ಮಂಗಳವಾರ, ಏಪ್ರಿಲ್ 12, 2016

ಜಾಲಲೋಕದಲ್ಲಿ ಚಿತ್ರಗಳ ಛಾಯೆ

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿ ಪ್ರಕಟವಾದ ಮೊದಲ ಚಿತ್ರ
ಈ ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ಇದೆಯಲ್ಲ, ಇದು ಮಾಹಿತಿಯ ಮಹಾಸಾಗರ. ಎಲ್ಲ ವಿಷಯಗಳನ್ನು ಕುರಿತ ಎಲ್ಲ ಬಗೆಯ ಮಾಹಿತಿಯೂ ಇಲ್ಲಿ ಲಭ್ಯ. ಈ ಮಾಹಿತಿ ಯಾವ ರೂಪದಲ್ಲಾದರೂ ಇರಬಹುದು - ಪಠ್ಯ, ಚಿತ್ರ, ಧ್ವನಿ, ವೀಡಿಯೋ,... ಹೀಗೆ.

ಚಿತ್ರರೂಪದ ಮಾಹಿತಿಯೆಂದರೆ ನಮಗೆ ಬಹಳ ಪ್ರೀತಿ. ಚಿತ್ರಗಳಿಲ್ಲದ ಉದ್ದನೆಯ ಬರಹವನ್ನೂ ಅಷ್ಟೇ ಉದ್ದದ ಚಿತ್ರಲೇಖನವನ್ನೂ ಒಟ್ಟಿಗೆ ಕೊಟ್ಟರೆ ಚಿತ್ರಗಳಿರುವ ಲೇಖನವನ್ನು ಮೆಚ್ಚುವವರೇ ಹೆಚ್ಚುಮಂದಿ. 'ಪಾತಾಳದಲ್ಲಿ ಪಾಪಚ್ಚಿ' ಕೃತಿಯಲ್ಲಿ ಪಾಪಚ್ಚಿ ಹೇಳುತ್ತಾಳಲ್ಲ, ಹಾಗೆ ಚಿತ್ರಗಳಿಲ್ಲದ ಬರಹ ಹೂವಿಲ್ಲದ ಗಿಡದಂತೆ!

ಹಾಗಾಗಿ ಜಾಲಲೋಕದಲ್ಲೂ ಚಿತ್ರಗಳ ಭರಾಟೆ ಜೋರು. ಚಿತ್ರಗಳಿಲ್ಲದ ಜಾಲತಾಣಗಳೇ ಇಲ್ಲವೆಂದರೂ ಸರಿಯೇ. ಸಮಾಜಜಾಲಗಳಲ್ಲಂತೂ (ಸೋಶಿಯಲ್ ನೆಟ್‌ವರ್ಕ್) ನಾವು ಕೂತಿದ್ದು - ನಿಂತದ್ದು. ಕಂಡಿದ್ದು - ತಿಂದದ್ದರ ಚಿತ್ರಗಳನ್ನೆಲ್ಲ ಹಂಚಿಕೊಳ್ಳುತ್ತಲೇ ಇರುತ್ತೇವೆ.
ಫೇಸ್‌ಬುಕ್‌ನಂತಹ ಸಮಾಜಜಾಲಗಳಲ್ಲಿ ಚಿತ್ರಗಳನ್ನು ಹಂಚಿಕೊಳ್ಳುವುದು ಹಾಗಿರಲಿ, ಛಾಯಾಚಿತ್ರಗಳನ್ನು ಹಂಚಿಕೊಳ್ಳಲಿಕ್ಕೆಂದೇ ಪ್ರತ್ಯೇಕ ಸಮಾಜಜಾಲಗಳಿವೆ: ಇನ್ಸ್‌ಟಾಗ್ರಾಮ್ ಎನ್ನುವ ಇಂತಹ ತಾಣವೊಂದರಲ್ಲಿ ಪ್ರತಿ ನಿಮಿಷವೂ ಸಾವಿರಾರು ಫೋಟೋಗಳನ್ನು ಹಂಚಿಕೊಳ್ಳಲಾಗುತ್ತದೆ.

ವಿಶ್ವವ್ಯಾಪಿ ಜಾಲದ ಮೂಲಕ ಛಾಯಾಚಿತ್ರಗಳನ್ನು ಹಂಚಿಕೊಳ್ಳುವ ಈ ಅಭ್ಯಾಸ ಇಂದು ನಿನ್ನೆಯದೇನೂ ಅಲ್ಲ.

ಅದು ೧೯೯೨ನೇ ಇಸವಿ. ಟಿಮ್ ಬರ್ನರ್‍ಸ್-ಲೀ ಎಂಬ ವಿಜ್ಞಾನಿ ಸ್ವಿಟ್ಸರ್‌ಲೆಂಡಿನ ಸರ್ನ್ (CERN) ಪ್ರಯೋಗಾಲಯದಲ್ಲಿ ವಿಶ್ವವ್ಯಾಪಿ ಜಾಲವನ್ನು, ಮೊತ್ತಮೊದಲ ಜಾಲತಾಣವನ್ನು ರೂಪಿಸಿ ಇನ್ನೂ ೨-೩ ವರ್ಷಗಳಷ್ಟೇ ಆಗಿದ್ದವು.

ಅನೇಕ ಸಂಸ್ಥೆಗಳಲ್ಲಿ ನಡೆಯುವಂತೆ ಸರ್ನ್‌ನಲ್ಲೂ ಉದ್ಯೋಗಿಗಳ ಬಿಡುವಿನ ವೇಳೆಯ ಮನರಂಜನೆಗೆಂದು ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದವು. ಇಂತಹ ಕಾರ್ಯಕ್ರಮಗಳಲ್ಲಿ ಅಣಕವಾಡುಗಳನ್ನು ಹಾಡುವ, ಕುಚೇಷ್ಟೆಮಾಡುವ 'Les Horribles Cernettes' (ಸರ್ನ್‌ನ ಅಸಹನೀಯ ಹುಡುಗಿಯರು) ಎಂಬ ಗಾಯಕಿಯರ ತಂಡವೊಂದು ಅಲ್ಲಿತ್ತು. ಒಂದು ಕಾರ್ಯಕ್ರಮಕ್ಕೆಂದು ಈ ತಂಡದ ಗಾಯಕಿಯರು ಸಿದ್ಧವಾಗಿದ್ದಾಗ ಅಲ್ಲಿನ ಕಂಪ್ಯೂಟರ್ ವಿಜ್ಞಾನಿಯೊಬ್ಬರು ಅವರ ಛಾಯಾಚಿತ್ರವನ್ನು ಕ್ಲಿಕ್ಕಿಸಿದರು. ಮುಂದೆ ಈ ತಂಡದ ಹಾಡುಗಳ ಆಲ್ಬಮ್ ಸಿದ್ಧಪಡಿಸಿ ಅದರ ಹೊರಕವಚದ ಮೇಲೆ ಆ ಚಿತ್ರವನ್ನು ಮುದ್ರಿಸಬಹುದು ಎನ್ನುವುದು ಅವರ ಯೋಚನೆಯಾಗಿತ್ತು.

ಆ ಛಾಯಾಚಿತ್ರವನ್ನು ಕಂಪ್ಯೂಟರಿಗೆ ವರ್ಗಾಯಿಸಿ ಚೆಂದಗಾಣಿಸುತ್ತಿದ್ದಾಗ ಅದು ಟಿಮ್ ಬರ್ನರ್‍ಸ್-ಲೀ ಕಣ್ಣಿಗೆ ಬಿತ್ತು. ಸರ್ನ್‌ನ ಸಾಮಾಜಿಕ ಚಟುವಟಿಕೆಗಳಿಗೆಂದು ಒಂದು ವೆಬ್ ಪುಟ ರೂಪಿಸುವ ಯೋಚನೆಯಲ್ಲಿದ್ದ ಅವರು ಈ ಚಿತ್ರವನ್ನು ಕೇಳಿ ಪಡೆದುಕೊಂಡರು. ವೆಬ್ ಪುಟಕ್ಕೆ ಸೇರಿಸಿಯೂಬಿಟ್ಟರು. ಆ ಮೂಲಕ ಸರ್ನ್ ಗಾಯಕಿಯರ ಛಾಯಾಚಿತ್ರಕ್ಕೆ 'ವಿಶ್ವವ್ಯಾಪಿ ಜಾಲದಲ್ಲಿ ಪ್ರಕಟವಾದ ಮೊದಲ ಚಿತ್ರ' ಎನ್ನುವ ಹೆಗ್ಗಳಿಕೆ ಸಿಕ್ಕಿತು.

ಅಂದಿನ ವೆಬ್ ಪುಟಗಳು ಇಂದು ನಾವು ನೋಡುವಂತಹ ಪುಟಗಳಾಗಿರಲಿಲ್ಲ. ಹಳೆಯ ಮಾದರಿಯ ಪ್ರದರ್ಶಕಗಳು (ಮಾನಿಟರ್) ಹಾಗೂ ನಿಧಾನದ ಅಂತರಜಾಲ ಸಂಪರ್ಕಕ್ಕೆ ಹೊಂದಬೇಕಾದರೆ ಚಿತ್ರ ಬಹಳ ಸಣ್ಣದಾಗಷ್ಟೇ ಇರುವುದು ಸಾಧ್ಯವಿತ್ತು. ಹಾಗಾಗಿ ಸರ್ನ್ ಗಾಯಕಿಯರ ಚಿತ್ರ ಸ್ಟಾಂಪ್ ಸೈಜಿನಲ್ಲೇ ಇದ್ದರೂ ವೆಬ್ ಪುಟದ ಮೂಲಕ ತೆರೆದುಕೊಳ್ಳಲು ಭರ್ತಿ ಒಂದು ನಿಮಿಷ ಬೇಕಾಗುತ್ತಿತ್ತಂತೆ!

ಮೊತ್ತಮೊದಲ ಬಾರಿಗೆ ವಿಶ್ವವ್ಯಾಪಿ ಜಾಲಕ್ಕೆ ಛಾಯಾಚಿತ್ರವೊಂದು ಸೇರಿದ ನಂತರದ ಎರಡೂ ಚಿಲ್ಲರೆ ದಶಕಗಳಲ್ಲಿ ಪರಿಸ್ಥಿತಿ ಎಷ್ಟೆಲ್ಲ ಬದಲಾಗಿದೆ: ಅಂತರಜಾಲ ಸಂಪರ್ಕಗಳು ತಮ್ಮ ವೇಗವನ್ನು ಅದೆಷ್ಟೋ ಪಟ್ಟು ಹೆಚ್ಚಿಸಿಕೊಂಡಿವೆ, ಆಧುನಿಕ ಕ್ಯಾಮೆರಾಗಳು ಕ್ಲಿಕ್ಕಿಸುವ ಅದ್ಭುತ ಗುಣಮಟ್ಟದ ಚಿತ್ರಗಳನ್ನು ಅಷ್ಟೇ ಅದ್ಭುತವಾಗಿ ಪ್ರದರ್ಶಿಸುವ ಪರದೆಗಳು ನಮ್ಮ ಮುಂದಿವೆ, ವೆಬ್‌ಪುಟಗಳಲ್ಲಿ ದೊಡ್ಡದೊಡ್ಡ ಚಿತ್ರಗಳನ್ನೂ ಥಟ್ಟನೆ ತೆರೆದಿಡುವ ತಂತ್ರಜ್ಞಾನಗಳೂ ರೂಪುಗೊಂಡಿವೆ.

ಚಿತ್ರಗಳನ್ನು ಅಪ್‌ಲೋಡ್ ಮಾಡುವುದಂತೂ ಈಗ ಚಿಟಿಕೆ ಹೊಡೆದಷ್ಟು ಸುಲಭ. ಹಾಗಾಗಿಯೇ ಏನೋ ನಾವು ಫೋಟೋ ತೆಗೆಯುವುದು - ಹಂಚಿಕೊಳ್ಳುವುದು ಎರಡೂ ತೀರಾ ಜಾಸ್ತಿಯಾಗಿದೆ. ಫೇಸ್‌ಬುಕ್‌ನಲ್ಲಂತೂ ಬಹುಪಾಲು ಛಾಯಾಚಿತ್ರಗಳದ್ದೇ ಭರಾಟೆ. ಟ್ವಿಟರ್ - ಇನ್ಸ್‌ಟಾಗ್ರಾಮ್‌ಗಳಲ್ಲೂ ಅಷ್ಟೇ.

ಇದರ ಅನುಕೂಲಗಳು ಹಲವು. ಪಠ್ಯರೂಪಕ್ಕಿಂತ ಹೆಚ್ಚು ಪರಿಣಾಮಕಾರಿಯಾದ ಚಿತ್ರರೂಪದ ಮಾಹಿತಿಯಿಂದ ಸಂವಹನ ಇನ್ನಷ್ಟು ಸುಲಭವಾಗಿದೆ. ಬಂಧುಮಿತ್ರರು ಭೌಗೋಳಿಕವಾಗಿ ದೂರವಿದ್ದರೂ ಮಾನಸಿಕವಾಗಿ ಹತ್ತಿರವೇ ಉಳಿಯಲು ಫೋಟೋಗಳು ನೆರವಾಗುತ್ತಿವೆ.

ಆದರೆ ಛಾಯಾಚಿತ್ರಗಳನ್ನು ಹಂಚಿಕೊಳ್ಳುವ ಭರಾಟೆಯಲ್ಲಿ ನಾವು ಅನೇಕ ತಪ್ಪುಗಳನ್ನೂ ಮಾಡುತ್ತಿದ್ದೇವೆ. ಹಿಂದೆಮುಂದೆ ಯೋಚಿಸದೆ ಎಲ್ಲ ಛಾಯಾಚಿತ್ರಗಳನ್ನೂ ಹಂಚಿಕೊಳ್ಳುವುದು ಇಂತಹ ತಪ್ಪುಗಳಲ್ಲೊಂದು. ಕಾಲೇಜು ದಿನಗಳಲ್ಲಿ ಕೂಲ್ ಆಗಿ ಕಾಣಲೆಂದು ಯಾವಯಾವುದೋ ಸನ್ನಿವೇಶ-ಭಂಗಿಗಳಲ್ಲಿ ತೆಗೆಸಿಕೊಂಡ ಛಾಯಾಚಿತ್ರ ಆಗ ಹೇಗೆ ಕಂಡರೂ ಮುಂದೆ ಅದೇ ಚಿತ್ರ ನಮ್ಮ ವ್ಯಕ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಬಹುದು. ನಮಗೆ ತಮಾಷೆಯಾಗಿ ಕಾಣುವ ಫೋಟೋ ಅದರಲ್ಲಿರುವ ಇನ್ನಾರಿಗೋ ಮುಜುಗರ ಉಂಟುಮಾಡಬಲ್ಲದು. ಅಷ್ಟೇ ಅಲ್ಲ, ಉದ್ಯೋಗದಾತರು ಅಭ್ಯರ್ಥಿಗಳ ಬಗ್ಗೆ ಸಮಾಜಜಾಲದಲ್ಲಿ ಮಾಹಿತಿ ಕಲೆಹಾಕುವುದು ಸಾಮಾನ್ಯವಾಗಿರುವ ಈ ದಿನಗಳಲ್ಲಿ ಆಕ್ಷೇಪಾರ್ಹ ಚಿತ್ರಗಳು ನಮ್ಮನ್ನು ಹಲವಾರು ರೀತಿಯಲ್ಲಿ ತೊಂದರೆಗೆ ಸಿಲುಕಿಸಬಲ್ಲವು.

ಅಷ್ಟೇ ಅಲ್ಲ, ಛಾಯಾಚಿತ್ರಗಳನ್ನು ಹಂಚಿಕೊಳ್ಳುವ ಅತ್ಯುತ್ಸಾಹ ನಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿರಬಹುದು ಎಂದು ತಜ್ಞರು ಹೇಳುತ್ತಾರೆ. ಕೆಲವರಿಗಂತೂ ವಿವಿಧ ಭಂಗಿಯ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಶೇರ್ ಮಾಡುತ್ತಿರುವುದು ಒಂದು ಗೀಳಿನಂತೆಯೇ ಆಗಿರುತ್ತದಂತೆ.

ಛಾಯಾಚಿತ್ರವಷ್ಟೇ ಅಲ್ಲ, ಯಾವ ರೂಪದಲ್ಲಿರುವ ಮಾಹಿತಿಯೇ ಆದರೂ ಅದು ವಿಶ್ವವ್ಯಾಪಿ ಜಾಲದಲ್ಲಿ ಪ್ರಕಟವಾಗುತ್ತಿದ್ದಂತೆ ಬಹುತೇಕ ಯಾವ ನಿಯಂತ್ರಣವೂ ಇಲ್ಲದೆ ಪ್ರಸಾರವಾಗುತ್ತ ಸಾಗುತ್ತದೆ. ನಮ್ಮ ಮಾಹಿತಿಯ ಪ್ರತಿಗಳು ನಮಗೇ ಗೊತ್ತಿಲ್ಲದಂತೆ ಹತ್ತಾರು ಕಡೆಗಳಲ್ಲಿ ಉಳಿದುಕೊಂಡುಬಿಡುತ್ತವೆ; ಜಾಲಲೋಕದ ಇತಿಹಾಸ ದಾಖಲಿಸುವ ಆರ್ಕೈವ್‌ಗಳ ಸಂದಿಗೊಂದಿಗಳಲ್ಲಿ ಸಿಕ್ಕಿಕೊಂಡಿರುತ್ತವೆ. ಇವುಗಳ ಪೈಕಿ ಆಕ್ಷೇಪಾರ್ಹವಾದ ಯಾವುದೋ ತುಣುಕು ನಾವು ನಿರೀಕ್ಷಿಸದ ಸಂದರ್ಭದಲ್ಲಿ ಪ್ರತ್ಯಕ್ಷವಾದರೆ ಡೌಟೇ ಇಲ್ಲ, ಮುಜುಗರ ಗ್ಯಾರಂಟಿ!

ಮುಂದೆಂದೋ ನಮಗೆ ಮುಜುಗರ ಉಂಟುಮಾಡುವಂತಹ ಇಂತಹ ಯಾವುದೇ ಮಾಹಿತಿಯನ್ನು ಜಾಲಲೋಕದೊಳಗೆ ಸೇರಿಸದೇ ಇರುವುದು ಈ ಸಮಸ್ಯೆಗೆ ಸರಳ ಪರಿಹಾರ ಎನ್ನಬಹುದು. ಈ ಪರಿಹಾರ ಕಂಡುಕೊಳ್ಳುವುದೂ ಸುಲಭ - ಸಮಾಜಜಾಲಗಳಲ್ಲಿ ನಮ್ಮ ಎಲ್ಲ ಫೋಟೋಗಳನ್ನೂ ಅತ್ಯುತ್ಸಾಹದಿಂದ ಹಂಚಿಕೊಳ್ಳುವ ಮುನ್ನ ಇದು ಸರಿಯೇ ಎಂದು ಮತ್ತೊಂದು ಬಾರಿ ಯೋಚಿಸಿದರೆ ಸಾಕು!

ಇಷ್ಟರಮೇಲೆ ಫೋಟೋಗಳನ್ನು ಹಂಚಿಕೊಳ್ಳುವುದೇ ಆದರೆ ಆಯಾ ತಾಣದಲ್ಲಿರುವ ಸುರಕ್ಷೆ ಹಾಗೂ ಗೌಪ್ಯತೆಯ ಆಯ್ಕೆಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಒಳ್ಳೆಯದು. ನಮ್ಮ ಫೋಟೋಗಳು ಎಲ್ಲರಿಗೂ ಮುಕ್ತವಾಗಿ ದೊರಕುವಂತೆ ಮಾಡದೆ ಅವನ್ನು ನಿರ್ದಿಷ್ಟ ವ್ಯಕ್ತಿಗಳ ಹಾಗೂ ಮಿತ್ರರ ಬಳಗದ ಜೊತೆಗೆ ಮಾತ್ರವೇ ಹಂಚಿಕೊಳ್ಳುವುದು ಕೂಡ ಒಳ್ಳೆಯ ಅಭ್ಯಾಸವೇ.

ಏಪ್ರಿಲ್ ೨೦೧೬ರ 'ತುಷಾರ'ದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge