ಗುರುವಾರ, ಡಿಸೆಂಬರ್ 27, 2018

ನಿಮ್ಮ ಫೋನಿನಲ್ಲಿ ಈ ಆಪ್‌ ಇದೆಯೇ?

ಇಜ್ಞಾನ ವಿಶೇಷ


ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಆಪ್‌ಗಳಿಗೆ ವಿಶೇಷ ಸ್ಥಾನ. ನಮ್ಮ ಗಮನಸೆಳೆಯಲು ಸ್ಪರ್ಧಿಸುವ ಅಸಂಖ್ಯ ಆಪ್‌ಗಳ ಪೈಕಿ ಕೆಲವೊಂದನ್ನು ಆಗೊಮ್ಮೆ ಈಗೊಮ್ಮೆ ಪರಿಚಯಿಸುವುದು ಇಜ್ಞಾನದ ಪ್ರಯತ್ನ. ನಮ್ಮ ಪ್ರಯತ್ನ ನಿಮಗೆ ಇಷ್ಟವಾಯಿತೇ? ಕಮೆಂಟ್ ಮಾಡಿ ತಿಳಿಸಿ.

ಬುಧವಾರ, ಡಿಸೆಂಬರ್ 19, 2018

ಕಂಪ್ಯೂಟರ್ ಮೌಸ್‌ಗೆ ಐವತ್ತು ವರ್ಷ!

ಟಿ. ಜಿ. ಶ್ರೀನಿಧಿ


ಮಾಹಿತಿ ತಂತ್ರಜ್ಞಾನ ಲೋಕದಲ್ಲಿ ಬದಲಾವಣೆಯದ್ದೇ ಭರಾಟೆ. ಇಲ್ಲಿ ಹೊಸ ಆವಿಷ್ಕಾರಗಳು ದಿನಕ್ಕೊಂದರಂತೆ ಸುದ್ದಿಯಾಗುತ್ತಿರುತ್ತವೆ, ಹಳೆಯವು ಸದ್ದಿಲ್ಲದೆ ಮೂಲೆಗುಂಪಾಗುತ್ತಿರುತ್ತವೆ. ಈ ಭರಾಟೆಯ ನಡುವೆ ಎಲ್ಲೋ ಕೆಲವು ಆವಿಷ್ಕಾರಗಳು ಮಾತ್ರ ಸುದೀರ್ಘಕಾಲ ಉಳಿದುಕೊಳ್ಳುತ್ತವೆ, ನಮ್ಮ ಬದುಕಿನ ಮೇಲೆ ಪ್ರಭಾವ ಬೀರುವುದನ್ನು ಮುಂದುವರೆಸುತ್ತವೆ.

ಇಂತಹ ಆವಿಷ್ಕಾರಗಳಲ್ಲಿ ಕಂಪ್ಯೂಟರ್ ಮೌಸ್ ಕೂಡ ಒಂದು. ಕಂಪ್ಯೂಟರುಗಳ ಜೊತೆಯಲ್ಲೇ ಬೆಳೆದು-ಉಳಿದು ಬಂದಿರುವ ಈ ಸಾಧನದ ಮೊದಲ ಸಾರ್ವಜನಿಕ ಪ್ರದರ್ಶನ ನಡೆದು ಇದೀಗ ಐವತ್ತು ವರ್ಷ ಪೂರ್ತಿಯಾಗಿದೆ.

ಬುಧವಾರ, ಡಿಸೆಂಬರ್ 12, 2018

ಎಲ್ಲ ಸಹಾಯಕ್ಕೂ ಒಂದೇ ಸಂಖ್ಯೆ - ೧೧೨

ಇಜ್ಞಾನ ವಿಶೇಷ 

ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿಗೆ ಥಟ್ಟನೆ ಕರೆಮಾಡುವ ಸೌಲಭ್ಯ ಬಹುತೇಕ ಮೊಬೈಲ್ ಫೋನುಗಳಲ್ಲಿರುತ್ತದೆ. ಫೋನು ಲಾಕ್ ಆಗಿದ್ದಾಗ, ಕರೆನ್ಸಿ ಇಲ್ಲದಿದ್ದಾಗ, ಕಡೆಗೆ ಸಿಮ್ ಇಲ್ಲದಿದ್ದಾಗಲೂ ಇಂತಹ ಕರೆಗಳನ್ನು ಮಾಡಬಹುದು ಎನ್ನುವುದು ವಿಶೇಷ. ಈ ಸೌಲಭ್ಯವಿರುವ ಬಹುತೇಕ ಫೋನುಗಳು ಕರೆಮಾಡುವ ಸಂಖ್ಯೆಯೇ ೧೧೨. ಮೊಬೈಲ್ ಜಾಲಗಳನ್ನು ನಿರ್ದೇಶಿಸುವ ಜಿಎಸ್‌ಎಂ ಮಾನಕ ಈ ಸಂಖ್ಯೆಯನ್ನು ಆಪತ್ಕಾಲೀನ ದೂರವಾಣಿ ಸಂಖ್ಯೆಯೆಂದು ಗುರುತಿಸುತ್ತದೆ.

ಪೋಲೀಸರನ್ನು, ಅಗ್ನಿಶಾಮಕ ದಳವನ್ನು, ಆಂಬುಲೆನ್ಸ್ ಸೇವೆಯನ್ನು ಸಂಪರ್ಕಿಸಲು ಸದ್ಯ ನಮ್ಮ ದೇಶದಲ್ಲಿ ಬೇರೆಬೇರೆ ಸಂಖ್ಯೆಗಳನ್ನು ಬಳಸುತ್ತಿದ್ದೇವೆ. ಈ ಎಲ್ಲ ಸಂಖ್ಯೆಗಳಿಗೆ ಒಂದೇ ಪರ್ಯಾಯವಾಗಿ ನಮ್ಮಲ್ಲೂ ೧೧೨ ಬಳಸುವ ಪ್ರಕ್ರಿಯೆ ಇದೀಗ ಪ್ರಾರಂಭವಾಗಿದೆ. ಮೊಬೈಲ್ ಫೋನ್ ಮೂಲಕ ಮಾತ್ರವೇ ಅಲ್ಲದೆ ಸ್ಥಿರ ದೂರವಾಣಿ, ಎಸ್ಸೆಮ್ಮೆಸ್, ಇಮೇಲ್ ಹಾಗೂ ಮೊಬೈಲ್ ಆಪ್ ಮೂಲಕವೂ ದೇಶದ ಎಲ್ಲೆಡೆ ಈ ಸಂಖ್ಯೆಯನ್ನು ಸಂಪರ್ಕಿಸುವುದು, ಸಹಾಯ ಪಡೆಯುವುದು ಮುಂದಿನ ದಿನಗಳಲ್ಲಿ ಸಾಧ್ಯವಾಗುವ ನಿರೀಕ್ಷೆಯಿದೆ.

ಭಾನುವಾರ, ಡಿಸೆಂಬರ್ 9, 2018

ಮದರ್ ಆಫ್ ಆಲ್ ಡೆಮೋಸ್: ಅದ್ಭುತ ಪ್ರಾತ್ಯಕ್ಷಿಕೆಗೆ ಐವತ್ತು!

ಟಿ. ಜಿ. ಶ್ರೀನಿಧಿ

ಮಾಹಿತಿ ತಂತ್ರಜ್ಞಾನ ಜಗತ್ತಿನ ಬಹುತೇಕ ಸಾಧನೆಗಳ ಹಿಂದೆ ಅನೇಕ ವ್ಯಕ್ತಿಗಳ ಪರಿಶ್ರಮವಿರುತ್ತದೆ, ಸುದೀರ್ಘ ಅವಧಿಯಲ್ಲಿ ನಡೆದ ಹಲವು ಘಟನೆಗಳ ಛಾಯೆಯೂ ಕಾಣಸಿಗುತ್ತದೆ. ಹೀಗಾಗಿಯೇ ಏನೋ ಇಂತಹ ತಂತ್ರಜ್ಞಾನವನ್ನು ರೂಪಿಸಿದವರು ಇಂತಹವರೇ ಎಂದು ನಿಖರವಾಗಿ ಗುರುತಿಸುವುದು ಅದೆಷ್ಟೋ ಸಂದರ್ಭಗಳಲ್ಲಿ ಸಾಧ್ಯವಾಗುವುದೇ ಇಲ್ಲ.

ಹಾಗೆಂದಮಾತ್ರಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲುಗಳೇ ಇಲ್ಲವೆಂದೇನೂ ಹೇಳುವಂತಿಲ್ಲ. ಒಂದು ಸಂದರ್ಭದಲ್ಲಿ ಒಂದು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಮಹತ್ವದ ಘಟನೆಗಳು ನಡೆದಿರುವುದು ಹಾಗಿರಲಿ, ಒಂದೇ ಘಟನೆ ಇಡಿಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೇ ಹೊಸ ತಿರುವನ್ನು ತಂದುಕೊಟ್ಟ ಉದಾಹರಣೆಗಳೂ ಇವೆ.

ಅಂತಹುದೊಂದು ಘಟನೆ ೧೯೬೮ರ ಡಿಸೆಂಬರ್ ೯ರಂದು ನಡೆದಿತ್ತು.

ಶುಕ್ರವಾರ, ಡಿಸೆಂಬರ್ 7, 2018

ದೂರವನ್ನು ದೂರಮಾಡುವ ದೂರನಿಯಂತ್ರಕ: ಇದು ರಿಮೋಟ್ ಕಂಟ್ರೋಲ್ ಕಥಾನಕ!

ಟಿ. ಜಿ. ಶ್ರೀನಿಧಿ


ನಮ್ಮ ಮನೆಗಳಲ್ಲಿ ನೂರೆಂಟು ವಸ್ತುಗಳಿರುತ್ತವೆ. ಈ ಪೈಕಿ ಕೆಲವು ದಿವಾನಖಾನೆಯ ಮೇಜಿನಂತೆ ದೊಡ್ಡವು, ಇನ್ನು ಕೆಲವು ಆ ಮೇಜಿನ ಮೇಲಿನ ಧೂಳಿನಂತೆ ಸಣ್ಣವು. ಕಣ್ಣಿಗೆ ಕಾಣುವ ಈ ಸಂಗತಿಗಳ ಜೊತೆಗೆ ಕಣ್ಣಿಗೆ ಕಾಣದ ಹಲವು ವಿದ್ಯಮಾನಗಳೂ ಘಟಿಸುತ್ತಿರುತ್ತವೆ: ವಾಟ್ಸಾಪ್ ಸಂದೇಶ ಮೊಬೈಲನ್ನು ತಲುಪುವುದು, ಕಂಪ್ಯೂಟರಿಗೆ ವೈಫೈ ಸಂಪರ್ಕ ಸಿಗುವುದು, ಮೈಕ್ರೋವೇವ್ ಓವನ್ನಿನಲ್ಲಿಟ್ಟ ಆಹಾರ ಬಿಸಿಯಾಗುವುದು - ಹೀಗೆ.

ಇಂತಹ ಇನ್ನೊಂದು ಉದಾಹರಣೆ ದೂರನಿಯಂತ್ರಕ, ಅರ್ಥಾತ್ ರಿಮೋಟ್ ಕಂಟ್ರೋಲಿನದು. ಆಗಿಂದಾಗ್ಗೆ ಕಾಣೆಯಾಗುತ್ತಿರುವ ವಸ್ತುವಾದರೂ ಸ್ವತಃ ರಿಮೋಟ್ ಕಂಟ್ರೋಲ್ ಅದೃಶ್ಯವೇನಲ್ಲ. ಇಲ್ಲಿ ಹೇಳಹೊರಟಿರುವ 'ಕಣ್ಣಿಗೆ ಕಾಣದ' ಸಂಗತಿ ಅದರ ಕಾರ್ಯಾಚರಣೆಯನ್ನು ಕುರಿತಾದದ್ದು.

ಅದೃಶ್ಯವಾಗಿ, ನಮ್ಮ ಗಮನಕ್ಕೆ ಬಾರದಂತೆ ನಡೆಯುವ ಈ ಕಾರ್ಯಾಚರಣೆ ನಮ್ಮ ದೈನಂದಿನ ಬದುಕಿನ ಹಲವು ಕೆಲಸಗಳನ್ನು ಸುಲಭಗೊಳಿಸುತ್ತದೆ. ಜಾಹೀರಾತು ಬಂದಾಗ ಟೀವಿಯ ಚಾನೆಲ್ ಬದಲಿಸುವುದು ಇಂತಹ ಕೆಲಸಗಳಲ್ಲೊಂದು.

ಶುಕ್ರವಾರ, ನವೆಂಬರ್ 30, 2018

ವೀಕೆಂಡ್ ಇಜ್ಞಾನ: ಏನಿದು ಬೊಕೆ ಎಫೆಕ್ಟ್?

ಟಿ. ಜಿ. ಶ್ರೀನಿಧಿ


ಸಾಂಪ್ರದಾಯಿಕ ಕ್ಯಾಮೆರಾಗಳ ಸ್ಥಾನದಲ್ಲಿ ಮೊಬೈಲ್ ಫೋನ್ ಬಂದು ಕುಳಿತಿರುವುದು ಇದೀಗ ಹಳೆಯ ವಿಷಯ. ಆಪ್ತರೊಡನೆ ಸೆಲ್ಫಿ ತೆಗೆದುಕೊಳ್ಳುವುದಷ್ಟೇ ಅಲ್ಲ, ಪ್ರವಾಸ-ಸಭೆ-ಸಮಾರಂಭಗಳ ನೆನಪುಗಳನ್ನು ಸೆರೆಹಿಡಿಯುವುದೂ ಇದೀಗ ಮೊಬೈಲಿನದೇ ಕೆಲಸ.

ಹೀಗಿರುವಾಗ, ಸಾಂಪ್ರದಾಯಿಕ ಕ್ಯಾಮೆರಾಗಳಲ್ಲಿರುವ ಸವಲತ್ತುಗಳು ಮೊಬೈಲಿನಲ್ಲೂ ಸಿಗಬೇಕು ಎನ್ನಿಸುವುದು ಸಹಜವೇ. ಮೊಬೈಲ್ ಕ್ಯಾಮೆರಾಗಳಲ್ಲಿ ಇಂತಹ ಸವಲತ್ತುಗಳನ್ನು ನೀಡಲು ಮೊಬೈಲ್ ತಯಾರಕರೂ ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ.

ಹೊಸ ಮೊಬೈಲುಗಳ ಜಾಹೀರಾತಿನಲ್ಲಿ ಕ್ಯಾಮೆರಾ ವೈಶಿಷ್ಟ್ಯಗಳ ವರ್ಣನೆ ಹೆಚ್ಚುಹೆಚ್ಚಾಗಿ ಕಾಣಿಸುತ್ತಿರುವುದರ ಕಾರಣವೂ ಇದೇ. ಹೆಚ್ಚು ಸುದ್ದಿಯಲ್ಲಿರುವ ಇಂತಹ ವೈಶಿಷ್ಟ್ಯಗಳ ಪೈಕಿ ಚಿತ್ರಗಳಲ್ಲಿ 'ಬೊಕೆ ಎಫೆಕ್ಟ್' ಮೂಡಿಸುವ ಸಾಮರ್ಥ್ಯವೂ ಒಂದು.

ಬುಧವಾರ, ನವೆಂಬರ್ 21, 2018

ವಿಶ್ವ ಟೀವಿ ದಿನ ವಿಶೇಷ: ಟೀವಿ ಠೀವಿ

ಟಿ. ಜಿ. ಶ್ರೀನಿಧಿ

ತನ್ನಲ್ಲಿರುವ ಮಾಹಿತಿಯನ್ನು ಒಂದೇಬಾರಿಗೆ ಅನೇಕರಿಗೆ ತಲುಪಿಸಬೇಕೆನ್ನುವ ಮಾನವನ ಅಪೇಕ್ಷೆ ಬಹಳ ಹಿಂದಿನದು. ಹಿಂದಿನಕಾಲದಲ್ಲಿ ಸಂದೇಶಗಳನ್ನು ಡಂಗುರ ಸಾರಿಸುತ್ತಿದ್ದರಂತಲ್ಲ, ಅದರ ಹಿನ್ನೆಲೆಯಲ್ಲಿದ್ದದ್ದು ಇದೇ ಅಪೇಕ್ಷೆ. ಇಂದಿನ ವೆಬ್‌ಸೈಟು-ಸೋಶಿಯಲ್ ಮೀಡಿಯಾಗಳ ಉದ್ದೇಶವೂ ಬಹಳ ಭಿನ್ನವೇನಲ್ಲ.

ಹೀಗೆ ಮಾಹಿತಿ ಪ್ರಸರಣ ಬೆಳೆದುಬಂದ ಹಾದಿಯಲ್ಲಿ ಕೆಲವು ಮಹತ್ವದ ಮೈಲಿಗಲ್ಲುಗಳನ್ನು ನಾವು ನೋಡಬಹುದು. ಪ್ರಸರಣದ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿದ, ದೊಡ್ಡ ಸಮುದಾಯಗಳನ್ನು ತಲುಪಲು ಸಾಧ್ಯವಾಗಿಸಿದ ರೇಡಿಯೋ ಜಾಲದ ಬೆಳವಣಿಗೆ ಇಂತಹ ಮೈಲಿಗಲ್ಲುಗಳಿಗೊಂದು ಉದಾಹರಣೆ.

ಇಂಥದ್ದೇ ಇನ್ನೊಂದು ಮೈಲಿಗಲ್ಲು ಟೀವಿ ಜಾಲಗಳ ಹುಟ್ಟು.

ಸೋಮವಾರ, ನವೆಂಬರ್ 12, 2018

'ವಿಜ್ಞಾನ'ವೆಂಬ ವಿಶಿಷ್ಟ ಪ್ರಯತ್ನ

ಟಿ. ಜಿ. ಶ್ರೀನಿಧಿ


"ಆಂಗ್ಲಭಾಷಾಭ್ಯಾಸವು ನಮ್ಮ ದೇಶದಲ್ಲಿ ದಿನೇದಿನೇ ಅಭಿವೃದ್ಧಿಯಾಗುತ್ತಿದ್ದರೂ ವಿಜ್ಞಾನದ ವಿಷಯವಾಗಿ ಮಾತ್ರ ವಿಶೇಷ ಶ್ರದ್ಧೆಯು ತೋರಿಬಂದಿಲ್ಲ. ಆ ಭಾಗದಲ್ಲಿ ಈಗೀಗ ಕಣ್ಣುಬಿಡುತ್ತಿದ್ದೇವೆ. ಜನಸಾಮಾನ್ಯದಲ್ಲೆಲ್ಲಾ ಈ ವಿಜ್ಞಾನವನ್ನು ಹರಡಿದ ಹೊರತು ದೇಶವು ಅಭಿವೃದ್ಧಿಸ್ಥಿತಿಗೆ ಬರಲಾರದು..." ಇಂದಿನ ಪರಿಸ್ಥಿತಿಯನ್ನೇ ಕುರಿತು ಹೇಳಿದಂತೆ ತೋರುವ ಈ ಮಾತುಗಳು ಪ್ರಕಟವಾದದ್ದು ಇಂದಿಗೆ ನೂರು ವರ್ಷಗಳ ಹಿಂದೆ, ೧೯೧೮ನೇ ಇಸವಿಯಲ್ಲಿ.

ಈ ಮಾತುಗಳನ್ನು ಪ್ರಕಟಿಸಿದ್ದು 'ವಿಜ್ಞಾನ'ವೆಂಬ ಪತ್ರಿಕೆ. ನಮ್ಮ ಭಾಷೆಯಲ್ಲಿ ಪ್ರಕಟವಾದ ಈ ರೀತಿಯ ಮೊತ್ತಮೊದಲ ಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಯದ್ದು.

ಗುರುವಾರ, ನವೆಂಬರ್ 8, 2018

ಮೊಬೈಲ್ ಫೋನ್: ಪರದೆ ಸುತ್ತಲಿನ ಪರದಾಟ

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳು ಮಾರುಕಟ್ಟೆಗೆ ಬಂದ ಹೊಸತರಲ್ಲಿ ಅವುಗಳ ಪರದೆ ಬಹಳ ಚಿಕ್ಕದಾಗಿರುತ್ತಿತ್ತು. ಅನೇಕ ಮೊಬೈಲುಗಳ ಪರದೆ ಅವುಗಳಲ್ಲಿದ್ದ ಕೀಲಿಮಣೆಗಿಂತ ಚಿಕ್ಕದಾಗಿರುತ್ತಿದ್ದದ್ದೂ ಉಂಟು.

ಮೊಬೈಲ್ ಫೋನಿನ ಸವಲತ್ತುಗಳು ಹೆಚ್ಚಿದಂತೆ ಅವುಗಳ ಪರದೆಯ ಗಾತ್ರವೂ ಹೆಚ್ಚುತ್ತ ಬಂತು. ಸ್ಪರ್ಶಸಂವೇದಿ ಪರದೆಗಳು (ಟಚ್ ಸ್ಕ್ರೀನ್) ಬಳಕೆಗೆ ಬಂದಮೇಲಂತೂ ಇದು ಇನ್ನಷ್ಟು ಜಾಸ್ತಿಯಾಯಿತು. ಸ್ಮಾರ್ಟ್‌ಫೋನುಗಳು ಜನಪ್ರಿಯವಾದಂತೆ ಮೊಬೈಲಿನ ಬಹುಭಾಗವನ್ನು ಪರದೆಗಳೇ ಆವರಿಸಿರುವುದು ಕೂಡ ಸಾಮಾನ್ಯವಾಯಿತು.

ಯಾವುದೇ ಸ್ಮಾರ್ಟ್‌ಫೋನ್ ನೋಡಿದರೂ ಅದರ ಪರದೆಯ ಸುತ್ತ ಚೌಕಟ್ಟಿನಂತಹ ಅಂಚುಗಳಿರುವುದನ್ನು ನಾವು ನೋಡಬಹುದು. ತಾಂತ್ರಿಕ ಪರಿಭಾಷೆಯಲ್ಲಿ 'ಬೆಜ಼ೆಲ್' ಎಂದು ಕರೆಯುವುದು ಈ ಚೌಕಟ್ಟನ್ನೇ.

ಮಂಗಳವಾರ, ನವೆಂಬರ್ 6, 2018

ಕನ್ನಡದ ಮೊದಲ ವಿಜ್ಞಾನ ಪತ್ರಿಕೆಗೆ ನೂರು ವರ್ಷ: ನವೆಂಬರ್ ೧೧ರಂದು 'ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ' ಸಂವಾದ ಕಾರ್ಯಕ್ರಮ

ಇಜ್ಞಾನ ವಾರ್ತೆ

ಕನ್ನಡದ ಮೊದಲ ವಿಜ್ಞಾನ ಪತ್ರಿಕೆ 'ವಿಜ್ಞಾನ' ಪ್ರಕಟವಾಗಿ ಇದೀಗ ನೂರು ವರ್ಷ ಸಂದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ  ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರವು ಇಜ್ಞಾನ ಟ್ರಸ್ಟ್ ಹಾಗೂ ಉದಯಭಾನು ಕಲಾಸಂಘದ ಸಹಯೋಗದೊಡನೆ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ.

ಈ ಕಾರ್ಯಕ್ರಮ ಬರುವ ನವೆಂಬರ್ ೧೧ರಂದು ಬೆಳಿಗ್ಗೆ ೧೦ ಗಂಟೆಯಿಂದ ಜಯನಗರದ ನ್ಯಾಶನಲ್ ಕಾಲೇಜು ಆವರಣದಲ್ಲಿರುವ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ಕನ್ನಡದ ಮುದ್ರಣ ಮಾಧ್ಯಮ, ಟೀವಿ, ರೇಡಿಯೋ ಹಾಗೂ ಜಾಲತಾಣಗಳಲ್ಲಿ ವಿಜ್ಞಾನ ಸಂವಹನದ ಸ್ಥಿತಿ-ಗತಿಗಳನ್ನು ಕುರಿತು ಆಯಾ ಕ್ಷೇತ್ರದ ಪರಿಣತರೊಡನೆ ಈ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ಇರಲಿದೆ.

ದಿವಂಗತ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು ೧೯೧೮ರಲ್ಲಿ ಪ್ರಾರಂಭಿಸಿದ್ದ 'ವಿಜ್ಞಾನ' ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲೊಂದು ಮಹತ್ವದ ಮೈಲಿಗಲ್ಲು. ವಿಜ್ಞಾನ ಬರಹಗಳನ್ನು ಸಾಮಾನ್ಯ ಓದುಗರಿಗೂ ಪರಿಚಯಿಸಿದ ಈ ಅಪರೂಪದ ಪ್ರಯತ್ನದ ಕುರಿತು ಇದೇ ಸಂದರ್ಭದಲ್ಲಿ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಉಪನ್ಯಾಸ ನೀಡಲಿದ್ದಾರೆ.

ಗುರುವಾರ, ನವೆಂಬರ್ 1, 2018

ಟೆಕ್ ಲೋಕದಲ್ಲಿ ಕನ್ನಡ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಕನ್ನಡ ಅಕ್ಷರಗಳನ್ನು ಮೂಡಿಸುವುದು ಎಂಬ ಅಭಿಪ್ರಾಯ ಒಂದು ಕಾಲದಲ್ಲಿತ್ತು. ಈ ಪರಿಸ್ಥಿತಿ ಬದಲಾಗಿ ಬಹಳ ದಿನಗಳೇ ಆಗಿವೆ. ತಂತ್ರಜ್ಞಾನದ ಭಾಷೆಯೆಂದೇ ಹೆಸರಾದ ಇಂಗ್ಲಿಷಿನಲ್ಲಿ ಏನೇನು ಸಾಧ್ಯವೋ ಅದೆಲ್ಲ ಕನ್ನಡದಲ್ಲೂ ಸಾಧ್ಯವಾಗಬೇಕು ಎನ್ನುವುದು ಇಂದಿನ ಸ್ಥಿತಿ. ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸವೂ ಆಗಿದೆ.

ಬುಧವಾರ, ಅಕ್ಟೋಬರ್ 24, 2018

ಕೈಗೆಟುಕುವ ಬೆಲೆಯಲ್ಲಿ ಎರಡು ಹೊಸ ಜೆನ್‌ಫೋನ್

ಇಜ್ಞಾನ ವಿಶೇಷ


ತನ್ನ ಜೆನ್‌ಫೋನ್ ಸರಣಿಯ ಸ್ಮಾರ್ಟ್‌ಫೋನುಗಳ ಮೂಲಕ ಏಸುಸ್ ಸಂಸ್ಥೆ ಸಾಕಷ್ಟು ಜನಪ್ರಿಯವಾಗಿರುವುದು ನಮಗೆಲ್ಲ ಗೊತ್ತೇ ಇದೆ. ಈವರೆಗೆ ಮಧ್ಯಮ ಹಾಗೂ ಹೆಚ್ಚು ಬೆಲೆಯ ಹಲವಾರು ಜೆನ್‌ಫೋನ್ ಮಾದರಿಗಳು ಲಭ್ಯವಿದ್ದರೂ ಪ್ರಾರಂಭಿಕ ಹಂತದಲ್ಲಿ ಜೆನ್‌ಫೋನ್ ಕೊಳ್ಳಬಯಸುವ ಗ್ರಾಹಕರೆದುರು ಹೆಚ್ಚಿನ ಆಯ್ಕೆಗಳು ಇರಲಿಲ್ಲ. ಈ ಕೊರತೆಯನ್ನು ದೂರಮಾಡುವ ನಿಟ್ಟಿನಲ್ಲಿ ಏಸುಸ್ ಸಂಸ್ಥೆ ಇದೀಗ ಎರಡು ಹೊಸ ಮಾದರಿಗಳನ್ನು ಪರಿಚಯಿಸಿದೆ. ಅಕ್ಟೋಬರ್ 24, 2018ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಮಾದರಿಗಳ ಪರಿಚಯ ಇಲ್ಲಿದೆ.

ಬುಧವಾರ, ಅಕ್ಟೋಬರ್ 17, 2018

ಬದಲಾವಣೆಯ ಹಾದಿಯಲ್ಲಿ ಟೀವಿಯ ಪಯಣ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನ ಎಂದಾಗ ಮೊಬೈಲ್ ಹಾಗೂ ಕಂಪ್ಯೂಟರು ನೆನಪಾಗುವಷ್ಟು ಬೇಗ ಟೀವಿ ನೆನಪಾಗುವುದಿಲ್ಲ, ನಿಜ. ಆದರೂ ನಮಗೆ ವಿಶೇಷ ಅನುಬಂಧವಿರುವ ತಂತ್ರಜ್ಞಾನದ ಸವಲತ್ತುಗಳ ಪೈಕಿ ಅದಕ್ಕೆ ಮಹತ್ವದ ಸ್ಥಾನವಿದೆ. ಸೋಮಾರಿಪೆಟ್ಟಿಗೆ ಎಂದು ಹೆಸರಿಟ್ಟರೂ, ಚಾನಲ್ಲುಗಳನ್ನು-ಕಾರ್ಯಕ್ರಮಗಳನ್ನು ಬೇಕಾದಷ್ಟು ಟೀಕಿಸಿದರೂ ನಾವು ಟೀವಿ ನೋಡುವುದನ್ನೇನೂ ಬಿಟ್ಟಿಲ್ಲ.

ಹಿಂದಿನ ಕಾಲದ ಟೀವಿಗಳಲ್ಲಿ ಬಳಕೆಯಾಗುತ್ತಿದ್ದ ತಂತ್ರಜ್ಞಾನ ಬಹಳ ಸರಳವಾಗಿತ್ತು. ದಿವಾನಖಾನೆಯಲ್ಲೊಂದು ಟೀವಿ ಇಟ್ಟು ಅದಕ್ಕೆ ಆಂಟೆನಾ ಸಂಪರ್ಕವನ್ನು ಕಲ್ಪಿಸಿಕೊಟ್ಟರೆ, ಅಂದು ಅಸ್ತಿತ್ವದಲ್ಲಿದ್ದ ಏಕೈಕ ಚಾನೆಲ್ಲಿನ ಕಾರ್ಯಕ್ರಮಗಳನ್ನು ನೋಡುವುದು ಸಾಧ್ಯವಾಗುತ್ತಿತ್ತು.

ಶುಕ್ರವಾರ, ಅಕ್ಟೋಬರ್ 12, 2018

ಸಿಮ್ ಕಾರ್ಡಿನ ಇ-ಅವತಾರ

ಟಿ. ಜಿ. ಶ್ರೀನಿಧಿ


ಬೇಕಾದವರೊಡನೆ ಬೇಕೆಂದಾಗ ಸಂಪರ್ಕದಲ್ಲಿರಲು ನಮಗೆ ಮೊಬೈಲ್ ಫೋನ್ ಬೇಕು. ಅದು ನಮಗೆ ಬೇಕಾದಾಗ ಕೆಲಸಮಾಡಬೇಕೆಂದರೆ ಏನು ಬೇಕು?

ಈ ಪ್ರಶ್ನೆಗೆ ಬ್ಯಾಟರಿ, ಕರೆನ್ಸಿ ಮುಂತಾದ ಹಲವು ಉತ್ತರಗಳು ಬರಬಹುದಾದರೂ ಅವೆಲ್ಲವಕ್ಕಿಂತ ಹೆಚ್ಚು ಸೂಕ್ತವಾದ ಉತ್ತರವೆಂದರೆ ಸಬ್ಸ್‌ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್, ಅರ್ಥಾತ್ ಸಿಮ್.

ಗುರುವಾರ, ಅಕ್ಟೋಬರ್ 4, 2018

ವಾರ್ಷಿಕೋತ್ಸವ ನೆಪದಲ್ಲಿ ಕೃತಕ ಉಪಗ್ರಹಗಳ ಕುರಿತು...

ಪ್ರಪಂಚದ ಮೊತ್ತಮೊದಲ ಕೃತಕ ಉಪಗ್ರಹ ಉಡಾವಣೆಯಾದದ್ದು ೧೯೫೭ರ ಅಕ್ಟೋಬರ್ ೪ರಂದು. ಆ ಘಟನೆಯ ವಾರ್ಷಿಕೋತ್ಸವವಾದ ಇಂದು ಇಜ್ಞಾನದಲ್ಲೊಂದು ವಿಶೇಷ ಲೇಖನ, ನಿಮ್ಮ ಓದಿನ ಖುಷಿಗಾಗಿ!

ಟಿ. ಜಿ. ಶ್ರೀನಿಧಿ

ಹೊಸಹೊಸ ಕೃತಕ ಉಪಗ್ರಹಗಳು ಉಡಾವಣೆಯಾದ ಬಗ್ಗೆ ಮಾಧ್ಯಮಗಳಲ್ಲಿ ನಾವು ಕೇಳುತ್ತಲೇ ಇರುತ್ತೇವೆ. ಆದರೆ ಈ ಬಗ್ಗೆ ಇಷ್ಟೆಲ್ಲ ಕೇಳಿದ್ದರೂ ಅವುಗಳ ಉಪಯೋಗವೇನು ಎನ್ನುವ ಬಗ್ಗೆ ಮಾತ್ರ ನಮ್ಮಲ್ಲಿ ಅಷ್ಟೇನೂ ಸ್ಪಷ್ಟವಾದ ಚಿತ್ರಣ ಇರುವುದಿಲ್ಲ. ಉಪಗ್ರಹಗಳು ಯಶಸ್ವಿಯಾಗಿ ಅಂತರಿಕ್ಷ ಸೇರಿದ ಬಗ್ಗೆ ದೊರಕುವಷ್ಟು ಮಾಹಿತಿ ಅವು ಅಲ್ಲಿ ಏನು ಮಾಡುತ್ತವೆ ಎನ್ನುವುದರ ಕುರಿತು ದೊರಕದೆ ಇರುವುದು ಇದಕ್ಕೆ ಪ್ರಮುಖ ಕಾರಣ ಇರಬಹುದೇನೋ.

ಹಾಗೆ ನೋಡಿದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ಕೃತಕ ಉಪಗ್ರಹಗಳ ಪಾತ್ರ ಬಹಳ ದೊಡ್ಡದು. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲರ ಬದುಕನ್ನೂ ಅವು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸುತ್ತವೆ. ಅಂತರಿಕ್ಷದಲ್ಲಿರುವ ಉಪಗ್ರಹಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲವಲ್ಲ, ಹಾಗೆಯೇ ಅವುಗಳ ಮಹತ್ವವೂ ನಮ್ಮ ಗಮನಕ್ಕೆ ಬಂದಿರುವುದಿಲ್ಲ ಅಷ್ಟೇ.

ಕಣ್ಣಿಗೆ ಕಾಣದ ಈ ಕಣ್ಮಣಿಗಳು ನಮ್ಮ ಬದುಕನ್ನು ಹೇಗೆಲ್ಲ ಪ್ರಭಾವಿಸುತ್ತವೆ? ಒಂದಷ್ಟು ಮಾಹಿತಿ ಇಲ್ಲಿದೆ.

ಶುಕ್ರವಾರ, ಸೆಪ್ಟೆಂಬರ್ 28, 2018

'ಫೋಮೋ'ದಿಂದ 'ಜೋಮೋ'ವರೆಗೆ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದ ಹೊಸ ಸವಲತ್ತುಗಳು ಕಾಲಕಾಲಕ್ಕೆ ನಮ್ಮ ಸಂಪರ್ಕಕ್ಕೆ ಬರುವುದು ಸಾಮಾನ್ಯ ಸಂಗತಿ; ಅವು ನಮ್ಮ ಬದುಕಿನ ಮೇಲೆ ಬೇರೆಬೇರೆ ಮಟ್ಟದಲ್ಲಿ ಪರಿಣಾಮ ಬೀರುವುದೂ ಸಾಮಾನ್ಯವೇ. ರೇಡಿಯೋದಿಂದ ಕಂಪ್ಯೂಟರಿನವರೆಗೆ, ತಂತಿ ಸಂದೇಶದಿಂದ ವಾಟ್ಸ್‌ಆಪ್‌ವರೆಗೆ ಇಂತಹ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು.

ಇಂತಹ ಸವಲತ್ತುಗಳ ಪೈಕಿ ಕೆಲವು, ಬೇರೆ ಸವಲತ್ತುಗಳ ಹೋಲಿಕೆಯಲ್ಲಿ, ನಮ್ಮನ್ನು ಕೊಂಚ ಹೆಚ್ಚಾಗಿಯೇ ಪ್ರಭಾವಿಸುತ್ತವೆ. ಅದರಲ್ಲಿ ಕೆಲವನ್ನಂತೂ ಬಿಟ್ಟಿರುವುದೇ ಕಷ್ಟ ಎನ್ನಿಸುವ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ಈಚಿನ ವರ್ಷಗಳಲ್ಲಿ ಇಂತಹ ವಿಶೇಷ ಸ್ಥಾನ ಪಡೆದುಕೊಂಡಿರುವ ಸವಲತ್ತುಗಳ ಪೈಕಿ ಅಗ್ರಸ್ಥಾನ ಸಲ್ಲುವುದು ಸ್ಮಾರ್ಟ್‌ಫೋನ್‌ಗಳಿಗೆ. ಬ್ಲ್ಯಾಕ್‌ಬೆರಿ ಹಾಗೂ ಐಫೋನ್‌‌ನಿಂದ ಶುರುವಾಗಿ ಆಂಡ್ರಾಯ್ಡ್ ಫೋನುಗಳ ಮೂಲಕ ಹೆಚ್ಚಿದ ಅವುಗಳ ಜನಪ್ರಿಯತೆ ಕಳೆದ ಒಂದು ದಶಕದ ಅವಧಿಯಲ್ಲಿ ಅಗಾಧವಾಗಿ ಬೆಳೆದಿದೆ. ಇದರ ಪರಿಣಾಮ, ಇಂದು ನಮ್ಮ ಬದುಕಿನಲ್ಲಿ ಸ್ಮಾರ್ಟ್‌ಫೋನಿಗೆ ಎಲ್ಲಿಲ್ಲದ ಮಹತ್ವ.

ಪ್ರಪಂಚದ ಮೂಲೆಮೂಲೆಗಳ ನಡುವೆ ಸಂವಹನವನ್ನು ಕ್ಷಣಾರ್ಧದಲ್ಲಿ ಸಾಧ್ಯವಾಗಿಸುವ ಈ ಸಾಧನಕ್ಕೆ ಇಷ್ಟು ಗೌರವ ಸಲ್ಲಲೇಬೇಕು, ನಿಜ. ಆದರೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಪ್ರತಿಯೊಂದು ಕ್ಷಣದಲ್ಲೂ ಸ್ಮಾರ್ಟ್‌ಫೋನು ನಮ್ಮೊಡನೆ ಇರಬೇಕು ಎನಿಸುವ ಪರಿಸ್ಥಿತಿಯೂ, ಗೊತ್ತಿದ್ದೋ ಗೊತ್ತಿಲ್ಲದೆಯೋ, ಅನೇಕ ಬಳಕೆದಾರರಲ್ಲಿ ನಿರ್ಮಾಣವಾಗಿಬಿಟ್ಟಿದೆ.

ಶುಕ್ರವಾರ, ಸೆಪ್ಟೆಂಬರ್ 21, 2018

ವೀಕೆಂಡ್ ವಿಶೇಷ: ಮಶೀನ್ ಲರ್ನಿಂಗ್ ಅಂದರೇನು?

ಟಿ. ಜಿ. ಶ್ರೀನಿಧಿ


ಈಚಿನ ದಿನಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಹೊಸ ವಿಷಯಗಳ ಪೈಕಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎಐ) ಕೂಡ ಒಂದು. ಬೇರೆಬೇರೆ ಸಂದರ್ಭಗಳಿಗೆ ಬೇರೆ ರೀತಿಯಾಗಿ ಪ್ರತಿಕ್ರಿಯಿಸುವ  ಮನುಷ್ಯನ ಸಾಮರ್ಥ್ಯವನ್ನು ಯಂತ್ರಗಳಲ್ಲೂ ಅಭಿವೃದ್ಧಿಪಡಿಸುವ ಉದ್ದೇಶ ವಿಜ್ಞಾನದ ಈ ಶಾಖೆಯದು. ಇಲ್ಲಿನ ಬೆಳವಣಿಗೆಗಳ ದೆಸೆಯಿಂದ ನಮ್ಮ ಅನೇಕ ಕೆಲಸಗಳು ಮುಂದೆ ಇನ್ನೂ ಸುಲಭವಾಗಲಿವೆ ಎನ್ನುವುದರಿಂದ ಪ್ರಾರಂಭಿಸಿ ಇದು ನಮ್ಮ ಕೆಲಸಗಳನ್ನೆಲ್ಲ ಕಿತ್ತುಕೊಂಡು ಮನುಷ್ಯರ ಶತ್ರುವಾಗಿ ಬೆಳೆಯಲಿದೆ ಎನ್ನುವವರೆಗೆ ಹಲವು ಅಭಿಪ್ರಾಯಗಳನ್ನು ನಾವು ಕೇಳಬಹುದು.

ಅದೆಲ್ಲ ಇರಲಿ, ಯಂತ್ರಗಳಲ್ಲಿ ಬುದ್ಧಿಮತ್ತೆ ಬೆಳೆಸುವುದು ಎಂದರೇನು? ಮೇಷ್ಟರು ನಮಗೆಲ್ಲ ಪಾಠ ಹೇಳಿ ಬೆಳೆಸಿದಂತೆ ಯಂತ್ರಗಳಿಗೂ ಪಾಠ ಹೇಳಿಕೊಡುವುದು ಸಾಧ್ಯವೇ?

ಬುಧವಾರ, ಸೆಪ್ಟೆಂಬರ್ 12, 2018

ಕ್ಲೌಡ್ ಸ್ಟೋರೇಜ್ ಎಂಬ ಮಾಹಿತಿಯ ಮೋಡ

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಪರಿಚಯವಾದ ಹೊಸತರಲ್ಲಿ ನಮಗೆ ಬೇಕಾದ ಮಾಹಿತಿಯನ್ನೆಲ್ಲ ಫ್ಲಾಪಿ, ಸೀಡಿ, ಪೆನ್ ಡ್ರೈವ್‌ಗಳಲ್ಲಿ ಇಟ್ಟುಕೊಂಡು ಬೇಕೆಂದ ಕಡೆಗೆ ಕೊಂಡೊಯ್ಯುವ ಪರಿಪಾಠ ಇತ್ತು. ಇಮೇಲ್ ಬಳಕೆ ಎಲ್ಲೆಡೆಯಲ್ಲೂ ಇರದಿದ್ದಾಗ ಮಾಹಿತಿಯನ್ನು ಫ್ಲಾಪಿ-ಸೀಡಿಗಳಲ್ಲಿ ತುಂಬಿಸಿ ಅಂಚೆಮೂಲಕ ಕಳುಹಿಸುತ್ತಿದ್ದದ್ದೂ ಉಂಟು. ನಮ್ಮ ಕಂಪ್ಯೂಟರಿನಲ್ಲಷ್ಟೇ ಇರುವ ಮಾಹಿತಿಗೆ ಏನಾದರೂ ತೊಂದರೆಯಾದರೆ ಬೇಕಾಗುತ್ತದೆ ಎಂದು ಅದನ್ನೆಲ್ಲ ನಿರ್ದಿಷ್ಟ ಅವಧಿಗೊಮ್ಮೆ ಬೇರೊಂದು ಮಾಧ್ಯಮದಲ್ಲಿ ಪ್ರತಿಮಾಡಿಡುವ (ಬ್ಯಾಕಪ್) ಅಭ್ಯಾಸ ಕೂಡ ಕೆಲವರಿಗಿತ್ತು.

ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಕಚೇರಿಯ ಕಡತ, ಪ್ರವಾಸದ ಫೋಟೋ, ಮಿತ್ರರ ಫೋನ್ ನಂಬರು, ಅವರು ಕಳಿಸಿದ ವಾಟ್ಸ್‌ಆಪ್‌ ಮೆಸೇಜುಗಳ ಪ್ರತಿ - ಎಲ್ಲವನ್ನೂ ನಾವು ಅಂತರಜಾಲದಲ್ಲೇ ಉಳಿಸಿಟ್ಟಿರುತ್ತೇವೆ; ಬೇಕಾದ ಕಡೆ ಬೇಕೆಂದ ಸಾಧನದಲ್ಲಿ ದೊರಕಿಸಿಕೊಳ್ಳುತ್ತೇವೆ. ನಮ್ಮ ಕಡತಗಳ ಹೆಚ್ಚುವರಿ ಪ್ರತಿಯೂ ಅಂತರಜಾಲದಲ್ಲೇ ಇರುತ್ತದೆ.

ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿರುವ ಪರಿಕಲ್ಪನೆಯ ಹೆಸರೇ ಕ್ಲೌಡ್.

ಮಂಗಳವಾರ, ಸೆಪ್ಟೆಂಬರ್ 4, 2018

ಹುಡುಕಾಟದ ಎರಡು ದಶಕ

ಟಿ. ಜಿ. ಶ್ರೀನಿಧಿ


ಮನುಕುಲದ ಇತಿಹಾಸದ ಪ್ರತಿ ಕಾಲಘಟ್ಟದಲ್ಲೂ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾದ ಘಟನೆಗಳನ್ನು ನಾವು ನೋಡಬಹುದು. ಕಾಲಕ್ರಮದಲ್ಲಿ ಬೇಸಾಯ, ಬೆಂಕಿ, ಚಕ್ರ, ವಿದ್ಯುಚ್ಛಕ್ತಿ ಮೊದಲಾದ ಸಂಗತಿಗಳ ಆವಿಷ್ಕಾರ ಹೇಗೆ ಮಹತ್ವ ಪಡೆದುಕೊಂಡಿತೋ ಕಳೆದ ಶತಮಾನದಲ್ಲಿ ಅಂಥದ್ದೇ ಗೌರವಕ್ಕೆ ಭಾಜನವಾದದ್ದು ಕಂಪ್ಯೂಟರಿನ ಆವಿಷ್ಕಾರ. ಇದಾದ ನಂತರದಲ್ಲಿ ಇಂಥವೇ ಇನ್ನಷ್ಟು ಬೆಳವಣಿಗೆಗಳು ಬಹಳ ಕ್ಷಿಪ್ರಗತಿಯಲ್ಲಿ ಘಟಿಸಿದ್ದು ಈಗ ಇತಿಹಾಸ.

ಅಂತರಜಾಲದ ಹುಟ್ಟು, ಮೊಬೈಲ್ ಫೋನ್ ವಿಕಾಸವೇ ಮೊದಲಾದ ಇಂತಹ ಐತಿಹಾಸಿಕ ಬೆಳವಣಿಗೆಗಳ ಸಾಲಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಘಟನೆ ಗೂಗಲ್ ಸಂಸ್ಥೆಯ ಪ್ರಾರಂಭ. ಈ ಘಟನೆ ಸಂಭವಿಸಿ ಇದೀಗ ಇಪ್ಪತ್ತು ವರ್ಷ. ಬರಿಯ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಂದು ವಾಣಿಜ್ಯ ಸಂಸ್ಥೆ ಪ್ರಪಂಚದ ಜನಸಂಖ್ಯೆಯ ಬಹುದೊಡ್ಡ ಭಾಗದ ಮೇಲೆ ಈ ಪರಿಯ ಪ್ರಭಾವ ಬೀರಿರುವ ಇನ್ನೊಂದು ಉದಾಹರಣೆ ಹುಡುಕಲು ಸಾಕಷ್ಟು ಕಷ್ಟಪಡಬೇಕಾಗುತ್ತದೋ ಏನೋ!

ಶುಕ್ರವಾರ, ಆಗಸ್ಟ್ 31, 2018

ವೀಕೆಂಡ್ ವಿಶೇಷ: ವೈ-ಫೈ ವಿಸ್ಮಯ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನ ಪ್ರಪಂಚದಲ್ಲಿ ಪ್ರತಿ ಕ್ಷಣವೂ ಒಂದಲ್ಲ ಒಂದು ಬಗೆಯ ಸಂವಹನ ನಡೆಯುತ್ತಿರುತ್ತದೆ. ನಮ್ಮ ಮನೆಗಳ ಉದಾಹರಣೆಯನ್ನೇ ತೆಗೆದುಕೊಂಡರೆ ಮೊಬೈಲ್ ಫೋನು, ಕಂಪ್ಯೂಟರು, ಟೀವಿ ಮುಂತಾದ ಹಲವಾರು ಬಗೆಯ ಸಾಧನಗಳೊಡನೆ ನಾವು ಪ್ರತಿದಿನವೂ ವ್ಯವಹರಿಸುತ್ತೇವೆ.

ಈ ವ್ಯವಹಾರವೆಲ್ಲ ತಂತಿಗಳ ಮೂಲಕವೇ ಆಗುವಂತಿದ್ದರೆ ಹೇಗಿರುತ್ತಿತ್ತು? ಮೊಬೈಲ್ ಫೋನುಗಳನ್ನು ಸಂಪರ್ಕಿಸುವ ನೂರಾರು ತಂತಿಗಳು ಪ್ರತಿ ಮೊಬೈಲ್ ಟವರಿನಿಂದಲೂ ಹೊರಟು ಬೀದಿಯಲ್ಲೆಲ್ಲ ಅವಾಂತರ ಸೃಷ್ಟಿಸುತ್ತಿದ್ದವು; ಟೀವಿಯನ್ನೂ ರಿಮೋಟನ್ನೂ ಸಂಪರ್ಕಿಸುವ ತಂತಿ ದಿವಾನಖಾನೆಯಲ್ಲಿ ಓಡಾಡುವಾಗೆಲ್ಲ ನಮ್ಮ ಕಾಲಿಗೆ ತೊಡರಿಕೊಳ್ಳುತ್ತಿತ್ತು!

ಬುಧವಾರ, ಆಗಸ್ಟ್ 22, 2018

ಕಡಿಮೆ ಸ್ಮಾರ್ಟ್ ಫೋನುಗಳಿಗೆ ಹೆಚ್ಚು ಸ್ಮಾರ್ಟ್ ತಂತ್ರಾಂಶ!

ಟಿ. ಜಿ. ಶ್ರೀನಿಧಿ

ಇದು ಸ್ಮಾರ್ಟ್ ಫೋನುಗಳ ಕಾಲ. ಮಾರುಕಟ್ಟೆಯಲ್ಲಂತೂ ದಿನಕ್ಕೊಂದರಂತೆ ಹೊಸಹೊಸ ಮಾದರಿಗಳ ಭರಾಟೆ. ನಿನ್ನೆ ಬಂದ ಫೋನಿಗಿಂತ ಇಂದು ಬಂದಿದ್ದರ ಸಾಮರ್ಥ್ಯ ಹೆಚ್ಚು. ಅಂಗೈ ಮೇಲಿನ ಕಂಪ್ಯೂಟರುಗಳೆಂದು ಕರೆಸಿಕೊಳ್ಳುವ ಫೋನುಗಳು ದೊಡ್ಡ ಕಂಪ್ಯೂಟರುಗಳ ಸಾಮರ್ಥ್ಯದೊಡನೆಯೇ ಸ್ಪರ್ಧೆಗಿಳಿದು ಈಗಾಗಲೇ ಸಾಕಷ್ಟು ಸಮಯ ಕಳೆದಿದೆ. ಕಂಪ್ಯೂಟರಿನಲ್ಲಿ ಬಳಸುವಷ್ಟೇ, ಅಥವಾ ಅದಕ್ಕಿಂತಲೂ ಹೆಚ್ಚು ಸಕ್ಷಮವಾದ ತಂತ್ರಾಂಶಗಳು ಇದೀಗ ಮೊಬೈಲ್ ಆಪ್‌ಗಳಾಗಿ ನಮ್ಮೆದುರು ಬಂದಿವೆ.

ಬುಧವಾರ, ಆಗಸ್ಟ್ 15, 2018

ಇಜ್ಞಾನ ವಿಶೇಷ: ಮೊಬೈಲ್ ಫೋನಿನಿಂದ ಸ್ವಾತಂತ್ರ್ಯ ಬೇಕಿದೆ!

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಕ್ಷೇತ್ರದ ಬಗೆಗಿನ ಮಾತು ಎಂದಾಕ್ಷಣ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಹಾಗೂ ರೋಬಾಟ್‌ಗಳ ಪ್ರಸ್ತಾಪ ಬರುವುದು ಈಚೆಗೆ ಸಾಮಾನ್ಯವಾಗಿರುವ ಸಂಗತಿ. ಎಐ ಹಾಗೂ ರೋಬಾಟ್‌ಗಳು ಮುಂದೊಮ್ಮೆ ಏನೆಲ್ಲ ಅನಾಹುತಗಳಿಗೆ ಕಾರಣವಾಗಬಹುದು ಗೊತ್ತೇ ಎನ್ನುತ್ತ ಭಯೋತ್ಪಾದನೆ ಮಾಡುವುದು ಕೂಡ ಈಗ ಹಲವರ ಫ್ಯಾಶನ್.

ಭವಿಷ್ಯದಲ್ಲಿ ರೋಬಾಟ್‌ಗಳು ನಮ್ಮನ್ನೆಲ್ಲ ಹಿಡಿತದಲ್ಲಿ ಇಟ್ಟುಕೊಳ್ಳುತ್ತವೋ ಇಲ್ಲವೋ ಎನ್ನುವ ಪ್ರಶ್ನೆಯನ್ನು ಸದ್ಯಕ್ಕೆ ಮರೆತು, ಮೊಬೈಲ್ ಫೋನಿನಂತಹ ಇಂದಿನ ಸಾಧನಗಳೇ ರೋಬಾಟ್‌ಗಳೆಂದು ಕೇವಲ ಅರೆಕ್ಷಣದ ಮಟ್ಟಿಗೆ ಭಾವಿಸಿ. ಇಂದಿನ ಈ ರೋಬಾಟ್‌ಗಳು ನಮ್ಮನ್ನು ಈಗಾಗಲೇ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿವೆ ಎನಿಸುವುದಿಲ್ಲವೇ?

ಗುರುವಾರ, ಆಗಸ್ಟ್ 9, 2018

ಸೈಬರ್ ಅಪರಾಧ ಜಗತ್ತಿನಲ್ಲಿ

ಉದಯ ಶಂಕರ ಪುರಾಣಿಕ

ಒಂದು ದಿನಕ್ಕೆ ಎಷ್ಟು ಹೊಸ ಸೈಬರ್ ದಾಳಿಗಳು ನಡೆಯುತ್ತವೆ ಊಹಿಸಬಲ್ಲಿರಾ ಎನ್ನುವ ಪ್ರಶ್ನೆಯೊಂದಿಗೆ ಈ ಸರಣಿಯ ಮೊದಲ ಲೇಖನ ಮುಕ್ತಾಯವಾಗಿತ್ತು.

೨೦೧೭ರಲ್ಲಿ ವಿಶ್ವ ಸೈಬರ್‍ ಅಪರಾಧಗಳ ಕುರಿತು ನಡೆದಿರುವ ವಾರ್ಷಿಕ ಸಮೀಕ್ಷೆಯ ಪ್ರಕಾರ ವಿಶ್ವಾದ್ಯಂತ ದಿನಕ್ಕೆ ಸರಾಸರಿ ೨೩ ಲಕ್ಷ ಹೊಸ ಸೈಬರ್‍ ದಾಳಿಗಳು ನಡೆಯುತ್ತವೆ. ಅಂದರೆ ಗಂಟೆಗೆ ಸರಾಸರಿ ಒಂದು ಲಕ್ಷ ಹೊಸ ಸೈಬರ್‍ ದಾಳಿಗಳು ನಡೆಯುತ್ತವೆ!

ಇಷ್ಟು ದೊಡ್ಡ ಪ್ರಮಾಣದಲ್ಲಿ ಸೈಬರ್‍ ದಾಳಿಗಳು ನಡೆದಿರುವಂತೆ, ವಿಶ್ವದ ಕುಖ್ಯಾತ ಸೈಬರ್‍ ಅಪರಾಧಿಗಳನ್ನು ಬಂಧಿಸಿ  ಜೈಲಿಗಟ್ಟುವ ಕೆಲಸ ಕೂಡಾ ನಡೆಯುತ್ತಿದೆ. ಕಳೆದ ವರ್ಷ, ಅಂದರೆ ೨೦೧೭ರಲ್ಲಿ ಹೀಗೆ ಬಂಧಿಸಲಾದ ಮೂರು ಪ್ರಮುಖ ಅಪರಾಧಿಗಳ, ಅವರ ಕುಕೃತ್ಯಗಳ ಕುರಿತು ಕೆಲ ವಿವರಗಳು ಹೀಗಿವೆ.

ಸೋಮವಾರ, ಆಗಸ್ಟ್ 6, 2018

ಆಂಡ್ರಾಯ್ಡ್ ಹೊಸ ಆವೃತ್ತಿಗೆ ಹೂರಣದ ಕಡುಬಿನ ಹೆಸರು!

ಇಜ್ಞಾನ ವಿಶೇಷ



ಸ್ಮಾರ್ಟ್‍ಫೋನುಗಳಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆಗಳ (ಆಪರೇಟಿಂಗ್ ಸಿಸ್ಟಂ, ಓಎಸ್‍) ಪೈಕಿ ಬಹಳ ಜನಪ್ರಿಯವಾಗಿರುವುದು, ನಮಗೆ ಚೆನ್ನಾಗಿ ಪರಿಚಯವಿರುವುದು ಆಂಡ್ರಾಯ್ಡ್. ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಗೂಗಲ್‍ನ ಉತ್ಪನ್ನ ಆಂಡ್ರಾಯ್ಡ್‌ನ ಹೊಸ ಆವೃತ್ತಿ ಸದ್ಯದಲ್ಲೇ ಹೊರಬರಲಿದೆ ಎನ್ನುವುದು ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ.

ಮಂಗಳವಾರ, ಜುಲೈ 31, 2018

ನಿಮ್ಮ ಫೋನಿನಲ್ಲಿ ಎಷ್ಟು ಕ್ಯಾಮೆರಾ ಇದೆ?

ಟಿ. ಜಿ. ಶ್ರೀನಿಧಿ


ಫೋಟೋ ತೆಗೆಸಿಕೊಳ್ಳುವುದೇ ವಿಶೇಷ ಸಂಭ್ರಮವಾಗಿದ್ದ ಕಾಲವೂ ಒಂದಿತ್ತು. ನಾವೆಲ್ಲ ಶಾಲೆಗೆ ಹೋಗುತ್ತಿದ್ದಾಗ ಅದೊಂದು ವಿಶೇಷ ವಾರ್ಷಿಕ ಆಚರಣೆ. ಛಾಯಾಗ್ರಾಹಕರು ಶಾಲೆಗೆ ಬರುವುದು, ಅವರಿಂದ ಫೋಟೋ ತೆಗೆಸಿಕೊಳ್ಳಲು ನಾವೆಲ್ಲ ಸಿದ್ಧವಾಗಿರುವುದು - ಇದೆಲ್ಲ ಅಂದಿನ ಕಾಲಕ್ಕೆ ದೊಡ್ಡ ಸಂಗತಿಗಳು.

ಆಮೇಲೆ ಮನೆಗಳಿಗೂ ಕ್ಯಾಮೆರಾ ಬಂತು. ಅದು ಡಿಜಿಟಲ್ ಆದಮೇಲಂತೂ ಕ್ಯಾಮೆರಾಗಳ ಸಂಖ್ಯೆ ಇನ್ನಷ್ಟು ಜಾಸ್ತಿಯಾಯಿತು. ಫೋಟೋ ತೆಗೆಸಿಕೊಳ್ಳುವುದು ವಿಶೇಷ ಎನ್ನುವ ಭಾವನೆ ಹೋಗಿ ದಿನನಿತ್ಯದ ಅನುಭವಗಳ ಪೈಕಿ ಅದೂ ಒಂದು ಎನ್ನಿಸಲು ಶುರುವಾಯಿತು.

ಶುಕ್ರವಾರ, ಜುಲೈ 27, 2018

ಬೆರಳ ತುದಿಯ ಜಗತ್ತು

ನಮ್ಮ ಬೆರಳುಗಳ ಫೋಟೋ ಪಡೆದ ದುಷ್ಕರ್ಮಿಗಳು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸೆಲ್ಫಿಗಳಲ್ಲಿ ನಿಮ್ಮ ಬೆರಳು ಕಾಣದಂತೆ ನೋಡಿಕೊಳ್ಳಿ ಎಂಬ ಸಲಹೆಯೂ ಕೇಳಸಿಗುತ್ತಿದೆ. ಈ ಸಂದರ್ಭದಲ್ಲಿ ಬೆರಳ ತುದಿಯ ಫಿಂಗರ್‌ಪ್ರಿಂಟ್ ಜಗತ್ತಿನಲ್ಲೊಂದು ಸುತ್ತು...   
ಟಿ. ಜಿ. ಶ್ರೀನಿಧಿ


ಶ್ರೀಕೃಷ್ಣ ಪರಮಾತ್ಮ ಒಂದೇ ಬೆರಳಿನಿಂದ ಗೋವರ್ಧನಗಿರಿಯನ್ನು ಎತ್ತಿದ್ದನಂತೆ. ಇಂತಹ ಸಾಧನೆಗಳೆಲ್ಲ ನಮ್ಮಂತಹ ಹುಲುಮಾನವರಿಗೆ ಸಾಧ್ಯವಾಗದಿದ್ದರೂ ಇಂದಿನ ತಂತ್ರಜ್ಞಾನ ನಮ್ಮ ಬೆರಳುಗಳಿಗೂ ಒಂದಷ್ಟು ವಿಶೇಷ ಶಕ್ತಿಗಳನ್ನು ತಂದುಕೊಟ್ಟಿದೆ.

ಇಂತಹ ಹಲವು ಶಕ್ತಿಗಳ ಹಿನ್ನೆಲೆಯಲ್ಲಿರುವುದು ನಮ್ಮ ಬೆರಳ ಗುರುತು, ಅರ್ಥಾತ್ ಫಿಂಗರ್ ಪ್ರಿಂಟ್.

ಬುಧವಾರ, ಜುಲೈ 25, 2018

ಸೈಬರ್ ಜಗತ್ತಿನ ಕರಾಳ ಮುಖ

ಉದಯ ಶಂಕರ ಪುರಾಣಿಕ


ಡಿಸೆಂಬರ್ 1984ರಲ್ಲಿ ನಡೆದ ಭೋಪಾಲ ಅನಿಲ ದುರಂತದ ಬಗ್ಗೆ ನೀವು ಕೇಳಿರಬಹುದು. ಆ ದುರಂತದಲ್ಲಿ ಸಾವಿರಾರು ಜನ ಸಾವಿಗೀಡಾದರೆ, ಐದು ಲಕ್ಷಕ್ಕೂ ಹೆಚ್ಚು ಜನ ಅದರ ಪರಿಣಾಮಗಳಿಂದಾಗಿ ಸಂಕಷ್ಟ ಅನುಭವಿಸಿದರು.

ಇಂತಹ ಘೋರ ದುರಂತವೊಂದು ಉಕ್ರೇನ್‍ ದೇಶದಲ್ಲಿ ಕೆಲವು ದಿನಗಳ ಹಿಂದೆ ನಡೆಯಲಿತ್ತು.

ಮಂಗಳವಾರ, ಜುಲೈ 24, 2018

ಜುಲೈ ೨೯: ಇಜ್ಞಾನ ಟ್ರಸ್ಟ್‌ನಿಂದ ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮ

ಇಜ್ಞಾನ ವಾರ್ತೆ

ಬೇರೆಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡದಲ್ಲೇ ಒದಗಿಸುವ ತನ್ನ ಪ್ರಯತ್ನಗಳ ಮುಂದುವರಿಕೆಯಾಗಿ ಇಜ್ಞಾನ ಟ್ರಸ್ಟ್ ಬರುವ ಜುಲೈ ೨೯ರಂದು 'ಕನ್ನಡ ನೆಲ-ಜಲ : ನಾಳಿನ ಅರಿವು' ವಿಚಾರ ಸಂಕಿರಣವನ್ನು ಏರ್ಪಡಿಸಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ವಿಷಯತಜ್ಞರು ಇಂದಿನ ಮಹತ್ವದ ವಿಷಯಗಳಾದ ಪರಿಸರ, ಇಂಧನ ಹಾಗೂ ಆಹಾರ ಕುರಿತು ಕನ್ನಡದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

ಸೋಮವಾರ, ಜುಲೈ 23, 2018

ತಿರುಪು ಮೊಳೆಗೂ ಉಂಟು ತಂತ್ರಜ್ಞಾನದ ನಂಟು!

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದ ಬಳಕೆ ಎಂದತಕ್ಷಣ ನಮಗೆ ನೆನಪಾಗುವ ಉದಾಹರಣೆಗಳಲ್ಲಿ ಯಂತ್ರಗಳಿಗೆ ಮೊದಲ ಸ್ಥಾನ. ಸಣ್ಣ ಕ್ಯಾಲ್ಕುಲೇಟರಿನಿಂದ ಬೃಹದಾಕಾರದ ರಾಕೆಟ್‌ವರೆಗೆ ಯಂತ್ರ ಯಾವುದೇ ಆಗಿದ್ದರೂ ಅವುಗಳ ರಚನೆ ಬಹಳ ಸಂಕೀರ್ಣವಾಗಿರುವುದು ಸಾಮಾನ್ಯ.

ಹಾಗೆಂದು ತಂತ್ರಜ್ಞಾನದ ಬಳಕೆ ಸಂಕೀರ್ಣ ವಿಷಯಗಳಿಗೆ ಮಾತ್ರ ಸೀಮಿತ ಎಂದು ಹೇಳಬಹುದೇ? ಖಂಡಿತಾ ಇಲ್ಲ. ಏಕೆಂದರೆ ಸಂಕೀರ್ಣ ಯಂತ್ರಗಳ ರಚನೆ ಹಾಗೂ ಕಾರ್ಯಾಚರಣೆಯಲ್ಲಿ ತಂತ್ರಜ್ಞಾನ ಹೇಗೆ ಸಹಾಯ ಮಾಡುತ್ತದೆಯೋ ಅದೇ ರೀತಿ ಬಹಳ ಸರಳವೆನಿಸುವ ಸಂಗತಿಗಳ ಹಿನ್ನೆಲೆಯಲ್ಲೂ ತಂತ್ರಜ್ಞಾನದ ಕೈವಾಡ ಇರುತ್ತದೆ. ಬಹಳಷ್ಟು ಸಾರಿ ಇದು ನಮ್ಮ ಗಮನಕ್ಕೇ ಬಂದಿರುವುದಿಲ್ಲ ಎಂದರೂ ಸರಿಯೇ!

ಇಂತಹ ಸರಳ ಸಂಗತಿಗಳಿಗೆ ತಿರುಪು ಮೊಳೆ, ಅರ್ಥಾತ್ ಸ್ಕ್ರೂ , ಒಂದು ಉತ್ತಮ ಉದಾಹರಣೆ. ಇವನ್ನು ಬಳಸದ ಯಂತ್ರಗಳೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ.

ಬುಧವಾರ, ಜುಲೈ 18, 2018

ಮಾನ್ಸೂನ್ ಹಂಗಾಮ ಕೊಡುಗೆ: ರೂ. 501ಕ್ಕೆ* ಜಿಯೋಫೋನ್!

ಇಜ್ಞಾನ ವಿಶೇಷ


ರಿಲಯನ್ಸ್ ಜಿಯೋ ಸಂಸ್ಥೆ ಕಳೆದವರ್ಷ ಪರಿಚಯಿಸಿದ ಜಿಯೋಫೋನ್ ಅಪಾರ ಜನಪ್ರಿಯತೆ ಗಳಿಸಿರುವುದು ನಮಗೆಲ್ಲ ಗೊತ್ತೇ ಇದೆ. 1500 ರೂಪಾಯಿಗಳಿಗೆ ಫೋನು, ತಿಂಗಳಿಗೆ 49 ರೂಪಾಯಿಗೆ ಅಪರಿಮಿತ ಕರೆ ಸೌಲಭ್ಯ ನೀಡಿದ ಈ ಫೋನು ಇದೀಗ ರೂ. 501 ವಾಸ್ತವಿಕ ಬೆಲೆಗೆ ಗ್ರಾಹಕರಿಗೆ ದೊರಕಲಿದೆ. ಹೇಗೆ? ತಿಳಿಯಲು ಈ ಬರಹ ಓದಿ!

ಮಂಗಳವಾರ, ಜುಲೈ 17, 2018

ವಿಶ್ವ ಎಮೋಜಿ ದಿನ ವಿಶೇಷ: ಇಂದು ಸ್ಮೈಲಿ ದಿನ!

ಟಿ. ಜಿ. ಶ್ರೀನಿಧಿ


ಪಠ್ಯ ಸಂದೇಶ, ಅಂದರೆ ಟೆಕ್ಸ್ಟ್ ಮೆಸೇಜುಗಳ ವಿನಿಮಯಕ್ಕಾಗಿ ವಾಟ್ಸ್ಆಪ್‍ ಹಾಗೂ ಫೇಸ್‍ಬುಕ್‍ನಂತಹ ಮಾಧ್ಯಮಗಳನ್ನು ಬಳಸುವುದು ಈಚಿನ ವರ್ಷಗಳಲ್ಲಿ ವ್ಯಾಪಕವಾಗಿರುವ ಅಭ್ಯಾಸ. ಇಂತಹ ಸಂದೇಶಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ನೆರವಾಗುವ ಚಿತ್ರರೂಪದ ಸಂಕೇತಗಳ ಬಳಕೆಯೂ ಗಮನಾರ್ಹವಾಗಿ ಹೆಚ್ಚಿದೆ. ಇದು ಯಾವ ಮಟ್ಟ ತಲುಪಿದೆಯೆಂದರೆ ನಮ್ಮ ಅದೆಷ್ಟೋ ಸಂದೇಶಗಳಲ್ಲಿ ಇಂತಹ ಸಂಕೇತಗಳು ಮಾತ್ರವೇ ಇರುತ್ತವೆ!

ಪಠ್ಯಸಂದೇಶಗಳ ಜಗತ್ತಿನಲ್ಲಿ ಇಷ್ಟು ದೊಡ್ಡ ಬದಲಾವಣೆ ತಂದ ಶ್ರೇಯ ಈ ಸಂಕೇತಗಳದ್ದು. ಸಾಮಾನ್ಯ ಬಳಕೆಯಲ್ಲಿ ಸ್ಮೈಲಿಗಳೆಂದೂ ಅಧಿಕೃತವಾಗಿ 'ಎಮೋಜಿ'ಗಳೆಂದೂ ಗುರುತಿಸುವುದು ಇವನ್ನೇ.

ಸೋಮವಾರ, ಜುಲೈ 16, 2018

ಬಲ್ಬು-ಫ್ಯಾನುಗಳೂ ಈಗ ಸ್ಮಾರ್ಟ್!

ಯಶಸ್ವಿನಿ ವೈ.


ಎಲ್ಲರ ಮನೆ ದೋಸೆಯೂ ತೂತು ಎನ್ನುವ ಮಾತೊಂದಿದೆ. ಅದರಂತೆ ಬಹುಪಾಲು ಮನೆಗಳ ದೊಡ್ಡ ಸಮಸ್ಯೆಯೆಂದರೆ ಮನೆಯ ಎಲ್ಲ ಸದಸ್ಯರನ್ನೂ ಒಟ್ಟಿಗೆ ಊಟಕ್ಕೆ ಸೇರಿಸುವುದು. ಬೇರೆ ಸಮಯದಲ್ಲಿ ಅಲ್ಲಲ್ಲೇ ಇರುವ ಮನೆಯ ಸದಸ್ಯರು ಊಟದ ಹೊತ್ತಿಗೆ ಸರಿಯಾಗಿ ಅವರವರ ಕೆಲಸದಲ್ಲಿ ಕಳೆದುಹೋಗಿರುತ್ತಾರೆ. ಒಬ್ಬರು ಟಿವಿ ಮುಂದಿದ್ದರೆ ಇನ್ನೊಬ್ಬರು ರೂಮಿನಲ್ಲಿ ಮೊಬೈಲಿನಲ್ಲಿ  ಮಗ್ನ. ಇನ್ನೊಬ್ಬರಿಗೆ ಹೋಮ್‌ವರ್ಕ್ ಮಾಡಲು ಅದೇ ಮಹೂರ್ತ.

ಇಂತಹ ಪರಿಸ್ಥಿತಿಯ ಬದಲು ಊಟದ ಸಮಯಕ್ಕೆ ಸರಿಯಾಗಿ ಗೋಡೆಯ ಮೇಲಿನ ದೀಪವೇ ಸೂಚನೆ ಕೊಡುವಂತಿದ್ದರೆ? ನಿದ್ರಿಸುವ ವೇಳೆಗೆ ಸರಿಯಾಗಿ ದೀಪಗಳು ತಾವೇ ಆರಿಹೋಗುವಂತಿದ್ದರೆ? ಇಂತಹ ಅನೇಕ ಸಾಧ್ಯತೆಗಳನ್ನು ಇಂದಿನ ತಂತ್ರಜ್ಞಾನ ತೆರೆದಿಟ್ಟಿದೆ.

ಮಂಗಳವಾರ, ಜುಲೈ 10, 2018

ಕತೆ ಹೆಣೆಯುವ 'ಸ್ಟೋರಿವೀವರ್'

ಇಜ್ಞಾನ ವಿಶೇಷ


ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ಅತ್ಯಂತ ಸುಲಭದ ಮಾರ್ಗವೆಂದರೆ ಅವರಿಗೆ ಕತೆಪುಸ್ತಕಗಳ ರುಚಿ ತೋರಿಸುವುದು. ಅಪ್ಪ-ಅಮ್ಮ ಅಥವಾ ತಾತ-ಅಜ್ಜಿಯರಿಂದ ಕೇಳಿ ಕತೆಗಳ ಬಗ್ಗೆ ಚಿಕ್ಕಂದಿನಲ್ಲೇ ಕುತೂಹಲ ಬೆಳೆಸಿಕೊಂಡ ಮಕ್ಕಳು ಮುಂದೆ ಪುಸ್ತಕಗಳ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳುವುದು ಬಹುತೇಕ ಖಚಿತವೇ ಎನ್ನಬಹುದು.

ಹೀಗೆಂದು ಮಕ್ಕಳಿಗೆ ಪುಸ್ತಕಗಳನ್ನು ಒದಗಿಸಲು ಹೊರಡುವ ಪೋಷಕರಿಗೆ ಎದುರಾಗುವ ಮುಖ್ಯ ಸಮಸ್ಯೆಗಳೆಂದರೆ ಪುಸ್ತಕಗಳಲ್ಲಿ ವೈವಿಧ್ಯದ ಕೊರತೆ ಹಾಗೂ ಹೆಚ್ಚು ಹೆಚ್ಚು ಪುಸ್ತಕಗಳನ್ನು ಕೊಳ್ಳಲು ಹಿಂಜರಿಯುವಂತೆ ಮಾಡುವ ದುಬಾರಿ ಬೆಲೆಗಳು.

ಶನಿವಾರ, ಜುಲೈ 7, 2018

ಜಿಯೋಫೋನ್ ಜಗದಲ್ಲಿ ಹೊಸ ಸುದ್ದಿಗಳ ಸಮಯ!

ಇಜ್ಞಾನ ವಿಶೇಷ

ರಿಲಯನ್ಸ್ ಜಿಯೋ ಸಂಸ್ಥೆ ಕಳೆದವರ್ಷ ಪರಿಚಯಿಸಿದ ಜಿಯೋಫೋನ್ ಅಪಾರ ಜನಪ್ರಿಯತೆ ಗಳಿಸಿರುವುದು ನಮಗೆಲ್ಲ ಗೊತ್ತೇ ಇದೆ. 1500 ರೂಪಾಯಿಗಳಿಗೆ ಫೋನು, ತಿಂಗಳಿಗೆ 49 ರೂಪಾಯಿಗೆ ಅಪರಿಮಿತ ಕರೆ ಸೌಲಭ್ಯ ನೀಡಿದ ಈ ಫೋನಿನ ಬಗ್ಗೆ ಇದೀಗ ಇನ್ನೂ ಒಂದು ಹೊಸ ಸುದ್ದಿ ಬಂದಿದೆ. ಇತರ ಫೀಚರ್ ಫೋನ್ ಬಳಕೆದಾರರು ಅತ್ಯಂತ ಕಡಿಮೆ ಬೆಲೆಗೆ ಜಿಯೋಫೋನ್ ಪಡೆಯುವ ಹಾಗೂ ಕೊಂಚವೇ ಹೆಚ್ಚಿನ ಬೆಲೆಗೆ ಹಲವು ಉನ್ನತ ಸೌಲಭ್ಯಗಳ 'ಜಿಯೋಫೋನ್ 2' ಕೊಳ್ಳಬಹುದಾದ ಸಾಧ್ಯತೆಯ ಬಗ್ಗೆ ಜುಲೈ 5, 2018ರಂದು ನಡೆದ ರಿಲಯನ್ಸ್ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಲಾಗಿದೆ. ಅಷ್ಟೇ ಅಲ್ಲ, ವಾಟ್ಸ್‌ಆಪ್ ಹಾಗೂ ಯೂಟ್ಯೂಬ್‌ನಂತಹ ಜನಪ್ರಿಯ ಆಪ್‌ಗಳೂ ಇನ್ನುಮುಂದೆ ಜಿಯೋಫೋನ್ ಗ್ರಾಹಕರಿಗೆ ದೊರಕಲಿವೆ.

ಈ ಕೊಡುಗೆಗಳ ವೈಶಿಷ್ಟ್ಯವೇನು, ಇವನ್ನು ನಾವು ಪಡೆದುಕೊಳ್ಳುವುದು ಹೇಗೆ? ವಿವರ ಇಲ್ಲಿದೆ!

ಬುಧವಾರ, ಜುಲೈ 4, 2018

ವಿಸಿಆರ್ ನೆನಪಿದೆಯೇ?

ಟಿ. ಜಿ. ಶ್ರೀನಿಧಿ


ಇಂದಿನ ಸನ್ನಿವೇಶದಲ್ಲಿ ವಿಸಿಆರ್ ಎಂಬ ಹೆಸರೇ ಅನೇಕರಿಗೆ ಅಪರಿಚಿತ. ಆದರೆ ಒಂದೆರಡು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಬೇಕೆಂದಾಗ ಸಿನಿಮಾ ಟಾಕೀಸುಗಳಿಗೆ ಹೋಗಲಾರದ ಅದೆಷ್ಟೋ ಮಂದಿಗೆ ಆಗ ಅವರ ಇಷ್ಟದ ಸಿನಿಮಾ ತೋರಿಸುತ್ತಿದ್ದದ್ದು ಇದೇ ಮಾಯಾಪೆಟ್ಟಿಗೆ.

ಅಂದಹಾಗೆ ವಿಸಿಆರ್ ಎನ್ನುವುದು 'ವೀಡಿಯೋ ಕ್ಯಾಸೆಟ್ ರೆಕಾರ್ಡರ್' ಎಂಬ ಹೆಸರಿನ ಹ್ರಸ್ವರೂಪ. ಇದನ್ನು ವಿಸಿಪಿ, ಅಂದರೆ 'ವೀಡಿಯೋ ಕ್ಯಾಸೆಟ್ ಪ್ಲೇಯರ್' ಎಂದೂ ಕರೆಯಲಾಗುತ್ತಿತ್ತು. ಧ್ವನಿಯನ್ನಷ್ಟೇ ಕೇಳಿಸುತ್ತಿದ್ದ ಆಡಿಯೋ ಕ್ಯಾಸೆಟ್ಟುಗಳಿಗಿಂತ ನಾಲ್ಕಾರು ಪಟ್ಟು ದೊಡ್ಡದಾದ ಕ್ಯಾಸೆಟ್ಟುಗಳನ್ನು ಬಳಸಿ ಚಲನಚಿತ್ರಗಳನ್ನು ತೋರಿಸುತ್ತಿದ್ದದ್ದು ಈ ಮಾಯಾಪೆಟ್ಟಿಗೆಯ ಹೆಚ್ಚುಗಾರಿಕೆ.

ಇಷ್ಟೇ ಹೇಳಿದರೆ ವಿಸಿಆರ್ ವೈಶಿಷ್ಟ್ಯವನ್ನು ಪೂರ್ತಿಯಾಗಿ ವಿವರಿಸಿದಂತೆ ಆಗುವುದಿಲ್ಲ.

ಶನಿವಾರ, ಜೂನ್ 30, 2018

ಸೋಮೀ ದಿನ ವಿಶೇಷ: ಸೋಶಿಯಲ್ ಮೀಡಿಯಾ ನಾವೆಯಲ್ಲಿ ನಾವೆಲ್ಲ!

ಟಿ. ಜಿ. ಶ್ರೀನಿಧಿ


ಹನ್ನೊಂದು ವರ್ಷಗಳ ಹಿಂದೆ, ೨೦೦೭ರ ಜೂನ್ ೨೯ರಂದು ವಿಶೇಷವಾದ ಮೊಬೈಲ್ ದೂರವಾಣಿಯೊಂದು ಮಾರುಕಟ್ಟೆಗೆ ಬಂತು. ಪ್ರತಿವಾರ, ಪ್ರತಿದಿನ ಹೊಸ ಮೊಬೈಲುಗಳು ಪರಿಚಯವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಇದೇನೂ ದೊಡ್ಡ ಸಂಗತಿ ಎನ್ನಿಸುವುದಿಲ್ಲ. ಆದರೆ ಆ ದಿನ ಮಾರುಕಟ್ಟೆಗೆ ಬಂತಲ್ಲ ಆ ಫೋನು, ಅದು ನಮ್ಮ ಪ್ರಪಂಚವನ್ನೇ ಬದಲಿಸಿಬಿಟ್ಟಿತು.

ಅಂದಹಾಗೆ ಆ ದಿನ ಮಾರುಕಟ್ಟೆಗೆ ಬಂದದ್ದು ಐಫೋನ್. ಸ್ಮಾರ್ಟ್‌ಫೋನ್ ಪರಿಕಲ್ಪನೆಯನ್ನು ಜನಸಾಮಾನ್ಯರಿಗೂ ತಲುಪಿಸಿದ್ದು ಈ ಫೋನಿನ ಹೆಗ್ಗಳಿಕೆ. ಮೊದಲು ಬಂದ ಐಫೋನ್ ಹಾಗೂ ಆನಂತರ ಬಂದ ಆಂಡ್ರಾಯ್ಡ್ ಫೋನುಗಳಿಂದಾಗಿ ಸ್ಮಾರ್ಟ್‌ ದೂರವಾಣಿಗಳ ವ್ಯಾಪ್ತಿ ಅದೆಷ್ಟು ವಿಸ್ತರಿಸಿತೆಂದರೆ ಇದೀಗ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಪ್ರತಿಯೊಂದು ಕ್ಷಣದಲ್ಲೂ ಅವು ನಮ್ಮ ಬದುಕನ್ನು ಆವರಿಸಿಕೊಂಡುಬಿಟ್ಟಿವೆ.

ಸ್ಮಾರ್ಟ್‌ಫೋನಿನ ಸಾಧನೆಗಳ ಸಾಲಿನಲ್ಲಿ ಕಂಪ್ಯೂಟರನ್ನು ಅಂಗೈ ಗಾತ್ರಕ್ಕೆ ಇಳಿಸಿದ್ದಕ್ಕೆ ಪ್ರಮುಖ ಸ್ಥಾನವಿದೆ, ನಿಜ. ಇದರ ಜೊತೆಗೆ ಸಂವಹನದ ಪರಿಭಾಷೆಯನ್ನು ಆಮೂಲಾಗ್ರವಾಗಿ ಬದಲಾಯಿಸಿದ್ದೂ ಸ್ಮಾರ್ಟ್‌ಫೋನುಗಳದೇ ಸಾಧನೆ. ಇಂತಹುದೊಂದು ಬದಲಾವಣೆಗೆ ಕಾರಣವಾದ ಸಂಗತಿಗಳ ಪೈಕಿ ಸಾಮಾಜಿಕ ಮಾಧ್ಯಮ, ಅರ್ಥಾತ್ ಸೋಶಿಯಲ್ ಮೀಡಿಯಾದ ಉಗಮ ಕೂಡ ಒಂದು.

ಬುಧವಾರ, ಜೂನ್ 27, 2018

ಜಾಲತಾಣಗಳ ಮಾಯಾಜಾಲ

ಇಜ್ಞಾನ ವಿಶೇಷ

ಅಂತರಜಾಲ (ಇಂಟರ್‌ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಮಾಯಾಜಾಲ ನಮ್ಮೆದುರು ತೆರೆದುಕೊಳ್ಳುವುದು ಜಾಲತಾಣಗಳ (ವೆಬ್‌ಸೈಟ್) ಮೂಲಕ. ನಿರ್ದಿಷ್ಟ ವ್ಯಕ್ತಿ ಅಥವಾ ಸಂಸ್ಥೆಯನ್ನು ಜಾಲಲೋಕದಲ್ಲಿ ಪ್ರತಿನಿಧಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದವು ಈ ಜಾಲತಾಣಗಳು. ಕಾಲಕ್ರಮದಲ್ಲಿ ಅವುಗಳ ಜನಪ್ರಿಯತೆ ಹಾಗೂ ವ್ಯಾಪ್ತಿ ಯಾವ ರೀತಿಯಲ್ಲಿ ಹೆಚ್ಚಿತೆಂದರೆ ಇದೀಗ ಅದೆಷ್ಟೋ ಸಂಸ್ಥೆಗಳ, ವ್ಯಕ್ತಿಗಳ ವ್ಯವಹಾರವೆಲ್ಲ ಜಾಲತಾಣಗಳ ಮೇಲೆಯೇ ಅವಲಂಬಿತವಾಗಿದೆ.

ಶುಕ್ರವಾರ, ಜೂನ್ 22, 2018

ವೀಕೆಂಡ್ ಇಜ್ಞಾನ: ಸೂಪರ್ ಸಾಮರ್ಥ್ಯದ ಸಮಿಟ್

ಟಿ. ಜಿ. ಶ್ರೀನಿಧಿ


ಒಂದಾನೊಂದು ಕಾಲದಲ್ಲಿ ಎಲ್ಲ ಲೆಕ್ಕಾಚಾರಗಳನ್ನೂ - ಅದು ಎಷ್ಟೇ ಸಂಕೀರ್ಣವಾಗಿರಲಿ - ಮನುಷ್ಯರೇ ಮಾಡಬೇಕಾದ್ದು ಅನಿವಾರ್ಯವಾಗಿತ್ತು. ಲೆಕ್ಕಾಚಾರವೆಂದರೆ ಮನೆಯ ತಿಂಗಳ ಖರ್ಚುವೆಚ್ಚದ ವಿವರ ಮಾತ್ರವೇ ಅಲ್ಲ; ತಂತ್ರಜ್ಞರು, ವಿಜ್ಞಾನಿಗಳು, ನಾವಿಕರು ಬಳಸುತ್ತಿದ್ದ ಅದೆಷ್ಟೋ ಕ್ಲಿಷ್ಟ ಲೆಕ್ಕಾಚಾರಗಳಿಗೂ ಆಗ ಇದ್ದದ್ದು ಇದೊಂದೇ ಮಾರ್ಗ.

ಇದನ್ನೆಲ್ಲ ನೋಡುತ್ತಿದ್ದ ಕೆಲವರು ಈ ಪರಿಸ್ಥಿತಿ ಬದಲಿಸಲು ಏನಾದರೂ ಮಾಡಬಹುದೇ ಎಂದು ಯೋಚಿಸುತ್ತಲೇ ಇದ್ದರು. ಬ್ರಿಟನ್ನಿನ ಚಾರ್ಲ್ಸ್ ಬ್ಯಾಬೇಜ್ ಅಂತಹ ವ್ಯಕ್ತಿಗಳಲ್ಲೊಬ್ಬರು. ಮನುಷ್ಯರು ಮಾಡುವ ಲೆಕ್ಕಾಚಾರಗಳನ್ನು ಯಂತ್ರವೇ ಮಾಡುವ ಹಾಗಾದರೆ ಲೆಕ್ಕಾಚಾರದ ವೇಗ ಹಾಗೂ ನಿಖರತೆಗಳೆರಡೂ ಹೆಚ್ಚುತ್ತವೆ ಎಂಬ ಯೋಚನೆ ಇಟ್ಟುಕೊಂಡು ಅವರು 'ಡಿಫರೆನ್ಸ್ ಇಂಜನ್' ಎಂಬ ಯಂತ್ರವೊಂದನ್ನು ವಿನ್ಯಾಸಗೊಳಿಸಿದ್ದರು. ಈ ಯಂತ್ರವೇನಾದರೂ ನಿರ್ಮಾಣವಾಗಿದ್ದರೆ ಹಲವು ವ್ಯಕ್ತಿಗಳು ಹಲವು ದಿನಗಳಲ್ಲಿ ಮಾಡುವ ಕೆಲಸವನ್ನು ಅದು ಹತ್ತಾರು ಪಟ್ಟು ಕಡಿಮೆ ಸಮಯದಲ್ಲಿ ಮಾಡಿಮುಗಿಸುತ್ತಿತ್ತು!

ಮಂಗಳವಾರ, ಜೂನ್ 19, 2018

ಸುಳ್ಳು ಸುದ್ದಿಯ ಸಹವಾಸ

ಟಿ. ಜಿ. ಶ್ರೀನಿಧಿ


ಒಂದೆರಡು ದಶಕಗಳ ಹಿಂದೆ ಸುದ್ದಿಯ ಜೊತೆಗಿನ ನಮ್ಮ ಒಡನಾಟ ಹೆಚ್ಚೇನೂ ವಿಸ್ತೃತವಾಗಿರುತ್ತಿರಲಿಲ್ಲ. ದಿನಪತ್ರಿಕೆಯ ಪುಟಗಳನ್ನು ಬಿಟ್ಟಂತೆ ನಮಗೆ ಸುದ್ದಿ ದೊರಕುತ್ತಿದ್ದದ್ದು ದೂರದರ್ಶನ ಹಾಗೂ ಆಕಾಶವಾಣಿಯ ಮೂಲಕ - ಅದೂ ದಿನಕ್ಕೆ ಒಂದೆರಡು ಬಾರಿ, ಕೆಲವೇ ನಿಮಿಷಗಳ ಅವಧಿಯಲ್ಲಿ.

ಚಾನೆಲ್ಲುಗಳ ಸಂಖ್ಯೆ ಹೆಚ್ಚಿದಂತೆ ಈ ಪರಿಸ್ಥಿತಿ ಬದಲಾಯಿತು, ಸುದ್ದಿ ಪ್ರಸಾರಕ್ಕೆಂದೇ ಪ್ರತ್ಯೇಕ ವಾಹಿನಿಗಳು ಬಂದವು. ಸೆಲೆಬ್ರಿಟಿಗಳ ಸಂಸಾರ ತಾಪತ್ರಯದಿಂದ ಯಾರದೋ ಮನೆಯೊಳಗೆ ನುಗ್ಗಿದ ಚಿರತೆಯವರೆಗೆ ಪ್ರತಿಯೊಂದೂ ಬ್ರೆಕಿಂಗ್ ನ್ಯೂಸ್ ಆಗುವುದು ಶುರುವಾಯಿತು.

ಬುಧವಾರ, ಜೂನ್ 13, 2018

ವೈರ್‌ಲೆಸ್ ಸ್ಪೀಕರ್ ಮಾಯಾಲೋಕ

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನದ ಪ್ರಭಾವವಿರುವ ಬಹುತೇಕ ಕ್ಷೇತ್ರಗಳಲ್ಲಿ ಈಗ ವೈರ್‌ಲೆಸ್‌ನದೇ ಭರಾಟೆ. ಅಂತರಜಾಲ ಸಂಪರ್ಕ, ಮೊಬೈಲ್ ಚಾರ್ಜಿಂಗ್ ಸೇರಿದಂತೆ ನಿಸ್ತಂತು ತಂತ್ರಜ್ಞಾನದ ಹಲವು ಉದಾಹರಣೆಗಳು ನಮಗೆ ಪ್ರತಿದಿನವೂ ಕಾಣಲು ಸಿಗುತ್ತಿವೆ. ಇಂತಹ ಉದಾಹರಣೆಗಳ ಸಾಲಿಗೆ ಕೆಲವರ್ಷಗಳ ಹಿಂದಷ್ಟೇ ಸೇರಿದರೂ ಅಪಾರ ಜನಪ್ರಿಯತೆ ಗಳಿಸಿರುವುದು ವೈರ್‌ಲೆಸ್ ಸ್ಪೀಕರುಗಳು.

ಉಪಯೋಗದ ದೃಷ್ಟಿಯಿಂದ ಇವು ಸಾಮಾನ್ಯ ಸ್ಪೀಕರುಗಳಿಗಿಂತ ಹೆಚ್ಚು ಭಿನ್ನವೇನಲ್ಲ; ಆದರೆ ಧ್ವನಿಯ ಮೂಲದೊಡನೆ  ಸಂಪರ್ಕ ಕಲ್ಪಿಸಲು ಯಾವುದೇ ಬಗೆಯ ಕೇಬಲ್ ಬೇಕಿಲ್ಲದಿರುವುದು ಈ ಸ್ಪೀಕರುಗಳ ಹೆಚ್ಚುಗಾರಿಕೆ. ಇವುಗಳನ್ನು ಎಲ್ಲಿ ಯಾವಾಗ ಹೇಗೆ ಬೇಕಾದರೂ ಬಳಸಲು ಸಾಧ್ಯವಾಗಿರುವುದೂ ಇದೇ ಕಾರಣದಿಂದ.

ಸೋಮವಾರ, ಜೂನ್ 4, 2018

ಸ್ಮಾರ್ಟ್‌ ದೀಪಗಳ ಸುತ್ತಮುತ್ತ

ಟಿ. ಜಿ. ಶ್ರೀನಿಧಿ

ದೈನಂದಿನ ಕೆಲಸಗಳಲ್ಲಿ ನೆರವಾಗುವ ಗೂಗಲ್ ಹೋಮ್ ಹಾಗೂ ಅಮೆಜಾನ್ ಎಕೋದಂತಹ ಡಿಜಿಟಲ್ ಸಹಾಯಕ ಸಾಧನಗಳು ಈಚೆಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದುಮಾಡುತ್ತಿವೆ. ಮಕ್ಕಳ ಪ್ರಶ್ನೆಗೆ ಉತ್ತರ ಕೊಡುವುದಿರಲಿ, ಮೂಲೆ ಸೇರಿರುವ ಮೊಬೈಲ್ ಫೋನನ್ನು ಪತ್ತೆಮಾಡುವುದಿರಲಿ, ಬೇಕಾದವರಿಗೆ ಕರೆಮಾಡುವುದಿರಲಿ, ಬೇಕಾದ ಹಾಡನ್ನು ಕೇಳಿಸುವುದೇ ಇರಲಿ - ಇಂತಹ ಅನೇಕ ಕೆಲಸಗಳನ್ನು ಈ ಸಾಧನಗಳು ಮಾಡಬಲ್ಲವು ಎಂದು ಹೇಳುವ ಜಾಹೀರಾತುಗಳನ್ನು ನಾವು ನೋಡುತ್ತಲೇ ಇದ್ದೇವೆ.

ಹಾಗೆಂದು ಈ ಸಾಧನಗಳ ಉಪಯೋಗ ಇಷ್ಟಕ್ಕೇ ಸೀಮಿತವೇ? ಖಂಡಿತಾ ಇಲ್ಲ. ವಿಶ್ವವ್ಯಾಪಿ ಜಾಲದಿಂದ ಮಾಹಿತಿ ಹೆಕ್ಕಿಕೊಡುವುದು ಹಾಗೂ ಮೊಬೈಲ್ ಫೋನ್‌ ಸವಲತ್ತುಗಳನ್ನು ದೂರದಿಂದಲೇ ಬಳಸಲು ಅನುವುಮಾಡಿಕೊಡುವುದರ ಜೊತೆಗೆ ಇವು ಇನ್ನೂ ಅನೇಕ ಕೆಲಸಗಳನ್ನು ಮಾಡಬಲ್ಲವು. ಸ್ವಿಚ್ ಒತ್ತುವ ಬದಲು ಧ್ವನಿರೂಪದ ಆದೇಶಗಳ ಮೂಲಕವೇ ಗೃಹೋಪಯೋಗಿ ಸಾಧನಗಳನ್ನು ನಿಯಂತ್ರಿಸುವುದು ಇಂತಹ ಕೆಲಸಗಳಿಗೊಂದು ಉದಾಹರಣೆ. ಹೀಗೆ ನಿಯಂತ್ರಿಸಬಹುದಾದ ಸಾಧನಗಳ ಸಾಲಿನಲ್ಲಿ ಸ್ಮಾರ್ಟ್ ದೀಪಗಳಿಗೆ ಪ್ರಮುಖ ಸ್ಥಾನ.

ಸ್ಮಾರ್ಟ್ ಫೋನು - ಸ್ಮಾರ್ಟ್ ಟೀವಿ ಗೊತ್ತು, ಇದೇನಿದು ಸ್ಮಾರ್ಟ್ ದೀಪ?

ಗುರುವಾರ, ಮೇ 31, 2018

ಜೆನ್‌ಫೋನ್ ಮ್ಯಾಕ್ಸ್ ಪ್ರೋ ಎಂ೧: ಇದು ಏಸುಸ್‌ನ ಹೊಸ ಪವರ್‌ಸ್ಟಾರ್!

ಮೊಬೈಲ್ ಫೋನ್ ಬಳಕೆ ಹೆಚ್ಚಿದಂತೆ ತಯಾರಕರು ಅವುಗಳ ಕಾರ್ಯಕ್ಷಮತೆಯನ್ನು ಉತ್ತಮಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಉನ್ನತ ಬ್ಯಾಟರಿ ಸಾಮರ್ಥ್ಯದ ಫೋನುಗಳು ಮಾರುಕಟ್ಟೆಗೆ ಬರುತ್ತಿವೆ. ಇಂತಹ ಹಲವು ಫೋನುಗಳೊಡನೆ ಗಮನಸೆಳೆದಿರುವ ಏಸುಸ್ ಸಂಸ್ಥೆ ಇತ್ತೀಚೆಗೆ ಜೆನ್‌ಫೋನ್ ಮ್ಯಾಕ್ಸ್ ಪ್ರೋ ಎಂ೧ ಎಂಬ ಹೊಸದೊಂದು ಮಾದರಿಯನ್ನು ಪರಿಚಯಿಸಿದೆ.

ಶಕ್ತಿಶಾಲಿ ಬ್ಯಾಟರಿ,ಶುದ್ಧ ಆಂಡ್ರಾಯ್ಡ್ ಅನುಭವ ಹಾಗೂ ಸಮರ್ಥ ಹೊಸ ಪ್ರಾಸೆಸರ್ ಈ ಫೋನಿನ ಹೈಲೈಟ್. ಸದ್ಯ ಮಾರುಕಟ್ಟೆಯಲ್ಲಿರುವ, ಇದೇ ಬೆಲೆಯಲ್ಲಿ ಸಿಗುವ ಫೋನುಗಳ ಹೋಲಿಕೆಯಲ್ಲಿ ಇದು ಬಹಳ ಉತ್ತಮ ಆಯ್ಕೆಯೆಂದೇ ಹೇಳಬೇಕು.

ಬುಧವಾರ, ಮೇ 30, 2018

ಜೂನ್ ೧೦ರಂದು ಇಜ್ಞಾನ ಕಾರ್ಯಕ್ರಮ: ಆನ್‌ಲೈನ್ ಲೋಕದ ಅಆಇಈ

ಇಜ್ಞಾನ ವಾರ್ತೆ

ನಮ್ಮದೇ ಆದ ಜಾಲತಾಣವನ್ನು (ವೆಬ್‌ಸೈಟ್) ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ರೂಪಿಸಿ ನಿರ್ವಹಿಸುವುದರ ಕುರಿತು ಇಜ್ಞಾನ ಟ್ರಸ್ಟ್ ಒಂದು ದಿನದ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮ ಬರುವ ಜೂನ್ ೧೦ರ ಭಾನುವಾರದಂದು ಬೆಳಿಗ್ಗೆ ೧೧ರಿಂದ ಸಂಜೆ ೪ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಮಂಗಳವಾರ, ಮೇ 29, 2018

ಇಂಧನ ಸಮಸ್ಯೆಗೆ ಪರಿಹಾರ ಸೂರ್ಯ

ಕ್ಷಮಾ ವಿ. ಭಾನುಪ್ರಕಾಶ್


ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆಗಳಿಗೆ ಮತ್ತು ಇವುಗಳಿಂದ ಉಂಟಾಗುತ್ತಿರುವ ಜಾಗತಿಕ ತಾಪಮಾನ ಏರಿಕೆಗೆ ಉತ್ತರವೆಂದರೆ ನವೀಕರಿಸಬಹುದಾದ ಸಂಪನ್ಮೂಲಗಳು. ಅವುಗಳಲ್ಲಿ ಬಹಳ ಸಮರ್ಥವಾಗಿ ಮತ್ತು ಸುಲಭವಾಗಿ ಬಳಕೆಯಾಗಬಲ್ಲುದು ಸೌರಶಕ್ತಿ. ಸೌರಶಕ್ತಿಯನ್ನು ಶಾಖ ಉತ್ಪಾದಿಸಲು ಮತ್ತು ವಿದ್ಯುತ್ತನ್ನು ಉತ್ಪಾದಿಸಲು ಬಳಸಬಹುದು.

ಬುಧವಾರ, ಮೇ 23, 2018

ಎಸ್ಸೆಮ್ಮೆಸ್‌ಗೆ ಮರುಹುಟ್ಟು

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನ್ ಪರಿಚಯವಾದ ಹೊಸದರಲ್ಲಿ ಅದರಲ್ಲಿ ಕೆಲವೇ ಆಯ್ಕೆಗಳು ಇರುತ್ತಿದ್ದವು. ಮಾತನಾಡಬೇಕಾದರೆ ದೂರವಾಣಿ ಕರೆ, ಸಂದೇಶ ಕಳಿಸಬೇಕಾದರೆ ಎಸ್ಸೆಮ್ಮೆಸ್ - ಆಗ ನಮಗಿರುತ್ತಿದ್ದ ಆಯ್ಕೆಯ ಸ್ವಾತಂತ್ರ್ಯ ಇಷ್ಟೇ.

ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಸ್ಮಾರ್ಟ್‌ಫೋನ್ ಹಾಗೂ ಅದರಲ್ಲಿ ಬಳಸಬಹುದಾದ ಆಪ್‌ಗಳಿಂದಾಗಿ ಪ್ರತಿ ಕೆಲಸಕ್ಕೂ ಹತ್ತಾರು ಆಯ್ಕೆಗಳು ನಮಗೆ ದೊರಕುತ್ತಿವೆ. ಸಂದೇಶ ಕಳಿಸುವ ಉದಾಹರಣೆಯನ್ನೇ ತೆಗೆದುಕೊಂಡರೆ ಈಗ ವಾಟ್ಸ್‌ಆಪ್, ಮೆಸೆಂಜರ್, ಟೆಲಿಗ್ರಾಂ ಮುಂತಾದ ಆಪ್‌ಗಳದೇ ರಾಜ್ಯಭಾರ. ಕೆಲ ವರ್ಷಗಳ ಹಿಂದೆ ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಎಸ್ಸೆಮ್ಮೆಸ್ ಇದೀಗ ಹೆಚ್ಚಾಗಿ ಬಳಕೆಯಾಗುತ್ತಿರುವುದು ಓಟಿಪಿ ಪಡೆದುಕೊಳ್ಳಲು ಮಾತ್ರವೇ ಇರಬೇಕೇನೋ!

ಬುಧವಾರ, ಮೇ 16, 2018

ಬೆಳಕಿನ ದಿನ ವಿಶೇಷ: ಬೆಳಕೆಂಬ ಬೆರಗು

ಟಿ. ಜಿ. ಶ್ರೀನಿಧಿ

ಬೆಳಕಿನ ಮಹತ್ವ ಏನು ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಸುಲಭ: ನಮ್ಮ ಸುತ್ತಮುತ್ತಲ ಪ್ರಪಂಚವನ್ನು ನೋಡಲು ಬೆಳಕು ಬೇಕು. ಸಸ್ಯಗಳು ಆಹಾರ ತಯಾರಿಸಿಕೊಳ್ಳಬೇಕಾದರೂ ಬೆಳಕು ಇರಬೇಕು. ಸೋಲಾರ್ ಹೀಟರಿನಲ್ಲಿ ನೀರು ಬಿಸಿಯಾಗುವುದೂ ಬೆಳಕಿನ ಸಹಾಯದಿಂದ. ಇದನ್ನೆಲ್ಲ ಬರೆದಿರುವ ಈ ಲೇಖನದ ಸಾಲುಗಳು ನಮಗೆ ಕಾಣುತ್ತಿರುವುದೂ ಬೆಳಕಿನ ಕಾರಣದಿಂದಲೇ!

ಇಂತಹ ಅನೇಕ ಉಪಯೋಗಗಳಿಗೆ ಒದಗಿಬರುವುದು ಸೂರ್ಯನ ಬೆಳಕು. ಸೂರ್ಯನ ಬೆಳಕು ಇಲ್ಲದಾಗ ಅಥವಾ ನಮ್ಮ ಅಗತ್ಯಕ್ಕೆ ಸಾಲದಾದಾಗ ನಾವು ಟ್ಯೂ‌ಬ್‌ಲೈಟ್, ಬಲ್ಬ್ ಮುಂತಾದ ಕೃತಕ ಬೆಳಕಿನ ಮೂಲಗಳನ್ನೂ ಬಳಸುತ್ತೇವೆ.

ಆದರೆ ಬೆಳಕಿನ ಮಹತ್ವ ಇಷ್ಟಕ್ಕೇ ಮುಗಿಯುವುದಿಲ್ಲ. ಸುಲಭವಾಗಿ ನಮ್ಮ ಗಮನಕ್ಕೆ ಬರದ, ಕೆಲವೊಮ್ಮೆ ನಮ್ಮ ಕಣ್ಣಿಗೂ ಕಾಣದ ಹಲವು ಬಗೆಗಳಲ್ಲಿ ಬೆಳಕು ನಮಗೆ ನೆರವಾಗುತ್ತದೆ.

ಸೋಮವಾರ, ಮೇ 14, 2018

ಮಳೆ ಬಂತು, ಮಣ್ಣಿನ ಘಮ ತಂತು!

ಕ್ಷಮಾ ವಿ. ಭಾನುಪ್ರಕಾಶ್


ಮೊದಲ ಮಳೆ ಹೊತ್ತು ತರುವ ನೆನಪು ಮತ್ತು ಪರಿಮಳ ಸಾಟಿ ಇಲ್ಲದ್ದು. ಮೊದಲ ಮಳೆ ಇಳೆಯನ್ನು ಸ್ಪರ್ಶಿಸಿದಾಗ ಹೊರಹೊಮ್ಮುವ ಘಮಕ್ಕೆ ಮುಖ್ಯ ಕಾರಣ ಮಣ್ಣಿನಲ್ಲಿರುವ ಒಂದು ಬಗೆಯ ಬ್ಯಾಕ್ಟೀರಿಯ ಎಂದರೆ ನಂಬುವುದೇ ಕಷ್ಟ.

ಮಳೆಯ ಜೊತೆ ಬರುವ ಈ ಪರಿಮಳಕ್ಕೆ ಕಾರಣವಾಗುವ ಬ್ಯಾಕ್ಟೀರಿಯಗಳ ಗುಂಪಿನ ಹೆಸರು 'ಆಕ್ಟಿನೋಮೈಸೀಟ್ಸ್'. ಇವು ಬರಿಯ ಕಣ್ಣಿಗೆ ಕಾಣದ ಬಹು ಉಪಯುಕ್ತ ಸೂಕ್ಷ್ಮ ಜೀವಿಗಳು. ಈ ಬಗೆಯ ಬ್ಯಾಕ್ಟೀರಿಯಗಳ ರಚನೆ ಉದ್ದುದ್ದ ತಂತುಗಳಂತೆ ಇರುತ್ತದೆ. ಮನುಷ್ಯರಲ್ಲಿ, ಪ್ರಾಣಿಗಳಲ್ಲಿ ಹಲವಾರು ಖಾಯಿಲೆಗಳಿಗೆ ಕಾರಣವಾಗುವ ಇವು ಹಲವಾರು ಆಂಟೀಬಯೋಟಿಕ್, ಅಂದರೆ ಪ್ರತಿಜೀವಕಗಳನ್ನೂ ಉತ್ಪಾದಿಸುತ್ತವೆ.

ಶುಕ್ರವಾರ, ಮೇ 11, 2018

ವೀಕೆಂಡ್ ಇಜ್ಞಾನ: ಇಮೇಲ್ ಕಸದ ನಾಲ್ಕು ದಶಕ

ಟಿ. ಜಿ. ಶ್ರೀನಿಧಿ


ವ್ಯವಹಾರವಿರಲಿ, ವೈಯಕ್ತಿಕ ವಿಷಯವೇ ಇರಲಿ, ಆಧುನಿಕ ಜಗತ್ತಿನ ಸಂವಹನ ಮಾಧ್ಯಮಗಳಲ್ಲಿ ಇಮೇಲ್‌ಗೆ ಪ್ರಮುಖ ಸ್ಥಾನವಿದೆ. ಈ ಮಾಧ್ಯಮ ಅದೆಷ್ಟು ಜನಪ್ರಿಯವೆಂದರೆ ಪ್ರಪಂಚದಲ್ಲಿ ಪ್ರತಿನಿತ್ಯ ೨೫ ಸಾವಿರ ಕೋಟಿಗೂ ಹೆಚ್ಚು ಸಂಖ್ಯೆಯ ಇಮೇಲ್ ಸಂದೇಶಗಳನ್ನು ಕಳುಹಿಸಲಾಗುತ್ತದಂತೆ.

ಇಷ್ಟೆಲ್ಲ ಸಂಖ್ಯೆಯ ಇಮೇಲ್ ಸಂದೇಶಗಳನ್ನು ಜನರು ಬಳಸುತ್ತಿದ್ದಾರಲ್ಲ ಎಂದು ಆಶ್ಚರ್ಯಪಡುವ ಮುನ್ನ ಇಲ್ಲಿ ಹೇಳಲೇಬೇಕಾದ ವಿಷಯವೊಂದಿದೆ: ವಿನಿಮಯವಾಗುವ ಒಟ್ಟು ಇಮೇಲ್‌ಗಳ ಪೈಕಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಅನಪೇಕ್ಷಿತವಾದವು!

ಬುಧವಾರ, ಮೇ 2, 2018

ಗೂಗಲ್ ಮಾಡಿ ನೋಡಿ!

ಟಿ. ಜಿ. ಶ್ರೀನಿಧಿ


ಹತ್ತಿಪ್ಪತ್ತು ವರ್ಷಗಳ ಹಿಂದೆ ನಮಗೆ ಏನಾದರೂ ಮಾಹಿತಿ ಬೇಕಾದಾಗ ಮನೆಯಲ್ಲಿದ್ದ ಪುಸ್ತಕಗಳಲ್ಲಿ ಹುಡುಕುವುದು, ಗ್ರಂಥಾಲಯಗಳಿಗೆ ಹೋಗುವುದು ಸಾಮಾನ್ಯವಾಗಿತ್ತು. ನೂರಾರು ಪುಟದ ಪುಸ್ತಕಗಳಲ್ಲಿ ನಮಗೆ ಬೇಕಾದ್ದನ್ನು ಹುಡುಕಿಕೊಳ್ಳುವ ಕೆಲಸ ಸಾಕಷ್ಟು ಕ್ಲಿಷ್ಟವೂ ಆಗಿತ್ತು. ಪಠ್ಯರೂಪದ ಮಾಹಿತಿಯನ್ನೇನೋ ಪುಸ್ತಕದಿಂದ ನಕಲಿಸಿಕೊಳ್ಳಬಹುದಿತ್ತು, ಸರಿ. ಚಿತ್ರಗಳು ಬೇಕಾದವೆಂದರೆ ಹಳೆಯ ಪತ್ರಿಕೆಗಳನ್ನು ಆಶ್ರಯಿಸುವುದು, ಅವನ್ನು ಕತ್ತರಿಸಲು ಪರದಾಡುವುದು - ಇದೇ ನಮಗಿದ್ದ ಆಯ್ಕೆ.

ಈ ಪರದಾಟವನ್ನು ಕಡಿಮೆ ಮಾಡಬಲ್ಲ ಹಿರಿಯರ ನೆರವು ಎಲ್ಲೋ ಕೆಲವರಿಗಷ್ಟೇ ದೊರಕುತ್ತಿತ್ತು. ಶಾಲೆಯ ಮೇಷ್ಟರು, ಅನುಭವಿ ಗ್ರಂಥಪಾಲಕರು ಬೇಕಾದ್ದನ್ನು ಥಟ್ಟನೆ ಹುಡುಕಿಕೊಟ್ಟರೆ ನಮಗೆ ಏನೋ ಮಹತ್ವದ್ದನ್ನು ಸಾಧಿಸಿದಷ್ಟು ಸಂತೋಷವಾಗುತ್ತಿತ್ತು!

ಈಗ ಪರಿಸ್ಥಿತಿ ಎಷ್ಟೆಲ್ಲ ಬದಲಾಗಿದೆಯೆಂದರೆ ಹಿಂದೊಮ್ಮೆ ಹೀಗೆಲ್ಲ ಇತ್ತು ಎನ್ನುವುದೂ ಇಂದಿನ ಕಿರಿಯರಿಗೆ ತಿಳಿದಿಲ್ಲ. ಹೊಯ್ಸಳ ವಾಸ್ತುಶಿಲ್ಪವಿರಲಿ, ಹರಪ್ಪಾ ನಾಗರೀಕತೆ ಇರಲಿ, ಆಫ್ರಿಕಾದ ವನ್ಯಜೀವನವೇ ಇರಲಿ - ಯಾವ ವಿಷಯದ ಬಗ್ಗೆ ಮಾಹಿತಿ ಬೇಕೆಂದರೂ ಅವರು ಹೇಳುವುದು ಒಂದೇ ಮಾತು: "ಗೂಗಲ್ ಮಾಡಿ!"

ಗುರುವಾರ, ಏಪ್ರಿಲ್ 26, 2018

ಅನಲಿಟಿಕ್ಸ್ ಅಂದರೇನು?

ಟಿ. ಜಿ. ಶ್ರೀನಿಧಿ


ಈಚಿನ ದಿನಗಳಲ್ಲಿ ಎಲ್ಲೆಲ್ಲಿ ನೋಡಿದರೂ ಡೇಟಾ, ಅಂದರೆ ದತ್ತಾಂಶದ್ದೇ ಭರಾಟೆ. ಡೇಟಾ ಎಂದರೆ ಮೊಬೈಲು - ಕಂಪ್ಯೂಟರುಗಳ ಮೂಲಕ ನಾವು ಬಳಸುತ್ತೇವಲ್ಲ, ಅದು ಮಾತ್ರವೇ ಅಲ್ಲ. ನಮ್ಮ ಬಗ್ಗೆ - ನಮ್ಮ ಸುತ್ತಮುತ್ತಲ ಆಗುಹೋಗುಗಳ ಬಗೆಗಿನ ದತ್ತಾಂಶ ಇದೀಗ ನಿರಂತರವಾಗಿ ಸೃಷ್ಟಿಯಾಗುತ್ತಿರುತ್ತದೆ, ಸಂಗ್ರಹವಾಗುತ್ತಿರುತ್ತದೆ.

ನಮ್ಮ ಬಗೆಗಿನ ದತ್ತಾಂಶ ಎಂದರೇನು? ಈಚಿನ ಘಟನೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ಉತ್ತರಿಸುವುದು ಸುಲಭ. ಸಮಾಜ ಜಾಲಗಳಿಗೆ ನಾವು ಸೇರಿಸುವ ವಿಷಯಗಳು, ಶಾಪಿಂಗ್ ತಾಣಗಳಲ್ಲಿ ನಾವು ಹುಡುಕುವ ವಿವರಗಳು, ಜಾಲತಾಣಗಳಲ್ಲಿ ನಾವು ಓದುವ ವಿಷಯಗಳು - ಇವೆಲ್ಲ ಈ ಬಗೆಯ ದತ್ತಾಂಶಕ್ಕೆ ಉದಾಹರಣೆಗಳು. ಗ್ರಾಹಕರ ಬಗ್ಗೆ ತಿಳಿದುಕೊಳ್ಳಲು, ಆ ಅರಿವನ್ನು ಪರಸ್ಪರರ ಅನುಕೂಲಕ್ಕೆ ಬಳಸಿಕೊಳ್ಳಲು ಸಂಸ್ಥೆಗಳು ಈ ದತ್ತಾಂಶವನ್ನು ಬಳಸಿಕೊಳ್ಳುತ್ತವೆ.

ಮಂಗಳವಾರ, ಏಪ್ರಿಲ್ 24, 2018

ಕಾರಿನೊಳಗೆ ಕಂಪ್ಯೂಟರು!

ಟಿ. ಜಿ. ಶ್ರೀನಿಧಿ


ಬ್ಯಾಂಕಿನಿಂದ ಬಸ್ ನಿಲ್ದಾಣದವರೆಗೆ, ಶಾಲೆಯಿಂದ ಶಾಪಿಂಗ್ ಮಾಲ್‌ಗಳವರೆಗೆ ಎಲ್ಲೆಲ್ಲೂ ಕಂಪ್ಯೂಟರುಗಳ ಬಳಕೆ ಕಾಣಸಿಗುವುದು ಸಾಮಾನ್ಯ ಸಂಗತಿ. ಇದೆಲ್ಲದರ ಜೊತೆಗೆ ನಾವು ನಿತ್ಯವೂ ಬಳಸುವ ಅನೇಕ ಸಾಧನಗಳೊಳಗೂ ಕಂಪ್ಯೂಟರುಗಳು ಅಡಕವಾಗಿರುತ್ತವೆ. ಅವು ನೋಡಲು ನಮಗೆ ಪರಿಚಯವಿರುವ ಕಂಪ್ಯೂಟರುಗಳಂತಿರುವುದಿಲ್ಲ ಎನ್ನುವುದೊಂದೇ ವ್ಯತ್ಯಾಸ, ಅಷ್ಟೇ!

ಹೀಗೆ ಕಂಪ್ಯೂಟರನ್ನು ತಮ್ಮೊಳಗೆ ಸೇರಿಸಿಕೊಂಡಿರುವ ಸಾಧನಗಳಿಗೆ ಉತ್ತಮ ಉದಾಹರಣೆಯೆಂದರೆ ಕಾರುಗಳದು. ಹೌದು, ಇದೀಗ ರಸ್ತೆಗಿಳಿಯುವ ಪ್ರತಿ ಕಾರಿನಲ್ಲೂ ಕಂಪ್ಯೂಟರಿನ ಕೈವಾಡ ಬಹಳ ವ್ಯಾಪಕವಾಗಿರುತ್ತದೆ.

ಪೆಟ್ರೋಲನ್ನೋ ಡೀಸೆಲನ್ನೋ ಸುಡುತ್ತ ಬೇಕಾದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಕಾರಿನಲ್ಲಿ ಕಂಪ್ಯೂಟರಿಗೇನು ಕೆಲಸ ಎಂದಿರಾ? ಕೆಲಸ ಬೇಕಾದಷ್ಟಿದೆ.
badge