ಸೋಮವಾರ, ಜೂನ್ 30, 2014

'ಕಾಡು ಕಲಿಸುವ ಪಾಠ' - ಪ್ರಕೃತಿಶಿಬಿರಕ್ಕೊಂದು ಕೈಪಿಡಿ

ಕೃತಿಪರಿಚಯ: ಡಾ. ಎಸ್. ವಿ. ನರಸಿಂಹನ್

ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಉಳಿದ ಪ್ರಾಣಿಗಳೆಲ್ಲ ತಾವು ಇರುವ ಪರಿಸರಕ್ಕೆ ಹೊಂದಿಕೊಂಡು ಬದುಕಲು ಯತ್ನಿಸುತ್ತವೆ. ಆದರೆ ತನ್ನ ಅನುಕೂಲಕ್ಕೆ ತಕ್ಕಂತೆ ಪರಿಸರವನ್ನು ಬದಲಿಸಿಕೊಳ್ಳುವ ಶಕ್ತಿ ಇರುವುದು ಮಾನವನಿಗೆ ಮಾತ್ರ. ಈ ಶಕ್ತಿ ಏಕಕಾಲಕ್ಕೆ ಅವನ ಉನ್ನತಿಯನ್ನೂ ಅವನತಿಯನ್ನೂ ಸಂಕೇತಿಸುತ್ತದೆ. ಮನುಷ್ಯನ ಈ ಸಾಮರ್ಥ್ಯದ ಪರಿಣಾಮವಾಗಿ ಪ್ರಕೃತಿಯ ಮೂಲರೂಪವೇ ಅಸ್ತವ್ಯಸ್ತವಾಗಿಬಿಟ್ಟಿದೆ.

ಹಿರಿಯರು ನಮ್ಮ ತಲೆಮಾರಿಗೆ ಬಿಟ್ಟುಕೊಟ್ಟ ಪ್ರಕೃತಿ ಪರಿಸರಗಳನ್ನು ಸುಸ್ಥಿತಿಯಲ್ಲಿ ಮುಂದಿನ ತಲೆಮಾರಿಗೆ ಒಪ್ಪಿಸುವ ಜವಾಬ್ದಾರಿ ನಮ್ಮದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಈ ವಿಷಯದಲ್ಲಿ ಸೂಕ್ತ ತಿಳಿವಳಿಕೆಯನ್ನು ನೀಡುವುದು ಅವಶ್ಯಕ. - ಇದು ಶ್ರೀ ಟಿ. ಎಸ್. ಗೋಪಾಲ್‌ರವರು ಇತ್ತೀಚೆಗೆ ಹೊರತಂದ 'ಕಾಡು ಕಲಿಸುವ ಪಾಠ' ಪುಸ್ತಕದ ಒಟ್ಟು ಸಾರಾಂಶ.

ಗೋಪಾಲ್‌ರವರು ಸ್ವತಃ ಉಪನ್ಯಾಸಕರು. ಅದರಲ್ಲಿ ಅವರಿಗೆ ಮೂವತ್ತೈದಕ್ಕೂ ಹೆಚ್ಚು ವರ್ಷಗಳ ಅನುಭವ. ಅವರಿಗೆ ವಿದ್ಯಾರ್ಥಿಗಳ ಹಣೆಬರಹ, ಕಲಿಕೆಯ ಗುಣಮಟ್ಟ ಎಲ್ಲರಿಗಿಂತ ಚೆನ್ನಾಗಿ ಗೊತ್ತು. ಅವರು ಬರೆದದ್ದು ಕನ್ನಡ ಭಾಷಾಶಾಸ್ತ್ರದ ಪುಸ್ತಕವೇ ಆಗಿರಲಿ (ಕನ್ನಡ ವ್ಯಾಕರಣ ಪ್ರವೇಶ), ಅನುಭವ ಕಥನವೇ ಆಗಿರಲಿ (ಕಾಡಿನೊಳಗೊಂದು ಜೀವ), ವಿಜ್ಞಾನದ ವಿಷಯವೇ ಆಗಿರಲಿ (ಹುಲಿರಾಯನ ಆಕಾಶವಾಣಿ) ವಿಷಯ ನಿರೂಪಣೆಯಲ್ಲಿ ಶ್ರೀ ಗೋಪಾಲ್‌ರವರದ್ದು ಎತ್ತಿದ ಕೈ.

'ಕಾಡು ಕಲಿಸುವ ಪಾಠ'ದಲ್ಲಿ ನಾಗರಹೊಳೆಯ ನಿವೃತ್ತ ಅರಣ್ಯಾಧಿಕಾರಿ ಶ್ರೀ ಕೆ. ಎಂ. ಚಿಣ್ಣಪ್ಪನವರೇ ಸೂತ್ರಧಾರ. ವಿದ್ಯಾರ್ಥಿಗಳಿಗಾಗಿ ಅವರು ರಾಜ್ಯದ ವಿವಿಧ ಅಭಯಾರಣ್ಯಗಳಲ್ಲಿ ನಡೆಸಿಕೊಟ್ಟ ಹೆಚ್ಚಿನ ಪ್ರಕೃತಿಶಿಬಿರಗಳಲ್ಲಿ ಶ್ರೀ ಗೋಪಾಲ್‌ರವರದ್ದೇ ಮೇಲುಸ್ತುವಾರಿ, ಅವರದ್ದೇ ನಿರೂಪಣೆ. ಅಲ್ಲಿ ಅವರು ತೋರುವ ಶಿಸ್ತುಬದ್ಧತೆ, ಅಚ್ಚುಕಟ್ಟುತನ ಅವರ ಪುಸ್ತಕದಲ್ಲೂ ಪ್ರತಿಫಲಿತಗೊಂಡಿದೆ.
ಚಿಣ್ಣಪ್ಪನವರ ಒಡನಾಟದಲ್ಲಿ ಲೇಖಕರು ಪಡೆದ ಜಾನಪದ ಕಲೆಗಾರನ ಸೊಗಡು; ಮತ್ತು ಡಾ| ಉಲ್ಲಾಸ ಕಾರಂತರ ಸಾಹಚರ್ಯದ ಮೂಲಕ ವಿಜ್ಞಾನವ್ಯಾಸಂಗ, ಕ್ಷೇತ್ರಕಾರ್ಯ ಪರಿಶ್ರಮಗಳಿಂದ ರೂಪುಗೊಂಡ ಶಿಸ್ತು ಇವೆರಡರ ಸಮನ್ವಯದ ಸಾರ ಈ ಪುಸ್ತಕದಲ್ಲಿದೆ.


ಒಂದು ಬಾರಿ ನೀವು ಪುಸ್ತಕವನ್ನು ಓದಲು ಕೈಗೆತ್ತಿಕೊಂಡರೆ ಓದಿ ಮುಗಿಯುವವರೆಗೆ ಕೆಳಗಿಡುವುದಿಲ್ಲ. ಗೋಪಾಲ್‌ರವರ ಬರೆಹದ ನಿಪುಣತೆಯ, ಕಥಾನಿರೂಪಣೆಯ ಮೋಡಿ ಅಂಥಾದ್ದು! ಅಲ್ಲದೆ ಕೊಡಗಿನ ಜೀವವೈವಿಧ್ಯತೆಯ ವಿಷಯದ ಬಗ್ಗೆ ಸ್ವತಃ ವಿಷಯತಜ್ಞರಾಗಿರುವುದರಿಂದ ಸ್ಪಷ್ಟವಾದ, ನಿಖರವಾದ ಮಾಹಿತಿಗಳನ್ನು ಇಲ್ಲಿ ಓದುಗರಿಗೆ ಒದಗಿಸಿದ್ದಾರೆ. ಮಾಹಿತಿಯ ಭಂಡಾರದೊಳಗೆ ಅನುಭವದ ಹೂರಣವನ್ನಿಟ್ಟು, ತಿಳಿಹಾಸ್ಯದ ಲೇಪನದೊಂದಿಗೆ ಒಂದು ರಸದೌತಣವನ್ನೇ ನೀಡಿದ್ದಾರೆ.

ಅದಕ್ಕಿಂತ ಹೆಚ್ಚಾಗಿ ಇಂತಹ ಪ್ರಕೃತಿಶಿಬಿರಗಳಲ್ಲಿ ಭಾಗವಹಿಸಿದ ಇತರ ಸಂಪನ್ಮೂಲ ವ್ಯಕ್ತಿಗಳನ್ನೂ ಇಲ್ಲಿ ಪಾತ್ರಧಾರಿಗಳನ್ನಾಗಿಸಿ ಅವರ ಮಾತುಗಳನ್ನೂ ಮನಮುಟ್ಟುವಂತೆ, ಅಷ್ಟೇ ಪ್ರಭಾವಶಾಲಿಯಾಗಿ ಇಲ್ಲಿ ಹೇಳಿದ್ದಾರೆ.

ಇಂತಹ ಪ್ರಕೃತಿಶಿಬಿರಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಅನೇಕ ವನ್ಯ ಜೀವಿಗಳನ್ನು, ಅವುಗಳ ಸ್ವಭಾವ, ಜೀವನಶೈಲಿಯನ್ನು ನೋಡಿ ಕಲಿಯುತ್ತಾರೆ. ಅನೇಕ ಮರಗಿಡಗಳನ್ನು, ಇರುವೆ-ಗೆದ್ದಲು ಮುಂತಾದ ಕೀಟಗಳಿಂದ ಹಿಡಿದು, ಹತ್ತು ಹಲವು ಹಕ್ಕಿಗಳವರೆಗೆ ಅವುಗಳ ವಿಶೇಷತೆಯನ್ನು ಅರಿತು, ಗುರುತಿಸಲು ಕಲಿಯುತ್ತಾರೆ; ಕಾಡಿನಲ್ಲಿ ಪ್ರಾಣಿಗಳ ಹಿಕ್ಕೆ, ಮತ್ತು ಗೊರಸಿನ ಗುರುತಿನಿಂದ ಕಂಡುಹಿಡಿಯುವ ವಿಧಾನವನ್ನು ತಿಳಿದುಕೊಳ್ಳುತ್ತಾರೆ. ಹೀಗೆ ನೇರವಾಗಿ ಪ್ರಕೃತಿಯೊಂದಿಗೆ ಬೆರೆತು ಅದರಿಂದ ಪಡೆಯುವ ಪಾಠದಿಂದ ಆಗುವ ರೋಮಾಂಚನ, ಉತ್ಸಾಹ, ಇನ್ನೂ ಹೆಚ್ಚು ತಿಳಿದುಕೊಳ್ಳಬೇಕೆಂಬ ತುಡಿತ ಇವುಗಳನ್ನು ನಾನು ಕಂಡಿದ್ದೇನೆ. ಸ್ವತಃ ತಮ್ಮ ಕಣ್ಣಿನಿಂದಲೇ ನೋಡಿ, ಕೈಗಳಿಂದಲೇ ಮುಟ್ಟಿ, ಕಿವಿಗಳಿಂದಲೇ ಕೇಳಿ ಕಲಿತಿದ್ದನ್ನು, ಅನುಭವಿಸಿದ್ದನ್ನು ಮತ್ತೊಬ್ಬರಿಗೆ ಹೇಳುವ ತವಕ ಅವರಲ್ಲಿ ಎದ್ದು ಕಾಣುತ್ತದೆ.

ಈ ಎಲ್ಲ ವಿಚಾರಗಳ ಒಟ್ಟು ಬರವಣಿಗೆಯ ರೂಪವೇ 'ಕಾಡು ಕಲಿಸುವ ಪಾಠ'. ಇದು ವಿದ್ಯಾರ್ಥಿಗಳಿಗೂ ಅವರನ್ನು ರೂಪಿಸುವ ಪೋಷಕರಿಗೂ, ಶಿಕ್ಷಕರಿಗೂ ಉತ್ತಮ ಪ್ರೇರಣೆ ಹಾಗೂ ಮಾರ್ಗದರ್ಶನವನ್ನು ನೀಡುತ್ತದೆ. ಅಂದವಾದ ಮುಖಪುಟ, ಕಾಡಿನ ಕತೆಗೆ ಪೂರಕವಾದ ಚಿತ್ರಗಳು (ಇಪ್ಪತ್ತನಾಲ್ಕು ಪುಟ, ಬಹುವರ್ಣದಲ್ಲಿ) ಈ ಪುಸ್ತಕಕ್ಕೆ ಮೆರುಗು ನೀಡಿವೆ.

ಕಾಡು ಕಲಿಸುವ ಪಾಠ
ಲೇಖಕರು: ಶ್ರೀ ಟಿ. ಎಸ್. ಗೋಪಾಲ್
ಡೆಮಿ ೧/೮ ಗಾತ್ರದ ೧೧೨ ಪುಟಗಳು (೨೪ ಪುಟ ಬಹುವರ್ಣದಲ್ಲಿ)
ಬೆಲೆ: ರೂ. ೧೧೦
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು

ಕಾಮೆಂಟ್‌ಗಳಿಲ್ಲ:

badge