ಮಂಗಳವಾರ, ಫೆಬ್ರವರಿ 9, 2016

ಎಲ್‌ಇಡಿ ಬೆಳಗೋಣ ಬನ್ನಿ!

ಇಜ್ಞಾನ ವಾರ್ತೆ

ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಕೆಲವು ಸರಳ ಆದರೂ ಪರಿಣಾಮಕಾರಿಯಾದ ಕ್ರಮಗಳನ್ನು ನಾವೂ ಕೈಗೊಳ್ಳಬಹುದು. ವಿದ್ಯುತ್ ಬಳಕೆಯನ್ನು ಮಿತಗೊಳಿಸುವುದು ಇಂತಹ ಕ್ರಮಗಳಲ್ಲೊಂದು. ಇದನ್ನು ಸಾಧ್ಯವಾಗಿಸುವ ಒಂದು ಮಾರ್ಗ ಎಲ್‌ಇಡಿ ಬಲ್ಬುಗಳ ಬಳಕೆ [ಎಲ್ಲೆಲ್ಲೂ ಎಲ್‌ಇಡಿ]. ಎಲ್‌ಇಡಿ ಬಲ್ಬುಗಳು ಹೆಚ್ಚಿನ ಪ್ರಕಾಶ ನೀಡುವುದಷ್ಟೇ ಅಲ್ಲ, ಕಡಿಮೆ ವಿದ್ಯುತ್ ಬಳಸುವ ಮೂಲಕ ಜೇಬಿನ ಮೇಲಿನ ಒತ್ತಡವನ್ನೂ ಕಡಿಮೆಮಾಡುತ್ತವೆ!

ಈ ವಿಷಯ ಗೊತ್ತಿದ್ದರೂ ಎಲ್‌ಇಡಿ ಬಲ್ಬುಗಳ ದುಬಾರಿ ಬೆಲೆಯಿಂದಾಗಿ ಅನೇಕರು ಅವುಗಳಿಂದ ದೂರವೇ ಉಳಿದಿದ್ದರು. ಈಗ, ಕೇಂದ್ರ ಸರಕಾರದ 'ಡೊಮೆಸ್ಟಿಕ್ ಎಫೀಶಿಯೆಂಟ್ ಲೈಟಿಂಗ್ ಪ್ರೋಗ್ರಾಮ್ (ಡಿಇಎಲ್‌ಪಿ)' ದೆಸೆಯಿಂದ ಎಲ್‌ಇಡಿ ಬಲ್ಬುಗಳ ಬೆಲೆ ಕೈಗೆಟುಕುವ ಮಟ್ಟಕ್ಕೆ ಬಂದು ತಲುಪಿದೆ. ಈ ಕಾರ್ಯಕ್ರಮದನ್ವಯ ಒಂಬತ್ತು ವ್ಯಾಟ್‌ನ ಎಲ್‌ಇಡಿ ಬಲ್ಬುಗಳನ್ನು ತಲಾ ನೂರು ರೂಪಾಯಿಯಂತೆ ಬಳಕೆದಾರರಿಗೆ ತಲುಪಿಸಲಾಗುತ್ತಿದೆ. ಅದೂ ಅಂತಿಂಥ ಚೀನಾ ಮಾಲಲ್ಲ, ಹೆಸರಾಂತ ಸಂಸ್ಥೆಗಳು ತಯಾರಿಸುವ ಬಲ್ಬನ್ನೇ!

ಈ ಯೋಜನೆಯ ಹಿಂದಿರುವುದು ಭಾರತ ಸರಕಾರದ ಎನರ್ಜಿ ಎಫಿಶಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಎಂಬ ಸಂಸ್ಥೆ.
ಕರ್ನಾಟಕ ಸರಕಾರದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ವಿದ್ಯುಚ್ಛಕ್ತಿ ಸರಬರಾಜು ಸಂಸ್ಥೆಗಳು ನಮ್ಮ ರಾಜ್ಯದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿವೆ.

ನಾಲ್ಕೈದುನೂರು ರೂಪಾಯಿ ಮುಖಬೆಲೆಯ, ಆನ್‌ಲೈನ್ ಆಫರುಗಳ ಮೂಲಕ ಇನ್ನೂರು-ಮುನ್ನೂರು ರೂಪಾಯಿಗಳಿಗೆ ದೊರಕುವ ಒಂಬತ್ತು ವ್ಯಾಟಿನ ಎಲ್‌ಇಡಿ ಬಲ್ಬುಗಳನ್ನು ಕೇವಲ ನೂರು ರೂಪಾಯಿಗೆ ಇದೀಗ ನಾವೂ ಪಡೆಯಬಹುದು. ಪ್ರತಿಯೊಬ್ಬ ಗ್ರಾಹಕರಿಗೂ ಕನಿಷ್ಟ ಐದರಿಂದ ಗರಿಷ್ಟ ಹತ್ತು ಬಲ್ಬುಗಳನ್ನು ನೀಡಲಾಗುತ್ತದೆ, ಪಡೆಯಲು ನಿಮ್ಮ ಇತ್ತೀಚಿನ ವಿದ್ಯುತ್ ಬಿಲ್ ಹಾಗೂ ಯಾವುದಾದರೂ ಗುರುತಿನ ಚೀಟಿಯೊಡನೆ (ಉದಾ: ಆಧಾರ್) ನಿಮ್ಮೂರಿನ ವಿದ್ಯುತ್ ಸರಬರಾಜು ಕಚೇರಿಗೆ ಭೇಟಿಕೊಡಬಹುದು.

ವಿದ್ಯುತ್ ಸರಬರಾಜು ಸಂಸ್ಥೆಯ ಕಚೇರಿ ಹುಡುಕಿಕೊಂಡು ಹೋಗಲು ಪುರುಸೊತ್ತಿಲ್ಲ ಎನ್ನುವವರು ಈ ಯೋಜನೆಯಡಿ ಲಭ್ಯವಿರುವ ಬಲ್ಬುಗಳನ್ನು ಆನ್‌ಲೈನಲ್ಲೂ ಕೊಳ್ಳುವುದು ಸಾಧ್ಯವಿದೆ. ಇದಕ್ಕಾಗಿ ಇಇಎಸ್‌ಎಲ್ ಸಂಸ್ಥೆ ಸ್ನಾಪ್‌ಡೀಲ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ತಲಾ ತೊಂಬತ್ತೊಂಬತ್ತು ರೂಪಾಯಿಗೆ ಇಲ್ಲಿ ನಾವು ಎಲ್‌ಇಡಿ ಬಲ್ಬುಗಳನ್ನು ಕೊಳ್ಳಬಹುದು. ಡೆಲಿವರಿ ವೆಚ್ಚ ಪ್ರತ್ಯೇಕ.

ಕಾಮೆಂಟ್‌ಗಳಿಲ್ಲ:

badge