ಬುಧವಾರ, ಜೂನ್ 8, 2016

ಗ್ಯಾಜೆಟ್ ಇಜ್ಞಾನ: ಹೊಸ ಲೆನೋವೋ‌ ಫೋನ್ ಸದ್ಯದಲ್ಲೇ ಮಾರುಕಟ್ಟೆಗೆ

ಟಿ. ಜಿ. ಶ್ರೀನಿಧಿ



ಅಪ್‌ಡೇಟ್: ಲೆನೋವೋ ವೈಬ್ K5 ರೂ. ೬,೯೯೯ರ ಮುಖಬೆಲೆಯೊಡನೆ ಬಿಡುಗಡೆಯಾಗಿದೆ. 

ಈಚಿನ ದಿನಗಳಲ್ಲಿ ನಮ್ಮ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುವೇ ಇಲ್ಲ. ಹಲವು ಮೊಬೈಲ್ ನಿರ್ಮಾತೃಗಳ ಹತ್ತಾರು ಮಾದರಿಯ ಹೊಸ ಫೋನುಗಳು ಸದಾಕಾಲ ಸುದ್ದಿಮಾಡುತ್ತಲೇ ಇರುತ್ತವೆ.

ಈ ಬಿಡುವಿಲ್ಲದ ಚಟುವಟಿಕೆಯಿಂದಾಗಿ ಮೊಬೈಲ್ ಗ್ರಾಹಕರಿಗೆ ಲಭ್ಯವಿರುವ ಆಯ್ಕೆಗಳು ದಿನೇದಿನೇ ಹೆಚ್ಚುತ್ತಿವೆ. ಅಷ್ಟೇ ಅಲ್ಲ, ಮೊಬೈಲಿನಲ್ಲಿ ದೊರಕುವ ಸೌಲಭ್ಯಗಳೂ ಹೆಚ್ಚುತ್ತಿವೆ. ಮೊದಲಿಗೆ ದುಬಾರಿ ಫೋನುಗಳಲ್ಲಷ್ಟೆ ಕಾಣಿಸಿಕೊಂಡ ಅದೆಷ್ಟೋ ಅನುಕೂಲಗಳು ಅವುಗಳ ಹೋಲಿಕೆಯಲ್ಲಿ ಸಾಕಷ್ಟು ಕಡಿಮೆ ಬೆಲೆಯ ಮಾದರಿಗಳಲ್ಲೂ ಸಿಗುತ್ತಿವೆ. ಹಾಗಾಗಿಯೇ ಏನೋ, ಹತ್ತು ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಸಾಕಷ್ಟು ಉತ್ತಮವಾದ ಫೋನ್ ಕೊಳ್ಳುವುದು ಇದೀಗ ಸಾಧ್ಯವಾಗಿದೆ.

ಹಾಗೆಂದು ಎಲ್ಲಾದರೂ ಸುಮ್ಮನಿರುವುದು ಸಾಧ್ಯವೇ, ಉತ್ತಮ ಮೊಬೈಲ್ ಫೋನುಗಳನ್ನು ಅದಕ್ಕಿಂತ ಕಡಿಮೆ ಬೆಲೆಯಲ್ಲಿ ನೀಡುವ ಪ್ರಯತ್ನಗಳೂ ಸಾಗಿವೆ. ಕಳೆದ ವರ್ಷ ಮಾರುಕಟ್ಟೆಗೆ ಬಂದು ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದ ಲೆನೋವೋ A6000 ಹಾಗೂ A6000 ಪ್ಲಸ್ ಇಂತಹ ಫೋನುಗಳಿಗೆ ಉತ್ತಮ ಉದಾಹರಣೆಗಳು.

ಈ ಪ್ರಯತ್ನದ ಮುಂದುವರೆದ ಅಂಗವಾಗಿ ಲೆನೋವೋ ಸಂಸ್ಥೆ ತನ್ನ 'ವೈಬ್ K5' ಮಾದರಿಯನ್ನು ಈ ತಿಂಗಳು (ಜೂನ್ ೨೦೧೬) ಭಾರತೀಯ ಮಾರುಕಟ್ಟೆಗೆ ಬಿಡುಗಡೆಮಾಡುವ ನಿರೀಕ್ಷೆಯಿದೆ.
ಫೆಬ್ರುವರಿ ತಿಂಗಳಲ್ಲಿ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಂದರ್ಭದಲ್ಲಿ ಈ ಮಾದರಿಯನ್ನು ಪರಿಚಯಿಸಲಾಗಿತ್ತು. ಅದೇ ಸಂದರ್ಭದಲ್ಲಿ ಪರಿಚಯಿಸಲಾಗಿದ್ದ 'ವೈಬ್ K5 ಪ್ಲಸ್' ಈಗಾಗಲೇ ಮಾರುಕಟ್ಟೆಯಲ್ಲಿದೆ [ಫ್ಲಿಪ್‌ಕಾರ್ಟ್‌ನಲ್ಲಿ ಕೊಳ್ಳಿ].

೧.೪ ಗಿಗಾಹರ್ಟ್ಸ್‌ನ ಸ್ನಾಪ್‌ಡ್ರಾಗನ್ ೪೧೫ ಆಕ್ಟಾ-ಕೋರ್ ಪ್ರಾಸೆಸರ್ ಬಳಸುವ ಈ ಆಂಡ್ರಾಯ್ಡ್ ಫೋನು ೨ಜಿಬಿ ರ್‍ಯಾಮ್ ಹಾಗೂ ೧೬ ಜಿಬಿ ಶೇಖರಣಾ ಸಾಮರ್ಥ್ಯ ಹೊಂದಿದೆ. ಆಕರ್ಷಕ ಅಲ್ಯೂಮಿನಿಯಂ ಕವಚದಿಂದ ಗಮನಸೆಳೆಯುವ ವೈಬ್ K5 ಫೋನಿನಲ್ಲಿ ಐದು ಇಂಚಿನ ಎಚ್‌ಡಿ (೧೨೮೦*೭೨೦ ಪಿಕ್ಸೆಲ್) ಪರದೆ, ೧೩ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ೫ ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, ೩೨ಜಿಬಿವರೆಗಿನ ಮೆಮೊರಿ ಕಾರ್ಡ್ ಬಳಸುವ ಸಾಮರ್ಥ್ಯ ಹಾಗೂ ಎರಡು ೪ಜಿ ಸಿಮ್ ಬಳಸುವ ಸೌಲಭ್ಯವಿದೆ. ಇದರ ಬ್ಯಾಟರಿ ೨೭೫೦ ಎಂ‌ಎ‌ಎಚ್ ಸಾಮರ್ಥ್ಯದ್ದು. ಕೊಂಚಮಟ್ಟಿಗೆ ಹೆಚ್ಚಿನ ಸೌಲಭ್ಯಗಳಿರುವ ವೈಬ್ K5 ಪ್ಲಸ್ ಮಾದರಿಯ ಬೆಲೆ ರೂ. ೮,೪೯೯ ಎನ್ನುವುದನ್ನು ಗಮನಿಸಿದರೆ K5 ಬೆಲೆ ಅದಕ್ಕಿಂತ ಕಡಿಮೆಯಿರುವುದು ಬಹುತೇಕ ಖಚಿತ ಎನ್ನಬಹುದು.

ಕಳೆದ ವರ್ಷ A6000 ಗಳಿಸಿದಂತಹ ಯಶಸ್ಸನ್ನೇ ವೈಬ್ K5 ಕೂಡ ಪಡೆಯಲಿದೆಯೇ? ಇದೊಂದು ಮಾತ್ರ ಕಾದುನೋಡಬೇಕಾದ ವಿಷಯ.

ಕಾಮೆಂಟ್‌ಗಳಿಲ್ಲ:

badge