ಟಿ. ಜಿ. ಶ್ರೀನಿಧಿ
ತನ್ನಲ್ಲಿರುವ ಮಾಹಿತಿಯನ್ನು ಒಂದೇಬಾರಿಗೆ ಅನೇಕರಿಗೆ ತಲುಪಿಸಬೇಕೆನ್ನುವ ಮಾನವನ ಅಪೇಕ್ಷೆ ಬಹಳ ಹಿಂದಿನದು. ಹಿಂದಿನಕಾಲದಲ್ಲಿ ಸಂದೇಶಗಳನ್ನು ಡಂಗುರ ಸಾರಿಸುತ್ತಿದ್ದರಂತಲ್ಲ, ಅದರ ಹಿನ್ನೆಲೆಯಲ್ಲಿದ್ದದ್ದು ಇದೇ ಅಪೇಕ್ಷೆ. ಇಂದಿನ ವೆಬ್‌ಸೈಟು-ಸೋಶಿಯಲ್ ಮೀಡಿಯಾಗಳ ಉದ್ದೇಶವೂ ಬಹಳ ಭಿನ್ನವೇನಲ್ಲ.
ಹೀಗೆ ಮಾಹಿತಿ ಪ್ರಸರಣ ಬೆಳೆದುಬಂದ ಹಾದಿಯಲ್ಲಿ ಕೆಲವು ಮಹತ್ವದ ಮೈಲಿಗಲ್ಲುಗಳನ್ನು ನಾವು ನೋಡಬಹುದು. ಪ್ರಸರಣದ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿದ, ದೊಡ್ಡ ಸಮುದಾಯಗಳನ್ನು ತಲುಪಲು ಸಾಧ್ಯವಾಗಿಸಿದ ರೇಡಿಯೋ ಜಾಲದ ಬೆಳವಣಿಗೆ ಇಂತಹ ಮೈಲಿಗಲ್ಲುಗಳಿಗೊಂದು ಉದಾಹರಣೆ.
ಇಂಥದ್ದೇ ಇನ್ನೊಂದು ಮೈಲಿಗಲ್ಲು ಟೀವಿ ಜಾಲಗಳ ಹುಟ್ಟು.
ಬಹುಮಟ್ಟಿಗೆ ಪಠ್ಯ ಹಾಗೂ ಧ್ವನಿಗಷ್ಟೇ ಸೀಮಿತವಾಗಿದ್ದ ಸಂವಹನಕ್ಕೆ ಹೊಸ ಆಯಾಮ ನೀಡಿದ್ದು, ಜಗತ್ತಿನ ಆಗುಹೋಗುಗಳನ್ನೆಲ್ಲ ವೀಕ್ಷಕರ ಮನೆಯೊಳಕ್ಕೇ ತಂದುಕೊಟ್ಟಿದ್ದು ಈ ಮಾಧ್ಯಮದ ಹೆಚ್ಚುಗಾರಿಕೆ.
ಮನರಂಜನೆ ನೀಡುವುದರಲ್ಲಷ್ಟೇ ಅಲ್ಲ, ವಿಶ್ವದ ಸಂಘರ್ಷಣೆಗಳು ಹಾಗೂ ಸುರಕ್ಷತೆಯ ಸವಾಲುಗಳ ಕುರಿತು ಗಮನಸೆಳೆಯುವಲ್ಲಿ - ಪ್ರಮುಖ ಸಮಸ್ಯೆಗಳ ಮೇಲೆ ಬೆಳಕುಚೆಲ್ಲುವಲ್ಲಿ ಕೂಡ ಟೀವಿ ಮಾಧ್ಯಮದ ಪ್ರಭಾವ ಗಣನೀಯವಾದದ್ದು. ಇದನ್ನು ಗುರುತಿಸಲೆಂದೇ ಇಂದು (ನ. ೨೧) ವಿಶ್ವಸಂಸ್ಥೆ 'ವಿಶ್ವ ಟೀವಿ ದಿನ'ವನ್ನು ಆಚರಿಸುತ್ತಿದೆ.
ಈ ಸಂದರ್ಭಕ್ಕಾಗಿ ಟೀವಿಯ ಠೀವಿಯ ಪಕ್ಷಿನೋಟ ಇಲ್ಲಿದೆ.
ಮನೆಮನ ಮುಟ್ಟಿದ ಟೀವಿ ಟೀವಿಯ ಉಗಮ ಹಾಗೂ ವಿಕಾಸ, ೧೯-೨೦ನೇ ಶತಮಾನಗಳ ಇತಿಹಾಸದ ಪ್ರಮುಖ ಘಟನೆಗಳಲ್ಲೊಂದು. ಇದರ ಹಿನ್ನೆಲೆಯಲ್ಲಿ ವಿಶ್ವದೆಲ್ಲೆಡೆ ಸಕ್ರಿಯರಾಗಿದ್ದ ಅನೇಕ ವಿಜ್ಞಾನಿಗಳ ಪರಿಶ್ರಮ ಇತ್ತು. ಚಲಿಸುವ ಚಿತ್ರಗಳ ಪ್ರಸರಣವನ್ನು ಸಾಧ್ಯವಾಗಿಸುವುದು ಈ ಎಲ್ಲರ ಉದ್ದೇಶವೂ ಆಗಿತ್ತು.
ಇಂತಹ ಅನೇಕ ಪ್ರಯತ್ನಗಳ ಫಲವಾಗಿ ೧೯೨೦ರ ದಶಕದ ವೇಳೆಗೆ ಟೀವಿ ತಂತ್ರಜ್ಞಾನ ಪ್ರಾಯೋಗಿಕ ಯಶಸ್ಸು ಪಡೆಯಿತು. ಮೊತ್ತಮೊದಲ ಟೀವಿ ಪ್ರಸಾರ ಕೇಂದ್ರ ಅಮೆರಿಕಾದಲ್ಲಿ ೧೯೨೮ನೇ ಇಸವಿಯಲ್ಲಿ ಪ್ರಾರಂಭವಾಯಿತು. ಮುಂದೆ ಇಂತಹ ಕೇಂದ್ರಗಳು ವಿಶ್ವದ ಇನ್ನಿತರ ದೇಶಗಳಲ್ಲೂ ಪ್ರಾರಂಭವಾದವು.
ಭಾರತದಲ್ಲಿ ಟೀವಿ ಪ್ರಸಾರ ಪ್ರಾಯೋಗಿಕವಾಗಿ ಪ್ರಾರಂಭವಾದದ್ದು ೧೯೫೯ರಲ್ಲಿ. ಮೊದಲು ದೆಹಲಿಯಲ್ಲಿ, ನಂತರ ಮುಂಬಯಿ-ಅಮೃತಸರಗಳಲ್ಲಿ ಪ್ರಾರಂಭವಾದ ಟೀವಿ ಪ್ರಸಾರ ೧೯೭೫ರ ವೇಳೆಗೆ ಏಳು ನಗರಗಳನ್ನು ತಲುಪಿತ್ತು. ಎಂಬತ್ತರ ದಶಕದಲ್ಲಿ ರಾಷ್ಟ್ರೀಯ ಪ್ರಸಾರ ಪ್ರಾರಂಭವಾಯಿತು, ಬಣ್ಣದ ಟೀವಿಯೂ ಬಂತು.
ಭಾರತೀಯ ಟೀವಿ ಉದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಸಾಕ್ಷಿಯಾದದ್ದು ತೊಂಬತ್ತರ ದಶಕ. ಖಾಸಗಿ ಹಾಗೂ ವಿದೇಶಿ ಸಂಸ್ಥೆಗಳೂ ಟೀವಿ ಪ್ರಸಾರ ಪ್ರಾರಂಭಿಸಿದ್ದು ಆ ಅವಧಿಯಲ್ಲಿ. ಅಲ್ಲಿಂದ ಮುಂದಕ್ಕೆ ನಮ್ಮನ್ನು ಗಾಢವಾಗಿ ಪ್ರಭಾವಿಸುತ್ತ ಬಂದಿರುವ ಟೀವಿ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ!
ಕಪ್ಪುಬಿಳುಪಿನಿಂದ ಕರ್ವ್‌ಡ್ ಎಲ್‌ಇಡಿವರೆಗೆ ಟೀವಿಯ ಪ್ರಸಾರ ಪ್ರಾರಂಭವಾದದ್ದು ಕಪ್ಪು-ಬಿಳುಪಿನಿಂದ. ಕೆಲವರ್ಷಗಳ ನಂತರ, ಟೀವಿ ಕಾರ್ಯಕ್ರಮಗಳು ಬಹುವರ್ಣದಲ್ಲೂ ಮೂಡಿಬಂದಾಗ, ಅವನ್ನು ನಮ್ಮ ಮನೆಗೆ ತಲುಪಿಸಲು ಬಣ್ಣದ ಟೀವಿಗಳೂ ಬಂದವು. ಈ ಬದಲಾವಣೆ ಆದಾಗ ಟೀವಿಯ ಬಾಹ್ಯ ಸ್ವರೂಪದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗಿರಲಿಲ್ಲ.
ಬಹಳ ವರ್ಷಗಳ ನಂತರ ಟೀವಿ ವಿನ್ಯಾಸದಲ್ಲಿ ಹೊಸತನಕ್ಕೆ ಕಾರಣವಾದದ್ದು ಹೊರಗೆ ಉಬ್ಬಿದಂತಿರುತ್ತಿದ್ದ ಪರದೆಗಳ ಜಾಗಕ್ಕೆ ಬಂದ ಚಪ್ಪಟೆ ಪರದೆ (ಫ್ಲಾಟ್ ಸ್ಕ್ರೀನ್). ಮುಂದೆ ಪ್ರದರ್ಶನ ತಂತ್ರಜ್ಞಾನವೂ ಬದಲಾದಂತೆ ಟೀವಿಯ ಗಾತ್ರವೂ ಗಣನೀಯವಾಗಿ ಕಡಿಮೆಯಾಯಿತು.
ಕ್ಯಾಥೋಡ್ ರೇ ಟ್ಯೂಬ್ (ಸಿಆರ್‌ಟಿ) ಜಾಗದಲ್ಲಿ ಪ್ಲಾಸ್ಮಾ-ಎಲ್‌ಸಿಡಿ-ಎಲ್‌ಇಡಿ ತಂತ್ರಜ್ಞಾನಗಳು ಬಂದಾಗ ಟೀವಿಯಲ್ಲಿ ಕಾಣುವ ಚಿತ್ರಗಳ ಗುಣಮಟ್ಟ ಸುಧಾರಿಸಿತು. ಇದರಿಂದಾಗಿ ಹೆಚ್ಚು ಸ್ಪಷ್ಟವಾದ, ತಾಂತ್ರಿಕವಾಗಿ ಉನ್ನತ ಗುಣಮಟ್ಟದ ಚಿತ್ರಗಳ ಪ್ರಸರಣಕ್ಕೂ ಒತ್ತು ಸಿಕ್ಕಿತು. ಎಚ್‌ಡಿ, ೪ಕೆ ತಂತ್ರಜ್ಞಾನಗಳೆಲ್ಲ ಬೆಳೆದದ್ದು ಹೀಗೆ.
ಈಗಂತೂ ನೈಜ ದೃಶ್ಯಗಳಿಗೆ ಅತ್ಯಂತ ಸಮೀಪವಾದ ಗುಣಮಟ್ಟದಲ್ಲಿ ಚಿತ್ರಗಳನ್ನು ಮೂಡಿಸಲು ಟೀವಿ ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ. ಚಪ್ಪಟೆ ಪರದೆಯ ಬದಲು ಒಳಗೆ ಬಾಗಿದಂತಹ (ಕರ್ವ್‌ಡ್) ಪರದೆಗಳನ್ನು ಪರಿಚಯಿಸುವ ಪ್ರಯೋಗ ಇದೇ ಪ್ರಯತ್ನದ ಫಲಿತಾಂಶ. ಟೀವಿ ನಮ್ಮನ್ನು ಆವರಿಸಿಕೊಳ್ಳುತ್ತಿರುವ ಬಗೆಯನ್ನು ಇದು ಸೂಚಿಸುತ್ತಿದೆ ಎಂದರೂ ಸರಿಯೇ!
ತಂತ್ರಜ್ಞಾನ ತಂದ ಬದಲಾವಣೆ ಹಿಂದಿನ ಕಾಲದಲ್ಲಿ, ಇದ್ದ ಒಂದೆರಡೇ ಚಾನೆಲ್ಲುಗಳನ್ನು ಆಂಟೆನಾ ಸಹಾಯದಿಂದ ನೋಡುತ್ತಿದ್ದಾಗ, ಬಳಕೆಯಾಗುತ್ತಿದ್ದದ್ದು 'ಟೆರೆಸ್ಟ್ರಿಯಲ್ ಟೆಲಿವಿಶನ್' ತಂತ್ರಜ್ಞಾನ. ಆನಂತರದಲ್ಲಿ, ಟೀವಿ ವಾಹಿನಿಗಳ ಸಂಖ್ಯೆ ಹೆಚ್ಚಾದ ಸಮಯದಲ್ಲಿ, ಕೇಬಲ್ ಟೀವಿ ಹಾಗೂ ಡಿಟಿಎಚ್‌ಗಳ ಮೂಲಕ ಉಪಗ್ರಹಗಳ ಬಳಕೆ ಪ್ರಾರಂಭವಾಯಿತು.
ಇದರ ಜೊತೆಗೇ ಅಭಿವೃದ್ಧಿಯಾದ ತಂತ್ರಜ್ಞಾನದಿಂದಾಗಿ ಬೇಕಾದ ವಾಹಿನಿಗಳಿಗೆ ಮಾತ್ರ ಚಂದಾದಾರರಾಗುವುದು, ಕಾರ್ಯಕ್ರಮಗಳ ವೇಳಾಪಟ್ಟಿ ವೀಕ್ಷಿಸುವುದು, ಬೇಕಾದ್ದನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವುದು ಮುಂತಾದ ಕೆಲ ಸೌಲಭ್ಯಗಳು ವೀಕ್ಷಕರಿಗೆ ದೊರೆತವು. ಡಿಜಿಟಲ್ ಪ್ರಸಾರದಿಂದಾಗಿ ಪ್ರಸರಣದ ಗುಣಮಟ್ಟವೂ ಹೆಚ್ಚಿತು.
ಟೀವಿಗೆ ಅಂತರಜಾಲ ಸಂಪರ್ಕ ದೊರತು 'ಸ್ಮಾರ್ಟ್ ಟೀವಿ'ಗಳ ಸೃಷ್ಟಿಯಾದದ್ದು ಇನ್ನೊಂದು ಮಹತ್ವದ ಬದಲಾವಣೆ. ಕಂಪ್ಯೂಟರು, ಮೊಬೈಲುಗಳ ಜೊತೆಗೆ ಟೀವಿ ಮೂಲಕವೂ ಅಂತರಜಾಲದ ಅನುಕೂಲಗಳನ್ನು ಪಡೆದುಕೊಳ್ಳುವುದು ಇದರಿಂದಾಗಿ ಸಾಧ್ಯವಾಯಿತು.
ಕಂಪ್ಯೂಟರು-ಮೊಬೈಲುಗಳಲ್ಲಿದ್ದ ಸೌಲಭ್ಯ ಟೀವಿಯಲ್ಲೂ ದೊರೆತದ್ದೇನೋ ಸರಿ. ಕಾರ್ಯಕ್ರಮಗಳ ವೀಕ್ಷಣೆಗೆ ದಿವಾನಖಾನೆಯ ಟೀವಿಯೇ ಬೇಕು ಎನ್ನುವ ಪರಿಸ್ಥಿತಿಯೂ ಅಂತರಜಾಲದಿಂದಾಗಿ ಇದೀಗ ಬದಲಾಗುತ್ತಿದೆ. ಟೀವಿ ಕಾರ್ಯಕ್ರಮಗಳ ನೇರಪ್ರಸಾರವನ್ನು ನಾವೀಗ ಮೊಬೈಲಿನಲ್ಲೇ ನೋಡಬಹುದಲ್ಲ!
ಮುಂದಿನ ಹಾದಿ ಮಾಹಿತಿ ತಂತ್ರಜ್ಞಾನ, ಅದರಲ್ಲೂ ಮುಖ್ಯವಾಗಿ ಅಂತರಜಾಲದ ಬೆಳವಣಿಗೆಯಿಂದಾಗಿ ಟೀವಿಯ ಸ್ವರೂಪ ಗಮನಾರ್ಹವಾಗಿ ಬದಲಾಗುತ್ತಿದೆ. ನಮ್ಮ ಕಾರ್ಯಕ್ರಮಗಳನ್ನು ನಾವೇ ರೂಪಿಸಿ ಪ್ರಕಟಿಸುವ ಅವಕಾಶವನ್ನು ಸಮಾಜಜಾಲಗಳು ಇಂದು ಎಲ್ಲರಿಗೂ ನೀಡಿವೆ.
ಒಂದು ಉತ್ತಮ ಕ್ಯಾಮೆರಾ, ವೀಡಿಯೋ ಎಡಿಟಿಂಗ್ ಕೌಶಲ ಹಾಗೂ ಅಂತರಜಾಲ ಸಂಪರ್ಕ ಇದ್ದರೆ ಸಾಕು, ನಾವು ನಮ್ಮದೇ ಕಾರ್ಯಕ್ರಮಗಳನ್ನು ಯೂಟ್ಯೂಬ್ - ಫೇಸ್‌ಬುಕ್ ಮುಂತಾದೆಡೆಗಳಲ್ಲಿ ಪ್ರಸಾರ ಮಾಡಬಹುದು; ಲಕ್ಷಾಂತರ ಜನರನ್ನು ತಲುಪಬಹುದು.
ಅಷ್ಟೇ ಅಲ್ಲ, ಓವರ್ ದ ಟಾಪ್ (ಓಟಿಟಿ) ಸ್ಟ್ರೀಮಿಂಗ್ ತಂತ್ರಜ್ಞಾನ ಬಳಸಿ ಅಂತರಜಾಲದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಕಡಿಮೆ ಖರ್ಚಿನಲ್ಲೇ ಹೆಚ್ಚು ವೀಕ್ಷಕರನ್ನು ತಲುಪುವುದು ಕೂಡ ಸಾಧ್ಯವಾಗಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮೊದಲಾದ ಇಂತಹ ವ್ಯವಸ್ಥೆಗಳು ಹೊಸ ಅವಕಾಶಗಳನ್ನು ಸೃಷ್ಟಿಸಿರುವುದಷ್ಟೇ ಅಲ್ಲ, ಸಾಂಪ್ರದಾಯಿಕ ಟೀವಿಗೆ ಪ್ರತಿಸ್ಪರ್ಧಿಯಾಗಿಯೂ ಬೆಳೆಯುತ್ತಿವೆ.
ಟೀವಿಯನ್ನು ಒಂದು ಸಾಧನವಾಗಿ ಬಳಸುತ್ತೇವೆಯೋ ಇಲ್ಲವೋ, ಆದರೆ ಟೀವಿ ಮಾಧ್ಯಮ ಇಂದು ಹಿಂದೆಂದಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದೆ ಹಾಗೂ ಹೆಚ್ಚುಹೆಚ್ಚು ವೀಕ್ಷಕರನ್ನು ತಲುಪುತ್ತಿದೆ. ಅದರ ಸಾಧ್ಯತೆಗಳನ್ನು ಸಮರ್ಪಕವಾಗಿ ಬಳಸುವ, ಉತ್ತಮ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿ ಈ ಮಾಧ್ಯಮದ ಭವಿಷ್ಯವನ್ನು ಪರಿಣಾಮಕಾರಿಯಾಗಿ ರೂಪಿಸುವ ಮಹತ್ವದ ಜವಾಬ್ದಾರಿಯೂ ನಮ್ಮ ಮೇಲಿದೆ.
ನವೆಂಬರ್ ೨೧, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
1 ಕಾಮೆಂಟ್:
ಮಾಹಿತಿಪೂರ್ಣ ಲೇಖನ. ಅಭಿನಂದನೆಗಳು.
ಕಾಮೆಂಟ್ ಪೋಸ್ಟ್ ಮಾಡಿ