ಬುಧವಾರ, ಅಕ್ಟೋಬರ್ 24, 2018

ಕೈಗೆಟುಕುವ ಬೆಲೆಯಲ್ಲಿ ಎರಡು ಹೊಸ ಜೆನ್‌ಫೋನ್

ಇಜ್ಞಾನ ವಿಶೇಷ


ತನ್ನ ಜೆನ್‌ಫೋನ್ ಸರಣಿಯ ಸ್ಮಾರ್ಟ್‌ಫೋನುಗಳ ಮೂಲಕ ಏಸುಸ್ ಸಂಸ್ಥೆ ಸಾಕಷ್ಟು ಜನಪ್ರಿಯವಾಗಿರುವುದು ನಮಗೆಲ್ಲ ಗೊತ್ತೇ ಇದೆ. ಈವರೆಗೆ ಮಧ್ಯಮ ಹಾಗೂ ಹೆಚ್ಚು ಬೆಲೆಯ ಹಲವಾರು ಜೆನ್‌ಫೋನ್ ಮಾದರಿಗಳು ಲಭ್ಯವಿದ್ದರೂ ಪ್ರಾರಂಭಿಕ ಹಂತದಲ್ಲಿ ಜೆನ್‌ಫೋನ್ ಕೊಳ್ಳಬಯಸುವ ಗ್ರಾಹಕರೆದುರು ಹೆಚ್ಚಿನ ಆಯ್ಕೆಗಳು ಇರಲಿಲ್ಲ. ಈ ಕೊರತೆಯನ್ನು ದೂರಮಾಡುವ ನಿಟ್ಟಿನಲ್ಲಿ ಏಸುಸ್ ಸಂಸ್ಥೆ ಇದೀಗ ಎರಡು ಹೊಸ ಮಾದರಿಗಳನ್ನು ಪರಿಚಯಿಸಿದೆ. ಅಕ್ಟೋಬರ್ 24, 2018ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಮಾದರಿಗಳ ಪರಿಚಯ ಇಲ್ಲಿದೆ.

ಜೆನ್‌ಫೋನ್ ಮ್ಯಾಕ್ಸ್ ಎಂ1: ಸದ್ಯ ಪರಿಚಯಿಸಲಾಗುತ್ತಿರುವ ಎರಡು ಫೋನುಗಳ ಪೈಕಿ ಹೆಚ್ಚು ವೈಶಿಷ್ಟ್ಯಗಳುಳ್ಳ ಮಾದರಿ ಜೆನ್‌ಫೋನ್ ಮ್ಯಾಕ್ಸ್ ಎಂ1. ಇದನ್ನು ಫ್ಲಿಪ್‌ಕಾರ್ಟ್ ಮೂಲಕ ರೂ. 7499ರ ಪ್ರಾರಂಭಿಕ ಬೆಲೆಯಲ್ಲಿ (ಮುಖಬೆಲೆ ರೂ. 8999) ಬಿಡುಗಡೆ ಮಾಡಲಾಗುತ್ತಿದೆ.

ಈ ಫೋನಿನಲ್ಲಿ ಬಳಕೆಯಾಗಿರುವುದು ಎಂಟು ತಿರುಳುಗಳ (ಆಕ್ಟಾಕೋರ್) ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 430 ಪ್ರಾಸೆಸರ್. ಸದ್ಯ ಮಾರುಕಟ್ಟೆಯಲ್ಲಿರುವ, ಇದೇ ಬೆಲೆಯಲ್ಲಿ ಸಿಗುವ ಫೋನುಗಳ ಹೋಲಿಕೆಯಲ್ಲಿ ಇದೊಂದು ತೃಪ್ತಿಕರ ಆಯ್ಕೆಯೆಂದೇ ಹೇಳಬಹುದು.

ಈ ಫೋನಿನಲ್ಲಿ 3 ಜಿಬಿ ರ್‍ಯಾಮ್ ಹಾಗೂ 32 ಜಿಬಿ ಆಂತರಿಕ ಶೇಖರಣಾ ಸಾಮರ್ಥ್ಯ ಇದೆ. ಹೆಚ್ಚುವರಿ ಮೆಮೊರಿ ಕಾರ್ಡ್ ಬಳಸಿ 256  ಜಿಬಿವರೆಗಿನ ಮಾಹಿತಿ ಸಂಗ್ರಹಿಸಿಕೊಳ್ಳುವುದು ಸಾಧ್ಯ. ಎರಡು ಸಿಮ್‌ಗಳ ಜೊತೆಗೆ ಮೆಮೊರಿ ಕಾರ್ಡನ್ನೂ ಬಳಸುವ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ನೀಡಲಾಗಿದೆ. ಸುರಕ್ಷತೆಯ ಆಯ್ಕೆಯಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಜೊತೆಗೆ ಫೇಸ್ ಅನ್‌ಲಾಕ್ ಸೌಲಭ್ಯವೂ ಇರುವುದು ಇನ್ನೊಂದು ಹೆಚ್ಚುಗಾರಿಕೆ.

ಆಂಡ್ರಾಯ್ಡ್ ಓರಿಯೋ ಆಪರೇಟಿಂಗ್ ಸಿಸ್ಟಂ ಬಳಸುವ ಈ ಫೋನಿನಲ್ಲಿ ಏಸುಸ್ ಸಂಸ್ಥೆಯ ಜೆನ್ ಯುಐ 5.0 ಇದೆ. ಮುಂಚಿತವಾಗಿ ಇನ್‌ಸ್ಟಾಲ್ ಆಗಿರುವ ಆಪ್‌ಗಳ ಸಂಖ್ಯೆ ಬಹಳ ಕಡಿಮೆಯಿರುವುದು ಒಳ್ಳೆಯ ಸಂಗತಿ. ಟ್ವಿನ್ ಆಪ್ಸ್ ಬೆಂಬಲ ಇರುವುದರಿಂದ ಈ ಸೌಲಭ್ಯ ನೀಡುವ ಹಲವು ಆಪ್‌ಗಳ ಎರಡೆರಡು ಖಾತೆಗಳನ್ನು ಬಳಸುವುದು ಸಾಧ್ಯ.

ಈ ಫೋನಿನಲ್ಲಿ 5.45 ಇಂಚಿನ ಎಚ್‌ಡಿ+ ಐಪಿಎಸ್ ಪರದೆ, ಹಾಗೂ ಅದಕ್ಕೆ 2.5D ಗಾಜಿನ ಹೊದಿಕೆ ಇದೆ. ಪರದೆಯ ಸುತ್ತಲಿನ ಅಂಚುಗಳು (ಬೆಜೆಲ್) ಸಾಕಷ್ಟು ತೆಳ್ಳಗಿರುವುದರಿಂದ ಫೋನಿನ ಗಾತ್ರವನ್ನು ಚಿಕ್ಕದಾಗಿಯೇ ಉಳಿಸಿಕೊಂಡು ತಕ್ಕಮಟ್ಟಿಗಿನ ದೊಡ್ಡ ಪರದೆ ನೀಡಲು ಸಾಧ್ಯವಾಗಿರುವುದು ವಿಶೇಷ.

ಇದರಲ್ಲಿರುವ ಬ್ಯಾಟರಿಯ 4000 ಎಂಎಎಚ್ ಸಾಮರ್ಥ್ಯ ತೃಪ್ತಿಕರವಾಗಿದೆ. ಬ್ಯಾಟರಿ ನಿರ್ವಹಣೆಗೆಂದೇ ಪವರ್‌ಮಾಸ್ಟರ್ ಎಂಬ ಪ್ರತ್ಯೇಕ ಆಪ್ ಅನ್ನು ನೀಡಲಾಗಿದೆ. ಈ ಬ್ಯಾಟರಿಯ ಸಾಮರ್ಥ್ಯವನ್ನು ಬಳಸಿಕೊಂಡು ಬೇರೆ ಫೋನುಗಳನ್ನೂ ಚಾರ್ಜ್ ಮಾಡಬಹುದು (ರಿವರ್ಸ್ ಚಾರ್ಜಿಂಗ್).

ನೋಡಲು ಲೋಹದಂತೆ ಕಾಣುವ ಪ್ಲಾಸ್ಟಿಕ್ ದೇಹ ಈ ಫೋನಿನದು. ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ಚೆನ್ನಾಗಿದೆ. ಬಹುತೇಕ ಫೋನುಗಳಂತೆ ಇದರಲ್ಲೂ ಹಿಂಬದಿ ರಕ್ಷಾಕವಚವನ್ನು ತೆರೆಯುವಂತಿಲ್ಲ. ಫೋನಿನ ತೂಕ ಕೇವಲ 150 ಗ್ರಾಂ.

ಕ್ಯಾಮೆರಾ ವಿಭಾಗಕ್ಕೆ ಬಂದರೆ ಇಲ್ಲಿ 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಇವೆ. ಎರಡೂ ಕ್ಯಾಮೆರಾಗಳ ಗುಣಮಟ್ಟ ಚೆನ್ನಾಗಿದೆ.

ಕನ್ನಡ ಅಕ್ಷರಗಳು ಈ ಫೋನಿನಲ್ಲಿ ಚೆನ್ನಾಗಿ ಮೂಡುತ್ತವೆ. ಆಯ್ಕೆಗಳು ಕನ್ನಡದಲ್ಲೇ ಕಾಣಿಸುವಂತೆ ಮಾಡಿಕೊಳ್ಳುವ ಸೌಲಭ್ಯ ಇದೆಯಾದರೂ ಅನುವಾದಗಳು ಪೂರ್ತಿಯಾದಂತೆ ತೋರುವುದಿಲ್ಲ.

ಇದರಲ್ಲಿರುವ ಸೌಲಭ್ಯಗಳಿಗೆ ಹೋಲಿಸಿದಾಗ ಈ ಫೋನಿನ ಬೆಲೆ - ರೂ. 7499 ಸಮರ್ಪಕವೆಂದೇ ಹೇಳಬಹುದು. ಪ್ರಾರಂಭಿಕ ಹಂತದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನಿಜಕ್ಕೂ ಇದೊಂದು ಒಳ್ಳೆಯ ಆಯ್ಕೆ.


ಜೆನ್‌ಫೋನ್ ಲೈಟ್ ಎಲ್1: 
ನೈಜ ಅರ್ಥದಲ್ಲಿ ಪ್ರಾರಂಭಿಕ ಸ್ಮಾರ್ಟ್‌ಫೋನ್ ಆಗಿರುವ ಜೆನ್‌ಫೋನ್ ಲೈಟ್ ಎಲ್‌1 ಅನ್ನು ರೂ. 5999ರ ಪ್ರಾರಂಭಿಕ ಬೆಲೆಯಲ್ಲಿ ಪರಿಚಯಿಸಲಾಗುತ್ತಿದೆ (ಮುಖಬೆಲೆ ರೂ. 6999).

ಈ ಮಾದರಿಯಲ್ಲೂ ಎಂಟು ತಿರುಳುಗಳ (ಆಕ್ಟಾಕೋರ್) ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 430 ಪ್ರಾಸೆಸರ್ ಬಳಕೆಯಾಗಿದೆ. ಏಸುಸ್ ಸಂಸ್ಥೆಯ ಜೆನ್ ಯುಐ 5.0 ಮೇಲುಹೊದಿಕೆಯ ಜೊತೆಗೆ ಇದು ಕೂಡ ಆಂಡ್ರಾಯ್ಡ್ ಓರಿಯೋ ಆಪರೇಟಿಂಗ್ ಸಿಸ್ಟಂ ಅನ್ನು ಬಳಸುತ್ತದೆ.

ಈ ಫೋನಿನಲ್ಲಿ 2 ಜಿಬಿ ರ್‍ಯಾಮ್ ಹಾಗೂ 16 ಜಿಬಿ ಆಂತರಿಕ ಶೇಖರಣಾ ಸಾಮರ್ಥ್ಯ ಇದೆ. ಹೆಚ್ಚುವರಿ ಮೆಮೊರಿ ಕಾರ್ಡ್ ಬಳಸಿ 256  ಜಿಬಿವರೆಗಿನ ಮಾಹಿತಿ ಸಂಗ್ರಹಿಸಿಕೊಳ್ಳುವುದು ಸಾಧ್ಯ. ಎರಡು ಸಿಮ್ ಜೊತೆಗೆ ಮೆಮೊರಿ ಕಾರ್ಡನ್ನೂ ಬಳಸಬಹುದು.

ಈ ಮಾದರಿಯಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇಲ್ಲದಿದ್ದರೂ ಫೇಸ್ ಅನ್‌ಲಾಕ್ ಸೌಲಭ್ಯ ನೀಡಲಾಗಿರುವುದು ವಿಶೇಷ.

3000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಬಳಸುವ ಈ ಫೋನಿನಲ್ಲಿ 5.45 ಇಂಚಿನ ಎಚ್‌ಡಿ+ ಐಪಿಎಸ್ ಪರದೆ ಇದೆ. 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಇವೆ.

ಈ ಎಲ್ಲ ಸೌಲಭ್ಯಗಳಿಗೆ ಹೋಲಿಸಿದಾಗ ಈ ಫೋನಿನ ಬೆಲೆ - ರೂ. 5999 ಸಮರ್ಪಕವೆಂದೇ ಹೇಳಬಹುದು. ಕೊಟ್ಟ ಹಣಕ್ಕೆ ತಕ್ಕದಾದ ಫೋನು ಇದು.

ಕಾಮೆಂಟ್‌ಗಳಿಲ್ಲ:

badge