ಶುಕ್ರವಾರ, ಫೆಬ್ರವರಿ 19, 2016

ಸರ್ವಾಂತರ್ಯಾಮಿ ಯುಎಸ್‌ಬಿ

ಟಿ. ಜಿ. ಶ್ರೀನಿಧಿ

ಒಂದು ಕಾಲವಿತ್ತು, ಆಗ ಕಂಪ್ಯೂಟರಿನ ಪ್ರತಿಯೊಂದು ಪರಿಕರವನ್ನೂ ಬೇರೆಬೇರೆ ರೀತಿಯಲ್ಲಿ ಜೋಡಿಸಬೇಕಿತ್ತು. ಪ್ರಿಂಟರುಗಳಿಗೆ ಪ್ಯಾರಲಲ್ ಪೋರ್ಟಿನ ಸಂಪರ್ಕ, ಮೋಡೆಮ್‌ಗೆ ಸೀರಿಯಲ್ ಪೋರ್ಟಿನ ಸಂಪರ್ಕವೆಲ್ಲ ಆಗ ಸರ್ವೇಸಾಮಾನ್ಯವಾಗಿತ್ತು. ನಿರ್ದಿಷ್ಟ ಬಗೆಯ ಪೋರ್ಟ್‌ಗಳು ಇರುತ್ತಿದ್ದದ್ದೇ ಒಂದೋ ಎರಡೋ, ಅವು ಮುಗಿದ ಮೇಲೆ ಬೇರೊಂದು ಪರಿಕರವನ್ನು ಸಂಪರ್ಕಿಸುವುದೆಂದರೆ ಅದೊಂದು ತಲೆನೋವಿನ ಸಂಗತಿಯೇ ಆಗಿತ್ತು.

ಕಂಪ್ಯೂಟರಿನ ಮಾತು ಹಾಗಿರಲಿ, ಮೊಬೈಲ್ ಫೋನುಗಳ ಹಣೆಬರಹವೂ - ತೀರಾ ಇತ್ತೀಚಿನವರೆಗೆ - ಹೀಗೆಯೇ ಇತ್ತು: ಸೋನಿ ಎರಿಕ್ಸನ್ನಿನ ಕೇಬಲ್ಲು ನೋಕಿಯಾಗೆ ಆಗಿಬರದು, ಸ್ಯಾಮ್‌ಸಂಗ್‌ನದು ಮೋಟರೋಲಾಗೆ ಸರಿಹೊಂದದು. ಒಂದೊಂದು ಫೋನಿಗೆ ಒಂದೊಂದು ಬಗೆಯ ಕೇಬಲ್ ಸಂಪರ್ಕ, ಪ್ರತಿಯೊಂದಕ್ಕೂ ಬೇರೆಬೇರೆ ಚಾರ್ಜರ್!

ಇಷ್ಟೆಲ್ಲ ತಲೆನೋವನ್ನು ಬಹುಮಟ್ಟಿಗೆ ತಪ್ಪಿಸಿದ ಶ್ರೇಯ ಒಂದು ಮಾನಕಕ್ಕೆ (ಸ್ಟಾಂಡರ್ಡ್) ಸಲ್ಲಬೇಕು.


ಆ ಮಾನಕದ ಹೆಸರು 'ಯೂನಿವರ್ಸಲ್ ಸೀರಿಯಲ್ ಬಸ್'. ಇದೆಂಥ ಬಸ್ಸು ಎಂದು ಹುಬ್ಬೇರಿಸುವವರಿಗೂ ಈ ಹೆಸರಿನ ಹ್ರಸ್ವರೂಪ 'ಯುಎಸ್‌ಬಿ'ಯ ಪರಿಚಯ ಚೆನ್ನಾಗಿರುತ್ತದೆ.

ಹೌದು, ಯುಎಸ್‌ಬಿಯ ಜನಪ್ರಿಯತೆಯೇ ಅಂಥದ್ದು. ಕಾರ್ಡ್ ರೀಡರಿನಿಂದ ಕಾರ್ ಸ್ಟೀರಿಯೋವರೆಗೆ, ಮನೆಯ ಟೀವಿಯಿಂದ ಮೊಬೈಲ್ ಫೋನಿನವರೆಗೆ, ಕ್ಯಾಮೆರಾದಿಂದ ಆಟಿಕೆಗಳವರೆಗೆ ಎಲ್ಲೆಲ್ಲೂ ನಾವು ಅದರ ಬಳಕೆಯನ್ನು ಕಾಣಬಹುದು.

ಚಿತ್ರ: ವಿಕಿಮೀಡಿಯಾ ಕಾಮನ್ಸ್‌ನಿಂದ
ಮೊಬೈಲಿನ ಕೇಬಲ್ ಇರಲಿ ಡಿಜಿಟಲ್ ಕ್ಯಾಮೆರಾದ್ದೇ ಇರಲಿ, ಆ ಕೇಬಲ್ ಅನ್ನು ಕಂಪ್ಯೂಟರಿಗೆ (ಅಥವಾ ಚಾರ್ಜರ್‌ಗಾದರೂ ಸರಿ) ಸೇರಿಸುವ ಸಂಪರ್ಕ - ಅಥವಾ 'ಪೋರ್ಟ್' - ಒಂದೇ ಬಗೆಯದಾಗಿರುವುದು ಯುಎಸ್‌ಬಿಯಿಂದ ಸಾಧ್ಯವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ (ಉದಾ: ಇಂದಿನ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲಿ ಬಳಕೆಯಾಗುವ ಮೈಕ್ರೋ ಯುಎಸ್‌ಬಿ) ಕೇಬಲ್‌ನ ಇನ್ನೊಂದು ತುದಿಯ ವಿನ್ಯಾಸ ಕೂಡ ಸಾರ್ವತ್ರಿಕವಾಗಿರುತ್ತದೆ.

ಒಂದೇ ಕೇಬಲ್ಲಿನ ಮೂಲಕ ವಿದ್ಯುತ್ ಹಾಗೂ ದತ್ತಾಂಶಗಳೆರಡನ್ನೂ ಕೊಂಡೊಯ್ಯಲು ಸಾಧ್ಯವಾಗಿಸುವುದು ಯುಎಸ್‌ಬಿಯ ವೈಶಿಷ್ಟ್ಯ. ಹಾಗಾಗಿಯೇ ಬಹಳಷ್ಟು ಸಾಧನಗಳನ್ನು ಬಳಸುವಾಗ ಅವು ಕೆಲಸಮಾಡಲು ಬರಿಯ ಯುಎಸ್‌ಬಿ ಸಂಪರ್ಕವೊಂದೇ ಸಾಕಾಗಿರುವುದನ್ನು ನಾವು ನೋಡಬಹುದು. ದತ್ತಾಂಶ ಕೊಂಡೊಯ್ಯುವ ಕೇಬಲ್ ಮೂಲಕ ವಿದ್ಯುತ್ತೂ ಹರಿಯುವುದರಿಂದಲೇ - ಇಂದಿನ ಮೊಬೈಲುಗಳ ಡೇಟಾ ಕೇಬಲ್ ಹಾಗೂ ಚಾರ್ಜಿಂಗ್ ಕೇಬಲ್ ಎರಡೂ ಒಂದೇ ಆಗಿರುವುದು!

ಅನುಷ್ಠಾನದ ಸರಳತೆಯಿಂದಾಗಿ ಯುಎಸ್‌ಬಿ ಬಳಕೆಯೂ ವ್ಯಾಪಕ. ಇದರಿಂದಾಗಿ ಬೇರೆಬೇರೆ ಸಾಧನಗಳಿಗೆ ಬೇರೆಬೇರೆ ರೀತಿಯ ಕೇಬಲ್ಲುಗಳನ್ನು - ಸಂಪರ್ಕಗಳನ್ನು ಬಳಸಬೇಕಾದ ಅಗತ್ಯ ಬಹುಮಟ್ಟಿಗೆ ಕಡಿಮೆಯಾಗಿಬಿಟ್ಟಿದೆ. ಕಂಪ್ಯೂಟರಿಗೆ ಹೆಚ್ಚುವರಿ ಯುಎಸ್‌ಬಿ ಪೋರ್ಟುಗಳನ್ನು ಸೇರಿಸುವುದು ಬಲು ಸುಲಭವಾದ್ದರಿಂದ ಅಗತ್ಯಬಿದ್ದಾಗ ಎಷ್ಟು ಸಂಖ್ಯೆಯ ಪರಿಕರಗಳನ್ನಾದರೂ ಜೋಡಿಸಿಕೊಳ್ಳುವುದು ಸಾಧ್ಯ - ಒಂದು ಯುಎಸ್‌ಬಿ ಪೋರ್ಟ್ ಮೂಲಕ ನಾಲ್ಕಾರು ಸಾಧನಗಳನ್ನು ಸಂಪರ್ಕಿಸಲು ಅನುವುಮಾಡಿಕೊಡುವ 'ಹಬ್'ಗಳು ಈ ಕೆಲಸವನ್ನು ಇನ್ನಷ್ಟು ಸುಲಭವಾಗಿಸುತ್ತವೆ  (ಅಂದಹಾಗೆ ಯುಎಸ್‌ಬಿ ಮೂಲಕ ಕಂಪ್ಯೂಟರಿಗೆ ಜೋಡಿಸಬಹುದಾದ ಒಟ್ಟು ಸಾಧನಗಳ ಗರಿಷ್ಠ ಮಿತಿ ೧೨೭).

ಕೇಬಲ್ಲುಗಳ ಅನೇಕತೆಯ ಸಮಸ್ಯೆಯನ್ನು ಯುಎಸ್‌ಬಿ ಕಡಿಮೆಮಾಡಿದೆ ಎಂದಮಾತ್ರಕ್ಕೆ ಆ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದುಬಿಟ್ಟಿದೆ ಎಂದೇನೂ ಅರ್ಥವಲ್ಲ. ಏಕೆಂದರೆ ವಿವಿಧ ಸಾಧನಗಳನ್ನು ಕಂಪ್ಯೂಟರಿಗೋ ಚಾರ್ಜರಿಗೋ ಜೋಡಿಸಲು ಬಳಕೆಯಾಗುವ ಸಂಪರ್ಕದಲ್ಲಿ (ಪೆನ್‌ಡ್ರೈವ್‌ಗಳಲ್ಲಿರುತ್ತದಲ್ಲ ಅಂಥದ್ದು, ಇದನ್ನು ಟೈಪ್-ಎ ಕನೆಕ್ಟರ್ ಎಂದು ಕರೆಯುತ್ತಾರೆ) ಕಾಣಸಿಗುವಷ್ಟು ಪ್ರಮಾಣದ ಏಕರೂಪತೆ ಕೇಬಲ್ಲಿನ ಇನ್ನೊಂದು ತುದಿಯಲ್ಲಿರುವ ಸಂಪರ್ಕದಲ್ಲಿ (ಮೊಬೈಲ್ ಫೋನ್, ಪ್ರಿಂಟರ್ ಇತ್ಯಾದಿಗಳನ್ನೆಲ್ಲ ಸಂಪರ್ಕಿಸುವುದು) ಕಾಣಸಿಗುವುದಿಲ್ಲ. ಹಾಗಾಗಿಯೇ ಇಂದಿನ ಬಹುತೇಕ ಕೇಬಲ್ಲುಗಳ ಒಂದು ಬದಿಯಲ್ಲಿ ಸಾಮಾನ್ಯ ಯುಎಸ್‌ಬಿ ಸಂಪರ್ಕವೇ ಇದ್ದರೂ ಇನ್ನೊಂದು ಬದಿಯಲ್ಲಿ ಬೇರೆಬೇರೆ ರೀತಿಯ ಸಂಪರ್ಕಗಳು ಕಾಣಸಿಗುತ್ತವೆ. ಆಪಲ್ ಐಫೋನಿನ ಕೇಬಲ್ಲು ಇವತ್ತಿಗೂ ಸ್ಯಾಮ್‌ಸಂಗ್ ಅಥವಾ ಮೋಟರೋಲಾ ಫೋನಿಗೆ ಹೊಂದಿಕೊಳ್ಳುವುದಿಲ್ಲ!

ಹಾಗೆಂದಮಾತ್ರಕ್ಕೆ ಯುಎಸ್‌ಬಿ ಮಾನಕ ವಿಫಲವಾಗಿದೆಯೇ? ಹಾಗೇನೂ ಇಲ್ಲ. ತೊಂಬತ್ತರ ದಶಕದಲ್ಲಿ ಪರಿಚಯವಾದ ಈ ಮಾನಕದಲ್ಲಿ ಈವರೆಗೆ ಅನೇಕ ಮಹತ್ವದ ಬದಲಾವಣೆಗಳಾಗಿವೆ. ಹಿಂದಿನ ಯುಎಸ್‌ಬಿ ೨.೦ ಆವೃತ್ತಿಯ ಹೋಲಿಕೆಯಲ್ಲಿ ಇಂದಿನ ಯುಎಸ್‌ಬಿ ೩.೦ ತಂತ್ರಜ್ಞಾನ ಹೆಚ್ಚು ವೇಗದ ದತ್ತಾಂಶ ವಿನಿಮಯವನ್ನು ಸಾಧ್ಯವಾಗಿಸಿದೆ: ಪೆನ್‌ಡ್ರೈವ್‌ಗಳ ಉದಾಹರಣೆ ತೆಗೆದುಕೊಂಡರೆ ಯುಎಸ್‌ಬಿ ೨.೦ ತಂತ್ರಜ್ಞಾನ ಬಳಸುವ ಪೆನ್‌ಡ್ರೈವ್‌ಗಳಿಗಿಂತ ಯುಎಸ್‌ಬಿ ೩.೦ ತಂತ್ರಜ್ಞಾನ ಬಳಸುವ ಪೆನ್‌ಡ್ರೈವ್‌ಗಳು ಮಾಹಿತಿಯನ್ನು ಹೆಚ್ಚು  ಕ್ಷಿಪ್ರವಾಗಿ ವರ್ಗಾಯಿಸಲು ಶಕ್ತವಾಗಿರುತ್ತವೆ. ಅಂದರೆ, ವರ್ಗಾಯಿಸಬೇಕಿರುವ ಕಡತಗಳ ಗಾತ್ರ ಗಿಗಾಬೈಟ್‌ಗಟ್ಟಲೆ ಇದ್ದರೂ ವರ್ಗಾವಣೆ ಪೂರ್ಣಗೊಳ್ಳಲು ಹತ್ತಾರು ನಿಮಿಷ ಕಾಯುವ ಅಗತ್ಯ ಈಗಿಲ್ಲ (ಹೆಚ್ಚಿನ ವೇಗದ ಉಪಯೋಗ ಪಡೆದುಕೊಳ್ಳಲು ನಮ್ಮ ಕಂಪ್ಯೂಟರಿನಲ್ಲೂ ಯುಎಸ್‌ಬಿ ೩.೦ ಪೋರ್ಟ್ ಇರಬೇಕು ಎನ್ನುವುದು ಗಮನಿಸಬೇಕಾದ ಅಂಶ: ಯುಎಸ್‌ಬಿ ೩.೦ ಪೋರ್ಟ್‌ಗಳನ್ನು ಅವುಗಳ ನೀಲಿ ಬಣ್ಣದಿಂದ, ಅಥವಾ ಪೋರ್ಟ್ ಪಕ್ಕದಲ್ಲಿ ಬರೆದಿರುವ 'ಎಸ್‌ಎಸ್' - ಅಂದರೆ ಸೂಪರ್ ಸ್ಪೀಡ್ - ಚಿಹ್ನೆಯಿಂದ  ಗುರುತಿಸಬಹುದು. ಯುಎಸ್‌ಬಿ ೩.೦ ಪೆನ್‌ಡ್ರೈವ್‌ಗಳು ಹಳೆಯ ಯುಎಸ್‌ಬಿ ಪೋರ್ಟ್‌ಗಳಲ್ಲೂ ಕೆಲಸಮಾಡುತ್ತವೆ, ಆದರೆ ಮಾಹಿತಿ ವರ್ಗಾವಣೆಯ ವೇಗ ಕಡಿಮೆಯಿರುತ್ತದೆ ಅಷ್ಟೆ).

ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳ ಬಳಕೆ ಜಾಸ್ತಿಯಾದಂತೆ ಅವು ಕಂಪ್ಯೂಟರಿಗೆ ಪರ್ಯಾಯವಾಗಿ ಬಳಕೆಯಾಗುವ ನಿದರ್ಶನಗಳು ಹೆಚ್ಚುತ್ತಿವೆ. ಹಾಗಾಗಿ ಯುಎಸ್‌ಬಿ ಬಳಸುವ ವಿವಿಧ ಸಾಧನಗಳನ್ನು (ಪೆನ್‌ಡ್ರೈವ್, ಮೌಸ್, ಕೀಬೋರ್ಡ್ ಇತ್ಯಾದಿ) ಅವುಗಳಿಗೆ ಸಂಪರ್ಕಿಸುವ ಪರಿಪಾಠವೂ ಬೆಳೆಯುತ್ತಿದೆ. ಆದರೆ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲಿ ವ್ಯಾಪಕವಾಗಿ ಕಾಣಸಿಗುವ ಮೈಕ್ರೋ ಯುಎಸ್‌ಬಿ ಪೋರ್ಟ್‌ಗೆ ಸಾಮಾನ್ಯ ಯುಎಸ್‌ಬಿ ಸಾಧನಗಳನ್ನು ಸಂಪರ್ಕಿಸುವುದು ಕಷ್ಟವಲ್ಲ! ಈ ಸಮಸ್ಯೆಗೆ ಪರಿಹಾರವಾಗಿ ಬೆಳೆದಿರುವುದೇ 'ಯುಎಸ್‌ಬಿ ಆನ್ ದ ಗೋ', ಅಥವಾ 'ಓಟಿಜಿ' ತಂತ್ರಜ್ಞಾನ. ಒಂದು ಬದಿಯಲ್ಲಿ ಮೈಕ್ರೋ ಯುಎಸ್‌ಬಿ  ಸಂಪರ್ಕವಿರುವ ಪುಟಾಣಿ ಕೇಬಲ್ಲಿನ ಇನ್ನೊಂದು ಬದಿಗೆ ಪೆನ್‌ಡ್ರೈವ್ (ಅಥವಾ ಸಾಮಾನ್ಯ ಯುಎಸ್‌ಬಿ ಬಳಸುವ ಇನ್ನಾವುದೇ ಸಾಧನ) ಜೋಡಿಸಲು ಈ ತಂತ್ರಜ್ಞಾನ ಅನುವುಮಾಡಿಕೊಡುತ್ತದೆ. ಹಾಂ, ಇಂತಹ ಓಟಿಜಿ ಕೇಬಲ್ ಮೂಲಕ ಪೆನ್‌ಡ್ರೈವ್ ಬಳಸುವ ಸೌಲಭ್ಯ ನಮ್ಮ ಮೊಬೈಲ್ ಅಥವಾ ಟ್ಯಾಬ್ಲೆಟ್ಟಿನಲ್ಲಿ ಇದ್ದರೆ ಮಾತ್ರ ಅದರ ಬಳಕೆ ಸಾಧ್ಯ.

ಯುಎಸ್‌ಬಿ ಕೇಬಲ್ಲುಗಳನ್ನು ಕಂಪ್ಯೂಟರಿಗೆ ಜೋಡಿಸುವಾಗ, ಕಾರಿನ ಸ್ಟೀರಿಯೋಗೆ ಪೆನ್‌ಡ್ರೈವ್ ಸಿಕ್ಕಿಸುವಾಗ ಅಥವಾ ಮೊಬೈಲ್ ಫೋನನ್ನು ಚಾರ್ಜಿಂಗ್‌ಗೆ ಹಾಕುವಾಗ ಅದೆಷ್ಟೋ ಬಾರಿ ನಾವು ಕೇಬಲ್ ಅನ್ನು ತಿರುಗುಮುರುಗಾಗಿ ಹಿಡಿದಿರುತ್ತೇವೆ; ಅದೇ ರೀತಿ ಸಂಪರ್ಕಿಸಲು ಪ್ರಯತ್ನಿಸಿ ಅದು ವಿಫಲವಾದ ನಂತರವಷ್ಟೇ ಕೇಬಲ್ಲನ್ನು ಸರಿಯಾಗಿ ತಿರುಗಿಸುತ್ತೇವೆ. ಈ ಗೊಂದಲವನ್ನು ಹೋಗಲಾಡಿಸುವ ನಿಟ್ಟಿನಲ್ಲೂ ಪ್ರಯತ್ನಗಳು ಸಾಗಿವೆ. ಈಗಷ್ಟೇ ಪ್ರಚಲಿತಕ್ಕೆ ಬರುತ್ತಿರುವ, ಕೆಲವು ಹೊಸ ಮೊಬೈಲುಗಳಲ್ಲಿ ಕಾಣಿಸಿಕೊಂಡಿರುವ, ಯುಎಸ್‌ಬಿ 'ಟೈಪ್-ಸಿ' ಕನೆಕ್ಟರುಗಳಲ್ಲಿ ತಿರುಗುಮುರುಗಾಗುವ ಈ ಸಮಸ್ಯೆಯೇ ಇಲ್ಲ: ಅಂದರೆ ಈ ಬಗೆಯ ಕನೆಕ್ಟರ್ ಇರುವ ಮೊಬೈಲ್ ಫೋನಿಗೆ ನಾವು ಚಾರ್ಜಿಂಗ್ ಕೇಬಲನ್ನು ಕಣ್ಣುಮುಚ್ಚಿಕೊಂಡೂ ಜೋಡಿಸಿಬಿಡಬಹುದು! ಅಷ್ಟೇ ಅಲ್ಲ, ಮುಂದೊಂದು ದಿನ ಎರಡೂ ಬದಿಯಲ್ಲಿ ಈ ಬಗೆಯ ಸಂಪರ್ಕಗಳೇ ಇರುವ ಕೇಬಲ್ಲುಗಳು ಬಳಕೆಗೆ ಬಂದರೆ ಕಂಪ್ಯೂಟರಿಗೆ ಸಂಪರ್ಕಿಸುವ ಬದಿ ಯಾವುದು, ಮೊಬೈಲಿಗೆ ಸಂಪರ್ಕಿಸುವ ಬದಿ ಯಾವುದು ಎಂದು ಯೋಚಿಸುವ ಅಗತ್ಯವೂ ಇರಲಾರದು.


ಅಂದಹಾಗೆ ಟೈಪ್-ಸಿ ಕೇಬಲ್ಲುಗಳ ಹೆಚ್ಚುಗಾರಿಕೆ ವಿನ್ಯಾಸದ ಸರಳತೆಯಷ್ಟೇ ಅಲ್ಲ. ಇವುಗಳ ಮೂಲಕ ದತ್ತಾಂಶ ಹರಿಯುವ ವೇಗ ಹಿಂದೆಂದಿಗಿಂತ ಹೆಚ್ಚು; ಜೊತೆಗೆ ಇವು ಹೆಚ್ಚಿನ ಪ್ರಮಾಣದ ವಿದ್ಯುತ್ತನ್ನೂ ಪೂರೈಸಬಲ್ಲವು. ಅಂದರೆ, ಮೊಬೈಲ್ ಫೋನನ್ನು-ಟ್ಯಾಬ್ಲೆಟ್ಟುಗಳನ್ನು ಯುಎಸ್‌ಬಿ ಮೂಲಕ ಚಾರ್ಜ್ ಮಾಡಿಕೊಂಡಂತೆ   ಮುಂದೊಂದು ದಿನ ಲ್ಯಾಪ್‌ಟಾಪ್ ಕಂಪ್ಯೂಟರನ್ನೂ ಯುಎಸ್‌ಬಿ ಮೂಲಕವೇ ಚಾರ್ಜ್ ಮಾಡಿಕೊಳ್ಳುವುದು ಸಾಧ್ಯವಾಗಬಹುದು.

ಫೆಬ್ರುವರಿ ೨೦೧೬ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge