ಬುಧವಾರ, ಆಗಸ್ಟ್ 15, 2018

ಇಜ್ಞಾನ ವಿಶೇಷ: ಮೊಬೈಲ್ ಫೋನಿನಿಂದ ಸ್ವಾತಂತ್ರ್ಯ ಬೇಕಿದೆ!

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಕ್ಷೇತ್ರದ ಬಗೆಗಿನ ಮಾತು ಎಂದಾಕ್ಷಣ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಹಾಗೂ ರೋಬಾಟ್‌ಗಳ ಪ್ರಸ್ತಾಪ ಬರುವುದು ಈಚೆಗೆ ಸಾಮಾನ್ಯವಾಗಿರುವ ಸಂಗತಿ. ಎಐ ಹಾಗೂ ರೋಬಾಟ್‌ಗಳು ಮುಂದೊಮ್ಮೆ ಏನೆಲ್ಲ ಅನಾಹುತಗಳಿಗೆ ಕಾರಣವಾಗಬಹುದು ಗೊತ್ತೇ ಎನ್ನುತ್ತ ಭಯೋತ್ಪಾದನೆ ಮಾಡುವುದು ಕೂಡ ಈಗ ಹಲವರ ಫ್ಯಾಶನ್.

ಭವಿಷ್ಯದಲ್ಲಿ ರೋಬಾಟ್‌ಗಳು ನಮ್ಮನ್ನೆಲ್ಲ ಹಿಡಿತದಲ್ಲಿ ಇಟ್ಟುಕೊಳ್ಳುತ್ತವೋ ಇಲ್ಲವೋ ಎನ್ನುವ ಪ್ರಶ್ನೆಯನ್ನು ಸದ್ಯಕ್ಕೆ ಮರೆತು, ಮೊಬೈಲ್ ಫೋನಿನಂತಹ ಇಂದಿನ ಸಾಧನಗಳೇ ರೋಬಾಟ್‌ಗಳೆಂದು ಕೇವಲ ಅರೆಕ್ಷಣದ ಮಟ್ಟಿಗೆ ಭಾವಿಸಿ. ಇಂದಿನ ಈ ರೋಬಾಟ್‌ಗಳು ನಮ್ಮನ್ನು ಈಗಾಗಲೇ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿವೆ ಎನಿಸುವುದಿಲ್ಲವೇ?

ಹೌದು, ನಮ್ಮ ದಿನನಿತ್ಯದ ಬದುಕಿನ ಮೇಲೆ ಆಧುನಿಕ ತಂತ್ರಜ್ಞಾನದ ಕೊಡುಗೆಗಳಾದ ಗ್ಯಾಜೆಟ್‌ಗಳ ಪ್ರಭಾವ ಕೊಂಚ ಅತಿಯೇ ಎನಿಸುವಷ್ಟು ಹೆಚ್ಚಿದೆ. ಅದರಲ್ಲೂ ಮೊಬೈಲ್ ಫೋನಿನ ಪ್ರಭಾವದ ಬಗೆಗಂತೂ ಹೇಳುವುದೇ ಬೇಡ. ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವತನಕ ನಾವು ಪದೇಪದೇ ನಮ್ಮ ಮೊಬೈಲನ್ನು ನೋಡುತ್ತಲೇ ಇರುತ್ತೇವೆ. ನಿದ್ರೆಯ ನಡುವೆ ಎಚ್ಚರವಾದಾಗಲೂ ಒಮ್ಮೆ ಮೊಬೈಲಿನ ಪರದೆಯೊಳಗೆ ಇಣುಕಿನೋಡುವ ಜನ ಕೂಡ ಇದ್ದಾರೆ.

ಹಲವು ಸಮೀಕ್ಷೆಗಳ ಪ್ರಕಾರ ಸಾಮಾನ್ಯ ಮೊಬೈಲ್ ಬಳಕೆದಾರರು ಪ್ರತಿ ಹದಿನೈದರಿಂದ ಮೂವತ್ತು ನಿಮಿಷಗಳಲ್ಲಿ ಒಮ್ಮೆಯಾದರೂ ತಮ್ಮ ಮೊಬೈಲನ್ನು ತೆರೆದುನೋಡುತ್ತಾರಂತೆ. ಯುವ ಸಮುದಾಯದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು. ಹೀಗೆ ಮೊಬೈಲ್ ನೋಡುವ ಪರಿಪಾಠ ಬೆಳಿಗ್ಗೆ ಎದ್ದ ಕೆಲವೇ ನಿಮಿಷಗಳಲ್ಲಿ ಶುರುವಾದದ್ದು ರಾತ್ರಿ ಮತ್ತೆ ನಿದ್ರಿಸುವವರೆಗೂ ಮುಂದುವರೆಯುತ್ತದೆ. ಮೊಬೈಲ್ ಫೋನ್ ಇಲ್ಲದ ಸನ್ನಿವೇಶವನ್ನು ಕಲ್ಪಿಸಿಕೊಳ್ಳುವುದು ಹಾಗಿರಲಿ, ಮೊಬೈಲಿನ ಬ್ಯಾಟರಿಯಲ್ಲಿ ಚಾರ್ಜ್ ಇಲ್ಲದಿದ್ದರೂ ನಮಗೆ ಚಡಪಡಿಕೆ ಶುರುವಾಗಿಬಿಡುತ್ತದೆ.

ಮೊಬೈಲ್ ಫೋನ್ ಮೂಲತಃ ಒಂದು ಅದ್ಭುತ ಸಾಧನ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಸಮಸ್ಯೆ ಶುರುವಾಗುವುದೇನಿದ್ದರೂ ಅದರ ಬಳಕೆ ಮಿತಿಮೀರಿದಾಗ ಮಾತ್ರ. ಆಪ್ತರೊಡನೆ ಸದಾಕಾಲ ಸಂಪರ್ಕದಲ್ಲಿರಲು - ಜಗತ್ತಿನ ಮೂಲೆಮೂಲೆಗಳ ಮಾಹಿತಿಯನ್ನು ನಮ್ಮ ಅಂಗೈಯಲ್ಲೇ ಪಡೆದುಕೊಳ್ಳಲು ನೆರವಾಗುವ ಮೊಬೈಲ್ ಫೋನು, ಮಿತಿಮೀರಿ ಬಳಸಿದಾಗ ಏಕಾಗ್ರತೆಯ ಕೊರತೆ - ಮಾನಸಿಕ ಒತ್ತಡ ಮುಂತಾದ ಗಂಭೀರ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಮುಖಾಮುಖಿ ಸಂವಹನಕ್ಕೆ ಮೊಬೈಲ್ ಫೋನಿನಿಂದ ಸಾಕಷ್ಟು ಅಡಚಣೆ ಉಂಟಾಗುವುದನ್ನು ನಾವೆಲ್ಲ ನೋಡಿದ್ದೇವೆ. ಬೇರೊಬ್ಬರು ಮಾತನಾಡುವಾಗ ನಾವು ಮೊಬೈಲ್ ನೋಡಿಕೊಂಡು ಅವರತ್ತ ಗಮನಕೊಡದಿರುವ ಕೆಟ್ಟ ಅಭ್ಯಾಸಕ್ಕೆ ಫೋನ್ ಸ್ನಬ್ಬಿಂಗ್ ಅಥವಾ 'ಫಬ್ಬಿಂಗ್' ಎಂಬ ಹೆಸರೇ ಇದೆ (ಸ್ನಬ್ = ಮುಖಭಂಗ ಮಾಡು). ಮನೆ, ಕಚೇರಿ, ಹೋಟಲು, ಸಿನಿಮಾ ಮಂದಿರ ಸೇರಿದಂತೆ ಎಲ್ಲ ಕಡೆಗಳಲ್ಲೂ ಮೊಬೈಲ್ ಫೋನ್ ಹಾವಳಿಯಿಂದಾಗಿ ಪರಿಣಾಮಕಾರಿ ಸಂವಹನಕ್ಕೆ ಅಡಚಣೆ ಉಂಟಾಗುತ್ತಿದೆ.

ಏಕಾಗ್ರತೆಯ ಕೊರತೆ ಎಂದೆನಲ್ಲ, ಮಿತಿಮೀರಿದ ಮೊಬೈಲ್ ಬಳಕೆಯಿಂದ ನಮ್ಮ ಕೆಲಸದ ಗುಣಮಟ್ಟದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಇತರ ಚಟುವಟಿಕೆಗಳ ನಡುವೆ ಮೊಬೈಲ್ ಪರದೆಯನ್ನು ಆಗಾಗ್ಗೆ ನೋಡುವುದು, ಅತಿ ಜರೂರಿನ ಕೆಲಸವಿದ್ದಾಗಲೂ ಅದನ್ನು ಬಿಟ್ಟು ಮೊಬೈಲಿನಲ್ಲಿ ಮುಳುಗುವುದೆಲ್ಲ ಇದಕ್ಕೆ ಕಾರಣವಾಗುವ ಅಂಶಗಳು. ಕರೆಯೋ ಸಂದೇಶವೋ ಬಂದಾಗ ಅತ್ತ ನೋಡುವುದು ಹಾಗಿರಲಿ, ಕೆಲಹೊತ್ತು ಮೊಬೈಲ್ ಸುಮ್ಮನಿದ್ದರೆ ಅದು ಸರಿಯಿದೆಯೋ ಇಲ್ಲವೋ ಎಂದು ಪರೀಕ್ಷಿಸಿ ನೋಡುವುದೂ ನಮ್ಮಲ್ಲಿ ಅನೇಕರಿಗೆ ಅಭ್ಯಾಸವಾಗಿಬಿಟ್ಟಿದೆ.

ಮೊಬೈಲ್ ಫೋನಿನ ಪರದೆಯ ಮೇಲೆ ಮೂಡುವ ಮಾಹಿತಿ ನಮಗೆ ಕಾಣುವುದು ಅದರಿಂದ ಹೊರಹೊಮ್ಮುವ ಬೆಳಕಿನ ಮೂಲಕ. ಈ ಬೆಳಕನ್ನು ಹೆಚ್ಚು ಹೊತ್ತು ನೋಡುವುದರಿಂದ ನಮ್ಮ ನಿದ್ದೆಗೆ ಅಡ್ಡಿಯಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ನಿದ್ದೆಮಾಡುವುದನ್ನು ಬಿಟ್ಟು ಮೊಬೈಲ್ ಹಿಡಿದು ಕುಳಿತಾಗ ಮಾತ್ರವೇ ಅಲ್ಲ, ಈ ದುಷ್ಪರಿಣಾಮ ಮೊಬೈಲನ್ನು ಪಕ್ಕಕ್ಕಿಟ್ಟು ಮಲಗಿದ ನಂತರವೂ ಇರುತ್ತದಂತೆ.

ಮೊಬೈಲ್ ಪರದೆಯಿಂದ ಹೊರಹೊಮ್ಮುವ ಬೆಳಕು ನಮ್ಮ ದೇಹದಲ್ಲಿ ಉತ್ಪನ್ನವಾಗುವ ಮೆಲಟೋನಿನ್ ಎಂಬ ಹಾರ್ಮೋನಿನ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತದೆ. ಹಾಗಾಗಿಯೇ ರಾತ್ರಿ ಬಹಳ ಹೊತ್ತು ಮೊಬೈಲ್ ನೋಡಿ ಆನಂತರ ಮಲಗಿದರೂ ನಮಗೆ ಸುಲಭವಾಗಿ ನಿದ್ದೆ ಹತ್ತುವುದಿಲ್ಲ ಎನ್ನುವುದು ವಿಜ್ಞಾನಿಗಳ ಅಭಿಮತ. ಮೊಬೈಲ್ ಮಾತ್ರವೇ ಅಲ್ಲ, ಕಂಪ್ಯೂಟರ್, ಟ್ಯಾಬ್ಲೆಟ್, ಟೀವಿ ಮುಂತಾದ ಯಾವುದೇ ಪರದೆಯನ್ನೂ ಮಲಗುವ ಮುನ್ನ ಹೆಚ್ಚು ಕಾಲ ವೀಕ್ಷಿಸುವುದು ಒಳ್ಳೆಯದಲ್ಲ ಎಂದು ಅವರು ಹೇಳುತ್ತಾರೆ.

ಮಲಗುವ ಮುನ್ನ ಮಾತ್ರವೇ ಏಕೆ, ಬೇರೆ ಸಮಯಗಳಲ್ಲೂ ಆಗಿಂದಾಗ್ಗೆ ಮೊಬೈಲ್ ಮುಕ್ತರಾಗಿರುವುದು ಒಳ್ಳೆಯದು ಎಂದು ಹೇಳುವ ಆಂದೋಲನಗಳು ವಿಶ್ವದ ವಿವಿಧೆಡೆ ರೂಪುಗೊಳ್ಳುತ್ತಿವೆ. "ಮೊಬೈಲನ್ನು ಒಂದಷ್ಟು ಹೊತ್ತು ಪಕ್ಕಕ್ಕಿಟ್ಟು ಮನೆಯವರೊಡನೆ ಹರಟೆಹೊಡೆಯುವುದು, ಮಿತ್ರರೊಡನೆ ಹೊರಗೆ ಹೋಗುವುದು, ಮಕ್ಕಳೊಡನೆ ಆಟವಾಡುವುದೆಲ್ಲ ಬೇರೆಯದೇ ಅನುಭವ ನೀಡುತ್ತದೆ; ಅದನ್ನು ಒಂದು ದಿನವಾದರೂ ಪ್ರಯತ್ನಿಸಿ" ಎಂದು ಬಳಕೆದಾರರನ್ನು ಪ್ರೋತ್ಸಾಹಿಸಲು ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಾರ್ಚ್ ತಿಂಗಳ ಮೊದಲ ವಾರಾಂತ್ಯದಲ್ಲಿ  ಮೊಬೈಲ್ ರಹಿತ ದಿನಾಚರಣೆಯನ್ನೂ (ನ್ಯಾಶನಲ್ ಡೇ ಆಫ್ ಅನ್‌ಪ್ಲಗಿಂಗ್ ಎಂಬ ಹೆಸರಿನಲ್ಲಿ) ಆಚರಿಸಲಾಗುತ್ತಿದೆ. ಮೊಬೈಲ್ ಫೋನನ್ನು ಒಂದು ಚೀಲದಲ್ಲಿ ಹಾಕಿ ದಿನ ಪೂರ್ತಿ ನೆಮ್ಮದಿಯಾಗಿರಿ ಎಂದು ಹೇಳುವ ಸಂಸ್ಥೆಯೊಂದು ೨೦೧೮ರ ಅನ್‌ಪ್ಲಗಿಂಗ್ ದಿನದ ಸಂದರ್ಭದಲ್ಲಿ ೩೫,೦೦೦ ಅಂತಹ ಚೀಲಗಳನ್ನು ವಿತರಿಸಿತ್ತಂತೆ!

ಮಾರ್ಚ್ ತನಕ ಕಾಯುವುದೇಕೆ ಎನ್ನುವಂತಿದ್ದರೆ ನಾವು ಮೊಬೈಲ್ ರಹಿತ ದಿನಾಚರಣೆಯನ್ನು ಇಂದೇ ಆಚರಿಸಬಹುದು. ಮೊಬೈಲಿನಿಂದ ಕೊಂಚಹೊತ್ತಾದರೂ ಸ್ವತಂತ್ರರಾಗಿರಲು ಸ್ವಾತಂತ್ರ್ಯ ದಿನಕ್ಕಿಂತ ಒಳ್ಳೆಯ ಸಂದರ್ಭ ಬೇಕೇ?

1 ಕಾಮೆಂಟ್‌:

Unknown ಹೇಳಿದರು...

ಸಮಯೋಚಿತ ಮಾಹಿತಿ ಶ್ರೀನಿಧಿಯವರೇ.ನಾವೂ ಈಗ ಮೋಬೈಲ್ ಎಂಬ ಮಾಯಾಂಗನೆಯ ದಾಸರಾಗಿದ್ದೇವೆ.ಬಿಡಲು ಸ್ವಲ್ಪ ಕಷ್ಟವಾಗುತ್ತಿದೆ.ಆಗಾಗ ಅದರಲ್ಲಿ ಇಣುಕುವ ಹವ್ಯಾಸವಂತು ಬೆಳೆದಿದೆ.ಇನ್ನೂ ಸಾಮಾಜಿಕ ಜಾಲತಾಣಗಳಂತೂ ವೈಯಕ್ತಿಕ ತಾಣಗಳಾಗಿವೆ.ಅದರಲ್ಲೂ ಫೇಸ್‌ಬುಕ್‌ ಅಂತೂ ದಿನಚರಿಯ ಡೈರಿಯಾಗುತ್ತಿದೆ.ಬೆಳಿಗ್ಗೆ ಎಳುವುದರಿಂದ ಹಿಡಿದು ರಾತ್ರಿ ಬಿಳುವವರೆಗಿನ ಎಲ್ಲವೂ ದಾಖಲು.ಈ ಮನಸ್ಥಿತಿ ಯಾಕೆ ಬೆಳಿತಿದೆ ಅಂತ ಗೊತ್ತೆ ಆಗುತ್ತಿಲ್ಲ.ನಿಮಗೆ ಗೊತ್ತಿದ್ದರೆ ಹೇಳಿ.

ನಿಮ್ಮ ಮಾಹಿತಿಗೆ ಅಭಿನಂದನೆಗಳು.

badge