ಬುಧವಾರ, ಮಾರ್ಚ್ 7, 2018

ವಿಜ್ಞಾನದ ಹಾದಿಯಲ್ಲಿ ಭಾರತ: ೪: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆಗಳು, ಮುಂದಿನ ಹೆಜ್ಜೆಗಳು

ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ


ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ನಾಲ್ಕನೆಯ ಲೇಖನ ಇಲ್ಲಿದೆ.

ಹಿಂದಿನ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ತಂತ್ರಜ್ಞಾನದಲ್ಲಿ ಸಾಧನೆಗಳ ಸಾಲು
ವಿಜ್ಞಾನ-ತಂತ್ರಜ್ಞಾನದ ಜಾಗತಿಕ ಭೂಪಟದಲ್ಲಿ ಭಾರತಕ್ಕೆ ವಿಶಿಷ್ಟವಾದ ಸ್ಥಾನ ತಂದುಕೊಟ್ಟಿದ್ದು ನಮ್ಮ ಐಟಿ ಉದ್ದಿಮೆ ಎಂದರೆ ತಪ್ಪಾಗಲಿಕ್ಕಿಲ್ಲ. ತಂತ್ರಾಂಶಗಳ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲಿ ನಮ್ಮ ದೇಶದ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಹೆಸರುಮಾಡಿವೆ. ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೆಲಸಗಳನ್ನು ಹೊರಗುತ್ತಿಗೆ ನೀಡುವ (ಔಟ್‌ಸೋರ್ಸಿಂಗ್) ಅಭ್ಯಾಸ ಪ್ರಾರಂಭವಾದ ಸಮಯದಲ್ಲಂತೂ ಈ ಕ್ಷೇತ್ರದ ಬಹುಪಾಲು ಕೆಲಸ ನಡೆಯುತ್ತಿದ್ದದ್ದು ನಮ್ಮ ದೇಶದಲ್ಲೇ.

ಹಾಗೆ ನೋಡಿದರೆ ನಮ್ಮ ಐಟಿ ಉದ್ದಿಮೆ ಇಂದಿಗೂ ನಿರ್ವಹಿಸುವ ಕೆಲಸದ ದೊಡ್ಡ ಪಾಲು ಇಂತಹ ಹೊರಗುತ್ತಿಗೆ ಕೆಲಸಗಳದ್ದೇ. ಈ ಕ್ಷೇತ್ರದ ಬಹಳಷ್ಟು ಸಂಸ್ಥೆಗಳು ತಮ್ಮ ಗ್ರಾಹಕರು ಬಳಸುವ ವಿವಿಧ ಕಂಪ್ಯೂಟರ್ ವ್ಯವಸ್ಥೆಗಳ ನಿರ್ವಹಣೆ ಮತ್ತು ಅದಕ್ಕೆ ಪೂರಕವಾದ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಹೊಸದಾಗಿ ತಯಾರಾಗುವ ತಂತ್ರಾಂಶಗಳ ಪರೀಕ್ಷೆ (ಟೆಸ್ಟಿಂಗ್) ಕೂಡ ಐಟಿ ಸಂಸ್ಥೆಗಳಲ್ಲಿ ನಡೆಯುವ ಪ್ರಮುಖ ಚಟುವಟಿಕೆಗಳಲ್ಲೊಂದು.

ನಮ್ಮ ಐಟಿ ಉದ್ದಿಮೆ ಹೊರಗುತ್ತಿಗೆಯ ಕೆಲಸಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯವನ್ನು ಬದಲಿಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿರುವುದು ಗಮನಾರ್ಹ. ಮಾಹಿತಿ ತಂತ್ರಜ್ಞಾನದ ನೆರವಿನಿಂದ ಹೊಸ ಪರಿಕಲ್ಪನೆಗಳನ್ನು ಪರಿಚಯಿಸುತ್ತಿರುವ ಭಾರತೀಯ ಸಂಸ್ಥೆಗಳು ನಮ್ಮ ಐಟಿ ಜಗತ್ತಿನಲ್ಲಿ ಸೇವೆಗಳ (ಸರ್ವಿಸ್) ಜೊತೆಗೆ ಉತ್ಪನ್ನಗಳಿಗೂ (ಪ್ರಾಡಕ್ಟ್) ಜಾಗ ಒದಗಿಸಿಕೊಡುವ ಪ್ರಯತ್ನದಲ್ಲಿವೆ. ವಿದೇಶಿ ಗ್ರಾಹಕರನ್ನಷ್ಟೇ ಅವಲಂಬಿಸುವ ಬದಲಿಗೆ ನಮ್ಮ ದೇಶದ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡ ಉತ್ಪನ್ನಗಳು - ಸೇವೆಗಳೂ ಬಂದಿವೆ.  ನಗರಗಳ ಹೈಟೆಕ್ ಬಳಕೆದಾರರಿಂದ ಪ್ರಾರಂಭಿಸಿ ಸ್ಮಾರ್ಟ್ ಅಲ್ಲದ ಫೋನ್ ಬಳಸುವ ಸಾಮಾನ್ಯ ಗ್ರಾಹಕರವರೆಗೆ ಎಲ್ಲ ಬಗೆಯ ಬಳಕೆದಾರರನ್ನೂ ಇವು ಗಮನದಲ್ಲಿಟ್ಟುಕೊಂಡಿರುವುದು ವಿಶೇಷ.

ಗ್ರಾಹಕರ ಮಾಹಿತಿ ತಂತ್ರಜ್ಞಾನ ಅಗತ್ಯಗಳ ಕುರಿತು ಸಮಾಲೋಚಿಸುವ ಹಾಗೂ ಸಲಹೆಗಳನ್ನು ನೀಡುವುದರಲ್ಲೂ (ಕನ್ಸಲ್ಟಿಂಗ್) ಭಾರತೀಯ ಐಟಿ ಸಂಸ್ಥೆಗಳು ತಮ್ಮ ಛಾಪು ಮೂಡಿಸುತ್ತಿವೆ. ಒಂದು ಕಾಲದಲ್ಲಿ ತಂತ್ರಾಂಶ ಅಭಿವೃದ್ಧಿ ಹಾಗೂ ನಿರ್ವಹಣೆಯನ್ನಷ್ಟೆ ತಮ್ಮ ಪ್ರಮುಖ ಉದ್ದೇಶವಾಗಿಟ್ಟುಕೊಂಡಿದ್ದ ಸಂಸ್ಥೆಗಳು ಇದೀಗ ಅವರ ಯಂತ್ರಾಂಶ ವ್ಯವಸ್ಥೆಗಳನ್ನು ನಿರ್ವಹಿಸುವ (ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್), ಸುರಕ್ಷತಾ ಕ್ರಮಗಳನ್ನು ನಿರ್ದೇಶಿಸುವಂತಹ (ಸೆಕ್ಯೂರಿಟಿ) ಕೆಲಸಗಳಲ್ಲೂ ತೊಡಗಿವೆ.

ತಂತ್ರಾಂಶದ ಜೊತೆಗೆ ಯಂತ್ರಾಂಶದ್ದೂ ಅಭಿವೃದ್ಧಿ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಅನನ್ಯವಾದದ್ದು. ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಭಾರತ ಮಾಡುತ್ತಿರುವ ಸಾಧನೆ ಮತ್ತು ಪ್ರಗತಿಯನ್ನು ಗಮನಿಸಿದರೆ, ೨೦೨೦ರ ಹೊತ್ತಿಗೆ ಈ ಉದ್ಯಮವು ೫೦ ಬಿಲಿಯನ್ ಡಾಲರ್ ಮಾರುಕಟ್ಟೆಯನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ  ಟೆಲಿಕಾಂ ಉದ್ಯಮಗಳಿಗೆ ಅಗತ್ಯವಾದ ಉಪಕರಣಗಳ ಅಭಿವೃದ್ಧಿ ಮಾಡುವ ಮಾರುಕಟ್ಟೆ ೩೦ ಬಿಲಿಯನ್ ಡಾಲರ್‌ಗಿಂತ ಅಧಿಕವಾಗಿದೆ. ವಿಶ್ವದ ಅಗ್ರಮಾನ್ಯ ಡಿ.ಆರ್.ಎ.ಎಮ್ (ಹಲವು ವಿದ್ಯುನ್ಮಾನ ಸಾಧನಗಳಲ್ಲಿ ಬಳಕೆಯಾಗುವ ರ್‍ಯಾಂಡಮ್ ಆಕ್ಸೆಸ್ ಮೆಮೊರಿ, ಅರ್ಥಾತ್ ರ್‍ಯಾಮ್‌ನ ಒಂದು ವಿಧ) ಚಿಪ್ ಉತ್ಪಾದಕರಲ್ಲಿ ಒಂದಾಗಿರುವ ಜಪಾನಿನ ಎಲ್ಫಿಡಾ ಸಂಸ್ಥೆಗೆ ಎರಡು ಸಂಕೀರ್ಣ ಚಿಪ್ ವಿನ್ಯಾಸವನ್ನು ಯಶಸ್ವಿಯಾಗಿ ಬೆಂಗಳೂರಿನ ಸಂಸ್ಥೆ ಮಾಡಿಕೊಟ್ಟಿದ್ದು ಭಾರತದ ಸೆಮಿಕಂಡಕ್ಟರ್ ಉದ್ಯಮದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಇದು ಜಪಾನಿನ ಹೊರಗೆ ಅಭಿವೃದ್ಧಿಯಾದ ಮತ್ತು ಯಶಸ್ವಿಯಾದ ವಿಶ್ವದ ಮೊದಲ ಡಿ.ಆರ್.ಎ.ಎಮ್ ಚಿಪ್ ವಿನ್ಯಾಸವೆನ್ನುವುದು ಗಮನಾರ್ಹ.

ಟೆಕ್ಸಸ್ ಇನ್ಸ್‌ಟ್ರುಮೆಂಟ್ಸ್, ಇಂಟೆಲ್ ಮೊದಲಾದ ವಿಶ್ವವಿಖ್ಯಾತ ಸೆಮಿಕಂಡಕ್ಟರ್ ಸಂಸ್ಥೆಗಳು ಭಾರತದಲ್ಲಿ ವಿನ್ಯಾಸ ಮತ್ತು ಸಂಶೋಧನೆ ಕೇಂದ್ರಗಳನ್ನು ತೆರೆಯುತ್ತಿರುವುದು, ಇಲ್ಲಿನ ತಂತ್ರಜ್ಞರ ಕೌಶಲ್ಯ ಮತ್ತು ವೃತ್ತಿಪರತೆಯ ಮೇಲೆ ಈ ಸಂಸ್ಥೆಗಳಿಗಿರುವ ವಿಶ್ವಾಸವನ್ನು ತೋರಿಸುತ್ತದೆ. ಈ ಉದ್ಯಮದಲ್ಲಿ ಕೆಲಸ ಮಾಡಲುವ ಹಲವಾರು ಭಾರತೀಯ ತಂತ್ರಜ್ಞರು ತಾವು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಮತ್ತು ವಿನ್ಯಾಸಗಳಿಗೆ ಅಂತರಾಷ್ಟ್ರೀಯ ಪೇಟೆಂಟ್‌ಗಳನ್ನು ಪಡೆದಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ ಮೊದಲಾದ ಸಂಸ್ಥೆಗಳು ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವಮಟ್ಟದ ಸಾಧನೆ ಮಾಡುತ್ತಿದ್ದರೆ, ರೋಬೋಟಿಕ್ಸ್, ಆಟೋಮೇಷನ್, ಐ.ಓ.ಟಿ ಮೊದಲಾದ ಕ್ಷೇತ್ರಗಳ ಹಲವಾರು ಸಂಸ್ಥೆಗಳು ಭಾರತದಲ್ಲಿ ಕೆಲಸ ಮಾಡುತ್ತಿವೆ. ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ಚಿಪ್ ಉತ್ಪಾದನೆಯನ್ನು ಭಾರತದಲ್ಲಿ ಮಾಡಬೇಕು ಎಂದು ಕೇಂದ್ರ ಸರ್ಕಾರವು ಕೆಲವು ಸಂಸ್ಥೆಗಳ ಮೂಲಕ ಪ್ರಯತ್ನಿಸುತ್ತಿವೆ. ಇದು ಯಶಸ್ವಿಯಾದರೆ, ಮುಂಬರುವ ದಿನಗಳಲ್ಲಿ ವಿಶ್ವದ ಸೆಮಿಕಂಡಕ್ಟರ್ ಉದ್ಯಮದಲ್ಲಿ ಭಾರತವೂ ಪ್ರಮುಖ ಸ್ಥಾನ ಪಡೆಯುವುದು ಸಾಧ್ಯವಾಗುತ್ತದೆ.

ಮುಂದಿನ ಹಾದಿ
ಇವೆಲ್ಲ ಕ್ಷೇತ್ರಗಳಲ್ಲಿನ ಬೆಳವಣಿಗೆ ಅಬಾಧಿತವಾಗಿ ಸಾಗಬೇಕಾದರೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸುಲಭವಾಗಿ ದೊರಕುವಂತಿರಬೇಕು. ಮಾಹಿತಿ ತಂತ್ರಜ್ಞಾನದ ನೆರವಿನಿಂದ ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲೂ ಅನೇಕ ಪ್ರಯತ್ನಗಳು ನಡೆದಿವೆ. ಶಾಲೆ-ಕಾಲೇಜುಗಳ ಮೂಲಕ ದೊರಕುವ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಪೂರಕ ಶಿಕ್ಷಣ ಒದಗಿಸುವ ಹೆಚ್ಚುವರಿ ಕಾರ್ಯಕ್ರಮಗಳನ್ನೂ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ಕೈಗೊಂಡಿರುವುದು ಗಮನಾರ್ಹ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ STEM (Science, Technology, Engineering and Mathematics) ಶಿಕ್ಷಣಕ್ರಮವನ್ನು ವ್ಯಾಪಕವಾಗಿ ಬಳಸುವ ನಿಟ್ಟಿನಲ್ಲೂ ಅಲ್ಲಲ್ಲಿ ಚಿಂತನೆ ಪ್ರಾರಂಭವಾಗಿದೆ.

ಇಷ್ಟೆಲ್ಲ ಸಾಧನೆಗಳಾಗಿವೆ ಎಂದಮಾತ್ರಕ್ಕೆ ನಾವೆಲ್ಲರೂ ಸಂತೋಷವಾಗಿ ನಿಶ್ಚಿಂತರಾಗಿ ನೆಮ್ಮದಿಯಾಗಿ ಕಾಲಕಳೆಯುವ ಕಾಲ ಬಂದಿದೆ ಎಂದೇನೂ ಅರ್ಥವಲ್ಲ. ಏಕೆಂದರೆ ಆಗಬೇಕಾದ ಕೆಲಸಗಳು ಇನ್ನೂ ಬಹಳಷ್ಟಿವೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು, ಅದು ಎಲ್ಲರಿಗೂ ಎಲ್ಲರಿಗೂ ಲಭಿಸುವಂತೆ ಮಾಡುವುದು ಮುಂತಾದ ಪ್ರಾಥಮಿಕ ಕ್ರಮಗಳಿಂದ ಪ್ರಾರಂಭಿಸಿ ವಿಜ್ಞಾನ-ತಂತ್ರಜ್ಞಾನ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲು ನಮ್ಮ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರವರೆಗೆ ಭಾರತ ಕ್ರಮಿಸಬೇಕಾದ ದೂರ ಇನ್ನೂ ಸಾಕಷ್ಟಿದೆ. ಉತ್ಪಾದನಾ ಕ್ಷೇತ್ರದಲ್ಲಾಗಲೀ ಉತ್ಪನ್ನಗಳ ರಫ್ತಿನಲ್ಲಾಗಲೀ ನಮ್ಮ ಸಾಧನೆಗಳು ಇನ್ನೂ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಐಟಿ ಕ್ಷೇತ್ರವೂ ಅಷ್ಟೇ, ಹಿಂದಿನ ವರ್ಷಗಳಲ್ಲಿ ಮಾಡುತ್ತಿದ್ದ ಕೆಲಸದ ಗುಂಗಿನಿಂದ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. 

ಇದೇರೀತಿ ದೇಶದ ಸಾಮಾನ್ಯ ಜನರ ಬದುಕನ್ನು ವಿಜ್ಞಾನ-ತಂತ್ರಜ್ಞಾನಗಳ ನೆರವಿನಿಂದ ಇನ್ನಷ್ಟು ಪ್ರಭಾವಿಸುವ ನಿಟ್ಟಿನಲ್ಲೂ ಪ್ರಯತ್ನಗಳು ಸಾಗಬೇಕಿವೆ: ಆಹಾರಧಾನ್ಯಗಳ ಶೇಖರಣಾ ವಿಧಾನದಲ್ಲಿ ಸುಧಾರಣೆ ತರುವ ಮೂಲಕ ಅವು ವ್ಯರ್ಥವಾಗುವುದನ್ನು ತಡೆಗಟ್ಟುವುದು, ಜಲಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು, ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು - ಹೀಗೆ ನಾವು ಮಾಡಬೇಕಾದ ಕೆಲಸಗಳ ಪಟ್ಟಿ ಸಾಕಷ್ಟು ಉದ್ದವಾಗಿಯೇ ಇದೆ. ವಿಜ್ಞಾನದ ಹಾದಿಯಲ್ಲಿ ಕ್ರಮಿಸಬೇಕಾದ ದೂರ, ಮೂಡಬೇಕಾದ ಹೆಜ್ಜೆಗುರುತು ಇನ್ನೂ ಬೇಕಾದಷ್ಟಿದೆ!

೨೦೧೭ರ ವಿಜಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನದ ಸಂಗ್ರಹರೂಪ

1 ಕಾಮೆಂಟ್‌:

vijayakumar ಹೇಳಿದರು...

yup, IT industry is one of the fastest growing sector . although it has several advantages
there are disadvantages like job loss due to automation

badge