ಸೋಮವಾರ, ಮಾರ್ಚ್ 19, 2018

ಟೆಕ್ ಪ್ರೀತಿ ಶುರುವಾದ ರೀತಿ

ಟಿ. ಜಿ. ಶ್ರೀನಿಧಿ


ಇಂದು ನಮ್ಮ ಬದುಕಿನ ಮೇಲೆ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಸಾಧನಗಳ ಪ್ರಭಾವ ಅತ್ಯಂತ ವ್ಯಾಪಕವಾಗಿದೆ. ಲ್ಯಾಪ್‌ಟಾಪ್‌ನಿಂದ ಮೊಬೈಲ್ ಫೋನಿನವರೆಗೆ, ಕಾರಿನಿಂದ ಟೀವಿಯವರೆಗೆ ನೂರೆಂಟು ಸಾಧನಗಳು ಈಗ ಸ್ಮಾರ್ಟ್ ಆಗಿವೆ, ನಮ್ಮ ಬದುಕನ್ನು ಪ್ರಭಾವಿಸುತ್ತಿವೆ.

ಇಂದಿನ ಈ ಎಲ್ಲ ಸ್ಮಾರ್ಟ್ ಸಾಧನಗಳೂ ಒಂದಲ್ಲ ಒಂದು ರೀತಿಯ ಕಂಪ್ಯೂಟರುಗಳೇ. ಅವುಗಳ ಬಾಹ್ಯ ರೂಪ ಹೇಗೆಯೇ ಇದ್ದರೂ ಮೂಲಭೂತ ರಚನೆ ಹೆಚ್ಚೂಕಡಿಮೆ ಒಂದೇ ರೀತಿಯದು. ಆಯಾ ಸಾಧನ ಮಾಡುವ ಕೆಲಸ ಎಂಥದ್ದು ಎನ್ನುವುದರ ಮೇಲೆ ಈ ರಚನೆಯ ಸಂಕೀರ್ಣತೆ ಬದಲಾಗುತ್ತದೆ, ಅಷ್ಟೇ.

ಈಗ ಇಷ್ಟೆಲ್ಲ ಸಾಮಾನ್ಯವಾಗಿದ್ದರೂ ಕಂಪ್ಯೂಟರುಗಳ ವಿನ್ಯಾಸ ಯಾವಾಗಲೂ ಹೀಗೆಯೇ ಇರಲಿಲ್ಲ.
'ಮಶೀನ್' ಎಂದ ತಕ್ಷಣ ಚಲಿಸುವ ಭಾಗಗಳುಳ್ಳ - ಲೋಹದಿಂದ ತಯಾರಿಸಿದ ಯಂತ್ರಗಳು ನಮ್ಮ ಮನಸ್ಸಿಗೆ ಬರುತ್ತವಲ್ಲ, ಮನುಷ್ಯರ ಕೆಲಸದಲ್ಲಿ ನೆರವಾಗಲೆಂದು ಮೊದಮೊದಲು ರೂಪುಗೊಂಡ ಕಂಪ್ಯೂಟರುಗಳು ಇಂತಹ ಯಂತ್ರಗಳೇ ಆಗಿದ್ದವು (ಈ ಯಂತ್ರಗಳು ಬರುವ ಮುನ್ನ ಲೆಕ್ಕಾಚಾರದ ಕೆಲಸ, ಅಂದರೆ ಕಂಪ್ಯೂಟಿಂಗ್‌ನಲ್ಲಿ ತೊಡಗಿದ್ದ ವ್ಯಕ್ತಿಗಳನ್ನೇ ಕಂಪ್ಯೂಟರ್‌ಗಳೆಂದು ಕರೆಯಲಾಗುತ್ತಿತ್ತು!).

ಯಾಂತ್ರಿಕ (ಮೆಕ್ಯಾನಿಕಲ್) ಕಂಪ್ಯೂಟರುಗಳ ಸ್ಥಾನಕ್ಕೆ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಕಂಪ್ಯೂಟರುಗಳು ಬಂದಿದ್ದು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ, ಅಷ್ಟೇ ಏಕೆ, ಆಧುನಿಕ ಇತಿಹಾಸದಲ್ಲೇ ಮಹತ್ವದ ಬದಲಾವಣೆಗಳಲ್ಲೊಂದು.

ಈ ಬದಲಾವಣೆಗೆ ಕಾರಣವಾದ ಅನೇಕ ಘಟನೆಗಳನ್ನು ನಾವು ಗುರುತಿಸಬಹುದು. ಈ ಪೈಕಿ ಅತ್ಯಂತ ಮಹತ್ವದ್ದೆಂದು ಕರೆಸಿಕೊಂಡಿರುವುದು, ಅತಿ ಹೆಚ್ಚು ಪ್ರಚಾರ ಪಡೆದುಕೊಂಡಿದ್ದು 'ಇನಿಯಾಕ್' ಎನ್ನುವ ಕಂಪ್ಯೂಟರಿನ ಅನಾವರಣ. ಇಂದು ನಮ್ಮೆಲ್ಲರ ಬದುಕನ್ನು ಆವರಿಸಿಕೊಂಡಿರುವ ಟೆಕ್ ಪ್ರೀತಿಗೆ ನಾಂದಿಹಾಡಿದ ಈ ಘಟನೆ ನಡೆದದ್ದು ೧೯೪೬ರ ಫೆಬ್ರುವರಿ ೧೪ರಂದು.

ಇನಿಯಾಕ್ ಎನ್ನುವ ಹೆಸರಿನ ಪೂರ್ಣರೂಪ 'ಇಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟಿಗ್ರೇಟರ್ ಆಂಡ್ ಕ್ಯಾಲ್ಕ್ಯುಲೇಟರ್' ಎಂದು. ಯಾಂತ್ರಿಕ ಕಂಪ್ಯೂಟರುಗಳಲ್ಲಿ ಬಳಕೆಯಾಗುತ್ತಿದ್ದ ಗಿಯರ್-ಲಿವರ್ ಇತ್ಯಾದಿಗಳ ಬದಲು ವ್ಯಾಕ್ಯೂಮ್ ಟ್ಯೂಬ್‌ನಂತಹ ವಿದ್ಯುನ್ಮಾನ ಸಾಧನಗಳನ್ನು ಬಳಸಿದ್ದು ಈ ಕಂಪ್ಯೂಟರಿನ ಹೆಚ್ಚುಗಾರಿಕೆ. ಬಹುಮಟ್ಟಿಗೆ ನಿರ್ದ್ರವ್ಯ (ವ್ಯಾಕ್ಯೂಮ್, ನಿರ್ವಾತ) ಸ್ಥಳವುಳ್ಳ ಮುಚ್ಚಿದ ಗಾಜಿನ ಈ ನಳಿಕೆಗಳನ್ನು ಬಳಸಿ ವಿದ್ಯುತ್ತಿನ ಪ್ರವಾಹವನ್ನು ನಿಯಂತ್ರಿಸುವುದು - ಆ ಮೂಲಕ ಕಂಪ್ಯೂಟರಿನ ಲೆಕ್ಕಾಚಾರಗಳನ್ನು ಕೈಗೊಳ್ಳುವುದು ಸಾಧ್ಯವಾಗುತ್ತಿತ್ತು.

ಯಾಂತ್ರಿಕ ಕಂಪ್ಯೂಟರುಗಳು ದೊಡ್ಡದಾಗಿರುತ್ತಿದ್ದವು ಎನ್ನುವ ವಿಷಯ ನಮಗೆ ಗೊತ್ತೇ ಇದೆ. ಕಂಪ್ಯೂಟರುಗಳು ವಿದ್ಯುನ್ಮಾನ ಸಾಧನಗಳಾಗಿ ಬದಲಾಗುವ ಪ್ರಕ್ರಿಯೆಗೆ ಇನಿಯಾಕ್‌ ಪುಷ್ಟಿ ನೀಡಿತು ಎಂದಮಾತ್ರಕ್ಕೆ ಅದು ಇಂದಿನ ಸಾಧನಗಳಂತೆ ಚಿಕ್ಕದಾಗಿಯೇನೂ ಇರಲಿಲ್ಲ. ಇನಿಯಾಕ್‌ನ ಗಾತ್ರ ಅದೆಷ್ಟು ದೊಡ್ಡದಾಗಿತ್ತೆಂದರೆ ಅದು ಇಪ್ಪತ್ತು ಬೈ ನಲವತ್ತು ಅಡಿ ವಿಸ್ತೀರ್ಣದ ಕೋಣೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿತ್ತು. ಮೂವತ್ತು ಟನ್ ತೂಗುತ್ತಿದ್ದ ಇನಿಯಾಕ್‌ನಲ್ಲಿ ಹದಿನೆಂಟು ಸಾವಿರಕ್ಕೂ ಹೆಚ್ಚು ವ್ಯಾಕ್ಯೂಮ್ ಟ್ಯೂಬ್‌ಗಳನ್ನು ಬಳಸಲಾಗಿತ್ತು.

ಪ್ರತಿ ಸೆಕೆಂಡಿಗೆ ಐದು ಸಾವಿರ ಕೂಡುವ ಲೆಕ್ಕಗಳನ್ನು ಮಾಡಿ ಮುಗಿಸುತ್ತಿದ್ದದ್ದು ಈ ಕಂಪ್ಯೂಟರಿನ ಹೆಚ್ಚುಗಾರಿಕೆ. ಇದಕ್ಕೆ ಲಕ್ಷಾಂತರ ವಾಟ್‌ಗಳಷ್ಟು ವಿದ್ಯುತ್ತು - ಭಾರೀ ಪ್ರಮಾಣದ ಹಣ ವೆಚ್ಚವಾಗುತ್ತಿತ್ತು, ನಿಜ. ಆದರೂ ಇಂದಿನ ಕಂಪ್ಯೂಟರುಗಳ ಈ ಹಿರಿಯಜ್ಜ ೧೯೪೦ರ ದಶಕದಲ್ಲೇ ವಿದ್ಯುನ್ಮಾನ ಯುಗಕ್ಕೆ ಮುನ್ನುಡಿ ಬರೆದದ್ದು ಮಾತ್ರ ನಿಜ.

ಇನಿಯಾಕ್‌ನಲ್ಲಿ ಬಳಕೆಯಾಗಿದ್ದ ವ್ಯಾಕ್ಯೂಮ್ ಟ್ಯೂಬುಗಳು ಹೆಚ್ಚೂಕಡಿಮೆ ವಿದ್ಯುತ್ ಬಲ್ಬುಗಳಷ್ಟೇ ದೊಡ್ಡದಾಗಿದ್ದವು. ಅಷ್ಟೇ ಅಲ್ಲ, ಬಲ್ಬುಗಳ ಹಾಗೆ ಬಿಸಿಯಾಗುತ್ತಿದ್ದವು, ಸುಟ್ಟುಹೋಗುತ್ತಲೂ ಇದ್ದವು. ಬಳಕೆಯಲ್ಲಿದ್ದ ಇಂತಹ ಸಾವಿರಾರು ಭಾಗಗಳಲ್ಲಿ ಸುಟ್ಟುಹೋದದ್ದು ಯಾವುದೆಂದು ಗುರುತಿಸಿ ಬದಲಿಸುವುದೇ ತಂತ್ರಜ್ಞರಿಗೆ ಒಂದು ಸವಾಲಾಗಿತ್ತು. ಬದಲಾವಣೆಯೇ ಜಗದ ನಿಯಮ ಎನ್ನುತ್ತಾರಲ್ಲ, ಹಾಗೆ ಈ ಪರಿಸ್ಥಿತಿ ಬಹುಬೇಗ ಬದಲಾಯಿತು. ಟ್ರಾನ್ಸಿಸ್ಟರುಗಳು - ಇಂಟಿಗ್ರೇಟೆಡ್ ಸರ್ಕ್ಯೂಟುಗಳು ರೂಪುಗೊಂಡಿದ್ದರ ಪರಿಣಾಮವಾಗಿ ಕಂಪ್ಯೂಟರ್ ಬಿಡಿಭಾಗಗಳ ಗಾತ್ರವನ್ನು ಗಣನೀಯವಾಗಿ ಕುಗ್ಗಿಸುವುದು, ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಏರಿಸುವುದು ಸಾಧ್ಯವಾಯಿತು. ಕ್ಷಣಾರ್ಧದಲ್ಲಿ ಲಕ್ಷಾಂತರ ಲೆಕ್ಕಾಚಾರಗಳನ್ನು ಕೈಗೊಳ್ಳುವ ಪುಟಾಣಿ ಪ್ರಾಸೆಸರುಗಳೊಳಗೆ ಅಷ್ಟೇ ಪ್ರಮಾಣದ ಟ್ರಾನ್ಸಿಸ್ಟರುಗಳು ಅಡಕವಾಗಿ ಕುಳಿತವು.

ಇವೆಲ್ಲ ಬದಲಾವಣೆಗಳೊಡನೆ ತೀರಾ ಸಾಧಾರಣ ಸಾಮರ್ಥ್ಯದ ಕಂಪ್ಯೂಟರು ಒಂದು ಕೋಣೆತುಂಬ ತುಂಬಿಕೊಂಡಿರುತ್ತಿದ್ದ ಕಾಲ ಹೋಗಿ ಅದಕ್ಕಿಂತ ಅದೆಷ್ಟೋ ಪಟ್ಟು ವೇಗವಾಗಿ ಕೆಲಸಮಾಡುವ ಕಂಪ್ಯೂಟರನ್ನು ಕೈಲಿ ಹಿಡಿದು ಓಡಾಡುವುದು ಸಾಧ್ಯವಾಯಿತು. ಕೋಣೆಗಾತ್ರದ ಕಂಪ್ಯೂಟರುಗಳು ಹೀಗೆ ಅಂಗೈಯಗಲಕ್ಕೆ ಇಳಿದುದರ ಹಿಂದಿದ್ದದ್ದು ಮಾತ್ರ ದಶಕಗಳ ಹಿಂದೆ ಫೆಬ್ರುವರಿ ೧೪ರಂದು ಶುರುವಾಯಿತಲ್ಲ, ಅದೇ ಪ್ರೀತಿ!

ಫೆಬ್ರುವರಿ ೧೪, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge