ಬುಧವಾರ, ಏಪ್ರಿಲ್ 2, 2014

ರಜೆಯಲ್ಲಿ ಕಂಪ್ಯೂಟರಿನ ಗೆಳೆತನ ಬೆಳೆಸಿ!

ಟಿ. ಜಿ. ಶ್ರೀನಿಧಿ

ಕಳೆದ ಶತಮಾನದ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲಿ ಕಂಪ್ಯೂಟರಿನದು ಪ್ರಮುಖ ಸ್ಥಾನ. ಬಹುಶಃ ನಾವೆಲ್ಲ ಈ ಮಾತನ್ನು ಬೇಜಾರು ಬರುವಷ್ಟು ಬಾರಿ ಕೇಳಿಬಿಟ್ಟಿದ್ದೇವೆ. ಬಹಳ ಕಡಿಮೆ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ನಮ್ಮ ಬದುಕನ್ನೆಲ್ಲ ಆವರಿಸಿಕೊಂಡಿರುವ ಪರಿಯ ಬಗೆಗೆ ಕೇಳುವುದು-ಓದುವುದು ಹಾಗಿರಲಿ, ಅದರ ಅನುಭವವನ್ನೇ ನಾವೆಲ್ಲರೂ ಪಡೆದಾಗಿದೆ.

ನಿಜ, ಉದ್ಯೋಗದಿಂದ ಮನರಂಜನೆಯವರೆಗೆ ಎಲ್ಲೆಲ್ಲೂ ಕಂಪ್ಯೂಟರಿನದೇ ಭರಾಟೆ. ಕಚೇರಿಯ ಕೆಲಸ ಮಾಡಲು, ಪ್ರವಾಸಕ್ಕೆ ಟಿಕೇಟು ಕಾದಿರಿಸಲು, ಬ್ಯಾಂಕಿನದೋ ಶೇರು ಮಾರುಕಟ್ಟೆಯದೋ ವ್ಯವಹಾರ ನಡೆಸಲು, ಗೆಳೆಯರೊಡನೆ ಹರಟೆಹೊಡೆಯಲು, ಕಡೆಗೆ ಆಟವಾಡಲೂ ನಮಗೆ ಕಂಪ್ಯೂಟರ್ ಬೇಕು.

ಶಾಲೆ ಕಾಲೇಜಿನ ರಜಾದಿನಗಳ ಮಾತನ್ನಂತೂ ಕೇಳುವುದೇ ಬೇಡ, ಹೊರಗಿನ ಬಿರುಬಿಸಿಲನ್ನು ತಪ್ಪಿಸಿಕೊಳ್ಳಲು ಮನೆಯೊಳಗೆ ಕಂಪ್ಯೂಟರ್ ಇದೆಯಲ್ಲ! ಪರೀಕ್ಷೆಮುಗಿಸಿದ ವಿದ್ಯಾರ್ಥಿಗಳಿಗೆ ಕಂಪ್ಯೂಟರೇ ಈಗ ಆಪ್ತಮಿತ್ರ.

ಆದರೆ ಕಂಪ್ಯೂಟರೆಂಬ ಈ ಮಿತ್ರನ ಒಡನಾಟ ಯಾವಾಗಲೂ ನಮಗೆ ಒಳ್ಳೆಯದನ್ನೇ ಮಾಡಬೇಕು ಎಂದೇನೂ ಇಲ್ಲ. ಒಳಿತಿನ ಪ್ರಮಾಣದಷ್ಟೇ ಕೆಡುಕನ್ನೂ ಮಾಡಬಲ್ಲ ಈ ಯಂತ್ರದ ಒಡನಾಟದಿಂದ ಗರಿಷ್ಠ ಪ್ರಮಾಣದ ಲಾಭ ಪಡೆದುಕೊಳ್ಳುವುದು, ಮತ್ತು ಅದೇ ಸಮಯದಲ್ಲಿ ಕೆಟ್ಟದುದರಿಂದ ದೂರವಿರುವುದು ಸಂಪೂರ್ಣವಾಗಿ ನಮ್ಮ ವಿವೇಚನೆಯನ್ನೇ ಅವಲಂಬಿಸಿರುತ್ತದೆ.

ಹಾಗೆಂದಮಾತ್ರಕ್ಕೆ ಈ ಕಂಪ್ಯೂಟರ್-ಇಂಟರ್‌ನೆಟ್ ಇತ್ಯಾದಿಗಳ ಸಹವಾಸವೇ ಬೇಡ, ಅದರಿಂದ ದೂರವೇ ಉಳಿದುಬಿಡೋಣ ಎನ್ನುವುದು ಖಂಡಿತಾ ತಪ್ಪಾಗುತ್ತದೆ.
ಕಂಪ್ಯೂಟರಿನ ಈ ಪ್ರಪಂಚವನ್ನು ಸಮರ್ಪಕವಾಗಿ ಬಳಸಿಕೊಂಡರೆ ಅದು ನಿಜಕ್ಕೂ ನಮ್ಮ ಮನೋವಿಕಾಸದಲ್ಲಿ ನೆರವಾಗಬಲ್ಲದು.

ವಿಶೇಷ ಆಸಕ್ತಿಯಿದ್ದರೂ ಇಲ್ಲದಿದ್ದರೂ ಪಠ್ಯಕ್ರಮದಲ್ಲಿರುವ ವಿಷಯಗಳನ್ನು ವರ್ಷಪೂರ್ತಿ ಓದಿರುತ್ತೇವಲ್ಲ, ಅದರ ಬದಲು ನಮಗೆ ಆಸಕ್ತಿಯಿರುವ ವಿಷಯಗಳನ್ನು ಅಧ್ಯಯನಮಾಡಲು ರಜಾದಿನಗಳು ಅತ್ಯುತ್ತಮ ಅವಕಾಶ ಒದಗಿಸುತ್ತವೆ. ಯಾವ ತರಬೇತಿ ಸಂಸ್ಥೆಗೂ ಹೋಗದೆ, ದುಬಾರಿ ಶುಲ್ಕ ಪಾವತಿಸದೆ ನಮಗಿಷ್ಟಬಂದಾಗ ಈ ಅಧ್ಯಯನ ಕೈಗೊಳ್ಳುವುದು ಕಂಪ್ಯೂಟರ್ ಪ್ರಪಂಚದಲ್ಲಷ್ಟೆ ಸಾಧ್ಯ.

ಹೀಗೆ ಯಾವುದೇ ಶುಲ್ಕದ ಗೊಡವೆಯಿಲ್ಲದೆ ಅಂತರಜಾಲದ ಮೂಲಕ ಮುಕ್ತವಾಗಿ ದೊರಕುವ ಪಠ್ಯಸಾಮಗ್ರಿಯನ್ನು ಓಪನ್ ಕೋರ್ಸ್‌ವೇರ್ ಎಂದು ಕರೆಯುತ್ತಾರೆ. ತಂತ್ರಾಂಶಗಳು ಹಾಗೂ ಅದರ ಸೋರ್ಸ್ ಕೋಡ್ (ಆಕರ ಸಂಕೇತ) ಎಲ್ಲರಿಗೂ ಉಚಿತವಾಗಿ-ಮುಕ್ತವಾಗಿ ದೊರಕುವಂತಾಗಬೇಕು ಎಂಬ ಉದ್ದೇಶದೊಡನೆ ಸಾಫ್ಟ್‌ವೇರ್ ರಂಗದಲ್ಲಿ ಚಾಲ್ತಿಯಲ್ಲಿದೆಯಲ್ಲ, ಓಪನ್‌ಸೋರ್ಸ್ ಪರಿಕಲ್ಪನೆ, ಇದೂ ಹಾಗೆಯೇ.

ಪ್ರಪಂಚದ ಅನೇಕ ಪ್ರಮುಖ ವಿಶ್ವವಿದ್ಯಾನಿಲಯಗಳು ತಮ್ಮ ಪಠ್ಯಸಾಮಗ್ರಿಯನ್ನು ಆಸಕ್ತರಿಗಾಗಿ ಹೀಗೆ ಉಚಿತವಾಗಿ ಒದಗಿಸುತ್ತಿವೆ. ಗೂಗಲ್‌ನಲ್ಲಿ 'open courseware' ಎಂದು ಹುಡುಕಿದ ತಕ್ಷಣ ಕಾಣಿಸಿಕೊಳ್ಳುವ ಲಕ್ಷಗಟ್ಟಲೆ ಫಲಿತಾಂಶಗಳ ಪೈಕಿ ಹಲವಾರು ಪ್ರಮುಖ ವಿಶ್ವವಿದ್ಯಾನಿಲಯಗಳ ತಾಣಗಳು ಅಗ್ರಗಣ್ಯವಾಗಿರುವುದನ್ನು ನಾವೇ ನೋಡಬಹುದು.

ವಿಶ್ವವಿದ್ಯಾನಿಲಯಗಳಷ್ಟೇ ಅಲ್ಲ, ಇನ್ನಿತರ ಹಲವಾರು ಸಂಸ್ಥೆಗಳೂ ಈ ರೀತಿಯ ಪ್ರಯತ್ನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಹಲವು ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳ ಪಠ್ಯಸಾಮಗ್ರಿ ಬಳಸುವ ಕೋರ್ಸುಗಳನ್ನು ಉಚಿತವಾಗಿ ತೆಗೆದುಕೊಳ್ಳಲು ನೆರವಾಗುವ coursera.org, ಅನೇಕ ವಿಷಯಗಳ ಕುರಿತು ವೀಡಿಯೋ ಆಧಾರಿತ ಮಾಹಿತಿ ಒದಗಿಸುವ khanacademy.org ಮುಂತಾದ ಜಾಲತಾಣಗಳನ್ನು ಇಲ್ಲಿ ಹೆಸರಿಸಬಹುದು.

ಗಂಭೀರ ಅಧ್ಯಯನದಲ್ಲೆಲ್ಲ ಆಸಕ್ತಿಯಿಲ್ಲ, ಯಾವುದೋ ಒಂದೆರಡು ವಿಷಯಗಳ ಬಗೆಗಷ್ಟೆ ತಿಳಿದುಕೊಳ್ಳಬೇಕು ಎನ್ನುವುದಾದರೂ ಚಿಂತೆಯಿಲ್ಲ. howstuffworks.comನಂತಹ ತಾಣಗಳು ಇಲ್ಲಿ ನಮಗೆ ನೆರವಾಗಬಲ್ಲವು. ಯಾವ ವಿಷಯವನ್ನೇ ಆದರೂ ಕ್ಲಿಷ್ಟ ವಿವರಣೆಯಿರುವ ಲೇಖನಗಳ ರೂಪದಲ್ಲಿ ಹೇಳುತ್ತ ಬೋರುಹೊಡೆಸುವ ಬದಲು ಚಿತ್ರ, ಧ್ವನಿ, ಅನಿಮೇಶನ್, ವೀಡಿಯೋ ಮುಂತಾದ ಮಲ್ಟಿಮೀಡಿಯಾ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಇಂತಹ ತಾಣಗಳ ವೈಶಿಷ್ಟ್ಯ. ಕಾರಿನ ಏರ್‌ಬ್ಯಾಗಿನಿಂದ ಪ್ರಾರಂಭಿಸಿ ಪ್ಯಾಂಟಿನ ಜಿಪ್ಪಿನವರೆಗೆ ವೈವಿಧ್ಯಮಯ ವಿಷಯಗಳ ಕುರಿತು ಈ ತಾಣಗಳು ವಿವರಣೆ ನೀಡುತ್ತವೆ.

ಭಾಷಾ ಕಲಿಕೆಯಲ್ಲಿ, ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್ ಜ್ಞಾನ ಹೆಚ್ಚಿಸಿಕೊಳ್ಳುವಲ್ಲಿ ಸಹಾಯಮಾಡುವ ಜಾಲತಾಣಗಳೂ ಇವೆ. ಇಂತಹ ತಾಣಗಳ ಮೂಲಕ ದೊರಕುವ ಮಾಹಿತಿ ಬಹಳ ವೈವಿಧ್ಯಮಯವಾದದ್ದು - ಪದವೊಂದನ್ನು ಉಚ್ಚರಿಸುವುದು ಹೇಗೆ, ಆ ಪದದ ಅರ್ಥ ಏನು, ವ್ಯಾಕರಣದ ನಿಯಮಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವುದು ಹೇಗೆ ಎನ್ನುವಂತಹ ಹತ್ತಾರು ಬಗೆಯ ಪ್ರಶ್ನೆಗಳಿಗೆ ಈ ಜಾಲತಾಣಗಳು ಉತ್ತರ ನೀಡಬಲ್ಲವು. ಪಠ್ಯರೂಪದ ಮಾಹಿತಿಯಷ್ಟೇ ಏಕೆ, ಉಚ್ಚಾರಣೆಯ ವಿಷಯಕ್ಕೆ ಬಂದಾಗ ನಮಗೆ ಬೇಕಾದ ಪದವನ್ನು ಉಚ್ಚರಿಸಿ ಕೇಳಿಸುವ howjsay.comನಂತಹ ತಾಣಗಳೂ ಜಾಲಲೋಕದಲ್ಲಿವೆ. ಹೊಸ ಭಾಷೆಗಳನ್ನು ಕಲಿಯಬೇಕೆಂದರೆ ಅದೂ ಸಾಧ್ಯ. ಸರ್ಚ್ ಇಂಜನ್‌ಗಳ ಮೂಲಕ ಇಂತಹ ಹಲವು ತಾಣಗಳನ್ನು ನಾವು ಹುಡುಕಿಕೊಳ್ಳಬಹುದು.

ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಹಾಗಿರಲಿ, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವಲ್ಲೂ ಕಂಪ್ಯೂಟರಿನ ನೆರವು ಪಡೆದುಕೊಳ್ಳುವುದು ಸಾಧ್ಯ. ಚಿತ್ರರಚನೆಯ ಕೌಶಲಗಳಿರಲಿ ಛಾಯಾಗ್ರಹಣದ ತಾತ್ರಿಕ ವಿವರಗಳಿರಲಿ ಮಾದರಿ ತಯಾರಿಕೆಯ ಹಂತಗಳೇ ಇರಲಿ - ಅದನ್ನೆಲ್ಲ ವಿವರಿಸುವ ಅನೇಕ ವೀಡಿಯೋಗಳು ಯೂಟ್ಯೂಬ್‌ನಲ್ಲಿ ಸಿಗುತ್ತವೆ. ಚಿತ್ರಬಿಡಿಸಲು, ಕಸೂತಿ ಹಾಕಲು ಬೇಕಾದ ವಿನ್ಯಾಸಗಳಿಗೆ ನಾವು ಸರಾಗವಾಗಿ ಗೂಗಲ್ ಮೊರೆಹೋಗಬಹುದು. ನಮ್ಮಲ್ಲಿರುವ ಅಂಚೆಚೀಟಿ, ನಾಣ್ಯ-ನೋಟುಗಳ ಬಗ್ಗೆ ವಿವರಣೆ ಬೇಕೆಂದರೆ ಗೂಗಲ್ ಅದನ್ನೂ ಹುಡುಕಿಕೊಡುತ್ತದೆ.

ಬೇರೆಯವರು ರೂಪಿಸುವ ತಂತ್ರಾಂಶಗಳನ್ನು ಸರಾಗವಾಗಿ ಬಳಸುತ್ತೇವಲ್ಲ, ನಮ್ಮದೇ ತಂತ್ರಾಂಶಗಳನ್ನು, ಮೊಬೈಲ್ ಆಪ್‌ಗಳನ್ನು ರೂಪಿಸಲು ಕಲಿಯುವುದೂ ಸಾಧ್ಯ. ಸುಲಭವಾಗಿ ಪ್ರೋಗ್ರಾಮಿಂಗ್ ಕಲಿಯಲು ವಿಶ್ವವ್ಯಾಪಿ ಜಾಲದಲ್ಲಿ ಹಲವು ಸಂಪನ್ಮೂಲಗಳು ಉಚಿತವಾಗಿಯೇ ದೊರಕುತ್ತವೆ. 'ಕೋಡ್ ಅಕಾಡೆಮಿ'ಯಂತಹ ತಾಣಗಳನ್ನು ಇಲ್ಲಿ ಉದಾಹರಿಸಬಹುದು. 'learn programming online' ಎಂದು ಗೂಗಲ್‌ನಲ್ಲಿ ಹುಡುಕಿದರೆ ಇಂತಹ ಇನ್ನೂ ಅನೇಕ ತಾಣಗಳು ನಮ್ಮ ಮುಂದೆ ನಿಲ್ಲುತ್ತವೆ. ಪ್ರೋಗ್ರಾಮಿಂಗ್ ಮಾತ್ರವೇ ಅಲ್ಲ, ನಮ್ಮ ಮೆಚ್ಚಿನ ತಂತ್ರಾಂಶದಲ್ಲಿ (ಉದಾ: ಫೋಟೋಶಾಪ್) ಹೆಚ್ಚಿನ ಪರಿಣತಿ ಪಡೆದುಕೊಳ್ಳುವಲ್ಲೂ ಜಾಲತಾಣಗಳ ನೆರವು ಪಡೆದುಕೊಳ್ಳುವುದು ಸಾಧ್ಯ.

ನಮ್ಮದೇ ಜಾಲತಾಣಗಳನ್ನು ರೂಪಿಸಿಕೊಳ್ಳುವುದು, ನಮ್ಮ ಬರಹಗಳನ್ನು ಪ್ರಕಟಿಸುವುದು ಇನ್ನೊಂದು ಆಯ್ಕೆ. ಪೂರ್ಣಪ್ರಮಾಣದ ವೆಬ್‌ಸೈಟ್ ರೂಪಿಸುವುದು ಕಷ್ಟದ ಕೆಲಸ ಎನ್ನುವವರು ಬ್ಲಾಗ್ ಮಾಡಬಹುದು. ನಮ್ಮ ಹವ್ಯಾಸಗಳು, ಬರವಣಿಗೆ, ಅಭಿಪ್ರಾಯಗಳು - ಹೀಗೆ ಮನಸ್ಸಿಗೆ ಬಂದ ಯಾವುದೇ ವಿಷಯವನ್ನು ಇಡೀ ಜಗತ್ತಿನೊಡನೆ ಹಂಚಿಕೊಳ್ಳಲು ಇದೊಂದು ಉತ್ತಮ ಮಾಧ್ಯಮ ಅಷ್ಟೇ ಅಲ್ಲ, ನಮ್ಮ ಬರವಣಿಗೆಯನ್ನು ಉತ್ತಮಪಡಿಸಿಕೊಳ್ಳುವ ದಾರಿಯೂ ಹೌದು. ವಿಕಿಪೀಡಿಯದಂತಹ ಸಮುದಾಯ ತಾಣಗಳಿಗೆ ಲೇಖನಗಳನ್ನು ಸೇರಿಸುವ ಮೂಲಕವೂ ನಮ್ಮ ಬರವಣಿಗೆಯ ಕೌಶಲವನ್ನು ಉತ್ತಮಪಡಿಸಿಕೊಳ್ಳುವುದು ಸಾಧ್ಯ.

ಸದಾಕಾಲ ಸೋಶಿಯಲ್ ನೆಟ್‌ವರ್ಕುಗಳಲ್ಲಿ ಕಾಲಕಳೆಯುವ ನಾವು ಆ ಸಮಯವನ್ನೂ ಉಪಯುಕ್ತವಾಗಿ ಬಳಸಿಕೊಳ್ಳಬಹುದು. ಹೊಸಬರ ಪರಿಚಯ ಮಾಡಿಕೊಂಡು ನಮ್ಮ ನೆಟ್‌ವರ್ಕ್ ವಿಸ್ತರಿಸಿಕೊಳ್ಳುವುದು, ನಮ್ಮ ಪ್ರಶ್ನೆಗಳಿಗೆ ಕ್ಷಿಪ್ರವಾಗಿ ಉತ್ತರ ಹುಡುಕಿಕೊಳ್ಳುವುದು, ಯಾವುದೋ ಕೆಲಸಕ್ಕೆ ಅಗತ್ಯವಾದ ನೆರವು ಪಡೆದುಕೊಳ್ಳುವುದು - ಹೀಗೆ ಅನೇಕ ಸನ್ನಿವೇಶಗಳಲ್ಲಿ ಫೇಸ್‌ಬುಕ್, ಲಿಂಕ್ಡ್‌ಇನ್ ಮೊದಲಾದ ಸಮಾಜಜಾಲಗಳು ನಮಗೆ ನೆರವಾಗಬಲ್ಲವು. ಸಮಾಜ ಜಾಲಗಳಲ್ಲಿರುವ ಗುಂಪುಗಳೂ ಅಷ್ಟೆ (ಗುಂಪುಗಾರಿಕೆಯ ಗುಂಪುಗಳಲ್ಲ, ಪ್ರವಾಸ - ಛಾಯಾಗ್ರಹಣ - ಅಡುಗೆ ಹೀಗೆ ವಿವಿಧ ವಿಷಯಗಳನ್ನು ಕುರಿತಾಗಿ ಅಲ್ಲಿರುವ 'ಗ್ರೂಪ್'ಗಳು): ಸಮಾನ ಆಸಕ್ತಿಯಿರುವವರ ನಡುವೆ ಸಂಪರ್ಕ ಏರ್ಪಡಿಸಿಕೊಳ್ಳಲು, ವಿಚಾರವಿನಿಮಯ ನಡೆಸಲು ನೆರವಾಗುತ್ತವೆ.

ಹೀಗೆ ನಮ್ಮ ಆಸಕ್ತಿಗೆ ಅನುಗುಣವಾಗಿ ನಮ್ಮ ರಜಾದಿನಗಳ ಕೆಲಭಾಗವನ್ನಾದರೂ ಕಂಪ್ಯೂಟರಿನ ಜೊತೆಗೆ ಉಪಯುಕ್ತವಾಗಿ ಕಳೆಯುವುದು ಸಾಧ್ಯ. ಪ್ರವಾಸ, ಸಿನಿಮಾ, ಹರಟೆ, ಆಟ, ಚಾಟಿಂಗ್, ಕಂಪ್ಯೂಟರ್ ಗೇಮ್ಸ್ ಮುಂತಾದ ಹತ್ತಾರು ಚಟುವಟಿಕೆಗಳ ಜೊತೆಗೆ ಇಲ್ಲಿ ಹೇಳಿದ ಕೆಲವನ್ನೂ ನಮ್ಮ ರಜೆಯ ಕಾರ್ಯಕ್ರಮಕ್ಕೆ ಸೇರಿಸಿಕೊಂಡರೆ ರಜೆಯ ಮಜೆ ಇನ್ನಷ್ಟು ಹೆಚ್ಚುವುದು ಗ್ಯಾರಂಟಿ!

ಏಪ್ರಿಲ್ ೨, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge