ಸೋಮವಾರ, ನವೆಂಬರ್ 12, 2018

'ವಿಜ್ಞಾನ'ವೆಂಬ ವಿಶಿಷ್ಟ ಪ್ರಯತ್ನ

ಟಿ. ಜಿ. ಶ್ರೀನಿಧಿ


"ಆಂಗ್ಲಭಾಷಾಭ್ಯಾಸವು ನಮ್ಮ ದೇಶದಲ್ಲಿ ದಿನೇದಿನೇ ಅಭಿವೃದ್ಧಿಯಾಗುತ್ತಿದ್ದರೂ ವಿಜ್ಞಾನದ ವಿಷಯವಾಗಿ ಮಾತ್ರ ವಿಶೇಷ ಶ್ರದ್ಧೆಯು ತೋರಿಬಂದಿಲ್ಲ. ಆ ಭಾಗದಲ್ಲಿ ಈಗೀಗ ಕಣ್ಣುಬಿಡುತ್ತಿದ್ದೇವೆ. ಜನಸಾಮಾನ್ಯದಲ್ಲೆಲ್ಲಾ ಈ ವಿಜ್ಞಾನವನ್ನು ಹರಡಿದ ಹೊರತು ದೇಶವು ಅಭಿವೃದ್ಧಿಸ್ಥಿತಿಗೆ ಬರಲಾರದು..." ಇಂದಿನ ಪರಿಸ್ಥಿತಿಯನ್ನೇ ಕುರಿತು ಹೇಳಿದಂತೆ ತೋರುವ ಈ ಮಾತುಗಳು ಪ್ರಕಟವಾದದ್ದು ಇಂದಿಗೆ ನೂರು ವರ್ಷಗಳ ಹಿಂದೆ, ೧೯೧೮ನೇ ಇಸವಿಯಲ್ಲಿ.

ಈ ಮಾತುಗಳನ್ನು ಪ್ರಕಟಿಸಿದ್ದು 'ವಿಜ್ಞಾನ'ವೆಂಬ ಪತ್ರಿಕೆ. ನಮ್ಮ ಭಾಷೆಯಲ್ಲಿ ಪ್ರಕಟವಾದ ಈ ರೀತಿಯ ಮೊತ್ತಮೊದಲ ಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಯದ್ದು.

ಇಪ್ಪತ್ತನೇ ಶತಮಾನದ ಪ್ರಾರಂಭದ ವೇಳೆಗೆ ಪಾಶ್ಚಿಮಾತ್ಯ ರಾಷ್ಟ್ರಗಳು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಬೆಳವಣಿಗೆಯನ್ನು ಸಾಧಿಸಿದ್ದವು. ಇಂತಹ ವೈಜ್ಞಾನಿಕ ಪ್ರಗತಿ ನಮ್ಮ ದೇಶದಲ್ಲೂ ಆಗಬೇಕು ಎನ್ನುವ ಅಭಿಪ್ರಾಯ ಅಲ್ಲಲ್ಲಿ ಕೇಳಸಿಗುತ್ತಿತ್ತು. ಮೈಸೂರಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ ಮನಸ್ಸಿನಲ್ಲೂ ಇದೇ ಭಾವನೆ ಇತ್ತು.

ಅವರ ಪ್ರಯತ್ನ ಹಾಗೂ ಪ್ರೋತ್ಸಾಹದ ಫಲವಾಗಿ ೧೯೧೭ರಲ್ಲಿ 'ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ' ಅಸ್ತಿತ್ವಕ್ಕೆ ಬಂತು. 'ವಿಜ್ಞಾನ' ಕನ್ನಡ ಪತ್ರಿಕೆಯನ್ನು ಹೊರಡಿಸಿದ್ದು ಈ ಸಮಿತಿಯದೇ ಸಾಧನೆ. ಈ ಪತ್ರಿಕೆಯ ಜವಾಬ್ದಾರಿ ತೆಗೆದುಕೊಂಡಿದ್ದವರು, ಸಂಪಾದಕರಾಗಿ ಕಾರ್ಯನಿರ್ವಹಿಸಿದವರು ಬೆಳ್ಳಾವೆ ವೆಂಕಟನಾರಣಪ್ಪನವರು ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು.


ಸಾಮಾನ್ಯರಿಗೂ ಗ್ರಾಹ್ಯವಾಗುವಂತೆ ಸುಲಭ ಶೈಲಿಯಲ್ಲಿ ವೈಜ್ಞಾನಿಕ ಬರಹಗಳನ್ನು ಪ್ರಕಟಿಸುವ ಉದ್ದೇಶ ಇಟ್ಟುಕೊಂಡಿದ್ದ ಈ ಪತ್ರಿಕೆ ಎರಡು ವರ್ಷಗಳ ಕಾಲ ಪ್ರಕಟವಾಗಿತ್ತು. ಈ ಅವಧಿಯಲ್ಲಿ ಪ್ರಕಟವಾದ ೨೪ ಸಂಚಿಕೆಗಳಲ್ಲಿ ಸುಮಾರು ೬೦ ಪ್ರಧಾನ ಲೇಖನಗಳಿದ್ದವು. ಅವುಗಳ ಜೊತೆಗೆ ನೂರಾರು ಸಣ್ಣ ಲೇಖನಗಳನ್ನೂ ಅನೇಕ ಚಿತ್ರಗಳನ್ನೂ ವಿಜ್ಞಾನ ಪತ್ರಿಕೆ ತನ್ನ ಓದುಗರಿಗೆ ತಲುಪಿಸಿತ್ತು.

ಸೂಕ್ತ ಆಕರಗಳನ್ನು ಹುಡುಕಿ ವಿಜ್ಞಾನ ವಿಷಯಗಳನ್ನು ಕಲೆಹಾಕುವುದೇ ಕಷ್ಟ ಎನ್ನುವ ಪರಿಸ್ಥಿತಿಯಿದ್ದ ಆ ಕಾಲದಲ್ಲೂ 'ವಿಜ್ಞಾನ' ಪತ್ರಿಕೆ ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸಿದ್ದು ವಿಶೇಷ. ಸಂಪಾದಕರು ಈ ಮಾಹಿತಿಯನ್ನು ಎಷ್ಟೆಲ್ಲ ಆಕರಗಳಿಂದ ಸಂಗ್ರಹಿಸುತ್ತಿದ್ದರು ಎನ್ನುವುದನ್ನು ಗಮನಿಸಿದರೆ 'ವಿಜ್ಞಾನ'ದ ಸಂಚಿಕೆಗಳನ್ನು ರೂಪಿಸುವಲ್ಲಿ ಅವರ ಆಸಕ್ತಿ ಹಾಗೂ ಶ್ರಮ ಎಷ್ಟು ಪ್ರಮಾಣದಲ್ಲಿತ್ತು ಎನ್ನುವುದು ನಮ್ಮ ಅರಿವಿಗೆ ಬರುತ್ತದೆ.

ವಿಜ್ಞಾನ ಜಗತ್ತಿನ ಆಗುಹೋಗು, ವಿಜ್ಞಾನಿಗಳ ಪರಿಚಯ, ಕುತೂಹಲಕರ ಪ್ರಶ್ನೆಗಳ ವಿಶ್ಲೇಷಣೆ, ಕೃಷಿ-ಆರೋಗ್ಯ ಕ್ಷೇತ್ರಗಳ ಮಾಹಿತಿ ಹೀಗೆ ಹಲವಾರು ಬಗೆಯ ಲೇಖನಗಳು ಈ ಪತ್ರಿಕೆಯಲ್ಲಿ ಬೆಳಕುಕಂಡಿದ್ದವು. 'ವಿವಿಧ ವಿಜ್ಞಾನ ವಿಷಯ ಸಂಗ್ರಹ' ಎಂಬ ಶೀರ್ಷಿಕೆಯಲ್ಲಿ ಅಂದು ನಡೆದಿದ್ದ ಸಂಶೋಧನೆಗಳ ಸಾರಾಂಶವೂ ಪ್ರಕಟವಾಗುತ್ತಿತ್ತು. ಸಾಧ್ಯವಾದ ಕಡೆಯಲ್ಲೆಲ್ಲ ಪೂರಕ ಚಿತ್ರಗಳೂ ಇದ್ದವು.

ಹೇಳುತ್ತಿದ್ದದ್ದು ವಿಜ್ಞಾನದ ವಿಷಯವೇ ಆದರೂ ಇಲ್ಲಿನ ಲೇಖನಗಳ ಶೈಲಿ ಬಹಳ ಸರಳವಾಗಿರುತ್ತಿತ್ತು. ವಿಜ್ಞಾನದ ಪರಿಕಲ್ಪನೆಗಳನ್ನು ಕತೆಯ ರೂಪದಲ್ಲಿ ಹೇಳುವ ಪ್ರಯೋಗವೂ ಇಲ್ಲಿ ನಡೆದಿತ್ತು. ಹೊಸ ಪರಿಕಲ್ಪನೆಗಳನ್ನು ಪರಿಚಯಿಸುವಾಗಲೂ ಅಷ್ಟೆ, ಸಾಮಾನ್ಯ ಬಳಕೆಯಲ್ಲಿರುವ ಹೆಸರುಗಳನ್ನೇ ಬಳಸುತ್ತಿದ್ದದ್ದು ವಿಶೇಷ: ಬಿಸಿಗಾಳಿಯ ಬಲೂನು ಆಕಾಶಬುಟ್ಟಿಯಾದರೆ ಥರ್ಮಾಮೀಟರು ಇಲ್ಲಿ ಶಾಖಮಾಪಿನಿ ಎಂದು ಕರೆಸಿಕೊಂಡಿತ್ತು!


ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿಯ ಸಂವಹನ ಪತ್ರಿಕೆಗೆ ಮಾತ್ರವೇ ಸೀಮಿತವಾಗಿರಲಿಲ್ಲ ಎನ್ನುವುದು ಗಮನಾರ್ಹ. ಸಮಿತಿಯ ವತಿಯಿಂದ ಆಗಿಂದಾಗ್ಗೆ ಸಾರ್ವಜನಿಕರಿಗಾಗಿ ವಿಜ್ಞಾನ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತಿತ್ತು ಎನ್ನುವ ಅಂಶ 'ವಿಜ್ಞಾನ' ಪತ್ರಿಕೆಯಲ್ಲೇ ಹಲವು ಬಾರಿ ಪ್ರಸ್ತಾಪವಾಗಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಉಪನ್ಯಾಸದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರೂ ಭಾಗವಹಿಸಿದ್ದ ವಿಷಯ ಕೂಡ ಪತ್ರಿಕಾ ವರದಿಯಲ್ಲಿ ದಾಖಲಾಗಿದೆ.

ತನ್ನ ಕಾಲಮಾನಕ್ಕಿಂತ ಮುಂದಿದ್ದ ಅನೇಕ ಸಾಧನೆಗಳನ್ನು ಮಾಡಿದರೂ 'ವಿಜ್ಞಾನ'ಕ್ಕೆ ಸೂಕ್ತ ಬೆಂಬಲ ದೊರಕದೇ ಹೋದದ್ದು ವಿಷಾದನೀಯ. ತಪ್ಪುಗಳಿಲ್ಲದ ಉತ್ತಮ ಗುಣಮಟ್ಟದ ಮುದ್ರಣ, ಕಾಲಕ್ಕೆ ಸರಿಯಾದ ಪ್ರಕಟಣೆ-ವಿತರಣೆಗಳನ್ನು ಸಂಪಾದಕರು ಸಾಧ್ಯವಾಗಿಸಿದರೂ ಚಂದಾದಾರರ ಬೆಂಬಲವಿಲ್ಲದ ಪತ್ರಿಕೆ ಎರಡನೇ ವರ್ಷದ ಕೊನೆಯ ವೇಳೆಗೆ ನಿಲ್ಲಲೇಬೇಕಾದ ಪರಿಸ್ಥಿತಿ ರೂಪುಗೊಂಡಿತ್ತು. ಎರಡೇ ವರ್ಷದಲ್ಲಿ ನಿಂತುಹೋದರೇನಂತೆ, ವಿಜ್ಞಾನ ಸಂವಹನಕಾರರಿಗೆ 'ವಿಜ್ಞಾನ' ಇಂದಿಗೂ ಸ್ಫೂರ್ತಿಯಾಗಿ ನಿಂತಿದೆ!

ನವೆಂಬರ್ ೧೦, ೨೦೧೮ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
badge