ಟಿ. ಜಿ. ಶ್ರೀನಿಧಿ
ನಮ್ಮ ಮನೆಗಳಲ್ಲಿ ನೂರೆಂಟು ವಸ್ತುಗಳಿರುತ್ತವೆ. ಈ ಪೈಕಿ ಕೆಲವು ದಿವಾನಖಾನೆಯ ಮೇಜಿನಂತೆ ದೊಡ್ಡವು, ಇನ್ನು ಕೆಲವು ಆ ಮೇಜಿನ ಮೇಲಿನ ಧೂಳಿನಂತೆ ಸಣ್ಣವು. ಕಣ್ಣಿಗೆ ಕಾಣುವ ಈ ಸಂಗತಿಗಳ ಜೊತೆಗೆ ಕಣ್ಣಿಗೆ ಕಾಣದ ಹಲವು ವಿದ್ಯಮಾನಗಳೂ ಘಟಿಸುತ್ತಿರುತ್ತವೆ: ವಾಟ್ಸಾಪ್ ಸಂದೇಶ ಮೊಬೈಲನ್ನು ತಲುಪುವುದು, ಕಂಪ್ಯೂಟರಿಗೆ ವೈಫೈ ಸಂಪರ್ಕ ಸಿಗುವುದು, ಮೈಕ್ರೋವೇವ್ ಓವನ್ನಿನಲ್ಲಿಟ್ಟ ಆಹಾರ ಬಿಸಿಯಾಗುವುದು - ಹೀಗೆ.
ಇಂತಹ ಇನ್ನೊಂದು ಉದಾಹರಣೆ ದೂರನಿಯಂತ್ರಕ, ಅರ್ಥಾತ್ ರಿಮೋಟ್ ಕಂಟ್ರೋಲಿನದು. ಆಗಿಂದಾಗ್ಗೆ ಕಾಣೆಯಾಗುತ್ತಿರುವ ವಸ್ತುವಾದರೂ ಸ್ವತಃ ರಿಮೋಟ್ ಕಂಟ್ರೋಲ್ ಅದೃಶ್ಯವೇನಲ್ಲ. ಇಲ್ಲಿ ಹೇಳಹೊರಟಿರುವ 'ಕಣ್ಣಿಗೆ ಕಾಣದ' ಸಂಗತಿ ಅದರ ಕಾರ್ಯಾಚರಣೆಯನ್ನು ಕುರಿತಾದದ್ದು.
ಅದೃಶ್ಯವಾಗಿ, ನಮ್ಮ ಗಮನಕ್ಕೆ ಬಾರದಂತೆ ನಡೆಯುವ ಈ ಕಾರ್ಯಾಚರಣೆ ನಮ್ಮ ದೈನಂದಿನ ಬದುಕಿನ ಹಲವು ಕೆಲಸಗಳನ್ನು ಸುಲಭಗೊಳಿಸುತ್ತದೆ. ಜಾಹೀರಾತು ಬಂದಾಗ ಟೀವಿಯ ಚಾನೆಲ್ ಬದಲಿಸುವುದು ಇಂತಹ ಕೆಲಸಗಳಲ್ಲೊಂದು.
ಹಾಗೆ ನೋಡಿದರೆ ರಿಮೋಟಿನ ಸೃಷ್ಟಿಯಾದದ್ದೇ ಈ ಕೆಲಸಕ್ಕಾಗಿ. ಟೀವಿ ಚಾನೆಲ್ ಬದಲಿಸಬೇಕಾದಾಗ, ವಾಲ್ಯೂಮ್ ಹೆಚ್ಚು-ಕಡಿಮೆ ಮಾಡಬೇಕಾದಾಗ ಪ್ರತಿಬಾರಿಯೂ ಎದ್ದು ಟೀವಿಯವರೆಗೆ ಹೋಗುವ ಕಿರಿಕಿರಿಯನ್ನು ತಪ್ಪಿಸಲು ಅಮೆರಿಕಾದ ಜೆನಿತ್ ಇಲೆಕ್ಟ್ರಾನಿಕ್ಸ್ ಎಂಬ ಸಂಸ್ಥೆ ೧೯೫೦ರ ದಶಕದಲ್ಲಿ ಮೊತ್ತಮೊದಲ ನಿಸ್ತಂತು ದೂರನಿಯಂತ್ರಕವನ್ನು ರೂಪಿಸಿತು (ಟೀವಿ ಜೊತೆಗೆ ತಂತಿಯ ಸಂಪರ್ಕವಿದ್ದ ದೂರನಿಯಂತ್ರಕಗಳು - ಕೆಲ ಆಟಿಕೆಗಳಲ್ಲಿ ಈಗಲೂ ಇರುತ್ತವಲ್ಲ, ಅಂಥವು - ಅದಕ್ಕೂ ಮೊದಲೇ ಅಸ್ತಿತ್ವದಲ್ಲಿದ್ದವು).
ಈ ದೂರನಿಯಂತ್ರಕ ನಮ್ಮ ಆದೇಶಗಳನ್ನು ಟೀವಿಗೆ ತಲುಪಿಸಲು ಬೆಳಕಿನ ಕಿರಣಗಳನ್ನು ಬಳಸುತ್ತಿತ್ತು. ಬೆಳಕಿನ ಕಿರಣಗಳನ್ನು ಟೀವಿಯ ಯಾವ ಮೂಲೆಗೆ ಹಾಯಿಸುತ್ತಿದ್ದೇವೆ ಎನ್ನುವುದನ್ನು ಅವಲಂಬಿಸಿ ಚಾನೆಲ್ ಬದಲಿಸುವುದೋ, ವಾಲ್ಯೂಮ್ ಬದಲಿಸುವುದೋ ಯಾವುದೋ ಒಂದು ಕೆಲಸ ಆಗುತ್ತಿತ್ತು.
ಆದರೆ ಇಲ್ಲೊಂದು ಸಮಸ್ಯೆ ಇತ್ತು. ರಿಮೋಟ್ ಮಾತ್ರವೇ ಅಲ್ಲದೆ ಬೇರೆ ಯಾವ ಮೂಲದಿಂದ (ಉದಾ: ಸೂರ್ಯ) ಬೆಳಕು ಟೀವಿ ಪರದೆಯ ಮೇಲೆ ಬಿದ್ದರೆ ಇದ್ದಕ್ಕಿದ್ದಂತೆ ಚಾನೆಲ್ ಬದಲಾವಣೆಯೋ ವಾಲ್ಯೂಮ್ ಬದಲಾವಣೆಯೋ ಆಗಿಬಿಡುತ್ತಿತ್ತು.
ಇದನ್ನು ತಪ್ಪಿಸಲು ಬೆಳಕಿನ ಬದಲು ಮನುಷ್ಯರಿಗೆ ಕೇಳಿಸದ ಧ್ವನಿಯ (ಅಲ್ಟ್ರಾಸೌಂಡ್) ಅಲೆಗಳನ್ನು ದೂರನಿಯಂತ್ರಕಗಳಲ್ಲಿ ಬಳಸುವ ಪ್ರಯೋಗ ನಡೆಯಿತು. ಈ ಬಗೆಯ ರಿಮೋಟ್ ಕಂಟ್ರೋಲ್‌ಗಳು ಹಲವಾರು ವರ್ಷಗಳ ಕಾಲ ಬಳಕೆಯಲ್ಲೂ ಇದ್ದವು.
ಹೆಚ್ಚುಹೆಚ್ಚು ಚಾನೆಲ್ಲುಗಳು, ಹೆಚ್ಚುಹೆಚ್ಚು ಸೌಲಭ್ಯಗಳು ಬಂದಂತೆ ರಿಮೋಟ್ ಕಂಟ್ರೋಲಿನ ಕೆಲಸವೂ ಜಾಸ್ತಿಯಾಯಿತು. ಅದರಲ್ಲಿ ಹೆಚ್ಚಿನ ಆಯ್ಕೆಗಳು ಬಂದಂತೆ ಕಾರ್ಯಾಚರಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬೇಕಾದ ಅಗತ್ಯ ಎದುರಾಯಿತು.
ಆಗ ವಿಜ್ಞಾನಿಗಳ ನೆರವಿಗೆ ಬಂದದ್ದೇ ಇನ್‌ಫ್ರಾರೆಡ್ ಬೆಳಕು. ನಿರ್ದಿಷ್ಟ ಕೆಲಸಗಳಿಗೆ ನಿರ್ದಿಷ್ಟ ಆದೇಶಗಳನ್ನು ಬೆಳಕಿನ ಕಿರಣಗಳಾಗಿ ಪರಿವರ್ತಿಸಿ ಕಳಿಸಿದರೆ ಅದನ್ನು ಟೀವಿಯಂತಹ ಸಾಧನಗಳು ಸ್ವೀಕರಿಸಿ ಸೂಕ್ತ ಪ್ರತಿಕ್ರಿಯೆ ನೀಡಬಲ್ಲವು ಎಂದು ಅವರು ಯೋಚಿಸಿದರು.
ಈಗ ನಾವು ಬಳಸುವ ದೂರನಿಯಂತ್ರಕಗಳಲ್ಲಿ ಬಳಕೆಯಾಗುವುದು ಇದೇ ತಂತ್ರಜ್ಞಾನ. ಟೀವಿ ಮಾತ್ರವೇ ಅಲ್ಲದೆ ಇನ್ನೂ ಅನೇಕ ಗೃಹೋಪಯೋಗಿ ಸಾಧನಗಳ ಜೊತೆಯಲ್ಲೂ ಇಂತಹ ದೂರನಿಯಂತ್ರಕಗಳನ್ನು ಬಳಸಲಾಗುತ್ತಿದೆ. ಹಲವು ಸಾಧನಗಳನ್ನು ಒಂದೇ ರಿಮೋಟಿನ ಸಹಾಯದಿಂದ ನಿಯಂತ್ರಿಸುವುದನ್ನು ಸಾಧ್ಯವಾಗಿಸುವ ವ್ಯವಸ್ಥೆಯೂ ಇದೆ.
ತಂತ್ರಜ್ಞಾನ ಕ್ಷೇತ್ರ ಸದಾ ಬದಲಾಗುತ್ತಲೇ ಇರುತ್ತದಲ್ಲ, ಹಾಗಿದ್ದಮೇಲೆ ರಿಮೋಟ್ ಕಂಟ್ರೋಲಿನಲ್ಲಿ ಮತ್ತೆ ಬದಲಾವಣೆ ಆಗಬೇಡವೇ? ಈಚೆಗೆ ಆ ಬದಲಾವಣೆಯೂ ಕಾಣಸಿಗುತ್ತಿದೆ.
ಇನ್‌ಫ್ರಾರೆಡ್ ಸೌಲಭ್ಯವಿರುವ ಸ್ಮಾರ್ಟ್‌ಫೋನುಗಳನ್ನು ಬಳಸಿ ಯಾವುದೇ ಸಾಧನವನ್ನು ನಿಯಂತ್ರಿಸುವ ಸಾಧ್ಯತೆ ಇಂತಹ ಬದಲಾವಣೆಗಳಿಗೆ ಒಂದು ಉದಾಹರಣೆ. ಬೇರೆಬೇರೆ ಸಾಧನಗಳನ್ನು ನಿಯಂತ್ರಿಸಲು ಬೇರೆಬೇರೆ ರಿಮೋಟ್ ಕಂಟ್ರೋಲ್‌ಗಳನ್ನು ಬಳಸುವ ಬದಲು ಇಲ್ಲಿ ನಮ್ಮ ಫೋನಿನಲ್ಲಿರುವ ಆಪ್ ಮೂಲಕವೇ ಅವೆಲ್ಲವನ್ನೂ ನಿಯಂತ್ರಿಸಬಹುದು.
ಅಂಗಾಂಗಗಳ ಚಲನೆಯ ಮೂಲಕ ನಾವು ನೀಡುವ ಸನ್ನೆ - ಸಂಕೇತಗಳನ್ನು ಬಳಸಿ, ವಿವಿಧ ಸಾಧನಗಳನ್ನು ದೂರದಿಂದಲೇ ನಿಯಂತ್ರಿಸಲು ನೆರವಾಗುವ 'ಜೆಸ್ಚರ್ ಕಂಟ್ರೋಲ್' ತಂತ್ರಜ್ಞಾನವನ್ನೂ ಸಾಂಪ್ರದಾಯಿಕ ರಿಮೋಟ್ ಕಂಟ್ರೋಲ್‌ಗಳಿಗೆ ಪರ್ಯಾಯವಾಗಿ ಬಳಸಬಹುದು. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ಸಾಧನಗಳ ನಿಯಂತ್ರಣದಲ್ಲಿ ಈ ವಿಧಾನ ಈಗಾಗಲೇ ಕೊಂಚಮಟ್ಟಿಗೆ ಬಳಕೆಯಾಗುತ್ತಿರುವುದು ಗಮನಾರ್ಹ.
ಧ್ವನಿರೂಪದ ಆದೇಶಗಳನ್ನು ಸ್ವೀಕರಿಸಿ ಪ್ರತಿಕ್ರಿಯೆ ನೀಡುವ ಗೂಗಲ್ ಹೋಮ್ - ಅಮೆಜಾನ್ ಎಕೋ ಮುಂತಾದ ಸ್ಮಾರ್ಟ್ ಸಹಾಯಕ ವ್ಯವಸ್ಥೆಗಳಿವೆಯಲ್ಲ, ಇಂದಿನ ರಿಮೋಟ್ ಕಂಟ್ರೋಲ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳ ಪೈಕಿ ಅವಕ್ಕೆ ಪ್ರಮುಖ ಸ್ಥಾನ. ಟೀವಿ, ಏಸಿ ಮುಂತಾದ ಸಾಧನಗಳಷ್ಟೇ ಅಲ್ಲದೆ ಮನೆಯ ಲೈಟ್ ಬಲ್ಬನ್ನೂ ಅವುಗಳ ಮೂಲಕ ನಿಯಂತ್ರಿಸಬಹುದು. ಸಾಮಾನ್ಯ ರಿಮೋಟಿನ ಜೊತೆಗೆ ಧ್ವನಿರೂಪದ ಆದೇಶ ನೀಡುವ ಸೌಲಭ್ಯವನ್ನೂ ಸೇರಿಸಿರುವ ಸೆಟ್ ಟಾಪ್ ಬಾಕ್ಸ್, ಸ್ಟ್ರೀಮಿಂಗ್ ಡಿವೈಸ್ ಮುಂತಾದ ಹಲವು ಉತ್ಪನ್ನಗಳೂ ಈಗಾಗಲೇ ಮಾರುಕಟ್ಟೆಗೆ ಬಂದಿವೆ.
ಮುಂದೆ ಧ್ವನಿ ಆಧಾರಿತ ರಿಮೋಟುಗಳ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿ, ಮನೆಮಂದಿಯೆಲ್ಲ ಅದಕ್ಕೆ ಆದೇಶ ನೀಡಲು ಶುರುಮಾಡಿದರೆ ಯಾರ ಆದೇಶ ಪಾಲಿಸಬೇಕು ಎನ್ನುವ ಗೊಂದಲ ಸೃಷ್ಟಿಯಾಗಿ ಆ ಗೊಂದಲ ನಿವಾರಿಸಲಿಕ್ಕೂ ಹೊಸದೊಂದು ತಂತ್ರಜ್ಞಾನ ಬರಬಹುದೇನೋ. ಯಾರಿಗೆ ಗೊತ್ತು?
ಡಿಸೆಂಬರ್ ೫, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
1 ಕಾಮೆಂಟ್:
ಉತ್ತಮ ಮಾಹಿತಿಯುಳ್ಳ ಉಪಯುಕ್ತ ಲೇಖನ.ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ