ಮಂಗಳವಾರ, ಜೂನ್ 7, 2016

ಪ್ರಣಯದಾಟವೂ ಕಾಂತಶಕ್ತಿಯೂ

ಕೊಳ್ಳೇಗಾಲ ಶರ್ಮ

ಪ್ರಣಯದಾಟ ಕಾಂತ-ಕಾಂತೆಯರ ನಡುವೆ ನಡೆಯುತ್ತದೆ. ಅದರಲ್ಲನೇನು ವಿಶೇಷ? ಎಂದಿರಾ? ನಿಜ. ಪ್ರಣಯದಾಟ ಗಂಡು-ಹೆಣ್ಣಿನ ನಡುವಿನ ಆಕರ್ಷಣೆಯ ಫಲ. ಗಂಡು ಹೆಣ್ಣನ್ನು ಆಕರ್ಷಿಸುತ್ತದೋ, ಹೆಣ್ಣು ಗಂಡನ್ನು ಆಕರ್ಷಿಸುತ್ತದೋ, ಗೊತ್ತಿಲ್ಲ. ಒಟ್ಟಾರೆ ಸಂತಾನಾಭಿವೃದ್ಧಿಯಲ್ಲಿ ಪ್ರಣಯದಾಟಗಳು ಪ್ರಮುಖ ಪಾತ್ರ ವಹಿಸುತ್ತವೆನ್ನುವುದು ಮಾತ್ರ ನಿಜ. ಈ ಆಟ ಕೇವಲ ಹೆಣ್ಣು, ಗಂಡಿನ ನಡುವಿನ ಆಕರ್ಷಣೆಯಲ್ಲ. ಇದರಲ್ಲಿ ಈ ಭೂಮಿಯ ಕಾಂತ ಶಕ್ತಿಯ ಪ್ರಭಾವವೂ ಇದೆಯಂತೆ.

ಗಂಡು-ಹೆಣ್ಣಿನ ನಡುವೆ ನಡೆಯುವ ಪ್ರಣಯಕೇಳಿಯನ್ನು ವಿದ್ಯುತ್ ಅಥವಾ ಅಯಸ್ಕಾಂತ ಶಕ್ತಿಯು ಪ್ರಭಾವಿಸುತ್ತದೆನ್ನುವ ಸ್ವಾರಸ್ಯಕರ (ಶಾಕಿಂಗ್ ಸುದ್ದಿ ಅಂದರೂ ಸರಿಯೇ. ಆಕರ್ಷಕ ಸುದ್ದಿ ಅಂದರೂ ಸರಿಯೇ!) ಸುದ್ದಿಯನ್ನು ತೈವಾನಿನ ಚಾಂಗ್ ಗುನ್ ವಿವಿಯ ವಿಜ್ಞಾನಿ ಚಿಯಾಲಿನ್ ವೂ ಮತ್ತು ಸಂಗಡಿಗರು ಇತ್ತೀಚಿನ ಪಿಎಲ್ಓಎಸ್ ಒನ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಇದು ಸುದ್ದಿ ಏಕೆಂದರೆ ಇದುವರೆವಿಗೂ ಅಯಸ್ಕಾಂತ ಹಾಗೂ ಕಾಂತವಲಯಗಳ ಪ್ರಭಾವವನ್ನು ಜೀವಿಗಳ ಚಲನೆಯ ಮೇಲಾಗುತ್ತದೆಂದಷ್ಟೆ ಗುರುತಿಸಲಾಗಿತ್ತು. ಆದರೆ ಈ ಸುದ್ದಿ ಕಾಂತವಲಯಗಳು ಸಂತಾನೋತ್ಪತ್ತಿಯ ಚಟುವಟಿಕೆಗಳನ್ನೂ ಪ್ರಭಾವಿಸುತ್ತದೆಂದು ಸೂಚಿಸಿವೆ. ಚಿಯಾಲಿನ್ ವೂ ತಂಡ ಈ ವಿದ್ಯಮಾನವನ್ನು ಹಣ್ಣಿನ ನೊಣ ಡ್ರೋಸೋಫಿಲಾ ಮೇಲೆ ನಡೆಸಿದ ಪ್ರಯೋಗಗಳ ಮೂಲಕ ಅರಿತುಕೊಂಡಿದೆ.

ಜೀವಿಗಳ ಮೇಲೆ ಕಾಂತ ವಲಯದ ಪ್ರಭಾವ ಇರುವ ಬಗ್ಗೆ ಅಚ್ಚರಿಯೇನಿಲ್ಲ. ಏಕೆಂದರೆ ಕೋಟ್ಯಂತರ ಜೀವಿಗಳ ನೆಲೆಯಾಗಿರುವ ಈ ಭೂಮಿಯೇ ಒಂದು ದೊಡ್ಡ ಅಯಸ್ಕಾಂತ. ಇದರ ಪ್ರಭಾವ ಜೀವಿಗಳ ಮೇಲೂ ಇರಬಹುದು. ಇದಕ್ಕೆ ಒಂದು ಉದಾಹರಣೆ ಎಂದರೆ ಚಿಟ್ಟೆ ಹಾಗೂ ಹಕ್ಕಿಗಳ ವಲಸೆ. ಹಕ್ಕಿಗಳು ವಲಸೆ ಹೋಗುವಾಗ ತಮ್ಮ ದಿಕ್ಕನ್ನು ಗುರುತಿಸಲು ಭೂಮಿಯ ಅಯಸ್ಕಾಂತದ ವಲಯಗಳನ್ನು ಬಳಸುತ್ತವೆ ಎಂದು ನಂಬಲಾಗಿದೆ. ಏಕೆಂದರೆ ಬೆಳಗಿನ ಹೊತ್ತು ವಲಸೆ ಹೋಗುವ ಹಕ್ಕಿಗಳಿಗೆ ಸೂರ್ಯ ದಿಕ್ಕು ತೋರಿಸುತ್ತಾನೆ. ಆದರೆ ರಾತ್ರಿ ಹೊತ್ತು ಸೂರ್ಯನಿಲ್ಲದಾಗಲೂ ದಿಕ್ಸೂಚಿಯಾಗಬಲ್ಲ ಸಂಗತಿ ಎಂದರೆ ಭೂಕಾಂತವಲಯ. ಹಕ್ಕಿಗಳು ಕಾಂತವಲಯದ ಪ್ರಭಾವದ ನೆರವಿನಿಂದ ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವಗಳನ್ನು ಗುರುತಿಸಿ ಹಾರುತ್ತಿರಬಹುದು ಎನ್ನುವ  ಬಗ್ಗೆ ಹಲವು ಪುರಾವೆಗಳಿವೆ.

ಕಾಂತ ವಲಯ ಎಂದರೆ ಒಂದು ಅಯಸ್ಕಾಂತದ ಪ್ರಭಾವ ಹರಡಿರುವ ನೆಲೆ. ಈ ಪ್ರಭಾವ ಅಯಸ್ಕಾಂತದ ಒಂದು ಧ್ರುವದಿಂದ ಮತ್ತೊಂದು ಧ್ರುವದ ವರೆಗೆ ವ್ಯಾಪಿಸಿರುತ್ತದೆ, ಈ ವಲಯದೊಳಗೆ ಯಾವುದೇ ವಿದ್ಯುತ್ ವಾಹಕ ವಸ್ತು ಬಂದರೂ ಅದರಲ್ಲಿ ವಿದ್ಯುತ್ ಅಥವಾ ಕಾಂತ ಶಕ್ತಿಯುಂಟಾಗಬಹುದು. ಧ್ರುವಗಳ ದಿಕ್ಕಿನಲ್ಲೇ ಇದ್ದಲ್ಲಿ ಹೀಗಾಗುವ ವಿದ್ಯುತ್ ಅಥವಾ ಕಾಂತ ಶಕ್ತಿಯ ಪ್ರಭಾವ ಹೆಚ್ಚು. ಧ್ರುವಗಳ ದಿಕ್ಕಿಗೆ ಅಡ್ಡಲಾಗಿದ್ದಲ್ಲಿ ಕಡಿಮೆ. ಈ ವಿದ್ಯಮಾನವನ್ನು ಬಳಸಿಕೊಂಡು ದಿಕ್ಸೂಚಿಗಳು ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವವನ್ನು ಸೂಚಿಸುತ್ತವಷ್ಟೆ. ಹಾಗೆಯೇ ತಮ್ಮೊಳಗಿರುವ ಕಿರು ಕಾಂತಗಳನ್ನು ಬಳಸಿಕೊಂಡು ಹಕ್ಕಿಗಳು ದಿಕ್ಕುಗಳನ್ನು ಗುರುತಿಸುತ್ತಿರಬಹುದು ಎನ್ನುವ ಊಹೆಯಿದೆ.

ಜೀವಿಗಳಲ್ಲಿ ಕಾಂತಶಕ್ತಿಯ ಸಂವೇದನೆ ಹೇಗಾಗುತ್ತದೆನ್ನುವ ಬಗ್ಗೆ ಹಲವು ಊಹೆಗಳಿವೆ. ಅಯಸ್ಕಾಂತದ ಜೊತೆಗೆ ಮೊಳೆಯನ್ನು ಉಜ್ಜಿದಾಗ ಮೊಳೆಯೂ ಅಯಸ್ಕಾಂತವಾಗುತ್ತದಷ್ಟೆ. ಇಂತಹ ವಿದ್ಯಮಾನದಿಂದ ಜೀವಿಗಳಲ್ಲಿರುವ ಅಣುಗಳೂ ಸೂಕ್ಷ್ಮ ಅಯಸ್ಕಾಂತಗಳಾಗಿ ಭೂಕಾಂತವನ್ನು ಗುರುತಿಸುತ್ತಿರಬಹುದೆನ್ನುವುದು ಮೊದಲ ಊಹೆ. ಮುಖ್ಯವಾಗಿ ಇದು ಸಮುದ್ರಜೀವಿಗಳಲ್ಲಿ ಆಗುತ್ತಿರಬಹುದೆಂದು ವಿಜ್ಞಾನಿಗಳು ನಂಬಿದ್ದರೂ ಸಾಕ್ಷಿಗಳು ದೊರೆತಿಲ್ಲ. ಅಥವಾ ಜೀವಿಗಳ ದೇಹದಲ್ಲಿ ಅತಿ ಸೂಕ್ಷ್ಮವಾದ ಕಾಂತಗುಣವುಳ್ಳ ವಸ್ತುಗಳಿರಬಹುದು. ಇವುಗಳು ಕಾಂತಶಕ್ತಿಯನ್ನು ಗ್ರಹಿಸುತ್ತಿರಬಹುದು ಎನ್ನುವ ಊಹೆಯೂ ಇದೆ. ಇದಕ್ಕೆ ಅನುಗುಣವಾಗಿ ಪಾರಿವಾಳಗಳ ಮಿದುಳಿನಲ್ಲಿ ಹಾಗೂ ಇನ್ನೂ ಕೆಲವು ಜೀವಿಗಳಲ್ಲಿ ಕಾಂತಗುಣವುಳ್ಳ ಸೂಕ್ಷ್ಮ ಹರಳುಗಳು ಸಿಕ್ಕಿವೆ. ಇವ್ಯಾವುದೂ ಇಲ್ಲದ ಕಡೆ ಕಾಂತ ಶಕ್ತಿಯ ಪ್ರಭಾವದಿಂದಾಗಿ ಕೆಲವು ರಾಸಾಯನಿಕ ಕ್ರಿಯೆಗಳಾಗುತ್ತಿರಬಹುದು. ಇವು ಕಾಂತ ಶಕ್ತಿಯನ್ನು ಗ್ರಹಿಸಲು ನೆರವಾಗುತ್ತಿರಬಹುದೆನ್ನುವ ಮತ್ತೊಂದು ವಾದವೂ ಇದೆ. ಇಂತಹ ರಾಸಾಯನಿಕ ಕ್ರಿಯೆಗಳು ಬೆಳಕಿಗೆ ಪ್ರತಿಕ್ರಿಯಿಸುವಂತಹ ಕೆಲವೇ ಜೀವಕೋಶಗಳಲ್ಲಿ ಆಗುತ್ತಿರಬಹುದು. ಕಾಂತಶಕ್ತಿಯಿಂದಾಗಿ ಆಗುವ ಕ್ರಿಯೆಗಳು ಬೆಳಕಿಗೆ ಪ್ರತಿಕ್ರಿಯಿಸುವಂತಹ ವಸ್ತುಗಳನ್ನು ಸೃಷ್ಟಿಸುತ್ತಿರಬಹುದೆನ್ನುವುದು ಮೂರನೆಯ ವಾದ. ಅರ್ಥಾತ್. ಕಾಂತ ಶಕ್ತಿಯನ್ನು ಗ್ರಹಿಸಲು ಕಾಂತಶಕ್ತಿಯಿರುವ ವಸ್ತುಗಳು ಇರಲೇಬೇಕಿಲ್ಲವೆನ್ನುತ್ತದೆ ಈ ವಾದ.  ಇದೀಗ ಚಿಯಾಲಿನ್ ವೂ ತಂಡ ಗುರುತಿಸಿರುವುದು ಈ ಮೂರನೆಯ ತೆರನ ಕಾಂತಶಕ್ತಿ ಸಂವೇದನೆ ಹಣ್ಣಿನ ನೊಣಗಳಲ್ಲಿ ಪ್ರಣಯಕೇಳಿಯನ್ನು ಉತ್ತೇಜಿಸುತ್ತದೆ ಎಂದು ಗುರುತಿಸಿದ್ದಾರೆ. ಡ್ರೊಸೊಫಿಲಾ ನೊಣಗಳಲ್ಲಿ ಕ್ರಿಪ್ಟೋಕ್ರೋಮುಗಳೆನ್ನುವ ಪ್ರೋಟೀನುಗಳು ಈ ಕೆಲಸ ಮಾಡುತ್ತಿರಬಹುದು ಎನ್ನುವ ಊಹೆ ವೂ ತಂಡದ್ದು.

ಕ್ರಿಪ್ಟೊಕ್ರೋಮುಗಳಿಗೂ ಪ್ರಾಣಿಗಳ ನಡವಳಿಕೆಗೂ ಸಂಬಂಧವಿರಬಹುದೆನ್ನುವ ಗುಮಾನಿ ಹೊಸತೇನಲ್ಲ. ಹಕ್ಕಿಗಳ ಕಣ್ಣಿನಲ್ಲಿ ಇಂತಹ ಪ್ರೊಟೀನುಗಳಿವೆ. ಇವು ಬೆಳಕಿನ ಕೆಲವು ವರ್ಣ ತರಂಗಗಳನ್ನು ಮಾತ್ರ ಸಂವೇದಿಸುತ್ತವೆ. ತನ್ಮೂಲಕ ಹಗಲು, ರಾತ್ರಿಯ ಕಾಲಗಣನೆಗೆ ನೆರವಾಗುತ್ತವೆ. ಇವುಗಳಿಂದಾಗಿ ಹಕ್ಕಿಗಳು ಹಗಲು, ರಾತ್ರಿಯೇನೆಂಬುದನ್ನು ಅರಿಯಬಲ್ಲುವು. ನೀಲಿ ಹಾಗೂ ನೇರಳಾತೀತ ಬೆಳಕಿನ ತರಂಗಗಳಿಗೆ ಸ್ಪಂದಿಸುವ ಕ್ರಿಪ್ಟೋಕ್ರೋಮುಗಳಲ್ಲಿ ಬೆಳಕಿನಿಂದ ಚುರುಕಾಗುವ ಫ್ಲೇವಿನ್ ಅಡೆನಿನ್ ಡೈನ್ಯೂಕ್ಲಿಯೋಟೈಡ್ ಎನ್ನುವ ರಾಸಾಯನಿಕವಿದೆ. ಇದು ಬೆಳಕನ್ನು ಹೀರಿಕೊಂಡು ರಾಸಾಯನಿಕ ಕ್ರಿಯೆಯನ್ನು ಆರಂಭಿಸುತ್ತದೆ. ದೃಷ್ಟಿಗೂ, ಹಗಲು-ರಾತ್ರಿಯ ವ್ಯತ್ಯಾಸವನ್ನು ತಿಳಿಯಲೂ ನೆರವಾಗುತ್ತದೆ. ಹಕ್ಕಿಗಳ ಕಣ್ಣುಗಳಲ್ಲಿ ಇಂತಹ ಹಲವು ಕ್ರಿಪ್ಟೋಕ್ರೋಮುಗಳನ್ನು ಗುರುತಿಸಲಾಗಿದೆ.

ಆದರೆ ಡ್ರೋಸೋಫಿಲಾದಲ್ಲಿ ಒಂದೇ ಒಂದು ಈ ಬಗೆಯ ಪ್ರೊಟೀನು ಇದೆ. ಇದುವೂ ಕಣ್ಣಿನಲ್ಲಿಲ್ಲ. ನೊಣದ ಮಿದುಳಿನಲ್ಲಿದೆ. ಅಲ್ಲಿ ಇದು ಹಗಲು-ರಾತ್ರಿಯನ್ನು ತಿಳಿಸುವ ಜೈವಿಕ ಗಡಿಯಾರವನ್ನು ಚಾಲಿಸುತ್ತಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.  ಈ ಹಿಂದೆ ಅಧ್ಯಯನದ ವೇಳೆ ಏಕತೆರನಾದ ಕಾಂತಶಕ್ತಿಯಲ್ಲಿ ನೊಣಗಳನ್ನು ಇಟ್ಟಾಗ ಅವುಗಳ ಜೈವಿಕ ಗಡಿಯಾರ ನಿಧಾನವಾಗಿ, ಕಾಲಪ್ರವೃತ್ತಿಗಳು ಏರುಪೇರಾಗಿದ್ದುವು. ಹಾಗಿದ್ದರೆ ಈ ಕ್ರಿಪ್ಟೋಕ್ರೋಮುಗಳು ಬೆಳಕನ್ನಷ್ಟೆ ಅಲ್ಲ, ಕಾಂತಶಕ್ತಿಯನ್ನೂ ಗ್ರಹಿಸಬಲ್ಲುವೇ ಎನ್ನುವ ಸಂದೇಹವೆದ್ದಿತ್ತು.

ಇದನ್ನು ತೀರ್ಮಾನಿಸಲು ವೂ ಮತ್ತು ಸಂಗಡಿಗರು ನೊಣಗಳನ್ನು ಪ್ರಣಯಕೇಳಿಯಾಡಿಸಿದರು. ನೊಣಗಳಲ್ಲಿ ಪ್ರಣಯದಾಟ ಯಾವಾಗೆಂದರೆ ಆವಾಗ ನಡೆಯುವುದಿಲ್ಲ. ಏನಿದ್ದರೂ ಕತ್ತಲಾಗಬೇಕು. ಅದು ಅವಕ್ಕೆ ತಿಳಿಯಬೇಕು. ಅರ್ಥಾತ್ ಇದು ಜೈವಿಕ ಗಡಿಯಾರದ ನಿಯಂತ್ರಣದಲ್ಲಿರುವ ಒಂದು ಚಟುವಟಿಕೆ. ಭೂಮಿಯ ಕಾಂತಶಕ್ತಿಯ ಹತ್ತುಪಟ್ಟು ಹೆಚ್ಚು ಕಾಂತಶಕ್ತಿಯಿರುವ ಒಂದು ಸಾಧನವನ್ನು ಇವರು ನಿರ್ಮಿಸಿದರು. ಈ ರಂಗಮಂಚದಲ್ಲಿ ವಿವಿಧ ತಳಿಯ ಗಂಡು-ಹೆಣ್ಣುಗಳನ್ನು ಬಿಡಲಾಯಿತು. ವಿವಿಧ ಕಾಂತಶಕ್ತಿಯನ್ನು ನಿರ್ಮಿಸಿ ಗಂಡು-ಹೆಣ್ಣುಗಳ ಚಟವಟಿಕೆಯನ್ನು ಗಮನಿಸಲಾಯಿತು. ಗಂಡುಗಳು ಹೆಣ್ಣನ್ನು ಆಕರ್ಷಿಸಲು ಅವನ್ನು ಮುಟ್ಟುತ್ತವೆ. ಒತ್ತರಿಸಿಕೊಂಡು ನಡೆಯುತ್ತವೆ. ಬಳಿಸಾರಿ ರೆಕ್ಕೆಗಳನ್ನು ಬಡಿಯುತ್ತವೆ. ಮೀಸೆಯಿಂದ ಬಡಿಯುತ್ತವೆ. ಹತ್ತು ನಿಮಿಷದಲ್ಲಿ ಅವು ಇಂತಹದುವನ್ನು ಎಷ್ಟು ಬಾರಿ ಮಾಡುತ್ತವೆನ್ನುವುದೇ ಪ್ರಣಯದಾಟದ ಉತ್ಕಟತೆಯ ಸೂಚಿ.

ಕಾಂತಶಕ್ತಿ ಹೆಚ್ಚಾದಂತೆ ಗಂಡುಗಳ ಪ್ರಣಯದಾಟವೂ ಉತ್ಕಟವಾಯಿತು. ಇವರು ಉಪಯೋಗಿಸಿದ ಮೂರು ವಿಭಿನ್ನ ತಳಿಗಳಲ್ಲಿ ವ್ಯತ್ಯಾಸವಿದ್ದರೂ, ಕಾಂತಶಕ್ತಿ ಬಳಸಿದಾಗ ಪ್ರಣಯದಾಟ ಸಾಮಾನ್ಯಕ್ಕಿಂತಲೂ ಹೆಚ್ಚುತ್ತಿದ್ದುದು ಕಂಡು ಬಂತು. ಇದಕ್ಕೂ ಬೆಳಕಿಗೂ ಏನಾದರೂ ಸಂಬಂಧವಿದೆಯೋ ಎನ್ನುವುದನ್ನು ಗಮನಿಸಲು ವೂ ಮತ್ತೊಂದು ಪ್ರಯೋಗ ಮಾಡಿದರು. ಕಾಂತಶಕ್ತಿಯನ್ನು ಹೆಚ್ಚಿಸಿ, ನೀಲಿ ಬೆಳಕನ್ನು ಮಂದವಾಗಿಸಿದರು. ಈ ಸಂದರ್ಭದಲ್ಲಿ ಗಂಡುಗಳಾಟ ತುಸು ಕಡಿಮೆಯಾಯಿತು.

ಹೀಗೇಕೆ ಎನ್ನುವುದನ್ನು ತಿಳಿಯಲು  ಜೈವಿಕ ತಂತ್ರಜ್ಞಾನದ ಮೂಲಕ ಕ್ರಿಪ್ಟೊಕ್ರೋಮ್ ಪ್ರೋಟೀನನ್ನು ತಯಾರಿಸಲಾಗದ ನೊಣದ ತಳಿಗಳನ್ನು ಸೃಷ್ಟಿಸಿದರು. ಈ ತಳಿಯ ಗಂಡು-ಹೆಣ್ಣುಗಳನ್ನು ತಮ್ಮ ಕಾಂತಸಾಧನದೊಳಗಿಟ್ಟು ಕಾಂತಶಕ್ತಿಯನ್ನು ಹೆಚ್ಚಿಸಿದರು. ಗಂಡು-ಹೆಣ್ಣುಗಳ ಆಟ ಹೆಚ್ಚಿತೇ ಎಂದು ಗಮನಿಸಿದರು. ಕ್ರಿಪ್ಟೊಕ್ರೋಮ್ ಪ್ರೊಟೀನುಗಳಿಲ್ಲದ ನೊಣಗಳಲ್ಲಿ ಕಾಂತಶಕ್ತಿಯ ಪ್ರಭಾವ ಇಲ್ಲವೇ ಇಲ್ಲ ಎನ್ನುವಂತಿತ್ತು.

ಅಂದರೆ ಈ ಪ್ರೊಟೀನುಗಳು ಕಾಂತಶಕ್ತಿಯನ್ನು ಹೇಗೋ ಸಂವೇದಿಸಿ, ರಾಸಾಯನಿಕ ಕ್ರಿಯೆಗಳ ಮೂಲಕ ಮಿದುಳಿಗೆ ಸೂಚಿಸುತ್ತವೆ ಎನ್ನುವ ಅನುಮಾನವುಂಟಾಗುತ್ತದಷ್ಟೆ! ಇದನ್ನು ಸ್ಪಷ್ಟ ಪಡಿಸಿಕೊಳ್ಳಲು ನೊಣಗಳ ಮಿದುಳಿನಲ್ಲಿ ಜೈವಿಕ ಗಡಿಯಾರಗಳನ್ನು ಪ್ರತಿನಿಧಿಸುವ ನರಕೋಶಗಳನ್ನು ರಾಸಾಯನಿಕವಾಗಿ ಪ್ರಚೋದಿಸಿ ಪ್ರಯೋಗ ಮಾಡಿದರು. ಹೀಗೆ ರಾಸಾಯನಿಕವಾಗಿ ಪ್ರಚೋದಿಸಿದ ನೊಣಗಳು ಕ್ರಿಪ್ಟೋಕ್ರೋಮು ಪ್ರೊಟೀನು ತಯಾರಿಸುವ ಸಾಮರ್ಥ್ಯವಿಲ್ಲದಿದ್ದರೂ ಕಾಂತಶಕ್ತಿ ಹೆಚ್ಚಿದಂತೆ ಹೆಚ್ಚೆಚ್ಚು ಹೆಣ್ಣುಗಳ ಹಿಂದೆ ಬಿದ್ದುವು. ಅರ್ಥಾತ್, ಕ್ರಿಪ್ಟೊಕ್ರೋಮುಗಳು ಬೆಳಕಿಗಷ್ಟೆ ಅಲ್ಲ, ಕಾಂತಶಕ್ತಿಯನ್ನು ಗ್ರಹಿಸುತ್ತವೆ ಎನ್ನುವುದು ಹೀಗೆ ಸ್ಪಷ್ಟವಾಗಿದೆ. ಬೆಳಕಿನ ಗ್ರಹಿಕೆಗೂ, ಇತರೆ ಸಂವೇದನೆಗಳಿಗೂ, ಜೈವಿಕ ಗಡಿಯಾರಕ್ಕೂ ನಂಟು ಇದೆ ಎನ್ನುವುದಕ್ಕೆ ಮತ್ತೊಂದು ಪುರಾವೆ ದೊರೆತಿದೆ ಎನ್ನಬಹುದು.

ಹೆಚ್ಚಿನ ಓದಿಗೆ: Wu C-L, Fu T-F, Chiang M-H, Chang Y-W, Her J-L, Wu T (2016) Magnetoreception Regulates Male Courtship Activity in Drosophila

ಮೇ ೩೦, ೨೦೧೬ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge