ಗುರುವಾರ, ನವೆಂಬರ್ 1, 2018

ಟೆಕ್ ಲೋಕದಲ್ಲಿ ಕನ್ನಡ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಕನ್ನಡ ಅಕ್ಷರಗಳನ್ನು ಮೂಡಿಸುವುದು ಎಂಬ ಅಭಿಪ್ರಾಯ ಒಂದು ಕಾಲದಲ್ಲಿತ್ತು. ಈ ಪರಿಸ್ಥಿತಿ ಬದಲಾಗಿ ಬಹಳ ದಿನಗಳೇ ಆಗಿವೆ. ತಂತ್ರಜ್ಞಾನದ ಭಾಷೆಯೆಂದೇ ಹೆಸರಾದ ಇಂಗ್ಲಿಷಿನಲ್ಲಿ ಏನೇನು ಸಾಧ್ಯವೋ ಅದೆಲ್ಲ ಕನ್ನಡದಲ್ಲೂ ಸಾಧ್ಯವಾಗಬೇಕು ಎನ್ನುವುದು ಇಂದಿನ ಸ್ಥಿತಿ. ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸವೂ ಆಗಿದೆ.

ಪ್ರಪಂಚದ ಎಲ್ಲ ಭಾಷೆಗಳಿಗೂ ತಾಂತ್ರಿಕವಾಗಿ ಇಂಗ್ಲಿಷಿನೊಡನೆ ಸ್ಪರ್ಧಿಸಲು ಬೆಂಬಲವಾಗಿರುವುದು ಯುನಿಕೋಡ್. ಫಾಂಟು-ಕೀಲಿಮಣೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರತಿಯೊಂದು ಲಿಪಿಯ ಪಠ್ಯವನ್ನೂ ಪ್ರತ್ಯೇಕವಾಗಿ ಶೇಖರಿಸಲು, ಸಂಸ್ಕರಿಸಲು ಅನುವುಮಾಡಿಕೊಟ್ಟಿದ್ದು ಈ ಮಾನಕದ ಸಾಧನೆ. ಟೆಕ್ ಲೋಕದಲ್ಲಿ ಕನ್ನಡದ ಗಮನಾರ್ಹ ಬೆಳವಣಿಗೆಯಲ್ಲೂ ಇದರ ಪಾತ್ರ ಮಹತ್ವದ್ದು.

ಯುನಿಕೋಡ್ ಬಳಕೆ ಸರ್ವವ್ಯಾಪಿಯಾದಂತೆ ಕನ್ನಡ ಪಠ್ಯವನ್ನು ಮೂಡಿಸುವುದು - ಹಂಚಿಕೊಳ್ಳುವುದು ಇದೀಗ ಬಹಳ ಸುಲಭವಾಗಿದೆ. ಹೀಗಾಗಿ ಸಮಾಜಜಾಲಗಳಲ್ಲಿ, ಜಾಲತಾಣಗಳಲ್ಲಿ ಇದೀಗ ಕನ್ನಡ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತಿದೆ. ಕನ್ನಡ ಲಿಪಿಯಲ್ಲಿ ಹೆಚ್ಚಿನ ಮಾಹಿತಿ ಸೃಷ್ಟಿಯಾದಂತೆ ಆ ಮಾಹಿತಿಯನ್ನು ಹೊಸ ಬಗೆಗಳಲ್ಲಿ ಬಳಸಬಲ್ಲ ತಂತ್ರಜ್ಞಾನಗಳೂ ಅಭಿವೃದ್ಧಿಯಾಗುತ್ತಿವೆ.

ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಪಠ್ಯರೂಪದ ಮಾಹಿತಿ ಮಾತ್ರವೇ ಅಲ್ಲ. ಪಠ್ಯವನ್ನು ಧ್ವನಿಗೆ (ಟೆಕ್ಸ್ಟ್ ಟು ಸ್ಪೀಚ್), ಧ್ವನಿಯನ್ನು ಪಠ್ಯಕ್ಕೆ (ಸ್ಪೀಚ್ ಟು ಟೆಕ್ಸ್ಟ್) ಬದಲಿಸುವ ತಂತ್ರಜ್ಞಾನಗಳೂ ಇದೀಗ ಕನ್ನಡದಲ್ಲಿವೆ. ಕಡತದಲ್ಲಿರುವ ಪಠ್ಯವನ್ನು ಧ್ವನಿರೂಪಕ್ಕೆ ಬದಲಿಸಿಕೊಂಡು ಆರಾಮವಾಗಿ ಕೇಳುವುದು, ನಮ್ಮ ಮಾತುಗಳನ್ನು ಕಂಪ್ಯೂಟರಿಗೋ ಮೊಬೈಲಿಗೋ ಹೇಳಿಬರೆಸುವುದು ಇದರಿಂದ ಸಾಧ್ಯವಾಗಿದೆ.

ತಂತ್ರಜ್ಞಾನದ ಪ್ರಯೋಜನ ಹೊಸದಾಗಿ ಸೃಷ್ಟಿಯಾದ ಪಠ್ಯಕ್ಕೆ ಮಾತ್ರವೇ ಸೀಮಿತವಾದರೆ ಏನು ಪ್ರಯೋಜನ? ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್ (ಓಸಿಆರ್) ತಂತ್ರಜ್ಞಾನದ ಸಹಾಯದಿಂದ ಕನ್ನಡದ ಮುದ್ರಿತ ಪಠ್ಯವನ್ನೂ ಡಿಜಿಟಲ್ ರೂಪಕ್ಕೆ ಬದಲಿಸಿಕೊಳ್ಳುವುದು, ಬೇಕಾದ ಬದಲಾವಣೆ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಅಷ್ಟೇ ಅಲ್ಲ, ಈ ಕೆಲಸ ಮಾಡುವ ಮೊಬೈಲ್ ಆಪ್‌ಗಳೂ ಬಂದಿವೆ.

ನಮಗೆ ಬೇಕಾದ ಮಾಹಿತಿ ಪ್ರಪಂಚದ ಯಾವುದೇ ಭಾಷೆಯಲ್ಲಿರುವುದು ಸಾಧ್ಯ. ಅಂತರಜಾಲದಲ್ಲಿ ಸುಲಭವಾಗಿ ದೊರಕುವ ಈ ಮಾಹಿತಿಯೆಲ್ಲ ನಮ್ಮ ಭಾಷೆಯಲ್ಲೇ ಇರುವಂತಿದ್ದರೆ? ಇದನ್ನು ಸಾಧ್ಯವಾಗಿಸಲು ಅನುವಾದ ತಂತ್ರಾಂಶಗಳು ನೆರವಾಗುತ್ತವೆ. ಇತರ ಭಾಷೆಗಳನ್ನು ಕನ್ನಡಕ್ಕೆ, ಕನ್ನಡದ ಮಾಹಿತಿಯನ್ನು ಇತರ ಭಾಷೆಗಳಿಗೆ ಅನುವಾದಮಾಡಿಕೊಡುವ ತಂತ್ರಾಂಶಗಳನ್ನು ತಯಾರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.

ನಮ್ಮ ಧ್ವನಿಯನ್ನು ಗುರುತಿಸಿ, ನಾವು ಹೇಳುವ ಕೆಲಸ ಮಾಡುವ ಅಮೆಜಾನ್ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಹಾಗೂ 'ಸಿರಿ'ಯಂತಹ ತಂತ್ರಜ್ಞಾನಗಳು ಇದೀಗ ಜನಪ್ರಿಯವಾಗುತ್ತಿವೆ. ನಾವು ಹೇಳಿದ ಸಂಖ್ಯೆಗೆ ಕರೆಮಾಡುವುದರಿಂದ ಪ್ರಾರಂಭಿಸಿ ದಿವಾನಖಾನೆಯ ಲೈಟ್ ಹಾಕುವುದರವರೆಗೆ ಇಂತಹ ತಂತ್ರಜ್ಞಾನಗಳಿಂದ ಹಲವು ಕೆಲಸಗಳನ್ನು ಮಾಡಿಸಬಹುದು. ಇವೂ ಇದೀಗ ಕನ್ನಡ ಕಲಿಯಲು ಶುರುಮಾಡಿವೆ.

ತಂತ್ರಜ್ಞಾನದ ಹಾವಳಿಯಿಂದ ಓದುವ ಹವ್ಯಾಸ ಕಡಿಮೆಯಾಯಿತು ಎಂದೇಕೆ ಹೇಳಬೇಕು? ತಂತ್ರಜ್ಞಾನದ ಸಹಾಯ ಪಡೆದು ಓದುವ ಹವ್ಯಾಸಕ್ಕೆ ನೀರೆರೆಯುವ ಪ್ರಯತ್ನದಲ್ಲಿ ವಿದ್ಯುನ್ಮಾನ ಪುಸ್ತಕಗಳು (ಇ-ಬುಕ್) ತೊಡಗಿಕೊಂಡಿವೆ. ವಿದ್ಯುನ್ಮಾನ ಸಾಧನಗಳಲ್ಲಿ ಪುಸ್ತಕಗಳನ್ನು ಓದಲು, ಕೇಳಲು ನೆರವಾಗುವ ವ್ಯವಸ್ಥೆಗಳು ಕನ್ನಡದಲ್ಲೂ ನಿಧಾನಕ್ಕೆ ಬೆಳೆಯುತ್ತಿವೆ. ಸರಕಾರವೇ ನಡೆಸುವ 'ಕಣಜ'ದಂತಹ ತಾಣಗಳೂ ಇ-ಪುಸ್ತಕಗಳನ್ನು ಒದಗಿಸುತ್ತಿವೆ. 

ತಂತ್ರಜ್ಞಾನ ಜಗತ್ತಿನಲ್ಲಿ ಕನ್ನಡದ ಪ್ರಾರಂಭಿಕ ಬೆಳವಣಿಗೆ ಸಾಧ್ಯವಾದದ್ದು ಹಲವು ಉತ್ಸಾಹಿಗಳು ವೈಯಕ್ತಿಕ ಮಟ್ಟದಲ್ಲಿ ಮಾಡಿದ ಕೆಲಸಗಳಿಂದ. ಅಲ್ಲಿಂದ ಶುರುವಾದ ಕನ್ನಡದ ಟೆಕ್ ಯಾತ್ರೆಗೆ ಬೆಂಬಲವಾಗಿ ಇದೀಗ ಗೂಗಲ್‌ನಂತಹ ವಾಣಿಜ್ಯ ಸಂಸ್ಥೆಗಳೂ ಕೈಜೋಡಿಸಿವೆ. ತಂತ್ರಜ್ಞಾನ ಜಗತ್ತಿನಲ್ಲಿ ಕನ್ನಡದ ಮಾರುಕಟ್ಟೆ ಸಹಜವಾಗಿ ಬೆಳೆಯುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ.

ಟೆಕ್ ಲೋಕದಲ್ಲಿ ಕನ್ನಡ ಬೆಳೆಯುವ ನಿಟ್ಟಿನಲ್ಲಿ ಸಮುದಾಯದ ಕೊಡುಗೆಯೂ ದೊಡ್ಡಮಟ್ಟದ್ದು. ವಿಕಿಪೀಡಿಯದಂತಹ ವೇದಿಕೆಯನ್ನು ಬೆಳೆಸುವುದಿರಲಿ - ಮುಕ್ತ ತಂತ್ರಾಂಶಗಳನ್ನು ಕನ್ನಡಕ್ಕೆ ತರುವುದಿರಲಿ, ಆಸಕ್ತ ಕನ್ನಡಿಗರ ಗುಂಪುಗಳು ಹಲವು ಮಹತ್ವದ ಸಾಧನೆಗಳನ್ನು ಮಾಡಿವೆ. ಇಂತಹ ಸಮುದಾಯಗಳೊಡನೆ ಕೈಜೋಡಿಸುವುದು, ಹೊಸ ಪ್ರಯತ್ನಗಳನ್ನು ಬೆಂಬಲಿಸುವುದು ನಾವೆಲ್ಲರೂ ಮಾಡಬಹುದಾದ - ಮಾಡಬೇಕಾದ ಕೆಲಸ!

ನವೆಂಬರ್ ೧, ೨೦೧೮ರ ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ
badge