ಸೋಮವಾರ, ಏಪ್ರಿಲ್ 2, 2018

ಜಾಲಲೋಕದಲ್ಲಿ ನಾವು

ಟಿ. ಜಿ. ಶ್ರೀನಿಧಿ


ಇಂಟರ್‌ನೆಟ್ ಅದೆಷ್ಟು ಪ್ರಭಾವಶಾಲಿಯೆಂದರೆ ಈಗಷ್ಟೇ ರಿಟೈರ್ ಆದ ಅಜ್ಜಿಯಿಂದ ಪ್ರಾರಂಭಿಸಿ ಇನ್ನೂ ಶಾಲೆಗೇ ಹೋಗದ ಮೊಮ್ಮಗುವಿನವರೆಗೆ ಪ್ರತಿಯೊಬ್ಬರೂ ಅದರಲ್ಲಿ ಸಕ್ರಿಯರಾಗಿರುತ್ತಾರೆ. ಮನರಂಜನೆಗಾಗಿಯೋ ಜ್ಞಾನಾರ್ಜನೆಗಾಗಿಯೋ ಸಂಪರ್ಕದ ಮಾಧ್ಯಮವಾಗಿಯೋ ನಾವೆಲ್ಲ ಅಂತರಜಾಲವನ್ನು ಪ್ರತಿದಿನವೂ ಬಳಸುತ್ತಲೇ ಇರುತ್ತೇವೆ.

ಹೀಗೆ ಬಳಸುವಾಗ ನಾವು ಅಂತರಜಾಲದಿಂದ ಅಪಾರ ಪ್ರಮಾಣದ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ, ನಿಜ. ಇದರ ಜೊತೆಗೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಾರ ಪ್ರಮಾಣದ ಮಾಹಿತಿಯನ್ನು ಅಂತರಜಾಲಕ್ಕೆ ಸೇರಿಸುತ್ತಲೂ ಇರುತ್ತೇವೆ!

ತಂತ್ರಾಂಶವೊಂದರ ಕನ್ನಡ ಆವೃತ್ತಿಯನ್ನು ಉತ್ತಮಪಡಿಸಲೆಂದೋ ಗೂಗಲ್ ಅನುವಾದಕದ ತಪ್ಪುಗಳನ್ನು ಸರಿಪಡಿಸಲೆಂದೋ ನಾವು ಉದ್ದೇಶಪೂರ್ವಕವಾಗಿಯೇ ಮಾಹಿತಿಯನ್ನು ನೀಡುತ್ತೇವೆ. ಇಂತಹ ಮಾಹಿತಿಯನ್ನು ಆಯಾ ಸಂಸ್ಥೆಗಳು ಉಪಯೋಗಿಸಿಕೊಳ್ಳುತ್ತವೆ, ಕೆಲವೊಮ್ಮೆ ಹಣಸಂಪಾದನೆಯ ಮಾರ್ಗವಾಗಿಯೂ ಬಳಸುತ್ತವೆ. ಇದರಿಂದ ಉಪಯೋಗವಾಗುತ್ತದೋ ಇಲ್ಲವೋ, ತೊಂದರೆಯಾಗುವುದಂತೂ ಕಡಿಮೆಯೇ ಎನ್ನಬೇಕು.

ಆದರೆ ನಮ್ಮ ಖಾಸಗಿ ಮಾಹಿತಿಯ ವಿಷಯ ಹೀಗಲ್ಲ. ನಮ್ಮ ದೈನಂದಿನ ವ್ಯವಹಾರಗಳ - ಇಷ್ಟಾನಿಷ್ಟಗಳ ಕುರಿತು ಅಂತರಜಾಲದಲ್ಲಿ ನಾವು ಒಂದಷ್ಟು ಮಾಹಿತಿ ಹಂಚಿಕೊಳ್ಳುತ್ತೇವೆ, ತಂತ್ರಾಂಶಗಳು-ಜಾಲತಾಣಗಳು ನಮ್ಮ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸುತ್ತವೆ. 

ಫೇಸ್‌ಬುಕ್‌ನಂತಹ ಸಮಾಜ ಜಾಲಗಳಿಗೆ, ಗೂಗಲ್ ಮ್ಯಾಪ್ಸ್‌ನಂತಹ ಸೇವೆಗಳಿಗೆ ಹೀಗೆ ಸೇರುವ ಮಾಹಿತಿಯ ಪ್ರಮಾಣ ಅಗಾಧವಾದದ್ದು. ಇಂತಹ ಬಹುತೇಕ ಮಾಹಿತಿ ನಮ್ಮ ವೈಯಕ್ತಿಕ ವಿಷಯಗಳನ್ನು ಒಳಗೊಂಡಿರುವುದರಿಂದ ಆ ಮಾಹಿತಿಯ ಬಗ್ಗೆ ಸ್ವಲ್ಪವಾದರೂ ಯೋಚಿಸಲೇಬೇಕಾದ್ದು ಇಂದಿನ ಅನಿವಾರ್ಯ.

"ನೀವು ಯಾವ ಪ್ರಖ್ಯಾತ ವ್ಯಕ್ತಿಯಂತೆ ಕಾಣುತ್ತೀರಿ", "ಇನ್ನು ಐವತ್ತು ವರ್ಷದ ನಂತರ ನೀವು ಹೇಗಿರುತ್ತೀರಿ", "ನಿಮ್ಮ ಚಹರೆಗೆ ಯಾವ ಬಗೆಯ ಕೆಲಸ ಹೊಂದುತ್ತದೆ" ಎಂದೆಲ್ಲ ಹೇಳುವ ‌ಆಪ್‌ಗಳನ್ನು, ಕ್ವಿಜ್‌ಗಳನ್ನು ನಾವೆಲ್ಲ ಫೇಸ್‌ಬುಕ್‌ನಲ್ಲಿ ನೋಡಿರುತ್ತೇವೆ. ನಮ್ಮಲ್ಲಿ ಹಲವರು ಅವನ್ನು ಬಳಸಿಯೂ ಇರುತ್ತೇವೆ.

ಇಂತಹ ಆಪ್‌ಗಳನ್ನು ಬಳಸಲು ಹೋದರೆ ಅವು ಮೊದಲಿಗೆ ಫೇಸ್‌ಬುಕ್ ಮೂಲಕ ಲಾಗಿನ್ ಆಗುವಂತೆ ('ಲಾಗಿನ್ ವಿತ್ ಫೇಸ್‌ಬುಕ್') ಕೇಳುತ್ತವೆ. ಹೀಗೆ ಎಲ್ಲೆಲ್ಲಿ ಲಾಗಿನ್ ಆಗುತ್ತೇವೆಯೋ ಅಂತಹ ಪ್ರತಿಯೊಂದು ವ್ಯವಸ್ಥೆಯೂ ನಮ್ಮ ಬಗ್ಗೆ ಒಂದಷ್ಟು ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ನಮ್ಮ ಹೆಸರು, ಭಾವಚಿತ್ರ, ವಯಸ್ಸು, ನಾವು ಪೋಸ್ಟ್ ಮಾಡಿರುವ ಛಾಯಾಚಿತ್ರಗಳು - ಹೀಗೆ ಬೇರೆಬೇರೆ ಕಡೆಗಳಲ್ಲಿ ಈ ಮಾಹಿತಿಯ ಪ್ರಮಾಣ ಬೇರೆಬೇರೆಯಾಗಿರುವುದು ಸಾಧ್ಯ.

ಈಚೆಗೆ ಫೇಸ್‌ಬುಕ್ ಹಾಗೂ ಕೇಂಬ್ರಿಜ್ ಅನಲಿಟಿಕಾ ಎಂಬ ಸಂಸ್ಥೆಯ ಸುತ್ತ ವಿವಾದ ಸೃಷ್ಟಿಯಾಗಿದೆಯಲ್ಲ, ಆ ವಿವಾದದ ಹಿಂದಿರುವುದೂ ಇಂಥದ್ದೇ ಒಂದು ವ್ಯವಸ್ಥೆ. ಯಾವುದೋ ಕ್ವಿಜ್ ನೆಪದಲ್ಲಿ ಲಕ್ಷಾಂತರ ಬಳಕೆದಾರರ ಖಾಸಗಿ ಮಾಹಿತಿಯನ್ನು ಪಡೆದುಕೊಂಡ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆ ಅಮೆರಿಕಾ ಚುನಾವಣೆಯ ಸಂದರ್ಭದಲ್ಲಿ ಅದನ್ನೆಲ್ಲ ಬಳಸಿ ಮತದಾರರನ್ನು ಪ್ರಭಾವಿಸಲು ಪ್ರಯತ್ನಿಸಿತ್ತು.

ನಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳಿ. ನಮ್ಮಲ್ಲಿ ಅನೇಕರು ಹಂಚಿಕೊಳ್ಳುವ ಮಾಹಿತಿಯನ್ನೂ, ಲೈಕ್ ಮಾಡುವ ತಾಣಗಳನ್ನೂ ನೋಡಿದರೆ ನಮ್ಮ ಒಲವು ಯಾವ ವಿಷಯಗಳತ್ತ ಇದೆ ಎನ್ನುವುದು ಬಹುತೇಕ ಸ್ಪಷ್ಟವಾಗುತ್ತದೆ. ನಾವು ಭೇಟಿಕೊಡುವ ಹೋಟಲು - ಸಿನಿಮಾ ಮಂದಿರಗಳ ವಿವರಗಳನ್ನೂ ನಮ್ಮ ಚೆಕ್-ಇನ್‌ಗಳನ್ನೂ ನೋಡಿದರೆ ನಮ್ಮ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳೂ ಸ್ಪಷ್ಟವಾಗುತ್ತವೆ. ಇನ್ನು ನಮ್ಮ ಭಾಷೆ, ಊರು ಮುಂತಾದ ವಿವರಗಳೂ ನಮ್ಮ ಪ್ರೊಫೈಲಿನಲ್ಲಿರುತ್ತವೆ. 

ಯಾವುದೋ ಕ್ವಿಜ್ ನೆಪದಲ್ಲಿ ಈ ಮಾಹಿತಿಯನ್ನೆಲ್ಲ ಪಡೆದುಕೊಳ್ಳುತ್ತಾರಲ್ಲ, ಆ ಮಾಹಿತಿ ಬಳಸಿಕೊಂಡು ತಮಗೆ ಅನುಕೂಲವಾಗುವಂತಹ ವಿಷಯಗಳನ್ನು ನಮಗೆ ತಲುಪಿಸುವುದು ಅವರಿಗೆ ಬಹಳ ಸುಲಭದ ಕೆಲಸ. ಸುಳ್ಳು ಸುದ್ದಿಗಳನ್ನೂ ಭಾವನೆಗಳನ್ನು ಕೆರಳಿಸುವಂತಹ ಸಂಗತಿಗಳನ್ನೂ ಹಂಚಿಕೊಳ್ಳಲು ಈ ಮಾರ್ಗ ಬಳಕೆಯಾದರೆ ಏನಾಗಬಹುದು? ಯೋಚಿಸಿ ನೋಡಿ. 

ಇದರಿಂದ ಪಾರಾಗಲು ಇರುವ ಸುಲಭದ ಮಾರ್ಗವೆಂದರೆ ಜಾಲಲೋಕದಲ್ಲಿ ನಮ್ಮ ಮಾಹಿತಿಯ ಸುರಕ್ಷತೆ ಕುರಿತು ತಿಳಿದುಕೊಳ್ಳುವುದು. ಫೇಸ್‌ಬುಕ್‌ನಂತಹ ಜನಪ್ರಿಯ ಸಮಾಜ ಜಾಲಗಳಲ್ಲಂತೂ ನಮ್ಮ ಎಚ್ಚರಿಕೆ ಎಷ್ಟಿದ್ದರೂ ಸಾಲದು.

ಫೇಸ್‌ಬುಕ್ ಜಾಲತಾಣ ಹಾಗೂ ಆಪ್‌ನಲ್ಲಿರುವ 'ಸೆಟಿಂಗ್ಸ್' ಆಯ್ಕೆಯಡಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಮ್ಮ ಮಾಹಿತಿಯನ್ನು ಹೇಗೆ ನಿರ್ವಹಿಸಬೇಕು ಎಂದು ಫೇಸ್‌ಬುಕ್‌ಗೆ ಹೇಳುವುದು ಸಾಧ್ಯ. ನಮ್ಮ ಪೋಸ್ಟ್‌ಗಳನ್ನು ಯಾರು ನೋಡಬಹುದು ಎನ್ನುವುದರಿಂದ ಪ್ರಾರಂಭಿಸಿ ನಾವು ಯಾವ ಆಪ್‌ಗಳ ಜೊತೆ ಯಾವೆಲ್ಲ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ ಎನ್ನುವುದರವರೆಗೆ ಸಾಕಷ್ಟು ವಿಷಯಗಳನ್ನು ಇಲ್ಲಿ ನೋಡಬಹುದು. ಅನಗತ್ಯವೆನಿಸಿದ ಆಪ್‌ಗಳನ್ನು (ಮೇಲೆ ಹೇಳಿದ ಉದಾಹರಣೆಗಳಲ್ಲಿರುವಂಥವು) ನಮ್ಮ ಖಾತೆಯಿಂದ ಹೊರಗಿಡುವುದೂ ಸಾಧ್ಯ.

ಮೊಬೈಲಿನಲ್ಲಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತೇವಲ್ಲ, ಆಗಲೂ ನೂರೆಂಟು ಬಗೆಯ ಅನುಮತಿಗಳಿಗಾಗಿ ಅವು ನಮ್ಮನ್ನು ಕೇಳುತ್ತವೆ. ಆಗಲೂ ಅವು ಏನು ಕೇಳುತ್ತಿವೆ ಎನ್ನುವುದನ್ನು ಸಂಪೂರ್ಣವಾಗಿ ಓದಿ ಆನಂತರವಷ್ಟೇ ಅನುಮತಿ ನೀಡುವುದು ಅಪೇಕ್ಷಣೀಯ. ಇದೇ ರೀತಿ ಜಾಲತಾಣ ಹಾಗೂ ಆಪ್‌ಗಳಲ್ಲಿ ಮಾಹಿತಿ ಹಂಚಿಕೊಳ್ಳುವಾಗ ಅವುಗಳ ಗೋಪ್ಯತೆಯ ನಿಯಮದ ಮೇಲೆ ಸಂಕ್ಷಿಪ್ತವಾಗಿಯಾದರೂ ಕಣ್ಣಾಡಿಸುವುದು ಒಳ್ಳೆಯದು. ಇನ್ನು ಅಪರಿಚಿತ ತಾಣಗಳಿಗೆ ಭೇಟಿಕೊಟ್ಟಾಗ ಗೂಗಲ್ - ಫೇಸ್‌ಬುಕ್ ಮುಂತಾದವುಗಳ ಲಾಗಿನ್ ಮಾಹಿತಿಯನ್ನು (ಲಾಗಿನ್ ವಿತ್ ಫೇಸ್‌ಬುಕ್, ಲಾಗಿನ್ ವಿತ್ ಫೇಸ್‌ಬುಕ್ ಇತ್ಯಾದಿಗಳ ಮೂಲಕ) ಹಿಂದೆಮುಂದೆ ಯೋಚಿಸದೆ ಹಂಚಿಕೊಳ್ಳುವುದು ಖಂಡಿತಾ ಒಳ್ಳೆಯ ಅಭ್ಯಾಸವಲ್ಲ.

ಮತ್ತೆ ಸಮಾಜಜಾಲಗಳ ಬಗ್ಗೆ ಹೇಳುವುದಾದರೆ ಅಲ್ಲಿ ಯಾವ ಮಾಹಿತಿ ಹಂಚಿಕೊಳ್ಳಬೇಕು, ಯಾವ ಮಾಹಿತಿ ಹಂಚಿಕೊಳ್ಳಬಾರದು ಎನ್ನುವುದನ್ನು ನಾವೇ ಖಚಿತವಾಗಿ ನಿರ್ಧರಿಸಿಕೊಳ್ಳಬೇಕಾದ್ದು ಅಪೇಕ್ಷಣೀಯ. ಬೀದಿಯಲ್ಲಿ ಹೋಗುವ ಅಪರಿಚಿತರೊಡನೆ ನಾವೇನೂ ನಮ್ಮ ಖಾಸಗಿ ವಿಷಯಗಳನ್ನೆಲ್ಲ ಹಂಚಿಕೊಳ್ಳುವುದಿಲ್ಲವಲ್ಲ, ಅದೇ ನಿಯಮವನ್ನು ಫೇಸ್‌ಬುಕ್‌ಗೂ ಅನ್ವಯಿಸಿಕೊಂಡರೆ ಮಾಹಿತಿ ಸುರಕ್ಷತೆಯ ತಲೆನೋವಿನ ಅರ್ಧಭಾಗ ತನ್ನಷ್ಟಕ್ಕೆ ತಾನೇ ಸರಿಹೋಗಿಬಿಡುತ್ತದೆ!

ಮಾರ್ಚ್ ೨೮, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge