ಶುಕ್ರವಾರ, ಆಗಸ್ಟ್ 31, 2018

ವೀಕೆಂಡ್ ವಿಶೇಷ: ವೈ-ಫೈ ವಿಸ್ಮಯ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನ ಪ್ರಪಂಚದಲ್ಲಿ ಪ್ರತಿ ಕ್ಷಣವೂ ಒಂದಲ್ಲ ಒಂದು ಬಗೆಯ ಸಂವಹನ ನಡೆಯುತ್ತಿರುತ್ತದೆ. ನಮ್ಮ ಮನೆಗಳ ಉದಾಹರಣೆಯನ್ನೇ ತೆಗೆದುಕೊಂಡರೆ ಮೊಬೈಲ್ ಫೋನು, ಕಂಪ್ಯೂಟರು, ಟೀವಿ ಮುಂತಾದ ಹಲವಾರು ಬಗೆಯ ಸಾಧನಗಳೊಡನೆ ನಾವು ಪ್ರತಿದಿನವೂ ವ್ಯವಹರಿಸುತ್ತೇವೆ.

ಈ ವ್ಯವಹಾರವೆಲ್ಲ ತಂತಿಗಳ ಮೂಲಕವೇ ಆಗುವಂತಿದ್ದರೆ ಹೇಗಿರುತ್ತಿತ್ತು? ಮೊಬೈಲ್ ಫೋನುಗಳನ್ನು ಸಂಪರ್ಕಿಸುವ ನೂರಾರು ತಂತಿಗಳು ಪ್ರತಿ ಮೊಬೈಲ್ ಟವರಿನಿಂದಲೂ ಹೊರಟು ಬೀದಿಯಲ್ಲೆಲ್ಲ ಅವಾಂತರ ಸೃಷ್ಟಿಸುತ್ತಿದ್ದವು; ಟೀವಿಯನ್ನೂ ರಿಮೋಟನ್ನೂ ಸಂಪರ್ಕಿಸುವ ತಂತಿ ದಿವಾನಖಾನೆಯಲ್ಲಿ ಓಡಾಡುವಾಗೆಲ್ಲ ನಮ್ಮ ಕಾಲಿಗೆ ತೊಡರಿಕೊಳ್ಳುತ್ತಿತ್ತು!

ಇಂಥದ್ದೊಂದು ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಏಕೆಂದರೆ ನಿಸ್ತಂತು (ವೈರ್‌ಲೆಸ್) ತಂತ್ರಜ್ಞಾನ ನಮ್ಮ ಬದುಕನ್ನು ಅಷ್ಟರಮಟ್ಟಿಗೆ ಸರಳಗೊಳಿಸಿದೆ. ಟೀವಿ ರಿಮೋಟಿನಿಂದ ಮೊಬೈಲ್ ಫೋನಿನವರೆಗೆ ಅದೆಷ್ಟೋ ಕ್ಷೇತ್ರಗಳು ಈ ತಂತ್ರಜ್ಞಾನದಿಂದ ಪ್ರಭಾವಿತವಾಗಿರುವುದನ್ನು, ತಂತಿಗಳಿಂದ ಮುಕ್ತವಾಗಿರುವುದನ್ನು ನಾವು ಇಂದು ನೋಡಬಹುದು.

ಮನೆ, ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾವೆಲ್ಲ ವೈ-ಫೈ ಸೌಲಭ್ಯವನ್ನು ವ್ಯಾಪಕವಾಗಿ ಬಳಸುತ್ತೇವಲ್ಲ, ಅದು ಸಾಧ್ಯವಾಗಿರುವುದೂ ಈ ನಿಸ್ತಂತು ತಂತ್ರಜ್ಞಾನದಿಂದಾಗಿಯೇ.

ದೂರವಾಣಿಯ ತಂತಿಗಳು, ಟೀವಿಯ ಕೇಬಲ್ಲು, ಮೊಬೈಲ್ ಫೋನು - ಹೀಗೆ ಅಂತರಜಾಲಕ್ಕೆ ಸಂಪರ್ಕ ಕಲ್ಪಿಸಿಕೊಳ್ಳಲು ಹಲವು ಮಾರ್ಗಗಳಿವೆ. ಇಂತಹ ಯಾವುದೇ ಮಾರ್ಗದಲ್ಲಿ ಬರುವ ಮಾಹಿತಿ ನಮ್ಮನ್ನು ತಲುಪುವುದು ಕಂಪ್ಯೂಟರ್, ಟೀವಿ, ಮೊಬೈಲ್, ಟ್ಯಾಬ್ಲೆಟ್ ಮೊದಲಾದ ಸಾಧನಗಳ ಮೂಲಕ. ಆ ಮಾಹಿತಿ ಈ ಸಾಧನಗಳಿಗೆ ಅರ್ಥವಾಗುವಂತಿರಬೇಕು, ಹಾಗೂ ಈ ಸಾಧನಗಳ ಮೂಲಕ ನಾವು ಕಳುಹಿಸುವ ಮಾಹಿತಿ ಅದನ್ನು ಪಡೆಯುವವರಿಗೂ ಅರ್ಥವಾಗಬೇಕು. ಈ ಕೆಲಸವನ್ನು 'ಮೋಡೆಮ್' (ಮಾಡ್ಯುಲೇಟರ್-ಡಿಮಾಡ್ಯುಲೇಟರ್) ಎನ್ನುವ ಯಂತ್ರ ಮಾಡುತ್ತದೆ ಎನ್ನುವುದನ್ನು ಅಂತರಜಾಲದ ಪ್ರಾಥಮಿಕ ಪಾಠಗಳಲ್ಲಿ ನಾವು ಓದಿರುತ್ತೇವೆ.

ತಂತಿಯ ಮೂಲಕವೇ ಅಂತರಜಾಲ ಸಂಪರ್ಕ ಬಳಸುವುದಾದರೆ ಸರಿ, ಇಲ್ಲಿಗೆ ಕೆಲಸ ಮುಗಿಯಿತು ಎನ್ನಬಹುದು. ಆದರೆ ನಾವು ಈಗ ಬಳಸುವ ಲ್ಯಾಪ್‌ಟಾಪ್ -  ಟ್ಯಾಬ್ಲೆಟ್ ಮುಂತಾದ ಸಾಧನಗಳಲ್ಲಿ, ಅಮೆಜಾನ್ ಎಕೋ - ಗೂಗಲ್ ಹೋಮ್‍ನಂತಹ ಸ್ಮಾರ್ಟ್ ಸಹಾಯಕರಲ್ಲಿ ತಂತಿಗಳ ಗೊಡವೆಯಿಲ್ಲದ ಅಂತರಜಾಲ ಸಂಪರ್ಕ ಬಳಸುವುದೇ ಹೆಚ್ಚು ಸರಾಗ.

ಇಲ್ಲಿ ಕೆಲಸಕ್ಕೆ ಬರುವ ಸಾಧನವೇ ರೂಟರ್. ತನಗೆ ನೀಡಲಾದ ಅಂತರಜಾಲ ಸಂಪರ್ಕವನ್ನು, ರೇಡಿಯೋ ಅಲೆಗಳ ರೂಪದಲ್ಲಿ ಇತರ ಸಾಧನಗಳಿಗೆ ಹಂಚುವುದು ಈ ಸಾಧನದ ವೈಶಿಷ್ಟ್ಯ. ಕಣ್ಣಿಗೆ ಕಾಣದ ರೇಡಿಯೋ ಅಲೆಗಳ ರೂಪದಲ್ಲಿ ದೊರಕುತ್ತದಲ್ಲ ಈ ಸಂಪರ್ಕ, ನಾವು ವೈ-ಫೈ ಎಂದು ಗುರುತಿಸುವುದು ಅದನ್ನೇ.

ಬಹುತೇಕ ಸನ್ನಿವೇಶಗಳಲ್ಲಿ ಮೋಡೆಮ್ ಹಾಗೂ ರೂಟರ್‌ಗಳೆರಡೂ ಒಂದೇ ಸಾಧನದಲ್ಲಿ ಅಡಕವಾಗಿರುತ್ತದೆ. ಮೊಬೈಲ್ ಸಂಪರ್ಕವನ್ನು ವೈ-ಫೈ ಆಕರವಾಗಿ ಬಳಸುತ್ತೇವಲ್ಲ, ಆಗಲೂ ಅಷ್ಟೆ: ಈ ಕೆಲಸಕ್ಕೆ ಬೇಕಾದ ರೂಟರ್ ಮೊಬೈಲಿನೊಳಗೆಯೇ ಇರುತ್ತದೆ. ಇಂತಹ ಯಾವುದೇ ರೂಟರ್‌ನ ಆಂಟೆನಾದಿಂದ ಹೊರಹೊಮ್ಮುವ ಸಂಕೇತಗಳನ್ನು ಬಳಸಲು ಶಕ್ತವಾದ ಸಾಧನಗಳೆಲ್ಲವೂ ಅದರಿಂದ ಅಂತರಜಾಲ ಸಂಪರ್ಕವನ್ನು ಪಡೆದುಕೊಳ್ಳಬಲ್ಲವು. ಮೇಲೆ ಉದಾಹರಿಸಿದ ಬಹುತೇಕ ಸಾಧನಗಳು ಹೀಗೆ ವೈ-ಫೈ ಸಂಪರ್ಕ ಪಡೆದುಕೊಳ್ಳಬಲ್ಲವು. ಈ ಸೌಲಭ್ಯವಿಲ್ಲದ ಹಳೆಯ ಸಾಧನಗಳಿಗೂ (ಉದಾ: ಡೆಸ್ಕ್‌ಟಾಪ್) ವೈ-ಫೈ ಸಂಪರ್ಕ ನೀಡುವುದು ಸಾಧ್ಯ: ಇದಕ್ಕೆ ಬೇಕಾದ ವೈ-ಫೈ ರಿಸೀವರ್ ಅಥವಾ ಅಡಾಪ್ಟರ್ ಮಾರುಕಟ್ಟೆಯಲ್ಲಿ ಕೆಲವೇ ನೂರು ರೂಪಾಯಿಗಳಿಗೆ ದೊರಕುತ್ತದೆ.

ವಿವಿಧ ಬಗೆಯ ತರಂಗಗಳನ್ನು ಗಾಮಾ ಕಿರಣಗಳಿಂದ ರೇಡಿಯೋ ಅಲೆಗಳವರೆಗೆ ಪ್ರತ್ಯೇಕವಾಗಿ ಗುರುತಿಸುತ್ತಾರಲ್ಲ (ಇಲೆಕ್ಟ್ರೋಮ್ಯಾಗ್ನೆಟಿಕ್ ಸ್ಪೆಕ್ಟ್ರಂ), ಆ ಪೈಕಿ ವೈ-ಫೈ ಸಂವಹನಕ್ಕೆ ಬಳಕೆಯಾಗುವ ತರಂಗಗಳ ಸ್ಥಾನ ರೇಡಿಯೋ ಅಲೆಗಳಿಗೂ ಮೈಕ್ರೋ‌ವೇವ್ ತರಂಗಗಳಿಗೂ ನಡುವಿನದು. ಹೀಗೊಂದು ಪ್ರತ್ಯೇಕ ಸ್ಥಾನ ಇರುವುದರಿಂದಲೇ ಇತರ ತರಂಗಗಳಿಂದ ಯಾವ ಅಡಚಣೆಯೂ ಆಗದಂತೆ ವೈ-ಫೈ ಸಂವಹನ ನಡೆಸುವುದು ಸಾಧ್ಯವಾಗುತ್ತದೆ.

ತಮ್ಮ ಆಕರದಿಂದ ದೂರಹೋದಂತೆ ವೈ-ಫೈ ತರಂಗಗಳ ಸಾಮರ್ಥ್ಯ ಕಡಿಮೆಯಾಗುತ್ತದೆ. ಮರಗಿಡಗಳು, ಗೋಡೆಗಳು ಇದ್ದಾಗಲೂ ವೈ-ಫೈ ಕಾರ್ಯಾಚರಣೆಗೆ ಅಡ್ಡಿಯಾಗುವುದು ಸಾಧ್ಯ. ಹೀಗಾಗಿಯೇ ವೈ-ಫೈ ಜಾಲದ ವ್ಯಾಪ್ತಿ ಇಷ್ಟೇ ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ: ನಮ್ಮ ವೈ-ಫೈ ಜಾಲದ ವ್ಯಾಪ್ತಿ ಪಕ್ಕದ ಮನೆಯಿಂದ ಮುಂದಿನ ಬೀದಿವರೆಗೂ ಹರಡಿಕೊಂಡಿರುವುದು ಸಾಧ್ಯ. 'ಹಾಟ್‌ಸ್ಪಾಟ್' ಎಂದು ಗುರುತಿಸಲಾಗುವುದು ಈ ಪ್ರದೇಶವನ್ನೇ. ಈ ಪ್ರದೇಶದಲ್ಲಿರುವ ಯಾರು ಬೇಕಾದರೂ ಈ ಜಾಲದ ಮೂಲಕ ಅಂತರಜಾಲ ಸಂಪರ್ಕ ಪಡೆದುಕೊಳ್ಳಬಹುದು. ಇಂತಹ ಸಂಪರ್ಕಗಳು ಅನಧಿಕೃತವಾಗಿರುವ ಸಾಧ್ಯತೆಯನ್ನು ತಪ್ಪಿಸಲಿಕ್ಕಾಗಿಯೇ ವೈ-ಫೈ ಜಾಲಗಳನ್ನು ಯಾವಾಗಲೂ ಸಶಕ್ತ ಪಾಸ್‌ವರ್ಡ್ ಮೂಲಕ ಸಂರಕ್ಷಿಸಿಕೊಳ್ಳಬೇಕು.

ಸಾರ್ವಜನಿಕ ಜಾಲಗಳಲ್ಲಿ ವೈ-ಫೈ ಸಂಪರ್ಕ ಬಳಸುವಾಗಲೂ ಎಚ್ಚರಿಕೆ ಅಗತ್ಯ. ಇಂತಹ ಸಂಪರ್ಕಗಳನ್ನು ಯಾರುಬೇಕಾದರೂ ಉಪಯೋಗಿಸಬಹುದಾದ್ದರಿಂದ ಅಲ್ಲಿ ಕುತಂತ್ರಿಗಳಿರುವ ಸಾಧ್ಯತೆ ಖಂಡಿತಾ ಇರುತ್ತದೆ. ಹಾಗಾಗಿ ಅಲ್ಲಿ ಹಣಕಾಸು ವ್ಯವಹಾರ, ಖಾಸಗಿ ಮಾಹಿತಿಯ ರವಾನೆ ಮುಂತಾದವನ್ನು ಮಾಡದಿರುವುದು ಒಳ್ಳೆಯದು. ಕೆಲಸ ಮುಗಿದ ತಕ್ಷಣ ಇಂತಹ ಸಂಪರ್ಕಗಳನ್ನು ಕಡಿತಗೊಳಿಸುವುದು ಕೂಡ ಉತ್ತಮ ಅಭ್ಯಾಸ.

ಆಗಸ್ಟ್ ೨೨, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge