ಶುಕ್ರವಾರ, ಏಪ್ರಿಲ್ 25, 2014

ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್

ಟಿ. ಜಿ. ಶ್ರೀನಿಧಿ

ತಂತ್ರಾಂಶವನ್ನು ಸಿದ್ಧಪಡಿಸುವ ಕೆಲಸವೆಂದರೆ ಬರಿಯ ಪ್ರೋಗ್ರಾಮಿಂಗ್ ಅಷ್ಟೇ ಅಲ್ಲವೆಂದು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆ ನಮಗೆ ತಿಳಿಸಿಕೊಡುತ್ತದೆ. ತಂತ್ರಾಂಶ ಅಭಿವೃದ್ಧಿಯ ಈ ಪೂರ್ಣ ಪ್ರಕ್ರಿಯೆ ಸಾಕಷ್ಟು ಕ್ಲಿಷ್ಟವೇ ಸರಿ.

ಮಹತ್ವದ ಕೆಲಸಗಳಲ್ಲಿ ಬಳಕೆಗೆಂದು ತಂತ್ರಾಂಶಗಳನ್ನು ರೂಪಿಸುವಾಗ ಕೆಲಸದ ಅಗಾಧತೆ, ಸಂಕೀರ್ಣ ವಿನ್ಯಾಸ ಇವೆಲ್ಲ ಸೇರಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಇನ್ನಷ್ಟು ಕ್ಲಿಷ್ಟವಾಗಿಬಿಡುತ್ತದೆ. ನಿಗದಿತ ಅವಧಿಯೊಳಗೆ ನಿರ್ದಿಷ್ಟ ವೆಚ್ಚದಲ್ಲಿ ಬಳಕೆದಾರರ ಅಗತ್ಯಗಳಿಗೆ ಸರಿಹೊಂದುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕಾದ ಸವಾಲನ್ನು ಎದುರಿಸುವ ಈ ಕೆಲಸ ಸುಲಭವೇನಲ್ಲ.

ಇಂತಹ ಸನ್ನಿವೇಶಗಳಲ್ಲಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಒಂದು ನಿರ್ದಿಷ್ಟ ಯೋಜನೆಗೆ ಅನುಗುಣವಾಗಿ ನಡೆದರೆ ಮಾತ್ರ ಅದು ಯಶಸ್ವಿಯಾಗುವುದು ಸಾಧ್ಯ. ಹಾಗೊಂದು ಯೋಜನೆಯನ್ನು ರೂಪಿಸಿ ಅದರಂತೆ ತಂತ್ರಾಂಶ ಅಭಿವೃದ್ಧಿಯ ಕೆಲಸ ಕೈಗೊಳ್ಳಲು ನೆರವಾಗುವುದು 'ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್' ಎಂಬ ಪರಿಕಲ್ಪನೆ.
ನಿರ್ದಿಷ್ಟ ಅವಧಿಯಲ್ಲಿ ನಡೆಯುವ ತಂತ್ರಾಂಶವೊಂದರ ರಚನೆ, ಬದಲಾವಣೆ ಅಥವಾ ಉನ್ನತೀಕರಣದ ಕೆಲಸವನ್ನು ಪ್ರಾಜೆಕ್ಟ್ ಎಂದು ಕರೆಯಬಹುದು. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸಮಾಡುವವರು ಪ್ರಾಜೆಕ್ಟುಗಳ ಬಗ್ಗೆ ಮಾತನಾಡುತ್ತಾರಲ್ಲ, ಅವೂ ಇಂತಹವೇ.

ಯಾವುದೇ ಪ್ರಾಜೆಕ್ಟಿಗೆ ಸಾಕಷ್ಟು ನಿರ್ಬಂಧಗಳಿರುತ್ತವೆ:  ಸಮಯ, ವೆಚ್ಚ, ವ್ಯಾಪ್ತಿ - ಹೀಗೆ. ಈ ಎಲ್ಲ ನಿರ್ಬಂಧಗಳನ್ನೂ ಅರಿತುಕೊಂಡು ನಮ್ಮ ಕೆಲಸವನ್ನು ಸರಿಯಾಗಿ ನಿಭಾಯಿಸಿದಾಗಲಷ್ಟೆ ಪ್ರಾಜೆಕ್ಟ್ ಯಶಸ್ವಿಯಾಗುವುದು ಸಾಧ್ಯ. ಇದು ಸಾಧ್ಯವಾಗುವ ನಿಟ್ಟಿನಲ್ಲಿ ನೆರವು ನೀಡುವುದು ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನ ಉದ್ದೇಶ.

ಬಹುತೇಕ ಪ್ರಾಜೆಕ್ಟುಗಳಲ್ಲಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕೆಲಸವನ್ನು ಒಬ್ಬ ವ್ಯಕ್ತಿಗೆ (ಪ್ರಾಜೆಕ್ಟ್ ಮ್ಯಾನೇಜರ್) ವಹಿಸಲಾಗಿರುತ್ತದೆ. ದೊಡ್ಡ ಪ್ರಾಜೆಕ್ಟುಗಳಲ್ಲಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟಿಗೆಂದೇ ಪ್ರತ್ಯೇಕ ತಂಡಗಳಿರುವುದೂ ಉಂಟು.

ನಮ್ಮ ಪ್ರಾಜೆಕ್ಟ್ ಯಶಸ್ವಿಯಾಗಬೇಕಾದರೆ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವುದನ್ನು ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಪರಿಕಲ್ಪನೆ ಸೂಚಿಸುತ್ತದೆ. ಅಂತಹ ಅಂಶಗಳಲ್ಲಿ ಮೊದಲನೆಯದು ಪ್ರಾಜೆಕ್ಟಿನ ವ್ಯಾಪ್ತಿ.

ಯಾವ ಪ್ರಾಜೆಕ್ಟಿಗೇ ಆದರೂ ಗ್ರಾಹಕರಿರುತ್ತಾರಲ್ಲ, ಆ ಪ್ರಾಜೆಕ್ಟಿನ ಉದ್ದೇಶ ನಿರ್ಧಾರವಾಗಬೇಕಿರುವುದು ಅವರೊಡನೆ ಸಂವಾದದ ನಂತರವೇ. ಹೀಗೆ ಪ್ರಾಜೆಕ್ಟಿನ ಉದ್ದೇಶಗಳನ್ನು ಅರಿತುಕೊಂಡ ನಂತರವಷ್ಟೇ ಅದರ ರೂಪುರೇಷೆಗಳು ಅಂತಿಮವಾಗುತ್ತವೆ. ಪ್ರಾಜೆಕ್ಟಿನ ಅಂಗವಾಗಿ ಏನೆಲ್ಲ ಕೆಲಸ ಮಾಡುತ್ತೇವೆ, ಏನೆಲ್ಲ ಮಾಡುವುದಿಲ್ಲ ಎನ್ನುವುದನ್ನೆಲ್ಲ ನಿಖರವಾಗಿ ಗುರುತಿಸುವ ಈ ರೂಪುರೇಷೆಗಳನ್ನೇ 'ಸ್ಕೋಪ್' ಅಥವಾ ವ್ಯಾಪ್ತಿ ಎಂದು ಕರೆಯುತ್ತಾರೆ.

ಪ್ರಾಜೆಕ್ಟಿನ ವ್ಯಾಪ್ತಿಯನ್ನು ಗುರುತಿಸುವ ಕೆಲಸ ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟಿನ ಬಹುಮುಖ್ಯ ಭಾಗ ಎನ್ನಬಹುದು. ಈ ವ್ಯಾಪ್ತಿಯನ್ನು ನಿಖರವಾಗಿ ಗುರುತಿಸುವುದು ಸಾಧ್ಯವಾದರೆ ಪ್ರಾಜೆಕ್ಟಿನ ಕೆಲಸ ಸರಾಗವಾಗುತ್ತದೆ. ಹಾಗಲ್ಲದೆ ಪ್ರಾಜೆಕ್ಟಿನ ವ್ಯಾಪ್ತಿ - ಹಾಗೂ ಅದರ ಅಂಗವಾಗಿ ಮಾಡಬೇಕಾದ ಕೆಲಸಗಳು (ಉದಾ: ತಂತ್ರಾಂಶದಲ್ಲಿ ಹೆಚ್ಚಿನ ಸೌಲಭ್ಯ ಸೇರಿಸುವುದು) - ಪದೇಪದೇ ಬದಲಾಗುತ್ತಿದ್ದರೆ ಅದನ್ನು ನಿಭಾಯಿಸುವುದೇ ಕಷ್ಟವಾಗಿಬಿಡುತ್ತದೆ. ಇದರಿಂದಾಗಿಯೇ ಪ್ರಾಜೆಕ್ಟಿನ ವ್ಯಾಪ್ತಿ ಆದಷ್ಟೂ ಬದಲಾಗದಂತೆ ನೋಡಿಕೊಳ್ಳುವುದು, ಹಾಗೂ ಒಂದೊಮ್ಮೆ ಬದಲಾವಣೆ ಅಗತ್ಯವಾದರೆ ಅದನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆಗಳನ್ನು ರೂಪಿಸಿಕೊಳ್ಳುವುದು  ಅತ್ಯಗತ್ಯ.

ಪ್ರಾಜೆಕ್ಟಿನ ವ್ಯಾಪ್ತಿಗೆ ಹೊಂದಿಕೊಂಡಂತೆ ಅದಷ್ಟೂ ಕೆಲಸವನ್ನು ಪೂರ್ಣಗೊಳಿಸಲು ಎಷ್ಟು ಸಮಯ ಹಾಗೂ ಹಣ ಬೇಕಾಗುತ್ತದೆ ಎನ್ನುವುದನ್ನು ಸರಿಯಾಗಿ ಅಂದಾಜಿಸಬೇಕಾದ್ದು ಕೂಡ ಅನಿವಾರ್ಯ. ಇವುಗಳಲ್ಲಿ ಯಾವ ಅಂದಾಜು ತಪ್ಪಿದರೂ ಪ್ರಾಜೆಕ್ಟಿನ ಮೇಲೆ ದುಷ್ಪರಿಣಾಮ ತಪ್ಪಿದ್ದಲ್ಲ. ಪ್ರಾಜೆಕ್ಟಿನ ವ್ಯಾಪ್ತಿ ದಿಢೀರನೆ ಜಾಸ್ತಿಯಾದರೂ ಅಷ್ಟೆ. ತಂತ್ರಾಂಶದಲ್ಲಿ ಇಷ್ಟು ಹೆಚ್ಚಿನ ಸೌಲಭ್ಯ ಸೇರಿಸಲು ಹೆಚ್ಚುವರಿಯಾಗಿ ಇಷ್ಟು ಸಮಯ ಮತ್ತು ಇಷ್ಟು ಹಣ ಬೇಕಾಗುತ್ತದೆ ಎಂದು ಅಂದಾಜಿಸುವಲ್ಲಿ ಎಡವಿದರೆ ಸಮಯ ಹಾಗೂ ಹಣದ ಕೊರತೆ ಕಾಣಿಸಿಕೊಳ್ಳಬಹುದು, ಪ್ರಾಜೆಕ್ಟ್ ನಿಭಾಯಿಸುವುದೇ ಕಷ್ಟವೆನಿಸುವ ಪರಿಸ್ಥಿತಿಯೂ ಸೃಷ್ಟಿಯಾಗಬಹುದು.

ಈ ಯಾವುದೇ ಕಾರಣದಿಂದ ಅಂದಾಜುಗಳು ತಪ್ಪಿದರೂ ಪ್ರಾಜೆಕ್ಟಿನ ಅಂಗವಾಗಿ ಸಿದ್ಧವಾಗುತ್ತಿರುವ ತಂತ್ರಾಂಶದ ಗುಣಮಟ್ಟದ ಮೇಲೆ ದುಷ್ಪರಿಣಾಮ ಖಂಡಿತ. ಆದ್ದರಿಂದಲೇ ಫಲಿತಾಂಶದ ಗುಣಮಟ್ಟದ ಮೇಲೆ ನಿಗಾವಹಿಸುವ ಹಾಗೂ ಅದನ್ನು ಉನ್ನತಮಟ್ಟದಲ್ಲಿ ಕಾಯ್ದುಕೊಳ್ಳಲು ಅಗತ್ಯ ಯೋಜನೆಗಳನ್ನು ರೂಪಿಸುವ ಕೆಲಸಗಳಿಗೂ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಪರಿಕಲ್ಪನೆಯಲ್ಲಿ ಪ್ರಮುಖ ಸ್ಥಾನ ಇದೆ.

ತಂತ್ರಾಂಶ ಅಭಿವೃದ್ಧಿಯ ಕೆಲಸಕ್ಕೆ ಸಾಕಷ್ಟು ಸಂಪನ್ಮೂಲಗಳು ಬೇಕು. ಪ್ರೋಗ್ರಾಮಿಂಗ್‌ನಲ್ಲಿ ಪರಿಣತರಾದ ತಜ್ಞರಿಂದ ಪ್ರಾರಂಭಿಸಿ ಪ್ರೋಗ್ರಾಮ್ ರಚನೆಗೆ ಬೇಕಾದ ಕಂಪ್ಯೂಟರ್ ಇತ್ಯಾದಿಗಳವರೆಗೆ ಇಂತಹ ಎಲ್ಲ ಸಂಪನ್ಮೂಲಗಳ ಅಗತ್ಯವನ್ನೂ ಯೋಜಿಸಿ ಸಮಯಕ್ಕೆ ಸರಿಯಾಗಿ ಅವೆಲ್ಲವೂ ಸಿದ್ಧವಿರುವಂತೆ ನೋಡಿಕೊಳ್ಳುವುದು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಅಂಗವಾಗಿ ನಡೆಯುವ ಇನ್ನೊಂದು ಕೆಲಸ.

ತಂತ್ರಾಂಶ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವವರ ಹಾಗೂ ತಂತ್ರಾಂಶದ ಬಳಕೆದಾರರ ನಡುವೆ ಸಂವಹನ ಸಮರ್ಪಕವಾಗಿದ್ದರೆ ಮಾತ್ರ ಪ್ರಾಜೆಕ್ಟ್ ಯಶಸ್ವಿಯಾಗುವುದು ಸಾಧ್ಯ. ಇದಕ್ಕೆ ತಕ್ಕ ಯೋಜನೆಯನ್ನು ರೂಪಿಸುವುದು ಕೂಡ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟಿನ ಇನ್ನೊಂದು ಅಂಗ. ತಂತ್ರಾಂಶದ ಬೇರೆಬೇರೆ ಭಾಗಗಳನ್ನು ರೂಪಿಸುತ್ತಿರುವವರ ನಡುವೆ, ಅಭಿವೃದ್ಧಿಯ ವಿಭಿನ್ನ ಹಂತಗಳನ್ನು ನಿರ್ವಹಿಸುತ್ತಿರುವವರ ನಡುವೆ ಸಮನ್ವಯ ಸಾಧಿಸುವುದೂ ಮುಖ್ಯವಾದ ಕೆಲಸವೇ. ತಂತ್ರಾಂಶ ಅಭಿವೃದ್ಧಿಯ ಕೆಲಸ ಯಶಸ್ವಿಯಾಗುವುದು ಎಲ್ಲ ತಂಡಗಳೂ ಒಟ್ಟಿಗೆ ದುಡಿದಾಗಲೇ ತಾನೆ?

ಇದೆಲ್ಲ ಅಂಶಗಳಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡರೂ ಅದನ್ನು ಯಶಸ್ವಿಯಾಗಿ ನಿಭಾಯಿಸಬೇಕಾದ್ದು ಇನ್ನೊಂದು ಮಹತ್ವದ ಕೆಲಸ. ಸಮಯಕ್ಕೆ ಸರಿಯಾಗಿ ಸಾಕಷ್ಟು ಸಂಖ್ಯೆಯ ಪ್ರೋಗ್ರಾಮಿಂಗ್ ತಜ್ಞರು ದೊರಕದಿದ್ದರೆ, ಅಂದುಕೊಂಡಷ್ಟು ಸಮಯದಲ್ಲಿ ಕೆಲಸ ಮುಗಿಯುವ ಲಕ್ಷಣ ಕಾಣದಿದ್ದರೆ, ಅಥವಾ ಇನ್ನಾವುದೇ ಅನಿರೀಕ್ಷಿತ ತೊಂದರೆ ಕಾಣಿಸಿಕೊಂಡರೂ ಅದನ್ನು ನಿಭಾಯಿಸಲು ಸಜ್ಜಾಗಿರಬೇಕು ಎಂದು ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಪರಿಕಲ್ಪನೆ ಹೇಳುತ್ತದೆ.

ಏಪ್ರಿಲ್ ೨೫, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge