ಶನಿವಾರ, ಜನವರಿ 30, 2016

ಜೆನ್‌ಫೋನ್ ಜೂಮ್: ಡಿಜಿಟಲ್ ಕ್ಯಾಮೆರಾಗೆ ಮೊಬೈಲಿನ ಸವಾಲು

ಟಿ. ಜಿ. ಶ್ರೀನಿಧಿ


ಮೊಬೈಲ್ ಕ್ಯಾಮೆರಾ ಮಾಯಾಜಾಲದ ಕುರಿತು ಇಜ್ಞಾನದಲ್ಲಿ ಈ ಹಿಂದೆ ಪ್ರಕಟವಾದ ಲೇಖನ ನಿಮಗೆ ನೆನಪಿರಬಹುದು. "ಮೊಬೈಲ್ ಫೋನ್ ಬಂದ ಮೇಲೆ ತಮ್ಮ ಮಹತ್ವ ಕಳೆದುಕೊಂಡ ಸಾಧನಗಳ ಪೈಕಿ ಡಿಜಿಟಲ್ ಕ್ಯಾಮೆರಾಗೆ ಪ್ರಮುಖ ಸ್ಥಾನ" ಎನ್ನುವ ಅಂಶಕ್ಕೆ ಆ ಲೇಖನದಲ್ಲಿ ಒತ್ತು ಕೊಡಲಾಗಿತ್ತು.

ಈಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಮೊಬೈಲುಗಳನ್ನು ನೋಡಿದರೆ ಈ ಅಂಶ ಇನ್ನಷ್ಟು ಸ್ಪಷ್ಟವಾಗುತ್ತ ಹೋಗುತ್ತದೆ. ಏಕೆಂದರೆ ಡಿಜಿಟಲ್ ಕ್ಯಾಮೆರಾಗಳಿಗೆ ಪೂರಕವಾಗಿ ರೂಪುಗೊಂಡ ಮೊಬೈಲ್ ಕ್ಯಾಮೆರಾಗಳು ಇದೀಗ ಅವುಗಳಿಗೆ ಸಶಕ್ತ ಪರ್ಯಾಯವಾಗಿಯೂ ಬೆಳೆಯುತ್ತಿವೆ.

ಈ ಅನಿಸಿಕೆಗೆ ಪುಷ್ಟಿಕೊಡುವಂತಹ ವಿಶಿಷ್ಟ ಮೊಬೈಲ್ ದೂರವಾಣಿಯೊಂದು ಇದೀಗ ಬಂದಿದೆ. ಏಸಸ್ ಸಂಸ್ಥೆ ರೂಪಿಸಿರುವ 'ಜೆನ್‌ಫೋನ್ ಜೂಮ್' ಎಂಬ ಈ ಮೊಬೈಲ್ ೨೦೧೬ರ ಜನವರಿ ೨೨ರಂದು ಆಗ್ರಾದಲ್ಲಿ ನಡೆದ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿತು. ಈ ಸಾಧನದ ಪರಿಚಯ ಇಗೋ ಇಲ್ಲಿದೆ ನಿಮಗಾಗಿ!


ಜೂಮ್ ಮಾಡಿ ನೋಡಿ!
ಡಿಜಿಟಲ್ ಕ್ಯಾಮೆರಾದಲ್ಲಿ ಫೋಟೋ ಸೆರೆಹಿಡಿಯುವಾಗ ಎದುರಿನ ದೃಶ್ಯವನ್ನು ಸೂಕ್ತಕಂಡಂತೆ ಜೂಮ್ ಮಾಡಿಕೊಳ್ಳುವುದು ನಮಗೆಲ್ಲ ಗೊತ್ತಿರುವ ಸಂಗತಿ. ಮೊಬೈಲ್ ಕ್ಯಾಮೆರಾಗಳು ಕ್ಲಿಕ್ಕಿಸುವ ಚಿತ್ರದ ಗುಣಮಟ್ಟ ಈಚೆಗೆ ಅಪಾರವಾಗಿ ಸುಧಾರಿಸಿದೆ; ಆದರೆ ಜೂಮ್ ಮಾಡಬೇಕೆಂದರೆ ನಮಗೆ ದೊರಕುವುದು ಬಹುತೇಕ ಡಿಜಿಟಲ್ ಜೂಮ್ ಆಯ್ಕೆಯೊಂದೇ.

ಕ್ಲಿಕ್ಕಿಸಿದ ಚಿತ್ರವನ್ನೇ ಹಿಂಜಿ ಇನ್ನಷ್ಟು ದೊಡ್ಡದು ಮಾಡಿ ತೋರಿಸುವ ಈ ತಂತ್ರಜ್ಞಾನ ಹೆಚ್ಚೂಕಡಿಮೆ ನಿಷ್ಪ್ರಯೋಜಕ ಎಂದೇ ಹೇಳಬೇಕು. ಚಿತ್ರದ ಗುಣಮಟ್ಟ ಹಾಳಾಗದಂತೆ ಜೂಮ್ ಮಾಡಬೇಕೆಂದರೆ ಅದು ಲೆನ್ಸುಗಳ ಸಹಾಯದಿಂದ (ಆಪ್ಟಿಕಲ್ ಜೂಮ್) ಮಾತ್ರವೇ ಸಾಧ್ಯ. ಮೊಬೈಲ್ ಕ್ಯಾಮೆರಾಗಳಲ್ಲಿ ಆಪ್ಟಿಕಲ್ ಜೂಮ್ ಸೌಲಭ್ಯ ಅಷ್ಟಾಗಿ ಪ್ರಚಲಿತವಿಲ್ಲದ್ದರಿಂದ ಜೂಮ್ ಮಾಡಬೇಕೆನ್ನುವವರು ಡಿಜಿಟಲ್ ಕ್ಯಾಮೆರಾ ಬಳಸಬೇಕಾದ ಪರಿಸ್ಥಿತಿ ಈವರೆಗೂ ಇತ್ತು.

ಈ ಪರಿಸ್ಥಿತಿ ಬದಲಿಸುವ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆಯಿಟ್ಟಿರುವುದು 'ಜೆನ್‌ಫೋನ್ ಜೂಮ್'ನ ಹೆಚ್ಚುಗಾರಿಕೆ. ಈ ಮೊಬೈಲಿನ ಕ್ಯಾಮೆರಾದಲ್ಲಿ ಆಪ್ಟಿಕಲ್ ಜೂಮ್ ಸೌಲಭ್ಯ (ಲೆನ್ಸ್ ಬಳಸಿ ಜೂಮ್ ಮಾಡುವ ವ್ಯವಸ್ಥೆ) ಇದೆ; ಅದರಿಂದಾಗಿ ಕ್ಯಾಮೆರಾ ಮುಂದಿನ ದೃಶ್ಯವನ್ನು ಮೂರು ಪಟ್ಟು ಹಿಗ್ಗಿಸಿಕೊಳ್ಳುವುದು (3x) ಸಾಧ್ಯವಾಗುತ್ತದೆ.



ಮೊಬೈಲಿನೊಳಗೆ ಪರಿಪೂರ್ಣ ಕ್ಯಾಮೆರಾ 
ಅಂದಹಾಗೆ ಮೊಬೈಲ್ ಕ್ಯಾಮೆರಾದಲ್ಲಿ ಆಪ್ಟಿಕಲ್ ಜೂಮ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ಈಗಾಗಲೇ ನಡೆದಿದ್ದವು. ಅನೇಕ ಸಣ್ಣಪುಟ್ಟ ಸಂಸ್ಥೆಗಳ ಜೊತೆಗೆ ಸ್ಯಾಮ್‌ಸಂಗ್‌ನಂತಹ ದೊಡ್ಡ ಸಂಸ್ಥೆಗಳೂ ಇತ್ತ ಗಮನಹರಿಸಿದ್ದುಂಟು. ಆದರೆ ಜೂಮ್ ಸೌಲಭ್ಯ ಸೇರುತ್ತಿದ್ದಂತೆ ಮೊಬೈಲುಗಳ ಗಾತ್ರ ಜಾಸ್ತಿಯಾಗುತ್ತಿತ್ತು, ಜೂಮ್ ಕಾರ್ಯಾಚರಣೆ ಡಿಜಿಟಲ್ ಕ್ಯಾಮೆರಾದಂತೆಯೇ ಇದ್ದುದರಿಂದ (ಪೆರಿಸ್ಕೋಪಿನಂತೆ ಹೊರಬರುವ ಲೆನ್ಸುಗಳ ಜೋಡಣೆ) ಬಳಕೆಯೂ ಅಷ್ಟು ಸುಲಲಿತವೆನ್ನಿಸುತ್ತಿರಲಿಲ್ಲ.

ಜೆನ್‍‌ಫೋನ್ ಜೂಮ್ ಮೂಲಕ ಈ ಸಮಸ್ಯೆಯನ್ನು ಬಹುಮಟ್ಟಿಗೆ ಪರಿಹರಿಸುವಲ್ಲಿ ಏಸಸ್ ಸಂಸ್ಥೆ ಸಫಲವಾಗಿದೆ ಎನ್ನಬಹುದು. ಆಪ್ಟಿಕಲ್ ಜೂಮ್ ಸೌಲಭ್ಯ ಇದ್ದಾಗ್ಯೂ ಈ ಹ್ಯಾಂಡ್‌ಸೆಟ್ಟಿನ ಗಾತ್ರ-ದಪ್ಪಗಳೆಲ್ಲ ಇತರ ಮೊಬೈಲುಗಳಂತೆಯೇ ಇದೆ.

ಯಾವುದೇ ಕ್ಯಾಮೆರಾದಲ್ಲಿ ಆಪ್ಟಿಕಲ್ ಜೂಮ್ ಸಾಧ್ಯವಾಗುವುದು ಅದರಲ್ಲಿನ ಲೆನ್ಸುಗಳು ನಮ್ಮ ಅಗತ್ಯಕ್ಕೆ ತಕ್ಕಂತೆ ಚಲಿಸುವುದರಿಂದ. ಈ ಜೋಡಣೆ ಬಹುಪಾಲು ಮೊಬೈಲಿನ ಮೇಲ್ಮೈಗೆ ಲಂಬವಾಗಿದ್ದು (ಪರ್ಪೆಂಡಿಕ್ಯುಲರ್) ಜೂಮ್ ಮಾಡಿದಾಗ ಹೊರಚಾಚುವಂತಿರುತ್ತದೆ. ಜೆನ್‌ಫೋನ್ ಜೂಮ್‌ನಲ್ಲಿ ಈ ಜೋಡಣೆ ಮೊಬೈಲಿನ ಮೇಲ್ಮೈಗೆ ಸಮಾನಾಂತರವಾಗಿರುವುದರಿಂದ (ಪ್ಯಾರಲಲ್) ಹೊರಚಾಚಿಕೊಳ್ಳಬೇಕಾದ ಅಗತ್ಯವೇ ಬರುವುದಿಲ್ಲ. ಹಾಗಾಗಿ ಫೋನಿನ ದಪ್ಪ ಹೆಚ್ಚುವುದಿಲ್ಲ, ಉಪಯೋಗಿಸುವುದೂ ಸುಲಭ.

ಈ ವಿನೂತನ ವಿನ್ಯಾಸವನ್ನು ಏಸಸ್ ಸಂಸ್ಥೆ ಲೆನ್ಸುಗಳಿಗೆ ಪ್ರಖ್ಯಾತವಾದ ಜಪಾನಿನ ಹೋಯಾ ಸಹಯೋಗದಲ್ಲಿ ರೂಪಿಸಿದೆ.

ಫೋನಿನೊಳಗೇ ಓಡಾಡುವ ಲೆನ್ಸುಗಳ ವಿಶಿಷ್ಟ ಜೋಡಣೆ

ಈ ಮೊಬೈಲಿನಲ್ಲಿರುವ ಪ್ರಾಥಮಿಕ ಕ್ಯಾಮೆರಾ ೧೩ ಮೆಗಾಪಿಕ್ಸೆಲಿನದು. ಜೂಮ್ ಸೌಲಭ್ಯದ ಜೊತೆಗೆ ಇದರಲ್ಲಿ ಡ್ಯುಯಲ್ ಟೋನ್ ಎಲ್ಇಡಿ ಫ್ಲ್ಯಾಶ್ ಹಾಗೂ ಲೇಸರ್ ಫೋಕಸ್ ಕೂಡ ಇದೆ (ಕ್ಯಾಮೆರಾ ಎದುರಿನ ವಸ್ತುಗಳನ್ನು ಲೇಸರ್ ಕಿರಣಗಳ ಸಹಾಯದಿಂದ ಕ್ಷಿಪ್ರವಾಗಿ ಫೋಕಸ್ ಮಾಡುವುದು ಇದರ ವೈಶಿಷ್ಟ್ಯ). ಕ್ಯಾಮೆರಾ ಅಲ್ಪಸ್ವಲ್ಪ ಅಲುಗಾಡಿದರೂ ಚಿತ್ರ ಹಾಳಾಗದಂತೆ (ಹೆಚ್ಚು ಬ್ಲರ್ ಆಗದಂತೆ) ನೋಡಿಕೊಳ್ಳಲು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಸೌಲಭ್ಯ ಇದೆ. ಅಷ್ಟೇ ಅಲ್ಲ: ಚಿತ್ರಗಳನ್ನು ಕ್ಲಿಕ್ಕಿಸಲು, ವೀಡಿಯೋ ಸೆರೆಹಿಡಿಯಲು ಮತ್ತು ಜೂಮ್ ಮಾಡಲು - ಕ್ಯಾಮೆರಾಗಳಲ್ಲಿರುವಂತೆ - ಪ್ರತ್ಯೇಕ ಬಟನ್‌ಗಳಿವೆ. ಅಂದಹಾಗೆ ಜೆನ್‌ಫೋನ್ ಜೂಮ್‌ನ ಸೆಲ್ಫಿ ಕ್ಯಾಮೆರಾ ೫ ಮೆಗಾಪಿಕ್ಸೆಲಿನದು.

ಏಸಸ್‌ನ ಇನ್ನಿತರ ಫೋನುಗಳಂತೆ ಜೆನ್‌ಫೋನ್ ಜೂಮ್‌ನಲ್ಲೂ 'ಪಿಕ್ಸೆಲ್ ಮಾಸ್ಟರ್' ತಂತ್ರಾಂಶ ಇದೆ. ಡಿಜಿಟಲ್ ಕ್ಯಾಮೆರಾಗಳಿಗೆ ಬಹುಪಾಲು ಸರಿಸಮವೆನ್ನಿಸುವ ಆಯ್ಕೆಗಳನ್ನು (ಮೋಡ್) ಒದಗಿಸುವುದು ಈ ತಂತ್ರಾಂಶದ ವೈಶಿಷ್ಟ್ಯ. ಕಡಿಮೆ ಬೆಳಕಿನಲ್ಲಿ ಚಿತ್ರಗಳನ್ನು ತೆಗೆಯುವಾಗ (ಲೋ ಲೈಟ್), ಎಚ್‌ಡಿಆರ್ ಸೌಲಭ್ಯ ಬೇಕೆನಿಸಿದಾಗ, ಮುಂದಿರುವ ವಸ್ತುವನ್ನು ಮಾತ್ರ ಫೋಕಸ್ ಮಾಡಿ ಹಿನ್ನೆಲೆಯನ್ನೆಲ್ಲ ಮಸುಕಾಗಿಸಲು ಪ್ರಯತ್ನಿಸುವಾಗಲೆಲ್ಲ (ಡೆಪ್ತ್ ಆಫ್ ಫೀಲ್ಡ್) ಈ ಆಯ್ಕೆಗಳು ಉಪಯುಕ್ತ. ಪನೋರಮಾ ಆಯ್ಕೆ ಪ್ರಾಥಮಿಕ ಕ್ಯಾಮೆರಾ ಜೊತೆಗೆ ಸೆಲ್ಫಿ ಕ್ಯಾಮೆರಾದಲ್ಲೂ ಇದೆ. ಇನ್ನು ಮ್ಯಾನ್ಯುಯಲ್ ಮೋಡ್‌ನಲ್ಲಂತೂ ಡಿಎಸ್‌ಎಲ್‌ಆರ್‌ನಲ್ಲಿರುವಂತಹ ಅನೇಕ ಆಯ್ಕೆಗಳಿವೆ: ೩೨ ಸೆಕೆಂಡುಗಳಷ್ಟು ಸುದೀರ್ಘ ಎಕ್ಸ್‌ಪೋಶರ್ ಕೂಡ ಸಾಧ್ಯ!

ಜೆನ್‌ಫೋನ್ ಜೂಮ್ ಬಳಸಿ ಕ್ಲಿಕ್ಕಿಸಿದ ಚಿತ್ರ
ಫೋಟೋ ಕ್ಲಿಕ್ಕಿಸಿ ಆದ ನಂತರ ಹಲವು ಚಿತ್ರಗಳನ್ನು ಸೇರಿಸಿ ಕೊಲಾಜ್ ಮಾಡಲು, ಪುಟ್ಟಪುಟ್ಟ ವೀಡಿಯೋಗಳನ್ನು ರೂಪಿಸಲು ಅಗತ್ಯ ತಂತ್ರಾಂಶಗಳೂ ಈ ಫೋನಿನಲ್ಲೇ ಇವೆ. ಹೆಚ್ಚುವರಿಯಾಗಿ ಫ್ಲ್ಯಾಶ್ ಸೌಲಭ್ಯ ಬೇಕೆನ್ನುವವರು ಏಸಸ್‌ನದೇ ಉತ್ಪನ್ನಗಳಾದ ಜೆನ್‌ಫ್ಲ್ಯಾಶ್, ಲಾಲಿಫ್ಲ್ಯಾಶ್ ಇತ್ಯಾದಿಗಳನ್ನು ಕೊಂಡು ಬಳಸಬಹುದು. ಏಸಸ್‌ನದೇ ಮೊಬೈಲ್ ಟ್ರೈಪಾಡ್ ಕೂಡ ಇಷ್ಟರಲ್ಲೇ ಬರಲಿದೆಯಂತೆ.

ಲ್ಯಾಪ್‌ಟಾಪ್ ಸಾಮರ್ಥ್ಯ ಮೊಬೈಲಿನಲ್ಲಿ!
ಲೋಹದಿಂದ ನಿರ್ಮಿತವಾದ ಕವಚ ಹಾಗೂ ಹಿಂಬದಿಗೆ ಚರ್ಮದ ಹೊದಿಕೆ (ಲೆದರ್) ಜೆನ್‌ಫೋನ್ ಜೂಮ್‌ನ ಇನ್ನೆರಡು ವೈಶಿಷ್ಟ್ಯಗಳು. ಫೋಟೋ ತೆಗೆಯುವಾಗ ಹಿಡಿದುಕೊಳ್ಳಲು ಸುಲಭವಾಗಲೆಂದು ಜೋಡಿಸಿಕೊಳ್ಳಬಹುದಾದ ಪ್ರತ್ಯೇಕ ಪಟ್ಟಿಯೂ (ಲೆದರ್ ಸ್ಟ್ರಾಪ್) ಇದರ ಜೊತೆ ಬರುತ್ತದೆ. ೫.೫ ಇಂಚಿನ ಪೂರ್ಣ ಎಚ್‌ಡಿ ಪರದೆಗೆ ಗೊರಿಲ್ಲಾ ಗ್ಲಾಸ್ ೪ ರಕ್ಷಣೆಯಿದೆ. ಸ್ಪರ್ಶ ಪರದೆಯ ಸ್ಪಂದನೆ ಹಾಗೂ ಮೊಬೈಲಿನ ಸ್ಪೀಕರ್ ಗುಣಮಟ್ಟ ಕೂಡ ಉತ್ತಮವಾಗಿದೆ.

ಜೆನ್‌ಫೋನ್ ಜೂಮ್‌ನಲ್ಲಿರುವುದು ನಾಲ್ಕು ತಿರುಳುಗಳ (ಕ್ವಾಡ್ ಕೋರ್), ೨.೫ ಗಿಗಾಹರ್ಟ್ಸ್ ಸಾಮರ್ಥ್ಯದ ಇಂಟೆಲ್ Z3590 ಪ್ರಾಸೆಸರ್. ೪ ಜಿಬಿ ರ್‍ಯಾಮ್ ಹಾಗೂ ೧೨೮ ಜಿಬಿಯ ಸಂಗ್ರಹಣಾ ಸಾಮರ್ಥ್ಯ ಇದೆ. ಹೆಚ್ಚುವರಿಯಾಗಿ ೧೨೮ ಜಿಬಿವರೆಗಿನ ಮೈಕ್ರೋ ಎಸ್‌ಡಿ ಕಾರ್ಡುಗಳನ್ನೂ ಬಳಸಬಹುದು. ೩೦೦೦ ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಕೇವಲ ನಲವತ್ತು ನಿಮಿಷಗಳೊಳಗೆ ಶೇ. ೬೦ರಷ್ಟು ಚಾರ್ಜ್ ಆಗಬಲ್ಲದು.

ಜೆನ್‌ಫೋನ್ ಜೂಮ್ ಬಳಸಿ ಕ್ಲಿಕ್ಕಿಸಿದ ಚಿತ್ರ
ಬಳಕೆಯಾಗಿರುವ ಕಾರ್ಯಾಚರಣ ವ್ಯವಸ್ಥೆ (ಓಎಸ್) ಆಂಡ್ರಾಯ್ಡ್ ಲಾಲಿಪಾಪ್. ಇತರ ಏಸಸ್ ಉತ್ಪನ್ನಗಳಂತೆ ಕಾರ್ಯಾಚರಣ ವ್ಯವಸ್ಥೆಯ ಮೇಲುಹೊದಿಕೆ 'ಜೆನ್‌ ಯುಐ' ಈ ಫೋನಿನಲ್ಲೂ ಬಳಕೆಯಾಗಿದೆ. ಹೆಚ್ಚು ಸಂಖ್ಯೆಯ ಆಪ್‌ಗಳು ಹಾಗೂ ಪದೇಪದೇ ಬರುವ ಅಪ್‌ಡೇಟ್‌ಗಳು ಇಲ್ಲೂ ಕೊಂಚ ಕಿರಿಕಿರಿಮಾಡುತ್ತವೆ.

ಬೆಲೆ ಮತ್ತು ಲಭ್ಯತೆ
ಬಿಳಿ ಹಾಗೂ ಕಪ್ಪು ಬಣ್ಣದ ಲೆದರ್ ಕವಚದೊಡನೆ ಬರುವ ಜೆನ್‌ಫೋನ್ ಜೂಮ್ (೧೨೮ ಜಿಬಿ ಆವೃತ್ತಿ) ೩೭,೯೯೯ ರೂಪಾಯಿಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ (ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ). ಸಾಮಾನ್ಯ ಬಳಕೆಗಾಗಿ ಈ ಬೆಲೆ ಕೊಂಚ ದುಬಾರಿಯೆನಿಸುತ್ತದೆ ನಿಜ; ಆದರೆ ಛಾಯಾಗ್ರಹಣದಲ್ಲಿ ಆಸಕ್ತಿಯಿರುವವರಿಗೆ, ಉತ್ತಮ ಗುಣಮಟ್ಟದ ಕ್ಯಾಮೆರಾ ನಮ್ಮ ಜೇಬಿನಲ್ಲೇ ಇರಬೇಕು ಎನ್ನುವವರಿಗೆ ಇದು ಖಂಡಿತಾ ಒಳ್ಳೆಯ ಆಯ್ಕೆ.

ಕಾಮೆಂಟ್‌ಗಳಿಲ್ಲ:

badge