ಶುಕ್ರವಾರ, ಏಪ್ರಿಲ್ 4, 2014

ತಂತ್ರಜ್ಞಾನದ ಒಗ್ಗರಣೆ - ಅಕ್ಷರಗಳ ಚಿತ್ರಾನ್ನ!

ಟಿ. ಜಿ. ಶ್ರೀನಿಧಿ


ಹೊಸ ಇಮೇಲ್ ಖಾತೆ ತೆರೆಯುವಾಗ, ಬ್ಲಾಗ್ ಬರಹಕ್ಕೆ ಕಮೆಂಟ್ ಮಾಡುವಾಗ, ಬ್ಯಾಂಕಿನ ಆನ್‌ಲೈನ್ ವ್ಯವಹಾರದಲ್ಲಿ, ಕಡೆಗೆ ರೈಲಿನ ಟಿಕೇಟು ಬುಕ್ ಮಾಡುವಾಗಲೂ ನಮ್ಮ ಮುಂದೆ ಅಕ್ಷರಗಳ ಕಲಸುಮೇಲೋಗರದಂತೆ ಕಾಣುವ ವಿಚಿತ್ರ ಚಿತ್ರವೊಂದು ಕಾಣಿಸಿಕೊಳ್ಳುತ್ತದೆ. ಜೊತೆಗೆ "ನೀವು ರೋಬಾಟ್ ಅಲ್ಲ ಎಂಬುದನ್ನು ಸಾಬೀತುಪಡಿಸಲು ಈ ಪಠ್ಯವನ್ನು ಟೈಪ್ ಮಾಡಿ" ಎಂಬ ಸಂದೇಶವೂ! ಆ ಅಕ್ಷರಗಳನ್ನೆಲ್ಲ ಸರಿಯಾಗಿ ಗುರುತಿಸಿ ಟೈಪಿಸಿದಾಗಷ್ಟೇ ನಾವು ಮಾಡುತ್ತಿರುವ ಕೆಲಸದಲ್ಲಿ ಮುಂದುವರೆಯುವುದು ಸಾಧ್ಯ.

ದುರುದ್ದೇಶಪೂರಿತ ತಂತ್ರಾಂಶಗಳ ಅನಗತ್ಯ ಹಸ್ತಕ್ಷೇಪ ತಪ್ಪಿಸಿ ಸೌಲಭ್ಯಗಳ ದುರುಪಯೋಗವನ್ನು ತಡೆಯುತ್ತದಲ್ಲ ಈ ವಿಧಾನ, ಇದಕ್ಕೆ 'ಕ್ಯಾಪ್ಚಾ' ಎಂದು ಹೆಸರು. ಕ್ಯಾಪ್ಚಾ ಎನ್ನುವ ಹೆಸರು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ. ಈ ನಾಮಕರಣವಾದದ್ದು ೨೦೦೦ದಲ್ಲಿ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಕ್ಯಾಪ್ಚಾಗಳ ಬಳಕೆ ಪ್ರಾರಂಭವಾಯ್ತು.

ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ.
ಹತ್ತಕ್ಕೆ ಮೂರು ಸೇರಿಸಿದರೆ ಎಷ್ಟು, ಅಥವಾ ಆಕಾಶದ ಬಣ್ಣ ಯಾವುದು ಎನ್ನುವಂತಹ ಸರಳ ಪ್ರಶ್ನೆಗಳಿಂದ ಪ್ರಾರಂಭಿಸಿ ತಿರುಚಾದ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸಿ ಎಂದು ಕೇಳುವವರೆಗೆ ಕ್ಯಾಪ್ಚಾಗಳು ಅನೇಕ ಬಗೆಯವಾಗಿರಬಹುದು. ಒದಗಿಸಲಾಗುವ ಶ್ರವ್ಯ ಸಂದೇಶವನ್ನು ಕೇಳಿ ಅದನ್ನು ದಾಖಲಿಸಿ ಎಂದು ಕೇಳುವ ಕ್ಯಾಪ್ಚಾಗಳೂ ಇವೆ.

ಇಷ್ಟೆಲ್ಲ ಬಗೆಯ ಕ್ಯಾಪ್ಚಾಗಳ ನಡುವೆ ವಿಶೇಷವಾಗಿ ನಮ್ಮ ಗಮನಸೆಳೆಯುವುದು ಗೂಗಲ್ ಸಂಸ್ಥೆಯ 'ರೀಕ್ಯಾಪ್ಚಾ' ತಂತ್ರಜ್ಞಾನ.

ಇಲ್ಲಿ ಬಳಕೆದಾರರಿಗೆ ಎರಡು ಪದಗಳನ್ನು ತೋರಿಸಿ ಅವನ್ನು ಗುರುತಿಸುವಂತೆ ಕೇಳಲಾಗುತ್ತದೆ. ಆದರೆ ಅವುಗಳಲ್ಲಿ ಒಂದು ಪದ ಮಾತ್ರ 'ರೀಕ್ಯಾಪ್ಚಾ' ವ್ಯವಸ್ಥೆಗೆ ಪರಿಚಿತವಾಗಿರುತ್ತದೆ; ಎರಡನೆಯ ಪದ ಯಾವುದೋ ಹಳೆಯ ಪತ್ರಿಕೆಯಿಂದಲೋ ಪುಸ್ತಕದಿಂದಲೋ ಬಂದಿರುತ್ತದೆ! ಅದು ಹೇಗೆ ಎಂದಿರಾ, ಗೂಗಲ್ ಸಂಸ್ಥೆ ಲಕ್ಷಾಂತರ ಮುದ್ರಿತ ಪುಸ್ತಕ-ಪತ್ರಿಕೆಗಳ ಕಂಪ್ಯೂಟರೀಕರಣದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆದರೆ ಮುದ್ರಿತ ಪಠ್ಯವನ್ನು ಗುರುತಿಸಿ ಗಣಕೀಕರಣಗೊಳಿಸುವ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ತಂತ್ರಾಂಶಗಳಿಗೆ ಎಲ್ಲ ಪದಗಳನ್ನೂ ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಅಂತಹ ಪದಗಳ ಚಿತ್ರವನ್ನು ರೀಕ್ಯಾಪ್ಚಾ ವ್ಯವಸ್ಥೆಗೆ ಕಳುಹಿಸಿಕೊಡಲಾಗುತ್ತದೆ.

ಬಳಕೆದಾರರು ರೀಕ್ಯಾಪ್ಚಾಗೆ ಪರಿಚಿತವಾದ ಪದವನ್ನು ಸರಿಯಾಗಿ ಗುರುತಿಸಿದರೆ ಅಪರಿಚಿತವಾದ ಇನ್ನೊಂದು ಪದವನ್ನೂ ಸರಿಯಾಗಿ ಗುರುತಿಸಿರುವ ಸಾಧ್ಯತೆ ಹೆಚ್ಚು. ಯಾವುದೇ ಪದವನ್ನು ಒಬ್ಬರಿಗಿಂತ ಹೆಚ್ಚು ಜನ ಒಂದೇ ರೀತಿ ಗುರುತಿಸಿದ ಮೇಲೆ ಅದು ಸರಿಯೇ ತಾನೆ!

ಅಂತರಜಾಲದ ಅಷ್ಟೂ ಬಳಕೆದಾರರು ಒಟ್ಟಾರೆಯಾಗಿ ಒಂದು ದಿನಕ್ಕೆ ಸುಮಾರು ಇಪ್ಪತ್ತು ಕೋಟಿ ಕ್ಯಾಪ್ಚಾಗಳಿಗೆ ಉತ್ತರಿಸುತ್ತಾರಂತೆ. ಪ್ರಪಂಚದ ಮೂಲೆಮೂಲೆಗಳ ಜನ ಇಷ್ಟೆಲ್ಲ ರೀಕ್ಯಾಪ್ಚಾ ಪ್ರಶ್ನೆಗಳಿಗೆ ಉತ್ತರಿಸುವಾಗ ಅದೆಷ್ಟೋ ಹೊಸ ಪದಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಗುರುತಿಸುವುದು ಸಾಧ್ಯವಾಗುತ್ತಿದೆ; ಕಂಪ್ಯೂಟರ್ ಸಂಪನ್ಮೂಲಗಳ ದುರುಪಯೋಗ ತಡೆಯಲು ರೂಪಗೊಂಡ ಕ್ಯಾಪ್ಚಾ ವ್ಯವಸ್ಥೆ ತನ್ನ ಈ ಹೊಸ ಅವತಾರದಲ್ಲಿ ನಮ್ಮ ಇತಿಹಾಸದ ಕಂಪ್ಯೂಟರೀಕರಣಕ್ಕೆ ಸಹಾಯ ಮಾಡುತ್ತಿದೆ.

ಈ ತಂತ್ರಜ್ಞಾನದ ಇನ್ನೊಂದು ಉಪಯೋಗವೂ ಇದೆ. ವಿಶ್ವವ್ಯಾಪಿ ಜಾಲದ ಬೇರೆಬೇರೆ ತಾಣಗಳಲ್ಲಿ ಇಮೇಲ್ ವಿಳಾಸಗಳನ್ನು ದಾಖಲಿಸುವುದು ಸಾಮಾನ್ಯ ಅಭ್ಯಾಸ ತಾನೆ. ಹಲವು ಕಡೆ (ಉದಾ: ಇಮೇಲ್ ಗುಂಪು) ಈ ವಿಳಾಸಗಳು ಎಲ್ಲರಿಗೂ ಕಾಣುವಂತೆ ಇರುತ್ತವೆ. ಇಷ್ಟೆಲ್ಲ ವಿಳಾಸಗಳು ಒಟ್ಟಿಗೆ ಸಿಕ್ಕಿಬಿಟ್ಟರೆ ಸ್ಪಾಮ್ ಸಂದೇಶಗಳನ್ನು ಕಳುಹಿಸುವವರಿಗೆ ಸುಗ್ಗಿ! ಅದನ್ನು ತಪ್ಪಿಸಲು ಇಮೇಲ್ ವಿಳಾಸ ಶೇಖರಿಸುವ ತಾಣಗಳಲ್ಲಿ ರೀಕ್ಯಾಪ್ಚಾ ತಂತ್ರಜ್ಞಾನ ಬಳಸುವುದು ಸಾಧ್ಯ. ಮೊದಲಿಗೆ ಕೊಂಚಭಾಗವಷ್ಟೇ ಕಾಣುವ ಇಮೇಲ್ ವಿಳಾಸದ ಮೇಲೆ ಕ್ಲಿಕ್ ಮಾಡಿ, ರೀಕ್ಯಾಪ್ಚಾ ಪ್ರಶ್ನೆಯನ್ನು ಉತ್ತರಿಸಿದ ಮೇಲಷ್ಟೆ ನಮ್ಮ ಇಮೇಲ್ ವಿಳಾಸ ಬೇರೊಬ್ಬರಿಗೆ ಕಾಣಿಸುತ್ತದೆ. ಮನುಷ್ಯರಷ್ಟು ಸುಲಭವಾಗಿ ಕುತಂತ್ರಾಂಶಗಳು ಈ ಕೆಲಸವನ್ನು ಮಾಡಲಾರವು; ಹಾಗಾಗಿ ನಮ್ಮ ಇಮೇಲ್ ಖಾತೆಗೆ ಹರಿದುಬರುವ ಸ್ಪಾಮ್ ಕೊಂಚವಾದರೂ ಕಡಿಮೆಯಾಗುತ್ತದೆ!

ಏಪ್ರಿಲ್ ೪, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

Savigannada ಹೇಳಿದರು...

ಮಾಹಿತಿಗಾಗಿ ಧನ್ಯವಾದಗಳು

Savigannada ಹೇಳಿದರು...

ಮಾಹಿತಿಗಾಗಿ ಧನ್ಯವಾದಗಳು

badge