ಸೋಮವಾರ, ಏಪ್ರಿಲ್ 25, 2016

'eಜ್ಞಾನ' ತಂದ ಸಂತೋಷ

ಕಳೆದ ಗುರುವಾರದಿಂದ (ಏಪ್ರಿಲ್ ೨೧, ೨೦೧೬) ವಿಜಯವಾಣಿಯಲ್ಲಿ ಪ್ರಕಟವಾಗುತ್ತಿರುವ 'eಜ್ಞಾನ' ಅಂಕಣದ ಮೊದಲ ಮೂರು ಕಂತುಗಳನ್ನು ಈ ವಾರದ 'ಇಫ್ರೆಶ್'ನಲ್ಲಿ ಖುಷಿಯಿಂದ ಪ್ರಕಟಿಸುತ್ತಿದ್ದೇವೆ. ಈ ಅಂಕಣ ಕುರಿತ ಹಲವು ಪ್ರತಿಕ್ರಿಯೆಗಳು ಬಂದಿವೆ, ಬರುತ್ತಿವೆ. ಇಂತಹ ಪ್ರತಿಕ್ರಿಯೆಗಳೇ ಬರವಣಿಗೆಗೆ ಸ್ಫೂರ್ತಿತುಂಬುವ ಸಂಗತಿಗಳು. ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ದಯಮಾಡಿ ಹೀಗೆಯೇ ಹಂಚಿಕೊಳ್ಳುತ್ತಿರಿ, ಬರಹಗಳು ಹೇಗಿದ್ದರೆ ನಿಮಗಿಷ್ಟ ಎಂದು ಹೇಳುವುದನ್ನೂ ಮರೆಯದಿರಿ.

ಬಿಟ್-ಬೈಟ್ ಸಮಾಚಾರ 
ನಾವು ಟೈಪ್ ಮಾಡಿದ ಮಾಹಿತಿ - ಡೌನ್‌ಲೋಡ್ ಮಾಡಿ ತಂದ ಕಡತಗಳೆಲ್ಲ ಕಂಪ್ಯೂಟರಿನ ಮೆಮೊರಿಯಲ್ಲಿರುತ್ತವಲ್ಲ, ಅದೆಲ್ಲ ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ಮೊದಲಿಗೆ ದ್ವಿಮಾನ ಪದ್ಧತಿಯ ಅಂಕಿಗಳಾಗಿ (೧ ಅಥವಾ ೦) ಬದಲಾದಾಗಬೇಕಾದ್ದು ಅನಿವಾರ್ಯ.

ದ್ವಿಮಾನ ಸಂಖ್ಯೆಯ ಆಂಗ್ಲ ಹೆಸರು ಬೈನರಿ ಡಿಜಿಟ್; ಈ ಹೆಸರಿನ ಮೊದಲ ಎರಡು ಹಾಗೂ ಕೊನೆಯದೊಂದು ಅಕ್ಷರಗಳನ್ನು ಸೇರಿಸಿ ಬಿಟ್ ಎಂಬ ಹೆಸರು ರೂಪಗೊಂಡಿದೆ. ಇದು ಮಾಹಿತಿಯ ಪ್ರಮಾಣ ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನ.

ಎಂಟು ಬಿಟ್‌ಗಳು ಸೇರಿದಾಗ ಒಂದು ಬೈಟ್ ಆಗುತ್ತದೆ. ಇಂಗ್ಲಿಷಿನ ಅಕ್ಷರವನ್ನೋ ಅಂಕಿ-ಲೇಖನಚಿಹ್ನೆಯನ್ನೋ ಕಂಪ್ಯೂಟರಿನ ಮೆಮೊರಿಯಲ್ಲಿ ಉಳಿಸಿಡಲು ಒಂದು ಬೈಟ್ ಸ್ಥಳಾವಕಾಶ ಬೇಕು. ಮೆಗಾಬೈಟ್, ಗಿಗಾಬೈಟ್, ಟೆರಾಬೈಟುಗಳೆಲ್ಲ ಇದೇ ಬೈಟ್‌ನ ಗುಣಕಗಳು. ೧೦೨೪ ಬೈಟ್‌ಗಳು ಒಂದು ಕಿಲೋಬೈಟ್‌ಗೆ (ಕೆಬಿ), ೧೦೨೪ ಕೆಬಿ ಒಂದು ಮೆಗಾಬೈಟ್‌ಗೆ (ಎಂಬಿ), ೧೦೨೪ ಎಂಬಿ ಒಂದು ಗಿಗಾಬೈಟ್‌ಗೆ (ಜಿಬಿ) ಹಾಗೂ ೧೦೨೪ ಜಿಬಿ ಒಂದು ಟೆರಾಬೈಟ್‌ಗೆ (ಟಿಬಿ) ಸಮಾನ.

ಕಂಪ್ಯೂಟರ್ ನೆಟ್‌ವರ್ಕ್
ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕಂಪ್ಯೂಟರುಗಳ ನಡುವೆ ಸಂಪರ್ಕ ಏರ್ಪಡಿಸಿ ಆ ಮೂಲಕ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆಯನ್ನು ಕಂಪ್ಯೂಟರ್ ನೆಟ್‌ವರ್ಕ್ (ಜಾಲ) ಎಂದು ಕರೆಯುತ್ತಾರೆ.

ಯಾವುದೇ ಜಾಲದಲ್ಲಿರುವ ಕಂಪ್ಯೂಟರುಗಳು ಒಂದೇ ಕೋಣೆಯಲ್ಲಿರಬಹುದು, ಪ್ರಪಂಚದ ವಿವಿಧ ಮೂಲೆಗಳಲ್ಲೂ ಇರಬಹುದು. ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಅವುಗಳ ಹೆಸರುಗಳು ಬದಲಾಗುತ್ತವೆ: ನಿರ್ದಿಷ್ಟ ಮಿತಿಯಲ್ಲಿ - ಒಂದು ಕಟ್ಟಡ ಅಥವಾ ಆವರಣದ ಒಳಗೆ - ಅಸ್ತಿತ್ವದಲ್ಲಿರುವ ಜಾಲಗಳಿಗೆ ಲೋಕಲ್ ಏರಿಯಾ ನೆಟ್‌ವರ್ಕ್ (ಲ್ಯಾನ್) ಎಂದು ಹೆಸರು; ಇನ್ನೂ ಹೆಚ್ಚಿನ ಭೌಗೋಳಿಕ ವ್ಯಾಪ್ತಿಯಿರುವ ಜಾಲ ವೈಡ್ ಏರಿಯಾ ನೆಟ್‌ವರ್ಕ್ (ವ್ಯಾನ್).

ಇಂತಹ ಅಸಂಖ್ಯ ಜಾಲಗಳು ಹಾಗೂ ವೈಯಕ್ತಿಕ ಕಂಪ್ಯೂಟರುಗಳ ಜೋಡಣೆಯಿಂದ 'ಇಂಟರ್‌ನೆಟ್' (ಅಂತರಜಾಲ) ರೂಪುಗೊಳ್ಳುತ್ತದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವವರಾದರೂ ಈ ಜಾಲದ ಸಂಪರ್ಕ ಪಡೆದುಕೊಳ್ಳುವುದು ಸಾಧ್ಯ.

ನಿರ್ದಿಷ್ಟ ಗುಂಪುಗಳ (ಉದಾ: ಒಂದು ಸಂಸ್ಥೆಯ ಉದ್ಯೋಗಿಗಳು, ನಿರ್ದಿಷ್ಟ ಸೇವೆಯ ಗ್ರಾಹಕರು, ಯಾವುದೋ ಸಂಘಟನೆಯ ಸದಸ್ಯರು ಇತ್ಯಾದಿ) ಬಳಕೆಗಾಗಿ ಮಾತ್ರವೇ ಮೀಸಲಿರುವ ಜಾಲಗಳೂ ಇವೆ. ಅವನ್ನು 'ಇಂಟ್ರಾನೆಟ್'ಗಳೆಂದು ಕರೆಯುತ್ತಾರೆ.

ಐಪಿ ಅಡ್ರೆಸ್
ಅಂತರಜಾಲದ ವ್ಯಾಪ್ತಿ ವಿಸ್ತರಿಸುತ್ತ ಹೋದಂತೆ ಹೆಚ್ಚುಹೆಚ್ಚು ಸಾಧನಗಳು ಅದರ ಸಂಪರ್ಕಕ್ಕೆ ಬರುತ್ತಿವೆ. ಹೀಗೆ ಅಂತರಜಾಲದ ಸಂಪರ್ಕದಲ್ಲಿರುವ ಪ್ರತಿಯೊಂದು ಸಾಧನವನ್ನೂ ಪ್ರತ್ಯೇಕವಾಗಿ ಗುರುತಿಸಲು ಬಳಕೆಯಾಗುವ ವಿಳಾಸವನ್ನು ಐಪಿ ಅಡ್ರೆಸ್ ಎಂದು ಕರೆಯುತ್ತಾರೆ. ಈ ಹೆಸರಿನಲ್ಲಿರುವ 'ಐಪಿ', ಇಂಟರ್‌ನೆಟ್ ಪ್ರೋಟೊಕಾಲ್ ಎನ್ನುವುದರ ಹ್ರಸ್ವರೂಪ.

ಅಂತರಜಾಲದಲ್ಲಿ ವಿವಿಧ ಬಗೆಯ ಸಾಧನಗಳ ನಡುವೆ ವಿನಿಮಯವಾಗುವ ಮಾಹಿತಿ ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ ಎಂದು ಗುರುತಿಸಲು ಈ ವಿಳಾಸ ಬಳಕೆಯಾಗುತ್ತದೆ.

ಬರೆದ ಪತ್ರವನ್ನು ಅಂಚೆಗೆ ಹಾಕುವ ಮೊದಲು ಲಕೋಟೆಯ ಮೇಲೆ ಅದು ತಲುಪಬೇಕಾದ ವಿಳಾಸ ಹಾಗೂ ಅದನ್ನು ಕಳುಹಿಸುತ್ತಿರುವವರ ವಿಳಾಸ ಬರೆಯುತ್ತೇವಲ್ಲ, ಇದೂ ಹಾಗೆಯೇ.

ನೀವು ಗೂಗಲ್ ಸರ್ಚ್ ಮಾಡಲು ಹೊರಟಿದ್ದೀರಿ ಎಂದುಕೊಳ್ಳೋಣ. ನೀವು ಹೋಗಬೇಕಾದ್ದು ಗೂಗಲ್‌ಗೆ ಎಂದು ಕಂಪ್ಯೂಟರಿಗೆ ಗೊತ್ತಾಗುವುದು ಅದರ ವಿಳಾಸ, ಅಂದರೆ ಯುಆರ್‌ಎಲ್‌ನಿಂದ. ಪ್ರತಿ ಯುಆರ್‌ಎಲ್ ಹಿಂದೆಯೂ ಒಂದು ಐಪಿ ವಿಳಾಸ ಇರುತ್ತದೆ.  ಹುಡುಕಾಟದ ಫಲಿತಾಂಶವನ್ನು ಕಳುಹಿಸಬೇಕಾದ್ದು ನಿಮಗೆ ಎಂದು ಗೂಗಲ್‌ಗೆ ಗೊತ್ತಾಗುವುದೂ ಅಷ್ಟೆ, ನಿಮ್ಮ ಕಂಪ್ಯೂಟರಿನ ಐಪಿ ವಿಳಾಸದಿಂದ!

ಕಾಮೆಂಟ್‌ಗಳಿಲ್ಲ:

badge