ಬುಧವಾರ, ಮಾರ್ಚ್ 23, 2016

ಮೊಬೈಲ್ ಲೋಕದಲ್ಲೊಂದು ಹೊಸ ಅಲೆ

ಹಿಂದೆ ಕಂಪ್ಯೂಟರುಗಳಲ್ಲಿ ಮಾಡುತ್ತಿದ್ದಂತೆ ಮೊಬೈಲುಗಳನ್ನೂ ಅಪ್‌ಗ್ರೇಡ್ ಮಾಡುವಂತಿದ್ದರೆ ಎಷ್ಟು ಚೆನ್ನಾಗಿತ್ತು! ರ್‍ಯಾಮ್ ಸಾಲದೆಬಂದಾಗ ಒಂದೆರಡು ಜಿಬಿ ಹೆಚ್ಚುವರಿ ರ್‍ಯಾಮ್ ಸೇರಿಸುವಂತಿದ್ದರೆ, ಕ್ಯಾಮೆರಾ ಚೆನ್ನಾಗಿಲ್ಲ ಎನ್ನಿಸಿದಾಗ ಹೊಸ ಕ್ಯಾಮೆರಾ ಅಳವಡಿಸಿಕೊಳ್ಳುವಂತಿದ್ದರೆ?
ಟಿ. ಜಿ. ಶ್ರೀನಿಧಿ


ಅತ್ಯಂತ ದುಬಾರಿ ಫೋನಿನ ಬೆಲೆ ಎಷ್ಟಿರಬಹುದು ಎಂದು ಯಾರಾದರೂ ಕೇಳಿದರೆ ನಾವು ಅರವತ್ತು-ಎಪ್ಪತ್ತು ಸಾವಿರ ರೂಪಾಯಿಯ ಫೋನಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕಡಿಮೆ ಬೆಲೆಗೆ ಆದಷ್ಟೂ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಫೋನುಗಳು ಜನಪ್ರಿಯವಾಗುತ್ತಿರುವ ಈ ಕಾಲದಲ್ಲಿ ಅರವತ್ತು-ಎಪ್ಪತ್ತು ಸಾವಿರ ರೂಪಾಯಿ ಬೆಲೆಯ ಮೊಬೈಲು ದುಬಾರಿಯೆನಿಸುವುದರಲ್ಲಿ ಆಶ್ಚರ್ಯವೂ ಇಲ್ಲ ಬಿಡಿ.

ಆದರೆ ಈ ಫೋನುಗಳು "ಅತ್ಯಂತ ದುಬಾರಿ" ಎನ್ನುವ ಪಟ್ಟದ ಹತ್ತಿರಕ್ಕೂ ಬರುವುದಿಲ್ಲ ಎನ್ನುವುದು ತಮಾಷೆಯ ವಿಷಯ. ಏಕೆಂದರೆ ಮೊಬೈಲ್ ಲೋಕದ ಮಹಾರಾಜರ ಬೆಲೆ ಹಲವು ಲಕ್ಷಗಳಲ್ಲಿರುತ್ತದೆ - ಕೆಲವೊಮ್ಮೆ ಕೋಟಿಗಳಲ್ಲಿರುವುದೂ ಉಂಟು.

ಮೊಬೈಲಿನ ಬೆಲೆ ಲಕ್ಷಗಳಲ್ಲಿ, ಕೋಟಿಗಳಲ್ಲಿ ಇರಲು ಅದರಲ್ಲೇನು ಚಿನ್ನ-ಬೆಳ್ಳಿ-ವಜ್ರವೈಡೂರ್ಯಗಳಿರುತ್ತವೆಯೇ?

ಖಂಡಿತಾ ಇರುತ್ತವೆ.
ಏಕೆಂದರೆ ಈ ಆಡಂಬರವೇ ವಿಲಾಸಿ ಫೋನುಗಳ ಪ್ರಮುಖ ವೈಶಿಷ್ಟ್ಯ. ಚಿನ್ನದ ಕವಚ, ವಜ್ರದ ಅಲಂಕಾರಗಳೆಲ್ಲ ಇಲ್ಲಿ ಸರ್ವೇಸಾಮಾನ್ಯ; ದುಬಾರಿ ಬೆಲೆಯ ಲೆದರ್ ಬಳಕೆಯೂ ಉಂಟು. ನಾವು ಬಳಸುವ ಫೋನುಗಳು ಚೀನಾದ ಮೂಲೆಯಲ್ಲೆಲ್ಲೋ ಸಾವಿರಗಟ್ಟಲೆ ಸಂಖ್ಯೆಯಲ್ಲಿ ತಯಾರಾಗುತ್ತವಲ್ಲ, ಈ ಫೋನುಗಳು ಹಾಗಲ್ಲ: ನುರಿತ ತಜ್ಞರು ಪ್ರತಿಯೊಂದು ಫೋನನ್ನೂ ಒಂದು ಕಲಾಕೃತಿಯೇನೋ ಎಂಬಂತೆ ತಮ್ಮ ಕೈಯಿಂದಲೇ ಜೋಡಿಸುತ್ತಾರೆ, ಅಲಂಕರಿಸುತ್ತಾರೆ. ದುಡ್ಡಿರುವವರು ಲಕ್ಷಾಂತರ ರೂಪಾಯಿಯ ಬಟ್ಟೆ - ಕೋಟ್ಯಂತರ ರೂಪಾಯಿಯ ಕಾರುಗಳನ್ನೆಲ್ಲ ಕೊಳ್ಳುತ್ತಾರಲ್ಲ, ಅಂತಹವರೇ ಈ ಫೋನುಗಳನ್ನು ಕೊಳ್ಳುವವರು.

ದುಬಾರಿ ಬೆಲೆ ಹಾಗೂ ಅಪರೂಪದ ವಿನ್ಯಾಸ ಸರಿ, ಆದರೆ ಈ ಫೋನುಗಳು ಕೆಲಸಮಾಡುವ ವಿಧಾನವೇನೂ ನಮ್ಮ ಫೋನುಗಳಿಗಿಂತ ಭಿನ್ನವಾಗಿರುವುದಿಲ್ಲ. ಹಾಗೆ ನೋಡಿದರೆ ತೀರಾ ಈಚಿನವರೆಗೂ ಇಂತಹ ವಿಲಾಸಿ ಫೋನುಗಳು ಸ್ಮಾರ್ಟ್ ಕೂಡ ಆಗಿರಲಿಲ್ಲ (ವಿಲಾಸಿ ಫೋನುಗಳ ಪ್ರಮುಖ ತಯಾರಿಕಾ ಸಂಸ್ಥೆ 'ವರ್ಟು' ಉತ್ಪನ್ನಗಳು ಬಹುಕಾಲ ಫೀಚರ್ ಫೋನುಗಳೇ ಆಗಿದ್ದವು). ಆದರೆ ಈಗ ಹಲವು ಸಂಸ್ಥೆಗಳು ಆಂಡ್ರಾಯ್ಡ್ ಬಳಸಲು ಪ್ರಾರಂಭಿಸಿವೆ, ಇನ್ನು ಕೆಲವು ಐಫೋನ್‌ಗೆ ವಿಲಾಸಿ ಸ್ಪರ್ಶ ನೀಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಕೆಲವು ವರ್ಷಗಳ ಹಿಂದೆ ಚೀನಾದ ಶ್ರೀಮಂತನೊಬ್ಬ ವಜ್ರಗಳಿಂದ ಅಲಂಕೃತವಾದ ಚಿನ್ನದ ಐಫೋನ್ ರೂಪಿಸಿಕೊಳ್ಳಲು ಸುಮಾರು ನೂರು ಕೋಟಿ ರೂಪಾಯಿಗಳನ್ನು (೨೦೧೬ರ ವಿನಿಮಯ ದರದ ಪ್ರಕಾರ) ಖರ್ಚುಮಾಡಿದ ಸಂಗತಿ ವಿಶ್ವದೆಲ್ಲೆಡೆ ಸಾಕಷ್ಟು ಸುದ್ದಿಮಾಡಿತ್ತು.

ಅದೆಲ್ಲ ಸರಿ, ಲಕ್ಷಗಟ್ಟಲೆ ಕೊಟ್ಟೆವೆಂದು ಈ ಫೋನುಗಳನ್ನು ಎಷ್ಟುದಿನ ಇಟ್ಟುಕೊಳ್ಳಲು ಸಾಧ್ಯ? ವಿಲಾಸಿ ಫೋನುಗಳ ಮಾತು ಹಾಗಿರಲಿ, ಸಾಮಾನ್ಯ ಮೊಬೈಲುಗಳ ಸಮಸ್ಯೆಯೂ ಇದೇನೇ: ಆರು ತಿಂಗಳು - ವರ್ಷದ ಹಿಂದೆ ಕೊಂಡ ಫೋನು ಇವತ್ತಿಗೆ ಹಳೆಯದಾಗಿರುತ್ತದೆ, ಇಪ್ಪತ್ತು ಸಾವಿರ ಕೊಟ್ಟಿದ್ದ ಫೋನನ್ನು ಮಾರಲು ಹೋದರೆ ಸರಿಯಾಗಿ ಐದು ಸಾವಿರವೂ ಸಿಗುವುದಿಲ್ಲ. ಮೊಬೈಲ್ ಫೋನಿಗೆ ನೀವು ಕೊಟ್ಟದ್ದು ಮೂರು ಸಾವಿರವಾಗಲಿ ನೂರು ಕೋಟಿಯೇ ಆಗಲಿ, ಅದು ಬಲುಬೇಗ ಹಳೆಯದಾಗುವುದಂತೂ ಖಚಿತ!

ನಿಜ, ತಂತ್ರಜ್ಞಾನದ ಬೆಳವಣಿಗೆಯಿಂದ ಅನುಕೂಲವಾಗುವಂತೆಯೇ ಸಮಸ್ಯೆಗಳೂ ಸೃಷ್ಟಿಯಾಗುತ್ತವೆ. ಮೊಬೈಲ್ ಫೋನುಗಳು ಇದ್ದಕ್ಕಿದ್ದಂತೆ ಹಳತಾಗುವುದು ಇಂತಹ ಸಮಸ್ಯೆಗಳಲ್ಲೊಂದು. ಕಾರ್ಯಾಚರಣ ವ್ಯವಸ್ಥೆಯ (ಓಎಸ್) ಹೊಸ ಆವೃತ್ತಿಗೆ ಹೊಂದಿಕೆಯಾಗುವುದಿಲ್ಲವೆಂದೋ ಲೇಟೆಸ್ಟ್ ಆಪ್‌ಗಳನ್ನು ಬಳಸಲು ರ್‍ಯಾಮ್ ಸಾಲದು ಎಂದೋ ಮೊಬೈಲ್ ಫೋನುಗಳು ನಿಷ್ಪ್ರಯೋಜಕವೆಂಬ ಹಣೆಪಟ್ಟಿ ಗಳಿಸಿಕೊಳ್ಳುತ್ತವೆ. ಅದರ ಕ್ಯಾಮೆರಾ ಚೆನ್ನಾಗಿತ್ತು, ಪರದೆಯ ಮೇಲೆ ಚಿತ್ರಗಳು ಅದ್ಭುತವಾಗಿ ಮೂಡುತ್ತಿದ್ದವು ಎಂದೆಲ್ಲ ನೀವು ಎಷ್ಟು ಗೊಣಗಾಡಿದರೂ ಹೊಸ ಫೋನ್ ಕೊಳ್ಳದೆ ಬೇರೆ ವಿಧಿಯೇ ಇಲ್ಲ ಎನ್ನುವಂತಹ ಪರಿಸ್ಥಿತಿ ಆಗಿಂದಾಗ್ಗೆ ನಿರ್ಮಾಣವಾಗುತ್ತಿರುತ್ತದೆ. ಹೊಸ ಫೋನು ನಿಮ್ಮ ಜೇಬು ಸೇರುತ್ತದೆ, ಸಾವಿರಗಟ್ಟಲೆ ಹಣ ಮೊಬೈಲ್ ಫೋನ್ ತಯಾರಕನ ಜೇಬು ಸೇರುತ್ತದೆ ಹಾಗೂ ಹಳೆಯ ಫೋನು ಇ-ಕಸವಾಗಿ ತಿಪ್ಪೆ ಸೇರುತ್ತದೆ!

ಇಂತಹ ಸಂದರ್ಭಗಳಲ್ಲೆಲ್ಲ ಅನ್ನಿಸುವುದಿಷ್ಟು: ಈ ಹಿಂದೆ ಕಂಪ್ಯೂಟರುಗಳಲ್ಲಿ ಮಾಡುತ್ತಿದ್ದಂತೆ ಮೊಬೈಲುಗಳನ್ನೂ ಅಪ್‌ಗ್ರೇಡ್ ಮಾಡುವಂತಿದ್ದರೆ ಎಷ್ಟು ಚೆನ್ನಾಗಿತ್ತು! ರ್‍ಯಾಮ್ ಸಾಲದೆಬಂದಾಗ ಒಂದೆರಡು ಜಿಬಿ ಹೆಚ್ಚುವರಿ ರ್‍ಯಾಮ್ ಸೇರಿಸುವಂತಿದ್ದರೆ, ಕ್ಯಾಮೆರಾ ಚೆನ್ನಾಗಿಲ್ಲ ಎನ್ನಿಸಿದಾಗ ಹೊಸ ಕ್ಯಾಮೆರಾ ಅಳವಡಿಸಿಕೊಳ್ಳುವಂತಿದ್ದರೆ?

ಇಂತಹ ಸೌಲಭ್ಯವೇನಾದರೂ ಬಂದರೆ ಹಣ ಉಳಿತಾಯವಾಗುವುದಷ್ಟೇ ಅಲ್ಲ, ಪರಿಸರದ ಮೇಲಿನ ಒತ್ತಡವೂ ಸಾಕಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ.

ಹೌದು, ಪದೇ ಪದೇ ಮೊಬೈಲ್ ಬದಲಿಸುವ ಪ್ರವೃತ್ತಿಯಿಂದಾಗಿ ಅಪಾರ ಪ್ರಮಾಣದ ಇ-ಕಸ ಉತ್ಪಾದನೆಯಾಗುತ್ತಿದೆ. ಬೆಂಗಳೂರಿನ ಬೀದಿಗಳ ಕಸದಂತೆಯೇ ಈ ಕಸದ ನಿರ್ವಹಣೆಯೂ ಸಮರ್ಪಕವಾಗಿ ಆಗುತ್ತಿಲ್ಲ; ಹಾಗಾಗಿ ಅದು ಪರಿಸರದ ಮೇಲೆ ಭಾರೀ ಒತ್ತಡಕ್ಕೆ ಕಾರಣವಾಗುತ್ತಿದೆ. ಸಂಪನ್ಮೂಲಗಳ ಮರುಬಳಕೆ ಆಗದ್ದರಿಂದ ಹೆಚ್ಚಿನ ಗಣಿಗಾರಿಕೆಯ ಒತ್ತಡ ಒಂದು ಕಡೆ, ಇ-ಕಸದ ಅಸಮರ್ಪಕ ನಿರ್ವಹಣೆಯಿಂದಾಗುವ ಮಾಲಿನ್ಯ ಇನ್ನೊಂದುಕಡೆ! ಇ-ಕಸ ಉತ್ಪಾದನೆಯಾಗುವುದು ಕಡಿಮೆಯಾದರೆ ಪರಿಸರದ ಮೇಲಿನ ಈ ಒತ್ತಡಗಳೆಲ್ಲ ಅದೆಷ್ಟೋ ಕಡಿಮೆಯಾಗುತ್ತವೆ.

ಮೊಬೈಲ್ ಫೋನಿನ ಭಾಗಗಳನ್ನಷ್ಟೇ ಬದಲಿಸುವ ಮೂಲಕ ಇಷ್ಟೆಲ್ಲ ಬದಲಾವಣೆ ತರಬಹುದಾದರೆ ಅದೇಕೆ ಇನ್ನೂ ಸಾಧ್ಯವಾಗಿಲ್ಲ? ಈ ನಿಟ್ಟಿನಲ್ಲಿ ಯಾರೂ ಕೆಲಸಮಾಡುತ್ತಿಲ್ಲವೆ?

ಯಾಕಿಲ್ಲ, ವಿಶ್ವದ ಹಲವೆಡೆಗಳಲ್ಲಿ - ತಂತ್ರಜ್ಞಾನ ಲೋಕದ ಘಟಾನುಘಟಿ ಸಂಸ್ಥೆಗಳಲ್ಲೂ - ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಒಂದಷ್ಟು ಭಾಗಗಳನ್ನು ಭದ್ರವಾಗಿ ಮುಚ್ಚಿಟ್ಟು ಮೊಬೈಲ್ ರೂಪಿಸುವ ಬದಲು, ಬೇಕಾದ ಭಾಗಗಳನ್ನು ಬೇಕಾದಾಗ - ಅದೂ ಸುಲಭವಾಗಿ - ಬದಲಿಸಿಕೊಳ್ಳಲು ಅನುವುಮಾಡಿಕೊಡುವ ಫೋನುಗಳ ತಯಾರಿಕೆಯಲ್ಲಿ ತಜ್ಞರು ತೊಡಗಿಕೊಂಡಿದ್ದಾರೆ.

ನಿಮಗೆ ಅಸೆಂಬಲ್ಡ್ ಕಂಪ್ಯೂಟರುಗಳ ಪರಿಚಯ ಇರಬೇಕಲ್ಲ - ಒಂದು ಕಂಪನಿಯ ಕ್ಯಾಬಿನೆಟ್, ಇನ್ನೊಂದರ ಮದರ್‌ಬೋರ್ಡ್, ಮತ್ತೊಂದರ ಹಾರ್ಡ್‌ಡಿಸ್ಕುಗಳನ್ನೆಲ್ಲ ಕೊಂಡು ಜೋಡಿಸಿ ರೂಪಿಸಲಾಗುವ ಈ ಕಂಪ್ಯೂಟರುಗಳು ಇಂದಿಗೂ ಜನಪ್ರಿಯ. ಇವುಗಳಲ್ಲಿ ಬಿಡಿಭಾಗಗಳನ್ನು ಜೋಡಿಸುವುದು - ಬದಲಿಸುವುದು ಬಲು ಸುಲಭವಾದ್ದರಿಂದಲೇ ಯಾವಾಗ ಬೇಕಾದರೂ ಅಪ್‌ಗ್ರೇಡ್ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ಇದೇ ರೀತಿಯಲ್ಲಿ ಸುಲಭವಾಗಿ ಬದಲಿಸಬಹುದಾದ ಭಾಗಗಳನ್ನೊಳಗೊಂಡ 'ಮಾಡ್ಯುಲರ್ ಫೋನು'ಗಳ ತಯಾರಿಕೆಯ ಪ್ರಯತ್ನಗಳು ಈಗ ಭರದಿಂದ ಸಾಗಿವೆ. ಫೋನ್‌ಬ್ಲಾಕ್ಸ್, ಫೇರ್‌ಫೋನ್ ಮುಂತಾದ ಹೊಸ ಸಂಸ್ಥೆಗಳಷ್ಟೇ ಅಲ್ಲ, ಗೂಗಲ್‌ನಂತಹ ದೈತ್ಯರೂ ಈ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಫೇರ್‌ಫೋನ್ ಸಂಸ್ಥೆಯ 'ಫೇರ್‌ಫೋನ್ ೨' ಹ್ಯಾಂಡ್‌ಸೆಟ್ಟುಗಳು ಯುರೋಪಿನ ಮಾರುಕಟ್ಟೆಯನ್ನು ಈಗಾಗಲೇ ಪ್ರವೇಶಿಸಿದ್ದೂ ಆಗಿದೆ.

ಫೋನಿನ ವಿವಿಧ ಭಾಗಗಳನ್ನು ಗ್ರಾಹಕರೇ ಅತ್ಯಂತ ಸುಲಭವಾಗಿ ಬಿಚ್ಚಿ ಬದಲಿಸಬಹುದಾದದ್ದು ಮಾಡ್ಯುಲರ್ ಫೋನುಗಳ ವೈಶಿಷ್ಟ್ಯ. ಈ ಪರಿಕಲ್ಪನೆಯಿಂದ ಫೋನುಗಳನ್ನು ಪದೇಪದೇ ಬದಲಿಸಬೇಕಾದ ಪರಿಸ್ಥಿತಿ ನಿವಾರಣೆಯಾಗುವುದಷ್ಟೇ ಅಲ್ಲ, ಇ-ಕಸದ ಸಮಸ್ಯೆ ಹಾಗೂ ಸಂಪನ್ಮೂಲಗಳಿಗಾಗಿ ಪರಿಸರದ ಮೇಲಿನ ಒತ್ತಡವೂ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ಸದ್ಯಕ್ಕೆ ಮಾಡ್ಯುಲರ್ ಫೋನುಗಳನ್ನು ಹೊಸ ಪ್ರಯೋಗವೆಂದಷ್ಟೇ ನೋಡಲಾಗುತ್ತಿದೆಯಾದರೂ ಮುಂದೆ ತಂತ್ರಜ್ಞಾನ ಕ್ಷೇತ್ರದ ದೊಡ್ಡ ಉತ್ಪಾದಕರ ಬೆಂಬಲ ಸಿಕ್ಕರೆ ಈ ಪರಿಕಲ್ಪನೆ ಮುಖ್ಯವಾಹಿನಿಯನ್ನೂ ಪ್ರವೇಶಿಸುವ ನಿರೀಕ್ಷೆ ಬಲವಾಗಿದೆ. ಆ ಸಂದರ್ಭ ಬಂದಾಗ ಮೊಬೈಲ್ ಫೋನುಗಳ ಜೊತೆಗೆ ಇನ್ನಿತರ ಎಲ್ಲ ವಿದ್ಯುನ್ಮಾನ ಉಪಕರಣಗಳಲ್ಲೂ ಈ ಬಗೆಯ ವಿನ್ಯಾಸ ಕಾಣಿಸಿಕೊಂಡರೆ ನಮ್ಮ ಭೂಮಿಯೂ ಕೊಂಚ ನೆಮ್ಮದಿಯಿಂದ ಉಸಿರಾಡುವಂತಾಗುತ್ತದೆ!

ಮಾರ್ಚ್ ೨೦೧೬ರ ತುಷಾರದಲ್ಲಿ ಪ್ರಕಟವಾದ ಲೇಖನ
Photo: Dave Hakkens / Wikipedia

ಕಾಮೆಂಟ್‌ಗಳಿಲ್ಲ:

badge