ಸೋಮವಾರ, ಮಾರ್ಚ್ 12, 2018

ಹಕ್ಕಿಗಳಿಗೇಕೆ ಶಾಕ್ ಹೊಡೆಯುವುದಿಲ್ಲ?

ವಿದ್ಯುತ್ ತಂತಿಗಳ ಮೇಲೆ ಕುಳಿತುಕೊಳ್ಳುವ ಹಕ್ಕಿಗಳಿಗೆ ವಿದ್ಯುದಾಘಾತವಾಗುವುದಿಲ್ಲ ಎನ್ನುವುದು ನಮಗೆ ಗೊತ್ತು. ಅಪರೂಪಕ್ಕೊಮ್ಮೆ ಅವು ಇಲೆಕ್ಟ್ರಿಕ್ ಶಾಕ್‌ನಿಂದಾಗಿ ಸಾಯುವುದನ್ನು ಕೂಡ ನಾವು ನೋಡಿದ್ದೇವೆ. ಈ ವಿಚಿತ್ರ ವಿದ್ಯಮಾನಗಳಿಗೆ ಕಾರಣ ಏನು? ವಿವರಣೆ ಇಲ್ಲಿದೆ.

ವಿನಾಯಕ ಕಾಮತ್


ಜಲ ವಿದ್ಯುತ್ ಸ್ಥಾವರದಲ್ಲೋ ಅಥವಾ ಅಣು ವಿದ್ಯುತ್ ಸ್ಥಾವರದಲ್ಲೋ ಉತ್ಪತ್ತಿಯಾದ ವಿದ್ಯುತ್ತನ್ನು ಬಳಕೆದಾರರಿಗೆ ತಲುಪಿಸಬೇಕಷ್ಟೇ? ಈ ಕೆಲಸವನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಉತ್ಪಾದನಾ ಸ್ಥಳದಿಂದ, ವಿತರಣಾ ಕೇಂದ್ರಕ್ಕೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಪ್ರವಾಹ ಅಥವಾ ಇಲೆಕ್ಟ್ರಿಕ್ ಕರೆಂಟ್ ನ ವರ್ಗಾವಣೆ. ಇದನ್ನು ಎತ್ತರದಲ್ಲಿರುವ ದೊಡ್ಡ ಕಂಬಗಳಿಂದ ಏರ್ಪಟ್ಟಿರುವ ತಂತಿಯ ಜಾಲಗಳ ಮೂಲಕ ಮಾಡುತ್ತಾರೆ. ಎರಡನೇ ಹಂತದಲ್ಲಿ ವಿದ್ಯುತ್ ಪ್ರಸರಣದ ಉಪಕೇಂದ್ರಗಳ ಮೂಲಕ, ‘ಕರೆಂಟ್’ ಬಳಕೆದಾರರಿಗೆ ವಿತರಿಸಲ್ಪಡುತ್ತದೆ. ಈ ಎರಡನೇ ಹಂತದಲ್ಲಿ ಕೂಡ ಕಂಬಗಳ ಮೂಲಕ ಬೆಸೆದು ಕೊಂಡಿರುವ ತಂತಿಗಳ ಮೂಲಕವೇ ಕರೆಂಟ್ ಸಾಗಿಸಲ್ಪಡುತ್ತದೆ. ವಿದ್ಯುತ್ ವಿತರಣೆಯನ್ನು ಭೂಗತ ತಂತಿಗಳ ಮೂಲಕವೂ ಮಾಡಬಹುದು. ಆದರೆ, ನಮ್ಮ ದೇಶದಲ್ಲಿ ಹೆಚ್ಚಾಗಿ ವಿದ್ಯುತ್ ವಿತರಣೆಯನ್ನು,  ರಸ್ತೆಯ ಅಕ್ಕ ಪಕ್ಕದಲ್ಲಿ ಹಾದು ಹೋಗುವ ಕಂಬಗಳ ಮೂಲಕವೇ ಪೂರೈಸುತ್ತಾರೆ.

ಇರಲಿ. ಈ ಎರಡೂ ಹಂತಗಳಲ್ಲಿ ಬಳಸುವ ಲೋಹದ ತಂತಿಗಳ ಮೇಲೆ, ನಮ್ಮ ಮನೆಗಳಲ್ಲಿ ಬಳಸಲ್ಪಡುವ ತಂತಿಗಳಂತೆ, ಅವಾಹಕದ ಲೇಪನವಿರುವುದಿಲ್ಲ. ಇದನ್ನು ನೀವು ಗಮನಿಸಿರಬಹುದು. ನಾವು ದಿನನಿತ್ಯದಲ್ಲಿ ಉಪಯೋಗಿಸುವ ತಂತಿಗಳ ಮೇಲೆ ಅವಾಹಕವಾದ ರಬ್ಬರ್ ರೀತಿಯ ವಸ್ತುವಿನ ಲೇಪನವಿರುವುದರಿಂದ, ಆ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದಾಗ, ಅದನ್ನು ಅಕಸ್ಮಾತ್ ಮುಟ್ಟಿದರೂ ನಮಗೆ ವಿದ್ಯುದಾಘಾತವಾಗುವುದಿಲ್ಲ. ಆದರೆ, ಈ ರೀತಿಯ ಅವಾಹಕದ ಲೇಪನವಿಲ್ಲದಿರುವ, ವಿದ್ಯುತ್ ವರ್ಗಾವಣೆ ಮತ್ತು ವಿತರಣೆ ತಂತಿಗಳ ಮೇಲೆ ಹಕ್ಕಿಗಳು ನೇರವಾಗಿ ಕುಳಿತುಕೊಂಡಿರುತ್ತವೆ. ಅದರೂ ಅವುಗಳಿಗೆ ಸಾಮಾನ್ಯವಾಗಿ ‘ಶಾಕ್’ ತಗಲುವುದಿಲ್ಲ. ಶಾಕ್ ತಗಲುವುದಿಲ್ಲವೆಂದರೆ, ಆ ವಿದ್ಯುತ್ ತಂತಿಗಳ ಮೂಲಕ ವಿದ್ಯುತ್ ಪ್ರವಹಿಸುವುದಿಲ್ಲವೇ? ಖಂಡಿತ ಇಲ್ಲ. ವಿತರಣೆ ತಂತಿಗಳಲ್ಲಾದರೆ ಕೇವಲ 240 ವೋಲ್ಟ್ ಗಳಲ್ಲಿ ವಿದ್ಯುತ್ ಹರಿಯುತ್ತಿರಬಹುದು. ಆದರೆ ದೊಡ್ಡ ಪ್ರಮಾಣದ ವರ್ಗಾವಣೆ ತಂತಿಗಳಲ್ಲಿ ಸಾವಿರ-ಸಾವಿರ ವೋಲ್ಟ್ ಗಳ ವಿಭವಾಂತರದಲ್ಲಿ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಆದಾಗಿಯೂ ಅದರ ಮೇಲೆ ಕುಳಿತ ಹಕ್ಕಿಗಳಿಗೆ ಆಘಾತವಾಗುತ್ತಿರುವುದಿಲ್ಲ! ಇದೇಕೆ ಹೀಗೆ? ಹಕ್ಕಿಗಳ ಪಾದಗಳಲ್ಲೇನಾದರೂ ಅವಾಹದ ಕವಚವಿರಬಹುದೇ? ಎಂದು ನೀವು ಯೋಚಿಸುತ್ತಿರಬಹುದು . ಆದರೆ ಹಕ್ಕಿಗಳ ಕಾಲುಗಳಲ್ಲಿ ಅಂತಹ ಯಾವುದೇ ವಿಶೇಷತೆಗಳಿಲ್ಲ. ಹಾಗಾದರೆ, ಹಕ್ಕಿಗಳಿಗೇಕೆ ವಿದ್ಯುದಾಘಾತವಾಗುವುದಿಲ್ಲ ಎಂಬುದನ್ನು ಹೀಗೆ ವಿವರಿಸಬಹುದು.

ತಾಮ್ರದ ತಂತಿಗಳ  ಮೂಲಕ ವಿದ್ಯುತ್ ಪ್ರವಹಿಸುತ್ತದೆ ಎಂದೆನಷ್ಟೇ? ತಾಮ್ರ, ವಿದ್ಯುತ್ ನ ಉತ್ತಮ ವಾಹಕ. ಇಂತಹ ವಾಹಕದ ಮೇಲೆ ಹಕ್ಕಿಯೊಂದು ಕುಳಿತಿದೆ ಎಂದು ಭಾವಿಸಿ. ಆಗ  ವಿದ್ಯುದಂಶಗಳಿಗೆ, ಪ್ರವಹಿಸಲು ಎರಡು ದಾರಿಗಳು ಸಿಗುತ್ತವೆ. ಒಂದು ನೇರವಾಗಿ ತಂತಿಯ ಮೂಲಕವಾದರೆ ಇನ್ನೊಂದು ಹಕ್ಕಿಯ ದೇಹದ ಮೂಲಕ. ತಾಮ್ರ ವಿದ್ಯುತ್ ನ ಉತ್ತಮ ವಾಹಕವಾಗಿರುವುದರಿಂದ, ಅದು ತನ್ನ ಮೂಲಕ ವಿದ್ಯುದಂಶಗಳನ್ನು ಸುಲಭವಾಗಿ ಹರಿಯಗೊಡುತ್ತದೆ. ಇನ್ನೊಂದು ಅರ್ಥದಲ್ಲಿ ತಾಮ್ರ, ವಿದ್ಯುದಂಶಗಳು ತನ್ನ ಮೂಲಕ ಹರಿಯಲು, ಯಾವುದೇ ಅಡಚಣೆ ಅಥವಾ ರೋಧವನ್ನು ಉಂಟುಮಾಡುವುದಿಲ್ಲ. ಆದರೆ ಹಕ್ಕಿಯ ದೇಹ,  ತಾಮ್ರದಷ್ಟು ಒಳ್ಳೆಯ  ವಿದ್ಯುತ್ ವಾಹಕವಲ್ಲ. ಅಥವಾ ಹಕ್ಕಿಯ ದೇಹ ವಿದ್ಯುದಂಶಗಳನ್ನು ತನ್ನ ಮೂಲಕ ಹರಿಯಗೊಡದೇ, ವಿದ್ಯುತ್ ಪ್ರವಾಹಕ್ಕೆ ರೋಧ ಒಡ್ಡುತ್ತದೆ. “ವಿದ್ಯುತ್ ಪ್ರವಹಿಸುವಾಗ ಕಡಿಮೆ ರೋಧವಿರುವ ಮಾರ್ಗವನ್ನು ಅನುಸರಿಸುತ್ತದೆ” ಎಂಬುದು, ವಿದ್ಯುನ್ಮಾನ ಶಾಸ್ತ್ರದ ಒಂದು ಸರಳ ತತ್ತ್ವ. ಈ ತತ್ವದ ಪ್ರಕಾರ, ವಿದ್ಯುತ್ ಪ್ರವಹಿಸುತ್ತಿರುವ ತಂತಿಯ ಮೇಲೆ ಹಕ್ಕಿ ಕುಳಿತಿದ್ದರೆ, ವಿದ್ಯುದಂಶಗಳು ತಂತಿಯ ಮೂಲಕವೇ ಪ್ರವಹಿಸಲು ಇಷ್ಟಪಡುತ್ತವೆಯೇ ಹೊರತು, ಹಕ್ಕಿಯ ದೇಹದ ಮೂಲಕವಾಗಿ ಅಲ್ಲ. ಹೀಗಾಗಿ, ವಿದ್ಯುತ್ ಪ್ರವಹಿಸುತ್ತಿರುವ ತಂತಿಗಳ ಮೇಲೆ ಕುಳಿತರೂ, ಹಕ್ಕಿಗಳಿಗೆ ವಿದ್ಯುದಾಘಾತವಾಗುವುದಿಲ್ಲ. ಇದೇ ವಿಷಯವನ್ನು ಇನ್ನೊಂದು ಮಗ್ಗಲಿನಿಂದಲೂ ನೋಡಬಹುದು. ಯಾವುದೇ ವಸ್ತುವಿನ ಮೂಲಕ ವಿದ್ಯುತ್ ಹರಿಯಬೇಕಾದರೆ, ಆ ವಸ್ತುವಿನ ಎರಡು ತುದಿಗಳ ನಡುವೆ ವೋಲ್ಟೇಜ್ ಅಥವಾ ವಿಭವದಲ್ಲಿ ವ್ಯತ್ಯಾಸವಿರಬೇಕು. ಹಕ್ಕಿ ಒಂದೇ ತಂತಿಯ ಎರಡು ಭಾಗಗಳನ್ನು ತನ್ನ ದೇಹದ ಮೂಲಕ ಸಂಪರ್ಕಿಸುತ್ತದೆಯಷ್ಟೇ? ಒಂದೇ ತಂತಿಯ ಎರಡು ಭಾಗದಲ್ಲಿ ಒಂದೇ ವಿಭವವಿರುವುದರಿಂದ, ಹಕ್ಕಿಯ ದೇಹದ ಮೂಲಕ ವಿದ್ಯುತ್ ಪ್ರವಹಿಸುವುದಿಲ್ಲ. ವಿದ್ಯುತ್ ತಂತಿಗಳ ಮೇಲೆ ಸರಸರನೇ ಓಡುವ ಇಣಚಿಗಳಿಗೂ ಯಾಕೆ ಶಾಕ್ ತಗಲುವುದಿಲ್ಲ, ಎಂಬುದು ನಿಮಗೀಗ ತಿಳಿದಿರಬಹುದು.

ಆದರೂ ಅಪರೂಪಕ್ಕೊಮ್ಮೆ ವಿದ್ಯುತ್ ತಂತಿಗಳ ಮೇಲೆ ಸತ್ತ ಹಕ್ಕಿಗಳನ್ನು ನೀವು ನೋಡಿರಬಹುದು. ಇದಕ್ಕೂ ಕಾರಣವಿದೆ. ವಿದ್ಯುತ್ ತಂತಿ ಎಂದರೆ, ಕೇವಲ ಒಂದೇ ತಂತಿ ಇರುವುದಿಲ್ಲ. ಒಂದರ ಪಕ್ಕ ಒಂದರಂತೆ ಅನೇಕ ತಂತಿಗಳು ಸಮಾನಾಂತರವಾಗಿ, ಕಂಬದಿಂದ ಕಂಬಗಳಿಗೆ ಜೋಡಿಸಲ್ಪಟ್ಟಿರುತ್ತವೆ. ಹೀಗಿದ್ದಾಗ ಎಲ್ಲ ತಂತಿಗಳ ಒಳಗೂ ಸಮಾನ ವಿಭವಾಂತರದಲ್ಲಿ ವಿದ್ಯತ್ ಪ್ರವಹಿಸುತ್ತಿರುವುದಿಲ್ಲ. ಒಂದು ತಂತಿಯ ವಿಭವಕ್ಕೂ ಅದರ ಪಕ್ಕದ್ದಕೂ ವ್ಯತ್ಯಾಸವಿರಬಹುದು. ಒಂದು ತಂತಿಯ ಮೇಲೆ ಕುಳಿತ ಹಕ್ಕಿಯ ರೆಕ್ಕೆ, ಹಾರುವಾಗ ಅಕಸ್ಮಾತ್ ಇನ್ನೊಂದು ತಂತಿಯ ಸಂಪರ್ಕಕ್ಕೆ ಬಂತೆನ್ನಿ. ಆಗ ಎರಡೂ ತಂತಿಗಳ ನಡುವೆ ಇರುವ ವೋಲ್ಟೇಜ್ ನ ವ್ಯತ್ಯಾಸದ ಕಾರಣದಿಂದ ಒಂದು ತಂತಿಯಿಂದ ಇನ್ನೊಂದು ತಂತಿಗೆ ವಿದ್ಯುತ್ ಹರಿಯಲೇ ಬೇಕು. ಹೀಗೆ ವಿದ್ಯುತ್ ಪ್ರವಹಿಸಲು ಹಕ್ಕಿಯ ದೇಹ ಬಿಟ್ಟರೆ ಬೇರೆ ಮಾರ್ಗವಿಲ್ಲದಿರುವುದರಿಂದ, ಹಕ್ಕಿಯ ದೇಹದ ಮೂಲಕ ವಿದ್ಯುತ್ ಹರಿಯುತ್ತದೆ. ಹೀಗೆ ವಿದ್ಯುತ್ ತಾನು ನಿಜವಾಗಿಯೂ ಸಾಗಬೇಕಾದ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಸಾಗಿದರೆ, ಅದೇ ಶಾರ್ಟ್ ಸರ್ಕ್ಯೂಟ್. ಆದ್ದರಿಂದ, ಎರಡೂ ತಂತಿಗಳ ನಡುವೆ ಹಕ್ಕಿ ಸೇತುವೆಯಂತೆ ವರ್ತಿಸಿದಾಗ, ಶಾರ್ಟ್ ಸರ್ಕ್ಯೂಟ್ ನಿಂದ  ಅದರ ಸಾವು ಖಚಿತ! ವಿದ್ಯುತ್ ಪ್ರವಹಿಸುತ್ತಿರುವ ತಂತಿಗಳ ಮಧ್ಯದಲ್ಲಿ ಸಾಕಷ್ಟು ಅಂತರವಿರುವುದರ ಹಿಂದಿನ ಗುಟ್ಟು ಕೂಡ ಇದೇ. ಯಾವುದೇ ಕಾರಣದಿಂದ ಆಗಬಹುದಾದ ಶಾರ್ಟ್ ಸರ್ಕ್ಯೂಟ್ ನ್ನು ತಪ್ಪಿಸುವುದು.

ಇದು ಹಕ್ಕಿಗಳ ವಿಷಯವಾಯಿತು. ಇನ್ನು ನಮಗೆ, ಅಂದರೆ ಮನುಷ್ಯರಿಗೆ ಆಗಬಹುದಾದ ವಿದ್ಯುದಾಘಾತಗಳ ಬಗ್ಗೆ ಗಮನಹರಿಸೋಣ. ವಿದ್ಯುತ್ ತಂತಿಯ ಸಂಪರ್ಕದಲ್ಲಿರುವ ಹಕ್ಕಿಗಳಿಗೂ, ಮತ್ತು ವಿದ್ಯುತ್ ತಂತಿಯ ಸಂಪರ್ಕದಲ್ಲಿ ಬರುವ ಮನುಷ್ಯರಿಗೂ, ಒಂದು ಬಹಳ ಮುಖ್ಯವಾದ ವ್ಯತ್ಯಾಸವಿದೆ. ಅದೆಂದರೆ, ಭೂಮಿಯ ಸಂಪರ್ಕ. ವಿದ್ಯುತ್ ತಂತಿಯ ಸಂಪರ್ಕಕ್ಕೆ ಬರುವ ಮನುಷ್ಯ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭೂಮಿಯ ಸಂಪರ್ಕದಲ್ಲಿರುತ್ತಾನೆ. ಭೂಮಿಯ ವಿಭವವನ್ನು ಸೊನ್ನೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ತಂತಿಯಲ್ಲಿ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಹರಿಯುತ್ತಿದ್ದರೂ ಸಹ, ಅದರ ವೋಲ್ಟೇಜ್ ಭೂಮಿಗಿಂತ ಹೆಚ್ಚಾಗಿಯೇ ಇರುತ್ತದೆ. ಹೀಗಾಗಿ ತಂತಿ ಮತ್ತು ಭೂಮಿಯ ನಡುವೆ ವಿಭವಾಂತರ ಉಂಟಾಗುವುದು ಖಚಿತ. ನಮ್ಮ ದೇಹ, ತಂತಿ ಮತ್ತು ಭೂಮಿಯ ನಡುವೆ ಸೇತುವೆಯಂತಾಗಿ ಶಾರ್ಟ್ ಸರ್ಕ್ಯೂಟ್ ಗೆ  ಕಾರಣವಾಗುತ್ತದೆ. ಹೀಗಾಗುವಾಗ, ದೇಹದ ಮೂಲಕ ವಿದ್ಯುತ್ ಪ್ರವಹಿಸುವುದರಿಂದ, ವಿದ್ಯುದಾಘಾತ ಕಟ್ಟಿಟ್ಟ ಬುತ್ತಿ. ಆದ್ದರಿಂದ ವಿದ್ಯುತ್ ಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಕೈಗೊಳ್ಳುವಾಗ, ಎಷ್ಟೇ ಜಾಗರೂಕತೆ ವಹಿಸಿದರೂ ಕಡಿಮೆಯೇ. ವಿದ್ಯುತ್ ಗೆ ಸಂಬಂಧಿಸಿದ ಕೆಲಸಗಳಲ್ಲಿ, ಅವಾಹಕ ಕೈಗವುಸು ಅಥವಾ ಪ್ಲಾಸ್ಟಿಕ್ ಪಾದರಕ್ಷೆಗಳನ್ನು ಬಳಸುವದು ಮಹತ್ವದ್ದು. ಇದು, ತಂತಿ ಮತ್ತು ಭೂಮಿಯ ನಡುವೆ ಸಂಪರ್ಕ ಉಂಟಾಗುವುದನ್ನು ತಡೆದು, ಆಗಬಹುದಾದ ಅನಾಹುತಗಳನ್ನು ತಪ್ಪಿಸುತ್ತದೆ.

ಇದನ್ನೂ ಓದಿ: ಮಿಂಚು ಹುಳ ಮಿಂಚುವುದೇಕೆ?

ಕಾಮೆಂಟ್‌ಗಳಿಲ್ಲ:

badge