ಮಂಗಳವಾರ, ಡಿಸೆಂಬರ್ 18, 2012

ಇದು ಡಿಎಸ್‌ಎಲ್‌ಆರ್!


ಟಿ. ಜಿ. ಶ್ರೀನಿಧಿ

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಕ್ಯಾಮೆರಾಗಳು ನಮ್ಮೆಲ್ಲರ ಬದುಕಿನಲ್ಲಿ ಅದೆಷ್ಟರ ಮಟ್ಟಿಗೆ ಹಾಸುಹೊಕ್ಕಾಗಿ ಸೇರಿಕೊಂಡಿವೆಯೆಂದರೆ ಮನೆಗಳಲ್ಲಿ ಡಿಜಿಟಲ್ ಕ್ಯಾಮೆರಾ ಇರುವುದು ಟೀವಿ, ಕಂಪ್ಯೂಟರ್ ಇರುವಷ್ಟೇ ಸಾಮಾನ್ಯವಾಗಿಬಿಟ್ಟಿದೆ. ಅಷ್ಟೇ ಅಲ್ಲ, ಡಿಜಿಟಲ್ ಕ್ಯಾಮೆರಾ ಮಾರುಕಟ್ಟೆಯಲ್ಲಿರುವ ವೈವಿಧ್ಯದ ಪರಿಣಾಮವಾಗಿ ಎಲ್ಲ ಬಜೆಟ್ಟುಗಳಿಗೂ ಹೊಂದಿಕೆಯಾಗಬಲ್ಲ ಕ್ಯಾಮೆರಾಗಳು ಸಿಗುತ್ತಿವೆ. ಅದೆಷ್ಟೋ ಜನರ ಮಟ್ಟಿಗೆ ಅವರ ಮೊಬೈಲುಗಳೇ ಡಿಜಿಟಲ್ ಕ್ಯಾಮೆರಾ ಕೂಡ ಆಗಿರುತ್ತವೆ.

ಇನ್ನು ಯಾವುದಾದರೂ ಪ್ರವಾಸಿ ಸ್ಥಳದ ಉದಾಹರಣೆ ತೆಗೆದುಕೊಂಡರಂತೂ ಅಲ್ಲಿರುವ ಪ್ರವಾಸಿಗರ ಕೈಗಳಲ್ಲೇ ನಮಗೆ ಹತ್ತಾರು ಬಗೆಯ ಕ್ಯಾಮೆರಾಗಳು ಕಾಣಸಿಗುತ್ತವೆ. ಕೆಲವೇ ಸಾವಿರ ಬೆಲೆಯ ಮೊಬೈಲಿನಲ್ಲಿರುವ ಕ್ಯಾಮೆರಾದಿಂದ ಪ್ರಾರಂಭಿಸಿ ಹತ್ತಾರು ಸಾವಿರ ರೂಪಾಯಿ ಬೆಲೆಯ ಅತ್ಯಾಧುನಿಕ ಕ್ಯಾಮೆರಾಗಳವರೆಗೆ ಡಿಜಿಟಲ್ ಕ್ಯಾಮೆರಾಗಳು ತೀರಾ ಸಾಮಾನ್ಯವೇ ಆಗಿಹೋಗಿವೆ. ಪ್ರೊಜೆಕ್ಟರ್ ಇರುವ ಕ್ಯಾಮೆರಾ, ಥ್ರೀಡಿ ಚಿತ್ರಗಳನ್ನು ತೆಗೆಯಬಲ್ಲ ಕ್ಯಾಮೆರಾ, ಎಚ್‌ಡಿ ವೀಡಿಯೋ ಸೆರೆಹಿಡಿಯಬಲ್ಲ ಕ್ಯಾಮೆರಾ - ಹೀಗೆ ಕ್ಯಾಮೆರಾಗಳಲ್ಲಿ ಕಾಣಸಿಗುವ ವೈವಿಧ್ಯಕ್ಕೆ ಕೊನೆಯೇ ಇಲ್ಲ!

ಇವೆಲ್ಲವುದರ ನಡುವೆ ಒಂದು ವಿಶೇಷ ಬಗೆಯ ಕ್ಯಾಮೆರಾ ಬಹಳ ಬೇಗನೆ ನಮ್ಮ ಗಮನಸೆಳೆಯಬಲ್ಲದು. ಇತರ ಕ್ಯಾಮೆರಾಗಳಿಗಿಂತ ಕೊಂಚ ದಪ್ಪಗಿರುವ ಈ ಕ್ಯಾಮೆರಾಗೆ ಬೇರೆ ಕ್ಯಾಮೆರಾಗಳಲ್ಲಿ ಕಾಣಸಿಗದಷ್ಟು ಉದ್ದದ ಲೆನ್ಸೊಂದು ಅಂಟಿಕೊಂಡಿರುವುದೂ ಅಪರೂಪವೇನಲ್ಲ.

ಡಿಎಸ್‌ಎಲ್‌ಆರ್ ಕ್ಯಾಮೆರಾಗಳೆಂದು ಕರೆಯುವುದು ಇವನ್ನೇ.
ಡಿಎಸ್‌ಎಲ್‌ಆರ್ ಎನ್ನುವುದು 'ಡಿಜಿಟಲ್ ಸಿಂಗಲ್ ಲೆನ್ಸ್ ರಿಫ್ಲೆಕ್ಸ್' ಎನ್ನುವ ಹೆಸರಿನ ಹ್ರಸ್ವರೂಪ.

ಇತರೆ ಕ್ಯಾಮರಾಗಳಲ್ಲಿ ನಮಗೆ ನಾವು ಕ್ಲಿಕ್ಕಿಸಲು ಹೊರಟ ದೃಶ್ಯವನ್ನು ತೋರಿಸಲು ಒಂದು, ಫೊಟೋ ತೆಗೆಯಲು ಒಂದು ಹೀಗೆ ಪ್ರತ್ಯೇಕ ಲೆನ್ಸ್‌ಗಳಿರುತ್ತವೆ. ಆದರೆ ಸಿಂಗಲ್ ಲೆನ್ಸ್ ರಿಫ್ಲೆಕ್ಸ್ (ಎಸ್‌ಎಲ್‌ಆರ್) ಕ್ಯಾಮರಾಗಳಲ್ಲಿ ಹೀಗೆ ಬೇರೆ ಬೇರೆ ಲೆನ್ಸ್ ಇರುವುದಿಲ್ಲ. ದೃಶ್ಯ ನೋಡುವುದು ಮತ್ತು ಫೊಟೋ ತೆಗೆಯುವುದಕ್ಕೆ ಒಂದೇ ಲೆನ್ಸ್ ಬಳಸಲಾಗುತ್ತದೆ. ಉತ್ಕೃಷ್ಟ ಗುಣಮಟ್ಟದ ಚಿತ್ರಗಳಿಗೆ ಹೆಸರುವಾಸಿಯಾದ ಈ ಕ್ಯಾಮೆರಾಗಳು ಫಿಲಂ ರೋಲುಗಳ ಕಾಲದಲ್ಲೂ ಇದ್ದವು.

ಇವುಗಳ ಡಿಜಿಟಲ್ ರೂಪವೇ ಡಿಎಸ್‌ಎಲ್‌ಆರ್, ಅಂದರೆ 'ಡಿಜಿಟಲ್ ಸಿಂಗಲ್ ಲೆನ್ಸ್ ರಿಫ್ಲೆಕ್ಸ್' ಕ್ಯಾಮೆರಾ.

ಈ ಕ್ಯಾಮೆರಾಗಳು ನೋಡುವುದಕ್ಕೆ ಇತರ ಡಿಜಿಟಲ್ ಕ್ಯಾಮೆರಾಗಳಿಗಿಂತ ಭಿನ್ನವಾಗಿರುತ್ತವೆ ಎನ್ನುವ ವಿಷಯ ನಮಗೆ ಗೊತ್ತೇ ಇದೆ. ಆದರೆ ಇತರ ಕ್ಯಾಮೆರಾಗಳಿಗೂ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಗೂ ಇರುವ ವ್ಯತ್ಯಾಸ ಇಷ್ಟಕ್ಕೇ ಮುಗಿಯುವುದಿಲ್ಲ.

ಬೇರೆ ಬೇರೆ ಅಗತ್ಯಗಳಿಗೆ ಬೇರೆಬೇರೆ ಲೆನ್ಸುಗಳನ್ನು ಬಳಸುವ ಸೌಲಭ್ಯ ಈ ಕ್ಯಾಮೆರಾಗಳಲ್ಲಿರುವ ಪ್ರಮುಖ ವೈಶಿಷ್ಟ್ಯ.

ಡಿಎಸ್‌ಎಲ್‌ಆರ್ ಕ್ಯಾಮೆರಾ ಕೊಳ್ಳುವಾಗ ಸಾಮಾನ್ಯವಾಗಿ ಅದರ ಜೊತೆಗೆ ಬರುವುದು ಒಂದೇ ಲೆನ್ಸು, ಅದು ಸಾಮಾನ್ಯ ಉಪಯೋಗಕ್ಕಷ್ಟೆ ಸಾಕಾಗುತ್ತದೆ. ನೆಲದಲ್ಲಿ ಓಡಾಡುತ್ತಿರುವ ಇರುವೆಯ ಚಿತ್ರವನ್ನೋ ದೂರದಲ್ಲಿರುವ ಮರದ ಮೇಲಿನ ಹಕ್ಕಿಯ ಚಿತ್ರವನ್ನೋ ತೆಗೆಯಲು ಅದು ಸಾಕಾಗುವುದಿಲ್ಲ. ಇವಕ್ಕೆಲ್ಲ ಬೇರೆಬೇರೆ ರೀತಿಯ ಲೆನ್ಸುಗಳು ಬೇಕಾಗುತ್ತವೆ. ಮ್ಯಾಕ್ರೋ ಲೆನ್ಸ್, ಟೆಲಿಫೋಟೋ ಲೆನ್ಸ್, ಜೂಮ್ ಲೆನ್ಸ್, ಪ್ರೈಮ್ ಲೆನ್ಸ್ - ಹೀಗೆ ಅನೇಕ ಬಗೆಯ ಲೆನ್ಸುಗಳು ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿವೆ.

ನಾವು ಯಾವ ಕ್ಯಾಮೆರಾ ಬಳಸುತ್ತಿದ್ದೇವೋ ಅದಕ್ಕೆ ಸರಿಹೊಂದುವಂತಹ ಲೆನ್ಸನ್ನೇ ಬಳಸುವುದು ಕಡ್ಡಾಯ. ಅಂದರೆ, ಕೆನಾನ್ ಕ್ಯಾಮೆರಾ ಲೆನ್ಸುಗಳನ್ನು ನಿಕಾನ್ ಕ್ಯಾಮೆರಾದಲ್ಲಿ, ನಿಕಾನ್ ಕ್ಯಾಮೆರಾ ಲೆನ್ಸನ್ನು ಸೋನಿ ಕ್ಯಾಮೆರಾದಲ್ಲಿ ಬಳಸುವಂತಿಲ್ಲ. ನಮ್ಮಲ್ಲಿ ಯಾವ ಡಿಎಸ್‌ಎಲ್‌ಆರ್ ಕ್ಯಾಮೆರಾ ಇದೆಯೋ ಅದಕ್ಕೆ ಸರಿಹೊಂದುವಂತಹ ಲೆನ್ಸನ್ನಷ್ಟೆ ಅದರೊಡನೆ ಬಳಸಬಹುದು.

ಕ್ಯಾಮೆರಾದ ಲೆನ್ಸಿನ ಮೂಲಕ ಒಂದಷ್ಟು ಬೆಳಕು ಅದರ ಸೆನ್ಸರಿನ ಮೇಲೆ ಬಿದ್ದಾಗ ಛಾಯಾಚಿತ್ರ ಅದರಲ್ಲಿ ಸೆರೆಯಾಗುತ್ತದೆ ಎನ್ನುವುದೇನೋ ಸರಿ. ಆದರೆ ಎಲ್ಲ ಕ್ಯಾಮೆರಾಗಳಲ್ಲೂ ಇರುವ ಸೆನ್ಸರ್ ಒಂದೇ ಬಗೆಯದಾಗಿರುವುದಿಲ್ಲ. ಈಗ ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ವಿಷಯವನ್ನೇ ತೆಗೆದುಕೊಂಡರೆ ಅವುಗಳಲ್ಲಿರುವ ಸೆನ್ಸರ್ ಸಾಮಾನ್ಯ ಡಿಜಿಟಲ್ ಕ್ಯಾಮೆರಾಗಳಲ್ಲಿರುವುದಕ್ಕಿಂತ ದೊಡ್ಡದಾಗಿರುತ್ತದೆ. ಹಾಗಾಗಿಯೇ ಡಿಎಸ್‌ಎಲ್‌ಆರ್ ಕ್ಯಾಮೆರಾಗಳು ಕ್ಲಿಕ್ಕಿಸುವ ಚಿತ್ರದ ಗುಣಮಟ್ಟವೂ ಸಾಮಾನ್ಯ ಕ್ಯಾಮೆರಾಗಳು ಕ್ಲಿಕ್ಕಿಸುವ ಚಿತ್ರಗಳಿಗಿಂತ ಉತ್ತಮವಾಗಿರುತ್ತವೆ.

ಡಿಎಸ್‌ಎಲ್‌ಆರ್ ಕ್ಯಾಮೆರಾದ ಸೆನ್ಸರ್ ಸಾಮಾನ್ಯ ಕ್ಯಾಮೆರಾಗಳಲ್ಲಿರುವುದಕ್ಕಿಂತ ಉತ್ತಮವಾಗಿರುತ್ತದೆ; ಆದರೆ ಸಾಮಾನ್ಯ ಕ್ಯಾಮೆರಾಗಳಲ್ಲಿರದ ಒಂದು ಸಮಸ್ಯೆಯೂ ಡಿಎಸ್‌ಎಲ್‌ಆರ್ ಕ್ಯಾಮೆರಾದ ಸೆನ್ಸರ್ ಅನ್ನು ಕಾಡುತ್ತದೆ. ಅದೇ ಧೂಳು. ಪ್ರತಿ ಬಾರಿಯೂ ಲೆನ್ಸುಗಳನ್ನು ಬದಲಿಸುವಾಗ ಕ್ಯಾಮೆರಾದೊಳಗೆ ಸೇರುವ ಧೂಳು ಸೆನ್ಸರಿನ ಮೇಲೆ ಕುಳಿತು ಚಿತ್ರಗಳನ್ನು ಹಾಳುಮಾಡಬಲ್ಲದು. ಈ ತೊಂದರೆಯನ್ನು ತಪ್ಪಿಸಲೆಂದೇ ಹಲವು ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ಸ್ವಯಂಚಾಲಿತವಾಗಿ ಸೆನ್ಸರ್ ಅನ್ನು ಸ್ವಚ್ಛಗೊಳಿಸುವ ಸೌಲಭ್ಯವಿರುತ್ತದೆ.

ಬಹುತೇಕ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ನಾವು ಕ್ಲಿಕ್ಕಿಸಿದ ಚಿತ್ರಗಳನ್ನು ಅಷ್ಟಿಷ್ಟು ಬದಲಾಯಿಸುವ ('ಎಡಿಟ್ ಮಾಡುವ') ಸೌಲಭ್ಯವೂ ಇರುತ್ತದೆ. ಕಂಪ್ಯೂಟರಿನಲ್ಲಿ ಮಾಡುವಂತೆ ಬಣ್ಣದ ಚಿತ್ರವನ್ನು ಕಪ್ಪು-ಬಿಳುಪಿಗೆ ಬದಲಿಸುವ, ಸ್ಪೆಷಲ್ ಇಫೆಕ್ಟುಗಳನ್ನು ಸೇರಿಸುವ, ಚಿತ್ರದ ಗಾತ್ರವನ್ನು ಕುಗ್ಗಿಸುವ, ಕ್ರಾಪ್ ಮಾಡುವ ಕೆಲಸವನ್ನೆಲ್ಲ ಅನೇಕ ಡಿಎಸ್‌ಎಲ್‌ಆರ್ ಕ್ಯಾಮೆರಾಗಳೇ ಮಾಡಬಲ್ಲವು.

ಇನ್ನು ಕ್ಯಾಮೆರಾದಲ್ಲೇ ಇರುವ ಫ್ಲ್ಯಾಶ್ ಬದಲಿಗೆ ಹೆಚ್ಚು ಸಾಮರ್ಥ್ಯದ ಬಾಹ್ಯ ಫ್ಲಾಶ್ ಜೋಡಣೆಯನ್ನು ಬಳಸಲು ಅನುವುಮಾಡಿಕೊಡುವುದು ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಇನ್ನೊಂದು ವೈಶಿಷ್ಟ್ಯ. ಇದರಿಂದಾಗಿ ಬೇರೆಬೇರೆ ಮಟ್ಟದ ಬೆಳಕಿನಲ್ಲಿ ನಮ್ಮ ಇಚ್ಛೆಗೆ ಅನುಗುಣವಾದ ಚಿತ್ರಗಳನ್ನು ಕ್ಲಿಕ್ಕಿಸುವುದು ಸುಲಭವಾಗುತ್ತದೆ.

ಈಚಿನ ವರ್ಷಗಳಲ್ಲಿ ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಬೆಲೆ ಸಾಕಷ್ಟು ಕಡಿಮೆಯಾಗಿದೆ. ಆದರೆ ಹೆಚ್ಚಿನ ಸಾಮರ್ಥ್ಯದ ಲೆನ್ಸುಗಳ ಬೆಲೆ ಇನ್ನೂ ದುಬಾರಿಯಾಗಿಯೇ ಇದೆ. ಹೀಗಾಗಿ ಈ ಬಗೆಯ ಕ್ಯಾಮೆರಾ ಮತ್ತು ಲೆನ್ಸುಗಳ ಖರೀದಿ ಇನ್ನೂ ಕೊಂಚ ದುಬಾರಿ ವ್ಯವಹಾರವೇ. ಇದರ ಜೊತೆಗೆ ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಕುರಿತು ಕೇಳಿಬರುವ ಇನ್ನೊಂದು ಪ್ರಮುಖ ದೂರು ಎಂದರೆ ಅವುಗಳ ಗಾತ್ರದ್ದು. ಡಿಎಸ್‌ಎಲ್‌ಆರ್ ಕ್ಯಾಮೆರಾ, ಮತ್ತು ಸಣ್ಣದೊಂದು ಲೆನ್ಸು - ಇಷ್ಟರ ಗಾತ್ರವೇ ಮಾಮೂಲಿ ಡಿಜಿಟಲ್ ಕ್ಯಾಮೆರಾಗಳಿಗಿಂತ ಸಾಕಷ್ಟು ದೊಡ್ಡದಾಗಿರುತ್ತದೆ. ಇನ್ನು ಒಂದೋ ಎರಡೋ ಹೆಚ್ಚುವರಿ ಲೆನ್ಸುಗಳಿದ್ದರಂತೂ ಮುಗಿದೇ ಹೋಯಿತು, ಅಪ್ಪನ ಕ್ಯಾಮೆರಾ ಬ್ಯಾಗಿಗೂ ಪುಟ್ಟಿಯ ಸ್ಕೂಲ್ ಬ್ಯಾಗಿಗೂ ವ್ಯತ್ಯಾಸವೇ ಇರುವುದಿಲ್ಲ!

ಈ ದೂರಿಗೆ ಕೊಂಚಮಟ್ಟಿಗಾದರೂ ಉತ್ತರಿಸುವ ನಿಟ್ಟಿನಲ್ಲಿ ರೂಪಗೊಂಡಿರುವುದೇ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾಗಳ ಪರಿಕಲ್ಪನೆ. ಕ್ಯಾಮೆರಾ ಲೋಕಕ್ಕೆ ಹೊಸದಾಗಿ ಪ್ರವೇಶಿಸಿರುವ ಈ ಕ್ಯಾಮೆರಾಗಳ ಪರಿಚಯ ಮುಂದಿನ ವಾರದ ಲೇಖನದಲ್ಲಿ!

ಡಿಸೆಂಬರ್ ೧೮, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge