ಬುಧವಾರ, ಮಾರ್ಚ್ 28, 2018

ಆಚಿನ ಲೋಕದಲ್ಲಿ ಅಂತರಜಾಲ

ಟಿ. ಜಿ. ಶ್ರೀನಿಧಿ


ಕೆಲವೇ ವರ್ಷಗಳ ಹಿಂದೆ ಬಹಳ ದುಬಾರಿಯಾಗಿದ್ದ, ಅಷ್ಟೇನೂ ಅವಶ್ಯಕವಲ್ಲದ್ದು ಎನಿಸುತ್ತಿದ್ದ ಅಂತರಜಾಲ ಸಂಪರ್ಕ ಇದೀಗ ನಮ್ಮ ಅಗತ್ಯಗಳಲ್ಲೊಂದಾಗಿ ಬೆಳೆದುನಿಂತಿದೆ. ಅಂತರಜಾಲ ಸಂಪರ್ಕ ಎಲ್ಲ ಕಡೆಗಳಲ್ಲೂ ಲಭ್ಯವಾದಂತೆ ಎಲ್ಲಿಂದ ಬೇಕಿದ್ದರೂ ವೀಡಿಯೋ ಕಾಲ್ ಮಾಡುವುದು, ಲೈವ್ ವೀಡಿಯೋ ಬಿತ್ತರಿಸುವುದು ಸಾಧ್ಯವಾಗಿದೆ.

ದೇಶವಿದೇಶಗಳಲ್ಲಿನ ಪ್ರೇಕ್ಷಣೀಯ ಸ್ಥಳಗಳಷ್ಟೇ ಏಕೆ, ಮುಂದೊಮ್ಮೆ ಪ್ರವಾಸಕ್ಕೆಂದು ಚಂದ್ರನ ಮೇಲೆಯೇ ಲ್ಯಾಂಡ್ ಆಗುವಂತೆ ಮಾಡಲು ಹಲವು ಪ್ರಯತ್ನಗಳು ನಡೆದಿವೆ. ಅಂತಹ ಪ್ರಯತ್ನಗಳು ಕೈಗೂಡುವ ಹೊತ್ತಿಗೆ, ಅಥವಾ ಅದಕ್ಕಿಂತ ಮೊದಲೇ, ಚಂದ್ರನ ಮೇಲೆ ೪ಜಿ ಮೊಬೈಲ್ ಜಾಲ ರೂಪಿಸುವ ಯೋಜನೆಯೊಂದು ಸಿದ್ಧವಾಗಿದೆ ಎನ್ನುವುದು ಇದೀಗ ಕೇಳಿಬಂದಿರುವ ಸುದ್ದಿ.

ಅಂದಹಾಗೆ ವಾಟ್ಸ್‌ಆಪ್, ಫೇಸ್‌ಬುಕ್ ಇತ್ಯಾದಿಗಳನ್ನು ಚಂದ್ರನ ಮೇಲೂ ಬಳಸುವಂತೆ ಮಾಡುವುದೇನೂ ಈ ಯೋಜನೆಯ ಉದ್ದೇಶವಲ್ಲ. ಚಂದ್ರನ ಬಗ್ಗೆ ಅಧ್ಯಯನ ನಡೆಸಲು ಅಲ್ಲಿಗೆ ಹೋದ ಬಾಹ್ಯಾಕಾಶ ವಾಹನಗಳು ಸಂಗ್ರಹಿಸುವ ಮಾಹಿತಿಯನ್ನು ಭೂಮಿಗೆ ತಕ್ಷಣವೇ ಕಳುಹಿಸುವಂತೆ ಮಾಡಲು ಈ ಜಾಲವನ್ನು ರೂಪಿಸಲಾಗುತ್ತಿದೆಯಂತೆ. ಚನ್ನೈನಿಂದಲೋ ಚನ್ನಪಟ್ಟಣದಿಂದಲೋ ಫೇಸ್‌ಬುಕ್‌‌ನಲ್ಲಿ ಲೈವ್ ವೀಡಿಯೋ ಬಿತ್ತರಿಸುತ್ತೇವಲ್ಲ, ಅಷ್ಟೇ ಸರಾಗವಾಗಿ ಚಂದ್ರನ ಚಿತ್ರಗಳನ್ನೂ ಲೈವ್ ಸ್ಟ್ರೀಮಿಂಗ್ ಮೂಲಕ ಭೂಮಿಗೆ ತಲುಪಿಸುವುದು ಇದರಿಂದ ಸಾಧ್ಯವಾಗುವ ನಿರೀಕ್ಷೆಯಿದೆ.

ಗಗನನೌಕೆಗಳ, ಗಗನಯಾತ್ರಿಗಳ ಜೊತೆ ಸಂಪರ್ಕದಲ್ಲಿರಬೇಕಾದ್ದು ಯಾವುದೇ ಬಾಹ್ಯಾಕಾಶ ಸಂಶೋಧನಾ ಯೋಜನೆಯ ಪ್ರಾಥಮಿಕ ಅಗತ್ಯಗಳಲ್ಲೊಂದು. ಹೀಗೆ ಸಂಪರ್ಕ ಕಲ್ಪಿಸಲು ಬಳಕೆಯಾಗುವ ತಂತ್ರಜ್ಞಾನಗಳೂ ಬಾಹ್ಯಾಕಾಶ ವಿಜ್ಞಾನದ ಜೊತೆಯಲ್ಲೇ ಬೆಳೆಯುತ್ತ ಬಂದಿವೆ. ಭೂಮಿಯ ಮೇಲೆ ಮಾಡುತ್ತೇವಲ್ಲ, ಹಾಗೆ ಅಂತರಜಾಲ ಸಂಪರ್ಕವನ್ನು ಈ ಉದ್ದೇಶಕ್ಕೂ ಬಳಸಿಕೊಳ್ಳುವ ಪರಿಕಲ್ಪನೆ ಕೂಡ ಹಲವಾರು ವರ್ಷಗಳಿಂದಲೇ ಸುದ್ದಿಯಲ್ಲಿದೆ.

ಭೂಮಿಯ ಮೇಲೆ ಅಂತರಜಾಲದ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎನ್ನುವುದು ನಮಗೆಲ್ಲ ಗೊತ್ತು. ಮನುಷ್ಯರೇ ಕಷ್ಟಪಟ್ಟು ತಲುಪಬೇಕಾದ ಕೆಲವೆಡೆಗಳಲ್ಲಿ ಕೂಡ ಅಂತರಜಾಲ ಸಂಪರ್ಕ ಲಭ್ಯವಿರುವುದನ್ನು ನಾವಿಂದು ನೋಡಬಹುದು. ಅಲ್ಲೆಲ್ಲ ಮಾಡಿದಂತೆಯೇ ತಂತ್ರಜ್ಞರು ಬಾಹ್ಯಾಕಾಶದಲ್ಲೂ ಅಂತರಜಾಲ ಸಂಪರ್ಕ ಕೊಡುತ್ತಾರೆ ಬಿಡಿ ಎಂದು ನಾವು ಈ ವಿಷಯವನ್ನೇ ಉಪೇಕ್ಷಿಸಬಹುದಾಗಿತ್ತು.

ಆದರೆ ಬಾಹ್ಯಾಕಾಶದ ವಿಷಯವೇ ಬೇರೆ. ಅಲ್ಲಿ ಯಾವುದೋ ಗ್ರಹದ ಸುತ್ತ ಸುತ್ತುತ್ತಿರುವ ಗಗನನೌಕೆಯಿಂದ ಹೊರಟ ಮಾಹಿತಿಯ ತುಣುಕು ಭೂಮಿಯನ್ನು ತಲುಪಲು ಕ್ರಮಿಸಬೇಕಾದ ದೂರ ನಮ್ಮ ಕಲ್ಪನೆಗೆ ನಿಲುಕುವುದೂ ಕಷ್ಟವೇ. ಸಂವಹನಕ್ಕೆ ಅಡ್ಡಿಯಾಗುವಂತಹ ಅನೇಕ ಅಡಚಣೆಗಳನ್ನೂ ಅದು ಈ ಹಾದಿಯಲ್ಲಿ ಎದುರಿಸಬೇಕಾಗುತ್ತದೆ. ಮಾಹಿತಿ ಸಂವಹನದ ಹಾದಿಯಲ್ಲಿರುವ ಯಾವುದೇ ಎರಡು ಘಟಕಗಳ (ನೋಡ್) ನಡುವೆ ಸಂಪರ್ಕ ಸಾಧಿಸುವುದು ನಿಧಾನವಾದರೆ ಅಷ್ಟೂ ಮಾಹಿತಿ ನಷ್ಟವಾಗುವ ಸಂಭವವೂ ಇರುತ್ತದೆ. ಹೀಗೆಲ್ಲ ಇರುವುದರಿಂದಲೇ ಅಂತರಜಾಲ ಬಾಹ್ಯಾಕಾಶದಲ್ಲಿ ಕೆಲಸಮಾಡುವಂತಾಗಲು ಪ್ರತ್ಯೇಕ ವ್ಯವಸ್ಥೆ ರೂಪಿಸಿಕೊಳ್ಳಬೇಕಾದ್ದು ಅನಿವಾರ್ಯ.

ಇಂತಹ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲೂ ಕೆಲಸ ನಡೆದಿದೆ. ಡಿಸ್ರಪ್ಷನ್ ಟಾಲರೆಂಟ್ ನೆಟ್‌ವರ್ಕಿಂಗ್ (ಡಿಟಿಎನ್) ಎಂಬ ತಂತ್ರಜ್ಞಾನ ಇದಕ್ಕೊಂದು ಉದಾಹರಣೆ. ಹೆಸರೇ ಹೇಳುವಂತೆ ಈ ತಂತ್ರಜ್ಞಾನ ಬಳಸುವ ಜಾಲಗಳಿಗೆ ಸಂವಹನದಲ್ಲಿ ಉಂಟಾಗಬಹುದಾದ ಅಡೆತಡೆಗಳನ್ನು ಸಹಿಸಿಕೊಳ್ಳುವ ಶಕ್ತಿಯಿರುತ್ತದೆ. ಅಷ್ಟೇ ಅಲ್ಲ, ಮುಂದಿನ ಘಟಕದೊಡನೆ ಪರಿಪೂರ್ಣ ಸಂಪರ್ಕ ಸಾಧ್ಯವಾಗುವವರೆಗೆ ತನ್ನಲ್ಲಿರುವ ಮಾಹಿತಿಯನ್ನು ಉಳಿಸಿಟ್ಟುಕೊಳ್ಳುವ ಸಾಮರ್ಥ್ಯವೂ ಇಂತಹ ಜಾಲಗಳಲ್ಲಿರುತ್ತದೆ.

ಸದ್ಯ ವಿಜ್ಞಾನಿಗಳು ಗಗನನೌಕೆಗಳ, ಗಗನಯಾತ್ರಿಗಳ ಜೊತೆ ಸಂಪರ್ಕ ಕಲ್ಪಿಸಿಕೊಳ್ಳಲು ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. 'ಪಾಯಿಂಟ್-ಟು-ಪಾಯಿಂಟ್ ಕಮ್ಯೂನಿಕೇಶನ್' ಎಂದು ಕರೆಸಿಕೊಳ್ಳುವ ಈ ಬಗೆಯ ಸಂವಹನ ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಘಟಕಗಳ ನಡುವೆ ಮಾತ್ರವೇ ನಡೆಯಬಲ್ಲದು. ಇಂತಹ ವ್ಯವಸ್ಥೆಗಳನ್ನು ರೂಪಿಸಿ ನಿರ್ವಹಿಸುವುದು ದುಬಾರಿ ಮಾತ್ರವೇ ಅಲ್ಲ, ಅವುಗಳ ಮೂಲಕ ನಡೆಯುವ ಸಂವಹನವೂ ನಿಧಾನ.

ಅಂತರಜಾಲದ ವ್ಯಾಪ್ತಿ ಅಂತರಿಕ್ಷಕ್ಕೂ ತಲುಪಿದ ಮೇಲೆ ಈ ಪರಿಸ್ಥಿತಿ ಬದಲಾಗಿ ಅದನ್ನು ಎಲ್ಲ ಬಗೆಯ ಸಂಪರ್ಕಕ್ಕೂ ಬಳಸಲು ಸಾಧ್ಯವಾಗಬಹುದು ಎನ್ನುವುದು ವಿಜ್ಞಾನಿಗಳ ಅನಿಸಿಕೆ. ನಾವೆಲ್ಲ ಬಳಸುವ ಅಂತರಜಾಲದ ರೂವಾರಿಗಳಲ್ಲೊಬ್ಬರಾದ ವಿಂಟನ್ ಗ್ರೇ ಸರ್ಫ್‌ರಂತಹ ತಜ್ಞರ ಬೆಂಬಲವೂ ಈ ವಿಜ್ಞಾನಿಗಳಿಗಿದೆ. ಇಂಥದ್ದೊಂದು ವ್ಯವಸ್ಥೆ ರೂಪುಗೊಂಡ ನಂತರ ಮಾಹಿತಿ ಸಂವಹನಕ್ಕೆ ಆಗುವ ಖರ್ಚಿನಲ್ಲಿ ಉಳಿತಾಯವಾಗುವುದರ ಜೊತೆಗೆ ಸಂವಹನದ ವೇಗ ಹಾಗೂ ವಿಶ್ವಸನೀಯತೆಯೂ ಹೆಚ್ಚಲಿದೆ ಎಂದು ಅವರು ಹೇಳುತ್ತಾರೆ. ಈ ಜಾಲಕ್ಕೆ ಅವರು 'ಇಂಟರ್‌ಪ್ಲಾನೆಟರಿ (ಅಂತರಗ್ರಹ) ಇಂಟರ್‌ನೆಟ್' ಅಥವಾ 'ಇಂಟರ್‌‌ಪ್ಲಾ‌ನೆಟ್' ಎಂದು ಹೆಸರಿಟ್ಟಿದ್ದಾರೆ.

ಅಂತರಿಕ್ಷದ ಕ್ಲಿಷ್ಟ ಪರಿಸ್ಥಿತಿಯಲ್ಲೂ ಅಂತರಜಾಲ ಸರಾಗವಾಗಿ ಕೆಲಸಮಾಡುವುದು ಸಾಧ್ಯವಾಯಿತೆಂದರೆ ಆ ತಂತ್ರಜ್ಞಾನವನ್ನು ಭೂಮಿಯ ಮೇಲೂ ಬಳಸಿಕೊಳ್ಳಬಹುದು, ಸಂಪರ್ಕ ಜಾಲಗಳಿಂದ ಇಂದಿಗೂ ದೂರವಿರುವ ದುರ್ಗಮ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸಿಕೊಡುವುದು ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಉಪಗ್ರಹಗಳ ಮೂಲಕ ಅಂತರಜಾಲ ಸಂಪರ್ಕ ಡಿಟಿಎಚ್ ವ್ಯವಸ್ಥೆಯಲ್ಲಿ ಉಪಗ್ರಹಗಳು ಬಳಕೆಯಾಗುವ ಸಂಗತಿ ನಮಗೆಲ್ಲ ಗೊತ್ತೇ ಇದೆ. ಅದೇ ರೀತಿ ಉಪಗ್ರಹಗಳ ಮೂಲಕ ಅಂತರಜಾಲ ಸಂಪರ್ಕ ಕಲ್ಪಿಸುವ ಪ್ರಯತ್ನಗಳೂ ಇದೀಗ ನಡೆದಿವೆ. ಮೊಬೈಲ್, ಬ್ರಾಡ್‌ಬ್ಯಾಂಡ್ ಮುಂತಾದ ಸಾಮಾನ್ಯ ಬಗೆಯ ಅಂತರಜಾಲ ಸಂಪರ್ಕಗಳು ಲಭ್ಯವಿಲ್ಲದ ಸ್ಥಳಗಳಿಗೆ ಈ ಬಗೆಯ ಅಂತರಜಾಲ ಸಂಪರ್ಕ ಕಲ್ಪಿಸುವುದು ವಿಜ್ಞಾನಿಗಳ ಉದ್ದೇಶ. ಉಪಗ್ರಹಗಳ ನಿರ್ಮಾಣ, ಉಡಾವಣೆ ಹಾಗೂ ನಿರ್ವಹಣೆ ದುಬಾರಿ ವ್ಯವಹಾರವಾದ್ದರಿಂದ ಈ ಬಗೆಯ ಅಂತರಜಾಲ ಸಂಪರ್ಕಗಳೂ ಬಹಳ ದುಬಾರಿಯಾಗಿರುವ ಸಾಧ್ಯತೆಯೇ ಹೆಚ್ಚು. ಈ ಪರಿಸ್ಥಿತಿಯನ್ನು ಸಾಧ್ಯವಾದಷ್ಟೂ ತಪ್ಪಿಸುವ ಉದ್ದೇಶದಿಂದ ದೊಡ್ಡ ಉಪಗ್ರಹಗಳ ಬದಲು ಸಣ್ಣಸಣ್ಣ ಉಪಗ್ರಹಗಳ ಜಾಲವನ್ನೇ ಬಳಸುವ ಆಲೋಚನೆ ಕೂಡ ಇದೆ. ಇಂತಹ ಸಾವಿರಾರು ಉಪಗ್ರಹಗಳ 'ಸ್ಟಾರ್‌ಲಿಂಕ್' ಎಂಬ ಜಾಲ ರೂಪಿಸಲು ಹೊರಟಿರುವ ಉದ್ಯಮಿ ಎಲಾನ್ ಮಸ್ಕ್ ಒಡೆತನದ 'ಸ್ಪೇಸ್‌ಎಕ್ಸ್' ಸಂಸ್ಥೆ ಮೊದಲ ಎರಡು ಪ್ರಾಯೋಗಿಕ ಉಪಗ್ರಹಗಳನ್ನು ಈಗಾಗಲೇ ಯಶಸ್ವಿಯಾಗಿ ಉಡಾಯಿಸಿದೆ. 
ಮಾರ್ಚ್ ೭, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

anantharamu ಹೇಳಿದರು...

ಚೆನ್ನಾಗಿದೆ ನೀಡಿರುವ ಮಾಹಿತಿ

badge