ಮಂಗಳವಾರ, ಸೆಪ್ಟೆಂಬರ್ 6, 2016

ಗ್ಯಾಜೆಟ್ ಜಗತ್ತಿಗೂ ಬಂದ ಟೂ-ಇನ್-ಒನ್

ಟಿ. ಜಿ. ಶ್ರೀನಿಧಿ


ಹಿಂದಿನ ಕಾಲದಲ್ಲಿ ರೇಡಿಯೋ ಪ್ರತಿಷ್ಠೆಯ ಸಂಕೇತವಾಗಿತ್ತಂತೆ. ಇಷ್ಟು ದೊಡ್ಡ ರೇಡಿಯೋ ಮನೆಯಲ್ಲಿದೆ ಎನ್ನುವುದೇ ಅಂದಿನ ಮಟ್ಟಿಗೆ ವಿಶೇಷವಾದ ಸಂಗತಿಯಾಗಿದ್ದಿರಬೇಕು.

ಆಮೇಲೆ ಯಾವಾಗಲೋ ಟೇಪ್ ರೆಕಾರ್ಡರ್ ಮಾರುಕಟ್ಟೆಗೆ ಬಂತು. ಅದರೊಡನೆ ರೇಡಿಯೋ ಸ್ಟೇಶನ್ನಿನವರು ಪ್ರಸಾರ ಮಾಡುವ ಹಾಡನ್ನಷ್ಟೇ ಕೇಳಬೇಕಾದ ಅನಿವಾರ್ಯತೆಯೂ ಹೋಯಿತು; ನಮಗಿಷ್ಟವಾದ ಹಾಡನ್ನು ಬೇಕಾದಾಗ ಬೇಕಾದಷ್ಟು ಸಲ ಕೇಳುವುದು ಸಾಧ್ಯವಾಯಿತು.

ರೇಡಿಯೋ ಜೊತೆಗೆ ಈ ಹೊಸ ಸಾಧನವನ್ನೂ ಮನೆಯಲ್ಲಿಟ್ಟುಕೊಳ್ಳುವುದು ಒಂದಷ್ಟು ದಿನದ ಮಟ್ಟಿಗೆ ಫ್ಯಾಶನಬಲ್ ಅನಿಸಿತೇನೋ ಸರಿ; ಆದರೆ ಕೊಂಚ ಸಮಯದ ನಂತರ ಎರಡೆರಡು ಪೆಟ್ಟಿಗೆಗಳೇಕಿರಬೇಕು ಎನ್ನುವ ಯೋಚನೆ ಶುರುವಾಯಿತು. ಆಗ ಬಂದದ್ದು ರೇಡಿಯೋ ಸೌಲಭ್ಯವೂ ಇರುವ ಟೇಪ್‌ರೆಕಾರ್ಡರ್, ಅರ್ಥಾತ್ 'ಟೂ-ಇನ್-ಒನ್'.


ಗ್ಯಾಜೆಟ್ ಜಗತ್ತಿನ ಸದ್ಯದ ಪರಿಸ್ಥಿತಿಯೂ ಹೆಚ್ಚೂಕಡಿಮೆ ಹೀಗೆಯೇ ಇದೆ. ನಮ್ಮ ಬಹಳಷ್ಟು ಕೆಲಸಗಳು ಇದೀಗ ಮೊಬೈಲ್ ಮೂಲಕವೇ ಆಗುತ್ತಿವೆ. ಮೊಬೈಲಿಗಿಂತ ಕೊಂಚ ದೊಡ್ಡ ಪರದೆ ಬೇಕಾದರೆ ಟ್ಯಾಬ್ಲೆಟ್ ಇದೆ. ಒಟ್ಟಿನಲ್ಲಿ ಟಚ್‌ಸ್ಕ್ರೀನ್ ಸಾಧನಗಳಿಗೆ ನಾವು ಚೆನ್ನಾಗಿಯೇ ಒಗ್ಗಿಕೊಂಡಿದ್ದೇವೆ. ವಾಟ್ಸಾಪ್‌ನಲ್ಲಿ ಟೈಪಿಸಲಿಕ್ಕೆ, ಬ್ರೌಸಿಂಗ್ ಮಾಡಲಿಕ್ಕೆಲ್ಲ ಸ್ಮಾರ್ಟ್‌ಫೋನ್ ಉಪಯೋಗ ನಮಗೆ ಬಹಳ ಸಲೀಸು. ಸೋಫಾಗೆ ಒರಗಿಕೊಂಡೋ ಮಂಚದ ಮೇಲೆ ಮಲಗಿಕೊಂಡೋ ಯೂಟ್ಯೂಬ್ ನೋಡುವುದಕ್ಕೆ-ಕತೆಪುಸ್ತಕ ಓದುವುದಕ್ಕೂ ಸರಿಯೇ, ಟ್ಯಾಬ್ಲೆಟ್ಟುಗಳು ಹೇಳಿ ಮಾಡಿಸಿದ ಜೋಡಿ. ಪ್ರತ್ಯೇಕ ಟ್ಯಾಬ್ಲೆಟ್ ಇಲ್ಲದಿದ್ದರೂ ಪರವಾಗಿಲ್ಲ, ದೊಡ್ಡ ಪರದೆಯ ಫೋನುಗಳೇ ಇವೆಯಲ್ಲ!

ಆದರೆ ಉದ್ದನೆಯದೊಂದು ಇಮೇಲ್ ಬರೆಯಬೇಕೆಂದೋ, ಆಫೀಸಿನ ಕಡತಗಳನ್ನು ಸಿದ್ಧಪಡಿಸಬೇಕೆಂದೋ ಹೇಳಿ ನೋಡಿ, ಮೊಬೈಲು-ಟ್ಯಾಬ್ಲೆಟ್ಟುಗಳ ಕಟ್ಟಾ ಅಭಿಮಾನಿಗಳಿಗೂ ಒಂದು ಕೀಬೋರ್ಡ್ ಇದ್ದರೆ ಚೆನ್ನಾಗಿತ್ತಲ್ಲ ಎನ್ನಿಸಲು ಶುರುವಾಗುತ್ತದೆ.

ನಿಜ, ಹೆಚ್ಚಿನ ಟೈಪಿಂಗ್ ನಿರೀಕ್ಷಿಸುವ ಕೆಲಸಗಳಿಗೆ ಮೊಬೈಲು-ಟ್ಯಾಬ್ಲೆಟ್ಟುಗಳನ್ನು ಬಳಸುವುದು ಎಷ್ಟೇ ಪರಿಣತ ಬಳಕೆದಾರರಿಗಾದರೂ ಕಿರಿಕಿರಿಯ ಕೆಲಸವೇ ಸರಿ. ಹಾಗಾಗಿಯೇ ಬಹಳಷ್ಟು ಜನ ಅವುಗಳ ಜೊತೆಗೆ ಲ್ಯಾಪ್‌ಟಾಪನ್ನೂ  ಬಳಸುತ್ತಾರೆ: ಇಂತಿಷ್ಟು ಕೆಲಸಕ್ಕೆ ಫೋನು (ಅಥವಾ ಟ್ಯಾಬೆಟ್ಟು), ಮಿಕ್ಕಿದ್ದಕ್ಕೆ ಲ್ಯಾಪ್‌ಟಾಪು ಎನ್ನುವುದು ಅನೇಕರು ಪಾಲಿಸುವ ಸೂತ್ರ. ಹಿಂದಿನಕಾಲದ ರೇಡಿಯೋ-ಟೇಪ್ ರೆಕಾರ್ಡರ್ ಜೋಡಿಯಂತೆ.

ರೇಡಿಯೋ-ಟೇಪ್‌ರೆಕಾರ್ಡರುಗಳಾದರೆ ಮನೆಯ ಮೂಲೆಯಲ್ಲೊಂದು ಕಡೆ ಕುಳಿತಿರುತ್ತಿದ್ದವು. ಆದರೆ ಇಂದಿನ ಗ್ಯಾಜೆಟ್‌ಗಳು ಹಾಗಲ್ಲವಲ್ಲ - ನಾವು ಹೋದಕಡೆಗೆಲ್ಲ ಅವನ್ನೂ ಕೊಂಡೊಯ್ಯುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಬರಿಯ ಗ್ಯಾಜೆಟ್‌ಗಳನ್ನಷ್ಟೇ ಏಕೆ, ಅವುಗಳ ಚಾರ್ಜರುಗಳನ್ನೂ ಹೊತ್ತುಕೊಂಡು ಹೋಗಬೇಕು. ಮೊಬೈಲಿನ ಚಾರ್ಜರ್ ಆದರೇನೋ ಸರಿ, ಲ್ಯಾಪ್‌ಟಾಪಿನ ಚಾರ್ಜರ್ ಅಂತೂ ಹೆಚ್ಚೂಕಡಿಮೆ ಅರ್ಧ ಲ್ಯಾಪ್‌ಟಾಪಿನಷ್ಟೇ ಭಾರವಿರುತ್ತದೆ. ಒಂದುಸಮಯ ಮೊಬೈಲಿನ ಚಾರ್ಜರನ್ನು ಬೇರೆಯವರಿಂದ ಕೇಳಿಕೊಂಡು ಬಳಸಬಹುದು; ಆದರೆ ಲ್ಯಾಪ್‌ಟಾಪಿಗೆ ಅದರದೇ ಚಾರ್ಜರ್ ಆಗಬೇಕು!

ಪ್ರತ್ಯೇಕ ರೇಡಿಯೋ ಹಾಗೂ ಟೇಪ್ ರೆಕಾರ್ಡರುಗಳನ್ನು ಬಳಸುವ ಅನಿವಾರ್ಯತೆಯನ್ನು 'ಟೂ-ಇನ್-ಒನ್' ತಪ್ಪಿಸಿತಲ್ಲ, ಅಂಥದ್ದೇನಾದರೂ ಗ್ಯಾಜೆಟ್ ಲೋಕದಲ್ಲೂ ಬಂದರೆ ಈ ಸಮಸ್ಯೆ ಪರಿಹಾರವಾಗಬಹುದೇ?

ಹೈಬ್ರಿಡ್ ಕಂಪ್ಯೂಟರ್ 
ಖಂಡಿತಾ. ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನವಾಗಿ ಟೂ-ಇನ್-ಒನ್‌ಗಳು ಗ್ಯಾಜೆಟ್ ಜಗತ್ತಿಗೆ ಈಗಾಗಲೇ ಪ್ರವೇಶಿಸಿಬಿಟ್ಟಿವೆ. ಹೈಬ್ರಿಡ್ ಕಂಪ್ಯೂಟರ್ ಅಥವಾ 'ಟ್ಯಾಬ್ಲೆಟ್-ಲ್ಯಾಪ್‌ಟಾಪ್ ಹೈಬ್ರಿಡ್'ಗಳೆಂದೂ ಕರೆಸಿಕೊಳ್ಳುವ ಈ ಸಾಧನಗಳು ಟ್ಯಾಬ್ಲೆಟ್ ಹಾಗೂ ಲ್ಯಾಪ್‌ಟಾಪ್ ಕಂಪ್ಯೂಟರುಗಳ ನಡುವಿನ ವ್ಯತ್ಯಾಸವನ್ನು ನಿಧಾನಕ್ಕೆ ಹೋಗಲಾಡಿಸುತ್ತಿವೆ.

ಲ್ಯಾಪ್‌ಟಾಪ್ ಕಂಪ್ಯೂಟರಿನಲ್ಲಿ ಅನುಕೂಲಕರ ಗಾತ್ರದ (ಸುಮಾರು ೧೦ರಿಂದ ೧೫ ಇಂಚು) ಪರದೆಯಿರುತ್ತದೆ, ಕೀಲಿಮಣೆಯೂ ಇರುತ್ತದೆ. ಇವೆರಡನ್ನೂ ಬೇಕೆಂದಾಗ ಬೇರೆಮಾಡುವಂತಿದ್ದರೆ? ಸಿನಿಮಾ ನೋಡುವಾಗ ಪರದೆಯನ್ನಷ್ಟೆ (ಟ್ಯಾಬ್ಲೆಟ್ಟಿನಂತೆ) ಬಳಸಿ ಇಮೇಲ್ ಟೈಪಿಸುವಾಗ ಕೀಲಿಮಣೆಯನ್ನು ಜೋಡಿಸಿಕೊಳ್ಳಬಹುದು. ಇಮೇಲ್ ಮುಗಿಸಿದ ಮೇಲೆ ಕೀಲಿಮಣೆ ಕಿತ್ತಿಟ್ಟರಾಯಿತು, ಆವರೆಗೂ ಲ್ಯಾಪ್‌ಟಾಪ್ ಆಗಿದ್ದದ್ದು ಟ್ಯಾಬ್ಲೆಟ್ ಆಗಿ ಬದಲಾಗಿಬಿಡುತ್ತದೆ! ಅಷ್ಟೇ ಅಲ್ಲ, ಸಾಮಾನ್ಯವಾಗಿ ಲ್ಯಾಪ್‌ಟಾಪ್‌ಗಳಲ್ಲಷ್ಟೆ ಇರುವ ಸಂಸ್ಕರಣಾ ಸಾಮರ್ಥ್ಯ, ಮತ್ತು ಅವುಗಳಲ್ಲಿ ನಾವು ಬಳಸುವ ತಂತ್ರಾಂಶದ ಸವಲತ್ತುಗಳು ಟ್ಯಾಬ್ಲೆಟ್ಟಿನಲ್ಲೂ ದೊರಕುವುದು ಸಾಧ್ಯವಾಗುತ್ತದೆ.

ಟೂ-ಇನ್-ಒನ್ ಕಂಪ್ಯೂಟರುಗಳ ಸೃಷ್ಟಿಯ ಹಿಂದಿರುವುದು ಇದೇ ಆಲೋಚನೆ. ಇಂತಹ ಕಂಪ್ಯೂಟರುಗಳಲ್ಲಿ ಸಾಮಾನ್ಯ ಟ್ಯಾಬ್ಲೆಟ್ಟುಗಳಿಗಿಂತ ಕೊಂಚ ದೊಡ್ಡ ಗಾತ್ರದ (ಹಾಗೂ ಲ್ಯಾಪ್‌ಟಾಪ್‌ಗಿಂತ ಕೊಂಚ ಸಣ್ಣದಾದ) ಪರದೆ ಇರುವುದು ಸಾಮಾನ್ಯ. ಕೆಲವು ಮಾದರಿಗಳಲ್ಲಿ ಪ್ರತ್ಯೇಕ ಕೀಲಿಮಣೆ ಇದ್ದರೆ ಇನ್ನು ಕೆಲವು ಮಾದರಿಗಳಲ್ಲಿ ಪರದೆಯನ್ನು ಮುಚ್ಚುವ ಕವಚದಲ್ಲೇ (ಟ್ಯಾಬ್ಲೆಟ್ ಕವರ್) ಕೀಲಿಮಣೆಯೂ ಅಡಕವಾಗಿರುತ್ತದೆ. ಪ್ರತ್ಯೇಕ ಕೀಲಿಮಣೆ ಇರುವ ಮಾದರಿಗಳಲ್ಲಿ ಟ್ಯಾಬ್ಲೆಟ್‌ನಂತೆ ಬಳಸುವ ಭಾಗವನ್ನು ಕೀಲಿಮಣೆಯ ಮೇಲೆ (ಲ್ಯಾಪ್‌ಟಾಪ್ ಪರದೆಯಂತೆ) ಜೋಡಿಸಿಕೊಳ್ಳುವುದು ಸಾಧ್ಯ. ಕವಚದಲ್ಲಿ ಅಡಕವಾಗಿರುವ ತೆಳುವಾದ ಕೀಲಿಮಣೆಗೆ ಈ ಸಾಮರ್ಥ್ಯವಿರುವುದಿಲ್ಲವಲ್ಲ, ಅಂತಹ ಮಾದರಿಗಳಲ್ಲಿ ಟ್ಯಾಬ್ಲೆಟ್‌ಗೊಂದು ಪ್ರತ್ಯೇಕ ಸ್ಟಾಂಡ್ ಇರುತ್ತದೆ.

ನೋಶನ್ ಇಂಕ್ ಏಬಲ್


ಟೂ-ಇನ್-ಒನ್ ಪರಿಕಲ್ಪನೆ ಬಹಳಷ್ಟು ಬಳಕೆದಾರರಿಗೆ ಇಷ್ಟವಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ಯಂತ್ರಾಂಶ ತಯಾರಕರೆಲ್ಲ ಇಂತಹ ಕಂಪ್ಯೂಟರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ವಿಶ್ವವಿಖ್ಯಾತ ಸಂಸ್ಥೆಗಳಿಂದ ಪ್ರಾರಂಭಿಸಿ ಪ್ರಾದೇಶಿಕ ಉತ್ಪಾದಕರವರೆಗೆ ಎಲ್ಲ ಬಗೆಯ ಸಂಸ್ಥೆಗಳ ಉತ್ಪನ್ನಗಳನ್ನೂ ನಾವು ಟೂ-ಇನ್-ಒನ್ ಮಾರುಕಟ್ಟೆಯಲ್ಲಿ ಇದೀಗ ಕಾಣಬಹುದು.

ಈ ಪೈಕಿ ಭಾರತೀಯ ಸಂಸ್ಥೆಗಳೂ ಇವೆ. ನಮ್ಮ ಬೆಂಗಳೂರಿನ ನೋಶನ್ ಇಂಕ್ ಡಿಸೈನ್ ಲ್ಯಾಬ್ಸ್ ಕೆಲವು ವಿಶಿಷ್ಟ ಮಾದರಿಯ ಟೂ-ಇನ್-ಒನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗಮನಸೆಳೆದಿದೆ.

ಈ ಸಂಸ್ಥೆ ಇತ್ತೀಚೆಗಷ್ಟೆ ಬಿಡುಗಡೆಗೊಳಿಸಿದ ಮಾದರಿಯೇ 'ನೋಶನ್ ಇಂಕ್ ಏಬಲ್'. ರೂ. ೨೪,೯೯೦ ಬೆಲೆಯ ಈ ಟೂ-ಇನ್-ಒನ್ ಹಲವು ಆನ್‌ಲೈನ್ ತಾಣಗಳ ಮೂಲಕ ಲಭ್ಯವಿದೆ.


ಪುಟಾಣಿ ಲ್ಯಾಪ್‌ಟಾಪ್‌ನಂತೆ ಕಾಣುವ ಈ ಕಂಪ್ಯೂಟರ್ ತನ್ನ ಆಕರ್ಷಕ ವಿನ್ಯಾಸದಿಂದ ಮೊದಲ ನೋಟದಲ್ಲೇ ಗಮನಸೆಳೆಯುತ್ತದೆ. ಹತ್ತಿಂಚಿನ ಟಚ್‌ಸ್ಕ್ರೀನ್ ಪರದೆ, ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ, ೧.೮೪ ಗಿಗಾಹರ್ಟ್ಸ್ ಸಾಮರ್ಥ್ಯದ ಇಂಟೆಲ್ ಚೆರಿ ಟ್ರೇಲ್ ಕ್ವಾಡ್ ಕೋರ್ ಪ್ರಾಸೆಸರ್, ೪ ಜಿಬಿ ರ್‍ಯಾಮ್, ೬೪ ಜಿಬಿ ಶೇಖರಣಾ ಸಾಮರ್ಥ್ಯ, ಹೆಚ್ಚುವರಿಯಾಗಿ ೧೨೮ ಜಿಬಿವರೆಗಿನ ಮೆಮೊರಿ ಕಾರ್ಡ್ ಬಳಸುವ ಅವಕಾಶ, ಅಂತರಜಾಲ ಸಂಪರ್ಕ ಪಡೆದುಕೊಳ್ಳಲು ತ್ರೀಜಿ ಸಿಮ್ ಬಳಸುವ ಸೌಲಭ್ಯ - ಇದಿಷ್ಟು ಈ ಸಾಧನದ ಮುಖ್ಯಾಂಶಗಳು. ೮೧೦೦ ಎಂಎಎಚ್ ಬ್ಯಾಟರಿ ಸಾಕಷ್ಟು ದೀರ್ಘಕಾಲ ಬಾಳುತ್ತದೆ.

ಇಲ್ಲಿ ಟ್ಯಾಬ್ಲೆಟ್ ಭಾಗ ಅಯಸ್ಕಾಂತ ಆಧರಿತ ಜೋಡಣೆ ಬಳಸಿ ಕೀಲಿಮಣೆಯ ಭಾಗಕ್ಕೆ ಸೇರಿಕೊಂಡಿರುತ್ತದೆ; ಈ ಜೋಡಣೆ ಭದ್ರವಾದದ್ದೇ ಆದರೂ ಬೇಕಾದಾಗ ಸುಲಭಕ್ಕೆ ಬಿಡಿಸಿಕೊಳ್ಳುವುದೂ ಸಾಧ್ಯ. ಯುಎಸ್‌ಬಿ ಹಾಗೂ ಎಚ್‌ಡಿಎಂಐ ಪೋರ್ಟ್‌ಗಳು - ಸಿಮ್ ಹಾಗೂ ಮೆಮೊರಿ ಕಾರ್ಡ್ ಕಿಂಡಿ ಎಲ್ಲವೂ ಪರದೆಯ ಭಾಗದಲ್ಲೇ ಇರುವುದರಿಂದ ಅವನ್ನು ಕೀಲಿಮಣೆ ಕಿತ್ತಿಟ್ಟಾಗಲೂ ಸುಲಭಕ್ಕೆ ಬಳಸಬಹುದು. ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ಆದ್ದರಿಂದ ನುಡಿ-ಬರಹ ಇತ್ಯಾದಿಗಳನ್ನು ಸುಲಭವಾಗಿ ಬಳಸಬಹುದು.

ಕ್ಯಾಮೆರಾ ಸಾಮರ್ಥ್ಯ ಸಾಧಾರಣ, ಹಾಗೂ ಸ್ಪೀಕರಿನಿಂದ ಹೊರಬರುವ ಧ್ವನಿ ಅಷ್ಟಕ್ಕಷ್ಟೇ ಎನ್ನುವುದನ್ನು ಕೊರತೆಗಳ ಪಟ್ಟಿಗೆ ಸೇರಿಸಬಹುದು. ಈ ಸಾಧನದ ಗಾತ್ರಕ್ಕೆ ಹೋಲಿಸಿದಾಗ ೬೫೫ ಗ್ರಾಮ್ ತೂಕ ಕೊಂಚ ಹೆಚ್ಚು ಎನ್ನಿಸಬಹುದು.

ಟ್ಯಾಬ್ಲೆಟ್ಟಿಗೊಂದು ಕೀಬೋರ್ಡ್
ಹೊಸದಾಗಿ ಟ್ಯಾಬ್ಲೆಟ್ ಕೊಳ್ಳುವವರಿಗೆ ಇದೀಗ ಟೂ-ಇನ್-ಒನ್ ಕಂಪ್ಯೂಟರಿನತ್ತ ಹೋಗುವ ಆಯ್ಕೆಯೂ ಲಭ್ಯವಿದೆ ಸರಿ, ಆದರೆ ಈಗಾಗಲೇ ಟ್ಯಾಬ್ಲೆಟ್ ಕೊಂಡವರು ಏನುಮಾಡಬೇಕು? ಚಿಂತಿಸುವ ಅಗತ್ಯವಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಹಲವು ಟ್ಯಾಬ್ಲೆಟ್ಟುಗಳಿಗೆ ಹೊಂದುವಂತಹ ಕೀಲಿಮಣೆಗಳು ಇದೀಗ ದೊರಕುತ್ತಿವೆ. ಇಂತಹ ಕೀಲಿಮಣೆಗಳ ಬೆಲೆ ಕೆಲವು ನೂರು ರೂಪಾಯಿಗಳಿಂದ ಕೆಲವು ಸಾವಿರಗಳವರೆಗೆ ಇರುತ್ತದೆ (ಅವುಗಳ ಗುಣಮಟ್ಟ ಕೂಡ ಕೊಟ್ಟ ಬೆಲೆಗೆ ತಕ್ಕುದಾಗಿಯೇ ಇರುತ್ತದೆ ಎನ್ನಬಹುದು). ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್ ಜೊತೆಗೆ ಬ್ಲೂಟೂತ್ ಸಂಪರ್ಕದ ಮೂಲಕ ಬಳಸಬಹುದಾದ ಉತ್ತಮ ಗುಣಮಟ್ಟದ ಕೀಲಿಮಣೆಗಳೂ ಬಂದಿವೆ - ಇದರಲ್ಲಿ ಕೆಲ ಮಾದರಿಗಳು ಪ್ರತಿಷ್ಠಿತ ಸಂಸ್ಥೆಗಳ ಉತ್ಪನ್ನಗಳೇ.



ಪ್ರತ್ಯೇಕ ಕೀಲಿಮಣೆ ಕೊಳ್ಳುವುದಿಲ್ಲ ಎನ್ನುವವರು ಯುಎಸ್‌ಬಿ ಆನ್-ದ-ಗೋ (ಓಟಿಜಿ) ಕೇಬಲ್ ಬಳಸಿ ಡೆಸ್ಕ್‌ಟಾಪ್ ಕಂಪ್ಯೂಟರಿನ ಕೀಬೋರ್ಡನ್ನೇ ಮೊಬೈಲಿಗೆ-ಟ್ಯಾಬ್ಲೆಟ್ಟಿಗೆ ಹೊಂದಿಸಲು ಪ್ರಯತ್ನಿಸಬಹುದು. ನಿಮ್ಮ ಬಳಿ ವೈರ್‌ಲೆಸ್ ಕೀಬೋರ್ಡ್-ಮೌಸ್ ಜೋಡಿ ಇದ್ದರೆ ಮೊಬೈಲಿನೊಡನೆ ಮೌಸ್ ಕೂಡ ಕೆಲಸಮಾಡೀತು, ಪ್ರಯತ್ನಿಸಿ ನೋಡಿ!

ಸೆಪ್ಟೆಂಬರ್ ೨೦೧೬ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge