ಬುಧವಾರ, ಏಪ್ರಿಲ್ 4, 2018

ಮೊಬೈಲ್ ಮಾತಿಗೆ ನಲವತ್ತೈದು!

ಟಿ. ಜಿ. ಶ್ರೀನಿಧಿ

ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ನಿದ್ದೆಗೆ ಜಾರುವವರೆಗೆ ಪ್ರತಿ ಕ್ಷಣವೂ ನಮ್ಮೊಡನೆ ಇರುವ ವಸ್ತುವೆಂದರೆ ಅದು ನಮ್ಮ ಮೊಬೈಲ್ ಫೋನ್.

ಈ ವಿಶಿಷ್ಟ-ವಿಚಿತ್ರ ಸಾಧನ ನಮ್ಮ ಬದುಕನ್ನು ಪ್ರವೇಶಿಸಿದ್ದು ಯಾವಾಗ ಎಂದು ಕೇಳಿದರೆ ಆ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ಕೊಡುತ್ತಾರೆ. ಮೊಬೈಲ್ ಬಳಸಿ ಮಾತನಾಡಲು ಪ್ರತಿ ನಿಮಿಷಕ್ಕೆ ಹತ್ತಾರು ರೂಪಾಯಿ ಪಾವತಿಸಬೇಕಿದ್ದ ಕಾಲದ ನೆನಪೂ ನಮ್ಮಲ್ಲಿ ಹಲವರಿಗಿರುವುದು ಸಾಧ್ಯ.

ಆದರೆ ಈ ನೆನಪುಗಳೆಲ್ಲ ಹೆಚ್ಚೆಂದರೆ ಹದಿನೈದು-ಇಪ್ಪತ್ತು ವರ್ಷಗಳಷ್ಟೇ ಹಳೆಯವು. ಹಾಗಾದರೆ ಮೊಬೈಲ್ ಫೋನ್ ಸಾಗಿಬಂದಿರುವ ಹಾದಿ ಇಷ್ಟು ಸಣ್ಣದೇ? ಖಂಡಿತಾ ಅಲ್ಲ. ಜಾಗತಿಕ ಮಟ್ಟದಲ್ಲಿ ಮೊಬೈಲ್ ದೂರವಾಣಿಗೆ ಇನ್ನಷ್ಟು ದೀರ್ಘವಾದ ಇತಿಹಾಸವಿದೆ. ನಿಖರವಾಗಿ ಹೇಳುವುದಾದರೆ ಪ್ರಪಂಚದ ಮೊತ್ತಮೊದಲ ದೂರವಾಣಿ ಕರೆ ಮಾಡಿದ್ದು ನಲವತ್ತೈದು ವರ್ಷಗಳ ಹಿಂದೆ!

ಈ ಸಾಧನೆಗೆ ಕಾರಣರಾದವರು ಅಮೆರಿಕಾದ ಮಾರ್ಟಿನ್ ಕೂಪರ್ ಎಂಬ ತಂತ್ರಜ್ಞ. ಮೊಬೈಲ್ ದೂರವಾಣಿಯ ಪಿತಾಮಹ ಎಂದು ಗುರುತಿಸಲಾಗುವುದು ಇವರನ್ನೇ.

ನಮ್ಮೊಡನೆ ಕೊಂಡೊಯ್ಯಬಹುದಾದ ದೂರವಾಣಿಯ ಪರಿಕಲ್ಪನೆ ಮಾರ್ಟಿನ್ ಈ ಕ್ಷೇತ್ರದಲ್ಲಿ ಕಾರ್ಯನಿರತರಾಗುವ ಮೊದಲೇ ಇತ್ತು. ಸಾಮಾನ್ಯ ದೂರವಾಣಿ, ಅಂದರೆ ಲ್ಯಾಂಡ್‌ಲೈನ್, ಆ ವೇಳೆಗಾಗಲೇ ಸಾಕಷ್ಟು ವ್ಯಾಪಕವಾಗಿ ಬಳಕೆಯಾಗುತ್ತಿತ್ತು; ರೇಡಿಯೋ ಕಲ್ಪನೆ ಕೂಡ ಸುಮಾರು ಹಳೆಯದಾಗಿತ್ತು. ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುವ ಸಾಮಾನ್ಯ ಫೋನು ತಂತಿಗಳ ನೆರವಿಲ್ಲದೆ, ಅಂದರೆ ರೇಡಿಯೋ ರೀತಿಯಲ್ಲಿ, ಕೆಲಸ ಮಾಡಿದರೆ ಎಷ್ಟೊಂದು ಅನುಕೂಲ ಎನ್ನುವ ಆಲೋಚನೆ ಇಟ್ಟುಕೊಂಡು ವಿಜ್ಞಾನಿಗಳು ಮೊಬೈಲ್ ದೂರವಾಣಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದರು.

ಆದರೆ ಅವತ್ತಿನ ಮೊಬೈಲ್ ತಂತ್ರಜ್ಞಾನ ಇವತ್ತಿನಷ್ಟು ಮುಂದುವರೆದಿರಲಿಲ್ಲ. ಅಂದಿನ ಫೋನುಗಳು ತೀರಾ ದೊಡ್ಡದಾಗಿದ್ದವು, ವಿಪರೀತ ಪ್ರಮಾಣದಲ್ಲಿ ವಿದ್ಯುತ್ ಬಳಸುತ್ತಿದ್ದವು. ಈ ಕಾರಣಗಳಿಂದಾಗಿ ಮೊದಮೊದಲು ಬಂದ ಮೊಬೈಲ್ ಫೋನುಗಳನ್ನು ಕಾರುಗಳಲ್ಲಷ್ಟೇ ಇಟ್ಟುಕೊಳ್ಳಲು ಸಾಧ್ಯವಿತ್ತು. ಇಂಥದ್ದೊಂದು ಕಾರ್‌ಫೋನನ್ನು ಅಮೆರಿಕಾದ ಎಟಿ ಆಂಡ್ ಟಿ ಸಂಸ್ಥೆ ೧೯೪೬ರಲ್ಲೇ ಪರಿಚಯಿಸಿತ್ತು.

ಈ ಬೆಳವಣಿಗೆಗಳನ್ನೆಲ್ಲ ನೋಡುತ್ತಿದ್ದ ಮಾರ್ಟಿನ್‍ಗೆ ಒಂದು ಯೋಚನೆ ಬಂತು; ದೂರವಾಣಿಯನ್ನು ಒಂದು ಮನೆಗೆ, ಕಚೇರಿಗೆ ಅಥವಾ ಈಗ ವಾಹನಕ್ಕೆ ಸೀಮಿತಗೊಳಿಸಿಬಿಟ್ಟಿದ್ದೇವಲ್ಲ, ಅದರ ಬದಲು ದೂರವಾಣಿಗಿರುವ ಭೌಗೋಳಿಕ ಮಿತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಿ ಒಬ್ಬ ವ್ಯಕ್ತಿಗೆ ಒಂದು ದೂರವಾಣಿ ಸಂಖ್ಯೆ ಕೊಡುವಂತಿದ್ದರೆ ಹೇಗೆ?
ಇದನ್ನೂ ಓದಿ: ಮೊಬೈಲ್ ಸಿಗ್ನಲ್ ಸುತ್ತಮುತ್ತ
ಇದೇ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಪ್ರಾರಂಭಿಸಿದ ಮಾರ್ಟಿನ್ ತಮ್ಮ ಕೆಲಸದಲ್ಲಿ ಯಶಸ್ವಿಯಾದದ್ದಷ್ಟೇ ಅಲ್ಲ, ೧೯೭೩ರ ಏಪ್ರಿಲ್ ೩ರಂದು ಮೊತ್ತಮೊದಲ ಮೊಬೈಲ್ ಕರೆಯನ್ನೂ ಮಾಡಿದರು. ತಮ್ಮ ಆವಿಷ್ಕಾರ ಮುಂದೆ ಇಷ್ಟೆಲ್ಲ ಜನಪ್ರಿಯವಾಗಲಿದೆ, ತಾವು ಮಾಡಿದ ಈ ಕರೆ ಮುಂದೊಂದು ದಿನ ತಮಗೆ ಮೊಬೈಲ್ ಫೋನ್ ಪಿತಾಮಹನೆಂಬ ಗೌರವ ತಂದುಕೊಡಲಿದೆ ಎನ್ನುವುದೆಲ್ಲ ಅಂದು ಅವರಿಗೆ ಗೊತ್ತಿತ್ತೋ ಇಲ್ಲವೋ!

ಇರಲಿ, ಮೊದಲ ಮೊಬೈಲ್ ಕರೆ ಮಾಡಿದ ಮಾತ್ರಕ್ಕೆ ಮೊಬೈಲ್ ಫೋನ್ ತಂತ್ರಜ್ಞಾನದ ವಿಕಾಸ  ಆಗಲೇ ಸಂಪೂರ್ಣವೇನೂ ಆಗಿಬಿಟ್ಟಿರಲಿಲ್ಲ. ಹ್ಯಾಂಡ್‌ಸೆಟ್ಟಿನ ಗಾತ್ರವೂ ಇನ್ನೂ ಸಮಸ್ಯೆಯಾಗಿಯೇ ಉಳಿದಿತ್ತು: ಮಾರ್ಟಿನ್ ಬಳಸಿದ ಮೊದಲ ಫೋನು ಹೆಚ್ಚೂಕಡಿಮೆ ಒಂದು ಕೇಜಿ ತೂಕವಿತ್ತಂತೆ! ಅಷ್ಟೇ ಅಲ್ಲ, ಆ ಫೋನನ್ನು ಸತತ ಹತ್ತು ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಮೂವತ್ತು ನಿಮಿಷಗಳ ಕಾಲ ಮಾತನಾಡಲು ಬಳಸಬಹುದಿತ್ತು ಎಂದು ದಾಖಲೆಗಳು ಹೇಳುತ್ತವೆ.

೧೯೭೩ರ ಪ್ರಯೋಗ ಯಶಸ್ವಿಯಾದರೂ ಮೊಬೈಲ್ ತಂತ್ರಜ್ಞಾನ ಸಾರ್ವಜನಿಕ ಬಳಕೆಗೆ ಸಿಗುವಂತಾಗಲು ಹೆಚ್ಚೂಕಡಿಮೆ ಒಂದು ದಶಕದ ಕಾಲ ಕಾಯಬೇಕಾಯಿತು. ೧೯೭೦ರ ದಶಕದ ಕೊನೆಯ ವೇಳೆಗೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ ಮೊಬೈಲ್ ಫೋನ್ ಜಾಲಗಳು ನಿಧಾನವಾಗಿ ತಮ್ಮ ಹರವನ್ನು ಪ್ರಪಂಚದಾದ್ಯಂತ ವಿಸ್ತರಿಸಿಕೊಂಡವು. ವಿಕಿಪೀಡಿಯಾ ಹೇಳುವಂತೆ ಜಪಾನ್, ಡೆನ್ಮಾರ್ಕ್, ಫಿನ್‌ಲೆಂಡ್, ನಾರ್ವೆ, ಸ್ವೀಡನ್, ಯುಕೆ, ಮೆಕ್ಸಿಕೋ ಹಾಗೂ ಕೆನಡಾಗಳ ನಂತರ ಅಮೆರಿಕಾದ ಬಳಕೆದಾರರ ಕೈಗೆ ೧೯೮೩ರಲ್ಲಿ ಮೊಬೈಲ್ ಬಂತು.
ಇದನ್ನೂ ಓದಿ: ಇನ್ನೂ ಮುಗಿದಿಲ್ಲ ಬದಲಾವಣೆಯ ಸಮಯ!
ಆಗ ಮೋಟರೋಲಾ ಸಂಸ್ಥೆ ತಯಾರಿಸುತ್ತಿದ್ದ ಡೈನಾಟಾಕ್ ಎಂಬ ಮೊಬೈಲ್ ದೂರವಾಣಿ ನೋಡಲು ಕಾರ್ಡ್‌ಲೆಸ್ ಫೋನಿನಂತೆ ಕಾಣುತ್ತಿತ್ತು; ಗಾತ್ರವೂ ಅಷ್ಟೇ ದೊಡ್ಡದಾಗಿತ್ತು. ಹೆಚ್ಚೂಕಡಿಮೆ ನಾಲ್ಕು ಸಾವಿರ ಡಾಲರುಗಳ ಬೆಲೆಗೆ ಮಾರಾಟವಾಗುತ್ತಿದ್ದ ಈ ಹ್ಯಾಂಡ್‌ಸೆಟ್‌ಗಳ ಬೆಲೆಯೇ ಮೊಬೈಲ್ ದೂರವಾಣಿ ಕ್ಷೇತ್ರದ ಭವಿಷ್ಯಕ್ಕೆ ಮಾರಕವಾಗಿಬಿಡುತ್ತದೇನೋ ಎಂದು ಮಾರ್ಟಿನ್ ಕೂಪರ್ ಭಾವಿಸಿದ್ದರಂತೆ.

ಮೊಬೈಲ್ ದೂರವಾಣಿ ಭಾರತಕ್ಕೆ ಬಂದಿದ್ದು ೧೯೯೫ರಲ್ಲಿ. ಆಗ ಇದ್ದ ಹ್ಯಾಂಡ್‌ಸೆಟ್ಟುಗಳು ಹೆಚ್ಚೂಕಡಿಮೆ ಇವತ್ತಿನ ಕಾರ್ಡ್‌ಲೆಸ್ ಫೋನುಗಳಷ್ಟೇ ದೊಡ್ಡದಾಗಿದ್ದವು. ಹ್ಯಾಂಡ್‌ಸೆಟ್ ಹೋಗಲಿ, ಮೊಬೈಲ್ ಬಳಸಿ ಮಾತಾಡಬೇಕು ಅಂದರೆ ನಿಮಿಷಕ್ಕೆ ಹತ್ತಿಪ್ಪತ್ತು ರುಪಾಯಿ ಕೊಡಬೇಕಿತ್ತು. ಔಟ್‌ಗೋಯಿಂಗ್‌ಗೂ ಅಷ್ಟು ದುಡ್ಡು, ಇನ್‌ಕಮಿಂಗ್‌ಗೂ ಅಷ್ಟೇ ದುಡ್ಡು!

ಆದರೆ ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಮೊಬೈಲ್ ದೂರವಾಣಿ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಕಂಡಿತು. ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿಯಾಯಿತು, ಮೊಬೈಲ್ ಸಂಪರ್ಕ ಪಡೆಯುವುದು ಸುಲಭವಷ್ಟೇ ಅಲ್ಲ, ಬಹಳ ಅಗ್ಗವೂ ಆಯಿತು. ಮೊಬೈಲ್ ಸಂಪರ್ಕಕ್ಕಾಗಿ ಮಾಡಬೇಕಾದ ಖರ್ಚು ಕಡಿಮೆಯಾಗುತ್ತಿದ್ದಂತೆ ಅದರ ಜನಪ್ರಿಯತೆ ತಾನೇತಾನಾಗಿ ಏರಿತು. ನಾಲ್ಕೈದು ದಶಕಗಳ ಹಿಂದೆ ಕಲ್ಪನೆಯಲ್ಲಷ್ಟೇ ಇದ್ದ ವಸ್ತುವೊಂದು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ನಿದ್ದೆಗೆ ಜಾರುವವರೆಗೆ ಪ್ರತಿ ಕ್ಷಣವೂ ನಮ್ಮೊಡನೆಯೇ ಇರುವಂತಾಯಿತು!
ಇದನ್ನೂ ಓದಿ: ಮೊಬೈಲ್ ಫೋನ್ ಅಡಿಕ್ಷನ್ ಎಂಬ ಹೈಟೆಕ್ ಚಟ
ಏಪ್ರಿಲ್ ೪, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge