ಟಿ. ಜಿ. ಶ್ರೀನಿಧಿ
ಬ್ಯಾಂಕಿನಿಂದ ಬಸ್ ನಿಲ್ದಾಣದವರೆಗೆ, ಶಾಲೆಯಿಂದ ಶಾಪಿಂಗ್ ಮಾಲ್‌ಗಳವರೆಗೆ ಎಲ್ಲೆಲ್ಲೂ ಕಂಪ್ಯೂಟರುಗಳ ಬಳಕೆ ಕಾಣಸಿಗುವುದು ಸಾಮಾನ್ಯ ಸಂಗತಿ. ಇದೆಲ್ಲದರ ಜೊತೆಗೆ ನಾವು ನಿತ್ಯವೂ ಬಳಸುವ ಅನೇಕ ಸಾಧನಗಳೊಳಗೂ ಕಂಪ್ಯೂಟರುಗಳು ಅಡಕವಾಗಿರುತ್ತವೆ. ಅವು ನೋಡಲು ನಮಗೆ ಪರಿಚಯವಿರುವ ಕಂಪ್ಯೂಟರುಗಳಂತಿರುವುದಿಲ್ಲ ಎನ್ನುವುದೊಂದೇ ವ್ಯತ್ಯಾಸ, ಅಷ್ಟೇ!
ಹೀಗೆ ಕಂಪ್ಯೂಟರನ್ನು ತಮ್ಮೊಳಗೆ ಸೇರಿಸಿಕೊಂಡಿರುವ ಸಾಧನಗಳಿಗೆ ಉತ್ತಮ ಉದಾಹರಣೆಯೆಂದರೆ ಕಾರುಗಳದು. ಹೌದು, ಇದೀಗ ರಸ್ತೆಗಿಳಿಯುವ ಪ್ರತಿ ಕಾರಿನಲ್ಲೂ ಕಂಪ್ಯೂಟರಿನ ಕೈವಾಡ ಬಹಳ ವ್ಯಾಪಕವಾಗಿರುತ್ತದೆ.
ಪೆಟ್ರೋಲನ್ನೋ ಡೀಸೆಲನ್ನೋ ಸುಡುತ್ತ ಬೇಕಾದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಕಾರಿನಲ್ಲಿ ಕಂಪ್ಯೂಟರಿಗೇನು ಕೆಲಸ ಎಂದಿರಾ? ಕೆಲಸ ಬೇಕಾದಷ್ಟಿದೆ.
ಇಂದಿನ ಕಾರುಗಳಲ್ಲಿ ವಿವಿಧ ವಿಷಯಗಳನ್ನು ಗಮನಿಸಿಕೊಳ್ಳುವ ಅನೇಕ ಸೆನ್ಸರುಗಳಿರುತ್ತವೆ. ಚಾಲಕರು ಸೀಟ್‌ಬೆಲ್ಟ್ ಧರಿಸಿದ್ದಾರೋ ಇಲ್ಲವೋ, ಕೂಲೆಂಟಿನ ಉಷ್ಣಾಂಶ ಎಷ್ಟಿದೆ, ಚಕ್ರಗಳ ಚಲನೆ ಸರಾಗವಾಗಿದೆಯೋ ಇಲ್ಲವೋ ಎನ್ನುವಂತಹ ಸಂಗತಿಗಳನ್ನೆಲ್ಲ ಈ ಸೆನ್ಸರುಗಳು ಗಮನಿಸಿಕೊಳ್ಳುತ್ತಿರುತ್ತವೆ. ಇವು ಕಲೆಹಾಕುವ ಮಾಹಿತಿಗೆ ಅನುಗುಣವಾಗಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಲ್ಲ (ಉದಾ: ಸೀಟ್‌ಬೆಲ್ಟ್ ಧರಿಸದೆ ವಾಹನ ಚಲಾಯಿಸಿದರೆ ಎಚ್ಚರಿಕೆ ನೀಡುವುದು), ಈ ಕೆಲಸ ಮಾಡುವುದೇ ಕಾರಿನಲ್ಲಿರುವ ಕಂಪ್ಯೂಟರುಗಳ ಕೆಲಸ.
ಸೆನ್ಸರುಗಳ ಮೂಲಕ ಲಭ್ಯವಾದ ಮಾಹಿತಿ ಹಾಗೂ ಚಾಲಕನ ನಿರ್ದೇಶನಗಳಿಗೆ ಅನುಗುಣವಾಗಿ ಇಂಜಿನ್ನಿಗೆ ಎಷ್ಟು ಇಂಧನ ಪೂರೈಸಬೇಕು ಎಂದು ತೀರ್ಮಾನಿಸುವುದು ಕಂಪ್ಯೂಟರ್ ಕೈವಾಡದ ಇನ್ನೊಂದು ಉದಾಹರಣೆ. ಇಂಜಿನ್ ಕಾರ್ಯಾಚರಣೆಯನ್ನು ನಿಯಂತ್ರಿಸುವ ಇಂತಹ ಕಂಪ್ಯೂಟರಿಗೆ ಇಂಜಿನ್ ಕಂಟ್ರೋಲ್ ಯುನಿಟ್ (ಇಸಿಯು) ಎಂದು ಹೆಸರು.
ಹೆದ್ದಾರಿಗಳಲ್ಲಿ ಚಲಿಸುವಾಗ ರಸ್ತೆಯ ಮೇಲೆ ಅಲ್ಲಲ್ಲಿ ಕಪ್ಪನೆಯ ಪಟ್ಟೆಗಳು ಮೂಡಿರುವುದನ್ನು ನಾವು ನೋಡಿರುತ್ತೇವೆ. ವಾಹನಗಳು ದಿಢೀರನೆ ಬ್ರೇಕ್ ಹಾಕಿದಾಗ ಚಕ್ರ ರಸ್ತೆಗೆ ಉಜ್ಜಿ ಆ ಪಟ್ಟೆಗಳು ಮೂಡಿರುತ್ತವೆ ಎನ್ನುವುದೂ ನಮಗೆ ಗೊತ್ತು. ಅಪಘಾತ ತಪ್ಪಿಸಲು ಹೀಗೆ ಬ್ರೇಕ್ ಒತ್ತಿದಾಗ ಚಕ್ರಗಳು ಉರುಳುವುದು ನಿಂತರೂ ವೇಗದ ಕಾರಣದಿಂದಾಗಿ ವಾಹನದ ಚಲನೆ ನಿಲ್ಲುವುದಿಲ್ಲ; ಹಾಗಾಗಿ ಚಕ್ರ ರಸ್ತೆಗೆ ಉಜ್ಜುತ್ತಿರುವಂತೆಯೇ ವಾಹನ ಒಂದಷ್ಟು ದೂರ ಚಲಿಸುತ್ತದೆ. ರಸ್ತೆಯ ಮೇಲೆ ಕಪ್ಪನೆಯ ಪಟ್ಟೆ ಮೂಡುವುದಕ್ಕೆ ಇದೇ ಕಾರಣ.
ಇಂತಹ ಪರಿಸ್ಥಿತಿಯಲ್ಲಿ ಚಾಲಕನಿಗೆ ವಾಹನದ ಮೇಲೆ ನಿಯಂತ್ರಣ ದೊರಕುವುದು ಬಹಳ ಕಷ್ಟ. ಇಂತಹ ಪರಿಸ್ಥಿತಿ ತಪ್ಪಿಸಿ ಅಪಘಾತಗಳ ತೀವ್ರತೆಯನ್ನು ಸಾಧ್ಯವಾದಷ್ಟೂ ಕಡಿಮೆಮಾಡಲು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಎಂಬ ವ್ಯವಸ್ಥೆ ಪ್ರಯತ್ನಿಸುತ್ತದೆ. ಕಾರಿನ ಚಲನೆ ನಿಲ್ಲುವುದಕ್ಕೆ ಮೊದಲೇ ಚಕ್ರಗಳ ಚಲನೆ ನಿಲ್ಲುತ್ತಿದೆ ಎನಿಸಿದರೆ ಈ ವ್ಯವಸ್ಥೆ ಬ್ರೇಕ್ ಒತ್ತಡವನ್ನು ಕೊಂಚಮಟ್ಟಿಗೆ ಕಡಿಮೆಮಾಡಿ ವಾಹನದ ನಿಯಂತ್ರಣ ತಪ್ಪದಂತೆ ನೋಡಿಕೊಳ್ಳುತ್ತದೆ. ಅನಿರೀಕ್ಷಿತವಾಗಿ ಅಡಚಣೆಗಳು ಎದುರಾದಾಗಲೂ ಕಾರನ್ನು ಸುರಕ್ಷಿತವಾಗಿ ನಿಲ್ಲಿಸಲು ಇದರಿಂದಾಗಿ ಸಾಧ್ಯವಾಗುತ್ತದೆ.
ಕಾರಿನ ಮೂಲೆಮೂಲೆಗಳಲ್ಲಿರುವ ಸೆನ್ಸರುಗಳಿಂದ ಮಾಹಿತಿ ಕಲೆಹಾಕಿ ಅದರ ಸಾರಾಂಶವನ್ನು ಚಾಲಕನೆದುರು (ಡ್ಯಾಶ್‌ಬೋರ್ಡಿನಲ್ಲಿ) ಪ್ರದರ್ಶಿಸಲಾಗುತ್ತದಲ್ಲ, ಅದರ ಹಿಂದೆಯೂ ಕಂಪ್ಯೂಟರ್ ಕೆಲಸಮಾಡಿರುತ್ತದೆ. ಮಳೆಬಂದಾಗ ತನ್ನಷ್ಟಕ್ಕೆ ತಾನೇ ವೈಪರ್ ಚಲಾಯಿಸುವ, ವೀಡಿಯೋ ವೀಕ್ಷಿಸುವ ಸೌಲಭ್ಯವಿದ್ದರೂ ಕಾರು ಚಲಿಸುತ್ತಿದ್ದಾಗ ಆ ಸೌಲಭ್ಯವನ್ನು ನಿರ್ಬಂಧಿಸುವ ವ್ಯವಸ್ಥೆಗಳ ಹಿನ್ನೆಲೆಯಲ್ಲಿರುವುದೂ ಕಂಪ್ಯೂಟರುಗಳೇ.
ಸರ್ವೀಸ್ ಸೆಂಟರಿಗೆ ಹೋದಾಗ ಕಾರನ್ನು ತಮ್ಮ ಕಂಪ್ಯೂಟರಿನಲ್ಲಿ ಪರೀಕ್ಷಿಸುವುದಾಗಿ ಅಲ್ಲಿನ ಸಿಬ್ಬಂದಿ ಹೇಳುತ್ತಾರಲ್ಲ, ಅದನ್ನು ಸಾಧ್ಯವಾಗಿಸುವುದೂ ಕಾರಿನಲ್ಲಿರುವ ಕಂಪ್ಯೂಟರುಗಳೇ. ಇದರ ಹಿನ್ನೆಲೆಯಲ್ಲಿರುವುದು ಆನ್-ಬೋರ್ಡ್ ಡಯಾಗ್ನಾಸ್ಟಿಕ್ಸ್ (ಓಬಿಡಿ) ಎನ್ನುವ ವ್ಯವಸ್ಥೆ. ಕಾರಿನ ವಿವಿಧ ಭಾಗಗಳಿಂದ, ಅಲ್ಲೆಲ್ಲ ಇರುವ ಸೆನ್ಸರುಗಳಿಂದ, ಪಡೆದ ಮಾಹಿತಿಯನ್ನು ಕಾರಿನ ಹೊರಕ್ಕೆ - ಕಂಪ್ಯೂಟರ್, ಮೊಬೈಲ್ ಫೋನ್ ಇತ್ಯಾದಿಗಳಿಗೆ - ವರ್ಗಾಯಿಸುವುದನ್ನು ಇದು ಸಾಧ್ಯವಾಗಿಸುತ್ತದೆ. ಕಂಪ್ಯೂಟರಿನಲ್ಲಿ ನಮ್ಮ ಕಾರಿನ ಆರೋಗ್ಯ ತಿಳಿಯಲು ಸರ್ವೀಸ್ ಸೆಂಟರಿನ ಸಿಬ್ಬಂದಿ ಬಳಸುವುದು ಇದೇ ವ್ಯವಸ್ಥೆಯನ್ನು. ಕಾರಿನ ಭಾಗಗಳಲ್ಲಿ ಏನಾದರೂ ತೊಂದರೆಯಿದ್ದರೆ ಅದರ ವಿವರಗಳು ಅವರಿಗೆ ಈ ಮೂಲಕ ತಿಳಿದುಬಿಡುತ್ತವೆ.
ಈ ಮಾಹಿತಿಯನ್ನು ಬ್ಲೂಟೂತ್ ಮೂಲಕ ನಮ್ಮ ಮೊಬೈಲಿನಲ್ಲೂ ನೋಡುವುದನ್ನು ಸಾಧ್ಯವಾಗಿಸುವ ಸಾಧನಗಳನ್ನು ಕೆಲವೇ ನೂರು ರೂಪಾಯಿಗಳಲ್ಲಿ ನಾವೂ ಕೊಂಡು ಬಳಸಬಹುದು. ಇಂತಹ ಸಾಧನಗಳನ್ನು ಸಂಪರ್ಕಿಸಲು ಬೇಕಾದ ಓಬಿಡಿ ಪೋರ್ಟ್ ಸಾಮಾನ್ಯವಾಗಿ ಸ್ಟಿಯರಿಂಗ್ ವೀಲ್ ಕೆಳಭಾಗದಲ್ಲಿರುತ್ತದೆ.
ಮಾರ್ಚ್ ೨೧, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ