ಕಂಪ್ಯೂಟರ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ 'ಓಪನ್ ಸೋರ್ಸ್' ಪರಿಕಲ್ಪನೆಯ ರೂಪವೊಂದನ್ನು ೧೭೭ ವರ್ಷಗಳ ಹಿಂದೆಯೇ ಪರಿಚಯಿಸಿದ್ದು ಡಿಗೇರೋಟೈಪ್ ತಂತ್ರಜ್ಞಾನ. ಲೂಯಿ ಡಿಗೇರ್ ರೂಪಿಸಿದ ಈ ತಂತ್ರಜ್ಞಾನದ ಹಕ್ಕುಸ್ವಾಮ್ಯವನ್ನು ೧೮೩೯ರಲ್ಲಿ ಫ್ರೆಂಚ್ ಸರಕಾರ ಕೊಂಡು ಅದನ್ನು "ಮನುಕುಲಕ್ಕೆ ಕೊಡುಗೆ"ಯಾಗಿ ಸಮರ್ಪಿಸಿದ ದಿನವೇ ಆಗಸ್ಟ್ ೧೯. ಇದೀಗ ವಿಶ್ವ ಛಾಯಾಗ್ರಹಣ ದಿನವೆಂದು ನಾವು ಗುರುತಿಸುವುದು ಇದೇ ದಿನವನ್ನು. ಛಾಯಾಗ್ರಹಣದ ವಿಕಾಸ ಕುರಿತು ನಾವು ಹಿಂದೊಮ್ಮೆ ಪ್ರಕಟಿಸಿದ್ದ ಲೇಖನವನ್ನು ಈ ಸಂದರ್ಭದಲ್ಲಿ ಮರುಪ್ರಕಟಿಸುತ್ತಿದ್ದೇವೆ.
ಟಿ. ಜಿ. ಶ್ರೀನಿಧಿ
ಮನುಷ್ಯ ತನ್ನ ಕಣ್ಣಮುಂದಿನ ದೃಶ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಮಾಡದ ಪ್ರಯತ್ನವೇ ಇಲ್ಲ ಎನ್ನಬಹುದೇನೋ. ಶಿಲಾಯುಗದ ರೇಖಾಚಿತ್ರಗಳಿಂದ ಪರಿಣತರ ಕಲಾಕೃತಿಗಳವರೆಗೆ ಅನೇಕ ಸೃಷ್ಟಿಗಳ ಉದ್ದೇಶ ಇದೇ ಆಗಿರುವುದನ್ನು ನಾವು ಗಮನಿಸಬಹುದು.
ಆದರೆ ಇಂತಹ ಪ್ರಯತ್ನಗಳಿಗೆ ಒಂದು ದೊಡ್ಡ ಸಮಸ್ಯೆ ಅಡ್ಡಬರುತ್ತಿತ್ತು - ಕಂಡದ್ದನ್ನು ಕಂಡಂತೆ ಚಿತ್ರಿಸಲು ಎಲ್ಲರಿಗೂ ಬರುವುದಿಲ್ಲ, ಹಾಗೂ ನಮಗೆ ಬಂದಂತೆ ಚಿತ್ರಿಸಿದರೆ ಅದು ನಾವು ಕಂಡದ್ದನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ!
ಹಾಗಾದರೆ ನಾವು ಕಂಡದ್ದನ್ನು ಕಂಡಹಾಗೆಯೇ ದಾಖಲಿಸಿಟ್ಟುಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ಒಂದೆರಡಲ್ಲ.
ಇಂತಹ ಪ್ರಯತ್ನಗಳಲ್ಲೊಂದಾದ 'ಕ್ಯಾಮೆರಾ ಅಬ್ಸ್ಕ್ಯೂರಾ' (Camera Obscura, ಪಿನ್ಹೋಲ್ ಕ್ಯಾಮೆರಾ ಎಂದೂ ಪರಿಚಿತ) ನಮ್ಮ ಎದುರಿನ ದೃಶ್ಯದ ತಲೆಕೆಳಗಾದ ರೂಪವನ್ನು ಪರದೆಯ ಮೇಲೆ ಚಿಕ್ಕದಾಗಿ ಮೂಡಿಸಿ ಚಿತ್ರಕಾರರಿಗೆ ಅದನ್ನು ನಕಲು ಮಾಡಿಕೊಳ್ಳಲು ನೆರವಾಗುತ್ತಿತ್ತು. ಬೇಕಾದ ದೃಶ್ಯವನ್ನು ಕ್ಷಿಪ್ರವಾಗಿ ಬರೆದುಕೊಳ್ಳುವ ಕಲಾವಿದರಿಗೇನೋ ಸರಿ, ಆದರೆ ಚಿತ್ರಬಿಡಿಸಲು ಬಾರದವರಿಗೆ ಇದರಿಂದ ಯಾವ ಉಪಯೋಗವೂ ಆಗುತ್ತಿರಲಿಲ್ಲ.
ಚಿತ್ರಬಿಡಿಸಲು ಬಾರದವರೂ ಈ ತಂತ್ರ ಬಳಸಬೇಕೆಂದರೆ ಪರದೆಯ ಮೇಲೆ ಮೂಡುವ ಚಿತ್ರ ತನ್ನಷ್ಟಕ್ಕೆ ತಾನೇ ಒಂದೆಡೆ ದಾಖಲಾಗುವಂತಿರಬೇಕು. ಹಾಗೆಂದು ಯೋಚಿಸಿ ಕಾರ್ಯಪ್ರವೃತ್ತನಾದವನು ಫ್ರಾನ್ಸಿನ ನಿಸೆಫೋರ್ ನಿಯಪ್ಸ್ ಎಂಬ ವ್ಯಕ್ತಿ. ಕ್ಯಾಮೆರಾ ಅಬ್ಸ್ಕೂರಾದಲ್ಲಿ ಚಿತ್ರಕಾರರಿಗಾಗಿ ಇದ್ದ ಪರದೆಯ ಜಾಗದಲ್ಲಿ ರಾಸಾಯನಿಕವಾಗಿ ಸಂಸ್ಕರಿಸಿದ ಲೋಹದ ಫಲಕವನ್ನು ತಂದು ಕೂರಿಸಿ 'ಹೀಲಿಯೋಗ್ರಫಿ' ಎಂಬ ತಂತ್ರಜ್ಞಾನವನ್ನು ರೂಪಿಸಿದ್ದು ಇವನ ಸಾಧನೆ.