ಶುಕ್ರವಾರ, ಮೇ 30, 2014

ಇ-ಕಸ

ಟಿ. ಜಿ. ಶ್ರೀನಿಧಿ

ಈಚಿನ ಕೆಲ ವರ್ಷಗಳಲ್ಲಿ ಇಲೆಕ್ಟ್ರಾನಿಕ್ ಉತ್ಪನ್ನಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳೇ ಆಗಿಬಿಟ್ಟಿವೆ. ಅವು ನಮ್ಮ ಬದುಕಿನ ಮೇಲೆ ಬೀರುವ ಪ್ರಭಾವಕ್ಕೆ ಮಾರುಹೋಗಿರುವ ನಾವು ಪ್ರತಿಕ್ಷಣವೂ ಒಂದಲ್ಲ ಒಂದು ಇಲೆಕ್ಟ್ರಾನಿಕ್ ಉತ್ಪನ್ನವನ್ನು - ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ - ಬಳಸುತ್ತಿರುತ್ತೇವೆ.

ಇಲೆಕ್ಟ್ರಾನಿಕ್ ಉತ್ಪನ್ನಗಳ ಜಗತ್ತಿನಲ್ಲಿ ಬದಲಾವಣೆಯೂ ಬಹು ಕ್ಷಿಪ್ರ. ಈ ವೇಗಕ್ಕೆ ಹೊಂದಿಕೊಳ್ಳಲು ನಾವೂ ಹೊಸಹೊಸ ಉಪಕರಣಗಳ ಹಿಂದೆಬೀಳುತ್ತೇವೆ, ಬಳಸಿ ಹಳೆಯದಾದದ್ದನ್ನು ಹೊರಗೆಸೆಯುತ್ತೇವೆ.

ಈ ಪ್ರಕ್ರಿಯೆಯಲ್ಲಿ ಪರಿಸರದ ಮೇಲೆ ಭಾರೀ ದುಷ್ಪರಿಣಾಮವನ್ನೂ ಉಂಟುಮಾಡುತ್ತೇವೆ!

ನಿಜ, ಮನೆಯಿಂದಾಚೆ ಹೋಗುವ ಇಲೆಕ್ಟ್ರಾನಿಕ್ ಉತ್ಪನ್ನಗಳು ಮುಂದೆ ಏನಾಗುತ್ತವೆ ಎನ್ನುವುದರ ಬಗ್ಗೆ ನಾವು ಯಾರೂ ತಲೆಕೆಡಿಸಿಕೊಳ್ಳುವುದೇ ಇಲ್ಲ. ನನ್ನ-ನಿಮ್ಮಂತಹ ಸಾಮಾನ್ಯರಷ್ಟೇ ಅಲ್ಲ, ಇಂತಹ ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ-ಬಿಸಾಡುವ ಸಂಸ್ಥೆಗಳೂ ಈ ಬಗ್ಗೆ ವಹಿಸುವ ಕಾಳಜಿ ಅಷ್ಟಕ್ಕಷ್ಟೇ.

ಹೀಗಾಗಿಯೇ ಇಂತಹ ಹಳೆಯ, ನಿರುಪಯುಕ್ತ ಇಲೆಕ್ಟ್ರಾನಿಕ್ ಉತ್ಪನ್ನಗಳು ಈಗೊಂದು ದೊಡ್ಡ ಸಮಸ್ಯೆಯಾಗಿ ಬೆಳೆದುನಿಂತಿವೆ: ಅನೇಕರ ಆರೋಗ್ಯ ಹಾಳುಮಾಡುತ್ತಿವೆ, ನಮ್ಮ ಭೂಮಿಗೇ ದೊಡ್ಡದೊಂದು ತಲೆನೋವು ತಂದಿಟ್ಟಿವೆ.

ಇದು ಹೇಗೆಂದು ತಿಳಿದುಕೊಳ್ಳಲು ನಮಗೆಲ್ಲ ಪರಿಚಯವಿರುವ ಕಂಪ್ಯೂಟರನ್ನೋ ಮೊಬೈಲ್ ಫೋನನ್ನೋ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಅವುಗಳಲ್ಲಿ ಬಹುದೊಡ್ಡ ಸಂಖ್ಯೆಯ ಬಿಡಿಭಾಗಗಳಿರುತ್ತವೆ, ಮತ್ತು ಅಂತಹ ಪ್ರತಿಯೊಂದು ಬಿಡಿಭಾಗವನ್ನೂ ಪ್ಲಾಸ್ಟಿಕ್ಕಿನಿಂದ ಚಿನ್ನದವರೆಗೆ ಅನೇಕ ವಸ್ತುಗಳನ್ನು ಬಳಸಿ ರೂಪಿಸಲಾಗಿರುತ್ತದೆ. ನಾವು ಗಮನಿಸದ ಅಂಶವೆಂದರೆ ಈ ವಸ್ತುಗಳ ಪೈಕಿ ಅನೇಕ ವಿಷಕಾರಿ ಅಂಶಗಳೂ ಇರುತ್ತವೆ. ಪಾದರಸ, ಸೀಸ, ಕ್ಯಾಡ್ಮಿಯಂ, ಪಿವಿಸಿ - ಹೀಗೆ ಸಾಗುವ ಈ ಹೆಸರುಗಳ ಪಟ್ಟಿಯಲ್ಲಿ ನಮಗೆ ಅಷ್ಟಾಗಿ ಪರಿಚಯವಿರದ, ಆದರೆ ಆರೋಗ್ಯಕ್ಕೆ ತೀವ್ರ ಹಾನಿಮಾಡಬಲ್ಲ ರಾಸಾಯನಿಕಗಳೂ ಇರುತ್ತವೆ.

ಹೀಗಾಗಿ ಬೇರಾವುದೋ ತ್ಯಾಜ್ಯದಂತೆ ಇ-ಕಸವನ್ನು ಸುಮ್ಮನೆ ಎಸೆದುಬಿಡಲಾಗುವುದಿಲ್ಲ. ಉಪಯುಕ್ತ ವಸ್ತುಗಳನ್ನು (ಉದಾ: ಚಿನ್ನ, ತಾಮ್ರ) ಅದರಿಂದ ಬೇರ್ಪಡಿಸಿ ಮರುಬಳಕೆ ಮಾಡುವುದು, ಹಾಗೂ ನಿರುಪಯುಕ್ತ ಭಾಗಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಪರಿಸರದ ದೃಷ್ಟಿಯಿಂದ ಮಾತ್ರವಲ್ಲ, ಆರ್ಥಿಕವಾಗಿಯೂ ಸಾಕಷ್ಟು ಲಾಭದಾಯಕ. ಅಷ್ಟೇ ಅಲ್ಲ, ನವೀಕರಿಸಲಾಗದ ಸಂಪನ್ಮೂಲಗಳ (ಉದಾ: ಗ್ಯಾಲಿಯಂ, ಇಂಡಿಯಂ ಮುಂತಾದ ವಿರಳ ಧಾತುಗಳು, ಅಂದರೆ ರೇರ್ ಅರ್ಥ್ ಎಲಿಮೆಂಟ್ಸ್) ದೃಷ್ಟಿಯಿಂದ ನೋಡಿದರೆ ಮರುಬಳಕೆ ಅನಿವಾರ್ಯವೂ ಹೌದು.

ಆದರೆ ಇ-ಕಸ ನಿರ್ವಹಣೆಯ ಕ್ಷೇತ್ರದಲ್ಲಿ ನೈಜ ಪರಿಸ್ಥಿತಿ ಬೇರೆಯೇ ಇದೆ. ಬಹಳಷ್ಟು ಕಡೆಗಳಲ್ಲಿ ಇ-ಕಸದ ನಿರ್ವಹಣೆಗೆ ಸೂಕ್ತ ವ್ಯವಸ್ಥೆಯೇ ಇಲ್ಲ. ಹೀಗಾಗಿ ಉತ್ಪತ್ತಿಯಾಗುವ ಇ-ಕಸದ ಬಹುಪಾಲಿನ ಮರುಬಳಕೆ ಅತ್ಯಂತ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಇಲೆಕ್ಟ್ರಾನಿಕ್ ತ್ಯಾಜ್ಯದಲ್ಲಿರುವ ವಿಷಕಾರಿ ಅಂಶಗಳ ಬಗ್ಗೆ ಗಮನವನ್ನೇ ನೀಡದ ಈ ನಿರ್ವಹಣೆಯಲ್ಲಿ ಪರಿಸರದ ಬಗೆಗಾಗಲಿ, ಕೆಲಸಗಾರರ ಆರೋಗ್ಯದ ಬಗೆಗಾಗಲಿ ಯಾವ ಕಾಳಜಿಯೂ ಕಾಣಸಿಗುವುದಿಲ್ಲ.

ತೀರಾ ಕಡಿಮೆ ಸಂಬಳಕ್ಕೆ ದುಡಿಯುವ, ಬಹುತೇಕ ಯಾವುದೇ ತರಬೇತಿಯನ್ನೂ ಪಡೆಯದ ಕೆಲಸಗಾರರು ಇಲೆಕ್ಟ್ರಾನಿಕ್ ಕಸದ ನಿರ್ವಹಣೆಯಲ್ಲಿ ತೊಡಗಿಕೊಂಡು ಅತ್ಯಂತ ಅವೈಜ್ಞಾನಿಕ ಕ್ರಮಗಳನ್ನು ಬಳಸಿ ಇ-ಕಸದಿಂದ ಬೆಲೆಬಾಳುವ ಪದಾರ್ಥಗಳನ್ನು ಬೇರ್ಪಡಿಸಲು ಪ್ರಯತ್ನಿಸುತ್ತಾರೆ. ಈ ಪೈಕಿ ಪ್ಲಾಸ್ಟಿಕ್-ಪಿವಿಸಿ ಇತ್ಯಾದಿಗಳಿಂದ ತಯಾರಾದ ಭಾಗಗಳಿಗೆ ಅವರು ಬೆಂಕಿಹಚ್ಚಿ ಸುಟ್ಟಾಗ ತಾಮ್ರವನ್ನೋ ಇನ್ನಾವುದೋ ಲೋಹವನ್ನೋ ಬೇರ್ಪಡಿಸುವುದು ಸುಲಭವಾಗುತ್ತದೆ ನಿಜ, ಆದರೆ ಅದೇ ಸಮಯದಲ್ಲಿ ವಿಷಕಾರಿ ರಾಸಾಯನಿಕಗಳು ನಮ್ಮ ವಾತಾವರಣವನ್ನು ಕಲುಷಿತಗೊಳಿಸುತ್ತವೆ. ಈ ಪ್ರಯತ್ನದ ನಂತರ ಅಳಿದುಳಿದ ನಿರುಪಯುಕ್ತ ಭಾಗಗಳನ್ನು ಬೇಕಾಬಿಟ್ಟಿಯಾಗಿ ಎಸೆದರೆಂದರೆ ಅದರಲ್ಲಿನ ವಿಷಪದಾರ್ಥಗಳು ಅಂತರ್ಜಲಕ್ಕೆ ಸೇರಿದರೂ ಸೇರಿದವೇ.

ಹಾಗಾಗಿ ವಿಶ್ವದಾದ್ಯಂತ ಇ-ಕಸ ನಿರ್ವಹಣೆಯ ಪ್ರಕ್ರಿಯೆಯನ್ನು ಹೆಚ್ಚು ಸಮರ್ಥವನ್ನಾಗಿ ಮಾಡಬೇಕಾದ್ದು ಇಂದಿನ ಅಗತ್ಯವಷ್ಟೇ ಅಲ್ಲ, ಅನಿವಾರ್ಯವೂ ಆಗಿದೆ. ಇದು ಇಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಯಿಂದ ಪ್ರಾರಂಭಿಸಿ ನಿವೃತ್ತಿಯಾದಾಗ ಅವನ್ನು ಮನೆಯಿಂದ ಆಚೆಹಾಕುವವರೆಗೆ ಪ್ರತಿಯೊಂದು ಹಂತದಲ್ಲೂ ಆಗಬೇಕಾದ ಕೆಲಸ.

ಮೊದಲ ಬದಲಾವಣೆಯಾಗಬೇಕಿರುವುದು ಇಲೆಕ್ಟ್ರಾನಿಕ್ ಉಪಕರಣಗಳ ವಿನ್ಯಾಸದ ಪ್ರಕ್ರಿಯೆಯಲ್ಲೇ ಎಂದು ತಜ್ಞರು ಹೇಳುತ್ತಾರೆ. ಉಪಕರಣಗಳ ವಿನ್ಯಾಸ ಮರುಬಳಕೆಗೆ ಪೂರಕವಾಗಿದ್ದರೆ ಅವುಗಳ ವಿಲೇವಾರಿ ಅಷ್ಟರಮಟ್ಟಿಗೆ  ಸುಲಭವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ವಿಷಪದಾರ್ಥಗಳ ಬದಲು ಪರಿಸರ ಸ್ನೇಹಿ ಸಾಮಗ್ರಿಗಳ ಬಳಕೆಯೂ ಈ ನಿಟ್ಟಿನಲ್ಲಿ ನೆರವಾಗಬಲ್ಲದು. ಉಪಕರಣಗಳ ನಿರ್ಮಾತೃಗಳೇ ತಮ್ಮ ಹಳೆಯ ಉತ್ಪನ್ನಗಳನ್ನು ಮರಳಿ ಪಡೆಯುವ ಪರಿಣಾಮಕಾರಿ ವ್ಯವಸ್ಥೆ ಬಂದರೆ ಅದೂ ಬಹುದೊಡ್ಡ ಸಾಧನೆಯಾಗಬಲ್ಲದು. ಹಾಗೆಯೇ ಬಳಕೆದಾರರು ಕೂಡ ತಮಗೆ ಬೇಡವಾದ ವಸ್ತುಗಳನ್ನು ವಿಲೇವಾರಿ ಮಾಡುವಾಗ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆಮಾಡುತ್ತಾರೆ.

ಮೇ ೩೦, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge