನ್ಸುಗಳ ಗಾತ್ರವೂ ಕೊಂಚ ಚಿಕ್ಕದಾಗಿರುವುದು ಸಾಧ್ಯವಾಗಿದೆ. ಇವೆರಡೂ ಅಂಶ ಸೇರಿಕೊಂಡು ಛಾಯಾಗ್ರಾಹಕರು ಹೊತ್ತು ತಿರುಗಬೇಕಾದ ಲಗೇಜಿನ ಪ್ರಮಾಣವೂ ಕಡಿಮೆಯಾಗಿದೆ!

ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ಆಪ್ಟಿಕಲ್ ವ್ಯೂಫೈಂಡರ್ ಸಹಾಯದಿಂದ ಚಿತ್ರಗಳನ್ನು ಸುಲಭವಾಗಿ, ಚೆನ್ನಾಗಿ ಕ್ಲಿಕ್ಕಿಸಬಹುದು ಎನ್ನುವುದೇನೋ ನಿಜ. ಆದರೆ ಎಲ್ಲ ಸನ್ನಿವೇಶಗಳಲ್ಲೂ ಆಪ್ಟಿಕಲ್ ವ್ಯೂಫೈಂಡರ್ ಬಳಸುವುದು ಕಷ್ಟ. ಒಂದು ಕಣ್ಣು ಮುಚ್ಚಿಕೊಂಡು ಇನ್ನೊಂದು ಕಣ್ಣಿನಿಂದ ಇಣುಕುವುದಷ್ಟೇ ಅಲ್ಲ, ಕಣ್ಣದೃಷ್ಟಿಗೆ ನೇರವಾಗಿ ನಿಲುಕದ ದೃಶ್ಯಗಳನ್ನು ಕ್ಲಿಕ್ಕಿಸುವಾಗಲೂ ಆಪ್ಟಿಕಲ್ ವ್ಯೂಫೈಂಡರ್ ಬಳಕೆ ಕಿರಿಕಿರಿಮಾಡುವ ವಿಷಯವೇ. ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳಲ್ಲಿ ಆಪ್ಟಿಕಲ್ ವ್ಯೂಫೈಂಡರ್ ಪರಿಕಲ್ಪನೆಯೇ ಇಲ್ಲದಿರುವುದು ಈ ದೃಷ್ಟಿಯಿಂದ ಒಳ್ಳೆಯದೆಂದೇ ಹೇಳಬಹುದು.

ಎಲ್‌ಸಿಡಿಯನ್ನೇ ವ್ಯೂಫೈಂಡರಿನಂತೆ ಬಳಸುವುದು ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲೂ ಸಾಧ್ಯವಿದೆ ನಿಜ, ಆದರೆ ಹಾಗೆ ಬಳಸುವಾಗ ಕ್ಯಾಮೆರಾ ಪ್ರತಿಕ್ರಿಯಿಸುವ ವೇಗ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳಲ್ಲಿ (ಎಲ್‌ಸಿಡಿಯನ್ನೇ ವ್ಯೂಫೈಂಡರ್ ಆಗಿ ಬಳಸುವ ಇನ್ನಿತರ ಸಾಮಾನ್ಯ ಕ್ಯಾಮೆರಾಗಳಲ್ಲೂ ಕೂಡ) ಈ ಸಮಸ್ಯೆ ಇರುವುದಿಲ್ಲ. ಹಾಗಾಗಿ ಎಲ್‌ಸಿಡಿಯನ್ನು ವ್ಯೂಫೈಂಡರ್ ಆಗಿ ಬಳಸುವಾಗಲೂ ಕ್ಯಾಮೆರಾ ಮುಂದಿನ ದೃಶ್ಯದಲ್ಲಿ ನಮಗೆ ಬೇಕಾದ್ದನ್ನು ಕ್ಷಿಪ್ರವಾಗಿ ಫೋಕಸ್ ಮಾಡುವುದು ಸಾಧ್ಯವಾಗುತ್ತದೆ.

ಹಾಗೆಂದಮಾತ್ರಕ್ಕೆ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳು ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಗಿಂತ ಉತ್ಕೃಷ್ಟವಾದವು, ಎಲ್ಲರೂ ಅವನ್ನೇ ಕೊಂಡುಕೊಳ್ಳಿ ಎಂದು ಫರ್ಮಾನು ಹೊರಡಿಸಿಬಿಡುವಂತೇನೂ ಇಲ್ಲ. ಏಕೆಂದರೆ ಈ ಕ್ಯಾಮೆರಾಗಳಲ್ಲೂ ಸಾಕಷ್ಟು ಕುಂದುಕೊರತೆಗಳಿವೆ

ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿರುವಂತಹ ಅದೆಷ್ಟೇ ಸೌಲಭ್ಯಗಳು ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳಲ್ಲಿವೆ ಎಂದುಕೊಂಡರೂ ಅವು ಸಂಪೂರ್ಣವಾಗಿ ಡಿಎಸ್‌ಎಲ್‌ಆರ್ ಸಮಕ್ಕೆ ಬರುವುದು ಕಷ್ಟ. ಇದೇ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳ ಮೊದಲ ಕೊರತೆ. ಇನ್ನು ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳ ಬೆಲೆ ಡಿಎಸ್‌ಎಲ್‌ಆರ್‌ಗಳಷ್ಟೇ (ಕೆಲವೊಮ್ಮೆ ಅವಕ್ಕಿಂತ ಜಾಸ್ತಿಯೂ) ಇರುವುದು ಅವುಗಳ ಇನ್ನೊಂದು ಕೊರತೆ; ಅಷ್ಟೇ ಬೆಲೆ ಕೊಡುವುದಾದರೆ ಡಿಎಸ್‌ಎಲ್‌ಆರ್ ಕ್ಯಾಮೆರಾವನ್ನೇ ಕೊಳ್ಳಬಹುದಲ್ಲ!

ಎಲ್‌ಸಿಡಿಯನ್ನೇ ವ್ಯೂಫೈಂಡರಿನಂತೆ ಬಳಸಬೇಕಾದ ಅನಿವಾರ್ಯತೆ ಇರುವುದರಿಂದ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳ ಬ್ಯಾಟರಿ ಬೇಗ ಖಾಲಿಯಾಗುತ್ತದೆ ಎನ್ನುವ ದೂರೂ ಇದೆ. ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಗೆ ಸಿಗುವಷ್ಟು ವೈವಿಧ್ಯಮಯವಾದ ಲೆನ್ಸುಗಳ ಆಯ್ಕೆ ಇನ್ನೂ ಎಲ್ಲ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳಿಗೂ ಸಿಗುತ್ತಿಲ್ಲ ಎನ್ನುವುದು ಇನ್ನೊಂದು ದೂರು.

ಹಾಗಾದರೆ ಈ ಕ್ಯಾಮೆರಾಗಳು ನಿಷ್ಪ್ರಯೋಜಕ ಎಂದುಬಿಡೋಣವೆ? ಖಂಡಿತಾ ಬೇಡ.

ಬೇರೆಲ್ಲ ವಸ್ತುಗಳಂತೆ ಕ್ಯಾಮೆರಾಗಳಲ್ಲೂ ಅನುಕೂಲ-ಅನನುಕೂಲಗಳಿರುವುದು ಸಾಮಾನ್ಯ. ಯಾವುದೇ ಕ್ಯಾಮೆರಾದಲ್ಲಾದರೂ ಇರುವ ಸೌಲಭ್ಯಗಳು ಹಾಗೂ ಅವುಗಳ ಕೊರತೆಗಳ ಪಟ್ಟಿಯನ್ನಷ್ಟೆ ನೋಡದೆ ನಮ್ಮ ಅಗತ್ಯಕ್ಕೆ ಯಾವ ರೀತಿಯ ಕ್ಯಾಮೆರಾ ಅತ್ಯಂತ ಸೂಕ್ತವಾಗಬಲ್ಲದೆಂದು ಪರಿಶೀಲಿಸುವುದು ಒಳ್ಳೆಯದು. ಹೀಗೆ ಪರಿಶೀಲಿಸಿಯೇ ನಮಗೆ ಹೆಚ್ಚು ಉಪಯುಕ್ತವಾಗಬಲ್ಲ ಕ್ಯಾಮೆರಾವನ್ನು ಆಯ್ದು-ಕೊಂಡು-ಬಳಸೋಣ, ಏನಂತೀರಿ!?

ಡಿಸೆಂಬರ್ ೨೫, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge