ಬುಧವಾರ, ಆಗಸ್ಟ್ 22, 2018

ಕಡಿಮೆ ಸ್ಮಾರ್ಟ್ ಫೋನುಗಳಿಗೆ ಹೆಚ್ಚು ಸ್ಮಾರ್ಟ್ ತಂತ್ರಾಂಶ!

ಟಿ. ಜಿ. ಶ್ರೀನಿಧಿ

ಇದು ಸ್ಮಾರ್ಟ್ ಫೋನುಗಳ ಕಾಲ. ಮಾರುಕಟ್ಟೆಯಲ್ಲಂತೂ ದಿನಕ್ಕೊಂದರಂತೆ ಹೊಸಹೊಸ ಮಾದರಿಗಳ ಭರಾಟೆ. ನಿನ್ನೆ ಬಂದ ಫೋನಿಗಿಂತ ಇಂದು ಬಂದಿದ್ದರ ಸಾಮರ್ಥ್ಯ ಹೆಚ್ಚು. ಅಂಗೈ ಮೇಲಿನ ಕಂಪ್ಯೂಟರುಗಳೆಂದು ಕರೆಸಿಕೊಳ್ಳುವ ಫೋನುಗಳು ದೊಡ್ಡ ಕಂಪ್ಯೂಟರುಗಳ ಸಾಮರ್ಥ್ಯದೊಡನೆಯೇ ಸ್ಪರ್ಧೆಗಿಳಿದು ಈಗಾಗಲೇ ಸಾಕಷ್ಟು ಸಮಯ ಕಳೆದಿದೆ. ಕಂಪ್ಯೂಟರಿನಲ್ಲಿ ಬಳಸುವಷ್ಟೇ, ಅಥವಾ ಅದಕ್ಕಿಂತಲೂ ಹೆಚ್ಚು ಸಕ್ಷಮವಾದ ತಂತ್ರಾಂಶಗಳು ಇದೀಗ ಮೊಬೈಲ್ ಆಪ್‌ಗಳಾಗಿ ನಮ್ಮೆದುರು ಬಂದಿವೆ.

ಆದರೆ ಈ ಸ್ಪರ್ಧೆಯ ವಿಷಯವೆಲ್ಲ ಹತ್ತಿಪ್ಪತ್ತು ಸಾವಿರ ರೂಪಾಯಿ ಬೆಲೆಯ ಫೋನುಗಳಿಗೆ ಮಾತ್ರ ಸೀಮಿತವಾದ ವಿಷಯ. ಐದಂಕಿಯ ಬೆಲೆ ಬಿಟ್ಟು ನಾಲ್ಕಂಕಿ ಬೆಲೆಯ ಫೋನುಗಳ ವಿಷಯಕ್ಕೆ ಬಂದಿರೋ, ಅವುಗಳ ಬೆಲೆಯಷ್ಟೇ ವೇಗವಾಗಿ ಫೋನಿನ ಸಾಮರ್ಥ್ಯವೂ ಜರ್‍ರನೆ ಜಾರಿ ಕೆಳಕ್ಕೆ ಬಂದುಬಿಡುತ್ತದೆ.

ಸಮಸ್ಯೆ ಶುರುವಾಗುವುದೇ ಅಲ್ಲಿ. ಕಡಿಮೆ ಬೆಲೆಯ ಸಾಧನಗಳು ಹೆಸರಿಗೆ 'ಸ್ಮಾರ್ಟ್' ಫೋನುಗಳಾದರೂ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯ ದೃಷ್ಟಿಯಿಂದ ಅಷ್ಟೇನೂ ಸ್ಮಾರ್ಟ್ ಆಗಿರುವುದಿಲ್ಲ. ಹತ್ತಾರು ಆಪ್‌ಗಳನ್ನು ಹಾಕಿಕೊಳ್ಳುತ್ತಿದ್ದಂತೆಯೇ ಅವುಗಳ ಕಾರ್ಯಾಚರಣೆ ನಿಧಾನವಾಗುತ್ತದೆ, ನಾಲ್ಕಾರು ದಿನ ಬಳಸುವಷ್ಟರಲ್ಲಿ ಮೆಮೊರಿ ಸಾಲದು ಎಂದೂ ಎನಿಸುತ್ತದೆ.

ಮೊಬೈಲಿನ ಕಡಿಮೆ ಸಾಮರ್ಥ್ಯದಂತೆ ನಾವು ಬಳಸುವ ಆಪ್‌ಗಳೂ ಕೂಡ ಈ ಪರಿಸ್ಥಿತಿಗೆ ತಮ್ಮ ಕಾಣಿಕೆ ನೀಡುತ್ತವೆ. ಮೊಬೈಲ್ ಫೋನುಗಳ ಬಳಕೆ ಹೆಚ್ಚಿದಂತೆ ನೂರೆಂಟು ಕೆಲಸಗಳಿಗೆ ಈಗ ನಾವು ಆಪ್‌ಗಳನ್ನು ಅವಲಂಬಿಸುತ್ತಿದ್ದೇವಲ್ಲ, ಇದರೊಡನೆಯೇ ಆಪ್‌ಗಳ ರಚನೆಯೂ ಹೆಚ್ಚು ಸಂಕೀರ್ಣವಾಗುತ್ತ ಸಾಗಿದೆ. ಇನ್‌ಸ್ಟಾಲ್ ಮಾಡಿಕೊಳ್ಳುವಾಗಿನ ಅವುಗಳ ಗಾತ್ರವಿರಲಿ, ಅವು ಕೆಲಸಮಾಡಲು ಬೇಕಾದ ಸ್ಥಳಾವಕಾಶವಿರಲಿ, ಅವು ಬಳಸುವ ರ್‍ಯಾಮ್ ಅಥವಾ ಬ್ಯಾಟರಿ ಸಾಮರ್ಥ್ಯದ ಪ್ರಮಾಣವೇ ಇರಲಿ - ಇವೆಲ್ಲವೂ ಈಚೆಗೆ ತೀವ್ರವಾಗಿ ಹೆಚ್ಚಿವೆ. ಅಪರೂಪಕ್ಕೊಮ್ಮೆ ಬಳಸುವ ಆಪ್‌ಗಳು ಹಾಗಿರಲಿ, ನಾವು ಪದೇಪದೇ ಬಳಸುವ ಫೇಸ್‌ಬುಕ್ - ಗೂಗಲ್ ಮ್ಯಾಪ್ಸ್ ಮುಂತಾದವುಗಳದೂ ಇದೇ ಕತೆ.

ಈ ಸಮಸ್ಯೆಯನ್ನು ಮನಗಂಡ ಗೂಗಲ್ ಸಂಸ್ಥೆ ಈಗ ಕೆಲವರ್ಷಗಳ ಹಿಂದೆಯೇ ಆಂಡ್ರಾಯ್ಡ್ ಒನ್ ಎಂಬ ಹೆಸರಿನಲ್ಲಿ ಆಂಡ್ರಾಯ್ಡ್‌ ಕಾರ್ಯಾಚರಣ ವ್ಯವಸ್ಥೆಯ (ಆಪರೇಟಿಂಗ್ ಸಿಸ್ಟಂ, ಓಎಸ್) ಪ್ರತ್ಯೇಕ ಆವೃತ್ತಿಯನ್ನು ಪರಿಚಯಿಸಿದೆ. ಫೋನಿನ ಸಾಮರ್ಥ್ಯಕ್ಕೆ ತಕ್ಕಂತೆ ಸಂಪನ್ಮೂಲಗಳನ್ನು ಬಳಸುವ ತಂತ್ರಾಂಶಗಳು ಈ ಆವೃತ್ತಿಯ ವೈಶಿಷ್ಟ್ಯ. ಕಡಿಮೆ ಪ್ರಮಾಣದ ಬ್ಯಾಟರಿ ಬಳಸುವುದು, ಅನಗತ್ಯ ತಂತ್ರಾಂಶ ಸವಲತ್ತುಗಳನ್ನು ತೆಗೆದುಹಾಕುವುದು ಮುಂತಾದ ಕ್ರಮಗಳ ಮೂಲಕ ಈ ತಂತ್ರಾಂಶ ಕಡಿಮೆ ಸಾಮರ್ಥ್ಯದ ಮೊಬೈಲುಗಳಲ್ಲೂ ಸಮರ್ಪಕ ಕಾರ್ಯಾಚರಣೆಯನ್ನು ಸಾಧ್ಯವಾಗಿಸುತ್ತದೆ.

'ಓರಿಯೋ' ಎಂಬ ಹೆಸರಿನ ಆಂಡ್ರಾಯ್ಡ್‌ ಕಾರ್ಯಾಚರಣ ವ್ಯವಸ್ಥೆ ಇದೆಯಲ್ಲ, ಅದರ ಜೊತೆಯಲ್ಲೂ ಆಂಡ್ರಾಯ್ಡ್ ಒನ್‌ನಂಥದ್ದೇ ಇನ್ನೊಂದು ಪ್ರತ್ಯೇಕ ಆವೃತ್ತಿ ಇದೆ. 'ಗೋ ಎಡಿಶನ್' ಎಂಬ ಹೆಸರಿನ ಈ ಆವೃತ್ತಿ ಪ್ರಾರಂಭಿಕ ಹಂತದ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡಿದೆ. ಸಾಮಾನ್ಯಕ್ಕಿಂತ ಕಡಿಮೆ ಸ್ಥಳಾವಕಾಶ (ಮೆಮೊರಿ), ಕಡಿಮೆ ಡೇಟಾವನ್ನೆಲ್ಲ ಬಳಸುವ ಜೊತೆಗೆ ಜನಪ್ರಿಯ ಆಪ್‌ಗಳನ್ನು ಕಡಿಮೆ ಗಾತ್ರದ ಸಂಕ್ಷಿಪ್ತ ರೂಪದಲ್ಲಿ ಒದಗಿಸಿದ್ದು ಈ ಆವೃತ್ತಿಯ ಹೆಚ್ಚುಗಾರಿಕೆ.

ಆಂಡ್ರಾಯ್ಡ್ ಒನ್ ಆಗಲಿ ಗೋ ಎಡಿಶನ್ ಆಗಲಿ, ತಾಂತ್ರಿಕವಾಗಿ ಹೇಳುವುದಾದರೆ ಅವೆರಡೂ ಪ್ರತ್ಯೇಕ ಕಾರ್ಯಾಚರಣ ವ್ಯವಸ್ಥೆಗಳು. ಮೊಬೈಲಿಗೆ ಕಾರ್ಯಾಚರಣ ವ್ಯವಸ್ಥೆಯನ್ನು ಹಾಕುವುದು - ಸಾಮಾನ್ಯವಾಗಿ - ಮೊಬೈಲ್ ನಿರ್ಮಾತೃಗಳ ಕೆಲಸ. ಹೀಗಾಗಿ ಸಾಮಾನ್ಯ ಆಂಡ್ರಾಯ್ಡ್ ಬಳಸುವವರು ತಮ್ಮ ಓಎಸ್ ಅನ್ನು ಈ ಆವೃತ್ತಿಗೆ ಬದಲಿಸಿಕೊಳ್ಳುವುದು ಕಷ್ಟ.

ಹಾಗಾದರೆ ಸಾಮಾನ್ಯ ಆಂಡ್ರಾಯ್ಡ್ ಬಳಸುವ, ಕಡಿಮೆ ಬೆಲೆ - ಸಾಮರ್ಥ್ಯದ ಮೊಬೈಲ್ ಫೋನ್ ಗ್ರಾಹಕರು ಏನು ಮಾಡಬೇಕು? ಸದ್ಯ ಈ ಪ್ರಶ್ನೆಗೆ ದೊರಕುತ್ತಿರುವ ಉತ್ತರವೇ 'ಗೋ' ಆಪ್‌ಗಳ ಬಳಕೆ. ಮೇಲೆ ಹೇಳಿದ ಗೋ ಎಡಿಶನ್‌ನಲ್ಲಿ ಬಳಸಲೆಂದು ಮೂಲತಃ ಸೃಷ್ಟಿಯಾದ ಆಪ್‌ಗಳು ಇವು. ಕಾರ್ಯಾಚರಣ ವ್ಯವಸ್ಥೆಯನ್ನೇ ಬದಲಿಸುವುದಕ್ಕಿಂತ ನಾವು ಬಳಸುವ ಆಪ್ ಬದಲಿಸುವುದು ಬಹು ಸುಲಭ ಎನ್ನುವ ಚಿಂತನೆಯೊಡನೆ ಇವನ್ನು ಬಳಸುವ ಅವಕಾಶವನ್ನು ಆಂಡ್ರಾಯ್ಡ್ ಇತರ ಆವೃತ್ತಿಗಳ ಬಳಕೆದಾರರಿಗೂ ನೀಡಲಾಗುತ್ತಿದೆ. ಪ್ಲೇ ಸ್ಟೋರಿನಿಂದ ಸಾಮಾನ್ಯ ಆಪ್‌ಗಳನ್ನು ಪಡೆದುಕೊಳ್ಳುವಂತೆಯೇ ಇವನ್ನು ಕೂಡ ಇನ್‌ಸ್ಟಾಲ್ ಮಾಡಿಕೊಳ್ಳಬಹುದು ಎನ್ನುವುದು ವಿಶೇಷ.

ಸಾಮಾನ್ಯಕ್ಕಿಂತ ಹಲವು ಪಟ್ಟು ಕಡಿಮೆ ಗಾತ್ರದ (ಇನ್‌ಸ್ಟಾಲ್ ಸೈಜ್), ಬಹಳ ಕಡಿಮೆ ಸ್ಥಳಾವಕಾಶ (ಮೆಮೊರಿ) ಬಳಸುವ 'ಗೋ' ಆಪ್‌ಗಳ ಸಾಲಿನಲ್ಲಿ ಗೂಗಲ್ ಗೋ, ಗೂಗಲ್ ಅಸಿಸ್ಟೆಂಟ್ ಗೋ, ಜಿಮೇಲ್ ಗೋ, ಯೂಟ್ಯೂಬ್ ಗೋ, ಗೂಗಲ್ ಮ್ಯಾಪ್ಸ್ ಗೋ ಮುಂತಾದವೆಲ್ಲ ಈಗಾಗಲೇ ಇವೆ. ಮೊಬೈಲ್ ನಿಧಾನವಾಗಿದೆಯೆಂದೋ ಸ್ಥಳಾವಕಾಶ ಸಾಕಾಗುತ್ತಿಲ್ಲವೆಂದೋ ತೋರಿದರೆ ನಾವು ಮೂಲ ಆಪ್‌ಗಳನ್ನು ತೆಗೆದುಹಾಕಿ ಇವನ್ನು ಬಳಸಲು ಪ್ರಯತ್ನಿಸಬಹುದು. ಅಷ್ಟೇ ಏಕೆ, ನಮ್ಮ ಫೋನಿನಲ್ಲಿ ಎಷ್ಟು ಸ್ಥಳಾವಕಾಶ ಬಳಕೆಯಾಗುತ್ತಿದೆ ಎಂದು ಗಮನಿಸಿ ಅನಗತ್ಯ ಕಡತ ಹಾಗೂ ಆಪ್‌ಗಳನ್ನು ತೆಗೆದುಹಾಕಲು ನೆರವಾಗುವ ಫೈಲ್ಸ್ ಗೋ ಎನ್ನುವ ವಿಶೇಷ 'ಗೋ' ಆಪ್ ಕೂಡ ಪ್ಲೇಸ್ಟೋರಿನಲ್ಲಿ ಲಭ್ಯವಿದೆ.

ಗೂಗಲ್ ಜೊತೆಗೆ ಇನ್ನಿತರ ಹಲವು ಸಂಸ್ಥೆಗಳೂ ಇಂತಹ ಆಪ್‌ಗಳನ್ನು ರೂಪಿಸುತ್ತಿವೆ. ಸಾಕಷ್ಟು ವ್ಯಾಪಕವಾಗಿ ಬಳಕೆಯಾಗುವ ಯಾಹೂ ಮೇಲ್‌ನ ಸರಳ ಆವೃತ್ತಿ ಇದೀಗ 'ಯಾಹೂ ಮೇಲ್ ಗೋ' ಎನ್ನುವ ಹೆಸರಿನಲ್ಲಿ ಪ್ಲೇಸ್ಟೋರ್‌ ಮೂಲಕ ದೊರಕುತ್ತಿದೆ. ಫೇಸ್‌ಬುಕ್‌, ಲಿಂಕ್ಡ್‌ಇನ್ ಮುಂತಾದ ಹಲವು ಸಂಸ್ಥೆಗಳು ತಮ್ಮ ಆಪ್‌ನ ಸಂಕ್ಷಿಪ್ತ ಆವೃತ್ತಿಯನ್ನು 'ಲೈಟ್' ಎಂಬ ಬಾಲಂಗೋಚಿಯೊಡನೆ ಗುರುತಿಸಿವೆ (ಉದಾ: ಮೂಲ ಫೇಸ್‌ಬುಕ್ ಆಪ್‌ಗಿಂತ 'ಫೇಸ್‌ಬುಕ್ ಲೈಟ್' ಗಾತ್ರದಲ್ಲಿ ಹತ್ತಾರು ಪಟ್ಟು ಸಣ್ಣದು). ಹೀಗೆ ಯಾವೆಲ್ಲ ಆಪ್‌ಗಳ ಸಂಕ್ಷಿಪ್ತ ಆವೃತ್ತಿ ಲಭ್ಯವಿದೆ ಎನ್ನುವುದನ್ನೂ ಗೂಗಲ್ ಇದೀಗ ಪ್ಲೇಸ್ಟೋರಿನಲ್ಲೇ ಸಂದೇಶಗಳ ಮೂಲಕ ತಿಳಿಸಲು ಪ್ರಯತ್ನಿಸುತ್ತಿದೆ.

ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸದವರ - ಬಳಸಿಕೊಳ್ಳುವವರ ನಡುವಿನ ಅಂತರವನ್ನು ಡಿಜಿಟಲ್ ಕಂದಕ, ಅಥವಾ ಡಿಜಿಟಲ್ ಡಿವೈಡ್ ಎಂದು ಕರೆಯುವ ಅಭ್ಯಾಸವಿದೆ. ಐಟಿ ಸವಲತ್ತುಗಳ ಬಹುಪಾಲು ಬಳಕೆ ಮೊಬೈಲುಗಳ ಮೂಲಕವೇ ಆಗುತ್ತಿರುವ ಈ ಸಮಯದಲ್ಲಿ ಫೋನಿನ ಸಾಮರ್ಥ್ಯದಲ್ಲಿರುವ ವ್ಯತ್ಯಾಸ ಇನ್ನೊಂದು ಕಂದಕಕ್ಕೆ ಕಾರಣವಾಗದಿರಲಿ ಎನ್ನುವ ಉದ್ದೇಶದೊಡನೆ ಇಂತಹ ಸಂಕ್ಷಿಪ್ತ ಆವೃತ್ತಿಗಳು ಕಾಣಿಸಿಕೊಂಡಿವೆ. ಮೂಲ ಆವೃತ್ತಿಯಲ್ಲಿರುವ ಅಷ್ಟೂ ಸೌಲಭ್ಯ ಇಲ್ಲದಿದ್ದರೂ ಕೂಡ ಆ ಆಪ್‌ಗಳನ್ನು ಸಾಮಾನ್ಯ ಫೋನುಗಳಲ್ಲೂ ಬಳಸಲು ಸಾಧ್ಯವಾಗುವಂತೆ ಮಾಡಿರುವ ಇವುಗಳ ಉದ್ದೇಶ, ನಿಜಕ್ಕೂ, ಮೆಚ್ಚುವಂಥದ್ದು. ಈ ಪ್ರಯತ್ನ ಎಷ್ಟು ಉಪಯುಕ್ತ ಎನ್ನುವುದನ್ನು ಮಾತ್ರ ಗ್ರಾಹಕರೇ ತೀರ್ಮಾನಿಸಬೇಕು.

ಆಗಸ್ಟ್ ೮, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge