ಶುಕ್ರವಾರ, ಅಕ್ಟೋಬರ್ 14, 2016

ಸಿ ಸೃಷ್ಟಿಕರ್ತನ ನೆನಪಿನಲ್ಲಿ

'ಸಿ' ಪ್ರೋಗ್ರಾಮಿಂಗ್ ಭಾಷೆಯನ್ನು ರೂಪಿಸಿದ ಡಾ. ಡೆನ್ನಿಸ್ ರಿಚಿ ನಿಧನರಾಗಿ ಇದೀಗ  (ಅಕ್ಟೋಬರ್ ೨೦೧೬) ಐದು ವರ್ಷ. ಈ ಸಂದರ್ಭದಲ್ಲಿ ಅವರ ನೆನಪಿನಲ್ಲೊಂದು ಬರಹ...
ಟಿ. ಜಿ. ಶ್ರೀನಿಧಿ

ಡಾ. ಡೆನ್ನಿಸ್ ರಿಚಿ - ವಿಶ್ವದೆಲ್ಲೆಡೆಯ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಗಳಿಗೆಲ್ಲ ಇದು ಚಿರಪರಿಚಿತ ಹೆಸರು. ಬಹುತೇಕ ವಿದ್ಯಾರ್ಥಿಗಳೆಲ್ಲ ಮೊದಲಿಗೆ ಕಲಿಯುವ 'ಸಿ' ಪ್ರೋಗ್ರಾಮಿಂಗ್ ಭಾಷೆಯನ್ನು ರೂಪಿಸುವುದರಲ್ಲಿ ಅವರ ಕೊಡುಗೆ ಅಪಾರವಾದದ್ದು. ಸಿ ಬಗ್ಗೆ ಅವರು ಬರೆದ ಪುಸ್ತಕವಂತೂ ಎಲ್ಲ ವಿದ್ಯಾರ್ಥಿಗಳ ಕೈಯಲ್ಲೂ ಕಾಣಸಿಗುತ್ತದೆ! ಅಷ್ಟೇ ಅಲ್ಲ, ಅತ್ಯಂತ ಜನಪ್ರಿಯ ಕಾರ್ಯಾಚರಣ ವ್ಯವಸ್ಥೆ 'ಯುನಿಕ್ಸ್' ಸೃಷ್ಟಿಸಿದ ತಂಡದಲ್ಲೂ ಡೆನ್ನಿಸ್ ಮಹತ್ವದ ಪಾತ್ರ ವಹಿಸಿದ್ದರು.

ಸಿ ಹಾಗೂ ಯುನಿಕ್ಸ್ ಕುರಿತು ೧೯೬೦-೭೦ರ ದಶಕಗಳಲ್ಲಿ ಡೆನ್ನಿಸ್ ಮತ್ತವರ ಸಹೋದ್ಯೋಗಿಗಳು ಬೆಲ್ ಲ್ಯಾಬ್ಸ್‌ನಲ್ಲಿ ಮಾಡಿದ ಕೆಲಸವೇ ಇಂದಿನ ಹಲವಾರು ಕ್ರಾಂತಿಕಾರಕ ತಂತ್ರಜ್ಞಾನಗಳಿಗೆ ಆಧಾರ ಎಂದರೆ ಡೆನ್ನಿಸ್ ಸಾಧನೆಯ ಮಹತ್ವದ ಅರಿವಾಗುತ್ತದೆ.
ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಿರುವ ಸೇವೆಗಳಾಗಲಿ, ಅತ್ಯಾಧುನಿಕ ಸ್ಮಾರ್ಟ್‌ಫೋನ್ ಆಗಲಿ, ಕಂಪ್ಯೂಟರ್ ಪ್ರಪಂಚವನ್ನು ಗಣನೀಯವಾಗಿ ಬದಲಿಸಿರುವ ಫ್ರೀ ಸಾಫ್ಟ್‌ವೇರ್ ಚಳವಳಿಯೇ ಆಗಲಿ - ಪ್ರತಿಯೊಂದರ ಹಿನ್ನೆಲೆಯಲ್ಲೂ ಡೆನ್ನಿಸ್ ಮತ್ತವರ ತಂಡದ ಕೊಡುಗೆ ಕಾಣಸಿಗುತ್ತದೆ. ಸಿ++, ಜಾವಾ ಮುಂತಾದ ಪ್ರೋಗ್ರಾಮಿಂಗ್ ಭಾಷೆಗಳಿಗೆ, ವಿಶ್ವದೆಲ್ಲೆಡೆ ಅಸಂಖ್ಯ ಕಂಪ್ಯೂಟರುಗಳಿಗೆ ಜೀವತುಂಬಿರುವ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಗೆ, ಕಡೆಗೆ ಆಪಲ್ ಉತ್ಪನ್ನಗಳಲ್ಲಿ ಬಳಕೆಯಾಗುವ ಐಓಎಸ್‌ಗೂ ಡೆನ್ನಿಸ್ ಸೃಷ್ಟಿಗಳೇ ಜೀವಾಳ!

೧೯೯೯ರಲ್ಲಿ ಅಮೆರಿಕಾದ 'ನ್ಯಾಷನಲ್ ಮೆಡಲ್ ಆಫ್ ಟೆಕ್ನಾಲಜಿ'ಯೊಡನೆ ಸನ್ಮಾನಿತರಾಗಿದ್ದ ಡೆನ್ನಿಸ್ ರಿಚಿಯವರ ಕೊಡುಗೆಗಳು ನಮ್ಮೆಲ್ಲರ ಬದುಕಿನ ಮೇಲೆ ಗಾಢ ಪರಿಣಾಮ ಬೀರಿವೆ. "ಇಂದಿನ ಕಂಪ್ಯೂಟರ್ ಜಗತ್ತಿನಲ್ಲಿ ಬಹುತೇಕ ಎಲ್ಲವೂ ಡೆನ್ನಿಸ್‌ರ ಸೃಷ್ಟಿಗಳನ್ನು ಆಧಾರಿಸಿಯೇ ಕೆಲಸಮಾಡುತ್ತಿವೆ" ಎಂದ ಅವರ ಸಹೋದ್ಯೋಗಿಯೊಬ್ಬರ ಮಾತಿನಲ್ಲಿ, ನಿಜಕ್ಕೂ, ಉತ್ಪ್ರೇಕ್ಷೆ ಇಲ್ಲವೆಂದೇ ಹೇಳಬಹುದು!

ಕಾಮೆಂಟ್‌ಗಳಿಲ್ಲ:

badge