ಗುರುವಾರ, ಅಕ್ಟೋಬರ್ 20, 2016

ನಮ್ಮ ಮೊಬೈಲು, ನಮ್ಮದೇ ಭಾಷೆ!

ಟಿ. ಜಿ. ಶ್ರೀನಿಧಿ

ದಿನನಿತ್ಯದ ವ್ಯವಹಾರದಲ್ಲಿ ನಾವು ಮಾತನಾಡುವುದು ನಮ್ಮದೇ ಭಾಷೆಯಲ್ಲಿ. ಸ್ಪಷ್ಟ ಚಿಂತನೆ ಹಾಗೂ ಸಂವಹನ ಸಾಧ್ಯವಾಗುವುದು ಎಷ್ಟಾದರೂ ನಮ್ಮ ಪರಿಸರದ ಭಾಷೆಯಲ್ಲೇ ತಾನೇ?

ಆದರೆ ಸ್ಮಾರ್ಟ್ ಫೋನ್ ಬಳಸುವಾಗ ಮಾತ್ರ ನಮ್ಮದಲ್ಲದ ಭಾಷೆಯನ್ನು ಬಳಸುವ ಅನಿವಾರ್ಯತೆಗೆ ನಾವು ಸಿಲುಕುತ್ತೇವೆ. ಸಂದೇಶ ಕಳುಹಿಸುವುದು ಕನ್ನಡದಲ್ಲೇ ಆದರೂ ಇಂಗ್ಲಿಷ್ ಲಿಪಿಯನ್ನು ಬಳಸುತ್ತೇವೆ, ಕನ್ನಡ ಲಿಪಿ ಮೂಡಿಸುವುದೇ ಆದರೂ ಅದಕ್ಕಾಗಿ ಒಂದಲ್ಲ ಒಂದು ರೂಪದಲ್ಲಿ ಮತ್ತೆ ಇಂಗ್ಲಿಷಿನ ಮೊರೆಹೋಗುತ್ತೇವೆ.

ಇದನ್ನು ತಪ್ಪಿಸಿ ನಮ್ಮ ಫೋನನ್ನು ನಮ್ಮದೇ ಭಾಷೆಯಲ್ಲಿ ಬಳಸುವುದು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳೂ ನಡೆಯುತ್ತಿವೆ.

ಇಂತಹ ಪ್ರಯತ್ನಗಳಲ್ಲೊಂದು 'ಇಂಡಸ್ ಓಎಸ್'. ಮೊದಲಬಾರಿಗೆ ಸ್ಮಾರ್ಟ್ ಫೋನ್ ಬಳಸುವವರು ಅದನ್ನು ತಮ್ಮ ಭಾಷೆಯಲ್ಲೇ ಬಳಸುವಂತಾಗಬೇಕು ಎಂಬ ಉದ್ದೇಶದಿಂದ ರೂಪುಗೊಂಡಿರುವ ಈ ಆಂಡ್ರಾಯ್ಡ್ ಆಧರಿತ ಕಾರ್ಯಾಚರಣ ವ್ಯವಸ್ಥೆ ಮೈಕ್ರೋಮ್ಯಾಕ್ಸ್, ಕಾರ್ಬನ್, ಸೆಲ್‌ಕಾನ್, ಸ್ವೈಪ್ ಸೇರಿದಂತೆ ಹಲವು ಸಂಸ್ಥೆಗಳ ಸ್ಮಾರ್ಟ್‌ಫೋನುಗಳಲ್ಲಿ ಈಗಾಗಲೇ ಬಳಕೆಯಾಗುತ್ತಿದೆ. ೨೦೧೫ರಲ್ಲಿ ಪರಿಚಯವಾದ ಇಂಡಸ್ ಓಎಸ್ ಬಳಕೆದಾರರ ಸಂಖ್ಯೆ ನಲವತ್ತೈದು ಲಕ್ಷಕ್ಕೂ ಹೆಚ್ಚು ಎಂದು ಸಂಸ್ಥೆಯ ಅಂಕಿ-ಅಂಶಗಳು ಹೇಳುತ್ತವೆ.

ಕನ್ನಡವೂ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ದೊರಕುವ ಇಂಡಸ್ ಓಎಸ್‌ನಲ್ಲಿ ಫೋನಿನ ಮೆನುವಿನಿಂದ ಪ್ರಾರಂಭಿಸಿ ಆಪ್ ವಿವರಗಳವರೆಗೆ ಪ್ರತಿಯೊಂದನ್ನೂ ನಮ್ಮ ಭಾಷೆಯಲ್ಲೇ ಮೂಡುವಂತೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ನಮ್ಮ ಆಯ್ಕೆಯ ಭಾಷೆಯಲ್ಲಿ ಟೈಪಿಸುವ - ಹಾಗೆ ಟೈಪಿಸಿದ್ದನ್ನು ಇಂಗ್ಲಿಷಿಗೆ ಭಾಷಾಂತರ ಇಲ್ಲವೇ ಲಿಪ್ಯಂತರಗೊಳಿಸುವ ಸೌಲಭ್ಯ ಇಲ್ಲಿದೆ. ನಾವು ಟೈಪಿಸುವ ಪಠ್ಯದ ಪದಪರೀಕ್ಷೆ ಮಾಡಿಕೊಳ್ಳುವುದೂ ಸಾಧ್ಯ.

ಇದೆಲ್ಲದರ ಜೊತೆಗೆ ಸ್ಥಳೀಯ ಭಾಷೆಗಳಿಗೆ ಅಗತ್ಯವಾದ ಹೆಚ್ಚುವರಿ ತಂತ್ರಾಂಶ ಸವಲತ್ತುಗಳನ್ನೂ ಒದಗಿಸುವ ಪ್ರಯತ್ನ ಇಂಡಸ್ ಓಎಸ್‌ನದು. ಸ್ಥಳೀಯ ಭಾಷೆಗಳ ಪಠ್ಯವನ್ನು ಧ್ವನಿಗೆ ಪರಿವರ್ತಿಸುವ ಸೌಲಭ್ಯ ಇದಕ್ಕೊಂದು ಉದಾಹರಣೆ (ಇದು ಕನ್ನಡದಲ್ಲಿ ಇನ್ನೂ ಲಭ್ಯವಿಲ್ಲ). ಇಂಡಸ್ ಓಎಸ್‌ನ ಆಪ್ ಬಜಾರ್‌ನಲ್ಲಿ ನಮ್ಮ ಆಯ್ಕೆಯ ಭಾಷೆಗೆ ತಕ್ಕಂತೆ ಸೂಕ್ತವಾದ ಆಪ್‌ಗಳನ್ನೇ ತೋರಿಸುವ ವ್ಯವಸ್ಥೆಯನ್ನೂ ಮಾಡಲಾಗುವುದೆಂದು ಇಂಡಸ್ ಓಎಸ್ ಮೂಲಗಳು ತಿಳಿಸಿವೆ.

ಈ ಕಾರ್ಯಾಚರಣ ವ್ಯವಸ್ಥೆ ಕುರಿತ ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಜಾಲತಾಣಕ್ಕೆ ಭೇಟಿನೀಡಬಹುದು. ಇಂಡಸ್ ಓಎಸ್ ಯಾವೆಲ್ಲ ಫೋನುಗಳಲ್ಲಿ ಲಭ್ಯವಿದೆ ಎಂಬ ಮಾಹಿತಿಯೂ ಇದೇ ತಾಣದಲ್ಲಿ ಲಭ್ಯವಿದೆ.

1 ಕಾಮೆಂಟ್‌:

ಮೋಹನ್ ತಲಕಾಲುಕೊಪ್ಪ ಹೇಳಿದರು...

ಸ್ಥಳೀಯ ಭಾಷೆಯನ್ನು ಬೆಳೆಸುವಲ್ಲಿ ಹಾಗೂ ಉಳಿಸುವಲ್ಲಿ ಇದು ಅತ್ಯುತ್ತಮ ಹೆಜ್ಜೆ.ಶ್ರೀನಿಧಿಯವರಿಗೆ ಮಾಹಿತಿಗಾಗಿ ಧನ್ಯವಾದಗಳು.

badge