ಶುಕ್ರವಾರ, ಮೇ 2, 2014

ಕಪ್ಪು ಚೌಕಗಳ ಕ್ಯೂಆರ್ ಕೋಡ್

ಟಿ. ಜಿ. ಶ್ರೀನಿಧಿ

ಈಚೆಗೆ ಅನೇಕ ಜಾಹೀರಾತುಗಳಲ್ಲಿ, ಜಾಲತಾಣಗಳಲ್ಲಿ ನಮಗೊಂದು ವಿಶೇಷ ಅಂಶ ಕಾಣಸಿಗುತ್ತದೆ: ಹೆಚ್ಚಿನ ಮಾಹಿತಿಗಾಗಿ ಈ ಸಂಕೇತವನ್ನು ಸ್ಕ್ಯಾನ್ ಮಾಡಿ ಎನ್ನುವ ಸಂದೇಶದ ಜೊತೆಗೆ ಅಲ್ಲೊಂದು ಚಿತ್ರವಿಚಿತ್ರ ವಿನ್ಯಾಸದ ಕಪ್ಪನೆಯ ಚೌಕ ಇರುತ್ತದೆ. ಇಜ್ಞಾನ ಡಾಟ್ ಕಾಮ್‌ನಲ್ಲೇ ನೋಡಿ, ಪುಟದ ಬಲಭಾಗದಲ್ಲಿ "ನಿಮ್ಮ ಆಂಡ್ರಾಯ್ಡ್ ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಇಜ್ಞಾನ ಆಪ್ ಇನ್‌ಸ್ಟಾಲ್ ಮಾಡಲು ಮೇಲಿನ ಕೋಡ್ ಸ್ಕ್ಯಾನ್ ಮಾಡಿ!" ಎನ್ನುವ ಸಂದೇಶ ಇದೆ!

ಅರೆ, ಇದೆಂತಹ ಸಂಕೇತ? ಇದನ್ನು ಸ್ಕ್ಯಾನ್ ಮಾಡುವುದು ಹೇಗೆ? ಸ್ಕ್ಯಾನ್ ಮಾಡಿದಾಗ ಏನಾಗುತ್ತದೆ? ಎನ್ನುವ ಪ್ರಶ್ನೆ ನಮ್ಮಲ್ಲಿ ಅನೇಕರನ್ನು ಕಾಡಿರಬಹುದು.

ಈ ಸಂಕೇತದ ಹೆಸರು ಕ್ಯೂಆರ್ ಕೋಡ್ ಎಂದು. ಇಲ್ಲಿ ಕ್ಯೂಆರ್ ಎನ್ನುವುದು 'ಕ್ವಿಕ್ ರೆಸ್ಪಾನ್ಸ್' ಎಂಬ ಹೆಸರಿನ ಹ್ರಸ್ವರೂಪ. ಅಂಗಡಿಯಲ್ಲಿರುವ ಪದಾರ್ಥಗಳ ಮೇಲೆ ನಾವೆಲ್ಲ ಬಾರ್‌ಕೋಡ್‌ಗಳನ್ನು ನೋಡುತ್ತೇವಲ್ಲ, ಕ್ಯೂಆರ್ ಕೋಡ್ ಅದರದೇ ಬೇರೆಯದೊಂದು ರೂಪ.
ಒಂದೇ ಆಯಾಮದ ಸಾಮಾನ್ಯ ಬಾರ್‌ಕೋಡ್‌ಗಳಿಗಿಂತ ಕೊಂಚ ಭಿನ್ನವಾಗಿರುವ ಇವು ಎರಡು ಆಯಾಮದ ಸಂಕೇತಗಳು ಎನ್ನುವುದೇ ವಿಶೇಷ. ಸಾಮಾನ್ಯ ಬಾರ್‌ಕೋಡ್‌ಗಳಿಗಿಂತ ಹೆಚ್ಚಿನ ಪ್ರಮಾಣದ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವುದು ಕ್ಯೂಆರ್ ಕೋಡ್‌ಗಳ ಮತ್ತೊಂದು ವೈಶಿಷ್ಟ್ಯ.

ಕ್ಯೂಆರ್ ಕೋಡ್‌ಗಳಲ್ಲಿರುವ ಪುಟ್ಟಪುಟ್ಟ ಚೌಕಗಳು ನಿರ್ದಿಷ್ಟ ಮಾಹಿತಿಯನ್ನು ಪ್ರತಿನಿಧಿಸಬಲ್ಲವು. ಅಂಗಡಿಯಲ್ಲಿಟ್ಟ ವಸ್ತುಗಳ ವಿವರಣಾ ಚೀಟಿಯಿಂದ ಪ್ರಾರಂಭಿಸಿ ಜಾಹೀರಾತುಗಳವರೆಗೆ ಕ್ಯೂಆರ್ ಕೋಡ್‌ಗಳನ್ನು ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಇವು ಜಾಲತಾಣಗಳ ವಿಳಾಸವನ್ನು ಸೂಚಿಸಲು ಬಳಕೆಯಾಗುತ್ತವೆ. ಇಜ್ಞಾನ ಡಾಟ್ ಕಾಮ್ ಉದಾಹರಣೆಯನ್ನೇ ತೆಗೆದುಕೊಂಡರೆ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಇಜ್ಞಾನ ಆಪ್ ಇನ್‌ಸ್ಟಾಲ್ ಮಾಡಲು ಅಗತ್ಯವಾದ ಕಡತದ ವಿಳಾಸವನ್ನು ಈ ಪುಟದ ಬಲಭಾಗದಲ್ಲಿರುವ ಕೋಡ್ ಪ್ರತಿನಿಧಿಸುತ್ತದೆ.

ನಮ್ಮ ಸಂಪರ್ಕ ವಿವರಗಳನ್ನು (ಇಮೇಲ್, ವೆಬ್‌ಸೈಟ್, ದೂರವಾಣಿ ಸಂಖ್ಯೆ ಇತ್ಯಾದಿ) ಪ್ರತಿನಿಧಿಸಲು ಕ್ಯೂಆರ್ ಕೋಡ್ ರೂಪಿಸಿಕೊಂಡು ಅದನ್ನು ನಮ್ಮ ವಿಸಿಟಿಂಗ್ ಕಾರ್ಡಿನಲ್ಲಿ ಮುದ್ರಿಸಿಕೊಳ್ಳುವುದೂ ಸಾಧ್ಯ. ಇಂದಿನ ದಿನಗಳಲ್ಲಿ ಟೀಶರ್ಟಿನ ಮೇಲೂ ಕ್ಯೂಆರ್ ಕೋಡ್‌ಗಳು ಕಾಣಸಿಗುವುದು ಅಸಾಧ್ಯವೇನಲ್ಲ!

ಕ್ಯೂಆರ್ ಕೋಡ್‌ಗಳು ಮೊದಲ ಬಾರಿ ಬಳಕೆಯಾದದ್ದು ಆಟೊಮೊಬೈಲ್ ಕ್ಷೇತ್ರದಲ್ಲಿ. ಕಾರ್ಖಾನೆಯೊಳಗೆ ಬಿಡಿಭಾಗಗಳ ಸಾಗಾಣಿಕೆಯ ಮೇಲೆ ನಿಗಾ ಇಡಲು ಟೊಯೋಟಾದ ಅಂಗಸಂಸ್ಥೆಯಾದ ಡೆನ್ಸೋ ವೇವ್ ೧೯೯೪ರಲ್ಲಿ ಈ ಸಂಕೇತವನ್ನು ಸೃಷ್ಟಿಸಿತು. ಸ್ಕ್ಯಾನ್ ಮಾಡಿದಾಗ ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ಆದಷ್ಟೂ ಕಡಿಮೆ ಸಮಯದಲ್ಲಿ ಓದುವುದು ಸಾಧ್ಯವಾಗಬೇಕು ಎನ್ನುವುದು ಈ ಸಂಕೇತದ ಸೃಷ್ಟಿಯ ಹಿಂದಿದ್ದ ಉದ್ದೇಶ. ಬಹಳ ಬೇಗ ಜನಪ್ರಿಯವಾದ ಕ್ಯೂಆರ್ ಕೋಡ್ ಆಟೊಮೊಬೈಲ್ ಮಾತ್ರವಲ್ಲದೆ ಅನೇಕ ಇತರ ಕ್ಷೇತ್ರಗಳಲ್ಲೂ ಬಳಕೆಯಾಗುತ್ತಿದೆ.

ಕ್ಯೂಆರ್ ಕೋಡ್‌ಗಳಲ್ಲಿ ಅಡಕವಾಗಿರುವ ಮಾಹಿತಿಯನ್ನು ಓದಲು ಮೊದಲಿಗೆ ಕ್ಯೂಆರ್ ಕೋಡ್ ರೀಡರ್ ಉಪಕರಣಗಳನ್ನು ಬಳಸಲಾಗುತ್ತಿತ್ತು. ಆದರೆ ಈಗ ಬಹುತೇಕ ಎಲ್ಲ ಆಧುನಿಕ ಮೊಬೈಲ್ ದೂರವಾಣಿಗಳಲ್ಲೂ ಈ ಸಂಕೇತಗಳನ್ನು ಗುರುತಿಸುವ ತಂತ್ರಾಂಶ ಲಭ್ಯವಿರುವುದರಿಂದ ಪ್ರತ್ಯೇಕ ಉಪಕರಣದ ಆವಶ್ಯಕತೆ ಇಲ್ಲ.

ಮೊಬೈಲ್ ದೂರವಾಣಿ ಬಳಸಿ ಕ್ಯೂಆರ್ ಸಂಕೇತಗಳನ್ನು ಸ್ಕ್ಯಾನ್ ಮಾಡುವುದು ಬಹಳ ಸುಲಭ. ಮೊದಲಿಗೆ ನಿಮ್ಮ ದೂರವಾಣಿ ಉಪಕರಣದಲ್ಲಿ ಕ್ಯೂಆರ್ ಕೋಡ್ ರೀಡರ್ ತಂತ್ರಾಂಶವನ್ನು ಅಳವಡಿಸಿಕೊಳ್ಳಿ (ನಿಮ್ಮ ದೂರವಾಣಿಗೆ ಲಭ್ಯವಿರುವ ತಂತ್ರಾಂಶದ ಬಗೆಗೆ ತಿಳಿದುಕೊಳ್ಳಲು ಯಾವುದೇ ಸರ್ಚ್ ಇಂಜನ್ ಮೊರೆಹೋಗಬಹುದು). ಆ ತಂತ್ರಾಂಶವನ್ನು ಚಾಲೂ ಮಾಡಿ ನಿಮ್ಮ ದೂರವಾಣಿಯನ್ನು ಯಾವುದೇ ಕ್ಯೂಆರ್ ಕೋಡ್‌ನತ್ತ ತಿರುಗಿಸಿದರೆ ಸಾಕು, ಆ ತಂತ್ರಾಂಶ ಕ್ಯೂಆರ್ ಸಂಕೇತವನ್ನು ಅರ್ಥೈಸಿಕೊಂಡು ಅದರಲ್ಲಿ ಸೂಚಿಸಲಾಗಿರುವ ಕೆಲಸ ಮಾಡುತ್ತದೆ.

ಕಾರಿನ ಜಾಹೀರಾತಿನ ಜೊತೆಗಿರುವ ಕ್ಯೂಆರ್ ಕೋಡ್ ನಿಮ್ಮನ್ನು ಯೂಟ್ಯೂಬ್‌ನಲ್ಲಿರುವ ಆ ಕಾರಿನ ವೀಡಿಯೋದತ್ತ ಕೊಂಡೊಯ್ಯಬಹುದು; ಯಾವುದೋ ಜಾಲತಾಣದಲ್ಲಿರುವ ಸಂಕೇತ ಸ್ಕ್ಯಾನ್ ಮಾಡಿದರೆ ನಿಮ್ಮ ಮೊಬೈಲಿನಲ್ಲಿ ಆ ತಾಣದ ಮೊಬೈಲ್ ಸ್ನೇಹಿ ಆವೃತ್ತಿ ತೆರೆದುಕೊಳ್ಳಬಹುದು; ಇನ್ನಾವುದೋ ಸಂಕೇತ ನಿಮ್ಮ ಚಾಟಿಂಗ್ ಗೆಳೆಯರ ಪಟ್ಟಿಗೆ ಹೊಸ ಸ್ನೇಹಿತರನ್ನು ಸೇರಿಸಿಕೊಳ್ಳಲು ನೆರವಾಗಬಹುದು; ಹೊಸದಾಗಿ ಪರಿಚಯವಾದವರ ವಿಸಿಟಿಂಗ್ ಕಾರ್ಡ್ ಕೇಳಿದರೆ ಅವರು "ವಿಸಿಟಿಂಗ್ ಕಾರ್ಡ್ ಯಾಕೆ, ನನ್ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಕೊಳ್ಳಿ; ನನ್ನ ಸಂಪರ್ಕದ ವಿವರಗಳೆಲ್ಲ ತಕ್ಷಣವೇ ನಿಮ್ಮ ಮೊಬೈಲಿಗೆ ಸೇರಿಕೊಳ್ಳುತ್ತವೆ" ಎಂದೂ ಹೇಳಬಹುದು!

ಮೇ ೨, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

7 ಕಾಮೆಂಟ್‌ಗಳು:

ಪರಶು.., ಹೇಳಿದರು...

ಡಿಯರ್ ಸರ್...
ಕ್ಯೂ.ಆರ್.ಕೋಡ್ ಬಗ್ಗೆ ಈ ಲೇಖನದ ಮೂಲಕ ಉತ್ತಮವಾದ ಮಾಹಿತಿ ನೀಡಿದ್ದೀರಿ.
ಧನ್ಯವಾದಗಳು.
ಕ್ಯೂ.ಆರ್.ಕೋಡ್‍ ನಿಂದಲೇ ನಿಮ್ಮ ಇಜ್ಞಾನ ಮೊಬೈಲ್ ಆಪ್ ಅನ್ನು ಡೌನ್‍ಲೋಡ್ ಮಾಡಿಕೊಂಡೆ.
ಆದರೆ
ನಾನು ಬಳಸುತ್ತಿರುವುದು ಅನ್‍ರೂಟೆಡ್‍ ಮೊಬೈಲ್ ಹ್ಯಾಂಡ್‍ಸೆಟ್‍. ಅದರಲ್ಲಿ ಇನ್‍ಬಿಲ್ಟ್ ಆಗಿ ಕನ್ನಡ ಅಕ್ಷರ ಶೈಲಿಯನ್ನು ಅಳವಡಿಸಲಾಗಿಲ್ಲ. ಆದ್ದರಿಂದ ನಿಮ್ಮ ಇಜ್ಞಾನ ತಾಣದ ಕನ್ನಡ ಅಕ್ಷರಗಳಾವುವೂ ನನಗೆ ಗೋಚರವಾಗಲಾರವು. ಇದು ನಾನು ಇತ್ತೀಚೆಗೆ ಕೊಂಡ ಮೊಬೈಲ್ ಆಗಿದ್ದರಿಂದ ಹಾಗೂ ಅದರ ವಾರಂಟಿ ಅವಧಿ ಇನ್ನೂ ಮುಗಿದಿಲ್ಲವಾದ್ದರಿಂದ ರೂಟೆಡ್‍ ಹ್ಯಾಂಡ್‍ಸೆಟ್‍ ಆಗಿ ಪರಿವರ್ತಿಸಿ ಕನ್ನಡ ಅಕ್ಷರ ಶೈಲಿ ಇನ್‍ಸ್ಟಾಲ್ ಮಾಡುವ ಗೋಜಿಗೆ ಹೋಗಿಲ್ಲ.
ಆದರೂ
ಕನ್ನಡ ಓದಬೇಕು, ಬರೆಯಬೇಕೆಂಬ ಮಹದಾಸೆಯಿಂದ ಯು.ಸಿ.ಬ್ರೌಸರ್, ಒಪೆರಾ ಮಿನಿ ಯಂತಹ ಬ್ರೌಸರ್ ಗಳ ಮೂಲಕ ಫೆಸ್‍ಬುಕ್ ಹಾಗೂ ಇನ್ನಿತರ ಕನ್ನಡದ ಜಾಲತಾಣಗಳನ್ನು ವೀಕ್ಷಿಸುತ್ತಿದ್ದೇನೆ.
ಇದಲ್ಲದೆ
ಸಂಪದ, ಒನ್ ಇಂಡಿಯಾ ದಂತಹ ಜಾಲತಾಣಗಳನ್ನು ನೇರವಾಗಿ ತೆರೆದರೂ ಅಲ್ಲಿನ ಅಕ್ಷರ ಶೈಲಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಹೀಗೇಕೆ?
ನಿಮ್ಮ ಇಜ್ಞಾನ ವನ್ನೂ ಅನ್‍ರೂಟೆಡ್ ಮೊಬೈಲ್‍ಗಳಿಗೆ, ಕನ್ನಡ ಅಕ್ಷರವಿನ್ಯಾಸ ಇನ್‍ಸ್ಟಾಲ್‍ ಆಗಿರದ ಮೊಬೈಲ್‍ಗಳಿಗೆ ಸರಿ ಹೊಂದುವಂತೆ ರೂಪಿಸಬಹುದಲ್ಲವೇ..?

ವಂದನೆಗಳು
ಪರಶು ಸಾಗರ

Srinidhi ಹೇಳಿದರು...

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

Unknown ಹೇಳಿದರು...

ನಮಸ್ತೆ ಸರ್
ಕ್ಯೂಅರ್ ಕೋಡ್ ನ ಮಾಹಿತಿ ಪ್ರಕಟಿಸಿದ್ದಕ್ಕಾಗಿ ದನ್ಯವಾದಗಳು ಆದರೆ ನಮ್ಮದೆ ಕ್ಯೂಅರ್ ಕೋಡ್ ಅನ್ನು ತಯಾರಿಸುವುದು ಹೇಗೆ ಸ್ವಲ್ಪ ತಿಳಿಸಿ

Srinidhi ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Srinidhi ಹೇಳಿದರು...

ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಗೂಗಲ್‌ನಲ್ಲಿ 'qr code generator' ಎಂದು ಹುಡುಕಿನೋಡಿ, ಕ್ಯೂಆರ್ ಕೋಡ್ ತಯಾರಿಸುವ ಅನೇಕ ಉಚಿತ ಸೌಲಭ್ಯಗಳು ದೊರಕುತ್ತವೆ.

ಧನಂಜಯ ಸಿಂಹ ಹೇಳಿದರು...

ಕ್ಯೂರ್ ಕೋಡ್ ಸ್ಕ್ಯಾನ್ ಮಾಡಲು ನೆಟ್ ಅವಶ್ಯಕತೆ ಬೇಕೇ

Srinidhi ಹೇಳಿದರು...

ಪ್ರತಿಕ್ರಿಯೆಗಾಗಿ ಧನ್ಯವಾದ ಧನಂಜಯ್. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಅಂತರಜಾಲ ಸಂಪರ್ಕ ಬೇಕಿಲ್ಲ. ನಿಮ್ಮ ಮೊಬೈಲಿನಲ್ಲೊಂದು ಆಪ್ ಇದ್ದರೆ ಸಾಕು.

badge