ಶುಕ್ರವಾರ, ನವೆಂಬರ್ 30, 2018

ವೀಕೆಂಡ್ ಇಜ್ಞಾನ: ಏನಿದು ಬೊಕೆ ಎಫೆಕ್ಟ್?

ಟಿ. ಜಿ. ಶ್ರೀನಿಧಿ


ಸಾಂಪ್ರದಾಯಿಕ ಕ್ಯಾಮೆರಾಗಳ ಸ್ಥಾನದಲ್ಲಿ ಮೊಬೈಲ್ ಫೋನ್ ಬಂದು ಕುಳಿತಿರುವುದು ಇದೀಗ ಹಳೆಯ ವಿಷಯ. ಆಪ್ತರೊಡನೆ ಸೆಲ್ಫಿ ತೆಗೆದುಕೊಳ್ಳುವುದಷ್ಟೇ ಅಲ್ಲ, ಪ್ರವಾಸ-ಸಭೆ-ಸಮಾರಂಭಗಳ ನೆನಪುಗಳನ್ನು ಸೆರೆಹಿಡಿಯುವುದೂ ಇದೀಗ ಮೊಬೈಲಿನದೇ ಕೆಲಸ.

ಹೀಗಿರುವಾಗ, ಸಾಂಪ್ರದಾಯಿಕ ಕ್ಯಾಮೆರಾಗಳಲ್ಲಿರುವ ಸವಲತ್ತುಗಳು ಮೊಬೈಲಿನಲ್ಲೂ ಸಿಗಬೇಕು ಎನ್ನಿಸುವುದು ಸಹಜವೇ. ಮೊಬೈಲ್ ಕ್ಯಾಮೆರಾಗಳಲ್ಲಿ ಇಂತಹ ಸವಲತ್ತುಗಳನ್ನು ನೀಡಲು ಮೊಬೈಲ್ ತಯಾರಕರೂ ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ.

ಹೊಸ ಮೊಬೈಲುಗಳ ಜಾಹೀರಾತಿನಲ್ಲಿ ಕ್ಯಾಮೆರಾ ವೈಶಿಷ್ಟ್ಯಗಳ ವರ್ಣನೆ ಹೆಚ್ಚುಹೆಚ್ಚಾಗಿ ಕಾಣಿಸುತ್ತಿರುವುದರ ಕಾರಣವೂ ಇದೇ. ಹೆಚ್ಚು ಸುದ್ದಿಯಲ್ಲಿರುವ ಇಂತಹ ವೈಶಿಷ್ಟ್ಯಗಳ ಪೈಕಿ ಚಿತ್ರಗಳಲ್ಲಿ 'ಬೊಕೆ ಎಫೆಕ್ಟ್' ಮೂಡಿಸುವ ಸಾಮರ್ಥ್ಯವೂ ಒಂದು.

ಹೂಗುಚ್ಛಗಳನ್ನು ಬೊಕೆ (Bouquet) ಎಂದು ಗುರುತಿಸುವುದು ನಮ್ಮಲ್ಲಿ ಅನೇಕರಿಗೆ ಗೊತ್ತು. ಆದರೆ ಛಾಯಾಚಿತ್ರಗಳ ಮಟ್ಟಿಗೆ ಬೊಕೆಯ ಸ್ಪೆಲ್ಲಿಂಗ್ ಹಾಗೂ ಅರ್ಥ ಎರಡೂ ಬೇರೆ. 'Bokeh' ಎಂದು ಬರೆಯಲಾಗುವ ಈ ಹೆಸರಿನ ಮೂಲ ಜಪಾನೀ ಭಾಷೆಯ 'boke' ಎಂಬ ಶಬ್ದ. ಆ ಭಾಷೆಯಲ್ಲಿ ಹಾಗೆಂದರೆ 'ಮಬ್ಬು' ಅಥವಾ 'ಮಸುಕು' ಎಂದು ಅರ್ಥ. ಛಾಯಾಗ್ರಹಣದ ಲೋಕದಲ್ಲೂ ಅಷ್ಟೇ: ಚಿತ್ರದ ಕೇಂದ್ರ ವಿಷಯ ಮಾತ್ರ ಸ್ಪಷ್ಟವಾಗಿ ಮೂಡಿ ಅದರ ಹಿನ್ನೆಲೆಯಷ್ಟೂ ಮಸುಕಾಗಿ ಕಾಣುವುದನ್ನೇ 'ಬೊಕೆ ಎಫೆಕ್ಟ್' ಎಂದು ಗುರುತಿಸಲಾಗುತ್ತದೆ. 

ಲೆನ್ಸಿನ ಮೂಲಕ ಹಾದುಬಂದ ಬೆಳಕು ಕ್ಯಾಮೆರಾದ ಸೆನ್ಸರ್ ಮೇಲೆ ಬಿದ್ದಾಗ ಛಾಯಾಚಿತ್ರ ಅದರಲ್ಲಿ ಸೆರೆಯಾಗುತ್ತದೆ ಎನ್ನುವುದು ಡಿಜಿಟಲ್ ಛಾಯಾಗ್ರಹಣದ ಮೊದಲ ಪಾಠ. ಕಿಟಕಿಯನ್ನು ಕೊಂಚ ಅಥವಾ ಪೂರ್ತಿ ತೆರೆಯುವ ಮೂಲಕ ಕೋಣೆಯೊಳಗೆ ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸಬಹುದಲ್ಲ, ಅಂಥದ್ದೇ ವ್ಯವಸ್ಥೆ ಕ್ಯಾಮೆರಾಗಳಲ್ಲೂ ಇರುತ್ತದೆ. ಕ್ಯಾಮೆರಾದ ಕಿಟಕಿ ಹೆಚ್ಚು ತೆರೆದರೆ ಹೆಚ್ಚು ಬೆಳಕು ಸೆನ್ಸರಿನ ಮೇಲೆ ಬೀಳುತ್ತದೆ, ಕಿಟಕಿ ಸಣ್ಣದಾದಷ್ಟೂ ಸೆನ್ಸರಿನ ಮೇಲೆ ಬೀಳುವ ಬೆಳಕು ಕಡಿಮೆಯಾಗುತ್ತ ಹೋಗುತ್ತದೆ.

ಅಪರ್ಚರ್ ಎಂದು ಗುರುತಿಸುವುದು ಈ ಕಿಟಕಿಯನ್ನೇ. ನಮ್ಮ ಮನೆಯ ಕಿಟಕಿಗಳಿಗೆ ಎರಡೋ ನಾಲ್ಕೋ ಬಾಗಿಲುಗಳಿದ್ದಂತೆ ಈ ಕಿಟಕಿಗೆ ಒಂದರ ಮೇಲೊಂದು ಹೊಂದಿಕೊಂಡಂತಿರುವ, ತೆರೆದಾಗ ತಮ್ಮ ನಡುವೆ ಬೆಳಕನ್ನು ಹಾದುಹೋಗಲು ಬಿಡುವ ಹಲವು ಬಾಗಿಲುಗಳಿರುತ್ತವೆ. ಈ ಬಾಗಿಲುಗಳನ್ನು ಬ್ಲೇಡ್‌ಗಳೆಂದು ಕರೆಯುತ್ತಾರೆ. 

ಮೊಬೈಲ್ ಕ್ಯಾಮೆರಾ‌ಗಳನ್ನು ವರ್ಣಿಸುವಾಗ 'f/2.0 ಅಪರ್ಚರ್' ಅಥವಾ 'f2.0 ಅಪರ್ಚರ್' ಎಂದೆಲ್ಲ ಹೇಳುತ್ತಾರಲ್ಲ, ಅಲ್ಲಿ ಹೇಳುವ ಸಂಖ್ಯೆ ಸಣ್ಣದಾದಷ್ಟೂ ಅಪರ್ಚರ್ ದೊಡ್ಡದಿರುತ್ತದೆ. ಅಂದರೆ, ಕ್ಯಾಮೆರಾದ ಕಿಟಕಿ ಹೆಚ್ಚು ದೊಡ್ಡದಾಗಿ ತೆರೆದುಕೊಳ್ಳುತ್ತದೆ. ಉದಾಹರಣೆಗೆ, f/2.0ನಲ್ಲಿ ಕ್ಯಾಮೆರಾ ಪ್ರವೇಶಿಸುವ ಬೆಳಕಿನ ಪ್ರಮಾಣ f/22ನಲ್ಲಿ ಪ್ರವೇಶಿಸುವುದಕ್ಕಿಂತ ಹೆಚ್ಚು.

ಅಂತಿಮವಾಗಿ ಸೆರೆಯಾಗುವ ಛಾಯಾಚಿತ್ರದ ಅನೇಕ ಲಕ್ಷಣಗಳ ಮೇಲೆ ಅದರ ಅಪರ್ಚರ್‌ನ ಪ್ರಭಾವ ಇರುತ್ತದೆ. ಕ್ಯಾಮೆರಾ ಮುಂದಿನ ದೃಶ್ಯದ ಎಷ್ಟು ಭಾಗ ಸ್ಪಷ್ಟವಾಗಿ ಮೂಡುತ್ತದೆ (ಫೋಕಸ್ ಆಗಿರುತ್ತದೆ) ಎನ್ನುವುದು ಇದಕ್ಕೊಂದು ಉದಾಹರಣೆ.


ಮೈಸೂರು ದಸರಾ ದೀಪಗಳ ಮುಂದೆ ನಿಂತಿರುವ ನಿಮ್ಮ ಮಿತ್ರರ ಚಿತ್ರ ತೆಗೆಯಲು ಹೊರಟಿದ್ದೀರಿ ಎಂದುಕೊಳ್ಳಿ. ನಿಮ್ಮ ಕ್ಯಾಮೆರಾದ ಅಪರ್ಚರ್ ದೊಡ್ಡದಾಗಿದ್ದರೆ (ಕಿಟಕಿ ಹೆಚ್ಚು ತೆರೆದಿದ್ದರೆ) ಫೋಟೋದಲ್ಲಿ ನಿಮ್ಮ ಮಿತ್ರರ ಚಿತ್ರ ಮಾತ್ರ ಸ್ಪಷ್ಟವಾಗಿ ಕಂಡು ದೀಪಗಳು ಅಸ್ಪಷ್ಟವಾಗಿ ಮೂಡುತ್ತವೆ. ಅಸ್ಪಷ್ಟವಾಗಿ ಮೂಡಿದ ಈ ಭಾಗದಲ್ಲಿ ಸಮಾನ ವಿನ್ಯಾಸದ (ಉದಾ: ವೃತ್ತ, ಷಟ್ಕೋನ ಇತ್ಯಾದಿ) ಆಕಾರಗಳು ಕಾಣಿಸಿದರೆ ಅದೇ 'ಬೊಕೆ ಎಫೆಕ್ಟ್' ಎಂದು ಕರೆಸಿಕೊಳ್ಳುತ್ತದೆ. ಬೆಳಕನ್ನು ಕ್ಯಾಮೆರಾದೊಳಕ್ಕೆ ಬಿಡುವ ಬ್ಲೇಡುಗಳ ಸಂಖ್ಯೆ ಹಾಗೂ ಆಕಾರ ಬೊಕೆ ಎಫೆಕ್ಟಿನಲ್ಲಿ ಯಾವ ವಿನ್ಯಾಸ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ತೀರ್ಮಾನಿಸುತ್ತದೆ.

ಸಾಂಪ್ರದಾಯಿಕ ಕ್ಯಾಮೆರಾಗಳಲ್ಲೇನೋ ಅಪರ್ಚರ್ ಬದಲಾವಣೆ, ಲೆನ್ಸ್ ಹೊಂದಾಣಿಕೆಗಳನ್ನೆಲ್ಲ ಮಾಡಿಕೊಳ್ಳಬಹುದು. ಆದರೆ ಕ್ಯಾಮೆರಾದಲ್ಲಿ ಸಾಧ್ಯವಾಗುವುದೆಲ್ಲ ಮೊಬೈಲಿನ ಪುಟ್ಟ ಕ್ಯಾಮೆರಾದಲ್ಲೂ ಸಾಧ್ಯವಾಗಬೇಕೆಂದರೆ ಕಷ್ಟ. ಹೀಗಾಗಿಯೇ ಮೊಬೈಲ್ ಕ್ಯಾಮೆರಾ ಚಿತ್ರಗಳ ಗುಣಮಟ್ಟವನ್ನು ಉತ್ತಮಪಡಿಸಲು ಹಲವು ವಿನೂತನ ಉಪಾಯಗಳನ್ನು ಕಂಡುಕೊಳ್ಳಲಾಗಿದೆ.

ಡ್ಯುಯಲ್ ಕ್ಯಾಮೆರಾ ಬಳಕೆ ಇಂತಹ ಉಪಾಯಗಳಲ್ಲೊಂದು. ಎರಡು ಲೆನ್ಸುಗಳನ್ನು ಬಳಸುವ ಕ್ಯಾಮೆರಾಗಳಲ್ಲಿ ಮೊದಲ ಲೆನ್ಸು ಚಿತ್ರ ಸೆರೆಹಿಡಿದರೆ ಎರಡನೆಯ ಲೆನ್ಸು ಆ ಚಿತ್ರದ ಕುರಿತು ಹೆಚ್ಚಿನ ವಿವರಗಳನ್ನು (ಮುಖ್ಯ ವಿಷಯ ಕ್ಯಾಮೆರಾದಿಂದ ಎಷ್ಟು ದೂರದಲ್ಲಿದೆ, ಹಿನ್ನೆಲೆಯಲ್ಲಿ ಏನಿದೆ ಇತ್ಯಾದಿ) ಸಂಗ್ರಹಿಸುತ್ತದೆ. ಎರಡೂ ಲೆನ್ಸುಗಳಿಂದ ದೊರೆತ ಮಾಹಿತಿಯನ್ನು ಜೋಡಿಸಿ ಸಂಸ್ಕರಿಸುವ ಕ್ಯಾಮೆರಾ ತಂತ್ರಾಂಶ ಹಿನ್ನೆಲೆಯನ್ನು ಮಾತ್ರ ಮಬ್ಬುಗೊಳಿಸಿ ಬೊಕೆ ಎಫೆಕ್ಟ್ ಕಾಣುವಂತೆ ಮಾಡುತ್ತದೆ. ಅಂದರೆ, ಕ್ಯಾಮೆರಾದಲ್ಲಿ ಚಿತ್ರದ ಜೊತೆಯಲ್ಲೇ ಸೃಷ್ಟಿಯಾಗುವ ಬೊಕೆ ಎಫೆಕ್ಟನ್ನು ಇಲ್ಲಿ ತಂತ್ರಾಂಶದ ಸಹಾಯದಿಂದ - ಫೋಟೋ ಸೆರೆಹಿಡಿದ ನಂತರದಲ್ಲಿ - ಸೇರಿಸಲಾಗುತ್ತದೆ.

ಎರಡನೇ ಲೆನ್ಸಿನ ಸೌಲಭ್ಯವಿಲ್ಲದ ಮೊಬೈಲುಗಳಲ್ಲಿ ಬರಿಯ ತಂತ್ರಾಂಶದ ಸಹಾಯದಿಂದಲೇ ಬೊಕೆ ಎಫೆಕ್ಟ್ ಕಾಣಿಸುವಂತೆ ಮಾಡುವುದು ಕೂಡ ಸಾಧ್ಯ. ಇದಕ್ಕಾಗಿ ಲಭ್ಯವಿರುವ ಹಲವು ಆಪ್‌ಗಳು ಒಂದೇ ದೃಶ್ಯದ ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಸೆರೆಹಿಡಿದು ಸೂಕ್ತವಾಗಿ ಜೋಡಿಸುವ ಮೂಲಕ ಬೊಕೆ ಎಫೆಕ್ಟ್ ಅನ್ನು ಕೃತಕವಾಗಿ ರೂಪಿಸುತ್ತವೆ.

ಅಕ್ಟೋಬರ್ ೨೪, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

Unknown ಹೇಳಿದರು...

ವಿವರಣೆಓದುವ ಮೂಲಕ ವಿಷಯ ಕುರಿತು ಹೆಚ್ಚಿನ ವಿಚಾರ ತಿಳಿದುಕೊಂಡೆ,ಥ್ಯಾಂಕ್ಸ್

Unknown ಹೇಳಿದರು...

Nice

badge